ರೋಹಿಣಿ ಮಳೆಗೆ ಬಿತ್ತಿದರೆ ಓಣಿ ತುಂಬಾ ಜೋಳ ಎನ್ನುತ್ತಾರೆ ಒಕ್ಕಲಿಗರು. ನಂತರದ ಮಳೆಗೆ ಬಿತ್ತಿದರೆ ಮುಂದೆ ಹತ್ತುವ ಜಿಟಿ ಜಿಟಿ ಮಳೆಗಳಿಗೆ ನಾಟಿಗೆಗಳು ಸಧೃಡವಾಗಿ ಬೆಳೆಯದೆ ಕ್ರಿಮೀಕಿಟಗಳಿಗೆ ಬಲಿಯಾಗಿ ಅರ್ಧಕ್ಕರ್ಧ ಫಸಲು ಕೈಗೆ ಹತ್ತುವುದಿಲ್ಲ. ರೋಹಿಣಿ ಮಳೆಗೆ ಬಿತ್ತುವುದರಿಂದ ನಾಟಿಗೆಗಳು ಸಧೃಡಗೊಂಡು ಕ್ರಿಮಿಕೀಟಗಳನ್ನು ಎದುರಿಸುವಷ್ಟು ಶಕ್ತಿ ಪಡೆದಿರುತ್ತವೆ. ಹೀಗಾಗಿ ಸಾಧ್ಯವಾದಷ್ಟೂ ರೈತರು ರೋಹಿಣಿ ಮಳೆಗೆ ಬಿತ್ತಲು ಯತ್ನಿಸುತ್ತಾರೆ.

ನಾಟಿಗೆಗಳು ಗೇಣುದ್ದವಿದ್ದಾಗ ಭೂತಾಯಿ ಹಸಿರಿನಿಂದ ಕಂಗೊಳಿಸುತ್ತಾಳೆ ಇಡೀ ಪ್ರಕೃತಿಮಾತೆಗೆ ಹಸಿರು ಸೀರೆಯುಡಿಸಿದ್ದಾರೇನೋ ಎಂಬಂತೆ ಕಾಣಿಸುತ್ತಾಳೆ. ಬೆಳೆಯ ಜೊತೆ ಬೇಡವಾದ ಕಳೆಯೂ ತುಂಬಿಕೊಂಡು ಬೆಳೆಗಳ ಬೆಳವಣಿಗೆಗೆ ಅಡ್ಡಿಪಡಿಸುತ್ತಿರುತ್ತದೆ. ಅದಕ್ಕಾಗಿಯೇ ರೈತರು ಎಡೆ ಹೊಡೆದು ಕಳೆಗಳನ್ನು ಕಿತ್ತು ಹಾಕಿ ಬೆಳೆಗಳು ಸಧೃಢವಾಗಿ ಬೆಳೆಯಲು ಅವಕಾಶ ಮಾಡಿಕೊಡುತ್ತಾರೆ. ಅದಕ್ಕಾಗಿಯೇ ವಚನಕಾರರು ನಮ್ಮ ಕಾಯದಲ್ಲಿ ತುಂಬಿಕೊಂಡ ದರ್ಗುಣಗಳನ್ನು ಕೂಡ ಬೇಡವಾದ ಈ ಕಳೆಗೆ ಹೋಲಿಸಿ ‘ಎನ್ನ ಕಾಯದ ಕಳೆಯ ಕಳೆಯಯ್ಯ’ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾರೆ. ಅತೀ ಕಳೆ ಬೆಳೆಗಳ ಬೆಳವಣಿಗೆಗೆ ತಡೆಹಾಕಿದರೆ ಇಲ್ಲಿ ದುರ್ಗುಣಗಳೆಂಬ ಕಳೆಗಳು ಮನುಷ್ಯನ ಏಳ್ಗೆಗೆ ತಡೆಯೊಡ್ಡುತ್ತವೆ. ಕಳೆ ಎಂಬುದು ಎಲ್ಲೂ ಆಡಚಣೆಯನ್ನೊಡ್ಡುವಂತಹದೇ ಆಗಿದೆ. ಇಂತಹ ಕಳೆಯನ್ನು ಕಿತ್ತಿ ಹಾಕಿ ಬೆಳೆಗಳ ಬೆಳವಣಿಗೆಯನ್ನು ರೈತರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರಬೇಕಾದರೆ ಆತನಿಗೆ ಒಂದೊಂದು ಬಾರಿ ದೊಡ್ಡ ಪ್ರಮಾಣದ ಆಘಾತ ಕಾದಿರುತ್ತದೆ. ಎಡೆ ಹೊಡೆದಾಗ, ಭೂಮಿಯ ಮೇಲ್ಪದರಿನ ಮಣ್ಣು ಸರಿದು ಬೆಳೆಯ ಬೇರುಗಳು ಹೊರ ಕಾಣಿಸುತ್ತಿರುತ್ತವೆ. ಆಗ ಮಳೆ ಸುರಿಯಲೇಬೇಕು. ಸುರಿಯುವ ಮಳೆ ಸರಿದು ಹೋಗಿರುವ ಬೇರುಗಳನ್ನು ಗಟ್ಟಿಗೊಳಿಸುತ್ತದೆ. ಭೂಮಿ ತಂಪಾಗಿ ಬೆಳೆಯನ್ನು ಉತ್ತೇಜನಗೊಳಿಸುತ್ತದೆ. ಅವರೇ ಹೇಳುವಂತೆ ‘ಆಡಿ ದನಿದ ಕೂಸಿನ್ನ ಎರ್ದ ಮಲಗಿಸಿದ್ಹಂಗ’ ಅಷ್ಟೊಂದು ಹಿತಕಾರಿ ಈ ಸಂದರ್ಭ. ಆದರೆ ಮಳೆ ಬರದಿದ್ದರೆ?

ಬೆಳೆಗಳು ಬಕ ಬಕ ಬಾಯಿ ಬಿಡುತ್ತ ಒಣಗತೊಡಗುತ್ತವೆ. ತಾನು ಜೋಪಾನ ಮಾಡುತ್ತಿರುವ ಕೂಸು ತನ್ನೆದುರಿಗೇನೇ ಒಣಗಿ ಹೋಗುತ್ತಿರಬೇಕಾದರೆ ಆತ ತೀರ ಕಂಗಾಲಾಗಿ ಕೈ ಚೆಲ್ಲುತ್ತಾನೆ ತನ್ನ ಬೆಳೆಗಳನ್ನು ಉಳಿಸಿಕೊಳ್ಳಲು ಮಳೆ ಸುರಿಯುವಂತೆ ಕಾಣದ ದೇವರಿಗೆ ಕೈ ಮುಗಿಯುತ್ತಾ ಪ್ರಾರ್ಥಿಸುತ್ತಾನೆ: ಗ್ರಾಮದ ದೇವಾಲಯಗಳಲ್ಲಿ ಭಜನಾ ಸಪ್ತಾಹ, ವಾರ ಮಾಡುವುದು, ಪವಾಡ ಪುರುಷರ ಗದ್ದುಗೆಯ ಬಳಿ ಜಾಗರಣೆ, ಅನ್ನಸಂತರ್ಪಣೆ ಹೀಗೆ ಏನೆಲ್ಲ ಕಸರತ್ತು ಮಾಡುತ್ತಾನೆ. ತನ್ನೂರ ಇಷ್ಟದೈವ, ಸ್ವಾಮೀಜಿಗಳ ಗದ್ದುಗೆಗಳನ್ನು ತನ್ನ ಭಕ್ತಿಯ ಒರೆಗಲ್ಲಿಗೆ ಹಚ್ಚುತ್ತಾನೆ. ಇಂತಹ ಸಂದರ್ಭದಲ್ಲಿ ಇನ್ನೊಂದು ಆಸರೆ, ‘ಗುರ್ಚಿ’

ಕೆಳಸ್ತರದ ಜಾತಿಯ ಪುಟ್ಟ ಮಕ್ಕಳು ಬೆತ್ತಲೆಯಾಗಿದ್ದು, ತಲೆಯ ಮೆಲೆ ಮಣ್ಣಿನ ಹೆಂಚು ಹೊತ್ತು ಮನೆಗೆ ಬರುತ್ತಾರೆ. ಹೆಂಚಿನ ಮೇಲೆ ಹುತ್ತದ ಮಣ್ಣಿನಿಂದ ಅಥವಾ ಎರೆ ಮಣ್ಣಿನಿಂದ ಮಡಲಾದ ಗುಳ್ಳವ್ವ ಪಂಡ್ರವ್ವಗಳ ಆಕಾರದ ಮೂರ್ತಿ. ಅದರ ತಲೆಯ ಮೇಲೆ ಗರಿಕೆಯನ್ನು ಸಿಕ್ಕಿರಿಸುತ್ತಾರೆ. ಗುರಚಿಯನ್ನು ಹೊತ್ತು ಬರುವವರು ಎಳೆ ವಯಸ್ಸಿನ ಹೆಣ್ಣೂ ಆಗಿರಬಹುದು, ಗಂಡೂ ಆಗಿರಬಹುದು. ಇಲ್ಲಿ ಲಿಂಗ ತಾರತಮ್ಯವಿಲ್ಲ ಗುರ್ಚಿಯನ್ನು ಹೊತ್ತು ತಂದಿರುವ ಬಾಲಕ ಅಥವಾ ಬಾಲಕಿಯ ಜೊತೆ ಇನ್ನೊಬ್ಬಾಕೆ ಹಿರಿಯಳಿದ್ದು ಮನೆಯ ಬಾಗಿಲಿಗೆ ಬಂದು, ‘ಗುರ್ಚವ್ವ ಬಂದಾಳ, ನೀರ ತಗೊಂಡು ಬರೀ’ ಎಂದು ಹೇಳುತ್ತಾಳೆ. ಆಗ ಮನೆಯಲ್ಲಿದ್ದ ಯಜಮಾನತಿ ಕೈಲಿದ್ದ ಕೆಲಸ ಬಿಟ್ಟು ‘ಬಂದೆ’ ಎಂದು ಕೂಗುತ್ತಲೇ ಕೈಯಲ್ಲಿ ತಂಬಿಗೆ ಹಿಡಿದು ಬಂದು ಗುರ್ಚಿಯ ಮೇಲೆ ನೀರು ಸುರಿಯತೊಡುತ್ತಾಳೆ. ಆಗ ಪಕ್ಕದಲ್ಲಿದ್ದಾಕೆ ‘ಗುರ್ಚಿ ಗುರ್ಚಿ ಎಲ್ಲಾಡಿ ಬಂದಿ, ಹಳ್ಳಾಕೊಳ್ಳಾ ತಿರಿಗ್ಯಾಡಿ ಬಂದಿ, ಕಾರ ಮಳೆಯೇ, ಕಪಾಟ ಮಳೆಯೇ. ಸುರಿ ಮಳೆಯೇ, ಬಣ್ಣ ಕೊಡ್ತಿನಿ ಬಾರಲೆ ಮಳೆಯೇ, ಸುಣ್ಣಾ ಕೊಡ್ತಿನಿ ಸುರಿಯಲೇ ಮಳೆಯೇ’ ಎಂದು ಹಾಡು ಹೇಳುತ್ತಿರುತ್ತಾಳೆ. ಗುರ್ಚಿ ಹೊತ್ತ ಬೆತ್ತಲೆ ಕೂಸು ತಣ್ಣೀರು ಮೈಮೇಲೆ ಬಿದ್ದೊಡನೆ ನಡುಗುತ್ತಿರುತ್ತದೆ. ಆದರೂ ಹಾಡು ಹೇಳುವಾಕೆಗೂ, ನೀರು ಸುರಿಯುವಾಕೆಗೂ ಆ ಕಡೆ ಲಕ್ಷವಿರದೇ ಮಳೆ ತರಲು ಮಳೆ ಹಾಗೂ ಮನುಷ್ಯರ ಮಧ್ಯ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುರ್ಚಿಯನ್ನು ಪ್ರಾರ್ಥಿಸುವುದರತ್ತಲೇ ಅವರ ಲಕ್ಷ್ಯ. ನೀರು ಸುರಿಯುವುದು ಮುಗಿದ ನಂತರ ಮನೆಯಾಕೆ ಮೊರದಲ್ಲಿ ಜೋಳ, ರೊಟ್ಟಿ ತಂದು ನೀಡುತ್ತಾಳೆ. ಅದನ್ನು ಸ್ವೀಕರಿಸಿದ ಪರಿವಾರದ ಪಯಣ ಮುಂದಿನ ಮನೆಗೆ. ಅಲ್ಲಿಯೂ ‘ಗುರ್ಚವ್ವ ಬಂದಾಳ ನೀರು ತುಗೊಂಬರ್ರೀs’.

ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಧ್ವನಿಯ ಶಕುನ, ಗುರ್ಚಿ ಬಂದಾಳ ನೀರು ತುಗೊಂಬರೀ ಎಂದು ಹೊರಗಿನಾಕೆ ಹೇಳಿದಾಗ ಮನೆಯವರು ‘ಹೂಂ ಬಂದೆ’ ಎಂದು ಪಟ್ಟನೆ ಹೇಳಿದಲ್ಲಿ ಮಳೆ ಕೊಡಲೇ ಬರುತ್ತದೆಂದೂ, ಸ್ವಲ್ಪ ತಡಿ ಎಂದು ಹೇಳಿದಲ್ಲಿ ಮಳೆಯು ತಡವಾಗಿ ಸುರಿಯುತ್ತದೆಂದೋ, ‘ಕೈ ಖಾಲಿ ಇಲ್ಲ ಮುಂದಕ ಹೋಗು’ ಎಂದು ಹೇಳಿದಲ್ಲಿ ಒಟ್ಟಿಗೆ ಮಳೆ ಬರುವುದಿಲ್ಲವೆಂಬುದು ಅವರ ಗಟ್ಟಿಯಾದ ನಂಬುಗೆ. ಪಳಗಿನಿಂದ ಹೊರಡುವ ಧ್ವನಿಯೇ ಇವರಿಗೆ ಶಕುನ.

ಈ ಗುರ್ಚಿ, ಗುರ್ಚವ್ವನ ಬಗ್ಗೆ ವಿದ್ವಾಂಸರೊಡನೆ ಚರ್ಚಿಸುತ್ತಾ ಹೋದಾಗ ಗುರ್ಚಿ, ಗುರ್ಚವ್ವನೆಂದು ಕರೆಯಲ್ಪಡುವ ಈ ವಸ್ತು ಹೆಣ್ಣೆ ಅಲ್ಲವೆಂದು ಖಚಿತವಾಗುತ್ತದೆ. ವಿದ್ವಾಂಸರು ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕ್ಷಾಧಾರಗಳನ್ನು ಒದಗಿಸುತ್ತಾರೆ. ಅಮೋಘಸಿದ್ದ, ರೇವಣಸಿದ್ಧ, ಜಡೆಸಿದ್ಧ, ಕರಿಸಿದ್ಧ, ಮರುಳಸಿದ್ಧ, ಶಿವಸಿದ್ಧ, ಗುರುಸಿದ್ಧ, ಹೀಗೆ ಇವರು ಏಳು ಜನ ಸಿದ್ಧರು. ಮಹಾನ್ ತಪಸ್ವಿಗಳು, ಶಾಪಾನುಗ್ರಹ ಸಮರ್ಥರು. ನಿಸರ್ಗದ ಚಲನೆಯನ್ನು ಕೆಲಕಾಲ ನಿಲ್ಲಿಸಬಲ್ಲ ಸಾಮರ್ಥ್ಯ ಹೊಂದಿದವರಾಗಿದ್ದರೆಂದು ಹೇಳಲಾಗುತ್ತದೆ. ಇವರಲ್ಲಿ ಒಬ್ಬನಾದ ಗುರುಸಿದ್ಧ ಭೂಲೋಕದ ಜನ ಕೇಳಿದಾಗ ಕೈ ಬೀಸಿ ಬಾ ಎಂದು ಮಳೆಯನ್ನು ಕರೆದು ಸುರಿಯಲು ಹೇಳುತ್ತಿದ್ದನಂತೆ. ಹಾಗಾಗಿಯೇ ಮಳೆ ಬರದಿದ್ದಾಗ ಗುರುಸಿದ್ಧನೆಂಬ ಸತ್ಪುರುಷನನ್ನು ಭಕ್ತಿಯಿಂದ ಕರೆದು ಮಳೆಗೆ ಆದೇಶಿಸಲು ಪ್ರಾರ್ಥಿಸುತ್ತಾರೆ. ಈ ಗುರುಸಿದ್ಧನೇ ಹಳ್ಳಿಗರ ಮಾತಿನಲ್ಲಿ ಗುರಶ್ಯಾ>ಗುರುಚ್ಯಾ->ಗುರ್ಚಿ->ಗುರ್ಚವ್ವನಾಗಿರಬಹುದಲ್ಲವೇ?

ಮಹಾಯೋಗಿಯಾಗಿದ್ದ ಗುರು ಸಿದ್ಧಯೋಗಿ ಬ್ರಹ್ಮಚಾರಿಯಾಗಿದ್ದರಿಂದಲೇ ಗುರ್ಚಿಯನ್ನು ಹೊತ್ತು ತರುವ ಬಾಲಕ ಅಥವಾ ಬಾಲಕಿಯನ್ನು ಬ್ರಹ್ಮಚಾರಿಯ ಸಂಕೇತವಾಗಿಯೇ ಬೆತ್ತಲೆಯಾಗಿಯೇ ಕರೆತರಲಾಗುತ್ತದೆ. ತಲೆಯ ಮೇಲೆ ಹೊತ್ತ ಮಣ್ಣಿನ ಹೆಂಚು ಗುರುಸಿದ್ಧಯೋಗಿಯ ಅನುಷ್ಠಾನ ಅಥವಾ ಯೋಗದ ಸ್ಥಾನವನ್ನು ಸೂಚಿಸಿದರೆ, ಮಣ್ಣಿನಿಂದ ಮಾಡಿದ ಮೂರ್ತಿ ಗುರುಸಿದ್ಧನ ಕಾಯವನ್ನು, ಮೇಲೆ ಸಿಕ್ಕಿಸಲಾದ ಗರಿಕೆ ಹುಲ್ಲು ಗುರುಸಿದ್ಧನ ಜ್ಞಾನದ ಸೂಚಕವೂ ಆಗಿವೆ ಎಂದೂ ಅಭಿಪ್ರಾಯಪಡಲಾಗುತ್ತದೆ. ಅಂಥ ಗುರುಸಿದ್ಧನನ್ನು ಗುರ್ಚಿ, ಗುರ್ಚವ್ವ ಎಂದು ನಮ್ಮ ಗ್ರಾಮೀಣರು ಕರೆಯುತ್ತಿರುವದು ಗುರುಸಿದ್ಧನನ್ನು ಅಪಮಾನಿಸಲಿಕ್ಕಲ್ಲ. ಆತನ ಮೇಲಿನ ಭಕ್ತಿಯ ತೀವ್ರತೆ ಹಾಗೂ ಶೃದ್ಧೆಯೇ ಹಾಗೆ ಆತನನ್ನು ಹೃದಯ ತುಂಬಿ ಕರೆಯಲು ಪ್ರೇರೇಪಿಸುತ್ತದೆ. ತೇರನ್ನಳೆದುಕೊಂಡು ಬರುತ್ತಾರೆ. ತೇರಿನಲ್ಲಿ ಪ್ರತಿಷ್ಠಿತಗೊಂಡಿರುವ ಚಿತ್ರ ಸೃಷ್ಠಿಗೆ ಕಾರಣವಾಗಿರುವ ಪ್ರಕೃತಿಪುರುಷನ ಸಂಕೇತವಾಗಿರುವ ಈಶ್ವರನದು. ತೇರಿನ ಪಕ್ಕದಲ್ಲಿ ಮೇಲೆ ವಿವರಿಸಿದ ಎಲ್ಲ ಚಿತ್ರಗಳೂ ಇರಲೇಬೇಕು. ತೇರಿನ ಚಿತ್ರಕ್ಕೆ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆದು, ಅದೇ ಹೊಸ ಧಾನ್ಯಗಳಿಂದ ತಯಾರಿಸಲಾದ ಪಕ್ವಾನ್ನಗಳ ಎಡೆ ತೋರಿಸಿ ನಮಿಸುತ್ತಾರೆ.

ಅಲ್ಲಿಯವರೆಗೆ ಹೊಸ ಧಾನ್ಯಗಳನ್ನು ಅಡುಗೆಗೆ ಬಳಸದ ಈ ಜನ ನಿಸರ್ಗಕ್ಕೆ ನೈವೇದ್ಯ ತೋರಿಸಿದ ನಂತರವೇ ಮನೆ ಮಂದಿಯೆಲ್ಲ ಊಟ ಮಾಡುತ್ತಾರೆ. ಇದು ನಿಸರ್ಗದೊಂದಿಗೆ ತಳುಕು ಹಾಕಿಕೊಂಡು ನಮ್ಮ ಗ್ರಾಮೀಣ ಜನತೆಯ ಪರಂಪರೆ.