ರೈತಾಪಿ ವರ್ಗ ಹಬ್ಬ ಹರಿದಿನಗಳಲ್ಲಿ ಅನೇಕ ಆಶ್ಚರ್ಯಕರ ಸಂಪ್ರದಾಯಗಳನ್ನು ಆಚರಿಸುವುದುಂಟು. ಈ ಆಚರಣೆಗಳಲ್ಲಿ ಕೆಲವು ಸಾರ್ವತ್ರಿಕವಾಗಿದ್ದರೆ. ಇನ್ನೂ ಕೇವಲ ಕೆಲವೇ ಕುಟುಂಬಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಈ ಭಾಗದ ಕೆಲ ಗ್ರಾಮಗಳಲ್ಲಿ ಮುಂಗೈಯ್ಯಲ್ಲಿ ಬಲವಿದ್ದ ಕೇವಲ ಗಂಡಸರಿಂದಲೇ ನಡೆಯುವ ಹಾಲೋಕಳಿ, ಇನ್ನೂ ಕೆಲ ಗ್ರಾಮಗಳಲ್ಲಿ ಮಹಿಳೆಯರಿಂದಲೇ ನಡೆಯುವ ಚಂಗಳಿಕೆವ್ವನ ಶೆಗಣಿ ಓಕುಳಿ (ಹೆಂಡಿ ಎರಚಾಟ), ಏಳುಕೋಟಿ ಎಬ್ಬಿಸುವುದೂ, ಗೊಂದಲ ಹಾಕುವುದು (ಶಕ್ತಿ ದೇವಿಯ ಪೂಜೆ) ಇವೆಲ್ಲ ಒಂದೊಂದೇ ಕುಟುಂಬಕಷ್ಟೇ ಸೀಮಿತವಾದವುಗಳು. ಇಂತಹವುಗಳಲ್ಲಿಯೇ ಒಂದಾಗಿದೆ ಮಾಯಿ ಮಕ್ಕಳಿಗೆ ಮಾಡುವುದು.

ಈ ಮಾಯಿ ಮಕ್ಕಳಿಗೆ ಮಾಡುವುದಕ್ಕೆ ವಿಶೇಷ ತಯಾರಿ ಏನೂ ಬೇಕಾಗಿಲ್ಲ. ಪಂಚಮಿ ಹಬ್ಬದಲ್ಲಿಯೇ ಇದು ನಡೆಯುತ್ತಿರುವದರಿಂದ ಹಬ್ಬದ ಹೋಳಿಗೆ, ಕಡುಬುಗಳೇ ಮಾಯಿ ಮಕ್ಕಳ ಭೋಜನಕ್ಕೆ ಬಳಕೆಯಾಗುತ್ತದೆ.

ಮಾಯಿಮಕ್ಕಳೆಂದರೆ ಎಳೆಯವಯಸ್ಸಿನ ಬಾಲಕ, ಬಾಲಕಿಯರು. ಈ ಮಕ್ಕಳಿಗೆ ಊಟ ಮಾಡಿಸುವ ದಿನದಂದು ಅವರ ಮನೆಗೆ ಹೋಗಿ ‘ನಮ್ಮ ಮನೆಗೆ ಊಟಕ್ಕೆ ಬನ್ನಿ’ ಎಂದು ಆಮಂತ್ರಿಸುವುದಿಲ್ಲ. ಹಾದಿಯಲ್ಲಿ ಗೋಲಿ, ಚೆಂಡು, ಬುಗುರಿಯಾಟ, ಚಿಣ್ಣಿದಾಂಡು ಆಡುತ್ತಿರುವ ಗಂಡು ಮಕ್ಕಳನ್ನೂ, ಕುಂಟಾಬಿಲ್ಲೆ, ಕಣ್ಣಾಮುಚ್ಚಾಲೆ ಆಡುತ್ತಿರುವ ಹೆಣ್ಣು ಮಕ್ಕಳನ್ನೂ ಎಳೆದು ತರುವದೇ ಊಟಕ್ಕೆ ಆಮಂತ್ರಿಸುವ ವಿಧಾನ. ಐದು, ಹನ್ನೊಂದು, ಹದಿನೈದು ಈ ಪ್ರಕಾರವಾಗಿ ಮಕ್ಕಳನ್ನು ಕರೆತಂದೊಡನೆ ಮನೆಯಲ್ಲಿಯ ಮುತ್ತೈದೆ ಹೆಣ್ಣುಮಕ್ಕಳು ಆ ಮಕ್ಕಳ ಕಾಲು ತೊಳೆಯುತ್ತಾರೆ. ನಂತರ ಆರತಿ ಬೆಳಗಿ, ಅರಿಷಿಣ ಕುಂಕುಮ ಹಚ್ಚಿ, ಕೊರಳಿಗೆ ಹೊನ್ನನೂಲನ್ನು (ಅರಿಷಿಣ ಲೇಪಿಸಿದ ದಾರ) ಹಾಕುತ್ತಾರೆ. ನಂತರ ಉಡಿ ತುಂಬುವ ಶಾಸ್ತ್ರ. ಊಟಕ್ಕೆ ಬಡಿಸುವ ಖಾದ್ಯಗಳನ್ನೇ ಕುಂಬಳ ಎಲೆ ಅಥವಾ ಔಡಲ ಎಲೆ ಇಟ್ಟು ಉಡಿ ತುಂಬುತ್ತಾರೆ. ಉಡಿ ತುಂಬಿದ ನಂತರ ಊಟ, ಜೋಳದ ಅಥವಾ ಸಜ್ಜೆಯ ಕಡಬು, ಹೊರಣಗಡಬು ಹೋಳಿಗೆ, ತುಪ್ಪ, ಕಾಯಿಪಲ್ಲೆ, ಹಪ್ಪಳ ಸಂಡಿಗೆ, ನವಣೆಯ ಅನ್ನ (ಇತ್ತೀಚಿಗೆ ನವಣೆ ಸಿಗದಿರುವದರಿಂದ ಅಕ್ಕಿಯ ಅನ್ನ ಮಾಡುತ್ತಾರೆ.) ಸಾರು, ಉಪ್ಪಿನಕಾಯಿ ಎಲ್ಲಾ ಇರುತ್ತವೆ. ಊಟ ಮುಗಿಯುವವರೆಗೆ ಅವರು ಆಸೀನರಾಗಿರುವದು ಅಡ್ಡಲಾಗಿ ಹಾಕಿರುವ ಒಣಕೆಯ ಮೇಲೆ ಮಾಯಿಮಕ್ಕಳು ಕುಳಿತುಕೊಂಡಿರುತ್ತಾರೆ.

ಊಟದ ಮಧ್ಯದಲ್ಲಾಗಲೀ, ಊಟ ಮುಗಿದ ನಂತರವಾಗಲೀ ಅವರಿಗೆ ಕುಡಿಯಲು ಗುಟುಕು ನೀರನ್ನೂ ಕೊಡುವುದಿಲ್ಲ. ಖಾರಹತ್ತಲಿ, ಬಿಕ್ಕಳಿಕೆ ಬರಲಿ, ಮಿಳ್ಳೆತುಪ್ಪ ಸುರಿಯುತ್ತಾರೆಯೇ ಹೊರತು ವಿಲಿವಿಲಿ ಒದ್ದಾಡಿದರೂ ಗುಟುಕು ನೀರು ಕೊಡುವುದಿಲ್ಲ. ಊಟ ಮುಗಿದ ನಂತರ ಅವರು ಉಂಡ ಎಲೆಯನ್ನು ಅವರ ಕೈಗೆ ಮಡಿಚಿಕೊಟ್ಟು ಅವರನ್ನು ಹೊರದಬ್ಬಲಾಗುತ್ತದೆ. ಅದುವರೆಗೆ ಆತಿಥ್ಯ ಸ್ವೀಕರಿಸಿದ ಮಾಯಿಮಕ್ಕಳು ಉಂಡಮನೆಯತ್ತ ಹೊರಳಿ ನೋಡದಂತೆ ಅವರ ಬೆನ್ನಿಗೆ ಕೈಹಾಕಿ ಮುಂದೆ ಹೋಗುತ್ತಿದ್ದಂತೆ ಇನ್ನೋರ್ವರು ನೀರು ಚಿಮುಕಿಸುತ್ತಾ ಸಾಗುತ್ತಾರೆ. ಇಲ್ಲಿಗೆ ಮಾಯಿ ಮಕ್ಕಳ ಪಂಚಮಿ ಹಬ್ಬದ ಆತಿಥ್ಯದ ಕಾರ್ಯಕ್ರಮ ಆ ವರ್ಷದ ಮಟ್ಟಿಗೆ ಸಂಪೂರ್ಣಗೊಂಡಂತೆ.

ಒಣಕೆಯ ಮೇಲೆ ಕೂಡಿಸುವ, ಕುಡಿಯಲು ನೀರುಕೊಡದ, ಊಟದ ನಂತರ ಅವರು ತಮ್ಮ ಮನೆಗೆ ಹೋಗುವಾಗ ಉಂಡ ಮನೆಯತ್ತ ತಿರುಗಿ ನೋಡದಂತೆ ಜಾಗರೂಕತೆ ವಹಿಸುವ ಕುರಿತು ಏಕೆಂದು ಪ್ರಶ್ನಿಸಿದರೆ ಯಾರಿಂದಲೂ ಸೂಕ್ತ ಉತ್ತರ ದೊರೆಯುವುದೇ ಇಲ್ಲ. “ಅದರ ಉತ್ತರ ನನಗೂ ಗೊತ್ತಿಲ್ಲ ಮಾರಾಯಾ ನಮ್ಮತ್ತಿ (ಅತ್ತೆ) ಮಾಡತಿದ್ಲು, ನಾನೂ ಮಾಡತೀನಿ. ಮುಂದೆ ಈ ಮನಿ ಸೊಸ್ತ್ಯಾರು (ಸೊಸೆಯಂದಿರು) ಮಾಡಬೇಕಷ್ಟ. ಯಾಕ ? ಏನು? ಅಂತ ಕೇಳಿದ್ರ ಗೊತ್ತಿಲ್ಲದ್ದು. ನಾ ಏನ ಹೇಳ್ಲೀs ಎನ್ನುತ್ತಾರೆ. ಗೊತ್ತಿಲ್ಲದಿದ್ದರೂ ಆಚರಣೆಯಂತೂ ಮುಂದುವರಿದಿದೆ. ಮುಂದೆ ನಮ್ಮ ಮಕ್ಕಳು ನಾವು ನಮ್ಮ ತಾಯಂದಿರನ್ನು ಕೇಳಿದಂತೆ ತಮ್ಮ ತಾಯಂದಿರನ್ನು ಅವರೂ ಕೇಳಿದರೆ ಅವರೂ ಹೇಳುವದಿಷ್ಟೆ, ನಮ್ಮತ್ತಿ ಮಾಡತಿದ್ಲು ನಾನೂ ಮಾಡತೀನಿ”.

ಚಿಕ್ಕವರಾಗಿದ್ದಾಗ ಮಾಯಿ ಮಕ್ಕಳಾಗಿ ಪಾಲ್ಗೊಂಡು, ಅತಿಥ್ಯ ಸ್ವೀಕರಿಸಿ ಈಗ ಸರಪಂಚರಾಗಿಯೂ, ಸಂಘ ಸಂಸ್ಥೆಗಳ ಅಧ್ಯಕ್ಷರಾಗಿಯೂ, ಬೇರೆ ಬೇರೆ ಊರುಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರೂ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಿರುವ ಗೃಹಿಣಿಯರೂ, ಪಂಚಮಿ ಹಬ್ಬ ಬಂದಾಗ ಈ ಮಾಯಿ ಮಕ್ಕಳಿಗೆ ಮಾಡುವುದನ್ನು ನೆನಪಿಸಿಕೊಳ್ಳುತ್ತಾರೆ ‘ಈಗ ಮಾಯಿ ಮಕ್ಕಳಾಗೂದು ನಮ್ಮ ಮೊಮ್ಮಕ್ಕಳಪಾಳೀ ನೋಡಿ’ ಎಂದು ಹೇಳುತ್ತಾ ಅಂದಿನ ತಮ್ಮ ಅನುಭವಗಳನ್ನು ಮೆಲುಕು ಹಾಕಿ ನಗೆ ಸೂಸುತ್ತಾರೆ.