‘ಉಗಾದಿ ಉಡಕ್ಕೊಂಡ ಮಾತು’ ಎನ್ನುತ್ತಾರೆ ಒಕ್ಕಲಿಗರು. ಯಾಕೆಂದರೆ ಯುಗಾದಿಯ ನಂತರ ಹುಣ್ಣಿಮೆ ಅಮವಾಸ್ಯೆಗಳನ್ನು ಹೊರೆತು ಪಡಿಸಿದರೆ ಹೇಳಿ ಕೊಳ್ಳುವಂತಹ ಹಬ್ಬ ಹರಿದಿನಗಳಿಲ್ಲ. ಅದಕ್ಕಾಗಿಯೇ ಅವರು ಹೇಳುವದು ಉಗಾದಿ ಉಡಕ್ಕೊಂಡು ಹೋಯ್ತು ಎಂದು.

ಹೇಳಿಕೊಳ್ಳುವ ಹಬ್ಬಗಳಿಲ್ಲದಿದ್ದರೂ ಕೂಡಾ ತಮಗೆ ಅನ್ನ ಕೊಡುವ ಭೂಮಿ ಹಾಗೂ ಬಸವಣ್ಣ ಎರಡರಲ್ಲಿಯೂ ದೇವರನ್ನು ಕಂಡುಕೊಂಡ ಒಕ್ಕಲಿಗರು ಒಂದಿಷ್ಟು ಭಾವುಕ ಆಚರಣೆಗಳನ್ನೂ ತಮ್ಮ ಮಡಿಲಲ್ಲಿ ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಅಂಥವುಗಳಲ್ಲಿ ವಾರ ಹಿಡಿಯುವದೂ ಒಂದು. ವರ್ಷದುದ್ದಕ್ಕೂ ತಾವು ಮಾಡುತ್ತಿರುವ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಆತಂಕಗಳು ಬರದಂತೆ, ತಮ್ಮ ಫಸಲುಗಳು ಹುಲುಸಾಗುವಂತೆ ಬೇಡಿಕೊಳ್ಳಲು ಈ ವಾರ ಹಿಡಿಯುತ್ತಾರೆ. ಭೂಮಿ ತಾಯಿಯನ್ನು ಶಕ್ತಿ ಮಾತೆಯ ರೂಪದಲ್ಲಿ ಗೌರವಿಸುವ ಈ ಜನ ಆಕೆಯ ಪ್ರೀತ್ಯರ್ಥವಾಗಿ ಮಂಗಳವಾರ ಅಥವಾ ಶುಕ್ರವಾರದಿಂದಲೇ (ಹೆಣ್ಣು ದೇವರ ವಾರಗಳು) ಈ ವಾರ ಹಿಡಿಯುತ್ತಾರೆ. ವಾರದ ದಿನ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ ದನಕರುಗಳ ಮೈ ತೊಳೆಯುತ್ತಾರೆ. ಮನೆಯಲ್ಲಿ ಅಂದು ರೊಟ್ಟಿ ಮಾಡುವುದಿಲ್ಲ. ಚಟ್ನಿ ಕಟ್ಟುವುದಿಲ್ಲ, ಚಟ್ನಿ ಕುಟ್ಟುವುದಿಲ್ಲ, ಜೋಳ, ಸಜ್ಜೆ ಗೋದಿಯ ಕುದಿಸಿದ ಕಡುಬು, ಜೋಳದ ನುಚ್ಚನ್ನು (ಈಗೀಗ ಚಪಾತಿ ಹಾಗೂ ಅಕ್ಕಿಅನ್ನ ಚಾಲ್ತಿಯಲ್ಲಿವೆ ಬಿಡಿ) ಮಾಡಿ ದೇವರಿಗೂ ಅದನ್ನೇ ನೈವೇದ್ಯ ತೋರಿಸಿ ಊಟ ಮಾಡುತ್ತಾರೆ. (ಬಹುಶಃ ತಮಗೂ, ತಮ್ಮ ದನಕರುಗಳಿಗೂ ವಾರಕ್ಕೊಂದು ದಿನ ರಜೆ ಇರಲಿ ಎಂದೋ, ಬೇಸಿಗೆಯ ದಿನಗಳಲ್ಲಿ ಪಚನಕ್ಕೆ ಹಗುರವಾದ ಆಹಾರ ಇರಲಿ ಎಂದೋ ಕುದಿಸಿದ ಕಡುಬುಗಳನ್ನು ಮಾಡುವುದು ಕೂಡಾ ಇಲ್ಲಿ ಗ್ರಾಮೀಣ ಕೃಷಿಕರ ಭಾಹುಕ ಹಿನ್ನೆಲೆ ಇರಬಹುದೇನೋ ಎನಿಸುತ್ತದೆ.) ಹೀಗೆ ಐದು, ಒಂಭತ್ತು, ಹನ್ನೋಂದು ವಾರಗಳನ್ನು ತಮಗೆ ಅನುಕೂಲವಾಗುವಷ್ಟು (ರೋಹಿಣಿ ಮಳೆಗೆ ಮುಂಗಾರಿ ಬಿತ್ತನೆ ಪ್ರಾರಂಭಗೊಳ್ಳುವುದರಿಂದ ಅಲ್ಲಿಗೆ ವಾರ ಮುಗಿಯಲೇಬೇಕು.) ವಾರಗಳನ್ನು ಹಿಡಿದು ಕೊನೆಯ ವಾರ ಊರವರೆಲ್ಲಾ ಸೇರಿ ಅದ್ಧೂರಿಯಾಗಿ ವಾರ ಮುಗಿಸುತ್ತಾರೆ. ಅಂದು ಗ್ರಾಮ ದೇವತೆಗೆ ಉಡಿ ತುಂಬಿ(ದುರ್ಗವ್ವ, ದ್ಯಾಮವ್ವ) ಪ್ರಾಣಿ ಬಲಿಯನ್ನೂ ಕೊಡಲಾಗುತ್ತದೆ. ಮೊದಲು ಗ್ರಾಮ ದೇವಿಯ ಉಡಿ ತುಂಬಿದ ನಂತರವೇ ಭೂಮಿ ತಾಯಿಯ ಉಡಿ ತುಂಬುವುದು. (ಬಿತ್ತನೆ ಕಾರ್ಯಕ್ಕಿಳಿಯುವದು)