ದಸರೆಯ ನಂತರ ಬರುವ ಶೀಗಿ ಹುಣ್ಣಿಮೆ, ದೀಪಾವಳಿಯ ನಂತರ ಬರುವ ಗೌರಿ ಹುಣ್ಣುಮೆಗಳು, ಶೀಗವ್ವ ಹಾಗೂ ಗೌರವ್ವನ ಹುಣ್ಣಿಮೆಗಳಾಗಿವೆ. ಗುಳ್ಳವ್ವನಂತೆಯೇ ಕಾಣುವ ಮಣ್ಣಿನ ಮೂರ್ತಿಯನ್ನು ಮಾಡಿ ದಸರೆಯ ದಿನ ಸಾರ್ವಜನಿಕ ಚಾವಡಿ, ಗುಡಿ, ಮಠಗಳಲ್ಲಿ ಶೀಗವ್ವನನ್ನು ಪ್ರತಿಷ್ಠಾಪಿಸಿದರೆ, ಕಾರ್ತಿಕ ಮಾಸದಲ್ಲಿ ಬರುವ ತುಳಸಿ ಲಗ್ನದಂದು ಗೌರವ್ವನನ್ನು ಪ್ರತಿಷ್ಠಾಪಿಸುತ್ತಾರೆ. ಆದರೆ ನಂದಿಯ ಮೇಲೆ ಶಿವ, ಪಾರ್ವತಿ, ಗಣೇಶನೊಂದಿಗೆ ಮಣ್ಣಿನಲ್ಲಿಯೇ ಮಾಡಿ ಪ್ರತಿಷ್ಠಾಪಿಸುತ್ತಾರೆ. ಪಾರ್ವತಿಯೇ ಗೌರವ್ವ(ಗೌರಿ)ಳಾಗಿರುತ್ತಾಳೆ.

ಐದು ದಿನಗಳ ಕಾಲ ಓಣಿಯ ಬಾಲಕಿಯರೆಲ್ಲ ಸೇರಿ ಆರತಿಯಲ್ಲಿಅವರೆ ಹೂವು, ಹೊನ್ನೆಕುಕ್ಕದ ತೆನೆ, ಚಂಡು ಹೂವುಗಳನ್ನಿಟ್ಟುಕೊಂಡು ಶೀಗವ್ವ ಹಾಗೂ ಗೌರವ್ವನ ಕುರಿತಾದ ಹಾಡು ಹೇಳುತ್ತಾ ಆರತಿ ಬೆಳಗಿ ಬಂದ ನಂತರ ಮನೆಯಲ್ಲಿ ಕಾಲಿಡುತ್ತಿರಬೇಕಾದರೆ ಮನೆಯ ಹೊಸ್ತಿಲಿಗೂ, ಕೊಟ್ಟಿಯಲ್ಲಿ ಹಸುಗಳಿಗೂ, ಎತ್ತುಗಳಿಗೂ, ಕೊಟ್ಟಿಗೆಯ ಗೂಡಿನಲ್ಲಿದ್ದ ಲಕ್ಷಿಗೂ (ಗ್ವಾದಲಿ ಲಕ್ಕವ್ವ), ಆರತಿ ಬೆಳಗಿ ತಟ್ಟೆಯಲ್ಲಿಟ್ಟಿದ್ದ ಹೂವನ್ನೂ ಏರಿಸಿ ಒಳಗೆ ಹೋಗುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶೀಗವ್ವ ಗೌರವ್ವರನ್ನು ಶಕ್ತಿ ದೇವತೆಯಾಗಿ ಕಾಣುವ ಕೃಷಿಕರಿಗೆ ಕೊಟ್ಟಿಗೆಯಲ್ಲಿರುವ ಪಶುಗಳು ಕೂಡಾ ಅಷ್ಟೇ ಮಹತ್ವಪೂರ್ಣವಾಗಿ ಕಾಣಿಸಿಕೊಳ್ಳುತ್ತವೆ. ಐದನೆಯ ದಿನ (ಹುಣ್ಣಿಮೆಯ ದಿನ) ಆರತಿ ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳನ್ನಿಟ್ಟು ಎಡೆ ತೋರಿಸಿ ಆರತಿ ಬೆಳಗುತ್ತಾರೆ. ಹುಡುಗಿಯರು ಆರತಿ ಬೆಳಗಿ ಮನೆಗೆ ಬರುತ್ತಿರಬೇಕಾದರೆ ಪೋಕರಿ ಹುಡುಗರು ತಟ್ಟೆಯಲ್ಲಿನ ಸಕ್ಕರೆ ಗೊಂಬೆಗಳನ್ನು ಕಸಿದುಕೊಂಡು ಹೋಗುವ, ದೊಡ್ಡವರು ಉಡಾಳ ಹುಡುಗರನ್ನು ಥಳಿಸುವ, ಥಳಿಸಿಕೊಂಡ ಹುಡುಗರು ಲಬೋಲಬೋ ಎಂಬ ಹೋಳಿ ಹಬ್ಬ ಆಚರಿಸುವ ಹರಟೆಯ ಪ್ರಸಂಗಗಳಿಗೂ ಇಲ್ಲಿ ಕೊರತೆ ಇರುವುದಿಲ್ಲ.

ಹುಣ್ಣುಮೆಯ ದಿನ ಮಡಿಕೆಗಳಿಗೆ ಹೆಣ್ಣು ಮಕ್ಕಳು ತೂತು ಕೊರೆದು ಸುಣ್ಣ, ಕೆಮ್ಮಣ್ಣು ಹಚ್ಚಿ ಅವುಗಳ ಮೇಲಿಟ್ಟ ಮುಚ್ಚಳಗಳಲ್ಲಿ ಕುಳ್ಳಿಗೆ ಸೀಮೆ ಎಣ್ಣೆ ಸುರಿದು ದೀಪ ಹಚ್ಚುತ್ತಾರೆ. ವಾದ್ಯ ವೈಭವಗಳ ಮಧ್ಯೆ ಈ ಹೊಂಗೊಡಗಳನ್ನು ಹೊತ್ತು ಮಹಿಳೆಯರು ಅವುಗಳನ್ನು ಪೂಜಿಸಿ ನದಿಯಲ್ಲಿಯೋ, ಹಳ್ಳದಲ್ಲಿಯೋ, ಕೆರೆಯಲ್ಲಿಯೋ ತೇಲಿ ಬಿಡುತ್ತಾರೆ. ತಲೆಯಲ್ಲಿ ದೀಪ ಇಟ್ಟುಕೊಂಡು ನೀರಿನಲ್ಲಿ ತೇಲಿ ಹೋಗುತ್ತಿರುವ ಹೊಂಗೊಡಗಳು (ಹೊನ್ನಿನ ಕೊಡ ಇರಬಹುದು) ಹೊಸದೊಂದು ನಕ್ಷತ್ರ ಲೋಕವನ್ನೇ ಸೃಷ್ಟಿಸಿ ಭೂಮಿಗೆ ತಂದು ಬಿಟ್ಟಿರುವಂತೆ ಕಾಣುತ್ತವೆ.

ಮುಂಗಾರಿ ಸುಗ್ಗಿ ಮುಗಿಯುತ್ತಾ ಬಂದು ಹಿಂಗಾರಿ ಹಂಗಾಮಿನ ಬಿತ್ತನೆ ಕಾರ್ಯವೂ ಮುಗಿದು ಆಹ್ಲಾದಕರ ತಂಗಾಳಿ, ಹಿಟ್ಟು ಚಲ್ಲಿದಂತಹ ಬೆಳದಿಂಗಳಿನಲ್ಲಿ ಕುಳಿತು ಮಹಿಳೆಯರು ಗೌರವ್ವ, ಶೀಗವ್ವರ ಹಾಡು ಹೇಳುತ್ತಿರಬೇಕಾದರೆ ಅಲ್ಲೊಂದು ಗಾನ ಪ್ರಪಂಚವೇ ಸೃಷ್ಟಿಯಾಗಿರುತ್ತದೆ. ಶೀಗವ್ವ ಗೌರವ್ವರ ಹಾಡುಗಳೊಂದಿಗೆ, ತಮ್ಮೂರ ದೇವರುಗಳ, ತಮ್ಮ ಹೊಲ, ಮನೆ, ಮಳೆ, ಬೆಳೆ ತಮ್ಮ ಪಶು ಸಂಪತ್ತು, ತಮ್ಮೂರಿನಲ್ಲಿ ಆಗಿಹೋದ ಪವಾಡ ಪುರುಷರ, ಅವರು ತೋರಿದ ಪವಾಡಗಳು ಎಲ್ಲವೂ ಸುಶ್ರಾವ್ಯವಾಗಿ ಗಾನ ಗಂಗೆಯಾಗಿ ಹರಿದು ಬರುತ್ತದೆ. ಇಡೀ ರಾತ್ರಿಯುದ್ದಕ್ಕೂ ಅವನ್ನು ಕೇಳುವುದೇ ಒಂದು ಸೊಗಸು. ಸಿನಿಮಾ, ಟಿವಿಗಳ, ಧಾರವಾಹಿಗಳ ಅಬ್ಬರದಲ್ಲಿ ಯಾಂತ್ರಿಕವಾಗಿ ಬದುಕುತ್ತಿರುವ, ಮುಂದಿನ ಶತಮಾನಕ್ಕೆ ಜಿಗಿಯುವ ಧಾವಂತದಲ್ಲಿರುವ ನಮಗೆ ಅವುಗಳನ್ನಾಲಿಸಲು ಪುರುಸೊತ್ತಾದರೂ ಎಲ್ಲಿದೆ?