ಪ್ರಕೃತಿಯು ಚೇತನವಾದದ್ದು. ಅದರಲ್ಲಿ ಜೀವವಿದೆ. ಸೌಂದರ್ಯವಿದೆ. ಸಮೃದ್ದತೆಯಿದೆ. ಫಲವಿದೆ ಹೀಗಾಗಿ ಪ್ರಕೃತಿಯ ಸೌಂದರ್ಯವನ್ನು ಹೆಣ್ಣಿಗೆ ಹೋಲಿಸಲಾಗುತ್ತಿದೆ. ಹೆಣ್ಣು ಗರ್ಭಧರಿಸಿ, ಹೆತ್ತು, ಹೊತ್ತು, ಮಗುವಿನ ಪಾಲನೆ, ಪೋಷಣೆ, ರಕ್ಷಣೆ ಮಾಡಿದರೆ, ಭೂಮಿ ತಾಯಿ ತನ್ನಲ್ಲಿ ಬೆಳೆ ಬೆಳೆದು, ರೈತನಿಗೆ ನೀಡಿ ಜನತೆಯ ಹೊಟ್ಟೆ ತುಂಬಿಸುತ್ತಾಳೆ. ಹೀಗೆ ಹೆಣ್ಣು ಮತ್ತು ಭೂಮಿ ಎರಡರಲ್ಲಿಯೂ ಹೊರುವ, ಹೆರುವ ಸಮೃದ್ದತೆಯ ಗುಣಗಳನ್ನು, ಪಾಲನೆ ಮಾಡುವ ಮಮಕಾರ ಗುಣಗಳನ್ನು ಕಂಡಿರುವ ಒಕ್ಕಲು ಮಕ್ಕಳು ಒಂದರೊಂದಿಗೆ ಇನ್ನೊಂದನ್ನು ಸಮೀಕರಿಸಲು ಯತ್ನಿಸುತ್ತಾರೆ. ಹೆಣ್ಣಿನಂತೆ ಭೂಮಿಯ ಜೀವಕ್ರಿಯೆಯಲ್ಲಿಯೂ ಆಚರಣೆಗಳನ್ನು ಮಾಡಲು ಹಂಬಲಿಸುತ್ತಾರೆ.

ಶೀಗೆ ಹುಣ್ಣಿಮೆಯ ಹೊತ್ತಿಗೆ ಭೂಮಿ ಮುಂಗಾರು ಫಸಲಿನಿಂದಲೂ ಎಳ್ಳಮವಾಸೆಯ ಹೊತ್ತಿಗೆ ಹಿಂಗಾರಿನ ಫಸಲಿನಿಂದಲೂ ಕಾಳು ಕಟ್ಟಿಕೊಂಡು ನಿಂತಿರುತ್ತವೆ, ಗರ್ಭಿಣಿ ಹೆಣ್ಣು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಮುಂದೆ ಮಗುವನ್ನು ಹೆರುವ, ಮನೆ ತುಂಬುವ ನಿರೀಕ್ಷೆಯಲ್ಲಿರುವಂತೆ ಇಲ್ಲಿ ಭೂಮಿ ಕೂಡಾ ಬೆಳೆಗಳನ್ನು ಹೊತ್ತು, ಮಣ್ಣಿನ ಮಕ್ಕಳಿಗೆ ಫಸಲು ಕೊಟ್ಟು ಅವನ ಕಣಜ ತುಂಬುವ ಕಾತುರದಲ್ಲಿರುತ್ತಾಳೆ. ಹೀಗಾಗಿ ಗರ್ಭಿಣಿ ಹೆಂಗಸನ್ನು, ಭೂ ತಾಯಿಯನ್ನು ಒಂದೇ ದೃಷ್ಠಿಕೋನದಿಂದ ನೋಡಬಯಸುವ ಮಣ್ಣಿನ ಮಕ್ಕಳು ಗರ್ಭಿಣಿಗೆ ಸೀಮಂತ ಕಾರ್ಯ ಮಾಡಿದಂತೆ ಭೂ ತಾಯಿಗೂ ಸೀಮಂತ ಮಾಡಿ ಸಂಭ್ರಮಿಸುತ್ತರೆ. ಗರ್ಭಿಣಿ ಹೆಣ್ಣಿನಲ್ಲಿ ಹೇಗೆ ಬಯಕೆಗಳಿರುತ್ತವೆಯೋ ಹಾಗೆಯೇ ಭೂಮಿ ತಾಯಿಗೂ ಬಯಕೆಗಳಿರುತ್ತವೆ ಎಂಬುದು ಅವರ ಗಟ್ಟಿಯಾದ ನಂಬುಗೆ, ಅವರ ದೃಷ್ಠಿಯಲ್ಲಿ ಬಸಿರು ಹೆಂಗಸು, ಕಾಳುಕಟ್ಟಲು ಸಿದ್ದವಾಗಿನಿಂತ ಭೂಮಿ ಎರಡು ಒಂದೇ.

ವಿವಿಧ ಬಗೆಯ ಅಡಿಗೆಗಳನ್ನು ಮಾಡಿ, ಬಂಧು ಬಾಂಧವರೊಡನೆ ಚಕ್ಕಡಿ ಕಟ್ಟಿಕೊಂಡು ಹೋಗಿ ಭೂದೇವಿಯನ್ನು ಪೂಜಿಸಿ ಆಕೆಗೆ ಎಡೆ ತೋರಿಸಿ, ಹೊಲದ ತುಂಬಾ ‘ಚರಗ’ ಚಲ್ಲುತ್ತಾರೆ. ತಾವೂ ಉಂಡುಟ್ಟು ನಲಿಯುತ್ತಾರೆ. ಚರಗ ಚೆಲ್ಲುವದೆಂದರೆ ಅದು ಕಾಟಾಚಾರದ ಆಚರಣೆಯಲ್ಲ. ವಾರಗಟ್ಟಲೇ ಮನೆಯಲ್ಲಿ ಅದಕ್ಕೆ ಸಿದ್ಧತೆ ನಡೆದಿರುತ್ತದೆ. ಎಳ್ಳು ಹಚ್ಚಿ ಮಾಡಿದ ಸಜ್ಜಿರೊಟ್ಟಿ, ಹುರಿಯಕ್ಕಿ ಕರ್ಚಿಕಾಯಿ. ಶೇಂಗಾ ಹೋಳಿಗೆ, ಶೇಂಗಾ ಚಟ್ನಿ, ಗುರೆಳ್ಲ ಹಿಂಡಿ, ಅಗಸೆ ಹಿಂಡಿ ಇವೆಲ್ಲವುಗಳನ್ನು ಮೊದಲೇ ಸಿದ್ಧಪಡಿಸಿ ಇಟ್ಟಿರುತ್ತಾರೆ.

ಹಬ್ಬದ ದಿನ ಹೋಳಿಗೆ ಹುಗ್ಗಿ, ಕಡುಬು, ಕಾಯಿಪಲ್ಲೆ ಅನ್ನ, ಸಾರು, ಸಜ್ಜೆ ಕಡುಬು ತಯರಿಸುತ್ತಾರೆ. ಪುಂಡಿಪಲ್ಲೆ, ಚವಳಿಕಾಯಿ, ಕುಂಬಳಕಾಯಿ, ಎಣ್ಣೆಗಾಯಿ (ಬದನೆ ಕಾಯಿ), ಎಲ್ಲ ಕಾಯಿಪಲ್ಲೆಗಳು ನೈವೇದ್ಯಕ್ಕೆ ಇರಲೇಬೇಕು. (ಎಲ್ಲ ತರಕಾರಿಗಳನ್ನು ಸೇರಿಸಿ ಒಂದೇ ಪಲ್ಲೆ ಮಾಡುತ್ತದ್ದಾರೆ ಮಾಡರ್ನ ಮುತ್ತೈದೆಯರು. ಎಡಿಪೂರ್ತೇಕ ಸಾಕ ಬಿಡ್ರೀ ಎನ್ನತ್ತಾರವರು)

ಹೊಸ ಸೀರೆ, ಕುಪ್ಪಸ, ಹೊಸ ದೋತರ ರುಮಾಲುಗಳನ್ನು ತೊಟ್ಟು ಮೈತುಂಬಾ ಆಭರಣಗಳನ್ನು ಹಾಕಿಕೊಂಡು ಮಕ್ಕಳು ಮರಿಯೊಂದಿಗೆ, ಸವಾರಿ ಬಂಡಿಯಲ್ಲಿ ಚರಗ ಚಲ್ಲಲು ಹೊರಟ ಪರಿಹಾರವನ್ನು ನೋಡುವುದೇ ಒಂದು ಸೊಗಸು. ಎತ್ತುಗಳಿಗೆ ಜೂಲು, ಗೆಜ್ಜೆಸರ, ಚಕ್ಕಡಿಯಲ್ಲಿ ಕುಳಿತವರಿಗೆ ಬಿಸಿಲು ಹತ್ತದಂತೆ ಮೇಲೆ ಸವಾರಿ, ಆತು ಕುಳಿತು ಕೊಳ್ಳಲು ಮೆತ್ತನೆಯ ಲೋಡು ಅಬ್ಬಬ್ಬಾ ಅದೆಲ್ಲಾ ವರ್ಣನಾತೀತವಾದದ್ದು.

ತಮಗೆ ಅನ್ನವಿಕ್ಕುವ ಭೂತಾಯಿಗೆ ಕೃತಜ್ಞತೆ ಸಲ್ಲಿಸಲು ಮಣ್ಣುನ ಮಕ್ಕಳು ಹಾಕಿಕೊಂಡ ಈ ಆಚರಣೆ ಎಷ್ಟೊಂದು ಶ್ರದ್ಧೆ, ನಂಬಿಕೆ, ಮುಗ್ಧ ಭಕ್ತಿಯಿಂದ ಕೂಡಿರುತ್ತದೆಂಬುದನ್ನು ಗ್ರಾಮೀಣ ಪ್ರದೇಶಕ್ಕೆ ಹಬ್ಬದ ಸಂದರ್ಭದಲ್ಲಿ ಭೆಟ್ಟಿ ನೀಡಿ ಅನುಭವಿಸಿದಾಗಲೇ ಅದರ ಸಂಪೂರ್ಣ ಸೊಗಸು ಗೊತ್ತಾಗುತ್ತದೆ.

ಹೊಲದಲ್ಲಿರುವ ಬನ್ನಿ ಗಿಡದ ಮುಂದೆ ಐದು ಕಲ್ಲುಗಳನ್ನಿಟ್ಟು ಬನ್ನಿಗಿದೊಂದಿಗೆ ಅವಿಗಳಿಗೂ ವಿಭೂತಿ, ಕುಂಕುಮ ಹಚ್ಚಿ ಊದು ಬತ್ತಿ ಬೆಳಗಿಸಿ, (ಬನ್ನಿಗಿಡದ ಮಗ್ಗುಲಲ್ಲಿ ಬೆಳೆದು ನಿಂತ ಪೈರಿಗೂ ಪೂಜೆ ಸಲ್ಲಿಸಿ) ಎಡೆ ತೋರಿಸುತ್ತಾರೆ. ಅದೇ ಎಡೆಯನ್ನು ಹೊಲದ ತುಂಬಾ ತಿರುಗಾಡಿ ಹುಲುಲ್ಲಿಗೋ, ಸಣಮಲ್ಲಿಗ್ಯೋ(ಭೂತಾಯಿ ಕೊಟ್ಟ ಒಂದೊಂದು ಹುಲ್ಲು ಕಡ್ಡಿಯನ್ನು ಕೃತಜ್ಞತಾಪೂರ್ವಕವಾಗಿ ಪ್ರಸಾದ ರೂಪದಲ್ಲಿ ಸ್ವಿಕರಿಸುವ ಒಕ್ಕಲಿಗರು ಅದಕ್ಕೆಂದೇ ಹುಲ್ಲು ಹುಲ್ಲಿಗೆ ಶರಣು ಮಲ್ಲಿಗೆ ಎಂದು ಹೇಳುವುದು ಅದೇ ನಮ್ಮ ಹಳ್ಳಿಗರ ಬಾಯಲ್ಲಿ ಹುಲುಲ್ಲಿಗೋ ಸಣವಲ್ಲಿಗ್ಯೋ ಆಗಿರಬಹುದಲ್ಲವೇ?

ಚರಗ ಚಲ್ಲಿದ ನಂತರ ಚಕ್ಕಡಿಯಲ್ಲಿ ತಂದಿರುವ ಚವ್ವಾಳಿ(ಗುಡಾರ, ಜಮಕಾನ) ಹಾಸಿ ಕುಟುಂಬ ಸಮೇತ ಭೊಜನ. ಬಂದ ಗೆಳೆಯರಿಗೆ ನೆಂಟಷ್ಟರಿಗೆ ಅವರು ಸಾಕು ಸಾಕು ಎನ್ನುತ್ತಿದ್ದರು ‘ನಾಚಬ್ಯಾಡ್ರೀ ಊಟಕ್ಕೆ ಕುಂತಾಗ ನಾಚ್ಯಾಡಬಾರದ್ರೀ’ ಎಂದು ಇವರು ಜುಲುಮೆ ಮಾಡುವುದು ‘ಇಲ್ರೀ ನಾಚ್ಯಾಡಾಕ ನಾವು ಬ್ಯಾರೇರವ್ರ ಮನಿಗೆ ಬಂದೀವೇನ್ರೀ, ಊಟದ ವಿಷಯದೊಳ್ಗ ನಾವು ನಾಚ್ಯಾಡುವುದಿಲ್ಲ ಬಿಡ್ರೀ, ನನ್ನ ಊಟನ ಇಷ್ಟ ನೋಡ್ರೀ’ ಎಂದು ಅವರು ಹೇಳುವುದೂ ನಡದೇ ಇರುತ್ತದೆ. ಊಟದ ನಂತರ ಮನೆಯಿಂದಲೇ ತಂದ ವೀಳ್ಯದೆಲೆ, ಅಡಿಕೆ, ಬಡೆಸೊಪು, ಯಾಲಕ್ಕಿ, ಲವಂಗ, ಮಿಶ್ರಿತ ತಾಂಬೂಲ ಸೇವನೆ ಮಾಡಿ, ಹೊಲದಲ್ಲಿ ತಿರುಗಾಡಿ ‘ಮುಂದಿನ ಬ್ಯಾಸಗೀಗಿ ಈ ಕರ್ಕಿ ಇರಬಾರ್ದು, ಆಚೆಕಡೆ ಒಡ್ಡು ಇನ್ನೆರಡು ಕಟ್ಟೆ ಮಣ್ಣು ಹಾಕಿ ಎತ್ತರ್ಸಬೇಕು. ಆತ ತುಗಲಿ ಗಿಡ ನೆಳ್ಳಗೊಂಡು ನಾಟೀನ ಏಳುವುದಿಲ್ಲ, ಅದನ್ನೊಂದು ತೆಗೆಸಿಬಿಡ್ರಿ’ ಎಂದು ಕಿರಿಯರಿಗೆ, ಆಳುಗಳಿಗೆ ಸೂಚಿಸಿ ಚಕ್ಕಡಿ ಹತ್ತಿ, ಮರಳಿ ಮನೆಗೆ. ಅಲ್ಲಿಗೆ ಒಕ್ಕಲಿಗರ ದೊಡ್ಡ ಹಬ್ಬಗಳಾದ ಸೀಗೆ ಹುಣ್ಣಿಮೆ, ಎಳ್ಳಮವಾಸ್ಯೆ ಚರಗಗಳಿಗೆ ಮಂಗಳ ಹಾಡುದಂತೆ. ನಂತರದ ಬನದ ಹುಣ್ಣಿಮೆ ದಿನ ಬೆಳೆದ ಎಲ್ಲಾ ತರಕಾರಿಗಳನ್ನು ಶಾಖಾಂಬರಿಗೆ ಎಡೆ ತೋರಿಸಿ ಊಟ ಮಾಡುತ್ತಾರೆ.