ನಂತರ ಬರುವದೇ ಹೋಳಿ ಹುಣ್ಣಿಮೆ. ಮನದ ಮುಂದಿನ ಆಸೆಗಳನ್ನು ಸುಟ್ಟು ಹಾಕುವುದೇ ರೈತಾಪಿ ವರ್ಗಕ್ಕೆ ಮುಖ್ಯವಾದದ್ದು. ಊರ ಮನೆಯಲ್ಲಿಯ ಕುಳ್ಳು, ಕಟ್ಟಿಗೆ ಎಲ್ಲವನ್ನು ಕದ್ದು ತಂದು ಫಾಲ್ಗುಣ ಮಾಸದ ಹುಬ್ಬಾ ನಕ್ಷತ್ರದ ಮುಹೂರ್ತದಲ್ಲಿ ಕಾಮದಹನ ಮಾಡುತ್ತಾರೆ. ಹಿರಿಯರು ಎಳೆಯರಿಗೆ ‘ಕಾಮಣ್ಣ ಅಲ್ಲಿಲ್ರೋ, ಇಲಿದ್ಯಾನ ಎಂದು ಎದೆಯ ಮೇಲೆ ಕೈಇಟ್ಟು ಸೂಚ್ಯವಾಗಿ ಆಸೆಯ ಬೆನ್ನು ಹತ್ತದಿರಿ’ ಎಂದು ಸೂಚಿಸುವುದು ಕೂಡಾ ಎಂಥ ದಿವ್ಯ ಸಂದೇಶವಾಗಿದೆ.

ಕಾಮಣ್ಣನಿಗೆ ಹಚ್ಚಿದ ಬೆಂಕಿಯನ್ನು ಒಂದಿಷ್ಟು ಮನೆಗೆ ತಂದು ಅದರಿಂದಲೇ ಅಂದು ಒಲೆ ಹೊತ್ತಿಸುತ್ತಾರೆ. ಅದೇ ಕೆಂಡಗಳ ಮೇಲೆ ಕಡಲೆ ಕಾಳುಗಳನ್ನು ಸುಟ್ಟು ತಿನ್ನುವುದು ಇಲ್ಲಿ ಒಂದು ಆಚರಣೆಯೇ ಸೈ.

ಬೇಸಿಗೆ ಕಾಲವಾಗಿರುವುದರಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿ ಬಹಳಷ್ಟು ಜನರಿಗೆ ಬೆವರುಸಾಲೆ, ಹುರುಕು, ಕಜ್ಜಿಯಂತಹ ಚರ್ಮ ರೋಗಗಳೂ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುವುದು ಉಂಟು. ಚರ್ಮ ರೋಗಗಳ ಉಪಶಮನಕ್ಕಾಗಿ ರಂಗಿನಾಟ, ಮೊದ ಮೊದಲೆಲ್ಲಾ ಕೇವಲ ಔಷಧೀಯ ಸಸ್ಯಗಳಿಂದ, ಗಿಡಮೂಲಿಕೆಗಳಿಂದ ತಯಾರಾಗುತ್ತಿದ್ದ ಬಣ್ಣಗಳು ಖಂಡಿತವಾಗಿಯೂ ರೋಗ ನಿವಾರಣೆಯ ಕೆಲಸ ಮಾಡುತ್ತಿದ್ದವು. ಇತ್ತಿತ್ತಲಾಗಿಹಳ್ಳಿಯ ಹುಡುಗರು ಪೇಟೆಯವರ ಜಾಡುಹಿಡಿದು ವಾರ್ನಿಸ್ ಡಬ್ಬಗಳನ್ನು ಹಿಡಿದುಕೊಂಡು ಓಡಾಡುತ್ತಿರುವುದರಿಂದ ಸಂಭ್ರಮದಿಂದ ಹೋಳಿ ಹುಣ್ಣಿಮೆ ಆಚರಿಸುತ್ತಿದ್ದ ಹಳ್ಳಿಗರು ಹೋಳಿ ಹುಣ್ಣಿಮೆ ಬಂತೆಂದರೆ ತಲೆ ತಪ್ಪಿಸಿಕೊಂಡು ಓಡಿ ಹೋಗಿ ಬಿಡುತ್ತಿದ್ದಾರೆ.