ಹಳ್ಳಿಗಳಲ್ಲಿ ಕೆಲಸಕ್ಕೆ ಜನವಿಲ್ಲ, ಸಣ್ಣಪುಟ್ಟ ಜಾತ್ರೆಗೂ ಜನದಟ್ಟಣೆಯಿದೆ. ಬರೋಬ್ಬರಿ ಒಂದು ವಾರ ಎಲ್ಲಿಗೂ ಪ್ರವಾಸ ಹೋಗದೇ ಮನೆಯಲ್ಲಿ ಉಳಿದು ಕೃಷಿ ಕೆಲಸ ಮಾಡುವ ಕೃಷಿಕರು  ಏಲ್ಲಿದ್ದಾರೆ!? ಯಾರಿಗೂ ಬಿಡುವಿಲ್ಲ, ಕೃಷಿಯೇತರ ಚಟುವಟಿಕೆಗಳಿಗೆ ಸಮಯ ವಿನಿಯೋಗ. ಕೂಲಿದರ ಏರಿದೆ, ಕೆಲಸಕ್ಕೆ ಜನ ಸಿಗುತ್ತಿಲ್ಲ, ಕೃಷಿ ಉತ್ಪನ್ನಕ್ಕೆ ಬೆಲೆಯಿಲ್ಲ ಎಂಬ ಮಾತು  ಮಾಮೂಲಿಯಾಗಿದೆ. ಸಂತೆ, ಮದುವೆಮನೆಸುದ್ದಿಕಟ್ಟೆ ಹೀಗೆ ಏಲ್ಲೆಡೆ  ಸೆಮಿನಾರು ನಡೆದಿದೆ. ನೀರಾವರಿಯಿಂದ ಕೃಷಿ ಕ್ಷೇತ್ರ ವಿಸ್ತರಿಸಿದೆ, ವೈಜ್ಞಾನಿಕ ತಂತ್ರಜ್ಞಾನ ಜತೆ ನಿಂತಿದೆ. ಅವಕಾಶಗಳು ವಿಸ್ತರಿಸಿವೆ. ವಿಚಿತ್ರವೆಂದರೆ ಇಂದು ಮಣ್ಣಿನ ಜತೆ ಬೆವರಿಳಿಸುವ ಬದುಕು ನಡೆಸುವವರೆಲ್ಲ ೪೫ ವರ್ಷಕ್ಕೂ ಮೇಲ್ಪಟ್ಟವರು, ಹೊಸ ತಲೆಮಾರಿಗೆ ಕೃಷಿ ದುಡಿಮೆಯಲ್ಲಿ  ಸ್ವಲ್ಪವೂ ಆಸಕ್ತಿಯಿಲ್ಲ, ಹೀಗಾಗಿ ಕೂಲಿಬರ ಸಹಜವಾಗಿದೆ. ನಮ್ಮ ಜಮೀನಿನ ಕೆಲಸಕ್ಕೆ  ಕೂಲಿಕಾರರು ಇಲ್ಲ ಎಂಬುದನ್ನು  ಹೇಳುವ ನಮ್ಮ ವರ್ತನೆ ಹೇಗಿದೆ? ಕೊಂಚ ಆತ್ಮಾವಲೋಕನ ಬೇಕು. ಭೂಮಿಯ ಬಳಿ ಓಡಾಡಲು ಪುರುಸೊತ್ತಿಲ್ಲ, ಕೈಲಾದ ಕೆಲಸ ಮಾಡಲು ಬಿಡುವಿಲ್ಲ! ನಮ್ಮ ನೆಲದಲ್ಲಿ ಕೃಷಿ ಕೆಲಸ ಮಾಡದ ನಾವು  ಕೂಲಿ ಕೊರತೆ  ಬಗೆಗೆ  ದೊಡ್ಡದಾಗಿ ಮಾತಾಡುತ್ತೇವೆ. ಇಲ್ಲಸಲ್ಲದ ಟೀಕೆಗಳಲ್ಲಿ ಕಾಲಹರಣ ನಡೆಸಿದ್ದೇವೆ.

ನಿತ್ಯ ದಿನಚರಿ ಬರೆಯಬೇಕು. ನಿತ್ಯ ನಿರ್ವಹಿಸುವ ಕೆಲಸದ ಪಟ್ಟಿ ಗಮನಿಸಬೇಕು. ಆಗ ಕೃಷಿಗಾಗಿ ಎಷ್ಟು ಸಮಯ ವಿನಿಯೋಗಿಸುತ್ತೇವೆ ಎಂಬ ಲೆಕ್ಕ ಸಿಗುತ್ತದೆ. ಮಲೆನಾಡಿನ ಕೃಷಿ ಕುಟುಂಬಗಳ  ಉದಾಹರಣೆ ನೋಡಿ, ಇಲ್ಲಿ ತೋಟಗಾರಿಕೆ ಬೆಳೆ ಜಾಸ್ತಿ, ಬಹುತೇಕ ಕೃಷಿಕರು ಬೆಳೆಕೊಯ್ಲು, ಸಂಸ್ಕರಣೆ ಸಮಯಕ್ಕೆ  ಒಂದಿಷ್ಟು ಕೆಲಸ ಮಾಡಿಬಲ್ಲವರು. ಕೆಲವರಂತೂ ಒಳ್ಳೆ ಬೆಲೆ, ಸಾಲದ ಹಣ ಸಿಕ್ಕರೆ ಕೃಷಿ ಮರೆಯಬಲ್ಲವರು. ಹೆಚ್ಚೆಂದರೆ ಇಡೀ ವರ್ಷದಲ್ಲಿ  ಬರೋಬ್ಬರಿ ೧ ತಿಂಗಳು ಕೆಲಸ ಮಾಡಬಹುದು. ಇನ್ನು ಬೇಸಿಗೆಯ ದಿನಗಳಲ್ಲಂತೂ  ಸಂಬಂಧಿಗಳ ಲಗ್ನಕಾರ್ಯಗಳ ಓಡಾಟಕ್ಕೆ ಕುಟುಂಬದ ಸಮಯ ವಿನಿಯೋಗ. ದಿನದಲ್ಲಿ  ಗಂಟೆ, ಅರ್ಧ ಗಂಟೆ ಕೆಲಸ ಮಾಡಿದರೆ ಹೆಚ್ಚು. ಬಿಸಿಲು ಅಲರ್ಜಿ, ಮಳೆ ಆಗೋದಿಲ್ಲ, ದೂಳು ಹಿಡಿಸೋಲ್ಲ, ಚಳಿಗೆ ನಡುಗುವ ದೇಹಗುಣ, ಮಣ್ಣು, ಸಗಣಿ ಮುಟ್ಟಿ ಮಾಡಿದ ಕೆಲಸಕ್ಕಿಂತ ನಂತರ ಕೈ ತೊಳೆಯುವದಕ್ಕೆ  ಹೆಚ್ಚು ಸಮಯ ಬೇಕು!  ಕೃಷಿ ಶ್ರದ್ಧೆ ತೀರ ಕಡಿಮೆ. ದಿನವಿಡೀ ತಾಂಬೂಲ ಜಗಿಯುತ್ತ ಸುದ್ದಿಕಟ್ಟೆಗಳಲ್ಲಿ ರಾಜಕೀಯ ಮಾತಾಡುತ್ತ ಕಾಲಹರಣ ಮಾಡುವವರನ್ನು ಪ್ರತಿ ಊರಲ್ಲಿ  ನೋಡಬಹುದು. ಜೀವನ ವೃತ್ತಿಯಾದ ಕೃಷಿ ಕೆಲಸದ ಚಿಂತನೆಗೆ ಒಂದಿಷ್ಟು ಮಾತಾಡಿದ್ದರೂ ಕೃಷಿ ಬದುಕು ಹೀಗಾಗುತ್ತಿರಲಿಲ್ಲ. ವಾಜಪೇಯಿ, ಆಡ್ವಾನಿ, ಸೋನಿಯಾ, ಯಡ್ಯೂರಪ್ಪ, ಬಂಗಾರಪ್ಪ  ಬಗೆಗೆ ಇವರಾಡುವ ಮಾತು  ಕೇಳಿದರೆ  ಅಚ್ಚರಿಯಾಗಬೇಕು. ಖುದ್ದು ಎದುರು ನಿಂತು ಕೇಳಿದಂತೆ ಅಭಿಪ್ರಾಯ ಹಂಚಿಕೆ. ಚುನಾವಣೆ ಸಮಯದಲ್ಲಂತೀ ಅಲ್ಲಿಇಲ್ಲಿ  ಯಾರೋ ಹೇಳಿದ್ದು, ಪತ್ರಿಕೆಯಲ್ಲಿ ಏನೋ ಬರೆದಿದ್ದರ ಬಗೆಗೆ ವಿಮರ್ಶೆ, ಜಗಳ, ವಾಗ್ವಾದ ನಡೆಸುವದರಲ್ಲಿ  ಕೃಷಿಕರು  ತಮ್ಮ ಭವಿಷ್ಯ ಮರೆತಿದ್ದಾರೆ. ಪ್ರತಿ ಪಾರ್ಟಿಯ ಹಿಂದೆ ಒಂದಿಷ್ಟು ಕಾರ್ಯಕರ್ತರು, ಆಗಾಗ ಎದುರಾಗುವ ಚುನಾವಣೆ ಇವರಿಗೆ ಉದ್ಯೋಗ ನೀಡುತ್ತದೆ. ೫೦-೧೦೦ ರೂಪಾಯಿ ನೀಡಿದರೂ ಪಕ್ಷ, ಸಿದ್ದಾಂತ ಮರೆತು ಓಡುವ ಗುಣ.  ಹೊಸ ಕೃಷಿ ಹೇಗಿದೆ? ತೋಟಗಾರಿಕೆ ಸುಲಭ ನಿರ್ವಹಣೆ ಹೇಗೆ? ಇರುವ ಜಮೀನಿನಲ್ಲಿ ಹೆಚ್ಚು ಫಸಲು ಪಡೆಯುವದು ಹೇಗೆ? ಕೃಷಿ ಸುಸ್ಥಿರತೆ, ಸುಧಾರಣೆ ಮೂಲಭೂತ ಅಂಶಗಳತ್ತ  ಗಮನವಿಲ್ಲ. ಇಡೀ ದಿನ ಮಾತು, ಮಾತು, ಮಾತು! ಎಷ್ಟೋ ಜನಕ್ಕೆ ತಮ್ಮ ಮಾತಿಗೆ, ನಡತೆಗೆ ಬೆಲೆಯಿದೆ ಎಂಬುದೂ ಮರೆತು ಹೋಗಿದೆ! ಮಣ್ಣಿನ ಜತೆ ಕಲಿಯುವ ಆಸಕ್ತಿ  ಕ್ಷೀಣಿಸಿದೆ. ದಿನಕಳೆದರೆ ಸಾಕು  ಎಂಬ ಮನೋಬಾವ ಕಾಣುತ್ತಿದೆ.

ಕಾಲಹರಣ ಖುದ್ದು ನೋಡಲು ನಿಮ್ಮೂರಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಆವರಣ ಕೊಂಚ ಗಮನಿಸಬೇಕು. ಸಂಜೆ, ಬೆಳಿಗ್ಗೆ  ಲೀಟರ್, ಅರ್ಧ ಲೀಟರ್ ಹಾಲು ಮಾರಲು ಬರುವ ಕೃಷಿಕರು  ಪೇಪರ್ ಓದುತ್ತ  ತಾಸು, ಎರಡು ತಾಸು ಸುದ್ದಿ ಹೇಳುತ್ತ ಸಮಯ ಕಳೆಯುತ್ತಾರೆ. ಹಾಲು ಮಾರಾಟದಿಂದ ಐದು ರೂಪಾಯಿ ಆದಾಯ ಸಿಗಬಹುದು, ಅದನ್ನು ಮಾರಲು  ಬಂದವರು ಇಷ್ಟೆಲ್ಲ  ಸಮಯ ಹಾಳು ಮಾಡುವ ಬದಲು ತುರ್ತು ಕೃಷಿ ಕೆಲಸ ಮಾಡಿದ್ದರೆ ಐದು ನೂರು ರೂಪಾಯಿ ಗಳಿಸಬಹುದಿತ್ತು! ಕೈಜಾರುವ ಸಮಯವನ್ನು ಸಮರ್ಥವಾಗಿ ಬಳಸುವ ಚಿಂತನೆಯಿಲ್ಲ. ಕೃಷಿಕರು ಎಂದು ಕರೆದುಕೊಳ್ಳುವ ನಮಗೆ  ಕೃಷಿಕಪರ ಚಿಂತನೆಯ  ದೊಡ್ಡ ಕೊರತೆಯಿದೆ. ಇನ್ನು ಕೆಲವೆಡೆಯಂತೂ ಹೊಸತಲೆಮಾರಿಗೆ ಜುಗಾರಿ, ಇಸ್ಬೀಟ್  ಆಟ, ಗುಟ್ಕಾದ ರಸದೂಟ ಹೆಚ್ಚಿದೆ! ೧೬ರ ಹುಡುಗರೂ ಇಸ್ಬೀಟಿನ ಮೋಹಕ್ಕೆ ಭವಿಷ್ಯ ಮಾರಿದ್ದಾರೆ. ಎಳೆ ತಲೆಮಾರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಹಿರಿಯರಿಗೆ ಕೃಷಿ ನೆಲದಲ್ಲಿ ದೃಷ್ಟಿಯೇ ಇಲ್ಲ! ೧೦-೧೫ ವರ್ಷಕ್ಕೆ ತಮ್ಮ  ಭೂಮಿ, ಬದುಕನ್ನು ಹೇಗೆ ಬದಲಿಸಬೇಕೆಂಬ ಗುರಿಯಿಲ್ಲ, ಯೋಜನೆಗಳಿಲ್ಲ, ಪರಿಶ್ರಮಪಡುವ ಕಳಕಳಿಯಿಲ್ಲ. ಸರಕಾರ, ರಾಜಕೀಯ, ಅಧಿಕಾರಿಗಳನ್ನು ಟೀಕಿಸುತ್ತೇವೆ. ದೊಡ್ಡದಾಗಿ ಮಾತಾಡುತ್ತೇವೆ. ದೇಶದ ಭವಿಷ್ಯ ಇವರಿಂದ ಹಾಳಾಯಿತೆಂದು ಬೊಬ್ಬೆ ಹೊಡೆಯುತ್ತೇವೆ. ನಮ್ಮ ನಾಲ್ಕು ಎಕರೆ ಭೂಮಿ, ಕುಟುಂಬದ ಚಿಂತೆ  ಇಲ್ಲದ ನಾವು ದೇಶದ ಬಗೆಗೆ ಮಾತಾಡುವಷ್ಟು  ದೊಡ್ಡವರಾಗುತ್ತೇವೆ!. ನಮ್ಮ ಭೂಮಿಯಲ್ಲಿ ನಮಗೆ ಎಷ್ಟೆಲ್ಲ  ಕೆಲಸವಿದೆ ಎಂಬುದನ್ನು  ಮರೆತ ನಾವು ಊರಿಗೆ ಬುದ್ದಿ ಹೇಳುತ್ತೇವೆ.

ಕೃಷಿ ಸುಧಾರಣೆಗೆ ಸರಕಾರ ಸಾವಿರ ಸಾವಿರ ಯೋಜನೆ ರೂಪಿಸಬಹುದು, ಸಬ್ಸಿಡಿಯ ರಾಶಿ ನೀಡಬಹುದು, ಮನೆ ಬಾಗಿಲಿಗೆ ಮಾರುಕಟ್ಟೆ ತಂತ್ರ ಒದಗಿಸಬಹುದು. ಕೃಷಿಕರಿಗೆ ಕೃಷಿ ಚಿಂತನೆಗಿಂತ ಬೇರೆ ಸಂಗತಿಗಳೇ ಮುಖ್ಯವಾದಾಗ ಯಾವುದೇ ಯೋಜನೆಗಳಾದರೂ ವ್ಯರ್ಥವಾಗುತ್ತವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೃಷಿ ನೆಲವಷ್ಟೇ ಅಲ್ಲ, ಕೃಷಿಕನ ಆರೋಗ್ಯವೂ ಹದಗೆಡುತ್ತದೆ. ನಾವು ಏನು ಮಾಡುತ್ತಿದ್ದೇವೆಂಬ ಎಚ್ಚರ ಮೂಡಬೇಕು, ನಮ್ಮ ಸಮಯ ಕೃಷಿ ಕಾರ್ಯಕ್ಕೆ ವಿನಿಯೋಗವಾಗಬೇಕು. ಆಗ ಮಾತ್ರ ಸುಧಾರಣೆಯ ಗಾಳಿ ಬೀಸಬಹುದು.