ವೆಂಗುರ್ಲಾ ೪ ಹಾಗೂ ವೆಂಗುರ್ಲಾ ೫ ತಳಿಯ ಗೇರು ಗಿಡಗಳನ್ನು ಗುಡ್ಡದಲ್ಲಿ  ನಾಟಿ ಮಾಡುತ್ತಿದ್ದೆವು.  “ಹೆಚ್ಚು ಮಳೆ ಸುರಿಯುವ ಇಲ್ಲಿ ಗೇರು ಬೆಳೆ ಕಷ್ಟ, ಫಲ ಜಾಸ್ತಿ ಬರೋದಿಲ್ಲ” ಎಂದು ಕೃಷಿಕರೊಬ್ಬರು ಹೇಳಿದರು. ಇನ್ನಷ್ಟು ವಿವರ ಪಡೆಯಲು ಅವರಲ್ಲಿ ಪ್ರಶ್ನಿಸಿದರೆ ಅವರಿಗೆ ಗೇರು ಕೃಷಿಯ ವಿಧಾನ, ತಳಿ ಬಗೆಗೆ  ಕನಿಷ್ಟ ಮಾಹಿತಿಯೂ ಇಲ್ಲವೆಂಬುದು ಅರ್ಥವಾಯಿತು. ಆದರೆ ತಮಗೆ ತಿಳಿದಿರುವ ಅಲ್ಪಜ್ಞಾನವನ್ನೇ ಅಧಿಕಾರವಾಣಿಯಿಂದ ಹೇಳುವ ಪರಿಪಾಟ ಬೆಳೆಸಿಕೊಂಡಿದ್ದರು. ಹೆಚ್ಚು ಕಡಿಮೆ ಕೃಷಿ ವಿಷಯದಲ್ಲಿ ಉಪದೇಶ ನೀಡುವವರು, ಮಾತಾಡುವವರಲ್ಲಿ  ಹೆಚ್ಚಿನವರು ಈ  ವರ್ಗದವರು !

ನಮ್ಮ ಸೊಪ್ಪಿನ ಬೆಟ್ಟದಲ್ಲಿ ನೀರಿಂಗಿಸುವ ರಚನೆ ಮಾಡುವಾಗ “ಇದೆಲ್ಲ ಮಲೆನಾಡಿಗೆ ಪ್ರಯೋಜನವಿಲ್ಲ” ಎಂದು ಇನ್ನೊಬ್ಬರು ಹೇಳಿದ್ದರು. ಇಂಗಿಸಿದ ನೀರೆಲ್ಲ ಬೇಗ ಪಕ್ಕದ ಹಳ್ಳದಲ್ಲಿ  ಒರತೆಯಾಗಿ ಓಡುತ್ತದೆ, ಬೇಸಿಗೆಗಂತೂ ನೀರು ಉಳಿಯುವದಿಲ್ಲ ಎಂಬುದು ಮಾತಿನ ಸರಳಾರ್ಥ. ಗುಡ್ಡದ ಇಳಿಜಾರಿಗೆ ಅಡ್ಡವಾಗಿ ಟ್ರೆಂಚ್‌ಗಳನ್ನು ಮಾಡುವದರಿಂದ ನೈಸರ್ಗಿಕ ಹುಲ್ಲಿನ ಉತ್ಪಾದನೆ ಕುಂಠಿತವಾಗುತ್ತದೆ, ಜಾನುವಾರು ಮೇವಿಗೆ ಸಮಸ್ಯೆಯಾಗುತ್ತದೆ ಎಂಬುದು ಅವರ ಸಬೂಬು. ‘ಗೇರು ನೆಟ್ಟರೆ ಪ್ರಯೋಜನವಿಲ್ಲ, ನೀರಿಂಗಿಸಿದರೆ ಪ್ರಯೋಜನವಿಲ್ಲ’ ಎಂಬ ಮಾತು ಕೇಳಿ ೬ ವರ್ಷಗಳಾಗಿವೆ. ಸಾಮಾನ್ಯ ನಿರ್ವಹಣೆಯಲ್ಲಿ  ಗೇರು ಫಲ ಬಿಟ್ಟಿದೆ, ನೀರಿಂಗಿಸಿದ ಪರಿಣಾಮಕ್ಕೆ ನಮ್ಮ ಸೊಪ್ಪಿನ ಬೆಟ್ಟದಲ್ಲಿ  ಜಲಕ್ಷಾಮದ ಮೇ ತಿಂಗಳಿನಲ್ಲೂ ದಿನಕ್ಕೆ ೩೦ ಸಾವಿರ ಲೀಟರ್ ನೀರು ನೀಡುವ  ಕೆರೆ ನಿರ್ಮಾಣವಾಗಿದೆ. ಹುಲ್ಲಿನ ಉತ್ಪಾದನೆ, ಗುಣಮಟ್ಟ ಇಮ್ಮಡಿಸಿದೆ. ನೀರಿಂಗಿಸಿದ ಲಾಭ  ಢಾಳಾಗಿ ಕಾಣುತ್ತಿದೆ.

ಮಲೆನಾಡಿನ ಮಿಡಿಮಾವಿನ ೬೦ ಜಾತಿಗಳನ್ನು  ಪುಟ್ಟ ಜಾಗದಲ್ಲಿ ಬೆಳೆಸಿದ್ದೇನೆ.  ‘ಅಪ್ಪೆಮಿಡಿ’ ಫಲ ನೀಡೋದಿಲ್ಲ ಎನ್ನುವ ಮಾತು ಕೇಳಿದ್ದೇನೆ. ಪಿಕೆಎಮ್ ನುಗ್ಗೆ ನಾಟಿಗೆ ಹೊಂಡ ತೆಗೆಸುವಾಗ ‘ನಮ್ಮಲ್ಲಿ ನುಗ್ಗೆ ಆಗೋದಿಲ್ಲ’ ಮಾತು ಆಲಿಸಿದ್ದೇನೆ. ಕಳೆದ ಮಳೆಗಾಲದಲ್ಲಿ ಬೆಂಡೆ, ಮೂಲಂಗಿ ಮುಂತಾದ ತರಕಾರಿ ಬೀಜ ನಾಟಿ ಮಾಡುವಾಗ ಕಾಡು ಮೊಲಗಳ ಕಾಟ ಜಾಸ್ತಿ ಎಂದಿದ್ದಾರೆ. ಥೈವಾನ್ ರೆಡ್ ಲೇಡಿ ತಳಿಯ ಪಪಾಯ ಸಸಿ ನೆಡುವ ನಿರ್ಧಾರ ಮಾಡಿದಾಗ ಮಂಗಗಳು ಗಿಡ ಉಳಿಸುವದಿಲ್ಲ ಎಂದು ಹೇಳಿದ ರೀತಿಯಂತೂ ಗಿಡ ನೆಡುವವನ್ನು ಹಿಂದಕ್ಕೆ ಸೆಳೆಯುವಷ್ಟು ಪ್ರಭಾವಿಯಾಗಿತ್ತು!. ನೀವು ಯಾವುದೇ ಸಸಿ ನಾಟಿ ಮಾಡಿ, ಅದು ಆಗೋದಿಲ್ಲ ಎಂದು ಉಚಿತ ಉಪದೇಶ ನೀಡುವವರು ಎಲ್ಲ ಊರುಗಳಲ್ಲಿ ಧಾರಾಳ ಸಿಗುತ್ತಾರೆ. ಹೀಗೆ ನಾಟಿ ಮಾಡಿ, ಹೀಗೆ ಕೃಷಿ ಮಾಡಿ, ಸಂರಕ್ಷಣೆಗೆ ಇಂತಹ ಉಪಾಯ ಮಾಡಬಹುದು, ಇಂತಹ ತಳಿ ನೆಟ್ಟರೆ ಪ್ರಯೋಜನವಾಗಬಹುದು’ ಎಂದು  ಖಚಿತ ಮಾಹಿತಿ ಹೇಳುವವರು  ಸಾಕ್ಷರ ನಾಡಿನಲ್ಲಿ ಕಾಣುತ್ತಿಲ್ಲ, ಕೃಷಿ ವಿಜ್ಞಾನದ ಈ ಯುಗದಲ್ಲೂ  ಕಲಿತು ಮತಾಡುವವರಿಗಿಂತ ಮಾತಾಡುವದನ್ನು  ಕಲಿತ ಪೀಳಿಗೆ ಬೆಳೆಯುತ್ತಿದೆ.  ಕೃಷಿ ಹೆಜ್ಜೆ ಇಡುವವರನ್ನು ಹಿಮ್ಮೆಟ್ಟಿಸುವ ಮಾತುಗಳು  ತೋಟ, ಹೊಲಗಳಲ್ಲಿ ಮೊಳಗುತ್ತಿದೆ.

ಗೇರು ಸೋತಿದ್ದು, ಮಾವು ಫಲವಿಲ್ಲದ್ದು, ಪಪಾಯ ನಷ್ಟ, ತರಕಾರಿ ಸೋಲು, ವನ್ಯ ಜೀವಿಗಳ ಉಪಟಳ ಗಮನಿಸಿದವರು ಸಾರಾಸಗಟಾಗಿ ಮಾಹಿತಿ ಬಿತ್ತುತ್ತ ಹೊರಟಿದ್ದಾರೆ. ಹೊಸ ಕೃಷಿ ಉತ್ಸಾಹ ತೋರಿದವರು ಇಂತಹ ಮಾತುಗಳಿಂದ ಧೈರ್ಯ ಕಳಕೊಳ್ಳುತ್ತಾರೆ. ಹಳ್ಳಿಗಾಡಿನ ಇಂತಹ ಕೃಷಿ ಮಾತಿನಲ್ಲಿನ ನಿಜ ಪ್ರಾಮಾಣಿಕತೆ ಎಷ್ಟು? ಸುಮ್ಮನೆ ಮಾತಿಗಾಗಿ ಮಾತಾಡುವವರು ಎಷ್ಟು? ಚಿಕಿತ್ಸಕ ದೃಷ್ಟಿಯಿಂದ ಗಮನಿಸಿದರೆ ನೆಗ್ಹೆಟ್ಹಿವ್ ನಾಣಿಗಳ  ತಂಡ ಹುಲುಸಾಗಿದೆ!

ಕೃಷಿಯಲ್ಲಿ ನಕಾರಾತ್ಮಕ ಧೋರಣೆ ಈ ಪ್ರಮಾಣದಲ್ಲಿ ಬೆಳೆಯಲು ಕಾರಣವೇನು? ‘ಜೀವನ ಅನುಭವ ಮುಖ್ಯ ಕಾರಣ’ ಎಂದು ತಟ್ಟನೆ ಹೇಳಬಹುದು. ಗೆಲುವಿಗಿಂತ ಇಲ್ಲಿ ಸೋಲು ಕಂಡವರು ಜಾಸ್ತಿ. ಸಿನೆಮಾ ಕತೆಗಳಲ್ಲಿ  ಕಷ್ಟಪಟ್ಟು ದುಡಿದವ ತಟ್ಟನೆ ಸಿರಿವಂತನಾಗುವಂತೆ  ಕೃಷಿ ಬದುಕಿನ  ಪ್ರಮೇಯಗಳಲ್ಲಿ ಕಡಿಮೆ. ಒಂದು ಲಕ್ಷ ರೂಪಾಯಿ ವಿನಿಯೋಗಿಸಿ  ಒಂದು ವಾಹನ ಖರೀದಿಸಿ ಬಾಡಿಗೆ ಹೊಡೆಯಬಹುದು. ಇನ್ಷುರೆನ್ಸ್, ಇಂಧನ ವೆಚ್ಚ, ವಾಹನ ಸವಕಳಿ, ಬಾಡಿಗೆ ಆದಾಯ ಎಲ್ಲ ಗಮನಿಸಿದರೆ ಕೆಲವೇ ದಿನಗಳಲ್ಲಿ ವ್ಯವಹಾರದ ಲಾಭ-ನಷ್ಟ ಊಹಿಸಬಹುದು, ಅಂದಾಜಿಸಬಹುದು. ಕೃಷಿಯಲ್ಲಿ  ಗಿಡ ನೆಡುವಾಗ, ಹೂವರಳಿಸಿದಾಗ, ಫಲ ಬಿಟ್ಟಾಗ, ಸಂಸ್ಕರಣೆ ಮಾಡುವಾಗ, ಮಾರುಕಟ್ಟೆಗೆ ಹೋದಾಗ ಹೀಗೆ ಪ್ರತಿ ಹಂತದಲ್ಲಿ  ಎಂತಹ ಆಸೆ ಹುಟ್ಟಿದರೂ ಎಲ್ಲ ನಿರೀಕ್ಷೆಗಳು ನಿಜವಾಗುವದಿಲ್ಲ. ನಿಗದಿತ ಉತ್ಪನ್ನ, ಗುರಿಯಲ್ಲಿ ಶೇಕಡಾ ೩೫-೪೦ರಷ್ಟು ಯಶಸ್ಸು ಸಿಕ್ಕರೆ ಅದೃಷ್ಟ. ಕಿರಾಣಿ, ಉದ್ಯಮ, ನೌಕರಿ ಮುಂತಾದ ವಲಯಗಳಲ್ಲಿ ತೊಡಗಿಸಿದ ಬಂಡವಾಳ ಪ್ರತಿಫಲಕ್ಕೂ, ಕೃಷಿ ರಂಗದಲ್ಲಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಹವಾಮಾನ, ಮಾರುಕಟ್ಟೆಗಳು ಕೃಷಿ ವಿಶ್ವಾಸದ ಮಧ್ಯೆ ಆತಂಕ ಹುಟ್ಟಿಸುತ್ತಿವೆ. 

ಹತ್ತು ವರ್ಷದ ಹಿಂದೆ ಒಳ್ಳೆಯ ರೇಷ್ಮೆ ಕೃಷಿಕರು, ಹೈನುಗಾರಿಕೆ ಮಾಡಿದವರು, ಬಾಳೆ ಬೆಳೆದವರು, ವೆನಿಲ್ಲಾದಲ್ಲಿ ಗೆದ್ದವರು  ಈಗ  ಆ ಬೆಳೆಯಲ್ಲಿ  ಅಂತಹ ಯಶಸ್ಸು ಪಡೆಯುವದು ಕಷ್ಟ. ಆ ಕೃಷಿ ಅನುಭವಗಳನ್ನು ಅಲ್ಲಿಯೇ ಮರೆತು ಕೃಷಿ ಬೆಳೆಯನ್ನೇ ಬದಲಿಸುತ್ತ  ಬದುಕುವ ಅನಿವಾರ್ಯತೆ ಗಮನಿಸುತ್ತೇವೆ. ಅನಿಶ್ಚಿತ ಬದುಕು ಯಶಸ್ಸಿನ ವಿಚಾರದಲ್ಲಿ ನಂಬಿಕೆಗಿಂತ ಅಪನಂಬಿಕೆಗಳನ್ನು ಜಾಸ್ತಿ ಬೆಳೆಸಿದೆ. ೧೦-೧೫ ವರ್ಷಗಳ ಕಾಲ ವಿವಿಧ ಕೃಷಿ ಬೆಳೆಯ  ಫಲಿತಾಂಶ ಗಮನಿಸಿದ ಬಳಿಕ ಮನಸ್ಸು ನೆಲದಲ್ಲಿ ವಿಶ್ವಾಸ ಕಳಕೊಳ್ಳುತ್ತದೆ. ಅಡಿಕೆ, ಭತ್ತ, ತೆಂಗು ಕೃಷಿಯೇ ಜೀವನವಾಗಿರುವ ಮಲೆನಾಡಿನಲ್ಲಿ  ಹವಾಮಾನ ವೈಪರೀತ್ಯ, ಬೆಲೆ ಕುಸಿತ, ರೋಗ ಸಮಸ್ಯೆಗಳು ಹಲವು ಕೃಷಿಕರನ್ನು ದಶಕಗಳಿಂದ ಕೆಂಗೆಡೆಸಿದೆ. ಕೂಲಿ ಸಮಸ್ಯೆ  ಕೃಷಿಯೇ ಅಸಾಧ್ಯ ಎನ್ನುವ ಹಂತಕ್ಕೆ ಒಯ್ದಿದೆ. ಯಾವುದೇ ಬೆಳೆ ಗಮನಿಸಿದರೂ  ಒಂದಿಷ್ಟು ಸೋಲಿನ ಅನುಭವಗಳಿವೆ. ಹೀಗಾಗಿ ಕೃಷಿ ಸಾಧ್ಯತೆ ವಿಮರ್ಶೆಗಿಂತ ನಷ್ಟದ ಚಿತ್ರಗಳು ಮಾತ್ರ  ಬಹುತೇಕ ಜನರಿಗೆ ಕಾಣುತ್ತವೆ.

ನಮ್ಮ ಬೆಳೆ ಏಕೆ ಸೋತಿದೆ? ಕೃಷಿವಿಜ್ಞಾನ ಹೇಗೆ ಬೆಳೆದಿದೆ? ಮಾರುಕಟ್ಟೆಯಲ್ಲಿ ಗೆಲ್ಲುವ ತಂತ್ರ ಹೇಗೆ? ಇಂತಹ ವಿಚಾರಗಳಲ್ಲಿ  ಕೃಷಿಕ ಕಲಿಯುವದು ಬಹಳವಿದೆ. ಬೆಳೆಯುವದು ಮಾತ್ರ ನಮ್ಮ ಕೆಲಸ ಎಂಬ ಲಾಗಾಯ್ತಿನ ತಿಳುವಳಿಕೆ ಸಲ್ಲದು. ಯಾವ ಯಾವ ಹಂತದಲ್ಲಿ ಕಲಿಯುವದು ಏನೇನಿದೆ ಎಂಬ ನಿರಂತರ ಅಧ್ಯಯನಶೀಲತೆ ಬೇಕು. ಮಾತಿನ ವಿಮರ್ಶೆಗಿಂತ ಮಣ್ಣಿನ ಅನುಭವದಲ್ಲಿ  ಅರಿಯುವ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಯಾವ  ಬೆಳೆಯನ್ನು  ಹೇಗೆ  ಬೆಳೆಯಬಹುದು  ಎಂದು ಅರಿಯುವ ಕುತೋಹಲ ಬೇಕು, ಮಾಹಿತಿ ವಿನಿಮಯದ ಹಸಿವು, ಹಂಬಲವಿದ್ದಾಗ  ಮಾತ್ರ ಕೃಷಿ ಯಶಸ್ಸನ್ನು  ಕೊಂಚ ಮೇಲಕ್ಕೆ ಒಯ್ಯಬಹುದು.

ನಮ್ಮ ಹಳ್ಳಿಗಳಲ್ಲಿ ಇಂದು ೨೫-೩೫ರ ಹರೆಯದ ತಲೆಮಾರು ಕೃಷಿಯಿಂಂದ ದೂರ ನಡೆದಿದೆ. ಯಾವ ಯಾವ ಊರುಗಳಲ್ಲಿ ಇಂತಹ ಹೊಸ ತಲೆಮಾರು ಉಳಿದಿದೆಯೋ ಅಲ್ಲಿ  ಹೊಸ ಹೊಸ ಕೃಷಿ ಹೆಜ್ಜೆಗಳು ಮೂಡುತ್ತಿವೆ. ಆದರೆ ಅಲ್ಲಿನ ಸುತ್ತಲು ಕೃಷಿ ವಿಚಾರದಲ್ಲಿ  ನಕಾರಾತ್ಮಕ ಧೋರಣೆ ಹೊಂದಿದ ಹಳೆಯ ತಲೆಮಾರು ಬೆಳೆದಿದೆ! ಹೊಸ ಕೃಷಿ ವಿಚಾರಗಳಲ್ಲಿ  ತಣ್ಣನೆಯ ಸಂಘರ್ಷ ಪ್ರತಿ ಹಂತದಲ್ಲಿ  ನಡೆಯುತ್ತಿದೆ. ಇಷ್ಟು ಕಾಲ ನಗರದಲ್ಲಿ  ನೌಕರಿಯಲ್ಲಿರುವವರಿಗೆ  ಯೋಗ, ಪ್ರಾಣಾಯಾಮದ ಪಾಠ ಹೇಳುತ್ತ  ಸಕಾರಾತ್ಮಕ ಚಿಂತನೆ ಬೆಳೆಸುವ ಕೆಲಸ ನಡೆಯುತ್ತಿತ್ತು. ಈಗ ಕೃಷಿ ನಿರ್ವಹಣೆಯಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವ ಪಠ್ಯ, ತರಬೇತಿ ಕಾರ್ಯಗಳು ಬೇಕಾಗಿವೆ. ಭೂಮಿಗಷ್ಟೇ ಅಲ್ಲ ಮಿದುಳಿಗೂ ಗೊಬ್ಬರ ಹಾಕುವ ಕಾಲ ಸನ್ನಿಹಿತವಾಗಿದೆ.