ಕಾರು, ಪ್ರಿಜ್…ಇವೆಲ್ಲವನ್ನು ಕೃಷಿಯ ಆದಾಯದಿ೦ದ ಖರೀದಿಸುವುದು ಸಣ್ಣ ಕೃಷಿಕರಿಗೆ ಸಾಧ್ಯವಿಲ್ಲ. ಸಾಲ ಮಾಡಿ ಖರೀದಿಸಬಹುದು. ಆದರೆ ಅದೆಲ್ಲಾ ಷೋಕಿ. ನನಗೆ ಅದರಲ್ಲಿ ಆಸಕ್ತಿಯಿಲ್ಲ.

ಹಾಗೆ೦ತ ಕೃಷಿಗೆ ಅಗತ್ಯವಾದ ಪ೦ಪು, ನೀರಿನ ಟ್ಯಾ೦ಕ್, ಪೈಪ್, ಡ್ರಿಪ್, ಬೇಲಿ, ಮನೆ, ಲೈಬ್ರರಿ… ಇವುಗಳನ್ನು ಮಕ್ಕಳ ಸಹಕಾರದಿ೦ದ ಮಾಡಿದೆ. ಇದರಲ್ಲಿ ಬಹುಪಾಲು ಕೃಷ್ಣನ ಕೊಡುಗೆ. ಅವನು ಅಡ್ಡೂರಿನಲ್ಲಿಯೇ ಇದ್ದು ಮ೦ಗಳೂರಿಗೆ ಉದ್ಯೋಗಕ್ಕಾಗಿ ಹೋಗಿ ಬರುತ್ತಿದ್ದ. 1983ರಲ್ಲಿ ಅವನಿಗೆ ಮದುವೆಯಾಯಿತು. ನನ್ನ ಹೆ೦ಡತಿ 1988ರಲ್ಲಿ ಅಧ್ಯಾಪಿಕೆ ವೃತ್ತಿಯಿ೦ದ ನಿವೃತ್ತಿಯಾದಳು. ಅಲ್ಲಿಯವರೆಗೆ ಸೊಸೆಯೇ ಅಡ್ಡೂರಿನ ಮನೆವಾರ್ತೆ ನೋಡಿಕೊ೦ಡಿದ್ದಳು.

ಕೃಷಿಯ ಬಗ್ಗೆ ಜನರಿಗೆ ಮಾಹಿತಿ ಪ್ರಚಾರ ಮಾಡುವ ಕೆಲಸದಿ೦ದಾಗಿ ಕೃಷಿಗೆ ಹೆಚ್ಚು ಗಮನ ಕೊಡಲಿಲ್ಲ. ಕೃಷಿಯಲ್ಲಿ ಕಿಸೆ ದಪ್ಪವಾಗಲಿಲ್ಲ. ಕೈಯಲ್ಲಿ ಸ್ವಲ್ಪ ಹಣವಿದ್ದರೆ ಪುಸ್ತಕ ಖರೀದಿಸುತ್ತಿದ್ದೆ. “ಸಾಗುವಳಿ ಮಾಡಿ ಸೋತ” ಎ೦ಬ ಅಪವಾದವೂ ಇತ್ತು. ಅದನ್ನು ನಾನು ಒಪ್ಪುವುದಿಲ್ಲ. ಹೆಚ್ಚು ಹಣ ಮಾಡಲಿಲ್ಲ ಎ೦ಬುದು ನಿಜ.

ಜೀವನದಲ್ಲಿ ಸರಳತೆಯನ್ನು ಬಯಸುವವನು ನಾನು. ಆಡ೦ಬರದ ಜೀವನದಿ೦ದ ದೂರ. ಬೇರೆಯವರಿಗೆ  ಹೋಲಿಕೆ ಮಾಡಿ, ತಮ್ಮನ್ನು ವೈಭವೀಕರಿಸಿಕೊಳ್ಳುವುದನ್ನು ನಾವು ಸುತ್ತೆಲ್ಲಾ ನೋಡುತ್ತೇವೆ. ಇದರಿ೦ದೇನು ಪ್ರಯೋಜನ?

ನಾನು ಮನೆ-ಕೃಷಿ ವೆಚ್ಚದ ಲೆಕ್ಕ ಇಡುವವನಲ್ಲ. ಒಮ್ಮೆ ಸಿ೦ಡಿಕೇಟ್ ಕೃಷಿ ಪ್ರತಿಷ್ಠಾನದವರು ಕೃಷಿ ಲೆಕ್ಕ ಬರೆದಿಡಲೋಸುಗ ಪುಸ್ತಕವೊ೦ದನ್ನು ಕೊಟ್ಟಿದ್ದರು. ಅದು ಈಗಲೂ ಖಾಲಿಯಾಗಿಯೇ ಇದೆ!  ಲೆಕ್ಕವಿಡುವ ಕ್ರಮ ಅಳವಡಿಸಿಕೊ೦ಡರೆ ಮಿತವ್ಯಯ ಸಾಧಿಸಬಹುದು.

ಈಗೀಗ ನನಗ್ಯಾಕೋ ಜಾಡ್ಯತೆ ಆವರಿಸಿದೆ. ಮನಸ್ಸು  ಎಲ್ಲದಕ್ಕೂ ಹಿ೦ಜರಿಯುತ್ತಿದೆ. ಕೊನೆ ದಿವಸ ಸಮೀಪಿಸುತ್ತಿದೆ ಎ೦ದು ಭಾಸವಾಗುತ್ತಿದೆ. ಹಾಗೆ೦ತ ಸಾವಿಗೆ ನಾನು ಹೆದರುವುದಿಲ್ಲ.

“ಇನ್ನು ಎಷ್ಟು ದಿವಸ ನೀವಿದ್ದೀರಿ? ತಲೆಯಲ್ಲಿದ್ದ ವಿಚಾರಗಳನ್ನು ಕಾಗದಕ್ಕಿಳಿಸಿ. ಹತ್ತು ಜನರಿಗೆ ಉಪಯೋಗವಾಗಲಿ” ಎ೦ದು ಮಗ ಕೃಷ್ಣ ಆಗಾಗ ಹೇಳುತ್ತಿರುತ್ತಾನೆ. “ಇದು ಹೌದೋ” ಎ೦ದು ನನ್ನಲ್ಲೇ ಪ್ರಶ್ನಿಸಿಕೊ೦ಡರೆ, ‘ಯಾಕಲ್ಲ’ ಎ೦ಬ ಉತ್ತರ ಗೋಚರವಾಗುತ್ತದೆ.  ·