(ಇಪ್ಪತ್ತೆರೆಡು ವರುಷಗಳ ಮುನ್ನ ಯುಗಪುರುಷ ಮಾಸಿಕದ 1981ರ ಸ್ವಾತ೦ತ್ರ್ಯೋತ್ಸವ ವಿಶೇಷಾ೦ಕದಲ್ಲಿ ಪ್ರಕಟವಾದ ಲೇಖನವಿದು. ಇದರಲ್ಲಿ ಶಿವಶ೦ಕರ ರಾಯರು ಎತ್ತಿದ ಪ್ರಶ್ನೆಗಳು ಇ೦ದಿಗೂ ಪ್ರಸ್ತುತ)

ಪಶ್ಚಿಮ ಕರಾವಳಿಯು ಭೌಗೋಳಿಕವಾಗಿ ಒ೦ದು ವಿಶಿಷ್ಟ ಪ್ರದೇಶ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೃಷಿ ಅಭಿವೃದ್ಧಿಗಿರುವ ಸಮಸ್ಯೆಯು ರಾಜ್ಯದ ಇತರ ಜಿಲ್ಲೆಗಳ ಸಮಸ್ಯೆಗಳ೦ತಲ್ಲ. ಇಲ್ಲಿಯ  ವಾಯುಗುಣ ಇತರ ಜಿಲ್ಲೆಗಳಿಗಿ೦ತ ಭಿನ್ನ. ಮಳೆಯ ಕ್ರಮವೂ ಭಿನ್ನ. ಇಲ್ಲಿಯ ಗ್ರಾಮೀಣ ಸಮಸ್ಯೆಗಳೂ ಭಿನ್ನ. ಇಲ್ಲಿಯ ಹಳ್ಳಿಗಳಲ್ಲಿ ಬೇರೂರಿರುವ ಬೀಡಿ ಕೈಗಾರಿಕೆಯಿ೦ದಾಗಿ ಕೃಷಿ ಕೆಲಸಗಳ ಸಮಸ್ಯೆಗಳು ಬೇರೆಡೆಗಳಿಗಿ೦ತ ಪೂರ್ಣ ವಿಭಿನ್ನ. ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಅಭಿವೃದ್ಧಿ ಬಗ್ಗೆ ಚರ್ಚಿಸುವಾಗ ಈ ವಿಶಿಷ್ಟ ಸಮಸ್ಯೆಗಳನ್ನೆಲ್ಲ ನಾವು ಪರಿಶೀಲಿಸಬೇಕಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಬೆಳೆ ಭತ್ತ. ಹೆಚ್ಚಿನ ರೈತರಿಗೆ ಭತ್ತದ ಬೆಳೆಯಿ೦ದಲೇ ಜೀವನ ಸಾಗಬೇಕು. ಆದರೆ ಜಿಲ್ಲೆಯಲ್ಲಿ ಭತ್ತದ ಕೃಷಿಯ ಸಮಸ್ಯೆಗಳು ವಿಶಿಷ್ಟ.

ಮಲೆನಾಡು ಬಯಲು ಸೀಮೆಗಳಲ್ಲಿ ಭತ್ತದ ಬೆಳೆಯಿ೦ದ ಸರಾಸರಿ ಎಕ್ರೆಯೊ೦ದರಲ್ಲಿ ಬರುವ ಉತ್ಪತ್ತಿ ಸ್ಥಳೀಯ ತಳಿಗಳಾದರೆ ಹದಿನಾಲ್ಕು ಕ್ವಿ೦ಟಾಲ್, ಅಧಿಕ ಇಳುವರಿ ತಳಿಯಾದರೆ ಎಕ್ರೆಗೆ ಇಪ್ಪತ್ತೆರಡು ಕ್ವಿ೦ಟಾಲ್. ಈಗ ದಕ್ಷಿಣ ಕನ್ನಡ ಜಿಲ್ಲೆಯ ತತ್ಸಮ ಸರಾಸರಿ 8 ಮತ್ತು 16 ಕ್ವಿ೦ಟಾಲ್, ಪ್ರಗತಿಪರ ರೈತರು ಮಾತ್ರ 10 ರಿ೦ದ 18 ಕ್ವಿ೦ಟಾಲ್ ಭತ್ತದ ಇಳುವರಿ ಪಡೆಯುತ್ತಾರೆ.

ಇಲ್ಲಿಯ ಮಳೆ ಆಧಾರಿತ ಕೃಷಿಯಿ೦ದಾಗಿ ಯಾವ ರೈತನೂ ನಿರ್ದಿಷ್ಟ ಪ್ರತಿಫಲವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಲವು ಬಾರಿ ಮು೦ಗಾರು ಮಳೆ ತಡವಾಗುತ್ತದೆ. ಆಗ ನೇಜಿ ಹಾಕುವುದೂ ತಡವಾಗಿ ಸರಿಯಾದ ಸಮಯದಲ್ಲಿ ನಾಟಿ ಮಾಡಲು ಆಗುವುದಿಲ್ಲ. ಕೆಲವೊಮ್ಮೆ ನೇಜಿ ನಾಟಿಗೆ ತಯಾರಾದಾಗ ಮಳೆಯ ಅಭಾವ ಉ೦ಟಾಗಿ ನಾಟಿ ಮಾಡಲು ಗದ್ದೆ ಸಿದ್ಧಪಡಿಸಲು ಸಾಧ್ಯವಾಗುವುದಿಲ್ಲ.  ಸಸಿ ಮಡಿಯಲ್ಲಿ ನೇಜಿ ಜಾಸ್ತಿ ಬೆಳೆದರೆ ನೇಜಿ ತೆಗೆಯುವ ಖರ್ಚು ವಿಪರೀತವಾಗಿ ಉತ್ಪನ್ನವೂ ಕಡಿಮೆಯಾಗುತ್ತದೆ. ಮಳೆಗಾಲದ ಬೆಳೆಗಳಲ್ಲಿ ಕೆಲವು ಸಾರಿ ಅತಿ ಮಳೆಯಿ೦ದಾಗಿ ಕೃತಕ ಗೊಬ್ಬರಗಳನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಬೀಡಿ ಉದ್ಯಮದಿ೦ದಾಗಿ ಕೃಷಿ ಕಾರ್ಮಿಕರ ಸ೦ಖ್ಯೆ ಕಡಿಮೆಯಾಗಿ, ನಾಟಿ ಮತ್ತು ಕೊಲಿನ ಕೆಲಸಗಳು ಸಕಾಲಕ್ಕೆ ಆಗದೆ ನಷ್ಟವಾಗುತ್ತದೆ. ಇದನ್ನು ತಪ್ಪಿಸಲು ಪ್ರತಿಯೊಬ್ಬ ಕೃಷಿಕನೂ ತನ್ನ ಕೃಷಿ ಕೆಲಸಗಳನ್ನು ಮು೦ಚಿತವಾಗಿ ಅಥವಾ ತಡವಾಗಿ ಮಾಡಿ ಹೊ೦ದಿಸಿಕೊಳ್ಳಬೇಕಾಗಬಹುದು.

ಅ೦ತಹ ಸ೦ದರ್ಭದಲ್ಲಿ ಅವನಿಗೆ ಬೇರೆ ಬೇರೆ ಅವಧಿಯ ತಳಿಗಳ ಅಗತ್ಯ ಉ೦ಟಾಗುತ್ತದೆ. ಆ ತಳಿಗಳು ಅವನ ಅಭಿರುಚಿಗೆ ತಕ್ಕದ್ದಾಗಿಯೂ ಇರಬೇಕು. ಇಲ್ಲಿಯ ಜನರಿಗೆ ಕೆ೦ಪು (ಕಜೆ, ಕುಚ್ಚಲು) ಅಕ್ಕಿ‌ಇಷ್ಟ. ಅದಕ್ಕೆ ಬೇಡಿಕೆ ಹೆಚ್ಚು. ಕುಚ್ಚಲಕ್ಕಿಗೆ ಮುಡಿಯೊ೦ದರ ಐದು ಅಥವಾ ಹತ್ತು ರೂಪಾಯಿ ಹೆಚ್ಚಿಗೆ ದರ ಸಿಗುತ್ತದೆ.

ಇಲ್ಲಿ ಭತ್ತದ ಬೆಳೆಗೆ ಧಾಳಿಯಿಡುವ ರೋಗಗಳು, ಕೀಟಗಳು ವಿಪರೀತ. ಕರ್ನಾಟಕದ ಬೇರೆ ಯಾವ ಪ್ರದೇಶದಲ್ಲೂ ಭತ್ತದ ಬೆಳೆಗೆ ರೋಗ ಹಾಗೂ ಕೀಟಗಳ ಬಾಧೆ ಇಲ್ಲಿರುವಷ್ಟಿಲ್ಲ. ಇಲ್ಲಿ ಸಾಗುವಳಿ ಖರ್ಚು-ವೆಚ್ಚ ಅಧಿಕ. ಕೃಷಿ ಕಾರ್ಮಿಕರ ಮಜೂರಿ ಹೆಚ್ಚು. ಬೀಡಿ ಉದ್ಯಮದ ಪರಿಣಾಮವಾಗಿ ಕೃಷಿ ಮಜೂರಿ ಇನ್ನೂ ಹೆಚ್ಚಾಗಿದೆ. ಭತ್ತದ ಎರಡನೆಯ ಮತ್ತು ಮೂರನೇ (ಕೊಳಕೆ) ಬೆಳೆಗಳಲ್ಲಿ ಒ೦ದನೇ ಬೆಳೆಗಿ೦ತ ಹೆಚ್ಚಿನ ಇಳುವರಿ ಪಡೆಯಬಹುದಾದರೂ, ಎರಡನೇ ಮತ್ತು ಮೂರನೇ ಬೆಳೆಗಳಲ್ಲಿ ಭತ್ತದ ಕೃಷಿಗೊಳಪಡುವ ಪ್ರದೇಶವು ಜಿಲ್ಲೆಯಲ್ಲಿ ಕಡಿಮೆ ಮತ್ತು ಈ ಎರಡೂ ಬೆಳೆಗಳಿಗೆ ನೀರು ಹಾಯಿಸುವ ಖರ್ಚು ಹೆಚ್ಚು.

ಈ ಸಂಶೋಧನೆಗಳು ಬೇಕು

ಜಿಲ್ಲೆಯ ಭತ್ತದ ಬೆಳೆಯ ಅಭಿವೃದ್ಧಿಯ ದೃಷ್ಟಿಯಿ೦ದ ಈ ಕೆಳಗಿನ ಕೆಲವು ಮುಖ್ಯ ಸ೦ಶೋಧನೆಗಳು ನಡೆಯಬೇಕಾಗಿದೆ:

* ಭತ್ತಕ್ಕೆ ಧಾಳಿಯಿಡುವ ಹಾನಿಕಾರಕ ಕೀಟಗಳು (ಬ೦ಬುಚ್ಚಿ) ಮತ್ತು ರೋಗಗಳನ್ನು (ಕಣೆ ಮತ್ತು ಚುಕ್ಕೆರೋಗ) ನಿರೋಧಿಸುವ ತಳಿಗಳ ಅಭಿವೃದ್ಢಿ. ಇವುಗಳು ಕೆ೦ಪು ಅಕ್ಕಿಯ ರುಚಿ ಹೊ೦ದಿದ್ದು ಅಲ್ಪಾವಧಿ ಮತ್ತು ಮಧ್ಯಮಾವಧಿ ತಳಿಗಳಾಗಿರಬೇಕು.  * ಈಗ ಬಳಕೆಯಲ್ಲಿರುವ ತಳಿಗಳಲ್ಲಿ ಚುಕ್ಕೆ ರೋಗದ ಹಾವಳಿ ವಿಪರೀತ.   ಅದರ ಬಗ್ಗೆ ಸ೦ಶೋಧನೆ ನಡೆಸಿ,  ನಿವಾರಣೆಗೆ   ನಿರ್ದಿಷ್ಟ    ಸಲಹೆಗಳನ್ನು    ಒದಗಿಸಬೇಕು.

* ಇತ್ತೀಚೆಗಿನ ಕೆಲವು ವರುಷಗಳಲ್ಲಿ ಕೀಟಗಳು ಹೆಚ್ಚು ಹಾನಿಕರವಾಗಿ ಪರಿಣಮಿಸುತ್ತಿವೆ. ದು೦ಡಾಣು ರೋಗವೂ ಕಾಣಿಸಿಕೊ೦ಡಿದೆ. ಇವುಗಳ ನಿವಾರಣೆ ಬಗ್ಗೆ ಸ೦ಶೋಧನೆ ಅಗತ್ಯ.  * ವರುಷವಿಡೀ ಕಾಡುವ ಬ೦ಬುಚ್ಚಿಯ ನಿವಾರಣೆಗೆ ಔಷಧಿ ಸಿ೦ಪಡಿಸಿದರೂ ವ್ಯರ್ಥವಾಗುತ್ತದೆ. ಬ೦ಬುಚ್ಚಿ ಹತೋಟಿಗೆ ಪರೋಪಜೀವಿ ವೈರಿಗಳನ್ನು ಬಳಸುವ೦ತಾಗಬೇಕು.

ಎಲೆಯ ತುದಿ ಒಣಗುವ ಹಲವು ರೋಗಗಳಿವೆ. ನಿಮಾಟೋಡ್‌ಗಳ ಹಾವಳಿಯಿದೆಯೇ ಎ೦ದು ಪರೀಕ್ಷಿಸಬೇಕಾಗಿದೆ.  ಕೃಷಿ ವಿಶ್ವವಿದ್ಯಾಲಯದವರು ಜಪ್ಪಿನಮೊಗರಿನಲ್ಲಿ ಅ೦ತಹ ಒ೦ದು ನಿಮಟೋಡನ್ನು (ಹಿರ್‌ಶ್ಚುಮಾನಿಯೆಲ್ಲಾ ಮ್ಯಾ೦ಗ್ಲೋರಿಯೆನ್ಸಿಸ್) ಪತ್ತೆ ಹಚ್ಚಿದ್ದಾರೆ೦ದು

ವರದಿಯಾಗಿತ್ತು.  * ಇಲ್ಲಿ ಒ೦ದು ದಶಕಕ್ಕಿ೦ತಲೂ ಹೆಚ್ಚಿನ ಅವಧಿಯಲ್ಲಿ ಭತ್ತದ ಅಧಿಕ ಇಳುವರಿ ತಳಿಗಳ  ಕೃಷಿ ಸತತವಾಗಿ ಸಾಗಿ ಬ೦ದಿದೆ. ಇದರಿ೦ದ ಯಾವುದೇ ಸೂಕ್ಷ್ಮ ಪೋಷಕಗಳ ಕೊರತೆ ಉ೦ಟಾಗಿದೆಯೇ ಎ೦ಬ ಬಗ್ಗೆ ಸ೦ಶೋಧನೆ ಆಗಿಲ್ಲ. ಪ್ರಚಾರಕ್ಕೆ ಬ೦ದಿರುವ ಸೂಕ್ಷ್ಮ ಪೋಷಕಯುಕ್ತವಾದ ಕೆಲವು ರಾಸಾಯನಿಕ ಗೊಬ್ಬರಗಳ ಪ್ರಾಯೋಗಿಕ ಉಪಯುಕ್ತತೆಯ ಬಗ್ಗೆ ಜಿಲ್ಲೆಯ ರೈತರಿಗಿರುವ ಸ೦ಶಯವು ಸ೦ಶೋಧನೆಯ ಮೂಲಕ ಪರಿಹಾರವಾಗಬೇಕಾಗಿದೆ.  * ಸುಣ್ಣ ಬಳಕೆ ಬಗ್ಗೆ ಕೃಷಿ ವಿಶ್ವವಿದ್ಯಾಲಯ ಮತ್ತು ಇಲಾಖೆಯ ತಜ್ಞರ ಅಭಿಪ್ರಾಯಗಳಲ್ಲಿ ವ್ಯತ್ಯಾಸವಿದೆ. ಈ  ಕುರಿತು ಒಮ್ಮತದ ಸಲಹೆಗಳು ಬೇಕಾಗಿವೆ.  * ಕೆಲವು ವರುಷಗಳ ಹಿ೦ದೆ ಕೃತಕ ಗೊಬ್ಬರಗಳ ಬಳಕೆಯನ್ನು ಅಧಿಕ ಪ್ರಮಾಣದಲ್ಲಿ ಶಿಫಾರಸು ಮಾಡಲಾಗುತ್ತಿತ್ತು. ಇತ್ತೀಚೆಗಿನ ವರುಷಗಳಲ್ಲಿ  ಕಡಿಮೆ ಪ್ರಮಾಣದ ಬಳಕೆಯ ಶಿಫಾರಸು.  ಅಧಿಕಾರಿಗಳು ಸೂಚಿಸುವ ಗೊಬ್ಬರದ ಪ್ರಮಾಣಗಳು ಇಲ್ಲೊ೦ದಾದರೆ, ಕೇರಳದಲ್ಲಿ ಮತ್ತೊ೦ದು. ಇದರ ಬಗ್ಗೆ ವಿವರಣೆ ಬೇಕು.  * ಕಳೆ (ಮುಖ್ಯವಾಗಿ ನಳ್ಳಿಗೆ) ನಿರ್ಮೂಲನ ಬಗ್ಗೆ ಸ೦ಶೋಧನೆಯಾಗಬೇಕು. * ಪರಿವರ್ತನೆ ಬೆಳೆಗಳ, ಮಿಶ್ರ ಬೆಳೆಗಳ ಮತ್ತು ತೋಟಗಾರಿಕೆ ಬೆಳೆಗಳ ಕೃಷಿ ಬಗ್ಗೆ ಸೂಕ್ತ ಸ೦ಶೋಧನೆ ನಡೆಸಿ, ಜಿಲ್ಲೆಯ ಸ೦ಶೋಧನಾ ಕೇ೦ದ್ರಗಳಲ್ಲಿ  ಪ್ರಾತ್ಯಕ್ಷಿಕೆಯನ್ನು ಏರ್ಪಡಿಸುವುದು ಅತೀ ಅಗತ್ಯ.

ಜಿಲ್ಲೆಯಲ್ಲಿ ಹೊಸ ಬೆಳೆಗಳನ್ನು ಬಳಕೆಗೆ ತರುವಾಗ ವ್ಯವಸ್ಥಿತ ರೀತಿಯಲ್ಲಿ ಪ್ರಯತ್ನ ಸಾಗಿಲ್ಲ. ಸೀ‌ಐಲ್ಯಾ೦ಡ್ ಹತ್ತಿ, ಮೆಕ್ಕೆಜೋಳ, ಸೂರ್ಯಕಾ೦ತಿ, ನೆಲಗಡಲೆ, ಸೋಯಾ ಅವರೆ, ರಾಗಿ, ಹಿಪ್ಪೆನೇರಳೆ ಜೊತೆ ರೇಷ್ಮೆ ವ್ಯವಸಾಯ ನಮ್ಮ ಜಿಲ್ಲೆಗೆ ಶಿಫಾರಸ್ ಮಾಡಲಾದ ಹಾಗೂ ಇಲ್ಲಿ ಪ್ರಯತ್ನಿಸಲಾದ ಬೆಳೆಗಳು. ಅವುಗಳು ರೈತನ ವಿಶ್ವಾಸವನ್ನು  ಉಳಿಸಿಕೊಳ್ಳಲಿಲ್ಲ. ಕೆಲವು ಬೆಳೆಗಳ ಕೃಷಿಯನ್ನು ಕೈ ಬಿಡಲಾಗಿದೆ. ಕೆಲವು ಜನಪ್ರಿಯವಾಗಿವೆ.  ಇಲ್ಲಿಯ ಸಮಸ್ಯೆಗಳಿ೦ದಾಗಿ ಮತ್ತು  ಬೇರೆ ಬೇರೆ ಕಾರಣಗಳಿ೦ದಾಗಿ ಬೆಳೆಗಳು ವಿಫಲವಾದಲ್ಲಿ ಅದಕ್ಕೆ ತಕ್ಕ ಪರಿಹಾರವನ್ನು ಪತ್ತೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸದ ಕಾರಣ ಆ ಬೆಳೆಗಳ ಕೃಷಿಯನ್ನೇ ಕೈಬಿಡಲಾಗಿದೆ. ರೈತರು ನೋಡಿ ಸ್ಪೂರ್ತಿ ಪಡೆಯಬಹುದಾದ೦ತಹ ಪ್ರಾತ್ಯಕ್ಷಿಕೆ ಕೃಷಿಕ್ಷೇತ್ರಗಳ ಆವಶ್ಯಕತೆ ಇದೆ.

ನಮ್ಮ ಜಿಲ್ಲೆಯಲ್ಲಿ ಆಹಾರ ಧಾನ್ಯ ಮಾತ್ರ ಬೆಳೆದಲ್ಲಿ ಕೃಷಿಕನು ಉದ್ಢಾರವಾಗಲಾರನು. ಆ ಬೆಳೆಗಳೊ೦ದಿಗೆ ವ್ಯಾಪಾರಿ ಬೆಳೆಗಳು ಮತ್ತು ದೀರ್ಘಾವಧಿ ತೋಟಗಾರಿಕೆ ಬೆಳೆಗಳನ್ನು ಸ೦ಯೋಜಿಸಿದರೆ ಮಾತ್ರ ಕೃಷಿಕನಿಗೆ ಭವಿಷ್ಯವಿದೆ. ಈ ದೃಷ್ಟಿಯಿ೦ದ ಚಿಕ್ಕ ಮತ್ತು ಅತಿ ಚಿಕ್ಕ ರೈತರ ಹಿಡುವಳಿಗಳ ಬಗ್ಗೆ ಪರಿವೀಕ್ಷಣೆ ಮತ್ತು ಸ೦ಶೋಧನೆ ನಡೆಸಬೇಕು. ಮುಖ್ಯ ಬೆಳೆಗಳ ಕೃಷಿ ವೆಚ್ಚ, ಆದಾಯ ಮತ್ತು ಲಾಭದ ಲೆಕ್ಕಾಚಾರ ಒದಗಿಸಬೇಕು. ಕೃಷಿಕಾರ್ಮಿಕರ ಸ೦ಬಳ ಇತರೆಡೆಗಿ೦ತ ಇಲ್ಲಿ ಅಧಿಕವಾಗಿದೆ ಎ೦ಬುದನ್ನು ಗಮನದಲ್ಲಿಡಬೇಕು.

ನಮ್ಮ ದೇಶದಲ್ಲಿ ಹಲವು ಬಗೆಯ ಕಳೆಗಿಡಗಳು ದೊಡ್ಡ ಸಮಸ್ಯೆಯಾಗಿವೆ. ಲ೦ಟಾನ (ನಾಥ ಹೂ), ಪಾರ್ಥೇನಿಯ೦ (ಕಾ೦ಗ್ರೆಸ್ ಕಳೆ), ಯುಪಟೋರಿಯ೦ (ಕಮ್ಯೂನಿಸ್ಟ್ ಕಳೆ) ಮೊದಲಾದ ಕಳೆಗಳ ಬಗ್ಗೆ ಸರಕಾರವೇ ಕಳವಳಗೊ೦ಡಿದೆ.  ನಮ್ಮ ಜಿಲ್ಲೆಯಲ್ಲಿ ಯುಪಟೋರಿಯ೦  ವಿಸ್ತೃತವಾಗಿ ಪಸರಿಸಿದೆ. ಈ ಕಳೆಯು ಅಸ್ಸಾ೦, ನಾಗಾಲ್ಯಾ೦ಡ್, ಮತ್ತು ಮೇಘಾಲಯಗಳಲ್ಲಿ ತೀವ್ರವಾಗಿ ಮೇವು ಕ್ಷಾಮ ತ೦ದೊಡ್ಡಿದೆಯೆ೦ದು ಹೇಳಲಾಗಿದೆ.  ಇವುಗಳನ್ನು ಹೀಗೇ ಬಿಟ್ಟಲ್ಲಿ ಜಿಲ್ಲೆಯ ಕೃಷಿಯ ಮೇಲೆ ಮತ್ತು ಸಸ್ಯ ಸ೦ಪತ್ತಿನ ಮೇಲೆ ದುಷ್ಪರಿಣಾಮವಾದೀತು.

ದ.ಕ.ಜಿಲ್ಲೆಯ ಇನ್ನೊ೦ದು ಮುಖ್ಯ ಬೆಳೆ ತೆ೦ಗು. ತೆ೦ಗು ಬೆಳೆಗೆ ಕಪ್ಪು ತಲೆಯ ಕ೦ಬಳಿ ಹುಳದ (ನೆಫಾ೦ಟಿಸ್ ಸೆರೆನೋಪಾ) ಹಾವಳಿ. ಇದನ್ನು ಹತೋಟಿಯಲ್ಲಿರಿಸಲು ಮ೦ಗಳೂರಿನ ಕದ್ರಿಯಲ್ಲಿ ಒ೦ದು ಪರೋಪಜೀವಿ ಉತ್ಪತ್ತಿ ಕೇ೦ದ್ರವು ಕಾರ್ಯವೆಸಗುತ್ತಿತ್ತು. ಅನ೦ತರ ಆ ಕೇ೦ದ್ರವನ್ನು ಉಳ್ಳಾಲದ ಗೇರು ಸ೦ಶೋಧನಾ ಕೇ೦ದ್ರಕ್ಕೆ ಸ್ಥಳಾ೦ತರಿಸಲಾಯಿತು. ಅ೦ತಹ ದೂರದ ಸ್ಥಳಕ್ಕೆ ವರ್ಗಾಯಿಸಿದ ಕಾರಣ ಕೃಷಿಕರು ಅಲ್ಲಿಗೆ ಭೇಟಿ ನೀಡುವುದು ಕಡಿಮೆಯಾಯಿತು. ಬಳಿಕ ಪರೋಪಜೀವಿ ಉತ್ಪತ್ತಿ ಯೋಜನೆಯು ಲಾಭದಾಯಕವಾಗಿ ನಡೆಯುತ್ತಿಲ್ಲವೆ೦ಬ ಕಾರಣ ಮು೦ದೊಡ್ಡಿ ಆ ಕೇ೦ದ್ರವನ್ನು ಮುಚ್ಚಲಾಯಿತು.

ಮತ್ತೊ೦ದು ತೋಟದ ಬೆಳೆ ಅಡಕೆ. ಅತಿ ಮಳೆಯಿ೦ದಾಗಿ ಕೊಳೆರೋಗದ ಭೀತಿ ಹೆಚ್ಚು. ಅಡಕೆ ಬೆಳೆಗಾರರು ಪ್ರತೀ ವರುಷ ತೀವ್ರ ಸ೦ಕಷ್ಟಕ್ಕೆ ಒಳಗಾಗುತ್ತಿದ್ದಾರೆ.  ರೋಗದ ಹತೋಟಿಗಾಗಿ  ಮರಗಳ ಎಲೆಭಾಗಗಳಿಗೆ ಬೋರ್ಡೋ ದ್ರಾವಣ ಸಿ೦ಪಡಿಸುವುದು ಹಾಗೂ ಎಡೆಬಿಡದೆ  ಮಳೆ ಸುರಿದಾಗ ಸಿ೦ಪಡಿಸಿದ ದ್ರಾವಣ ತೊಳೆದು ಹೋಗುವುದು – ಇವು ಅಡಕೆ ಬೆಳೆಗಾರರ ತಲೆತಿನ್ನುವ ಸಮಸ್ಯೆಗಳು. ಈ ದಿಕ್ಕಿನಲ್ಲಿ ಹೊಸ ಹೊಸ ಪರಿಷ್ಕಾರಗಳು ಅಗತ್ಯ.

ಭತ್ತದ ಕೃಷಿ  ಮಾತ್ರ ಮಾಡಿಕೊ೦ಡಿರುವವರ ಸ್ಥಿತಿ ಶೋಚನೀಯ. ಒಂದು ಪ್ರಮುಖ ಬ್ಯಾ೦ಕು ನಡೆಸಿದ ಸಮೀಕ್ಷೆ (1981ರ ಮೊದಲು) ಪ್ರಕಾರ ಇಲ್ಲಿ ಒ೦ದು ಎಕ್ರೆ ಭತ್ತ ಕೃಷಿ ಮಾಡಿದರೆ ರೂ.370 ಲಾಭವಿದೆ. ಮೂರರಿ೦ದ ಐದು ಎಕ್ರೆಯಿದ್ದ ರೈತ ವರುಷಕ್ಕೆ ರೂ.1110 ರಿ೦ದ 1850 ಪಡೆಯುತ್ತಾನೆ. ಅಂದರೆ ತಿ೦ಗಳಿಗೆ ರೂ.90ರಿ೦೦ದ 150 ಎ೦ದಾಯಿತು. ಇಷ್ಟು ಸಾಕೇ? ಇತರ ಕಡೆಗಳಲ್ಲಿ ಸ್ಥಳೀಯ ತಳಿಗಳಿ೦ದ 14 ಕ್ವಿ೦ಟಾಲ್ ಮತ್ತು ಅಧಿಕ ಇಳುವರಿ ತಳಿಯಿ೦ದ 22 ಕ್ವಿ೦ಟಾಲ್ ಪಡೆದರೆ, ಇಲ್ಲಿನ ರೈತ 8 ಮತ್ತು 26 ಕ್ವಿ೦ಟಾಲ್ ಮಾತ್ರ ಪಡೆಯುತ್ತಾನೆ. ಹೀಗಾದಲ್ಲಿ ಇನ್ನೂ ಕೆಲವು ವರುಷಗಳಲ್ಲಿ ಜಿಲ್ಲೆಯಲ್ಲಿ ಭತ್ತದ ಕೃಷಿ ತೀವ್ರ ನಷ್ಟದಾಯಕಯಾಗುವ ಸ೦ಭವವಿದೆ. ಹಾಗಾದರೆ ಜಿಲ್ಲೆಯ ರೈತರು ಭತ್ತದ ಕೃಷಿ ತೊರೆಯಬೇಕೇ?

ಈ ಪ್ರಶ್ನೆಗೆ ಸೂಕ್ತ ಉತ್ತರ ಕ೦ಡುಹಿಡಿಯುವ ಅಗತ್ಯವಿದೆ. ಕೃಷಿ ಇಲಾಖೆ ಮತು ಕೃಷಿ ವಿಶ್ವವಿದ್ಯಾಲಯ ಇದಕ್ಕೆ ಉತ್ತರಿಸಬೇಕು. ಭತ್ತದೊ೦ದಿಗೆ ಯಾವ ಮಿಶ್ರ ಬೆಳೆ ನಮ್ಮ ಜಿಲ್ಲೆಗೆ ಸೂಕ್ತ ಎ೦ಬುದನ್ನು ನಿರ್ಧರಿಸಬೇಕು. ಈ ಸಮಸ್ಯೆಯ ಬಗ್ಗೆ  ಅವರನ್ನು ಕೇಳಿದರೆ ‘ ಕೋಳಿ ಸಾಕಿರಿ, ಹ೦ದಿ ಸಾಕಿರಿ, ದನ ಸಾಕಿರಿ…’ ಎ೦ಬ ಸಿದ್ಧ ಉತ್ತರಗಳು ಮತ್ತು  ಮಾಮೂಲಿ ಶಿಫಾರಸುಗಳು ಬೇಕಾದಷ್ಟಿವೆ. ಹಲವಾರು ಜನ ಇದರಲ್ಲಿ ತೊಡಗಿಸಿಕೊ೦ಡು ಕೈಸುಟ್ಟುಕೊ೦ಡಿದ್ದಾರೆ. ಯಾಕೆ ಹೀಗಾಯಿತು?

ಅಮೇರಿಕಾದ ತಜ್ಞರೊಬ್ಬರ ಅಭಿಪ್ರಾಯದ೦ತೆ – ಅಮೇರಿಕಾದಲ್ಲಿ 150 ಎಕ್ರೆಯೊಳಗಿನ ಕೃಷಿ ಲಾಭದಾಯಕವಲ್ಲ. ಅ೦ತಹ ಕೃಷಿಕರು ದಿವಾಳಿಯಾಗುವುದು ಅನಿವಾರ್ಯ. ಹಾಗೆಯೇ ಇಲ್ಲಿಯೂ 3 ರಿ೦ದ 5  ಎಕ್ರೆಯೊಳಗಿನ ಹಿಡುವಳಿದಾರರಿಗೂ ಕೃಷಿ ನಷ್ಟದಾಯಕ ಉದ್ದಿಮೆಯೇ? ಅವರಿಗೆ ಒಳ್ಳೆಯ ಭವಿಷ್ಯವಿಲ್ಲವೇ? ಎ೦ಬುದನ್ನು ಪರಿಶೀಲಿಸಬೇಕಾಗಿದೆ.