ಪೇಟೆಂಟ್ ಎಂಬುದು ಒಂದು ಪ್ರಭುತ್ವ, ಯಾವುದೇ ಒಂದು ಸಾರ್ವಬೌಮತ್ವದಿಂದ ಅನ್ವೇಷಕನಿಗೆ ಬಳಕೆ ಮತ್ತು ಮಾರಾಟ ಇತ್ಯಾದಿ ವಹಿವಾಟಿನ ಕುರಿತು ಸೀಮಿತ ಅವಧಿಗಾಗಿ ನೀಡುವ ಹಕ್ಕು. ಅಧಿಕೃತ ಹಕ್ಕು ಅಂದರೆ ಯಾವುದೇ ಪೇಟೆಂಟ್ ಪಡೆದ ವ್ಯಕ್ತಿಗೆ ಕೊಡುವ ಹಕ್ಕು. ಇದು ಇತರರು ಉಪಯೋಗಿಸದಂತೆ ಅಧಿಕೃತವಾಗಿ ಮಾನ್ಯ ಮಾಡುವಂತಹ ಹಕ್ಕು. ಉದಾಹರಣೆಗೆ ಒಬ್ಬ ನಾಲ್ಕು ಕಾಲಿನ ಕುರ್ಚಿಯನ್ನು ಪೇಟೆಂಟ್ ಪಡೆದಿದ್ದಾನೆ ಎಂದುಕೊಂಡರೆ, ಮತ್ತೊಬ್ಬ ಅದಕ್ಕೆ ತಳ್ಳು ಗಾಲಿ ಇಟ್ಟು ಪೇಟೆಂಟ್ ಪಡೆಯಬಹುದು. ಪೇಟೆಂಟ್ ಪಡೆಯುವುದರಿಂದ ಹಣಗಳಿಕೆ ಸುಲಭ ಎಂದಿಲ್ಲ. ಪೇಟೆಂಟ್ ಪಡೆಯಲು ಹಣ ಖರ್ಚಾಗುವುದು. ಪೇಟೆಂಟ್ ನ್ನು ಸರಿಯಾದ ಕ್ರಮದಲ್ಲಿ ಬಳಸಬೇಕೆಂಬ ಷರತ್ತಿನೊಂದಿಗೆ ನೀಡಲಾಗುವುದು. ಉದ್ಯಮದಲ್ಲಿ ಬಳಸುವುದರಿಂದ, ಉತ್ಪಾದಕರಿಂದ ಹಣ ಪಡೆದು ಲಾಭ ಗಳಿಸಬಹುದಷ್ಟೇ. ಆದ್ದರಿಂದ ಅನ್ವೇಷಿತ ವಿಷಯಕ್ಕೆ ಪೇಟೆಂಟ್ ಪಡೆದಾಗ ಅದನ್ನು ಸರಿಯಾದ ಬಳಕಗೆ ಒಳಪಡಿಸುವುದು ಕಡ್ಡಾಯವಾದದ್ದು. ಮೇಲ್ನೋಟಕ್ಕೆ ಇದು ಸರಳವಾಗಿ ಮಾಡಿಕೊಳ್ಳುವ ಒಂದು ಹಕ್ಕಿನ ಒಪ್ಪಂದ ಎಂದು ಕಂಡರೂ ಇದರ ಇತಿಹಾಸ ಅಷ್ಟು ಸುಲಭವಾಗಿಲ್ಲ. ಮುಂಬರುವ ಬದಲಾವಣೆಯ ಹಾದಿಯೂ ಸುಗಮವಾಗೇನೂ ಇಲ್ಲ. ನಿರಂತರವಾಗಿ ಬದಲಾಗುತ್ತಾ ತನ್ನ ಹಾದಿಯನ್ನು ಸುಲಭವಾಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಹಾಗಾಗಿ ಮುಂದೆಯೂ ಮಹತ್ತರವಾದ ಬದಲಾವಣೆಯನ್ನು ನಿರೀಕ್ಷಿಸಬಹುದೇನೋ? ಜನಪರ, ರೈತಪರ ದೃಷ್ಟಿಯಿಂದಂತೂ ಈ ಬದಲಾವಣೆಗಳು ಬಹಳ ವಿಶೇಷತೆಯನ್ನು ಪಡೆಯಲಿವೆ. ಪೇಟೆಂಟ್ ಕೇವಲ ರಾಷ್ಟ್ರೀಯ ಹಕ್ಕು. ಅದೊಂದು ಜಾಗತಿಕ ಹಕ್ಕು ಅಲ್ಲ, ಆದ್ದರಿಂದಲೇ ಪೇಟೆಂಟಿಗೆ ಪ್ರತೀ ದೇಶದಲ್ಲೂ, ಬೇರೆ ಬೇರೆಯಾಗಿಯೇ ಅರ್ಜಿ ಸಲ್ಲಿಸಬೇಕಾಗುವುದು.

ಪೇಟೆಂಟ್ ಪದವು ಲ್ಯಾಟಿನ್‌ ಮೂಲದ ಪೇಟೆಂಟೀಸ್‌ (patentees)ನಿಂದ ಬಂದಿದೆ. ಪೇಟೆಂಟೀಸ್‌ ಎಂದರೆ ತೆರೆದ ಪತ್ರಗಳು (Open Letters) ಎಂದು ಅರ್ಥವಿದೆ. ಹಿಂದೆ ಸಾರ್ವಬೌಮತ್ವ ಹೊಂದಿದ್ದ ರಾಜರು, ರಾಜಮುದ್ರೆಯೊಂದಿಗೆ ನೀಡಿದ ಪತ್ರವನ್ನು ತೆರೆದು ನೋಡುವ ಮೂಲಕ ಅದನ್ನು ಪಡೆಯುತ್ತಿದ್ದರು. ಹಾಗೆಂದೇ ಅಂತಹ ಹಕ್ಕು ಪತ್ರದ ರೂಪವಾಗಿ ಪೇಟೆಂಟ್ ಬಳಕೆಗೆ ಬಂದಿದೆ. ೧೫ನೇ ಶತಮಾನದಲ್ಲಿ ಇಂತಹ ಪದ್ಧತಿಯು ಮೊದಲ ಬಾರಿಗೆ ಜಾರಿಗೆ ಬಂದಿತು. ೧೪೨೧ರಲ್ಲಿ ಫ್ಲಾರೆನ್ಸ್‌ನ ಗಣರಾಜ್ಯದಲ್ಲಿ ಜಗತ್ತಿನ ಮೊಟ್ಟ ಮೊದಲ ಪೇಟೆಂಟ್ ನೀಡಲಾಯಿತು. ನಂತರ ೧೪೭೪ರಲ್ಲಿ ವೆನಿಸ್‌ನಲ್ಲಿ ಕಾಯಿದೆಯು ರೂಪುಗೊಂಡು ಮತ್ತೊಂದು ನೀಡಿಕೆಯು ಕಂಡು ಬಂದಿತು. ನಂತರ ಅದು ಯೂರೋಪ್‌ ರಾಷ್ಟ್ರಗಳಿಗೆ ಹರಡಿತು. ಇಂಗ್ಲೆಂಡ್‌ನಲ್ಲಿ ಮೊಟ್ಟಮೊದಲ ಪೇಟೆಂಟ್ ನ್ನು ೧೪೪೯ರಲ್ಲಿ ಜಾನ್‌ ಎಂಬಾತನಿಗೆ ನೀಡಲಾಯಿತು. ಬಣ್ಣದ ಗಾಜು ತಯಾರಿಕೆಯ ಏಕಸ್ವಾಮ್ಯ ಹಕ್ಕುಪತ್ರವನ್ನು ಸುಮಾರು ೨೦ ವರ್ಷ ಅವಧಿಗೆ ಇದನ್ನು ಕೊಡಲಾಯಿತು.

ಅಧಿಕಾರವುಳ್ಳ ರಾಜ್ಯವು ಹಕ್ಕು ನೀಡುತ್ತಿದ್ದು. ಪಡೆಯುವ ಕಂಪನಿಗಳು ಕೆಲವೇ ಪದಾರ್ಥಗಳ ಮೇಲೆ ಸೀಮಿತ ಉದ್ದೇಶಕ್ಕಾಗಿ ಹಕ್ಕು ಪತ್ರ ದೊರಕುತಿತ್ತು. ಸಾಕಷ್ಟು ಟೀಕೆಗಳು ಮೊದಲಿನಿಂದಲೂ ಇದ್ದವು. ತೀವ್ರವಾಗಿ ಟೀಕಿಸಿದ್ದ ಬ್ರಿಟನ್‌ ಕೂಡ ಪೇಟೆಂಟ್ ನೀಡಿಕೆಯ ಸಾಲಿಗೆ ತಡವಾಗಿಯಾದರೂ ಸೇರಿತು. ಆದಾಗ್ಯೂ ಅನೇಕ ವಿರೋಧದ ಕಾರಣಗಳಿಂದ ೧೮ನೇ ಶತಮಾನದ ಕೊನೇವರೆವಿಗೂ ಹೆಚ್ಚು ಕಡಿಮೆ ಎಲ್ಲಾ ದೇಶಗಳಿಗೂ ಸಮ್ಮತವಾಗಬಹುದಾದ ಕಾಯಿದೆಗಳು ರೂಪಿತವಾಗಲಿಲ್ಲ. ಅಂತಹ ವ್ಯವಸ್ಥೆಯು ರೂಪುಗೊಳ್ಳಲು ಹಲವಾರು ದಶಕಗಳೇ ಬೇಕಾದವು. ನಿಧಾನವಾಗಿ ಕಾಯಿದೆ ಬದ್ದ ಚೌಕಟ್ಟು ನಿರ್ಮಾಣವಾಗಲು ಆರಂಭವಾದವು. ೧೭೯೦ರಲ್ಲಿ ಮೊಟ್ಟ ಮೊದಲ ಬಾರಿಗೆ ಅಮೇರಿಕಾವು ಒಂದು ಶಾಸನಬದ್ದವಾದ ಪೇಟೆಂಟ್ ಕಾಯಿದೆಯನ್ನು ರೂಪಿಸಿತು. ಅನಂತರ ಫ್ರಾನ್ಸ್‌ಕೂಡ ೧೭೯೧ರಲ್ಲಿ ಅಂಥದೇ ಒಂದು ಕಾನೂನನ್ನು ರೂಪಿಸಿ ಅಮೇರಿಕಾದ ಜೊತೆ ಈ ವಿಚಾರದಲ್ಲಿ ಕೈ ಗೂಡಿಸುವಲ್ಲಿ ಯಶಸ್ವಿಯಾಯಿತು. ಅಷ್ಟಕ್ಕೇ ಸುಮ್ಮನಾಗದ ಅಮೇರಿಕಾ ದೇಶವು ಒಂದು ಹೆಜ್ಜೆ ಮುಂದಿಟ್ಟು ಪೇಟೆಂಟ್ ಸಂವಿಧಾನ ರೀತ್ಯಾ ವಿಜ್ಞಾನದ ಪ್ರಗತಿಗೆ ಮನುಕುಲ ನೀಡಿರುವ ಬೆಳಕು ಎಂದೆಲ್ಲಾ ಬಣ್ಣಿಸಿತು. ಸರ್ಕಾರವೊಂದು ಪೇಟೆಂಟ್ ಪರವಾಗಿ ನೀಡಿದ ಮೊದಲನೆಯ ಅಭಿಪ್ರಾಯ ಮತ್ತು ಸಮರ್ಥನೆ ಅದಾಗಿತ್ತು. ಆದರೆ ಅದರ ಜತೆಯಲ್ಲಿಯೇ ಕೈಜೋಡಿಸಿದ್ದ ಫ್ರಾನ್ಸ್‌ ಈ ವಿಚಾರದಲ್ಲಿ ಭಿನ್ನವಾಗಿ ಅಭಿಪ್ರಾಯ ನೀಡಿತು. ಅಂದರೆ ಯಾವುದೇ ಅನ್ವೇಷಕನಿಗೆ ಸ್ವಾಭಾವಿಕವಾಗಿಯೇ ಅಂತಹ ಹಕ್ಕು ಇರುತ್ತದೆ ಎಂಬುದು ಅದರ ವಾದವಾಗಿತ್ತು. ನಿಧಾನವಾಗಿ ವಿವಿಧ ದೇಶಗಳು ಪೇಟೆಂಟ್ ಕುರಿತಂತೆ ಪ್ರತಿಕ್ರಯಿಸಲು ಆರಂಭವಾದವು. ಹಲವಾರು ದೇಶಗಳು ತಮ್ಮ ನಿಲುವುಗಳನ್ನು ಸಮರ್ಥನೆಗೆ ಬಳಸತೊಡಗಿದವು. ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯು ಹೆಚ್ಚಿದಂತೆಲ್ಲ ದೇಶಗಳು ವಿಧ ವಿಧವಾಗಿ ಪ್ರತಿಕ್ರಿಯಿಸತೊಡಗಿದವು. ಆದರೂ ಬ್ರಿಟನ್ನಿನ್ನಲ್ಲಿ ಪೇಟೆಂಟ್ ಕುರಿತಂತೆ ಯಾವುದೇ ಕಾಯಿದೆಯು ರೂಪುಗೊಂಡದ್ದು ತಡವಾಗಿ. ೧೮೫೨ ರಲ್ಲಿ ಅಂದರೆ ಮೊದಲ ಶಾಸನದ ಸುಮಾರು ೬೨ ವರ್ಷಗಳ ನಂತರ ಬ್ರಿಟನ್ನಿನಲ್ಲಿ ಮೊದಲ ಪೇಟೆಂಟ್ ಕುರಿತ ಕಾನೂನು ರೂಪಿತವಾಯಿತು.

ಅಂತಾರಾಷ್ಟ್ರೀಯ ಒಪ್ಪಂದಗಳು

ಪೇಟೆಂಟ್ ಕುರಿತಂತೆ ಹಲಾವಾರು ವಿಚಾರಗಳೇನೇ ಆರಂಭಗೊಂಡರೂ ಅಂತಾರಾಷ್ಟ್ರೀಯವಾಗಿ ವಿವಿಧ ದೇಶಗಳ ನಡುವೆ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದಗಳು ಏರ್ಪಟ್ಟಿರಲಿಲ್ಲ. ಸುಮಾರು ವರ್ಷಗಳ ನಂತರ ಅಂತಹ ಒಪ್ಪಂದಗಳು ಅವಶ್ಯಕ ಎಂಬುದನ್ನು ಮನಗಂಡ ಹಲವು ರಾಷ್ಟ್ರಗಳು ಅಂತಾರಾಷ್ಟ್ರೀಯ ಒಪ್ಪಂದಗಳಿಗಾಗಿ ಚರ್ಚಿಸತೊಡಗಿದವು. ಕಾರಣವೆಂದರೆ ಅನ್ವೇಷಿಸಿದ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಬಂದು ಅದರಿಂದ ತಮ್ಮ ದೇಶದವರು ಅಥವಾ ದೇಶಕ್ಕೇ ಲಾಭದಾಯಕವಾಗಬೇಕಾದರೆ ಇದರ ಅವಶ್ಯಕತೆಯು ತುಂಬಾ ಇದ್ದಿತು. ಹಾಗಾಗಿ ಮೊದಲ ಬಾರಿಗೆ ಅಂತಹದೊಂದು ಚರ್ಚೆಯನ್ನು ಪೇಟೆಂಟ್ ಕುರಿತಂತೆ ಅಂತಾರಾಷ್ಟ್ರೀಯ ಮುಂಚೂಣಿಯಲ್ಲಿದ್ದ ಫ್ರಾನ್ಸ್‌ನಲ್ಲಿ ಆಯೋಜಿಸಲಾಯಿತು. ಫ್ರಾನ್ಸಿನ ಪ್ಯಾರಿಸ್ಸಿನಲ್ಲಿ ಮೊಟ್ಟ ಮೊದಲ ಒಪ್ಪಂದ ಏರ್ಪಟ್ಟಿತು. ಇದೇ ಜಾಗತಿಕವಾಗಿ ಪೇಟೆಂಟ್ ಕುರಿತಂತೆ ಮೊಟ್ಟ ಮೊದಲ ಒಪ್ಪಂದವಾದ ಪ್ಯಾರಿಸ್ ಒಪ್ಪಂದ”.

ಪ್ಯಾರಿಸ್ ಒಪ್ಪಂದ:

ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕುರಿತಂತೆ ಯಾವುದೇ ಒಂದು ಬಗೆಯ ಅಂತಾರಾಷ್ಟ್ರೀಯ ಒಪ್ಪಂದಗಳು ಆರಂಭವಾದ್ದು ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ. ೧೮೮೩ರಲ್ಲಿ ಈ ಉದ್ದೇಶ ಈಡೇರಿತು. ಕೈಗಾರಿಕಾ ಕ್ರಾಂತಿಯಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ತಮ್ಮ ತಮ್ಮ ಸರಕುಗಳನ್ನು ಮಾರಾಟ ಮಾಡುವ ಹೊಸ ಮಾರುಕಟ್ಟೆಗಳನ್ನು ಹುಡುಕಾಟ ನಡೆಸತೊಡಗಿದರು. ಆಗ ಹೊಸ ಗ್ರಾಹಕ ಅವಶ್ಯಕತೆಯೊಂಟಾಗಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅನೇಕ ಹೊಸ ಹೊಸ ಅನ್ವೇಷಣೆಗಳಾಗಿ ರಾಷ್ಟ್ರಗಳ ನಡುವೆ ಪೈಪೋಟಿಯುಂಟಾದವು. ಪ್ರತಿಯೊಂದು ದೇಶವೂ ತಮ್ಮದೇ ಆದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕುರಿತ ಕಾಯಿದೆಗಳನ್ನು ಹೊಂದಿರುವಾಗ ಅಂತಾರಾಷ್ಟ್ರೀಯವಾದ ಸಮನ್ವಯದ ಕಾಯಿದೆಗಳ ಮತ್ತು ಒಡಂಬಡಿಕೆಗಳ ಅವಶ್ಯಕತೆಯು ಬೇಕಿತ್ತು ಇದು ಪೈಪೋಟಿಯಿಂದಾಗುವ ಹಾನಿಯನ್ನು ತಪ್ಪಿಸಲು ಸರ್ವ ಸಮ್ಮತವಾದ ನೀತಿಯನ್ನು ನೀಡಲು ಸಾಧ್ಯ ಎನ್ನುವುದನ್ನು ಮನಗಂಡ ದೇಶಗಳು ಇಂತಹ ಒಪ್ಪಂದಕ್ಕೆ ಒತ್ತಾಯಿಸತೊಡಗಿದವು. ಆದರೆ ಬ್ರಿಟನ್ನಿಗೆ ಅಂತಹ ಅವಶ್ಯಕತೆಗಳೇನೂ ಇರಲಿಲ್ಲ. ಏಕೆಂದರೆ ಅದಕ್ಕೆ ಸಾಕಷ್ಟು ವಸಾಹತುಗಳಿದ್ದವು. ಹಾಗಾಗಿ ತನ್ನ ಮಾರುಕಟ್ಟೆಯನ್ನು ತಾನೇ ಸೃಷ್ಟಿಸಿಕೊಳ್ಳುತ್ತಾ ಅನ್ವೇಷಣೆಗೂ ಜಾಗ ಕೊಡತೊಡಗಿತ್ತು. ವಸಾಹತುಗಳು ಅದಕ್ಕೆ ವ್ಯಾಪಾರದ ಮಾರುಕಟ್ಟೆಯನ್ನು ಒದಗಿಸುತ್ತಿದ್ದವು. ಹಾಗಾಗಿ ಅಂತಾರಾಷ್ಟ್ರೀಯವಾಗಿ ಬ್ರಿಟನ್‌ ಮುಂಚೂಣಿಯಲ್ಲೇ ಇತ್ತಾದರೂ ಒಪ್ಪಂದಕ್ಕೆ ನಿರಾಸಕ್ತವಾಗಿತ್ತು. ಆದರೂ ಅದು “ಪ್ಯಾರಿಸ್ ಒಪ್ಪಂದವನ್ನು ರೂಪಿಸುವಲ್ಲಿ ಸಕ್ರೀಯವಾಗಿ ಭಾಗವಹಿಸಿತು. ಸಂಶೋಧನೆಗಳಿಗೆ, ಉತ್ಪನ್ನಗಳಿಗೆ ಅಧಿಕ ಲಾಭ ಗಳಿಸಿಕೊಡುವುದೇ ಪ್ಯಾರಿಸ್‌ಒಪ್ಪಂದದ ಮೂಲ ಉದ್ದೇಶ. ೧೮೮೩ರಲ್ಲಿ ಈ ಉದ್ದೇಶದಿಂದ ಒಂದು ಒಪ್ಪಂದ ಏರ್ಪಟ್ಟು ಹೊಸ ಅಂತಾರಾಷ್ಟ್ರೀಯ ವಿದ್ಯಾಮಾನಕ್ಕೆ ಅಡಿಪಾಯವಾಯಿತು. ಇದೇ ಮೊದಲ ಒಪ್ಪಂದವಾದ್ದರಿಂದ ಇಲ್ಲಿನ ಅಂಶಗಳು ಅಂತಾರಾಷ್ಟ್ರೀಯವಾಗಿ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನಿರ್ವಹಿಸುವಲ್ಲಿ ಅತ್ಯಂತ ಪ್ರಮುಖವಾದವು.