ಅಂತಾರಾಷ್ಟ್ರೀಯವಾಗಿ ಒಪ್ಪಂದಕ್ಕೆ ಬಂದ ಮತ್ತು ಅದರ ಪ್ರಕಾರ ಪ್ಯಾರಿಸ್‌ ಒಪ್ಪಂದದಲ್ಲಿ ಕೆಲವು ಪ್ರಮುಖವಾದ ಅಂಶಗಳನ್ನು ಪಾಲಿಸ ಬೇಕಾಯಿತು. ಆ ಪ್ರಮುಖವಾದ ಅಂಶಗಳು ಈ ಕೆಳಗಿನಂತಿವೆ. ಇವು ಮುಖ್ಯವಾಗಿ ಹಲವು ವಿಚಾರಗಳಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಸಮಾನವಾದ ಅವಕಾಶವನ್ನು ಕಲ್ಪಿಸಿಕೊಡುವ ಆಸಕ್ತಿಯುಳ್ಳವಾಗಿವೆ.

೧. ರಾಷ್ಟ್ರೀಯ ಸೌಲಭ್ಯ

೨. ಪ್ರಾಶಸ್ತ್ಯ ಅಥವಾ ಅಗ್ರಸ್ಥಾನದ ಹಕ್ಕು

೩. ಪೇಟೆಂಟ್ ಗಳ ಸ್ವಾತಂತ್ರ

೪. ಸಮಾಂತರ ಆಮದು

೫. ತಪ್ಪಾದ ತೀರ್ಮಾನಗಳಿಂದ ಮತ್ತು ಪೈಪೋಟಿಗಳಿಂದ ರಕ್ಷಣೆ

ಬೌದ್ಧಿಕ ಆಸ್ತಿ ಹಕ್ಕುಗಳು ಒಂದು ಉದ್ಯಮವಾಗಿ ನಿಭಾಯಿಸುವುದೆಂದರೆ ಇವು ಕೈಗಾರೀಕರಣಗೊಂಡು ಒಂದು ಮಾರಾಟದ ಉತ್ಪನ್ನವಾಗುವುದು. ಇದರಲ್ಲಿ ರಾಷ್ಟ್ರೀಯ ಸೌಲಭ್ಯವೆಂದರೆ ಉತ್ಪಾದಿಸುವ ಯಾವುದೇ ವ್ಯಕ್ತಿ ಅಥವಾ ಕಂಪನಿ ಯಾವುದೇ ದೇಶಕ್ಕೆ ಸೇರಿದ್ದರೂ ಎಲ್ಲಾ ಸದಸ್ಯ ರಾಷ್ಟ್ರಗಳಲ್ಲೂ ಸಮನಾದ ಸೌಲಭ್ಯವನ್ನು ಒದಗಿಸುವುದು. ಸೌಲಭ್ಯ ಒದಗಿಸುವಾಗ ರಾಷ್ಟ್ರೀಯತೆಯು ಪ್ರಮುಖವಾಗಿರುವುದಿಲ್ಲ.

ಪ್ರಾಶಸ್ತ್ಯ ಅಥವಾ ಅಗ್ರಸ್ಥಾನದ ಹಕ್ಕು ಎಂದರೆ ಯಾವುದೇ ಹಕ್ಕನ್ನು ಕಾಪಾಡಲು ಇತರೇ ದೇಶಗಳಲ್ಲೂ ಇರುವ ಪ್ರಾಶಸ್ತ್ಯ ಅಥವಾ ಹಕ್ಕನ್ನು ಸ್ಥಾಪಿಸಲು ಇರುವ ಅಗ್ರಸ್ಥಾನ. ಇದರಿಂದ ಒಂದು ದೇಶದಲ್ಲಿ ಬೌದ್ಧಿಕ ಆಸ್ತಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ೧೨ ತಿಂಗಳೊಳಗೆ ಇತರ ಯಾವುದೇ ಸದಸ್ಯ ರಾಷ್ಟ್ರಗಳಲ್ಲಿ ಎಂದಾದರೂ ಅರ್ಜಿಸಲ್ಲಿಸಿದರೂ ಅದಕ್ಕೇ ಮೊದಲೆ ಸಲ್ಲಿಸಿದ ದಿನಾಂಕದಿಂದಲೇ ಮನ್ನಣೆ ದೊರೆಯಲಿದೆ. ಇದರಿಂದ ೧೨ ತಿಂಗಳ ಸಮಯವು ಯಾವುದೇ ದೇಶದಲ್ಲಿ ದೊರಕುವಂತಹ ಸಮಾನ ಪ್ರಾಶಸ್ತ್ಯದ ಹಕ್ಕನ್ನು ಇದು ನೀಡುತ್ತದೆ. ಪೇಟೆಂಟ್ ನೀಡುವ ಅಥವಾ ತಿರಸ್ಕರಿಸುವ ಹಕ್ಕು ಆಯಾ ದೇಶದ್ದಾಗಿರಬಹುದು. ಆದರೆ ಅರ್ಜಿ ಸಲ್ಲಿಸಲು ೧೨ ತಿಂಗಳ ಸಮಯವು ಇದರಿಂದ ದೊರಕುವುದು. ಆದರೆ ಈಗ ಇಂಟರನೆಟ್‌ಯುಗದಲ್ಲಿ ಇವು ಸುಲಭವಾದರೂ ಸಮಾನ ಅವಕಾಶದ ಅಗ್ರಸ್ಥಾನವನ್ನು ಎಲ್ಲಾ ದೇಶಗಳಿಗೂ ದೊರಕಿಸುವ ಅವಕಾಶದ ಕನಸನ್ನು ಅಂದೇ ಆಲೋಚಿಸಲಾಗಿತ್ತು.

ಒಂದು ದೇಶದ ಪ್ರಜೆಗಳಾಗಿ ಆಯಾ ದೇಶದ ಲಾಭದಾಯಿಕ ಉದ್ಯಮಗಳಲ್ಲಿ ತೊಡಗಲು ಸಮಾನ ಹಕ್ಕನ್ನು ದೊರಕಿಸಲು ಇರುವ ಅವಕಾಶವನ್ನು ಈ ಮೂಲಕ ಅರಿಯಬಹುದಾಗಿದೆ. ಅಲ್ಲದೇ ಪೇಟೆಂಟ್ ನೀಡಿಕೆಯಲ್ಲಿ ದೇಶಗಳ ನಡುವೆ ಹೊಂದಾಣಿಕೆಯನ್ನೂ ಮಾಡಿಕೊಳ್ಳಲೂ ಇದು ಅವಕಾಶವನ್ನು ಕೊಡುವುದು. ಯಾವುದಕ್ಕೂ ಆಯಾ ದೇಶಗಳು ತಮ್ಮದೇ ಆದ ಬೌದ್ಧಿಕ ಆಸ್ತಿ ಹಕ್ಕುಗಳ ನಿಯಮಾವಳಿಗಳನ್ನು ರೂಪಿಸುವ ಹಕ್ಕನ್ನು ಆಯಾ ದೇಶಗಳಿಗೇ ಕೊಡಲಾಗಿತ್ತು. ಆದರೆ ಈಗ ಈ ನಿಯಮಾವಳಿಗಳು ಅಂತಾರಾಷ್ಟ್ರೀಯವಾಗಿ ಒಮ್ಮತವಾದ ಒಂದೇ ಬಗೆಯ ತೀರ್ಮಾನಗಳನ್ನು ಒಳಗೊಂಡಿರುವುದು ಅನಿವಾರ್ಯ.

ಸಮಾಂತರ ಅಮದಿನ ಹಕ್ಕಿನಲ್ಲಿ ಒಮ್ಮೆ ಪೇಟೆಂಟ್ ಸಿಕ್ಕ ರಾಷ್ಟ್ರಗಳ ನಡುವೆ ಕೆಲವು ಸಮಾಂತರವಾದ ಹಕ್ಕುಗಳ ಪಡೆಯುವ ಅವಕಾಶವನ್ನು ಹೊಂದಿರಲು ಸಾಧ್ಯವಿದೆ. ಯಾವುದೇ ದೇಶಕ್ಕೆ ಅಮದಾದ ವಸ್ತುವು ಆ ದೇಶದಲ್ಲಿ ಪೇಟೆಂಟ್ ಪಡೆದು ತಯಾರಾಗದಿದ್ದರೂ, ಅದು ಸಮಾಂತರ ಆಮದು ನೀತಿಯ ಅನ್ವಯ ತಯಾರಾದ ದೇಶದ ರೀತಿಯಲ್ಲೇ ಅದಕ್ಕೂ ಅಮದಾದ ದೇಶದಲ್ಲಿ ಹಕ್ಕನ್ನು ಒದಗಿಸಲು ಈ ನಿಯಮವು ಸಹಾಯ ಮಾಡುವುದು. ಉದಾಹರಣೆಗೆ ಒಂದು ಉತ್ಪನ್ನವು ‘೧’ ಮತ್ತು ‘೨’ ದೇಶದಲ್ಲಿ ಪೇಟೆಂಟ್ ಪಡೆದಿದೆ ಎಂದರೆ ಅದು ಎರಡೂ ದೇಶದಲ್ಲಿ ಉತ್ಪತ್ತಿಯಾಗಬೇಕಿಲ್ಲ. ಯಾವುದೇ ದೇಶದಲ್ಲಿ ಉತ್ಪತ್ತಿಯಾದರೂ ಮತ್ತೊಂದು ದೇಶದಲ್ಲಿ ಆಮದಾಗಿ ಯಾವುದೇ ಅಡತಡೆ ಇಲ್ಲದೇ ಮತ್ತು ಷರತ್ತಿಲ್ಲದೆ ಮಾರಾಟ ಮಾಡಬಹುದು. ಆ ದೇಶದಲ್ಲಿ ಅದಕ್ಕೆ ಪೇಟೆಂಟ್ ಸಿಕ್ಕಿದ್ದರೆ ಅದಕ್ಕೆ ವಿಶೇಷವಾದ ತೆರಿಗೆಗಳು ಅನ್ವಯವಾಗುವುದಿಲ್ಲ. ರಾಷ್ಟ್ರೀಯ ಸೌಲಭ್ಯದ ತೀರ್ಮಾನದಂತೆ ಒಂದನ್ನೊಂದು ಬೇರೆಯಾಗಿ ನೋಡಲಾಗುವುದಿಲ್ಲ.

ವ್ಯಾಪಾರಿ ಸಂಬಂದಿತ ಬೌದ್ಧಿಕ ಆಸ್ತಿ ಹಕ್ಕುಗಳ ಒಪ್ಪಂದ:

ವ್ಯಾಪಾರಿ ಸಂಬಂದಿತ ಬೌದ್ಧಿಕ ಆಸ್ತಿ ಹಕ್ಕುಗಳ ಒಪ್ಪಂದ (Trade Related Intellectual Properties (TRIPS) agreement)ವು ಪ್ಯಾರಿಸ್‌ ಒಪ್ಪಂದದ ಪರಿಣಾಮ ಆದರೆ ಅದು ವ್ಯವಸ್ಥಿತವಾಗಿ ಜಾರಿಗೆ ಹಲವಾರು ವರ್ಷಗಳ ಕಾಲವನ್ನೇ ತೆಗೆದುಕೊಂಡಿದೆ. ಪ್ಯಾರಿಸ್‌ ಒಪ್ಪಂದದ ಪರಿಣಾಮದಿಂದಾದ ಚರ್ಚೆಗಳು ಅನೇಕ ಬಾರಿ ನಡೆದು ಅದರ ಫಲವಾಗಿ ಹುಟ್ಟಿದ್ದೇ ಈ ಟ್ರಿಪ್ಸ್‌ ಒಪ್ಪಂದ. ಪ್ಯಾರಿಸ್‌ ಒಪ್ಪಂದದ ಹಲವಾರು ಅಂಶಗಳನ್ನು ಒಳಗೊಂಡೇ ಈ ಒಪ್ಪಂದಗಳು ಜಾರಿಯಾಗಿವೆ. ಅದರ ಅನೇಕ ಅಂಶಗಳು ಇದರಲ್ಲಿ ಸೇರಿ ಕೊಂಡಿವೆ. ಟ್ರಿಪ್ಸ್‌ಮೂಲತಃ ವ್ಯಾಪಾರಿಕರಣದ ಯೋಜನೆ ಇದರಲ್ಲಿ ಬೌದ್ಧಿಕ ಆಸ್ತಿಯಿಂದ ಲಾಭತರುವಂತಹ ಅಂಶಗಳು ಅಥವಾ ಉತ್ಪನ್ನಗಳು ಮಾರಾಟಕ್ಕಾಗಿ ಅಥವಾ ವಾಣಿಜ್ಯೀಕರಣಗೊಳ್ಳುವ ಕುರಿತು ಅನೇಕ ಮಾಹಿತಿಗಳಿವೆ.

ಪ್ಯಾರಿಸ್‌ ಒಪ್ಪಂದಕ್ಕಿರುವ ಮುಖ್ಯ ಸಮರ್ಥನೆಯೆಂದರೆ ಅದು, ಲಾಭದಾಯಕ ಎನ್ನುವುದಾಗಿದೆ. ಮುಖ್ಯವಾಗಿ ಇದರ ಎಲ್ಲಾ ಲಾಭಗಳೂ ಸದಸ್ಯ ರಾಷ್ಟ್ರಗಳ ಉತ್ಪನ್ನಗಳಿಗೂ ಎಲ್ಲಾ ಕಡೆಗಳಲ್ಲಿ ಸಮಾನವಾದ ಅವಕಾಶ ಲಭ್ಯವಾಗಲಿದ್ದು, ಅನೇಕ ಉತ್ಪನ್ನಗಳನ್ನು ಅಮದು ಮಾಡಿಕೊಳ್ಳುವುದು ಸುಲಭ ಎಂದು ವಾದಿಸಲಾಗಿದೆ. ಹಾಗಾಗಿ ಕೆಲವು ಉತ್ಪನ್ನಗಳು ಸುಲಭ ಬೆಲೆಯಲ್ಲಿ ದೊರಕಲಿವೆ. ಒಂದು ದೇಶದಲ್ಲಿ ಪೇಟೆಂಟ್ ಪಡೆದ ಅಧಿಕೃತ ಕಂಪನಿಗಳು ಬೇರೆಲ್ಲಾ ಸದಸ್ಯ ದೇಶಗಳಲ್ಲಿ ಮೊದಲು ಪೇಟೆಂಟ್ ಪಡೆದ ದಿನಾಂಕದಿಂದಲೇ ಪೇಟೆಂಟ್ ಪಡೆಯಬಹುದು. ಇದು ಲಾಭದಾಯಕವಾದರೂ ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ನಷ್ಟವನ್ನೂ ತರಬಲ್ಲದು. ಏಕೆಂದರೆ ಬೇರೊಂದು ದೇಶದಲ್ಲಿ ಅರ್ಜಿ ಸಲ್ಲಿಸಿದರೆ ಸಾಕು ಮತ್ತೆಲ್ಲಾ ದೇಶದಲ್ಲೂ ಆ ದಿನದಿಂದಲೇ ಪೇಟೆಂಟ್ ಲಾಗು ಆಗುವುದು. ಬೇರೊಂದು ದೇಶದ ಅರ್ಜಿದಾರ ಮತ್ತು ದೇಶೀ ಅರ್ಜಿದಾರ ಇಬ್ಬರಿಗೂ ಒಂದೇ ರೀತಿಯ ಸೌಲಭ್ಯ ಲಭಿಸುವುದರಿಂದ ರಾಷ್ಟ್ರೀಯತೆಗೆ ಭಂಗ ಬಂದರೂ ಆಶ್ಚರ್ಯವಿಲ್ಲ. ಬೇರೊಂದು ದೇಶದ ವ್ಯಕ್ತಿಯು ಇತರೆ ಸದಸ್ಯ ದೇಶಗಳಲ್ಲಿ ಆ ದೇಶದ ವ್ಯಕ್ತಿಯಷ್ಟೇ ಹಕ್ಕುದಾರನಾಗಿರುತ್ತಾನೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಬಹುಶಃ ಇದೊಂದು ಸವಾಲಾಗಲಿದೆ ಏಕೆಂದರೆ ಇವಿನ್ನೂ ಅಭಿವೃದ್ಧಿ ಹೊಂದುತ್ತಿರುವುದರಿಂದ ಬೇರೆ ದೇಶದಲ್ಲಿ ಅರ್ಜಿ ಸಲ್ಲಿಸಿರುವುದಿರಲಿ ತಮ್ಮ ದೇಶದಲ್ಲೇ ಕಷ್ಟ ಪಡುತ್ತಿರುವ ಎಲ್ಲ ಸಾಧ್ಯತೆಗಳಿರುತ್ತವೆ. ಸಧ್ಯದ ಪರಿಸ್ಥಿತಿಯಲ್ಲಂತೂ ಭಾರತದಲ್ಲಿ ವರ್ಷಕ್ಕೆ ಪೇಟೆಂಟ್ ಕೋರುವ ಅರ್ಜಿಗಳ ಸಂಖ್ಯೆಯು ಹತ್ತು ಸಾವಿರವನ್ನೂ ಮೀರುತ್ತಿಲ್ಲ. ಈಗಿಗ ಅದು ದಾಪುಗಾಲನ್ನು ಇಡತೊಡಗಿದ್ದು ಮುಂದಿನ ದಿನಗಳಲ್ಲಿ ಬದಲಾಗುವುದನ್ನು ನಿರೀಕ್ಷಿಸಲಾಗಿದೆ. ಆದರೆ ಪೇಟೆಂಟ್ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಜಪಾನ್‌ದೇಶದಲ್ಲಿ ೩ ಲಕ್ಷಕ್ಕೂ ಅಧಿಕ ಅರ್ಜಿಗಳು ಬರುತ್ತವೆ. ಹೀಗೆ ಮುಂದಿರುವ ಜಪಾನ್‌ನಂತಹ ದೇಶಗಳಿಗೆ ಭಾರತದಂತಹ ರಾಷ್ಟ್ರದಲ್ಲಿ ಸುಲಭವಾಗಿ ಹಕ್ಕುಗಳು ಮಾನ್ಯವಾಗಿ ಬಿಡುತ್ತವೆ. ಅಂದರೆ ಮುಂದುವರಿದ ದೇಶಗಳಿಗೆ ಇದು ಹೆಚ್ಚು ಲಾಭದಾಯಕ ಎಂದೂ, ಅಭಿವೃದ್ಧಿ ಶೀಲ ದೇಶಗಳಿಗೆ ಹಾನಿಕಾರಕವೆಂದೂ ಅರ್ಥೈಸಲಾಗಿದೆ. ಇದನ್ನು ಸರಿದೂಗಿಸಬೇಕಾದರೆ ಅಭಿವೃದ್ಧಿ ಶೀಲ ದೇಶಗಳಿಗೆ ಅನ್ವೇಷಣೆಯನ್ನು ಪೇಟೆಂಟ್ ಗೊಳಿಸುವುದೇ ಮಾರ್ಗ ಎನ್ನಲಾಗಿದೆ. ಅಂದರೆ ಅವರೂ ಸಹ ಇದರ ದಾರಿಯಲ್ಲೇ ಸಾಗಬೇಕೆಂಬುದೇ ಆಸಯ.