IPR ಎಂಬುದು ಬಹಳ ಜನಪ್ರಿಯ ಪದವಾಗಿ ರೂಪುಗೊಂಡಿದೆ. ಸಾಮಾನ್ಯ ತಿಳಿವಳಿಕೆಯಲ್ಲಿ ಆಸ್ತಿ ಎನ್ನುವುದು, ಕೇವಲ ಜಮೀನು ಮನೆ, ಒಡವೆ, ವಸ್ತ್ರ ಇತ್ಯಾದಿಗಳಿಗೆ ಮಾತ್ರ. ಒಂದು ವಿಶಾಲ ಅರ್ಥದಲ್ಲಿ ನಮ್ಮನ್ನು ಸಾಕಬಲ್ಲ, ಜವಾಬ್ದಾರಿವುಳ್ಳ ಬೆಲೆಯುಳ್ಳ ಸಾಧನ. ನಮ್ಮನ್ನು ಸಲಹುವ ಆಕರ. ಇದನ್ನು ಮಾರಬಹುದು, ಬೆಲೆಕಟ್ಟಬಹುದು. ಗಳಿಕೆಯ ಲಾಭ ಪಡೆಯಬಹುದು. ಈ ಎಲ್ಲಾ ಸೌಲಭ್ಯಗಳನ್ನು ಆಸ್ತಿಗಿರುವಂತೆಯೇ ಬೌದ್ಧಿಕತೆಗೂ ವಿಸ್ತರಿಸಲಾಗಿದೆ. ಅರಿವಿನ ಪರಂಪರೆಯಲ್ಲಿ ವಿವರಣೆಕೊಟ್ಟಂತೆ ಅರಿವು ಲಾಭದ ಮೂಲವಾಗಿ ರೂಪುಗೊಂಡಿದೆ. ಆಸ್ತಿ ಎನ್ನುವುದು ಏನು? ಅದನ್ನು ನಾವು ಒಡೆತನದಿಂದ ಪಡೆಯಬಹುದು, ಅದನ್ನು ಮಾರಬಹುದು, ಅಡವಿಡಬಹುದು, ದುಡಿಮೆಗೆ ಹಚ್ಚಬಹುದು, ನಮ್ಮ ರಕ್ಷಣೆಗೆ ಅದರಿಂದ ಸಹಾಯ ಪಡೆಯಬಹುದು. ಅದನ್ನು ನಾವು ಸ್ವಂತವಾಗಿ ಗಳಿಸಿರಬಹುದು, ಪಿತ್ರಾರ್ಜಿತವಾಗಿ ಪಡೆದ್ದಿರಬಹುದು. ಇದೆ ಬಗೆಯಲ್ಲಿ ಬಳಸಬಹುದಾದ್ದು ನಮ್ಮ ಬುದ್ದಿಮತ್ತೆ. ಒಂದು ಸೃಜನಶೀಲ ಮನಸ್ಸಿನ ಆಲೋಚನೆಗಳು ಒಂದು ಕೃತಿಯಾಗಿ ಹೊರಹೊಮ್ಮಿದಾಗ, ಅದು ಆ ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯದ ಫಲವಾಗಿರುತ್ತದೆ. ಅಂದಂತೆ ಅದರ ಹಕ್ಕನ್ನು ಆ ವ್ಯಕ್ತಿ ಸಹಜವಾಗಿ ಹೊಂದಿರುತ್ತಾನೆ. ಅದರಂತೆ ಬೌದ್ಧಿಕತೆಯನ್ನು ಒಂದು ಆಸ್ತಿಯನ್ನಾಗಿಯೂ ಮತ್ತು ಅದರ ಹಕ್ಕನ್ನು ಒಂದು ಹಕ್ಕನ್ನಾಗಿಯೂ ಪರಿಗಣಿಸಲಾಗಿದೆ. ಯಾವುದೇ ಕೃತಿಯು ಇದರ ಅಡಿಯಲ್ಲಿ ಹಕ್ಕುವುಳ್ಳದ್ದು ಎನ್ನುವುದಾದರೆ ಯಾವ ಬಗೆಯ ಬೌದ್ಧಿಕ ಪರಿಕಲ್ಪನೆಗಳು ಆಸ್ತಿಯಾಗಬಲ್ಲವು? ಯಾವುದನ್ನು ಹಾಗೆನ್ನಬಹುದು ಎಂಬ ಪ್ರಶ್ನೆ ಉದ್ಭವಿಸಬಹುದು. ಬೌದ್ಧಿಕ ಚಟುವಟಿಕೆಯಿಂದ ಉತ್ಪನ್ನವಾದ ಯಾವುದೇ ಫಲ ಇಂತಹ ಆಸ್ತಿಯಾಗಬಲ್ಲುದು. ಸಾಹಿತ್ಯ ಪ್ರಕಾರವಾಗಿದ್ದರೆ ಗ್ರಂಥಸ್ವಾಮ್ಯವಾಗಿರಬಹುದು. ಕಲೆಯಾಗಿದ್ದರೆ ಅವುಗಳ ಮಾರಾಟದ, ಪ್ರಕಟಣೆಯ ಹಕ್ಕು, ಡಿಸೈನ್‌ಗಳಾಗಿರಬಹುದು. ನೇರವಾಗಿ ಹಲವು ಬಗೆಯ ಉತ್ಪನ್ನಗಳಾಗಿರಬಹುದು. ವಿವಿಧ ಬಗೆಯ ಈ ಹಕ್ಕುಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.

೧. ಪೇಟೆಂಟ್ : ತಯಾರಿಕಾ ವಿಧಾನಗಳು/ಪ್ರಕ್ರಿಯೆಗಳು, ಉಪಕರಣಗಳು, ಉದ್ಯಮ ಸಾಧ್ಯತೆಯುಳ್ಳ ಯಾವುದೇ ಸಾಧನ.

೨. ಮಾರಾಟ ಚಿಹ್ನೆ: ಉತ್ಪನ್ನಗಳನ್ನು ಗುರುತಿಸಿಕೊಳ್ಳುವ ಕಂಪನಿಯ ಚಿನ್ಹೆ.

೩. ಗ್ರಂಥ ಸ್ವಾಮ್ಯ: ಕಲಾಕೃತಿ, ಸಾಹಿತ್ಯ, ಸಂಗೀತ, ಸಾಫ್ಟ್ ವೇರ್, ಛಾಯಾ ಚಿತ್ರ, ಕಲಾಮಾದರಿಗಳು.

೪. ಡಿಸೈನ್‌ಗಳು: ಆಕೃತಿ, ಉದ್ಯಮದ ಪದ್ದತಿ ಇತ್ಯಾದಿಗಳು.

ಎಲ್ಲಾ ಪ್ರಕರಣಗಳಿಗೂ ಒಂದೇ ರೀತಿಯ ಹಕ್ಕುಗಳೇನೂ ಅನ್ವಯವಾಗುವುದಿಲ್ಲ. ಒಂದೊಂದಕ್ಕೂ ಒಂದು ರೀತಿಯ ಹಕ್ಕು ಸ್ವಾಮ್ಯ ನೀಡಲಾಗುವ ಉದು. ಆಯಾ ವಿಧದಲ್ಲಿ-ಆಯಾ ಮಾಲೀಕನಿಗೆ ಕಾನೂನಿನ ರಕ್ಷಣೆಯನ್ನು ಒಂದು ಗೊತ್ತಾದ ಕಾಲದ ಅವಧಿಯವರೆಗೆ ಮಾತ್ರ ಅಧಿಕಾರ/ಹಕ್ಕು ನೀಡಲಾಗುವುದು, ಬೌದ್ಧಿಕ ಹಕ್ಕು ಸಾಧಿಸಿದೆ ಎಂದರೆ ಇಡಿಯಾಗಿ ಅದರ ಲಾಭದ ಅಥವಾ ಹಕ್ಕು ಚಲಾಯಿಸುವುದು ಎಂದು ಅರ್ಥವಲ್ಲ. ಅದು ಒಂದು ಅವಧಿಗೆ ಮಾತ್ರವಂತೂ ಹೌದು. ಅಲ್ಲದೆ ಈ ನಿಯಮಾವಳಿಗಳು ಇತ್ತೀಚೆಗಿನ ಸಂದರ್ಭದಲ್ಲಿ ಸಾಕಷ್ಟು ಬದಲಾಗಿವೆ. ಜಾಗತೀಕರಣದ ಸಂದರ್ಭದಲ್ಲಿ ಅವು ವಿಶೇಷ ಚರ್ಚೆಗೆ ಒಳಗಾಗಿವೆ. ಇವುಗಳ ವಿವರವಾದ ಚರ್ಚೆಗಳನ್ನು ಮುಂದಿನ ಅಧ್ಯಯನಗಳು ಒಳಗೊಂಡಿವೆ. ಈ ಹಕ್ಕುಗಳು ಒಂದು ಗೊತ್ತಾದ ಕಾಲಾವಧಿಯನ್ನು ಹೊಂದಿರುವುವು, ಹಾಗೆಯೇ ಅವುಗಳ ಕಾಲಮಿತಿಗಳು ಹೀಗಿವೆ.

೧. ಪೇಟೆಂಟ್ : ೭ ಅಥವಾ ೧೪ ವರ್ಷ

೨. ಮಾರಾಟ ಚಿನ್ಹೆ : ಉತ್ಪನ್ನವು ಉಪಯೋಗದಲ್ಲಿರುವ ಸಮಯ

೩. ಗ್ರಂಥ ಸ್ವಾಮ್ಯ: ಕಲಾಕಾರನ ಜೀವಿತಾವಧಿ ಮತ್ತು ನಂತರದ ೬೦ ವರ್ಷ

೪. ಡಿಸೈನ್‌ಗಳು: ೧೫ ವರ್ಷ (ನವೀಕರಿಸಬಹುದು)

ಪೇಟೆಂಟ್ ಅಥವಾ ಏಕಸ್ವಾಮ್ಯದ ಪರಿಕಲ್ಪನೆಯು ಒಂದು ಸಂಶೋಧನೆಗೆ ಮಾತ್ರ ಸೇರಿದ್ದು ಅದು ವಿಜ್ಞಾನಿಗಳು ಮಾಡಿಕೊಂಡ ಒಂದು ಗೌಪ್ಯ ಪದ್ಧತಿ, ಎಂಬುದು ಒಂದು ಸಾಮಾನ್ಯ ಅರಿವು. ಅದರಂತೆ ಇದನ್ನು ಒಂದು ವಿಜ್ಞಾನಿಗಳ ಹುನ್ನಾರ ಎಂದು ವಾದಿಸುತ್ತಾರೆ. ಅಲ್ಲದೇ ಈ ವಿಚಾರದಲ್ಲಿ ವಿಜ್ಞಾನವನ್ನು ಮತ್ತು ವಿಜ್ಞಾನಿಗಳನ್ನು ಗುಮಾನಿಯಿಂದಲೇ ನೋಡುವ ಅನೇಕ ಬರಹಗಾರರು ತಮ್ಮ ಗ್ರಂಥ ಪ್ರಕಟಣೆಯ ಹಕ್ಕನ್ನು ಮಾತ್ರ ಜೋಪಾನವಾಗಿರುವಂತೆ ನೋಡಿಕೊಳ್ಳುತ್ತಾರೆ. ಅದೂ ಸಹ ಬೌದ್ಧಿಕ ಹಕ್ಕಿನ ನಿಯಮಾವಳಿಯಲ್ಲೇ ಬರುವುದಲ್ಲವೇ? ಹಾಗೆ ನೋಡಿದರೆ ವಿಜ್ಞಾನದಲ್ಲಿ ತಿಳುವಳಿಕೆಗೆ ಅರಿವಿಗೆ ಅದನ್ನು ಉಲ್ಲೇಖಿಸಲು ಹಕ್ಕು ಅಡ್ಡಿ ಬರುವುದಿಲ್ಲ. ಅದರ ಔದ್ಯಮೀಕರಣ ಲಾಭದ ವಹಿವಾಟು ಎಂದಾಗ ಮಾತ್ರ ಅದರಲ್ಲಿ ಹಕ್ಕಿನ ಚಲಾವಣೆಯಾಗುತ್ತದೆ.

IPR ಮತ್ತು ಸಾರ್ವಜನಿಕ ಒಳಿತು

ಈಗಾಗಲೇ ಪ್ರಸ್ತಾಪಿಸಿದಂತೆ ಪೇಟೆಂಟ್ ಎನ್ನುವುದು ಅನ್ವೇಷಕರ ನಿರಂತರ ಲಾಭದ ಹಕ್ಕು ಅಲ್ಲ. ಬದಲಾಗಿ ಬೌದ್ಧಿಕ ಆಸ್ತಿ ಹಕ್ಕು ಅಥವಾ ಪೇಟೆಂಟ್ ನೀಡಿಕೆ ಎನ್ನುವುದು, ಕೃತಿಕಾರನ ಅಥವಾ ಅನ್ವೇಷಕರ ಏಕ ಸ್ವಾಮ್ಯವನ್ನು ನಿರಂತರತೆಯನ್ನು ತಡೆಯುವುದೇ ಆಗಿದೆ. ಹಾಗಿಲ್ಲದಿದ್ದರೆ ಈ ನಿರಂತರತೆಯು ಸಾಧ್ಯ ಎನ್ನುವ ಹಲವಾರು ಉದಾಹರಣೆಗಳು ಕಾಣಬರುತ್ತವೆ. ನಮ್ಮ ಸಂಸ್ಕೃತಿಯಲ್ಲಿ ನಾವು ಗಮನಿಸರಿಬಹುದು. ಕೆಲವೊಂದು ಮನೆತನಗಳು ಕೆಲವು ಮನೆ ಮದ್ದನ್ನು ಕೊಡುತ್ತಾರೆ. ಅದರ ಗುಟ್ಟನ್ನು ಯಾರಿಗೂ ಬಿಟ್ಟು ಕೊಡುವುದೇ ಇಲ್ಲ. ಅದರ ಲಾಭವನ್ನು ನಿರಂತರವಾಗಿ ತಲೆ ತಲಾಂತರವಾಗಿ ಅನುಭವಿಸುತ್ತಾ ಬಂದಿದ್ದಾರೆ. ಬೌದ್ಧಿಕ ಆಸ್ತಿ ಹಕ್ಕು ನೀಡಿಕೆಯಲ್ಲಿ ಇದಕ್ಕೆ ಅವಕಾಶವಿಲ್ಲ. ನಿಗಧಿತ ಸಮಯದ ನಂತರ ಅದು ಸಾರ್ವಜನಿಕ ತಿಳುವಳಿಕೆಗೆ ಸೇರುತ್ತದೆ. ಹೀಗೆ ನಿರಂತರ ಏಕಸ್ವಾಮ್ಯವನ್ನು ತಪ್ಪಿಸಿ ಅದರಲ್ಲಿನ ಸಾರ್ವಜನಿಕ ಒಳಿತನ್ನು ಕಾಪಾಡುವುದೇ ಆಸ್ತಿ ಹಕ್ಕಿನ ಕಾನೂನು ಚೌಕಟ್ಟು ಎಂದು ಪರಿಭಾವಿಸಲಾಗಿದೆ.

ಸಾರ್ವಜನಿಕ ಒಳಿತುಎಂದರೆ ಪೇಟೆಂಟ್ ನಿಯಮಾವಳಿಯಿಂದಲೇ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಎಂದರ್ಥ. ಬೌದ್ಧಿಕ ಆಸ್ತಿ ಹಕ್ಕನ್ನು ಅತ್ಯಂತ ಪ್ರಬಲವಾಗಿ ಬೆಂಬಲಿಸುವ ಅಮೇರಿಕಾವು ಪೇಟೆಂಟ್ ವಿಜ್ಞಾನ ಚಲನೆಯ ಸುಲಭ ಮಾರ್ಗ ಎಂದು ವಿಶ್ಲೇಷಿಸಿದೆ. ಅದೊಂದು ಅತ್ಯಂತ ಪ್ರಾಯೋಗಿಕ ಅನ್ವಯವುಳ್ಳದೆಂದು, ಹೆಚ್ಚು ಉಪಾಕಾರಿಯಾದದ್ದೆಂದೂ ವರ್ಣಿಸುತ್ತದೆ. ಆದ್ದರಿಂದಲೇ ಬೌದ್ಧಿಕ ಆಸ್ತಿ ಹಕ್ಕುಗಳು ಅನ್ವೇಷಕನ ಹಿತಾಸಕ್ತಿ ಮತ್ತು ಸಾರ್ವಜನಿಕ ಒಳಿತು ಎರಡಕ್ಕೂ ಸಮತೋಲನವಾಗಿರಬೇಕು ಎಂದು ವಾದಿಸುತ್ತದೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ಈ ವಾದವನ್ನು ವಿಧವಿಧವಾಗಿ ಚರ್ಚಿಸುತ್ತಾರೆ. ಹಾಗೆಂದೇ ಈ “ಸಾರ್ವಜನಿಕ ಒಳಿತು” ಎಷ್ಟರ ಮಟ್ಟಿಗೆ ಒಳಿತು ಎಂದು ಪ್ರಶ್ನಿಸುವವರೂ ಇದ್ದಾರೆ.

ಬೌದ್ಧಿಕ ಆಸ್ತಿ ಹಕ್ಕಿನ ಲಾಭದ ಏಕಸ್ವಾಮ್ಯದ ವಿರೋಧಿ ನಿಲುವು ಬೇರೆ ಬಗೆಯದು. ಅವರ ವಾದದ ಅನ್ವಯ ಇದೊಂದು ಜಾಗತೀಕರಣದ, ವಾಣಿಜ್ಯ ಲಾಭದ ಹುನ್ನಾರ ಅಷ್ಟೆ. ಲಾಭದ ಹಿತವೇ ಪ್ರಧಾನವಾದುದು ಎಂಬುದು ಅವರ ವಾದ. ಜಗದ್ ವ್ಯಾಪಿಯಾಗುವ ಈ ಹಿಡಿತದಲ್ಲಿ ಎಲ್ಲಾ ಮಾರುಕಟ್ಟೆಗಳನ್ನು ಪ್ರವೇಶಿಸಬಲ್ಲ ಬೃಹತ್‌ ಕಂಪನಿಗಳು ಮಾತ್ರ ಲಾಭವನ್ನು ಕೊಳ್ಳೆಹೊಡೆದಾವು ಎಂಬ ಅಳುಕು. ಈಗಾಗಲೇ ಅದರ ಫಲವನ್ನು ಗಮನಿಸುತ್ತಿರುವ ಸಂದರ್ಭದಲ್ಲಿ, ಇಲ್ಲಿ ಒಂದು ನಿರ್ಧಾರಕ್ಕಿಂತಲೂ ಪ್ರಸ್ತುತ ವಾಸ್ತವವೇನೆಂಬುದು ಪ್ರಮುಖವಾದ ವಿಚಾರ. ಹಾಗೆಂದೇ ವಿರೋಧೀ ನಿಲುವಿನ ವಾದವೇನೆಂದರೆ ಎಲ್ಲಾ ವೈಜ್ಞಾನಿಕ ಸಂಶೋಧನೆಗಳೂ, ದೇಶಿ ಸಹಾಯದಿಂದ, ಪ್ರೋತ್ಸಾಹದಿಂದ, ಅನ್ವೇಷಕನ ಪ್ರತಿಭೆಯಿಂದ ವಿಕಾಸಗೊಳ್ಳುತ್ತವೆ.

ಇದು ವಿಜ್ಞಾನದ ಪ್ರಗತಿಯಿಂದಲೂ ಅವಶ್ಯಕವಾದುದು. ಹೊಸ ಅನ್ವೇಷಣೆಯಿಂದ ಅನ್ವೇಷಕನಿಗೂ ಮತ್ತು ಪ್ರೋತ್ಸಾಹ ನೀಡಿದ ಸಂಸ್ಥೆಗೂ ಪ್ರಯೋಜನವಾಗುವುದು. ಇದು ಸಾಮಾನ್ಯವಾದ ಸಂಗತಿ. ಆದರೆ ಇದರ ವಾಣಿಜ್ಯೀಕರಣವು ಜಾಗತೀಕರಣದ ಸಂದರ್ಭದಲ್ಲಿ ಲಾಭವೇ ಪ್ರಮುಖ ಅಂಶವಾಗಿ, ಅನ್ವೇಷಕ ಮತ್ತು ಕಂಪನಿ ಅಥವಾ ಪ್ರೋತ್ಸಾಹಿಸಿದ ಸಂಸ್ಥೆ ಮಾತ್ರವೇ ಗಣನೀಯ ಉತ್ತೇಜನ ಪಡೆಯುವುದಾಗಿದೆ. ಇದರ ವ್ಯಾಪ್ತಿಯು ಬದಲಾದ ವಾಣಿಜ್ಯ ನಿಯಮದಿಂದಾಗಿ, ವಿಶಾಲವಾಗಿದ್ದು, ಬೃಹತ್‌ಕಂಪನಿಯು ಹೆಚ್ಚು ಲಾಭದ ನಿರೀಕ್ಷೆಯಿಂದ ಲೋಕ ಹಿತರಕ್ಷಣೆ ಎನ್ನುವುದು ವಿವಾದಾಸ್ಪದ ಎನ್ನುವುದು ವಿರೋಧಿ ನಿಲುವು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾದೀತು ಎಂದೂ ಸಹ ಅವರ ವಾದ.

ಇಷ್ಟೆಲ್ಲಾ ವಾದ ವಿವಾದಗಳ ನಡುವೆಯೂ ಬೌದ್ಧಿಕ ಆಸ್ತಿ ನಿಯಮಗಳು ಎಲ್ಲಾ ಅನ್ವೇಷಣೆಗಳನ್ನು ಪ್ರವೇಶಿಸಿವೆ. ಆದ್ದರಿಂದ ಇದರ ತಿಳುವಳಿಕೆ ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಕೃಷಿವಿಜ್ಞಾನಾಸಕ್ತರಿಗೆ, ರೈತರಿಗೆ ಮನವರಿಕೆಯಾಗಬೇಕಿದೆ. ಬೌದ್ಧಿಕ ಆಸ್ತಿ ಹಕ್ಕುಗಳು ವಿಕಾಸ, ವ್ಯಾಪ್ತಿ ಮತ್ತು ದೇಸೀಯ ನಿಯಮಾವಳಿಗಳು ಏನು ಎಂಬುದು ಅವಶ್ಯಕವಾಗಿ ಗೊತ್ತಾಗಬೇಕಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುವುದು. ಪ್ರಮುಖವಾಗಿ ಕೃಷಿಯಲ್ಲಿನ ಹೊಸ ಬೀಜ ಮಸೂದೆಯು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ವಿವರವಾದ ಪೇಟೆಂಟ್ ವಿಚಾರಗಳು ಮನವರಿಕೆಯಾಗಬೇಕಿದೆ. ಹಾಗಾಗಿ ವಿವರವಾದ ಚರ್ಚೆ, ವಾಸ್ತವಿಕ ದೇಸಿ ಚಿಂತನೆಗಳು ಮತ್ತು ಜನಪರ ರೈತಪರ ನಿಲುವಿಗೆ ಸಾಧ್ಯತೆಗಳು ಇತ್ಯಾದಿ ಕ್ರಮಗಳು ಪರಿಶೀಲನಾರ್ಹವಾಗಿವೆ. ಕಾರಣವೇನೆಂದರೆ ಅನೇಕ ಸಂದರ್ಭದಲ್ಲಿ ನಿಖರವಾದ ಮಾಹಿತಿಯು ಜನರನ್ನು ತಲುಪುವುದೇ ಇಲ್ಲ. ಈ ಹಿಂದೆ ನಡೆದ ಒಂದು ಘಟನೆಯಲ್ಲಿ ಇಲ್ಲಿ ವಿಶ್ಲೇಷಿಸೋಣ.

ಹಿಂದೊಮ್ಮೆ ಅರಿಶಿಣದ ಬಗ್ಗೆ ಅಮೇರಿಕಾದಲ್ಲಿ ಒಂದು ಪೇಟೆಂಟ್ ನೀಡಿದ ವಿಚಾರ ಮತ್ತು ಹೆಚ್ಚೂ ಕಡಿಮೆ ಅದೇ ಸಮಯದಲ್ಲಿ ಜೀವಿಗೂ ಪೇಟೆಂಟ್ ನೀಡಿಕೆ ಕುರಿತ ವಿಚಾರ ಹೊರ ಹೊಮ್ಮಿತು. ಬಹುಪಾಲು ಪತ್ರಿಕೆಗಳಲ್ಲಿ “ಬೇವಿನ ಮರ”ಕ್ಕೆ ಪೇಟೆಂಟ್ ನೀಡಿದೆ ಎಂಬಂತೆ ವರದಿ ಪ್ರಕಟವಾಯಿತು. ರೈತರಲ್ಲಿ ಎಂಥ ಸುದ್ದಿ ಹರಡಿತೆಂದರೆ ಬೇವಿನ ಮರ ಬೆಳೆಸಿರುವುದು, ಬೆಳೆಸುವುದು ಒಂದು ಅಪರಾಧ ಎಂಬಂತೆ ಆಯಿತು. ಪರಿಣಾಮವಾಗಿ ಅನೇಕ ಕಡೆ ಭಯದಿಂದ ಬೇವಿನ ಮರಗಳನ್ನೇ ಕಡಿಯಲಾಯಿತು. ಕೆಲೆವೆಡೆ ಪ್ರತಿಭಟನೆಯ ನೆಪವಾಗಿ ‘ಬೇವಿನಮರ’ಗಳನ್ನು ಕಡಿಲಾಯಿತು ಎಂಬಂತೆ ವರದಿಯಾಯಿತು. ಏನೇ ಆಗಲಿ ಕಡಿದದ್ದಂತೂ ಬೇವಿನ ಮರಗಳನ್ನೇ. ಅರೆ ತಿಳುವಳಿಕೆ ವರದಿಗಳಿಂದ ಕೆಲಕಾಲ ಅವಾಂತರವಾಗಿತ್ತು. ಆದರೆ ವಾಸ್ತವವೇನು? ಅಂದರೆ ಇಡೀ ಬೇವಿನ ಮರವನ್ನೇನು ಪೇಟೆಂಟ್ ಗೊಳಿಸಲಾಗದು. ನಿಸರ್ಗದಲ್ಲಿನ ಜೀವಿಯನ್ನು ಇಡಿಯಾಗೇನೂ ಪೇಟೆಂಟ್ ಮಾಡಲಾಗದು.