. ಪೇಟೆಂಟ್

ನಮ್ಮ ದೇಶವೂ ಯಾವುದೇ ದೇಶದಲ್ಲಿರುವಂತೆ ನವೀನ, ಉಪಯೋಗಕರ ಅನ್ವೇಷಣೆಗಳಿಗೆ ಪೇಟೆಂಟ್ ನೀಡುತ್ತದೆ. ಯಾವುದೇ ಯಂತ್ರ, ವಸ್ತು, ತಯಾರಿಕಾ ವಿಧಾನ ಹೀಗೆ ಹಲವಾರು ಬಗೆಯ ವಿಕಾಸಗಳಿಗೆ ಪೇಟೆಂಟ್ ನೀಡಿಕೆ ಸಾಧ್ಯವಿದೆ. ಮುಖ್ಯವಾಗಿ ಈ ಕೆಳಗಿನ ಕುರಿತು ಬೌದ್ಧಿಕ ಹಕ್ಕನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ.

ಪ್ರಕ್ರಿಯೆ ಪೇಟೆಂಟ್
ಉತ್ಪನ್ನ ಪೇಟೆಂಟ್
ಉಪಕರಣಗಳ ಪೇಟೆಂಟ್
ಯಾಂತ್ರಿಕ ಅನ್ವಯ ಸಾಧ್ಯತೆಗಳ ಪೇಟೆಂಟ್

೧೯೭೦ರ ಪೇಟೆಂಟ್ ನಿಯಮ ಮತ್ತು ೧೯೭೨ರ ಪೇಟೆಂಟ್ ಕಾನೂನು ಎರಡನ್ನು ೧೯೯೯ರಲ್ಲಿ ತಿದ್ದುಪಡಿ ಮಾಡಲಾಯಿತು. ಈ ಪ್ರಕಾರ ಪೇಟೆಂಟ್ ನೀಡಿಕೆಯ ಅಧಿಕಾರ ಪೇಟೆಂಟ್ ನಿಯಂತ್ರಕರಿಗೆ ಸೇರಿದ್ದು. ಈ ಕುರಿತು ಯಾವುದೇ ವ್ಯಾಜ್ಯಗಳನ್ನು ಬಗೆಹರಿಸಲು ಜಿಲ್ಲಾ ನ್ಯಾಯಾಲಯ ಮತ್ತು ರಾಜ್ಯ ಮಟ್ಟದ ನ್ಯಾಯಾಲಯಗಳ ವ್ಯಾಪ್ತಿಗೊಳಪಟ್ಟಿರುತ್ತವೆ.

ಭಾರತದ ಪೇಟೆಂಟ್ ಮಾದರಿಯ ಚಟುವಟಿಕೆಗಳು ಮೊದಲು ಬ್ರಿಟೀಷರ ಕಾಲದಲ್ಲಿ ಆರಂಭವಾದವು. ಭಾರತದಲ್ಲಿನ ಎಲ್ಲಾ ಟ್ರಿಬ್ಯುನಲ್‌ಗಳಲ್ಲಿ ಸಾರ್ವತ್ರಿಕ ನ್ಯಾಯ ತತ್ವ ಅನ್ವಯಿಸುತ್ತಾರೆ. ಭಾರತದಲ್ಲಿ ಮೊಟ್ಟ ಮೊದಲ ಪೇಟೆಂಟನ್ನು ೧೮೫೬ರ ಸೆಪ್ಟೆಂಬರ್ ೨ ರಂದು ಓರ್ವ ಸಿವಿಲ್‌ ಇಂಜಿನಿಯರ್‌ಗೆ ನೀಡಲಾಯಿತು. ಭಾರತದ ಪೇಟೆಂಟ್ ನಂ ೧ ಆದ ಅದನ್ನು ಅಂದಿನ ಕಲ್ಕತ್ತಾದ ಜಾರ್ಜ್ ಆಲ್‌ಫ್ರೆಡ್‌ ಡೆಪೆನ್ನಿಂಗ್‌ಎಂಬಾತನಿಗೆ ಆತನು ಅನ್ವೇಷಿಸಿದ “ಪಂಕಾ ಎಳೆಯುವ ಯಂತ್ರಕ್ಕೆ (Punkah Pulling Machine) ನೀಡಲಾಯಿತು. ಅಂದಿನಿಂದಲೂ ಇಂದಿನವರೆಗೂ ಸಾರ್ವತ್ರಿಕ ನ್ಯಾಯ ಬದ್ಧತೆಯ ತತ್ವದ ಆಧಾರದ ಮೇಲೆಯೇ ಪೇಟೆಂಟ್ ನೀಡಿಕೆಯನ್ನು ಭಾರತದಲ್ಲಿ ಕಾಯ್ದುಕೊಳ್ಳಲಾಗಿದೆ. ಇದೇ ನಿರ್ದಾರ ಮತ್ತು ಆಯಾ ಸನ್ನಿವೇಶದ ಹಿನ್ನೆಲೆಯಲ್ಲಿ ಹಲವಾರು ಬಾರಿ ತಿದ್ದುಪಡಿಯನ್ನು ತರಲಾಗಿದೆ. ಅದರಂತೆ ೧೮೫೬ರ ನಂತರ ೧೮೫೯, ೧೮೭೨, ೧೮೮೩, ೧೯೧೧, ೧೯೭೦ ಮತ್ತು ೨೦೦೨ರಲ್ಲಿ ಪೇಟೆಂಟ್ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದೆ. ಈಗ ಜಾರಿಯಲ್ಲಿರುವ ನವೀಕೃತವಾದ ಟ್ರಿಪ್ಸ್‌ಗೆ ಅನುಗುಣವಾದ ಪೇಟೆಂಟ್ ಯಾವ ರೀತಿ ಇರಬೇಕೆಂಬುದನ್ನು ಇದನ್ನು ಟ್ರಿಪ್ಸ್ ಒಪ್ಪಂದದ ಆರ್ಟಿಕಲ್‌ ೨೭ರಿಂದ ೨೪ರಲ್ಲಿ ವಿವರವಾಗಿ ಕೊಟ್ಟಿದೆ. ಅದರಂತೆ ಸದಸ್ಯ ರಾಷ್ಟ್ರಗಳು ಈ ಕೆಳಗಿನ ಷರತ್ತಿಗೆ ಒಳಪಟ್ಟು ಪೇಟೆಂಟ್ ನೀಡಬಹುದಾಗಿದೆ.

ಯಾವುದೇ ನವೀನ ಅನ್ವೇಷಣೆಗೆ
ಯಾವುದೇ ತಂತ್ರಜ್ಞಾನಕ್ಕೆ
ಹೊಸ ಪ್ರಕ್ರಿಯೆ ಅಥವಾ ಉತ್ಪನ್ನಗಳಿಗೆ
ಹೊಸಬಗೆಯ ವಿಧಾನ ಅನುಸರಣೆಗೆ
ಯಾಂತ್ರೀಕೃತ ಉತ್ಪಾದನೆಗೆ ಸರಿಹೊಂದುವ ಅನ್ವೇಷಣೆಗಳು

೨೦೦೫ರ ಜನವರಿಯಿಂದಲೇ ಪೇಟೆಂಟ್ ಕಾಯ್ದೆ ೨೦೦೨ ಜಾರಿಯಲ್ಲಿದೆ. ಇದರ ಅನ್ವಯ ಹೊಸ ಪೇಟೆಂಟ್ ಕಾನೂನು ಅನ್ವಯವಾಗಲಿದ್ದು ಕೃಷಿಯಲ್ಲಿ ಮತ್ತಷ್ಟು ಹೊಸ ಚರ್ಚೆಯನ್ನು ಹುಟ್ಟಿ ಹಾಕಿವೆ. ಇವುಗಳನ್ನೊಳಗೊಂಡ ವಿವರಗಳು ಮುಂದೆ ಲಭ್ಯವಾಗಲಿವೆ.

ಭಾರತದಲ್ಲಿ ಪೇಟೆಂಟ್ ನಡೆದು ಬಂದ ಹಾದಿ

ಭಾರತದಲ್ಲಿ ಪೇಟೆಂಟ್ ಈಗಿರುವ ಸ್ಥಿತಿಗೆ ಬರಲು ಅನೇಕ ಬಗೆಯಲ್ಲಿ ಸಾಗಿ ಬಂದಿದೆ ಅದರ ರೀತಿಯನ್ನು ಈ ಕೆಳಗಿನಂತೆ ಗುರುತಿಸಬಹುದು.

೧೮೫೬ ಪೇಟೆಂಟ್ ನಿಯಮ ಬ್ರಿಟಿಷ್‌ಕಾನೂನಿನ ಅಳವಡಿಕೆ. ಕಾಲಾವಧಿ ೧೪ ವರ್ಷಗಳು
೧೮೭೨ ಪೇಟೆಂಟ್ ಮತ್ತು ವಿನ್ಯಾಸದ ನಿಯಮ
೧೮೮೩ ಅನ್ವೇಷಣೆಯ ಸಂರಕ್ಷಣೆಯ ಅಧಿನಿಯಮ
೧೯೧೧-೪೭ ಭಾರತೀಯ ಪೇಟೆಂಟ್ ನಿಯಮ ೧೫ನೇ ಆಗಸ್ಟ್‌೧೯೪೭ ರಿಂದ ಜಾರಿ
೧೯೬೭ ಪಾರ್ಲಿಮೆಂಟ್‌ನಲ್ಲಿ ಹೊಸ ಪೇಟೆಂಟ್ ನಿಯಮ ಮಂಡನೆ
೧೯೭೦ ಪೇಟೆಂಟ್ ಕಾಯಿದೆ ಅಂಗೀಕಾರ
೧೯೭೨-೧೯೭೦ ಪೇಟೆಂಟ್ ಕಾಯಿದೆ ಜಾರಿ
೧೯೯೪-೧೯೭೦ ಪೇಟೆಂಟ್ ಕಾಯಿದೆಗೆ ತಿದ್ದುಪಡಿ, ಮಾರಾಟದ ಹಕ್ಕುಗಳ ಸೇರ್ಪಡೆ.
೧೯೯೫ ಜಾಗತೀಕರಣದ ಹಿನ್ನೆಲೆಯ ಹೊಸ ಪೇಟೆಂಟ್ ಮಸೂದೆ ರಾಜ್ಯಸಭೆಯಲ್ಲಿ ತಿರಸ್ಕೃತ
೧೯೯೯ ಪೇಟೆಂಟ್ ಕಾಯಿದೆಗೆ ಉಭಯ ಸದನಗಳಲ್ಲೂ ಒಪ್ಪಿಗೆ.
೨೦೦೨ ಪೇಟೆಂಟ್ ಕಾಯಿದೆ ೨೦೦೨ ರೂಪುಗೊಂಡಿದ್ದು
೨೦೦೪ರ ಡಿಸೆಂಬರ್ ಗೆ ಹೊಸ ಕಾಯ್ದೆಯ ಜಾರಿಗೆ ಗಡುವು.
೧೦.೦೧.೨೦೦೫ ರಿಂದ ಹೊಸ ಕಾಯ್ದೆಯ ಕಡ್ಡಾಯ.

. ವ್ಯಾವಹಾರಿಕ ಚಿನ್ಹೆಗಳು (ಟ್ರೇಡ್ಮಾರ್ಕ್)

ಈ ಹಿಂದೆ ಜಾರಿಯಲ್ಲಿದ್ದ ಟ್ರೇಡ್‌ಮಾರ್ಕ್ ಮತ್ತು ಮರ್ಚೆಂಟೈಲ್‌ ಕಾಯ್ದೆ ೧೯೫೮ ಅನ್ನು ೧೯೯೯ ರಲ್ಲಿ ಟ್ರೇಡ್‌ಮಾರ್ಕ್ ಕಾಯ್ದೆ ೧೯೯೯ ಆಗಿ ಪರಿವರ್ತಿಸಿದೆ. ಪಾರ್ಲಿಮೆಂಟ್‌ ಇದನ್ನು ಅಂಗೀಕರಿಸಿದೆ. ಇದರ ಕಾಯ್ದೆ ಅನ್ವಯ ಯಾವುದೇ ಕಂಪನಿಯು ಟ್ರೇಡ್‌ಮಾರ್ಕ್‌ನ್ನು ನೊಂದಾಯಿಸಿದರೆ ಅದನ್ನು ೭ ವರ್ಷಗಳ ಕಾಲ ಬಳಸುವ ಅಧಿಕೃತ ಹಕ್ಕನ್ನು ಹೊಂದಿರುತ್ತವೆ. ಮತ್ತೆ ಅದನ್ನು ನವೀಕರಿಸುವ ಅವಕಾಶವೂ ಇರುವುದು. ಟ್ರೇಡ್‌ಮಾರ್ಕ್ ಸಾಮಾನ್ಯವಾಗಿ ಒಂದು ಗುರುತಾಗಿ ಗೊತ್ತಾದ ವಿನ್ಯಾಸ, ಚಿತ್ರ, ಬಣ್ಣ ಆಕಾರ ಇತ್ಯಾದಿಯನ್ನು ಹೊಂದಿರುತ್ತದೆ. ಇದನ್ನು ಕಂಪನಿಯು ಉತ್ಪಾದಿಸುವ ಎಲ್ಲಾ ಉತ್ಪನ್ನಗಳ ಮೇಲೆ ಅದರ ಅಧಿಕೃತ ಮುದ್ರೆಯಾಗಿ ಬಳಸುವ ಹಕ್ಕನ್ನು ಹೊಂದಿರುತ್ತದೆ. ಅಲ್ಲದೆ ಇದನ್ನು ಬೇರಾವುದೇ ಕಂಪನಿಯು ಬಳಸದಂತೆಯೂ ನಿರ್ಬಂಧ ಹೇರುವ ಹಕ್ಕನ್ನೂ ಹೊಂದಿರುತ್ತದೆ. ಇದನ್ನು ವಂಚಿಸಿದ ಯಾವುದೇ ಪ್ರಕರಣಗಳಿಗೆ ಕಾನೂನಿನ ಅನ್ವಯ ತಡೆ ತರುವ ಮತ್ತು ಅದರಿಂದಾದ ನಷ್ಟವನ್ನು ವಸೂಲು ಮಾಡುವ ಹಕ್ಕನ್ನೂ ಅದು ಹೊಂದಿರುತ್ತದೆ.

ಗ್ರಂಥ ಸ್ವಾಮ್ಯ

೧೫ನೇ ಶತಮಾನದಲ್ಲಿ ಮುದ್ರಣ ಯಂತ್ರವನ್ನು ಅನ್ವೇಷಿಸಿದ ಮೇಲೆ ಮುದ್ರಣದ ವ್ಯವಸ್ಥೆಯಿಂದಾಗಿ ಮತ್ತು ಅದರ ಬಳಕೆಯಿಂದಾಗಿ ಮೊದಲ ಬಾರಿಗೆ ಪ್ರಕಟಣೆಗಳ ಗ್ರಂಥಸ್ವಾಮ್ಯದ ಬಗ್ಗೆ ಹೆಚ್ಚು ಎಚ್ಚರ ಉಂಟಾಯಿತು. ಅಲ್ಲದೆ ಒಂದು ಬೌದ್ಧಿಕ ಆಸ್ತಿಯಾಗಿ ಅತೀ ಹೆಚ್ಚು ಬಳಕೆಯಲ್ಲಿರುವ ಮತ್ತು ಜನಪ್ರಿಯವಾದ ಬೌದ್ಧಿಕ ಹಕ್ಕೂ ಕೂಡ ಇದಾಗಿದೆ. ಏಕೆಂದರೆ ಜನಪ್ರಿಯ ಸೃಜನಶೀಲ ಪ್ರಕಾರಗಳಲ್ಲಿ ಲೇಖನ ಕಲೆ, ಚಿತ್ರರಚನೆ, ಸಂಗೀತ ಇತ್ಯಾದಿಗಳು ಪ್ರಮುಖವಾದವು ಮತ್ತು ಅತೀ ಹೆಚ್ಚು ಜಾಗೃತಿಯನ್ನು ಹೊಂದಿರುವ ಬೌದ್ಧಿಕ ಪ್ರಕಾರಗಳು.

ಭಾರತದಲ್ಲಿ ಗ್ರಂಥಸ್ವಾಮ್ಯದ ಹಕ್ಕಿನ ಕಾಯ್ದೆಯು ಸಾಕಷ್ಟು ಜಾಗತಿಕ ಕ್ರಮಕ್ಕೆ ಅನುಗುಣವಾಗಿಯೇ ಇದೆ. ಇದರಲ್ಲಿ ಗ್ರಂಥಕರ್ತರ ಜೀವಿತಾವಧಿ ಮತ್ತು ನಂತರದ ೬೦ ವರ್ಷಗಳು ದೊರಕಲಿದ್ದವು. ಈಗಿನ ಟ್ರಿಪ್ಸ್‌ನಲ್ಲಿಯ ಒಪ್ಪಂದದಂತೆ ಪ್ರಕಟಣಾ ವರ್ಷದನಂತರ ೫೦ ವರ್ಷಗಳು ಹಕ್ಕಾಗಿ ದೊರಕಲಿವೆ. ಅಲ್ಲದೆ ಇವು ಕೇವಲ ಪುಸ್ತಕವನ್ನಷ್ಟೇ ಅಲ್ಲದೆ ಕಂಪ್ಯೂಟರ್ ಪ್ರೋಗ್ರಾಮ್‌ಗಳು ಸೇರಿವೆ. ಗ್ರಂಥಸ್ವಾಮ್ಯದಡಿ ಹಕ್ಕಿನ ಪ್ರತಿಪಾದನೆಯಲ್ಲಿ ವಂಚನೆಯ ಪ್ರಕರಣಗಳಿಗೆ ಕೃತಿ ಚೌರ್ಯದ ಆಪಾದನೆಯಲ್ಲಿ ದಂಡ ಹೇರುವ ಸಾಧ್ಯತೆಗಳಿವೆ. ಇದರ ಪ್ರಕಾರ ಶಿಕ್ಷೆಯು ೧೨ ತಿಂಗಳ ಜೈಲುವಾಸದಿಂದ ೩ ವರ್ಷಗಳವರೆಗೆ ಮತ್ತು ೫೦,೦೦೦ – ೨,೦೦,೦೦೦ ರೂ ದಂಡದ ಜೊತೆಗೆ ನೀಡಬೇಕಾಗಬಹುದು.

. ಭೌಗೋಳಿಕ ಸೂಚಕಗಳು

ಭೌಗೋಳಿಕ ಸೂಚಕಗಳಿಗೆ ಬೌದ್ಧಿಕ ಆಸ್ತಿ ಹಕ್ಕಿನಲ್ಲಿ ಅವಕಾಶವನ್ನು ನೀಡಲಾಗಿದೆ. ಉದಾಹರಣೆಗೆ ಬಾಸುಮತಿ ಅಕ್ಕಿ, ಡಾರ್ಜಲಿಂಗ್‌ ಟೀ, ಕೂರ್ಗ್ ಕಾಫಿ ಇತ್ಯಾದಿಗಳು ಇವನ್ನು ಪ್ರತಿನಿದಿಸಲಿವೆ. ಮುಖ್ಯವಾಗಿ ಇದು ಉತ್ಪನ್ನಗಳು ಹುಟ್ಟುವ ಅಥವಾ ಉತ್ಪಾದನೆಯಾಗುವ ಸ್ಥಳವನ್ನು ಒಳಗೊಳ್ಳಲಲಿವೆ. ಹಾಗಾಗಿ ಯಾವ ಉತ್ಪನ್ನಗಳಲ್ಲಿ ಆಯಾ ಹೆಸರನ್ನು ಹೊಂದುವ ಹಕ್ಕು ಆಯಾ ಭೌಗೋಳಿಕತೆಗೆ ಸೀಮಿತವಾಗಿರುತ್ತವೆ ಮತ್ತು ಆ ವಿಶೇಷಣವನ್ನು ಹೊಂದುವ ಹಕ್ಕನ್ನು ಹೊಂದಿರುತ್ತವೆ.

. ಡಿಸೈನ್ಗಳು (ವಿನ್ಯಾಸಗಳು)

ಇವು ಔದ್ಯಮಿಕ ಸಾಧ್ಯತೆಗಳ ವಿನ್ಯಾಸಗಳನ್ನು ಒಳಗೊಂಡಿರುತ್ತವೆ. ಮುಖ್ಯವಾಗಿ ಇವು ಆಕಾರ, ಅವುಗಳಲ್ಲಿರುವ ಅಲಂಕಾರಿಕ ಗುಣ ಇವುಗಳ ಕುರಿತಾದ ಹಕ್ಕನ್ನು ಹೊಂದಿರುತ್ತವೆ.

ಭಾರತದಲ್ಲಿ ಬೌದ್ಧಿಕ ಹಕ್ಕಿನ/ಪೇಟೆಂಟ್ ನ ಬಳಕೆ ಅಥವಾ ಜಾರಿ ಮಾಡುವ ಬಗೆ

ಬೌದ್ಧಿಕ ಹಕ್ಕನ್ನು ಜಾರಿ ಮಾಡಲು ಅಂದರೆ ಒಂದು ಹಕ್ಕಾಗಿ ಬಳಕೆ ಮಾಡಲು ಹಲವು ಕ್ರಮವನ್ನು ಅನುಸರಿಸಬೇಕಾಗುತ್ತದೆ. ಇದು ಸಾಮಾನ್ಯವಾಗಿ ಎಲ್ಲ ಪ್ರಕಾರದ ಬೌದ್ಧಿಕ ಹಕ್ಕುಗಳಿಗೂ ಅನ್ವಯಿಸಿದರೂ ವಿಶೇಷವಾಗಿ ಪೇಟೆಂಟಿನಲ್ಲಿ ಇದರ ಪ್ರಶ್ನೆ ಪ್ರಮುಖವಾದುದು. ಗ್ರಂಥಸ್ವಾಮ್ಯ ಕುರಿತಾದ ದಂಡ ಅಥವಾ ಶಿಕ್ಷೆಯ ಬಗೆಗೆ ಈ ಹಿಂದೆಯೇ ತಿಳಿಸಿದ್ದು, ಇಲ್ಲಿ ಪ್ರಮುಖವಾಗಿ ಸಾಮಾನ್ಯ ವಿಚಾರಗಳನ್ನು ಮತ್ತು ಪೇಟೆಂಟ್ ಕುರಿತ ಮಾಹಿತಿಯನ್ನು ನೀಡಲಾಗಿದೆ. ಕಾರಣ ಸಾಮಾನ್ಯ ಸಂದರ್ಭದಲ್ಲಿ ಬೌದ್ಧಿಕ ಹಕ್ಕು ಅಂದರೇನೇ ಪೇಟೆಂಟ್ ಎಂಬ ತಿಳುವಳಿಕೆ ಇರುವುದರಿಂದ ಇಲ್ಲಿ ಇದಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲಾಗಿದೆ. ಬೌದ್ಧಿಕ ಹಕ್ಕಿನ ಪರಿಕಲ್ಪನೆಯಲ್ಲಿ ಪೇಟೆಂಟ್ ಮಹತ್ವದ ಸ್ಥಾನವನ್ನು ಪಡೆದಿರುವುದು ಇದಕ್ಕೆ ಮತ್ತೊಂದು ಕಾರಣವಾಗಿದೆ.

ಬೌದ್ಧಿಕ ಹಕ್ಕು ಅಥವಾ ಪೇಟೆಂಟ್ ಹಕ್ಕಿನ ಜಾರಿ ಮಾಡುವ ಅಥವಾ ಬಳಸುವ ವಿಚಾರ ಅಥವಾ ಪ್ರಮೇಯ ಬರುವುದು ಯಾರಾದರೂ ಹಕ್ಕನ್ನು ಮೀರಿ ವರ್ತಿಸಿದಾಗ ಅಥವಾ ದುರ್ಬಳಕೆ ಮಾಡಿದಾಗ. ಅಂದರೆ ಪೇಟೆಂಟ್ ಇದ್ದರೂ ಮತ್ತೊಬ್ಬರು ಅದೇ ಉತ್ಪನ್ನವನ್ನು ಉತ್ಪಾದಿಸಿದಾಗ, ಅವರ ಮೇಲೆ ಹಕ್ಕು ಚಲಾಯಿಸಲು ಕಾಯಿದೆಯಲ್ಲಿ ಅವಕಾಶಗಳಿವೆ. ಅಂತಹ ಸಂದರ್ಭದಲ್ಲಿ ಅವರ ಮೇಲೆ ಕಟ್ಲೆ ಅಥವಾ ದಾವೆ ಹೂಡಲು ಜಿಲ್ಲಾ ನ್ಯಾಯಾಲಯಕ್ಕಿಂತ ಮೇಲ್ಪಟ್ಟ ಯಾವುದೇ ಕೊರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಪೇಟೆಂಟ್ ಕಂಟ್ರೋಲರಲ್ಲಿಯೂ ಪಿರ್ಯಾದು ಸಲ್ಲಿಸಬಹುದು. ಹಾಗೆ ವ್ಯಾಜ್ಯ ಸಲ್ಲಿಕೆಗೆ ಈ ಕೆಳಗಿನ ಷರತ್ತುಗಳು ಅನ್ವಯವಾಗುತ್ತವೆ.

  • ಉತ್ಪಾದಿಸಿದ ಉತ್ಪನ್ನವು ವ್ಯವಹಾರ ಅಥವಾ ವಾಣಿಜ್ಯ ಬಳಕೆಯಲ್ಲಿ ದುರುಪಯೋಗಗೊಂಡಿರಬೇಕು.
  • ಅದೊಂದು ಮುಗ್ಧತೆಯಿಂದ ಮಾಡಿದ ತಪ್ಪಾಗಿರಬಾರದು.
  • ಉದ್ದೇಶ ಪೂರ್ವಕವಾದ ಲಾಭಗಳಿಕೆಯ ಉದ್ದೇಶದಿಂದ ಮಾಡಿದ ಅಪರಾಧವಾಗಿರಬೇಕು.

ಇಂತಹ ಸಂದರ್ಭದಲ್ಲಿ ಕಾನೂನಿನ ಕ್ರಮವನ್ನು ಜಾರಿಗೊಳಿಸಿ ನಷ್ಟವನ್ನು ತುಂಬಿಕೊಡುವ ಬಗೆಯನ್ನು ನ್ಯಾಯ ಕಟಕಟೆಯಲ್ಲಿ ಬೇಡಬಹುದು.

ಈಗ ಜಾರಿಯಲ್ಲಿರುವ ಅಥವಾ ಪ್ರಸ್ತುತವಾಗಿರಿವ ಬೌದ್ಧಿಕ ಹಕ್ಕುಗಳು

ಪೇಟೆಂಟ್ ಕಾಯ್ದೆ – ೨೦೦೨

ಡಿಸೈನ್‌ಕಾಯ್ದೆ – ೨೦೦೦

ಟ್ರೇಡ್‌ಮಾರ್ಕ್ ಕಾಯ್ದೆ – ೧೯೯೯

ಗ್ರಂಥಸಾಮ್ಯ ಕಾಯ್ದೆ – ೧೯೫೭ (೧೯೯೯ರಲ್ಲಿ ತಿದ್ದುಪಡಿ)

ಭೌಗೋಳಿಕ ಸೂಚಕ ಕಾಯ್ದೆ – ೧೯೯೯

ಸಸ್ಯ ತಳಿ ಮತ್ತು ರೈತರ ಹಕ್ಕಿನ ಕಾಯ್ದೆ – ೨೦೦೧