ಈಗ ಮುಖ್ಯವಾಗಿ ರೈತರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಿರುವ ಮತ್ತು ಆಲೋಚನೆಗೆ ಹಚ್ಚಲಿರುವ ವಿಚಾರವೆಂದರೆ ತಳಿಗಳನ್ನು ಕುರಿತ ಹೊಸ ಕಾಯಿದೆ. ಅದೇ ಸಸ್ಯ ತಳಿಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ೨೦೦೧. ಇದನ್ನು ೨೦೦೩ನೇ ಸೆಪ್ಟೆಂಬರ್ ೧೨ರಂದು ಬಿಡುಗಡೆಮಾಡಲಾಗಿದೆ. ಇದರ ಅನ್ವಯ ಹೊಸ ತಳಿಗಳು, ಚಾಲ್ತಿಯಲ್ಲಿರುವ ತಳಿಗಳು, ರೈತರ ತಳಿಗಳು ಮತ್ತು ಅಗತ್ಯಕ್ಕೇ ತಕ್ಕಂತೆ ರೂಪಿತವಾಗಿರುವ ತಳಿಗಳು ಎಂದು ವಿಂಗಡಿಸಿ ಕಾಯಿದೆಯಲ್ಲಿ ಒಳಗೊಳ್ಳಲಿವೆ. ಮುಖ್ಯವಾಗಿ ಕಂಪನಿಗಳಿಂದ, ವಿಜ್ಞಾನಿಗಳ ಬೌದ್ಧಿಕತೆಯನ್ನು ಒಳಗೊಳ್ಳುವಿಕೆಯಿಂದ ರೂಪಿತಗೊಂಡ ಅಥವಾ ರಚಿತವಾದ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಹಿಡಿತಕ್ಕೆ ಒಳಪಡಿಸುವ ಕಾರಣದಿಂದ ಇದು ಅನಿವಾರ್ಯವಾಗಿರಬಹುದು. ಅಲ್ಲದೆ ಟ್ರಿಪ್ಸ್‌ನ ಒಪ್ಪಂದದ ನಿಯಮದಂತೆ ಇದರ ಅವಶ್ಯಕತೆಯಿದ್ದಿರಬಹುದು. ಯಾವುದೇ ಕಾರಣಕ್ಕೆ ರೂಪಿತವಾಗಿದ್ದರೂ, ಇದರಿಂದ ರೈತೋಧ್ಯಮದಮೇಲೆ ಗಂಭೀರಪರಿಣಾಮ ಬೀರುವುದರಿಂದ ರೈತರು ಇದನ್ನು ಅರಿತು ತಮ್ಮ ಜೀವನ ಪೂರಕ ಉಧ್ಯಮವನ್ನು ಕಾಪಾಡಿಕೊಳ್ಳುವುದು ಅವಶ್ಯಕವಿದೆ.

ವಿಶ್ವದ ವಹಿವಾಟಿನಲ್ಲಿ ಬೀಜದ ಪಾಲು ಬಹು ಮುಖ್ಯವಾದುದು ಮತ್ತು ಸಾಕಷ್ಟು ಅಗಾಧವಾದುದು. ಈ ಮೂಲಕ ಇತರೇ ಒಳಸುರಿಗಳನ್ನು ನಿಯಂತ್ರಿಸುವುದು ಸಾಧ್ಯವಿದೆ. ಉದಾಹರಣೆಗೆ ಸಾಕಷ್ಟು ಗೊಬ್ಬರ, ರಸಾಯನಿಕ ಬೇಕೇಬೇಕು ಎಂಬ ಬೆಳೆಯ ತಳಿಗಳ ಬೀಜ ಕೊಂಡರೆ ಅದಕ್ಕೆ ಬೇಕಾದ ಇತರೆ ಪರಿಕರಗಳನ್ನೂ ಕೊಳ್ಳುವುದೂ ಅನಿವಾರ್ಯವಾಗುತ್ತದೆಯಲ್ಲವೆ? ಇಂತಹ ತಳಿಗಳನ್ನು ಬೆಳೆಯಲು ಬೀಜ ಕೊಂಡ ರೈತರು ಅನಾಯಾಸವಾಗಿ ಒಟ್ಟಾರೆ ಮಾರುಕಟ್ಟೆಯ ಹಿಡಿತಕ್ಕೆ ಒಳಪಟ್ಟೇ ಪಡುತ್ತಾರೆ. ಸುಲಭವಾಗಿ ಒಂದೇ ಒಂದು ಪದಾರ್ಥದಿಂದ ಇಡೀ ಉಧ್ಯಮವನ್ನು ಹಿಡಿತಕ್ಕೆ ತರಬಹುದಾಗಿದೆ. ಅದೇನೇ ಮುಂದಿನ ಸಂಚಿರಲಿ, ಉಳಿದಂತೆ ನೋಡುವುದಾದರೆ ಇದನ್ನು ಅರಿತೂ ರೈತರು ತಮ್ಮ ಹಿತ ಕಾಪಾಡಿಕೊಳ್ಳುವ ಸಾಧ್ಯತೆಯನ್ನು ನಿರ್ಲಕ್ಷಿಸುವಂತಿಲ್ಲ. ಈಗಾಗಲೇ ಇದನ್ನು ಜಾರಿಗೊಳಿಸಿರುವ ಸರ್ಕಾರವು ಇದನ್ನು ಸ್ಪಷ್ಟಪಡಿಸುತ್ತಾ ಇದನ್ನು ರೈತರ ಪರವೆಂದೇ ಹೇಳುತ್ತಿದೆ. ಯಾವುದೇ ಕಾರಣದಿಂದಾದರೂ ಇದನ್ನು ರೈತರು ತಮ್ಮ ಹಿತರಕ್ಷಣೆಯಲ್ಲಿ ಬಳಸಬೇಕಾಗಿದೆ.

ಪ್ರಜಾಸತ್ತೆಯಲ್ಲಿ ಸಾಮಾನ್ಯವಾಗಿ ಜನಪರನ ನಿಲುವನ್ನು ನಿರೀಕ್ಷಿಸಲಾಗುವುದು. ಇಲ್ಲಿನ ಆಳುವ ಸರ್ಕಾರವನ್ನು ಜನರೇ ನಿರ್ಮಿಸುವುದರಿಂದ ಇದರಲ್ಲಿ ಜನಪರತೆಯನ್ನು ಹೆಚ್ಚಾಗೇ ನಿರೀಕ್ಷಿಸಬಹುದು. ಆದರೂ ಅಚಾತುರ್ಯಗಳು ಆಗುವುದಿಲ್ಲವೆಂದಲ್ಲ. ಅದು ಅಲ್ಲದೆ ರೈತರ ಕುರಿತು ಯಾವ ಬಗೆಯ ನಿಧಾರದಲ್ಲೂ ಅನಕ್ಷರಸ್ಥ ರೈತ ಸಮುದಾಯವೇ ಹೆಚ್ಚಿರುವ ಪರಿಸ್ಥಿತಿಯತ್ತ, ರೈತರ ಪಾಲುಗೊಳ್ಳುವಿಕೆಯು ದೊಡ್ಡ ಮಿತಿಯಾಗುವುದು. ಇಂತಹ ಸಂದರ್ಭದಲ್ಲಿ ಜನಪರ ವಿಜ್ಞಾನಿಗಳು, ಸಂಘಟನೆಗಳು ರೈತರ ಪರವಾಗಿ ಇದನ್ನು ಒಗ್ಗುವಿಕೆಗೆ ಸಹಾಯ ಮಾಡಬೇಕಾಗುತ್ತದೆ. ಅಂತಹ ಸಾಧ್ಯತೆಗಳು ಇರುವುದನ್ನು ಅರಿಯಲಾದರೂ ರೈತ ತಳಿಕಾಯಿದೆ ಅರಿವು ಬೇಕೇ ಬೇಕು. ರೈತರ ಹಿತವನ್ನು ಕಾಯ್ದುಕೊಂಡೆ ರೂಪಿಸಿದೆ ಎಂದು ಹೇಳಿವ ಸರ್ಕಾರ ಇದನ್ನು ಕುರಿತು ಈ ರೀತಿ ಹೇಳುತ್ತದೆ. ಪ್ರಸ್ತುತ ತಳಿರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ ೨೦೦೧ ತಳಿ ಸಂಶೋಧಕರ ಹಕ್ಕನ್ನು ರಕ್ಷಿಸುವುದು. ಹೊಸತಳಿಗೆ ಕಾರಣರಾದ ರೈತರು ಅಥವಾ ಜನಾಂಗವನ್ನು ಲಾಭದಲ್ಲಿ ಹಂಚಿಕೊಳ್ಳುವ ಮತ್ತು ತಳಿರಕ್ಷಣೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಇದರಿಂದ ತಳಿ ರಕ್ಷಣೆಗಾಗಿ ರಾಷ್ಟ್ರೀಯ ತಳಿರಕ್ಷಣಾ ನಿಧಿಯನ್ನು ಸ್ಥಾಪಿಸುವ ಉದ್ದೇಶವೂ ಈ ಕಾಯಿದೆಯ ಅಡಿಯಲ್ಲೇ ಬರುವುದು. ಮೇಲು ನೋಟಕ್ಕೆ ತುಂಬಾ ಸುಲಭವಾಗಿ ಕಾಣಬರುವ ಈ ಹೇಳಿಕೆಗಳು ಪಾಲನೆಯಲ್ಲಿ ಮತ್ತು ಜಾರಿಗೊಳಿಸಬೇಕಾದಾಗ ಅಚಾತುರ್ಯಗಳಲ್ಲಿ ನಷ್ಟವಾಗುವಂತೆ ಎಚ್ಚರವಹಿಸಬೇಕು. ಹಾಗಾದರೆ ಈ ಕಾಯಿದೆಯ ರೂಪ ರೇಷೆಗಳೇನು?

ಇನ್ನು ಮುಂದೆ ಯಾವುದೇ ತಳಿಯು ನೊಂದಾಯಿತವಾಗಬೇಕಾದ್ದು ಕಡ್ಡಾಯ. ಅದಿಲ್ಲದೆ ಯಾರು ಅದನ್ನು ಮಾರುಕಟ್ಟೆಯಲ್ಲಿ ಮಾರುವಂತಿಲ್ಲ. ಅದು ರಾಷ್ಟ್ರೀಯ ತಳಿರಿಜಿಸ್ಟಾರ್‌ನಲ್ಲಿ ನೊಂದಾಯಿಸಿರಬೇಕು. ತಳಿಗೆ ಒಂದು ಹೆಸರನ್ನು ಸೂಚಿಸಬೇಕು. ತಳಿಯ ಬಗ್ಗೆ ಅವಶ್ಯಕವಾದ ಪರೀಕ್ಷೆಗಳನ್ನು ನಡೆಸುವುದು ಅನಿವಾರ್ಯ. ಇದರ ಪ್ರಕಾರ ಅವುಗಳು ಕಡ್ಡಾಯವಾಗಿ ಕೆಲವೊಂದು ಗುಣಮಟ್ಟವನ್ನು ಕಾಪಾಡಿಕೊಂಡಿರಲೇಬೇಕು. ಈ ಗುಣಮಟ್ಟಗಳು ವಿಶಿಷ್ಟತೆ, ವಿಭಿನ್ನತೆ ಏಕರೂಪತೆ ಹಾಗೂ ಸದೃಡತೆಯನ್ನು ಒಳಗೊಂಡಿವೆ. ವಿಶಿಷ್ಟತೆ ಎಂದರೆ ತಳಿಗಳು ಒಂದು ವಿಶಿಷ್ಟವಾದ ಗುಣವನ್ನು ಹೊಂದಿರಲೇಬೇಕು. ವಿಭಿನ್ನತೆಯೆಂದರೆ ಇತರೆ ತಳಿಗಳಿಗಿಂತ ಇರುವ ಬೇರೆಯ ಗುಣ, ಏಕರೂಪತೆಯೆಂದರೆ ತನ್ನ ವಂಶವಾಗಿ ಗುಣಗಳನ್ನು ಕಾಪಾಡಿಕೊಳ್ಳುವಲ್ಲಿರುವ ಏಕರೂಪತೆ. ಸದೃಡತೆ ಎಂದರೆ ತನ್ನ ಗುಣಗಳನ್ನು ಕಾಪಾಡಿಕೊಳ್ಳುವಲ್ಲಿ ಇರುವ ಸದೃಡವಾದ ಗುಣ. ಹೀಗಿರುವ ತಳಿಗಳನ್ನು ಯಾರು ಬೇಕಾದರೂ ಅಂದರೆ ರೈತರು, ವಿಜ್ಞಾನಿಗಳು ಕಂಪನಿಗಳು ನೊಂದಾಯಿಸಬಹುದು. ಒಮ್ಮೆ ನೊಂದಾಯಿಸಿದ ತಳಿಯು ಬಹುವಾರ್ಷಿಕವಾದ ಮರ, ಬಳ್ಳಿ ಇತ್ಯಾದಿಯಾಗಿದ್ದರೆ ೯ ವರ್ಷ ಮತ್ತು ವಾರ್ಷಿಕ ಬೆಳೆಯಾಗಿದ್ದರೆ ೬ ವರ್ಷಗಳ ಅವಧಿಗೆ ಆ ತಳಿಗೆ ಒಡೆತನ ದೊರಕುತ್ತದೆ.

ಈಗಾಗಲೇ ಬಳಕೆಯಲ್ಲಿರುವ ಮತ್ತು ರೈತರು ತಮ್ಮ ಸಮುದಾಯದಲ್ಲಿ ತಾವೇ ರೂಪಿಸಿರುವ ರೈತರ ತಳಿಗಳನ್ನು ಬೇರೊಬ್ಬರು ಲಾಭದಾಯಿಕವಾಗುವಂತೆ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿರದಂತೆ ಅವನ್ನೂ ನೊಂದಯಿಸುವುದು ಅವಶ್ಯಕವಾಗಿರುತ್ತದೆ. ಅಲ್ಲದೆ ಇದರಿಂದ ಸಮುದಾಯ ಮತ್ತು ರೈತರು ತಮ್ಮ ಈ ಅನ್ವೇಷಣೆಯಿಂದ ಲಾಭ ಪಡೆಯಲೂ ಇದು ಸಹಾಯಕವಾಗಲಿದೆ. ಇದರಿಂದ ಅವನ್ನು ಯಾರೂ ದುರ್ಬಳಕೆಯ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಈ ಬಗೆಯ ನೊಂದಾವಣೆಗೆ ರೈತರು ಯಾವ ಬಗೆಯ ಶುಲ್ಕವನ್ನು ಕೊಡಬೇಕಾಗಿಲ್ಲ. ರೈತರೇ ತಮ್ಮಲ್ಲಿ ಹಂಚಿಕೊಳ್ಳಬಹುದು.

ರೈತರ ಹಕ್ಕುಗಳು

ರೈತರ ಹಕ್ಕುಗಳ ಕುರಿತು ಚರ್ಚೆ ಆರಂಭವಾದದ್ದೇ ಈ ಬೌದ್ಧಿಕ ಆಸ್ತಿಹಕ್ಕುಗಳ ಕುರಿತು ಜಾಗತಿಕ ಚಾಲನೆ ನೀಡಿದ ಮೇಲೆ. ಇದಕ್ಕೆ ಪ್ರಮುಖ ಕಾರಣವೆಂದರೆ, ರೈತರ ಜ್ಞಾನ ಅಥವಾ ಅರಿವು ಪರಂಪರೆಯಿಂದ ಮೌಖಿಕವಾಗಿ ಹರಿದು ಬಂದಿದೆ. ಈಗ ಅಚ್ಚರಿಯ ಸಂಗತಿಯೆಂದರೆ ಇದ್ದಕ್ಕಿದ್ದಂತೆ ಜಗತ್ತು ಕಿರಿದಾಗಿ, ಎಲ್ಲವೂ ಎಲ್ಲರ ಕೈಗೆಟುಕುವಂತಹ ಅವಕಾಶಗಳನ್ನು ಬಂಡವಾಳಶಾಹಿಗಳು ಸೃಷ್ಟಿಸಲು ಅಥವಾ ಅಪೇಕ್ಷಿಸಲು ಆರಂಬಿಸಿರುವುದು. ಜಗತ್ತಿನ ವಿವಿಧ ಭಾಗಗಳಿಂದ ಬಂಡವಾಳ ಹರಿದು ಬಂದು ಎಲ್ಲೆಂದರಲ್ಲೇ ಮಾರುಕಟ್ಟೆತಗಳನ್ನು ನಿರ್ಮಿಸಲು ಕಾತರರಾಗಿದ್ದಾರೆ. ಸಹಸ್ರಾರು ವರ್ಷಗಳಿಂದ ಜೀವನ ಕ್ರಮವಾಗಿದ್ದ ಕೃಷಿ ಇಂದು ಒಮ್ಮೆಲೆ ಬೌದ್ಧಿಕ ಆಸ್ತಿಯ ಹಕ್ಕಾಗಿ ಬಂಡವಾಳಶಾಹಿಗಳ ಒಡೆತನಕ್ಕೆ ಒಳಗಾಗ ಬೇಕಾಗಿರುವುದರಿಂದ ರೈತರು ತಮ್ಮ ಹಕ್ಕುಗಳ ಪ್ರತಿಪಾದನೆಗೆ ಮುಂದಾಗಬೇಕಿದೆ. ಈಗ ಇತಿಹಾಸವೇ ರೈತರ ಒಡೆತನವನ್ನು ಮನುಕುಲಕ್ಕೆ ಹಂಚಿ ಇಂದು ಜೈವಿಕ ಆವಿಷ್ಕಾರ ಮತ್ತು ಆರ್ಥಿಕ ಬದಲಾವಣೆಯ ಸಂದರ್ಭವನ್ನು ಮುಂದಿಟ್ಟುಕೊಂಡು ಕಂಪನಿಗಳ ಒಡೆತನಕ್ಕೆ ನೀಡುತ್ತಿರುವ ಬಗ್ಗೆ ರೈತರು ಆಲೋಚನೆ ಮಾಡುವಂತಾಗಿದೆ. ಜಗತ್ತಿನಲ್ಲೇ ರೈತೋಧ್ಯಮ ಅಪಾರ ಜನಸಂಖ್ಯೆಯನ್ನು ಅಪ್ಪಿಕೊಂಡ ಉದ್ಯೋಗ. ಇದರ ಆಗು ಹೋಗುಗಳು ಈ ಸಮಾಜ ನಾಗರೀಕವೆಂದು ಕರೆಯಿಸಿಕೊಂಡಾಗಿನಿಂದ ವಿಕಾಸಹೊಂದಿವೆ. ಹೀಗಿರುವಾಗ ಹಕ್ಕುಗಳ ಕುರಿತು ಸರಳ ಮಾಹಿತಿ ಮತ್ತು ಅರಿವು ಇರುವುದು ಅವಶ್ಯಕ.

ಪ್ರಸ್ತುತ ತಳಿ ಕಾಯಿದೆಯು ನಿರ್ವಹಿಸುವ ರೈತರ ಹಕ್ಕುಗಳು ರೈತರ ತಳಿಗಳಿಗೆ ಮಾತ್ರವೆ ಸೀಮಿತವಾಗಿವೆ. ಆದಾಗ್ಯೂ ಇವು ಹಕ್ಕುಗಳನ್ನು ಮುಂದೊಂದು ದಿನ ಪುನರ್ವಿಮರ್ಶಿಸಬೇಕಾದ ಸಂದರ್ಭವನ್ನು ಹೇಳಿದರು ಆಶ್ಚರ್ಯವಿಲ್ಲ. ಸದ್ಯಕ್ಕಂತೂ ಈ ತಳಿ ನಿರ್ವಹಣೆಯ ಅರ್ಥದಲ್ಲಿ ಇವುಗಳ ಕುರಿತು ಈ ಮುಂದಿನಂತೆ ಹಕ್ಕುಗಳನ್ನು ಗುರುತಿಸಲಾಗುವುದು. ಮುಖ್ಯವಾಗಿ ರೈತರಿಗೆ ಪಾರಂಪರಿಕವಾಗಿ ವಿಕಾಸಗೊಳಿಸಿದ ತಳಿಗಳ ಮೇಲಿರುವ ಹಕ್ಕುಗಳನ್ನು ರೈತರ ಹಕ್ಕುಗಳೆಂದು ಗುರುತಿಸಲಾಗಿದೆ. ಈ ಭೂಮಿಯ ಮೇಲೆ ರೈತರು ಜೈವಿಕ ಸಂಪನ್ಮೂಲಕ್ಕೆ ಮತ್ತು ಅದರ ಸಂರಕ್ಷಣೆಯಲ್ಲಿ ತಾವು ನೀಡಿದ ಕೊಡುಗೆಗಾಗಿ ಅದಕ್ಕಾಗಿ ಅವರಿಗಿರುವ ಹಕ್ಕುಗಳನ್ನೂ ಹಕ್ಕುಗಳು ಎಂದು ಗುರುತಿಸಲಾಗಿದೆ. ರೈತರಿಗೆ ತಾವು ಸಂರಕ್ಷಿಸಿದ ತಳಿಗಳ ಮೇಲೆ ಲಾಭ ಪಡೆಯುವ ಹಕ್ಕನ್ನು ಈ ಕಾಯಿದೆಯಲ್ಲಿ ಹಕ್ಕಾಗಿ ಗುರುತಿಸಲಾಗಿದೆ. ಅಲ್ಲದೆ ಈ ತಳಿಗಳನ್ನು ನೊಂದಯಿಸುವ ಹಕ್ಕನ್ನು ರೈತರಿಗಿರುವ ಹಕ್ಕು ಎಂದು ಮಾನ್ಯ ಮಾಡಲಾಗಿದೆ. ನೊಂದಾಯಿತ ಕಂಪನಿಯಿಂದ ಖರೀದಿಸಿ ಅದರಿಂದ ನಷ್ಟ ಅನುಭವಿಸಿದ್ದರೆ ಅದಕ್ಕೆ ಪರಿಹಾರ ಪಡೆವ ಹಕ್ಕನ್ನು ಈ ಕಾಯಿದೆಯಲ್ಲಿ ಹಕ್ಕು ಎಂದು ಗುರುತಿಸಿದೆ. ಅಲ್ಲದೆ ಪಾರಂಪರಿಕವಾಗಿ ರೈತರ ತಳಿಗಳನ್ನು ಯಾವುದೆ ಕಂಪನಿ ಅಥವಾ ವ್ಯಕ್ತಿ ಲಾಭಕ್ಕೆ ಬಳಸಿಕೊಂಡರೆ ಅದಕ್ಕೆ ಪರಿಹಾರ ಪಡೆವುದನ್ನು ಒಂದು ಹಕ್ಕು ಎಂದು ಇದರಲ್ಲಿ ಮಾನ್ಯ ಮಾಡಲಾಗಿದೆ.

ರೈತರಿಗೆ ತಮ್ಮ ರೈತತಳಿಗಳನ್ನು ಉಚಿತವಾಗಿ ನೊಂದಾಯಿಸಲು ಅವಕಾಶ ಒದಗಿಸಲಾಗಿದೆ. ಇದರಂತೆ ಸಮುದಾಯಗಳು ಸೇರಿ ನೊಂದಯಿಸಲು ಸಹ ಅನುಮತಿಸಲಾಗಿದೆ. ಇದರಿಂದ ಇಡೀ ಸಮುದಾಯ ಒಂದಾಗಿ ಸಂರಕ್ಷಣೆ ಮತ್ತು ಅದರ ಲಾಭ ಪಡೆಯಲು ಅವಕಾಶ ಪಡೆವ ಹಕ್ಕನ್ನು ಹೊಂದಿರುತ್ತಾರೆ. ತಮ್ಮ ಅರಿವಿಲ್ಲದೆ ರೈತರು ಈ ತಳಿ ಕುರಿತ ಯಾವುದೇ ವಿಚಾರದಲ್ಲಿ ಮುಗ್ಧತೆಯಿಂದ ತಪ್ಪನ್ನೆಸಗಿದರೆ ಅದಕ್ಕೆ ವಿಷಾದ ಪಡುವ ಮೂಲಕ ಒಪ್ಪಿಕೊಂಡರೆ ವಿನಾಯಿತಿಗೆ ಅವಕಾಶ ಉಂಟು. ಇಂತಹ ಹಕ್ಕನ್ನು ರೈತರಿಗೆ ಈ ವಿಶೇಷ ಕಾಯಿದೆಯು ಒದಗಿಸಲಿದೆ.