ಪಾರಂಪರಿಕ ಜ್ಞಾನದಿಂದ ಹೊಸ ಉತ್ಪನ್ನಗಳ ಮೇಲೆ ಬೀರ ಬಹುದಾದ ಪ್ರಭಾವಗಳಲ್ಲಿ ಟ್ರಿಪ್ಸ್‌ನದು ಪ್ರಮುಖವಾದುದು. ಕಾರಣ ಯಾವುದೇ ಸಮುದಾಯದ ಪರಂಪರಾಗತ ಅರಿವು ಯಾವುದೇ ಕಾರಣಕ್ಕೆ ಕಂಪನಿಗಳ ಹಿಡಿತಕ್ಕೆ ಸಿಕ್ಕಿ ವ್ಯಾಪಾರೀಕರಣದಲ್ಲಿ ಭಾಗಿಯಾದಾಗ ಆ ಸಮುದಾಯಕ್ಕೆ ಸಿಗಬೇಕಾದ ಮಾನ್ಯತೆ/ಲಾಭ ಟ್ರಿಪ್ಸ್‌ನಲ್ಲಿ ಸೇರಿಲ್ಲ. ಇದು ಜೈವಿಕ ಒಪ್ಪಂದ ಮೂಲಕ ಬಗೆಹರಿಸಿಕೊಳ್ಳಲಾಗಿದೆ. ಏಕೆಂದರೆ ಪಾರಂಪರಿಕ ಜ್ಞಾನವು ಆಯಾ ದೇಶ ಅಥವಾ ಸ್ಥಳದ ಭೌಗೋಳಿಕ ಮಿತಿಯಲ್ಲಿ ವಿಕಾಸಗೊಂಡಿರುತ್ತವಾದ್ದರಿಂದ ಇದಕ್ಕೆ ಜೈವಿಕ ಮಹತ್ವವಿರುತ್ತದೆ. ಜೀವ ಜಗತ್ತು ಈ ಭೌಗೋಳಿಕ ಮಾಹಿತಿಯನ್ನು ಅವಲಂಬಿಸಿರುವ ಕಾರಣ, ಜೈವಿಕ ಒಪ್ಪಂದವು ಸ್ಥಳೀಯತೆಗೆ ಬೆಂಬಲವನ್ನು ಕೊಡುವುದರಿಂದ ಇಲ್ಲಿ ಅದನ್ನು ಬಳಸಬಹುದಾಗಿದೆ. ಅಂದರೆ ಆಯಾ ದೇಶದ ಜೈವಿಕ ಪರಂಪರೆಯು ಆಯಾ ದೇಶದ ಆಸ್ತಿ. ಇಂತಹ ಪರಿಸ್ಥಿತಿಯಲ್ಲಿಯೂ ಅನೇಕ ಗೊಂದಲಗಳನ್ನು ಕಾಣಬಹುದಾಗಿದೆ. ಉದಾಹರಣೆಗೆ ಅನೇಕ ಬಾರಿ ಆಯಾ ದೇಶ ಅಂದರೆ ಮೂಲ ತವರು ಎಂಬ ಅರ್ಥವೂ ಬರುವುದಲ್ಲವೆ. ಹಾಗಾಗಿ ಮೆಣಸಿನ ಕಾಯಿಯನ್ನೇ ತೆಗೆದುಕೊಂಡರೆ ಅದರ ತವರು ದಕ್ಷಿಣ ಅಮೇರಿಕಾ. ಆದರೆ ‘ಬ್ಯಾಡಗಿ’ ಮೆಣಸಿನ ಕಾಯಿಯ ಅಭಿವೃದ್ಧಿಯಾದದ್ದು ಕರ್ನಾಟಕದ ಬ್ಯಾಡಗಿ ಸುತ್ತ ಮುತ್ತಲ ರೈತರ ಅನ್ವೇಷಕ ಮನಸ್ಸಿನಿಂದ. ಹಾಗಾಗಿ ಇಂತಹ ಅರಿವಿನ ಹಕ್ಕು ಯಾರಿಗೆ ಎಂಬ ಅಂಶವು ಪ್ರಶ್ನೆಯಾದಾಗ, ನಮ್ಮದೇ ಒಂದು ಪದ್ಧತಿ ಇದ್ದರೆ ಅನುಕೂಲವಲ್ಲವೇ,-ಎನ್ನಿಸದಿರದು ಅಲ್ಲವೇ? ಹಾಗಾಗಿಯೇ ಈ ನಮ್ಮದೇ ಎನ್ನಿಸುವ ಪದ್ದತಿಗೆ ಅವಕಾಶವೀಯುವ ಪದ್ದತಿಯೇ ಸುಯಿ ಜೆನರಸ್‌” ಪದ್ದತಿ. ಸುಯಿ ಜೆನರಸ್‌” ಎಂದರೆ ನಮ್ಮದೇ ಆದ ಎಂಬ ಅರ್ಥವಿದೆ. ಇದರಲ್ಲಿ ಕೆಲವು ಸ್ಥಳೀಯವಾಗಿ ಸ್ವಾತಂತ್ರವನ್ನು ಕೊಡಲಾಗಿದೆ. ಇದೊಂದು ಎಲ್ಲರನ್ನೂ ಈ ಬೌದ್ಧಿಕ ಆಸ್ತಿ ಹಕ್ಕಿನ ಒಳಗೆ ತರುವ ಜಾಗತಿಕ ಮಾರ್ಪಡಾಗಿದೆ.

ಪೇಟೆಂಟೀಕರಣ ಎಂದಾಕ್ಷಣ ಎಲ್ಲವೂ ಗುಮಾನಿಯಿಂದ ನೋಡುವ ಜನತೆಯೇ ಹೆಚ್ಚು. ಅದರಲ್ಲೂ ಬೌದ್ಧಿಕ ಪ್ರಪಂಚ ಜನರೂ ಸಹ ಇದನ್ನು ವಿಜ್ಞಾನಿಗಳ ಹುನ್ನಾರವೆಂದೇ ಪರಿಭಾವಿಸುತ್ತಾರೆ. ಆದರೆ ವಿಜ್ಞಾನದ ಸದಾಶಯವು ಎಂದೂ ಎಲ್ಲವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರವನ್ನು ಅಪೇಕ್ಷಿಸುವುದಿಲ್ಲ. ವಿಜ್ಞಾನದ ಸಮಾಜಿಕರಣದ ಹಿನ್ನೆಲೆಯಲ್ಲಂತೂ ಇಲ್ಲಾ ಜೀವಿಗಳಿಗೂ ಸಮಾನ ಅವಕಾಶ ಕೊಟ್ಟು ಬದುಕನ್ನು ಸುಲಭಗೊಳಿಸುವ ಉತ್ತಮ ಮಾರ್ಗದ ಹುಡುಕಾಟದ ಉದ್ದೇಶವಾಗಿದೆ. ಹಾಗೆಂದೇ ಹಲವಾರು ನಿಯಮಗಳಿಂದ ಪೇಟೆಂಟೀಕರಣಗೊಳ್ಳದಂತೆಯೂ ತಡೆಯೊಡ್ಡಿದೆ.