ಯಾರು ಅರಿಯದ ನೇಗಿಲಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿ ಸುಖಕೆಳಸದೆ
ದುಡಿವನು ಗೌರವಕಾಶಿಸದೆ
ಕುವೆಂಪು
(ನೇಗಿಲಯೋಗಿ ಕವನದಿಂದ)

ಸುಮಾರು ೧೯೩೦ ರ ದಶಕದಲ್ಲೇ ರಾಷ್ಟ್ರಕವಿ ಕುವೆಂಪು ಅವರು ರೈತನನ್ನು “ನೇಗಿಲಯೋಗಿ” ಎಂದು ಕರೆದರು. ಲೋಕಕೆ ಅನ್ನವ ನೀಡುವ ಜವಾಬ್ದಾರಿ ಹೊತ್ತವನು, ಯಾವುದೇ ಹೆಸರು ಬಯಸದೆ, ಗೌರವಕ್ಕೂ ಆಶಿಸದೆ ನಿರಂತರವಾಗಿ ದುಡಿಮೆಯಲ್ಲಿದ್ದಾನೆ ಎಂಬ ಅದ್ಭುತ ಉನ್ನತ ಸಾಧಕನೆಂಬಂತೆ ಕವಿ ಚಿತ್ರಿಸಿದ್ದರು. ಕೃಷಿಕನೆಂದೂ ತನ್ನ ದುಡಿಮೆಗೆ ಹೆಸರನ್ನು ಬಯಸುತ್ತಾ ಇಲ್ಲ. ಒಳ್ಳೇ ಮಳೆ ಬಿದ್ದು ಭೂಮಿತಾಯಿ ತಂಪಾಗಿ, ಆಕೆ ನೆಮ್ಮದಿಗೊಂಡು ಫಲ ಕೊಟ್ಟರೆ ಅದನ್ನೇ ತನ್ನ ಭಾಗ್ಯವೆಂದು ಬದುಕನ್ನು ಕಂಡವನು ನಮ್ಮ ರೈತ.

೨೧ನೇ ಶತಮಾನಕ್ಕೆ ಕಾಲಿಡುತ್ತಲೇ ಬದಲಾವಣೆಯ ಬೃಹತ್‌ಗಾಳಿ ಬೀಸಿದೆ. ೧೯೩೦ರ ಆಸುಪಾಸಿನಲ್ಲಿ ನಮ್ಮ ಕೃಷಿಯು ಯಾವುದೇ ಆಧುನಿಕತೆಯತ್ತ ವಾಲಿರಲಿಲ್ಲ. ರೈತ ಯೋಗಿಯೇ ಆಗಿದ್ದುದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ. ೧೯೪೦ರ ವೇಳೆಗೆ ಕಾಲಿಟ್ಟ ರಸಗೊಬ್ಬರಗಳು ಮೊದಲ ಬಾರಿಗೆ ಬದಲಾವಣೆಯ ರುಚಿಯನ್ನು ತಂದವು. ಆಧುನಿಕತೆಯ ದಾಳಿ ಆರಂಭಗೊಂಡಿತು. ೨೦-೨೫ ವರ್ಷದಲ್ಲಿ ಅಂದರೆ ೧೯೬೦ರ ವೇಳೆಗೆ ರಸಗೊಬ್ಬರಗಳು ಪ್ರಭಾವಶಾಲಿ ಒಳಸುರಿಗಳಾಗಿ (Input) ಎಲ್ಲರೂ ಈ ರಾಸಾಯನಿಕಗಳ ಮಾಂತ್ರಿಕತೆಯ ಮೋಹಕ್ಕೆ ಒಳಗಾದವರೇ. ಹೀಗೆ ಆರಂಭಗೊಂಡ ಮಾರುಕಟ್ಟೆ ಆಧಾರಿತ ‘ಒಳಸುರಿಗಳು’ ಒಂದೊಂದಾಗಿ ಕೃಷಿಯನ್ನು ಆಕ್ರಮಿಸತೊಡಗಿದವು. ಅನಂತರ ಅಧಿಕ ಇಳುವರಿ ತಳಿಗಳು ಪ್ರಾರಂಭವಾದವು. ಈ ಹೈಬ್ರಿಡ್‌ತಳಿಗಳು ಹೆಚ್ಚು ರಸಗೊಬ್ಬರಗಳನ್ನು ಬಯಸುವ ಮೂಲಕ ಅಪಾರ ಬದಲಾವಣೆಯನ್ನು ತಂದವು.

ಹೆಚ್ಚೂ ಕಡಿಮೆ ಇಡೀ ಭಾರತೀಯ ಕೃಷಿಯು “ಮುಂಗಾರಿನ ಮಳೆಯೊಂದಿಗಿನ ಆಟ” ಎಂದೇ ಬಿಂಬಿತವಾಗಿದೆ. ಹಾಗೆಂದೇ ಮಳೆಯನ್ನು ನಂಬಿ ಬಿತ್ತುವ ಆಲೋಚನೆಯಿಂದ ಹೊರಬರಲು ನೀರಾವರಿ ಯೋಜನೆಗಳು ಬಂದವು. ಈ ಎರಡೂ ಸಂದರ್ಭಗಳಲ್ಲಿ ದೇಸೀ ಚಿಂತನಾ ಕ್ರಮವನ್ನು ತುಳಿದೇ ಈ ಆಧುನಿಕ ಕ್ರಮಗಳು ದಾಳಿ ಇಟ್ಟವು. ರಸಗೊಬ್ಬರಗಳು ನಾಡಗೊಬ್ಬರಗಳನ್ನು ಕಡೆಗಾಣಿಸಿದ್ದರೆ, ನೀರಾವರಿ ಯೋಜನೆಗಳು ಅದ್ಭುತ ದೇಸೀ ತಂತ್ರಜ್ಞಾನವಾದ ಕೆರೆಗಳನ್ನು ಹದಗೆಡಿಸಿದ್ದವು. ರಸಗೊಬ್ಬರ ನೀರು, ಹೈಬ್ರಿಡ್‌ ತಳಿಗಳು ಜತೆಗೆ ಕೀಟ ನಿಯಂತ್ರಕ ರಸೌಷಧಿಗಳು ಸೇರಿಕೊಂಡವು. ಕೃಷಿಯ ಅಭಿವೃದ್ಧಿಯನ್ನು ಹೊಸ ಹೊಸ ಒಳಸುರಿ ಅಥವಾ ಪರಿಕರಗಳನ್ನು ಸೇರಿಸುತ್ತಾ ಸಾಧಿಸಲು ಹೊರಟಂತಾಯ್ತು. ಇವೆಲ್ಲವೂ ಒಂದು ಮಾರುಕಟ್ಟೆ ಆಧಾರಿತ ಕಾರ್ಖಾನೆಗಳ, ಕಂಪನಿಗಳ ಹಿಡಿತದಲ್ಲೇ ಬೆಳೆದಿದ್ದವು. ಈಗ ಬೀಜಗಳ ಕಾರುಬಾರು. ಬದಲೀ ಬೀಜತಂತ್ರಜ್ಞಾನ, ಕುಲಾಂತರಿ ತಂತ್ರಜ್ಞಾನ ಹೆಸರಲ್ಲಿ ಹೊಸ ಆಯಾಮವೊಂದು ಸೃಷ್ಟಿಯಾಗಿದೆ. ಜಿ.ಎಂ. (Genetically Modified) ಬೆಳೆಗಳು-ಇದು ಇದರ ಹೊಸ ಸೃಷ್ಟಿ.

ಹೀಗೆ ಪ್ರತೀ ಬಾರಿಯೂ ಹೊಸತೊಂದು ಇನಪುಟ್‌ ಒಳಸುರಿ – ಅದರ ಮಾರುಕಟ್ಟೆ – ಕಂಪನಿಯ ಲಾಭ ನಷ್ಟದ ಹೊರೆ. ಹೊಸ-ಹೊಸ ಉತ್ಪನ್ನಗಳ ನಿಯಂತ್ರಿಸುವ ಆಯಾಮಗಳ ಹಿಡಿತದಲ್ಲೇ ಕೃಷಿಯ ಅಭಿವೃದ್ಧಿಯನ್ನು ಬೆಳೆಸಲಾಯಿತು. ಹಾಗಾಗಿ, ಈ ಬಳಸುವ ಉತ್ಪನ್ನಗಳು ಅನೇಕ ನವನವೀನ ಅನ್ವೇಷಣೆಯ ಫಲಗಳಾಗಿದ್ದವು. ಇವು ವಾಣಿಜ್ಯೀಕರಣಗೊಂಡ ಮೇಲೇ ಲಾಭ-ನಷ್ಟದ ಆರ್ಥಿಕ ತರ್ಕವೂ ಅದಕ್ಕೆ ಸೇರಿಕೊಂಡಿತು. ಇವಕ್ಕೆಲ್ಲಾ ವಿವಿಧ ದೇಶ ವಿದೇಶಗಳ ಬಂಡವಾಳ ಹೂಡಿ ದೇಶದಿಂದ ದೇಶಕ್ಕೆ ಸಾಗಿಸಬೇಕಾಯಿತು ಅದಕ್ಕೆಂದೇ ಅಂತರರಾಷ್ಟ್ರೀಯ ಒಪ್ಪಂದಗಳು ರೂಪುಗೊಳ್ಳಬೇಕಾಯಿತು.

ಕೃಷಿಕ ಎಂದೂ ಓದಿಕೊಂಡು ಬೆಳೆ ಪಡೆದವನಲ್ಲ. ಕೃಷಿ ಎಂದೂ ನಮ್ಮಲ್ಲಿ ಒಂದು ಉದ್ಯಮವಾಗಿರಲಿಲ್ಲ. ಅದು ಒಂದು ಜೀವನ ಕ್ರಮ, ಬದುಕಿನ ಆಶಯವುಳ್ಳ ಕಸುಬಿಗೆ ಮನುಕುಲ ಕಾಪಾಡುವ ಸದಾಶಯವಷ್ಟೇ. ಹಾಗಾಗಿ ಲಾಭ ನಷ್ಟಗಳ-ಮಾರುಕಟ್ಟೆಯ ದೇಶ ವಿದೇಶಗಳ ಬಂಡವಾಳ ಇತ್ಯಾದಿಗಳ ಕಾಯ್ದುಕೊಳ್ಳಬೇಕಾದ ಚಿಂತೆ ಇರಲಿಲ್ಲ. ಆದರೆ ಇಂದು ಅವೆಲ್ಲಾ ಸೇರಿಕೊಂಡಿವೆ. ಹಾಗೆಂದು ರೈತರೆಂದೂ ಭಯಪಡುವ ಅಗತ್ಯವಿಲ್ಲ. ಇಂದು ಜೀವವಿಜ್ಞಾನ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ನಿಯಮಗಳು ರೀತಿ ರಿವಾಜುಗಳು ಹುಟ್ಟಿಕೊಂಡಿವೆ. ಅನ್ವೇಷಕರು ಪ್ರತಿಭೆಯಿಂದ ಸಂಶೋಧಿಸಿದ ಉತ್ಪನ್ನಕ್ಕೆ ಅದರ ಫಲದ ಆಸಕ್ತಿ ಮತ್ತು ಲಾಭದ ದೆಸೆಯಿಂದ ಬದಲಾಗಿದೆ ಅಷ್ಟೆ. ಆದರೆ ಇದೆಂದೂ ಈಗಿರುವ ರೈತನ ಸಾಮಾನ್ಯ ಜೀವನಕ್ಕೆ ಮಹತ್ತರವಾದ ಪರಿಣಾಮಬೀರದು. ಬದಲಾವಣೆಯ ಪರ-ವಿರೋಧ ಎರಡರಲ್ಲೂ ಅಂತರರಾಷ್ಟ್ರೀಯ ಹಿತಾಸಕ್ತಿಗಳು ರೈತನನ್ನು ಗೊಂದಲದಲ್ಲಿ ಇಡಲು ಪ್ರಯತ್ನಿಸುತ್ತಿವೆ. ಸಾಮಾನ್ಯ ರೈತನಿಂದು ಕಂಗೆಡದೆ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಜಾಗೃತನಾಗಬೇಕಿದೆ.

ಹಿಂದೊಮ್ಮೆ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಕೇವಲ ಇಂಜಿನಿಯರಿಂಗ್‌ ಉತ್ಪನ್ನಗಳಿಗೆ ಒಗ್ಗಿಕೊಂಡಿದ್ದ ನಾವು ಈಗ ಜೈವಿಕ ಉತ್ಪನ್ನಗಳ ಮೇಲಿನ ಪರಿಣಾಮವನ್ನೂ ನೋಡಬೇಕಿದೆ. ಆದರೆ ಪ್ರಸ್ತುತ ವಾಸ್ತವ ಸ್ಥಿತಿಯ ಮೇಲಿನ ಪರಿಣಾಮವೂ ಮುಖ್ಯವಾಗಿದೆ. ಇದನ್ನೆಲ್ಲಾ ವಿವರವಾಗಿ ತಿಳಿಯಲೆಂದೇ ಮುಂದಿನ ಪುಟಗಳಲ್ಲಿ ವಿಷದವಾಗಿ ಪ್ರಸ್ತಾಪಿಸಲಾಗಿದೆ. ನೇರವಾಗಿ ಇಂದು ರೈತರನ್ನು ಕಾಡುತ್ತಿರುವ, ಎಲ್ಲಾ ಮಾಧ್ಯಮಗಳೂ, ರೈತಸಂಘಟನೆಗಳೂ, ಕಾರ್ಯಕರ್ತರೂ ಬಿಂಬಿಸುತ್ತಿರುವುದು ಹೊಸ ‘ಬೀಜ ಮಸೂದೆ’. ‘ಬೀಜ’ ಒಂದು ಹೊಸ ಹಿಡಿತವಷ್ಟೆ. ರಸಗೊಬ್ಬರದಿಂದ ಆರಂಭಗೊಂಡ ಈ ಮಾದರಿ ಹಿಡಿತಗಳು ರೈತರಿಗೇನೂ ಹೊಸದಲ್ಲ. ಈಗಿರುವ ಕ್ರಮದಂತೆ ಉತ್ತಿ, ಬಿತ್ತಿ, ಬೆಳೆದು, ಉಂಡು, ಮಾರಿ ಬದುಕಲು ಯಾವ ನಿಯಮಾವಳಿಗಳೂ ಏನು ಮಾಡಲೂ ಸಾಧ್ಯವಿಲ್ಲ. ಇದಕ್ಕೆಲ್ಲಾ ಸಂಪೂರ್ಣವಾಗಿ ಸಮಾಧಾನಕರ ಮಾಹಿತಿಯನ್ನು ಒದಗಿಸುವುದೇ ಇಲ್ಲಿನ ಟಿಪ್ಪಣಿಗಳ ಉದ್ದೇಶ.