ನಮ್ಮ ಅರಿವಿನ ಪರಂಪರೆಯು, ನಮ್ಮ ಜೀವನದಷ್ಟೇ ಹಳೆಯದು. ಅರಿವು, ತಿಳಿವಳಿಕೆ ಅಥವಾ ಜ್ಞಾನದ ಇತಿಹಾಸವು ಮನುಕುಲದ ಇತಿಹಾಸದೊಡನೆ ಬೆಸೆದುಕೊಂಡಿದೆ. ಆದರೆ ಅದರ ಮೇಲಿನ ಆಸಕ್ತಿ ಮಾತ್ರ ಆಧುನಿಕ ಜಗತ್ತಿಗೆ ತಳುಕು ಹಾಕಿಕೊಂಡಿದೆ. ಅನಾದಿ ಕಾಲದಿಂದಲೂ ಮಾನವರು, ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ತಮ್ಮ ಪರಿಸರ, ಜೀವನಾಭವ ಹಾಗೂ ಇತರೆ ಪೂರಕ ಮಾಹಿತಿಯನ್ನು ಅವಲಂಬಿಸಿರುತ್ತಾರೆ. ಬದುಕನ್ನು ಸುಗಮವಾಗಿಸಲು ಬೇಕಾದ ಎಲ್ಲಾ ಪರಿಕರಗಳನ್ನು ಹೊಂಚಿಕೊಳ್ಳಲು ಸೃಜನಶೀಲರಾಗಿ ವಿಕಾಸಗೊಳ್ಳುತ್ತಾ ರೂಪುಗೊಂಡಿದ್ದಾರೆ. ಬದುಕು ನಿರಂತರವಾದ ಹಾಗೂ ಚಲನಶೀಲವಾದ ಪ್ರಕ್ರಿಯೆ. ಹಾಗಾಗಿ ನಿತ್ಯ ಒಂದಿಲ್ಲೊಂದು ಹೊಸತನಕ್ಕೆ ಹಾತೊರೆಯುವುದು ಸಹಜವಾದದ್ದು. ಆದ್ದರಿಂದ ದಿನದಿಂದ ದಿನಕ್ಕೆ ಹೊಸ ಅನುಭವಗಳು ಸೇರಿಕೊಳ್ಳುತ್ತಾ, ಅನುಭವಗಳ ಮಾಹಿತಿಗಳು ಗಟ್ಟಿಯಾಗಿ, ಪಕ್ವಗೊಂಡು ಅರಿವಿನ ರೂಪ ತಾಳುತ್ತವೆ. ಇವು ನಿತ್ಯ ನಿರಂತರ ಹುಡುಕಾಟದ ಕಾರಣದಿಂದಾಗಿ ತಮ್ಮ ಬದುಕಿನಲ್ಲಿ ಆಸಕ್ತಿ ಕುತೂಹಲ ಹಾಗೂ ನಿರೀಕ್ಷೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ವಿಸ್ತಾರಗೊಳ್ಳುತ್ತಾ ಬಂದಿವೆ. ಪರಿಣಾಮವಾಗಿ ಹೊಸ, ಹೊಸ ಪರಿಜ್ಞಾನಗಳು, ಅವುಗಳ ಪರಿಧಿಗಳೂ ಹುಟ್ಟುತ್ತಾ ವಿಸ್ತಾರವಾಗುತ್ತಾ ಸಾಗುತ್ತಿವೆ.

ಅರಿವು, ತಿಳಿವಳಿಕೆ ಅಥವಾ ಜ್ಞಾನ ಎನ್ನುವುದು ಪ್ರಪಂಚದ ಆಗುಹೋಗುಗಳ, ನೈಸರ್ಗಿಕ ಪ್ರಕ್ರಿಯೆಗಳ ಕಾರ್ಯವೈಖರಿಗಳ ಮಾದರಿಗಳು ಮತ್ತು ಇವುಗಳೆಲ್ಲವುಗಳ ನಿರೂಪಗಳ ಸಾರ. ಸಕಲ ಜೀವ ರಾಶಿಗಳ ಬದುಕೂ ಒಂದು ನಿತ್ಯ ಹುಡುಕಾಟದ ಜೀವನ. ಮಾನವರ ಜೀವನವಂತೂ ನಿತ್ಯ ನಿರಮತರವಾದ ಹುಡುಕಾಟದ, ಚಲನಶೀಲವಾದ ಹಾದಿ. ಜೀವನದ ಅವಶ್ಯಕತೆಗಳಿಗೆ ಸರಳಮಾರ್ಗಗಳ ಅನ್ವೇಷಣೆಗಳೆಲ್ಲವೂ ಹುಡುಕಾಟದ ಭಾಗವೇ ಆಗಿವೆ. ನಮ್ಮೆಲ್ಲಾ ಸಮಾಜಗಳು ಈ ಅನ್ವೇಷಣೆಯನ್ನು ಅವಲಂಬಿಸಿಯೇ ವಿಕಾಸಗೊಂಡಿವೆ. ಚರಿತ್ರೆಯ ಪೂರ್ವದ ಸಮಾಜವಾಗಲಿ, ಆಧುನಿಕ ವೈಜ್ಞಾನಿಕ ಸಮಾಜವಾಗಲಿ, ಎಲ್ಲಾ ಸಂದರ್ಭಗಳಲ್ಲೂ ಈ ನೈಸರ್ಗಿಕ ಜಗತ್ತಿನ ವರ್ತನೆಯನ್ನು ಅರಿಯುವ ಮತ್ತು ಆ ಮೂಲಕ ಬದುಕಿನ ಪರಿಸರವನ್ನು ಉತ್ತಮಗೊಳಿಸುವ ಪ್ರಯತ್ನಗಳು ನಡೆಯುತ್ತಾ ಬಂದಿವೆ.

ಬದುಕನ್ನು ಉತ್ತಮಗೊಳಿಸುವ ಪ್ರಯತ್ನದ ಫಲವಾಗಿಯೇ ಹೊಸ ಹೊಸ ಪರಿಜ್ಞಾನಗಳು ಹುಟ್ಟಿಕೊಂಡವು. ಮಾನವರ ಸಂಸ್ಕೃತಿ, ನಾಗರಿಕತೆಗಳ ವಿಕಾಸದ ಹಂತಗಳನ್ನು ಇಂತಹ ಪರಿಜ್ಞಾನಗಳ ಮೂಲಕವೇ ಗುರುತಿಸಲಾಗುವುದು. ಜ್ಞಾನ ವಿಸ್ತರಣೆಯು ನಿರೀಕ್ಷೆ ಮೀರಿ ಬೆಳೆಯುತ್ತಾ ಬಂದಿದೆ. ಹಿಂದೊಮ್ಮೆ ಮನುಷ್ಯ ಸಂಪೂರ್ಣ ಅಲೆಮಾರಿಯಾಗಿದ್ದಾಗ ಆತನ ಬದುಕಿನ ಕಾಳಜಿ, ಮುಂದಿನ ಒಂದು ಹೊತ್ತಿನ ಕೂಳಿನ ಚಿಂತೆಯಷ್ಟೇ ಆಗಿತ್ತು. ಹಾಗಾಗಿ ನಿರೀಕ್ಷೆಗಳು ಮಿತಿಯಲ್ಲಿರುತ್ತಿದ್ದವು. ನೆಲೆನಿಂತ ಮಾನವನು ಪರಿಸರವನ್ನು ತನ್ನ ಹಿಡಿತಕ್ಕೆ ಆಳ್ವಿಕೆಗೆ ಕೈಗೆತ್ತಿಕೊಂಡ ಮೇಲೆ ಎಲ್ಲಾ ನಿರೀಕ್ಷೆಗಳು ಬದಲಾದವು. ಚಿಂತೆಗಳೂ ದೀರ್ಘಕಾಲಿಕ ಅವಶ್ಯಕತೆಗಳ ಮೇಲೆ ಅವಲಂಬಿತವಾದವು. ಜ್ಞಾನ ವಿಸ್ತರಣೆಯಾದಂತೆ ಬದುಕಿನ ರೀತಿ ನೀತಿಗಳು ಬದಲಾಗುತ್ತಾ ಸಾಗಿವೆ. ಮಾನವನನ್ನು ಈಗಿನ ಆಧುನಿಕ ವಿಜ್ಞಾನದ ಹಂತಕ್ಕೆ ತಲುಪಿಸಿದ ಹಾದಿ ತುಂಬಾ ವಿಶಾಲವಾದದ್ದು ಮತ್ತು ದೀರ್ಘವಾದದ್ದು. ಅವುಗಳ ಬೆಳವಣಿಗೆಯ ಚಲನಶೀಲವಾದ ಹಂತಗಳು ವಿವಿಧ ಬಗೆಯವು. ಈ ದೀರ್ಘವಾದ ಹಾಗೂ ವಿಶಾಲವಾದ ಹಾದಿಯಲ್ಲಿ ಅನೇಕಾನೇಕ ಮನಸ್ಸುಗಳ ಸ್ಪಂದನವಿದೆ. ಚಿಂತನೆಯಿದೆ. ಒಂದರಿಂದ ಇನ್ನೊಂದು ಎಂಬಂತೆ ಹಂತಹಂತವಾಗಿ ರೂಪುಗೊಂಡ ಜ್ಞಾನದ ಪರಂಪರೆಯನ್ನು ವಿಕಾಸಕ್ರಮದಲ್ಲಿ ಗುರುತಿಸುವುದು ಮಾನವನ ಸಂಸ್ಕೃತಿಯ ಇತಿಹಾಸದ ಪರಂಪರೆಯ ಅಧ್ಯಯನವೂ ಆಗಿರುತ್ತದೆ. ಒಂದು ಸಂಸ್ಕೃತಿಯು ರೂಪುಗೊಳ್ಳುವುದು ಎಂದರೆ ಮಾನವನ ಜ್ಞಾನವನ್ನು ವಿವಿಧ ಹಂತಗಳಲ್ಲಿ ಬಳಸಿಕೊಂಡ ಕ್ರಮವನ್ನು ಗುರುತಿಸುವುದು ಎಂದು ಅರ್ಥ. ಈ ಹಿನ್ನೆಲೆಯಲ್ಲಿ ನೋಡಿದರೆ ಸಂಸ್ಕೃತಿಗಳ ವಿಕಾಸದ ಹಾದಿಯಲ್ಲಿ ಮಾನವರು ಬದುಕಿನ ವಿವಿಧ ಹಂತಗಳಲ್ಲಿ ರೂಪಿಸಿಕೊಂಡ ಬಗೆಬಗೆಯ ಜೀವನ ವಿಧಾನಗಳು, ಸೌಕರ್ಯಗಳು ಹಾಗೂ ಎದುರಾದ ಸಮಸ್ಯೆಗಳಿಗೆ ಕಂಡುಕೊಂಡ ಪರಿಹಾರಗಳನ್ನು ಜ್ಞಾನದ ಪರಂಪರೆಯಾಗಿ ಗುರುತಿಸಬಹುದು. ಈ ಜ್ಞಾನದ ಪರಂಪರೆಯು ಅನೇಕ ಆಯಾಮಗಳನ್ನೊಳಗೊಂಡಿದ್ದು, ತಲೆಮಾರುಗಳಲ್ಲಿ ಮುಂದುವರೆಯುತ್ತಾ, ಬದಲಾಗುತ್ತಾ ವಿಸ್ತಾರವಾಗುತ್ತಾ ಬಂದಿದೆ. ಜೀವನದ ಅನಿವಾರ್ಯ ಸನ್ನಿವೇಶಗಳು ಜ್ಞಾನದ ಅರಿವಿನ ವಿಕಾಸದ ನೆಲೆಯನ್ನು ಕಟ್ಟಿಕೊಟ್ಟಿವೆ. ಈ ಅರಿವಿನೊಂದಿಗೆ ಮಾನವರು ಬದುಕಿದ ನೆಲೆ, ನೀರು ಗಾಳಿ, ಭೌಗೋಳಿಕ ಪರಿಸರ, ಹವಾಮಾನ ಎಲ್ಲವೂ ಮಿಳಿತವಾಗಿವೆ. ಇಂತಹ ಅರಿವಿನ ವ್ಯಾಪ್ತಿಯು ತುಂಬಾ ವಿಸ್ತಾರವಾದದ್ದು. ತಮ್ಮ ದೈನಂದಿನ ಆಹಾರದ ಹುಡುಕಾಟ, ಪೂರೈಕೆಯಿಂದ ಆರಂಭಗೊಂಡದ್ದು, ನಮ್ಮ ವಾಸಿಸುವ ಮನೆ ಸಂಚಾರಕ್ಕೆ ಬಳಸುವ ಬಂಡಿ-ವಾಹನಗಳು, ಸಂಪರ್ಕ ಸಾಧನಗಳು, ಅನೇಕಾನೇಕ ನಿತ್ಯೋಪಯೋಗಿ ಸಾಧನಗಳು ಇವೇ ಮುಂತಾಗಿ ಸೇರಿಕೊಂಡಿವೆ. ಅಂದರೆ ಮಾನವನು ಸಮಾಜಮುಖಿಯಾದಾಗಿನಿಂದ ಅನೇಕ ಅನ್ವೇಷಣೆಗಳನ್ನು ಮಾಡಿ ನಿಸರ್ಗದಲ್ಲಿ ತನ್ನ ಜಾಣತನದಿಂದ ಪ್ರಭುತ್ವವನ್ನು ಸಾಧಿಸಹೊರಟಿದ್ದಾನೆ. ಅಂದರೆ ತನ್ನದೊಂದು ಜಾಣತನದಿಂದ ಬದುಕಬೇಕೆಂದು ಅದಕ್ಕೆ ಬೇಕಾದ ತಯಾರಿ, ಅದರಿಂದ ಪಡೆವ ಲಾಭ ಎಲ್ಲವನ್ನು ಈ ಜಾಣತನ ಅಥವಾ ಅರಿವಿನ ಪರಿಧಿಯಲ್ಲೇ ಯೋಚಿಸತೊಡಗಿದ್ದಾನೆ.

ಪ್ರಾಣಿವರ್ಗದಲ್ಲೇ ತೀರ ಭಿನ್ನವಾದ ಬದುಕು ಮಾನವರದ್ದು. ಆಲೋಚನೆ, ಚಿಂತನಾಕ್ರಮ, ತರ್ಕಶಕ್ತಿ, ಇತ್ಯಾದಿಗಳು ಮಾನವರನ್ನು ಮೇಲ್ಪಂಕ್ತಿಯಲ್ಲಿಟ್ಟಿವೆ. ಇದೇ ಆತನ ಹೆಚ್ಚುಗಾರಿಕೆಗೂ ಅವಕಾಶವಿತ್ತಿದೆ. ಈ ಅರಿವನ್ನು ಉಪಾಯದಿಂದ ತನ್ನ ಲಾಭಕ್ಕೆ, ಉಪಯೋಗಕ್ಕೆ ದೂರಾಲೋಚನೆಗೆ ಬಳಸುವುದನ್ನು ಬಹು ಹಿಂದಿನಿಂದಲೇ ಮಾನವರು ಕಲಿತಿದ್ದಾರೆ. ಅರಿವಿನ ವಿಕಾಸಕ್ಕೆ ಆಲೋಚನೆ, ಕಲಿಕೆ ಮತ್ತು ಕಾಲದ ಆಯಾಮಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಅರಿವು, ಕಲಿಕೆ ಮತ್ತು ಕಾಲ

ಕಲಿಕೆಯು ಜೀವಜಗತ್ತಿನ ಅದ್ಭುತ ನಡವಳಿಕೆ. ಇದೇ ಅರಿವಿನ ಮೂಲ. ನಿರಂತರ ಕಲಿಕಾ ಕ್ರಮ ಕಾಲದೊಂದಿಗೆ ಬೆಸೆದು, ಅನುಭವವು ಪಕ್ವಗೊಂಡಾಗ ಅರಿವು-ಜ್ಞಾನ ವಿಕಾಸಗೊಳ್ಳುತ್ತಾ ಹೆಚ್ಚುತ್ತದೆ. ಕಲಿಯುವ ದೃಷ್ಟಿಯಲ್ಲಿ ಮಗುವಿನಂತಿರಬೇಕುಎಂಬ ಮಾತಿದೆ. ಅಂದರೆ ಬೆಳೆಯುವ ಮಗು ತನ್ನ ಬೆಳವಣಿಗೆಯ ಜತೆಗೆ ಕಲಿಯುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಇದೇ ಅದರ ಬದುಕಿನ ಆಧಾರ. ಎಲ್ಲ ಪ್ರಾಣಿಗಳೂ ಅಷ್ಟೆ, ತಾಯಿಯ ಆರೈಕೆಯಿಂದ ಸ್ವತಂತ್ರ ಬದುಕಿಗೆ ಬೇಕಾದ ಅರಿವನ್ನು/ತಿಳಿವನ್ನು ಕಲಿಯುವಲ್ಲಿ ಆಸಕ್ತಿಯುಳ್ಳವಾಗೇ ಇರುತ್ತವೆ. ಈ ನಿಸರ್ಗದ ನಿಯಮ ಅರಿವಿನ ಪರಂಪರೆಯನ್ನು ಗಟ್ಟಿಗೊಳಿಸುತ್ತಾ ಬಂದಿದೆ.

ಇದರಿಂದ ಕಲಿಯುವ ಕಾಲವನ್ನು ಅರಿವನ್ನು ಪಡೆದು ಪಕ್ವಗೊಳಿಸುವ ಕಾಲವೆಂದೇ ಗುರುತಿಸಲಾಗಿದೆ. ಇದೇ ಜಾಣ್ಮೆಯನ್ನು ಪಡೆಯುವ ಕಾಲವಾಗಿರುವುದು. ಇಂತಹದ್ದೊಂದು ವ್ಯವಸ್ಥೆ ಪೂರ್ವದಿಂದಲೂ ಸೃಷ್ಟಿಯಾಗಿದೆ. ನಿಸರ್ಗದ ಆಗುಹೋಗುಗಳಲ್ಲಿ ಆಸಕ್ತನಾಗಿರುವ ಮಾನವ ಅಂತಹ ಆಸಕ್ತಿಯನ್ನು ನಿರಂತರಗೊಳಿಸುವ ಕ್ರಮವನ್ನೂ ಹುಟ್ಟಿಹಾಕಿದ್ದಾನೆ. ಇದರಲ್ಲಿ ಗ್ರೀಕರು, ವೇದಕಾಲದ ಜನರು, ಚೀನಿಯರು ಆರಂಭಿಕ ಹಂತಗಳನ್ನು ಪ್ರಾರಂಭಿಸಿದ್ದಾರೆ. ಸಮಾಜಮುಖಿಯಾದ ಮಾನವರು, ಕಲಿಕೆಯ ನಿರಮತರ ಕ್ರಮವನ್ನು ಇಂದಿನ ವೃತ್ತಿಪರ ಅಧ್ಯಯನದೊಳಗೂ ಬೆಳೆಸಿಕೊಂಡು ಬಂದಿರುವರು. ಇವೆಲ್ಲವುದರ ಹಿನ್ನೆಲೆಯು ಜಾಣತನವನ್ನು ಬದುಕಿನ ಶ್ರೇಯಸ್ಸಿಗೆ ಬಳಸುವುದೇ ಆಗಿದೆ. ಆದರೆ ಯಾವ ಯಾವ ಅರಿವಿಗೆ ಸಮಾಜ ಎಷ್ಟೆಷ್ಟು ಮಹತ್ವ ಕೊಟ್ಟಿದೆ ಅನ್ನುವುದು ಪ್ರತ್ಯೇಕ ಚರ್ಚೆಯ ವಿಷಯ. ಆಧುನಿಕ ಜಗತ್ತು, ಅರಿಸ್ಟಾಟಲ್‌ನ ಕಾಲದಿಂದಲೂ ಬೆಳೆಯತೊಡಗಿ ನಡೆಸಿದ ನಿರಂತರ ಅನ್ವೇಷಣೆಗಳು ಹೆಚ್ಚಿನ ಅರಿವಿಗೆ ಕಾರಣವಾಗಿವೆ. ನಾವು ಅನೇಕ ಬಗೆಯ ತಂತ್ರಜ್ಞಾನಗಳೊಂದಿಗೆ ಇಪ್ಪತ್ತನೆಯ ಶತಮಾನದ ಅಂತ್ಯವನ್ನು ತಲುಪಿದರೂ, ನಮ್ಮನ್ನು ಸುಮಾರು ಏಳು ವಿವಿಧ ಪ್ರಶ್ನೆಗಳು ಕಾಡುತ್ತವೆ ಎಂಬುದು ವಿಜ್ಞಾನಿಗಳ ಅಭಿಮತ, ಇವುಗಳಿಗಾಗಿ ಅವನ ಹುಡುಕಾಟ ಅನಿವಾರ್ಯ ಹಾಗೂ ನಿರಂತರವಾಗಿರುತ್ತದೆ- ವಾಸಸ್ಥಳ, ನೀರು, ಆಹಾರ, ಹವಾಮಾನ, ಶಕ್ತಿ, ಖನಿಜಗಳು ಮತ್ತು ಜ್ಞಾನ. ಜ್ಞಾನ ಅಥವಾ ಅರಿವು ಮಾನವನ ನಿರಂತರ ಹುಡುಕಾಟದಲ್ಲಿ ಒಂದು. ಇದು ಅನ್ವೇಷಣೆಗಳ ರೂಪದಲ್ಲಿ ಜಗತ್ತಿಗೆ ಅರುಹಲ್ಪಡುತ್ತವೆ. ಹಾಗೆಯೇ ಈ ಅನ್ವೇಷಣೆಗಳು ನೆಲ, ಸಂಪರ್ಕ, ಸಂಚಾರ ಸಾಧನಗಳು, ಆರೋಗ್ಯ, ಆಹಾರದ ಉತ್ಪಾದನೆ, ಅಷ್ಟೇಕ ತಮ್ಮ ಆಳ್ವಿಕೆಯ ವಿಸ್ತಾರಕ್ಕೆ ಸಹಾಯಕವಾಗುವ ಯುದ್ಧೋಪಕರಣಗಳು ಎಲ್ಲವನ್ನೂ ಒಳಗೊಂಡಿವೆ. ಕೇವಲ ನಿಸರ್ಗ ಸಾಮಾನ್ಯ ಹಗಲು-ರಾತ್ರಿ, ಚಂದ್ರನ ವೃದ್ಧಿ ಕ್ಷಯಗಳು, ವಿವಿಧ ಆಕಾರದ ನಕ್ಷತ್ರಪುಂಜಗಳು, ಮಳೆ-ಬಿಸಿಲು, ಹವಾಮಾನದ ವೈಪರೀತ್ಯಗಳು, ಜೀವಿಯ ಸಂತಾನ ಆರೈಕೆ ಇತ್ಯಾದಿ ಕುತೂಹಲಗಳ ಅರಿವಿನ ಹವ್ಯಾಸದಲ್ಲಿ ಆರಂಭಗೊಂಡ ಅರಿವಿನ ಹುಡುಕಾಟ ಇಂದು ಅರಿವಿನ ಮಾಹಿತಿಯ ಮಹಾಪೂರದ ಅಂತರ್ಜಾಲದ ಸಾಗರವನ್ನೇ ಸೃಷ್ಟಿಸಿದೆ. ಇದನ್ನು ಆಧುನಿಕ ವಿಜ್ಞಾನದ ಹೆಸರಿನಲ್ಲಿ – ಕಲಿಯುವ ಹೊಸ ಮಾರ್ಗವನ್ನೇ, ಆ ಮೂಲಕ ಅರಿವಿನ ಹೊಸ ರೂಪವನ್ನೇ – ಮಾನವರು ಕಂಡುಕೊಂಡಿದ್ದಾರೆ.

ಎಲ್ಲಾ ಸಮಾಜಗಳಲ್ಲೂ ತಿಳುವಳಿಕೆಯು ಶ್ರೇಷ್ಠತೆಯ ಸಂಕೇತವಾಗಿ ಗುರುತಿಸಲಾಗಿದೆ. ಒಂದು ಸಮಾಜ ಅಥವಾ ಸಮುದಾಯದಲ್ಲಿ ತಿಳುವಳಿಕೆಯುಳ್ಳವರು ಅಂದರೆ ಅವರನ್ನು ಜನರು ಮಾನ್ಯ ಮಾಡುವ ಕ್ರಮವೇ ಭಿನ್ನವಾದದ್ದು. ಇದು ಕೇವಲ ಇಂದಿನ ಆಧುನಿಕ ವಿದ್ಯಾಭ್ಯಾಸದಿಂದ ಗುರುತಿಸುವ ಮಾದರಿಯಷ್ಟೇ ಅಲ್ಲ. ಹಿಂದಿನ ಸಮುದಾಯಗಳು, ವೈದ್ಯರನ್ನು, ಕೃಷಿ ಪಂಡಿತರನ್ನು, ಬೀಜ ಬಿತ್ತುವ, ಆರಿಸುವ ಕಲೆಯುಳ್ಳವರನ್ನು, ಕಲೆಗಾರರನ್ನು ವಿಧ ವಿಧವಾಗಿ ಗೌರವದ ಸಂಕೇತವಾಗಿ ಕಾಣುತಿದ್ದುದಕ್ಕೆ ಹಲವಾರು ಉದಾಹರಣೆಗಳು ಕಾಣಬರುತ್ತವೆ. ಆದರೆ ಈ ಜಾಣ್ಮೆಗೆ ಅಕ್ಷರ ಮಾಧ್ಯಮವನ್ನು ಒದಗಿಸಿದ್ದು ಬೌದ್ಧಿಕ ಜಗತ್ತಿಗೆ ಕೊಟ್ಟ ಮೊದಲ ಹೆಗ್ಗುರುತು. ಅನೇಕ ಜಾಣತನದ ಕ್ರಮಗಳು ಅಕ್ಷರ ಮಾಧ್ಯಮವನ್ನು ತಲುಪದೆ ಕೇವಲ ಸಂಪ್ರದಾಯದಲ್ಲೇ ಉಳಿದದ್ದೂ ಇವೆ. ನಂತರದ ಆಯಾಮಗಳು ಅಕ್ಷರ ಮಾಧ್ಯಮದಿಂದ ಮತ್ತಷ್ಟು ಗಟ್ಟಿಗೊಳಿಸುತ್ತಾ ಅರಿವಿನ ಪರಂಪರೆಯನ್ನು ವಿಸ್ತಾರಗೊಳಿಸಿದವು. ಒಬ್ಬ ಕವಿ ರಚಿಸಿದ ಕಾವ್ಯ ಆತನ ಹೆಸರಲ್ಲೇ ಹಾಡುವ, ಕೇಳುವ ಆ ಮೂಲಕ ಗೌರವ ಅರ್ಪಿಸುವ ಸಾಮಾನ್ಯ ಪರಿಪಾಠ ಇಂದು ಬೃಹದಾಕಾರವಾಗಿ ಬೆಳೆದು ಬೌದ್ಧಿಕ ಆಸ್ತಿಗೆ ಬುನಾದಿ ಹಾಕಿದೆ.

ಅರಿವು ಮತ್ತು ಲಾಭದ ಉದ್ದೇಶವು ಮುಖ್ಯವಾದಾಗ ಇದು ಆರ್ಥಿಕ ನಿಲುವುಗಳ ಮತ್ತು ಅವನ್ನು ನಿರ್ದೇಶಿಸುವ ಕಾನೂನುಗಳ ಆಯಾಮವನ್ನೂ ಒಳಗೊಂಡಿರುತ್ತವೆ. ಮಹಾಯುದ್ಧದ ಬೆಳವಣಿಗೆಗಳಿಂದ ಅನಂತರ ಹೊಸ ಬಗೆಯ ತಿಳುವಳಿಕೆಯು ಮತ್ತು ಅದರಿಂದ ಆರ್ಥಿಕ ಲಾಭದ ಚಿಂತನೆಯು ಆರಂಭವಾದವು. ಎರಡೂ ಮಹಾಯುದ್ಧಗಳ ನಂತರ ಎಲ್ಲಾ ಆರೋಪ್ಯ ದೇಶಗಳನ್ನು ಆರ್ಥಿಕ ದುರ್ಬಲತೆಯು ಚಿಂತೆಗೀಡುಮಾಡಿತು. ಅಲ್ಲಿನ ಹವಾಮಾನ ವೈಪರೀತ್ಯವೂ ಜೈವಿಕ ಲಾಭಗಳನ್ನು ಪ್ರಮುಖವಾಗಿ ಅವಲೋಕಿಸುವಂತೆ ಪ್ರೇರೇಪಿಸಿವೆ. ಇದರಿಂದಾಗಿ ಹೊಸ ಬಗೆಯ ಚರ್ಚೆ, ಚಿಂತನೆ ಆರಂಭವಾದವು. ವಿಜ್ಞಾನದ ಆಸಕ್ತಿ ಮತ್ತು ಸಾಧ್ಯತೆಗಳು ಜೀವ ಜಗತ್ತನ್ನು ಆಕ್ರಮಿಸಿಕೊಂಡವು. ಅಲ್ಲಿನ ಉತ್ಸಾಹ ಮತ್ತು ಫಲಿತಾಂಶಗಳು ಚೈತ್ನಯ ತುಂಬಿದವು. ಜತೆಗೆ ಸಾಕಷ್ಟು ಗೊಂದಲವನ್ನೂ ತಂದೊಡ್ಡಿದವು. ಜೈವಿಕ ಪರಂಪರೆಯ ಅರಿವು ಇಡೀ ಮನುಕುಲದ ಏಳಿಗೆಗೆ ಎನ್ನುವ ವಿಷಯದಲ್ಲೂ ಹೊಸಗಾಳಿ ಬೀಸತೊಡಗಿತು. ಇಲೆಕ್ಟ್ರಾನಿಕ್‌ಮಾಧ್ಯಮದ ಕ್ರಾಂತಿ ಸಂಪರ್ಕದ ಸಾಧ್ಯತೆಯನ್ನು, ಗಣಕೀಕರಣವು ಎಣಿಕೆಯ ವೇಗವನ್ನೂ ಹೆಚ್ಚಿಸಿದವು. ಮಾಹಿತಿಯು ಪ್ರಬಲ ಅಸ್ತ್ರವಾಗಿ ಹೆಮ್ಮರವಾಗಿ ಬೆಳೆಯಿತು. ಮಾಹಿತಿಯ ಸಂಗ್ರಹ ಮತ್ತು ಪುನಃ ಪಡೆಯುವಿಕೆಯು ವಿಶ್ಲೇಷಣೆಯ ವೇಗವನ್ನು ಹೆಚ್ಚಿಸಿ ಕಾರ್ಯ ಕ್ಷಮತೆಯನ್ನು ಊಹೆಗೂ ಮೀರಿ ಪಡೆಯುವಂತಾಯಿತು. ಒಂದು ಕಾಲದಲ್ಲಿ ವೇದೋಪನಿಷತ್ತುಗಳ ಬಾಯಿಪಾಠ ಹಲವು ಸ್ತೋತ್ರಗಳ ಪಾಂಡಿತ್ಯ ಸಾಮಾಜಿಕ ಹೆಚ್ಚುಗಾರಿಕೆಯಾಗಿತ್ತು. ಈಗ ಮಾಹಿತಿಯ ಜಾಲ ಜಗತ್ತನ್ನು ಕಿರಿದಾಗಿಸಿ ಕೈಬೆರಳಿಗೆ ಎಟಕುವಂತೆ ಸಾಧ್ಯವಾಗಿಸಿವೆ. ಈಗ ಪರಿಸ್ಥಿತಿ ಬದಲಾಗಿದೆ. “ಮಾಹಿತಿಯನ್ನು ಪಡೆಯುವ ಹಕ್ಕು” ಜಾರಿಗೆ ಬಂದಿದೆ. ಇಂತಹ ಬೃಹತ್‌ಅಂತರವುಳ್ಳ ಪರಿಸ್ಥಿತಿಯನ್ನು ಸೃಷ್ಟಿಸಿದ ಜ್ಞಾನವು ಅತ್ಯಂತ ಜನಪ್ರಿಯ ಚರ್ಚೆಯೂ ಆಗಿದೆ. ಏಕೆಂದರೆ ವಿಜ್ಞಾನವು ಮೊದಲಿಂದಲೂ ಪರಿಣಿತರ ಮಾತು. ಅವರಲ್ಲೇ ಚರ್ಚಿತವಾಗುವ ವಿಚಾರವೆಂಬ ಅಪವಾದವಿದೆ. ಆದರೆ ತಂತ್ರಜ್ಞಾನವಾಗಿ ಅದರ ಜನಪ್ರಿಯತೆ ಎಲ್ಲಾ ಬಳಕೆದಾರರನ್ನು ಬೆಳಗಾಗುವುದರೊಳಗೆ ಆಕ್ರಮಿಸಿಬಿಡುತ್ತದೆ. ತಂತ್ರಜ್ಞಾನವೆಂದೊಡನೆ ಅದನ್ನು ಉತ್ಪಾದಿಸುವ ಕಂಪನಿಯು ಪ್ರಮುಖವಾಗುತ್ತದೆ. ಅದರ ಲಾಭವೂ ಮಹತ್ವದ್ದು. ಹಾಗಾಗಿ ಆರ್ಥಿಕತೆ ಮತ್ತು ತಂತ್ರಜ್ಞಾನ ಜಗತ್ತು ಆಳುವ ಪ್ರಬುದ್ಧ ಆಯಾಮಗಳಾಗಿ ಬೆಳೆದು ನಿಂತಿವೆ.

“ಅರಿವೇ ಗುರು” ಎಂಬುದು ವಚನಕಾರ ಅಲ್ಲಮ ಪ್ರಭುವಿನ ಮಾತು. ಜಗತ್ತಿನ ಸೃಜನಶೀಲ, ಚಲನಶೀಲ ಬದುಕನ್ನು ಮುನ್ನೆಡೆಸುತ್ತಿರುವುದು ಅರಿವೆಂಬ ದಾರಿದೀಪದ ಬೆಳಕು. ಇದರ ಪರಂಪರೆ ಆರಂಭಿಕ ಹಂತಗಳಿಂದ ಮೊದಲ್ಗೊಂಡು ಇದೀಗ ವಿಕಾಸದ ತಿಳುವಳಿಕೆಯನ್ನೇ ಭೇದಿಸುವಷ್ಟು ಬೃಹದಾಕಾರವಾಗಿ ಬೆಳೆದಿದೆ. ಅದರಿಂದ ಲಾಭ, ಜೀವನ, ಆರ್ಥಿಕ ಸುಧಾರಣೆ ಇತ್ಯಾದಿಗಳ ಮಹತ್ವಾಕಾಂಶೆಯನ್ನು ಒಳಗೊಂಡು ‘ಪೇಟೆಂಟ್ ’-ಬೌದ್ಧಿಕ ಆಸ್ತಿ ಹಕ್ಕು, ಇತ್ಯಾದಿಗಳ ಚರ್ಚೆಯ ಆಸಕ್ತಿಯ ಪದಗಳನ್ನು ಇಂದು ನಮ್ಮ ಮುಂದೆ ತಂದಿದೆ. ಇದು ಅಕ್ಷರ ಸಮಾಜದಿಂದ ದೂರವಿದ್ದ ರೈತರನ್ನಂತೂ ಬಹುವಾಗಿ ಕಾಡತೊಡಗಿದೆ. ಅರಿವು ಅಕ್ಷರಮಾಧ್ಯಮಗಳಿಂದಲೇ ಹಕ್ಕುಗಳಾಗಿ ರೂಪುಗೊಂಡಿರುವಾಗ, ಅನಕ್ಷರಸ್ಥರಾದ ಬಹು ದೊಡ್ಡ ಸಮುದಾಯವಾದ ರೈತರಿಗೆ ಸಹಜವಾಗೇ ಭಯ ತಂದಿದೆ.

ಕೃಷಿಕ ಸಮಾಜ ಇಂದು ಈ ಹೊಸ ಅರಿವಿನ ಹಿಡಿತದ ಆಲೋಚನೆಗೆ ಬೆಚ್ಚಿರುವುದು ಸ್ವಾಭಾವಿಕ. ದೇಸಿ ಕೃಷಿ ಸಮಾಜ ಬಹು ದೊಡ್ಡ ಅನಕ್ಷರಸ್ಥ ಸಮುದಾಯವಾಗಿದ್ದೂ ಆಹಾರದ ಜವಾಬ್ದಾರಿಯನ್ನು ಹೊತ್ತಿದೆ. ಅವರ ಅರಿವಿನ ಆರ್ಥಿಕತೆ ಕುರಿತ ಅಧ್ಯಯನಗಳಿಲ್ಲ, ಚರ್ಚೆಗಳಿಲ್ಲ, ಅವರನ್ನು ಒಂದು ಉದ್ಯಮದಂತೆ ಸಂರಕ್ಷಿಸುವ ಕಾಯಿದೆಗಳಿಲ್ಲ. ಇಂದು ಎರಡನೇ ಸಂತತಿಯ ಕೃಷಿಕರಲ್ಲಿ ಅಕ್ಷರ ಮಾರ್ಗದ ಹುಡುಕಾಟ ಆರಂಭವಾಗುವಷ್ಟರಲ್ಲಿ ಕಾಯಿದೆಗಳು, ಮಾರ್ಗಗಳು ಬದಲಾವಣೆಯ ಹಾದಿಯನ್ನು ಹಿಡಿದಿವೆ. ಹಾಗೆಂದೇ ಗೊಂದಲ, ಭಯ ಇತ್ಯಾದಿ ರೈತರನ್ನು ಕಾಡುತ್ತಿರಬಹುದು. ದೀರ್ಘ ಇತಿಹಾಸವುಳ್ಳ ಅರಿವಿನ ಪರಂಪರೆಯು ಬದಲಾಗುತ್ತಿರುವ ಜಗತ್ತಿನಲ್ಲಿ ಬದಲಾಗುತ್ತಿರುವ ರೈತನ್ನು ಪ್ರೇರೇಪಿಸುತ್ತವೆ. ಅಂತಹ ಅರಿವಿನ ಕದವನ್ನು ತೆಗೆಯುತ್ತಿದೆ.