ಹೊಸ ತಿಳುವಳಿಕೆಯೊಂದು ಹೊಸತೊಂದು ವಿಚಾರವನ್ನು ಅನ್ವೇಷಿಸಿದರೆ ವಿಜ್ಞಾನ ಜಗತ್ತಿನಲ್ಲಿ ಅಷ್ಟೇಕೆ, ಯಾವುದೇ ಬೌದ್ಧಿಕ ಜಗತ್ತಿನಲ್ಲಿ ಅದನ್ನು ಸಮಕಾಲೀನ ಚಿಂತಕರೊಡನೆ, ಓದುಗರೊಡನೆ ಹಂಚಿಕೊಳ್ಳುವುದು ಎಲ್ಲಾ ಜ್ಞಾನ ದಾಹಿಗಳ, ಸಂಶೋಧಕರ, ಅನ್ವೇಷಕರ ಪರಿಪಾಠ. ವೈಜ್ಞಾನಿಕ ಕ್ಷೇತ್ರದಲ್ಲಂತೂ, ಸಂಶೋಧನಾ ಲೇಖನಗಳ ಮೂಲಕ ತಮ್ಮ ಸಹವರ್ತಿಗಳ ಪರಿಗಣನೆಗೆ ತರುವಂತೆ ಪ್ರಕಟಿಸುವುದು ಸರ್ವೇಸಾಮಾನ್ಯ. ಜ್ಞಾನವು ವಿಕಾಸಗೊಳ್ಳಲು ಇದು ಅತ್ಯಂತ ಅವಶ್ಯಕವೂ ಹೌದು. ಅನ್ವೇಷಿತ ಜ್ಞಾನವನ್ನು ಜನತೆಯ ಉಪಯೋಗಕ್ಕಾಗಿ ಬಳಸುವುದು, ಸಮಾಜವು ಅದರಿಂದ ಪ್ರಯೋಜನೆ ಪಡೆಯುವುದು ಬಹುಮುಖ್ಯವಾದ ಅಂಶ. ಹಾಗೆಯೇ ಅನ್ವೇಷಕರ ಪ್ರಯತ್ನಕ್ಕೂ ಜ್ಞಾನಕ್ಕೂ ಸಲ್ಲಬೇಕಾದ ಮರ್ಯಾದೆ ಸಲ್ಲುವುದೂ ಅಷ್ಟೆ ಸೂಕ್ತ. ಆದರೆ ಇದೊಂದು ಅಪ್ಪಟ ಮಾರುಕಟ್ಟೆಯ ನಿರ್ವಹಣೆಯ ಮಾದರಿಯಾಗಬಾರದು. ಸಂಶೋಧಕನು ಸತ್ಯನ್ನೇ ಪ್ರತಿಪಾದಿಸುತ್ತಾನೆ ಮತ್ತು ತನಗೆ ಸಲ್ಲಬೇಕಾದ ಗೌರವವನ್ನಷ್ಟೇ ಅಪೇಕ್ಷಿಸುತ್ತಾನೆ. ಆದರೆ ಆತ ಇದಕ್ಕೆ ಹೊರತಾಗಿ ಲಾಭದಾಯಿಕ ವಸ್ತುವನ್ನಾಗಿ ಏಕ ಸ್ವಾಮ್ಯವನ್ನಾಗಿಸಿಕೊಂಡರೆ, ಅದರಿಂದ ನಿರೀಕ್ಷಿತ ಸಾರ್ವಜನಿಕ ಒಳಿತು (Public good) ಉಂಟಾಗಲಾರದು. ಬದಲಾಗಿ ಇಡೀ ಜ್ಞಾನವು ಅನ್ವೇಷಕನ ಸ್ವತ್ತಾಗಿ ಅಥವಾ ಒಂದು ಕುಟುಂಬದ ಜ್ಞಾನವಾಗಿ ಅವರ ಏಳಿಗೆ-ಲಾಭವನ್ನಷ್ಟೇ ಉತ್ತೇಜಿಸಿ ಬೆಳೆಯುತ್ತದೆ. ಇಂತಹ ಅನಾಹುತಗಳಿಂದ ರಕ್ಷಿಸಿ ಅನ್ವೇಷಕರ ಅನ್ವೇಷಣೆಯು ಅಣಿಗೊಂಡಾಗಿನಿಂದ ಅವರ ಸಮಾಜದ ಬಳಕೆಯನ್ನು ಅವಲಂಬಿಸಿ ಅಂತಹ ಜ್ಞಾನವು ಸಮಾಜದ ಅಥವಾ ಸಾರ್ವಜನಿಕ ಭಾಗವಾಗಬೇಕಾಗುತ್ತದೆ. ಇಂತಹ ಏಕಸ್ವಾಮ್ಯವನ್ನು ತಪ್ಪಿಸುವ ಸದುದ್ದೇಶದಿಂದಲೇ ‘ಪೇಟೆಂಟ್’ ವಿಕಾಸಗೊಳ್ಳುತ್ತಾ ಬಂದಿದೆ. ಪೇಟೆಂಟ್ ಮಾಡುವುದೆಂದರೆ ಯಾರಿಗೂ ಹೇಳಬಾರದು ಎಂಬ ವ್ಯಾಖ್ಯಾನಗಳಿವೆ. ಆದರೆ ವಾಸ್ತವವಾಗಿ ಹಾಗಲ್ಲ. ಹಾಗಾದರೆ ಅವೆಂತಹ ವಿಚಾರಗಳು? ಇತ್ಯಾದಿಗಳನ್ನು ವಿವರವಾಗಿ ಈ ಭಾಗದಲ್ಲಿ ನೋಡಬಹುದು.

‘ಪೇಟೆಂಟ್’ -ಎಂದರೇನು? ಪೇಟೆಂಟ್ ಪಡೆಯುವುದು ಎಂದರೇನು? ‘ಪೇಟೆಂಟ್’ ಪಡೆಯುವುದು ಹೇಗೆ? ‘ಪೇಟೆಂಟ್’ ಪಡೆದಾಕ್ಷಣ ಹಣ ಬರುವುದೇ? ಎಂಬೆಲ್ಲಾ ಪ್ರಶ್ನಾಪೂರ್ವಕ ಅನುಮಾನಗಳು ನಮ್ಮನ್ನು ಇನ್ನೂ ಕಾಡುತ್ತಿವೆ. ಬಹುಶಃ ‘ಪೇಟೆಂಟ್’ ಕುರಿತ ವಿಚಾರಗಳು ಕಳೆದ ಒಂದು ದಶಕದಿಂದ ಚರ್ಚೆಯಲ್ಲಿರುವ ವಿಚಾರಗಳಾದರೂ, ಬಹಳ ಮೂಲಭೂತ ವಿವರಗಳನ್ನು ನಾವು ಸಾರ್ವಜನಿಕ ತಿಳಿವಳಿಕೆಗೆ ಬಿಟ್ಟಿಲ್ಲ. ನಮ್ಮ ಅಭಿವೃದ್ಧಿ ಚಿಂತನಾಕ್ರಮವೇ ವಸಾಹತುಶಾಹಿ ಮನೋಧರ್ಮದ್ದು. ಗುಲಾಮತನದ ವೈಭವೀಕರಣವೇ ಆಧುನಿಕತೆಯನ್ನು ಆಳುತ್ತಿರುವುದರಿಂದ ಇದರ ಮಾರ್ಗ ದುರಂತಗಳ ಕಡೆಗೆ ಸಾಗುತ್ತಿರುವುದು. ಆದಕಾರಣದಿಂದ ಈ ಮೂಲಭೂತ ವಿಚಾರಗಳಿಂದ ಇಡೀ ಪೇಟೆಂಟ್ ಜಗತ್ತನ್ನು ಅರಿಯುವುದು, ಸಮಂಜಸವಾಗಿದೆ.

ಯಾವುದೇ ಒಂದು ದೇಶದ ಅಭಿವೃದ್ಧಿಯ ಆಯಾಮಗಳು ಆ ದೇಶದ ಸಂಪತ್ತು ಮತ್ತು ಸಂಶೋಧನಾ ಫಲಗಳು. ವ್ಯಾಪಾರಿಕ ಸಾಮರ್ಥ್ಯ ಅವುಗಳನ್ನು ಅಳತೆಗೋಲಾಗಿ ಬಳಸುತ್ತದೆ. ಸಾಲದ್ದಕ್ಕೆ ಅದಕ್ಕೊಂದು ಜಾಗತಿಕ ವಹಿವಾಟಾಗಿ ರೂಪುಗೊಂಡಾಗ ಅದಕ್ಕೆ ಮತ್ತಷ್ಟು ಮಹತ್ವ ಬರುವುದು. ಹಾಗಾಗಿ ಅನ್ವೇಷಣೆಗಳನ್ನು ವಹಿವಾಟಿನಲ್ಲಿ ತೊಡಗಿಸುವುದು ಅಭಿವೃದ್ಧಿ ದೃಷ್ಟಿಯಿಂದ ಪ್ರಮುಖ್ಯವಾಗಿರುತ್ತದೆ. ಇವುಗಳ ನಡುವಿನ ಎಲ್ಲಾ ಆಯಾಮಗಳ ಸಂಬಂಧಗಳನ್ನು ಎಲ್ಲಾ ಮಟ್ಟಗಳಲ್ಲೂ ಕಾಪಾಡಿಕೊಳ್ಳುವುದು ಮುಖ್ಯ. ಆದ್ದರಿಂದ ಅನ್ವೇಷಣೆ-ತಂತ್ರಜ್ಞಾನ-ವಹಿವಾಟು-ಉದ್ಯಮ-ಇವುಗಳ ನಡುವಿನ ಸಂಬಂಧಗಳನ್ನು ಸಮಗ್ರವಾಗಿ ಕಾಪಾಡುವ ಹೊಣೆಗಾರಿಕೆಯನ್ನು ‘ಪೇಟೆಂಟ್’ ನಿರ್ವಹಿಸುತ್ತದೆ.

ಪೇಟೆಂಟ್ ಎಂಬ ಹೊಸತೊಂದು ಪರಿಕಲ್ಪನೆಯು ಹೊಸತೊಂದು ಅನ್ವೇಷಣೆಗೆ ಸ್ವಾಮ್ಯವನ್ನು ಕೊಡುವ ಹಕ್ಕಿನ ರೂಪದಲ್ಲಿ ಹುಟ್ಟಿತು. ಮೂಲತಃ ಅನ್ವೇಷಕನ ಸ್ವಾಮ್ಯದ ಹಕ್ಕನ್ನು ಪ್ರತಿಪಾದಿಸಲು ಹುಟ್ಟಿಕೊಂಡ ಪೇಟೆಂಟ್, ಅದನ್ನು ಸೀಮಿತ ಅವಧಿಗೆ ಮಾತ್ರ ವಹಿವಾಟಿನಲ್ಲಿ ಬಳಸುವ ಮಿತಿಯುಳ್ಳ ಹಕ್ಕನ್ನು ನೀಡಲು ಮಾತ್ರ ಅನ್ವಯವಾಯಿತು. ಆಗ ಹಕ್ಕು ಒಂದು ಸೀಮಿತ ಅವಧಿಯಲ್ಲಿ, ಲಾಭ ಪಡೆಯುವಷ್ಟರಮಟ್ಟಿಗೆ ಮಾತ್ರ ಚಲಾವಣೆಯಲ್ಲಿರುತ್ತದೆ. ಈ ರೀತಿಯಲ್ಲಿ ವಿಕಾಸಗೊಂಡದ್ದೇ ‘ಪೇಟೆಂಟ್’ ನಲ್ಲಿರುವ ಸಾರ್ವಜನೀಕರಣ ನೀತಿ. ಇಲ್ಲವಾದಲ್ಲಿ ಲಾಭವನ್ನು ಅನ್ವೇಷಕರು ಜೀವಮಾನ ಪೂರ್ತಿ ಪಡೆಯಬಹುದಿತ್ತು. ಅಂತಹ ಏಕಸ್ವಾಮ್ಯದಿಂದ ಹೊರಬರುವಂತೆ ಪ್ರೇರೆಪಿಸುವುದೇ ‘ಪೇಟೆಂಟ್ ಮಾಡುವುದಾಗಿದೆ. ಆದರೆ ಅದನ್ನು ಈ ಸಮಯದಲ್ಲಿ ಉತ್ಪಾದನೆಗೊಳಪಡಿಸುವುದು ಅನ್ವೇಷಕನ ಕೆಲಸ ಇದರಿಂದ ಮಾತ್ರವೇ ಆತ ಲಾಭ ಪಡೆಯಲು ಸಾಧ್ಯವಿರುವುದು. ಅಲ್ಲದೆ ಸಾರ್ವಜನಿಕವಾಗಿ ಮಾರಾಟವಾಗುವ ಉತ್ಪನ್ನವು ಕಡ್ಡಾಯವಾಗಿ ಮಾರುಕಟ್ಟೆ ನಿರ್ವಹಣಾ ಕಾಯ್ದೆಯಡಿ, ನೋಂದಣಿ ಪಡೆದಿರಲೇ ಬೇಕಾಗುವುದು. ಈ ಮೂಲಕ ಉತ್ಪನ್ನ ಕುರಿತ ಉತ್ಪತ್ತಿ ಇತ್ಯಾದಿ ಮಾಹಿತಿಯನ್ನು ಅಂದಾಜು ಮಾಡಲೂ ಸಾಧ್ಯವಾಗುತ್ತದೆ.

ಪೇಟೆಂಟ್ ಮಾಡಿರುವೆ ಎಂದಾಕ್ಷಣ ಯಾರಿಗೂ ಹೇಳಬಾರದ ಗುಟ್ಟನ್ನು ಉಳಿಸಿಕೊಂಡಿದ್ದಾನೆ ಎಂಬ ಅರ್ಥವಿದೆ. ಆದರೆ ಅದು ಹಾಗಲ್ಲ, ವಾಸ್ತವವಾಗಿ ಪೇಟೆಂಟ್ ಮಾಡುವಾಗ ಎಲ್ಲಾ ಪ್ರಕ್ರಿಯೆಗಳ ವಿವರಗಳನ್ನು ಪೇಟೆಂಟ್ ಕಛೇರಿಯಲ್ಲಿ ತಿಳಿಸಲೇಬೇಕಾದ ಅನಿವಾರ್ಯವಿದೆ. ಪೇಟೆಂಟ್ ಎಂದರೆ ಯಾರಿಗೂ ಹೇಳದೆ ನಮ್ಮೊಳಗೆ ಕೊನೆಯಾಗುವುದು ಎಂದೇನೂ ಅಲ್ಲ. ಪೇಟೆಂಟ್ ಅವಧಿಯ ಕೊನೆಯಲ್ಲಿ ಆ ಜ್ಞಾನವು ಸಾರ್ವಜನಿಕ ಜ್ಞಾನವಾಗುತ್ತದೆ. ಅದನ್ನು ಬಹಿರಂಗಪಡಿಸಲಾಗುತ್ತದೆ. ಆಗ ಅದು ಸಾರ್ವಜನಿಕ ಜ್ಞಾನವಾಗಿ ಮಾರ್ಪಾಡಾಗುತ್ತದೆ. ನಂತರ ಅದರ ಏಕಸ್ವಾಮ್ಯವೂ ತಪ್ಪುತ್ತದೆ. ಈ ಸೀಮಿತ ಅವಧಿಯಲ್ಲಿ ಅದರ ಉತ್ಪನ್ನ ಆರಂಭಿಸಿದ ಕಂಪನಿ ಅಥವಾ ವ್ಯಕ್ತಿಯಿಂದ ಲಾಭದ ಒಂದಂಶ ಅಥವಾ ನಿಗದಿಯಾದ ಮೌಲ್ಯದಷ್ಟನ್ನು ಅನ್ವೇಷಕನು ಗೌರವ ರೂಪದಲ್ಲಿ ಪಡೆಯುತ್ತಾನೆ. ಆದ್ದರಿಂದ ಈ ಅರ್ಥದಲ್ಲಿ ಬುದ್ದಿವಂತಿಕೆಯನ್ನು ಆಸ್ತಿ-ಬೌದ್ಧಿಕ ಆಸ್ತಿ- ಎಂದು ಕರೆಯಲಾಗಿದೆ. ಬುದ್ಧಿಯ ಬಲದಿಂದ ಉತ್ಪಾದಿಸುವ ಉತ್ಪನ್ನಗಳ ಬೌದ್ಧಿಕ ಆಸ್ತಿ. ಅದಕ್ಕೆಂದು ನೀಡುವ ಹಕ್ಕುಗಳಲ್ಲಿ ಒಂದು ಬಗೆ ‘ಪೇಟೆಂಟ್’.