ಜಾಗತಿಕ ಮಹಾ ಯುದ್ದಗಳ ನಂತರ ಎದುರಾದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಯೂರೋಪ್‌ ರಾಷ್ಟ್ರಗಳಿಗೆ ಒಂದು ದೊಡ್ಡ ಸವಾಲೇ ಆಯಿತು. ಅದಕ್ಕಾಗಿ ಅಂತಾರಾಷ್ಟ್ರೀಯ ಸಂಘಟನೆಗಳನ್ನು ಸ್ಥಾಪಿಸಿ ದೇಶದೊಳಗಿನ ಆಂತರಿಕ ಸಮಸ್ಯೆಗಳನ್ನು ಸುಧಾರಿಸಿ ಉತ್ತಮ ಜೀವನಕ್ಕೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಉದಯವಾಯಿತು. ಅನಂತರ ಮೂರು ಪ್ರಮುಖ ಅಂತಾರಾಷ್ಟ್ರೀಯ ಸಂಘಟನೆಗಳು ಆರಂಭಗೊಂಡವು. ಇವೆಲ್ಲವೂ ಭಾರತ ಸ್ವತಂತ್ರಗೊಂಡ ವರ್ಷವೇ ಬೇಕಾದ ಬುನಾದಿಯನ್ನು ಹಾಕಿಕೊಂಡಿದ್ದವು ಎಂಬುದನ್ನು ಇಲ್ಲಿ ಗಮನಿಸಬೇಕಾದ್ದು ಮುಖ್ಯ. ೧೯೪೭ರಲ್ಲೇ ಜಾಗತಿಕ ಬ್ಯಾಂಕ್‌(World Bank), ಅಂತಾರಾಷ್ಟ್ರೀಯ ಮನಿಟರಿ ಫಂಢ್‌(IMF) ಮತ್ತು ಅಂತಾರಾಷ್ಟ್ರೀಯ ವ್ಯಾಪಾರಿ ಸಂಸ್ಥೆ ಕೂಡ ಆರಂಭವಾದವು. ಆ ವರ್ಷವೇ ಭಾರತವೂ ಸ್ವತಂತ್ರವಾಯಿತು. ಅದಕ್ಕೂ ಮೊದಲು ಸುಮಾರು ೨೦೦ ವರ್ಷಗಳ ಕಾಲದಾಸ್ಯದಲ್ಲಿತ್ತು. ಬ್ರಿಟಿಷರು ಇಡೀ ಭಾರತವನ್ನು ವಸಾಹತುವನ್ನಾಗಿಸಿಕೊಂಡಿದ್ದರು. ಭಾರತದ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಬೆಳವಣಿಗೆಗಳಲ್ಲಿ ಈ ವಸಾಹತುಶಾಹಿ ಆಡಳಿತ ತುಂಬಾ ಗಂಭೀರವಾದದುದು. ಅದರಿಂದ ಹೊರಬರಲು ಭಾರತಕ್ಕೆ ಸಾಧ್ಯವಾಗೇ ಇಲ್ಲ. ಅಥವಾ ಸಾಧ್ಯವಾದ ಕಡೆ ತುಂಬಾ ಕಷ್ಟಪಡುತ್ತಿದೆ. ಇದಕ್ಕೆ ಬೌದ್ಧಿಕ ಆಸ್ತಿ ನಿಯಮಗಳೂ ಹೊರತಲ್ಲ.

ಸ್ವಾತಂತ್ರ ಪೂರ್ವದ ಸಾಮಾಜಿಕ – ಆರ್ಥಿಕ ಬದಲಾವಣೆಗಳು ಯೂರೋಪಿನಲ್ಲಿ ಎದ್ದ ಬಿರುಗಾಳಿಗೆ ಸಿಲುಕಿ ಜಾಗತಿಕ ಅಲ್ಲೋಲ ಕಲ್ಲೋಲವನ್ನುಂಟುಮಾಡಿದ ಸಂದರ್ಭದಲ್ಲೇ ಭಾರತವು ಐರೋಪ್ಯರ ದಬ್ಬಾಳಿಕೆಯನ್ನು ಎದುರಿಸುತ್ತಿತ್ತು. ಅಂತಹ ಪರಿಣಾಮ ನೇರವಾಗಿಯೇ ಎಲ್ಲಾ ವಲಯದಲ್ಲೂ ಆಯಿತು. ಅಂತಾರಾಷ್ಟ್ರೀಯ ವಹಿವಾಟು, ಉತ್ಪನ್ನಗಳ ಉತ್ಪಾದನೆ ಮಾರಾಟ ಇವು ಆರ್ಥಿಕತೆಯನ್ನು ನೇರವಾಗಿ ಹಿಡಿದಿಡುವ ಕಾರಣ, ಇವು ಬೌದ್ಧಿಕ ಹಕ್ಕಿನಲ್ಲಿ ಪ್ರಮುಖವಾದುವು. ಇವೇ ಯೂರೋಪ್‌ ಅಥವಾ ಬ್ರಿಟಿಷ‌ಮಾದರಿಯಲ್ಲಿ ಭಾರತಕ್ಕೂ ಆವರಿಸಿದವು. ಆದಿಯಲ್ಲಿನ ಭಾರತೀಯ ಪೇಟೆಂಟ್ ಬ್ರಿಟಿಷರ ಕಾಯ್ದೆಯ ಸಾಮಾನ್ಯ ಕಾಪಿ ಅಷ್ಟೇ. ಈಗಲೂ ಹೆಚ್ಚು ಕಡಿಮೆ ಅದರ ಅವಲಂಬನೆಯ ಪೇಟೆಂಟಿನಲ್ಲಿರುವುದು. ಅದರ ಜತೆಯಲ್ಲಿ ಈಗ ಕೂಡ ಮತ್ತೆ ಬದಲಾವಣೆಯ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ನಾವು ಅದೇ ಮಾದರಿಯ ಬುನಾದಿಯ ಸಾಕಷ್ಟು ಅಡಿಪಾಯವನ್ನು ಒಪ್ಪಿಕೊಂಡಿದ್ದಾಗಿದೆ. ಅಂದರೆ ಅಚ್ಚರಿಯಾಗಬಹುದೇನೋ? ಕಳೆದ ಕೆಲವು ವರ್ಷಗಳಲ್ಲಿ ಗ್ಯಾಟ್‌(GATT) ಕುರಿತಂತೆ ದೊಡ್ಡ ದೊಡ್ಡ ಚರ್ಚೆಗಳಾಗಿವೆ. ಆದರೆ ಭಾರತವು ಗ್ಯಾಟ್‌ನ ಸ್ಥಾಪಕ ಸದಸ್ಯ ರಾಷ್ಟ್ರ. ೧೯೪೮ ರಲ್ಲೇ ಭಾರತವು ಗ್ಯಾಟ್‌ನ ಸದಸ್ಯ ರಾಷ್ಟ್ರ. ಆರಂಭದ ೨೩ ರಾಷ್ಟ್ರಗಳಲ್ಲಿ ಭಾರತವೂ ಒಂದು. ಅಂದೇ ನಾವು ಅದರ ಪರಿಧಿಗೆ ಒಳಗಾಗಿದ್ದೆವು ಎಂಬುದು ಕಹಿಯಾದರೂ ಸತ್ಯವಾದ ಸಂಗತಿ.

ಸಮಗ್ರ ಭಾರತದ ವಿಕಾಸ ಹಂತದಲ್ಲೇ ಭಾರತವು ಗ್ಯಾಟ್‌ರಾಷ್ಟ್ರಗಳಲ್ಲೊಂದಾಗಿತ್ತು. ಆಗಿನ ಭಾರತದ ಧೋರಣೆ ಏನೆಂದರೆ ಕೇವಲ ಲಾಭದ ವ್ಯಾಪಾರಿ ಧೋರಣೆಯಷ್ಟೇ ಸಾಲದು ಎಂಬುದಾಗಿತ್ತು. ಅದರೀಗ ಕಾಲ ಬದಲಾಗಿದೆ ವ್ಯಾಪಾರದಲ್ಲಿ ಲಾಭವೇ ಪ್ರಾದಾನ್ಯವಾಗಿದೆ. ೨೦೦ ವರ್ಷಗಳ ಪರತಂತ್ರ ಜೀವನದ ನಷ್ಟವನ್ನು ಸರಿದೂಗಿಸಲು, ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಭಾಗಿಯಾಗಬೇಕೆಂಬ ನಿಲುವು. ಹಾಗಾಗಿ, ಭಾರತವು ಹಳ್ಳಿಗಳ ಮತ್ತು ಕೃಷಿ ಪರ ದೇಶ ಇದಕ್ಕೊಂದು ಭದ್ರವಾದ ಮಾರುಕಟ್ಟೆಯನ್ನು ಮತ್ತು ಅಂತಾರಾಷ್ಟ್ರೀಯ ಸಂಬಂಧವನ್ನು ಸಾಧ್ಯವಾಗಿಸುವ ಕ್ರಮ ಬೇಕಿತ್ತು. ಅದರಲ್ಲೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜತೆ ಸಂಬಂಧವಿರಿಸುವಂತಹ ಸಂಬಂಧವಾಗಲು ಅದು ಅಂದೇ ಗ್ಯಾಟ್‌ಸೇರಿತು. ಈ ಆರಂಭಿಕ ಮತ್ತು ೫೦ ವರ್ಷಗಳ ಸ್ವಾತಂತ್ರಾನಂತರದ ಬೆಳವಣಿಗೆಗಳು ಭಾರತವನ್ನು ಸಂಪೂರ್ಣ ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವಂತೆ ಪ್ರೇರೇಪಿಸಿವೆ. ಕಂಡೂ ಕಾಣದ ಒತ್ತಾಯಗಳೇನೇ ಇದ್ದರೂ, ಒಂದು ಒಪ್ಪಂದವಾಗಿ ಇದೊಂದು ಸ್ವಯಂ ನಿರ್ಧಾರಿತ ಒಪ್ಪಂದ.

ಈಗಾಗಲೇ ಭಾರತವು ಉರುಗ್ವೇ ಸುತ್ತಿನ ಬಹಪಕ್ಷೀಯ ವಹಿವಾಟಿನ ಅಂತಿಮ ನಿರ್ಣಯಕ್ಕೆ ಸಹಿ ಹಾಕಿದೆ. ಇದರಿಂದ ಅವುಗಳನ್ನು ನಿರ್ಧರಿಸುವಂತಹ ವಿಚಾರಗಳಲ್ಲಿ ಅಂತಾರಾಷ್ಟ್ರೀಯ ಸಮನ್ವಯತೆ ಸಾಧಿಸಬೇಕಿದೆ. ಉದ್ಯಮ, ಕಾರ್ಮಿಕರು, ಸಾಂಸ್ಥಿಕ, ತೆರಿಗೆ, ಆಮದು ಹಾಗೂ ರಫ್ತು, ಎಲ್ಲಕ್ಕೂ ಮಿಗಿಲಾಗಿ ಬೌದ್ಧಿಕ ಆಸ್ತಿ ಹಕ್ಕು-ಪ್ರಮುಖವಾಗಿ ಪೇಟೆಂಟ್ ನಿಯಮಗಳ ಅಂತಾರಾಷ್ಟ್ರೀಯ ಸಮನ್ವಯತೆ ಅನಿವಾರ್ಯವಾದವು. ಅದರ ಅನುಗುಣವಾಗಿಯೇ ಈ IPR (ಐಪಿಆರ್) ಕುರಿತ ಬದಲಾದ ಸಂದರ್ಭಗಳು ಈಗ ನಮ್ಮನ್ನೆಲ್ಲಾ ಕಾಡುತ್ತಿವೆ. ಅದರಲ್ಲೂ ಅನಕ್ಷರಸ್ಥ ಸಮುದಾಯದ ಕೃಷಿಯನ್ನು ಮತ್ತಷ್ಟು ಬಲವಾಗಿ ಕಾಡುತ್ತಿವೆ. ಒಂದೇ ಸಮಾಧಾನದ ಸಂಗತಿ ಎಂದರೆ, ಅಂತಾರಾಷ್ಟ್ರೀಯವಾಗಿ ಬೌದ್ಧಿಕ ಹಂತದಲ್ಲಿ ಇದನ್ನೆಲ್ಲಾ ನಿಭಾಯಿಸಲು ಭಾರತ ಸಮರ್ಥವಾಗಿದೆ. ಈಗಾಗಲೆ ಬೌದ್ಧಿಕ ಸಮಾನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಪಿರ್ ಸಮಿತಿಗಳ ಸದಸ್ಯರಾಗುವ ಮೂಲಕ ಡಾ. ಮಶೇಲ್ಕರ್ ಸಾಧಿಸಿ ತೋರಿದ್ದಾರೆ. ಶ್ರೀಯುತರು ಭಾರತದ ಖ್ಯಾತ ವಿಜ್ಞಾನಿ ಮಾತ್ರವೇ ಅಲ್ಲ, ಅವರು ನಮ್ಮ ದೇಶದ ಬಹು ದೊಡ್ಡ ವೈಜ್ಞಾನಿಕ ಮತ್ತು ಔದ್ಯಮಿಕ ಪರಿಷತ್ತಿನ ಮಹಾ ನಿರ್ದೇಶಕರು, ತನ್ಮೂಲಕ ಭಾರತದ ಬಹು ದೊಡ್ಡ ವಿಜ್ಞಾನಿಗಳ ಸಮುದಾಯದ ನಾಯಕರು. ಅಂದಂತೆ ಭಾರತೀಯ ವಿಜ್ಞಾನಿ ಸಮೂಹದ ನೇತಾರರು ಎಂದರೆ ತಪ್ಪಲ್ಲ. ಅವರು ಅಂತಾರಾಷ್ಟ್ರೀಯ ಬೌದ್ಧಿಕ ಹಕ್ಕುಗಳ ಆಯೋಗದ – (Commission on Intellectual Property Rights) – ಸಮಿತಿಯ ಸದಸ್ಯರಲ್ಲಿ ಒಬ್ಬರು. ಅಷ್ಟೇ ಅಲ್ಲ. ಭಾರತೀಯ ಜ್ಞಾನ ಮೂಲದ ಬೇವಿನ ಔಷಧಿಯ ಗುಣ, ಬಾಸುಮತಿ ಅಕ್ಕಿಯನ್ನು ಪೇಟೆಂಟೀಕರಣಗೊಂಡಾಗ, ಅದರ ವಿರುದ್ಧ ಸಮರೋಪಾದಿಯಲ್ಲಿ ಕಾರಣರಾದ ಡಾ. ವಂದನಾ ಶಿವಾ ಭಾರತೀಯ ಕೃಷಿಕರ ಪರವಾದ ವಿಜ್ಞಾನಿ. ಕೇವಲ ಸಮಧಾನಕರವಾದ ಉದಾಹರಣೆಯುಳ್ಳ ಸಂಗತಿಯನ್ನು ಹಂಚಿಕೊಳ್ಳಲು, ಇವರಿಬ್ಬರೂ ಮಾತ್ರವೇ ಅಲ್ಲದೆ ಅನೇಕ ವ್ಯಕ್ತಿಗಳನ್ನು ಹೆಸರಿಸುತ್ತಾ ಹೋಗಬಹುದು. ಆದರೆ ಅಂತಹ ಶಕ್ತಿಯು ನಮ್ಮ ಭಾರತೀಯರಿಗಿದೆ ಅನ್ನುವ ವಿಚಾರ ಮುಖ್ಯವಾದುದಷ್ಟೇ. ಸಾಕಷ್ಟು ಬೌದ್ಧಿಕ ಬಲ ಭಾರತೀಯ ವೈಜ್ಞಾನಿಕ, ರಾಜಕೀಯ, ಸಾಮಾಜಿಕ, ಮತ್ತು ಆರ್ಥಿಕ ಚಿಂತಕರಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಜಗತ್ತನ್ನು ಬೌದ್ಧಿಕ ಹಕ್ಕುಗಳ ಹಿನ್ನೆಲೆಯಲ್ಲಿ ನಿಭಾಯಿಸಲು ಕಷ್ಟವಾಗುವುದಿಲ್ಲ. ನಮಗೆ ಬೇಕಾದ್ದು ಅದರ ಯೋಗ್ಯ ಅರಿವು ಅಷ್ಟೇ. ಹಾಗೆಂದೇ ಈ ವಿಷಯಗಳ ಕೊಡುಕೊಳ್ಳುವಿಕೆಯು ಇಲ್ಲಿನ ವಿವರಣೆಯಲ್ಲಿದೆ.

ಬೇರೆ ಯಾವುದೇ ರಾಷ್ಟ್ರಗಳಲ್ಲಿರುವಂತೆ ಭಾರತವೂ ಸಹ ಐಪಿಆರ್ ಕುರಿತಂತೆ ಸಾಮಾನ್ಯ ನಿಯಮಗಳಿಂದ ಹಾಗೂ ಸಂವಿಧಾನಾತ್ಮಕವಾಗಿ, ಕಾಪಾಡುವ ಹಾಗೂ ನ್ಯಾಯ ರಕ್ಷಣೆ ಕೊಡುವ ಸಾಧ್ಯತೆಗಳನ್ನು ಸ್ಥಾಪಿಸಿದೆ. ಸಂವಿಧಾನಾತ್ಮಕ ಉಪಾಯಗಳನ್ನು ಭಾರತವು ಐಪಿಆರ್ ಟ್ರಿಬ್ಯುನಲ್‌ಗಳ ಮತ್ತು ನ್ಯಾಯಾಲಯಗಳ ಮೂಲಕ ಒದಗಿಸಿದೆ. ಟ್ರಿಬ್ಯುನಲ್ಲುಗಳು ನ್ಯಾಯ ಸಮ್ಮತ ರಕ್ಷಣೆ ಒದಗಿಸುವ ಸಂಸ್ಥೆಗಳೇ ಆದರೂ ಕೋರ್ಟ್ ರೀತಿಯಲ್ಲಿ ಇಕಟ್ಲೆ ನಿವಾರಣೆಯ ಆಡಳಿತಾತ್ಮಕ ಶಕ್ತಿಯನ್ನು ಹೊಂದಿಲ್ಲ. ಇವೇನಿದ್ದರೂ ಪೇಟೆಂಟ್ ನೀಡಬಹುದಾದ ಹಾಗು ಅಂತಹವುಗಳನ್ನು ನಿಭಾಯಿಸುವ ವ್ಯಾವಹಾರಿಕ ಮತ್ತು ತಾಂತ್ರಿಕ ಸವಲತ್ತುಗಳ ನಿರ್ವಹಿಸುವ ಸಂಸ್ಥೆಗಳು. ಈ ಟ್ರಿಬ್ಯುನಲ್ಲುಗಳು ಎಂದರೆ ಪೇಟೆಂಟ್ ಮತ್ತಿತರ ಐಪಿಆರ್ ನೀಡುವ ಅಟಾರ್ನಿಗಳು ಹಾಗೂ ಇತರೆ ಸಂಸ್ಥೆಗಳು. ಅಲ್ಲದೆ ಪೇಟೆಂಟ್ ನೀಡಿಕೆ ಮತ್ತಿತರ ಕುರಿತು ನಿಂದನೆ ಕಟ್ಲೆಗಳೇನಾದರೂ ಇದ್ದಲ್ಲಿ ಅವನ್ನು ಜಿಲ್ಲಾ ನ್ಯಾಯಾಲಯಗಳಿಗಿಂತ ಹೆಚ್ಚಿನ ನ್ಯಾಯಾಲಯಗಳಲ್ಲಿ ಬಗೆಹರಿಸಿಕೊಳ್ಳಬಹುದು. ಈ ನ್ಯಾಯಲಯಗಳಿಗೆ ಅಂತಹ ಅಧಿಕಾರವನ್ನು ಸಂವಿಧಾನವು ಒದಗಿಸಿದೆ. ಎಲ್ಲಾ ನ್ಯಾಯಾಲಯಗಳೂ ಟ್ರಿಬ್ಯುನಲ್ಲುಗಳು ಆದರೆ ಎಲ್ಲಾ ಟ್ರಿಬ್ಯುನಲ್ಲುಗಳು ನ್ಯಾಯಾಲಯಗಳಲ್ಲ.

ಈ ಬೌದ್ಧಿಕ ಹಕ್ಕಿನ ಟ್ರಿಬ್ಯುನಲ್ಲುಗಳನ್ನು ಭಾರತದ ಸಂವಿಧಾನದ ಆರ್ಟಿಕಲ್ ೩೨೩ ಬಿ ನಿಯಮದ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇವು ನ್ಯಾಯಾಲಯಗಳು ಬೌದ್ಧಿಕ ಹಕ್ಕಿನ ಚಲಾವಣೆ, ರಕ್ಷಣೆ ಇತ್ಯಾದಿ ಕುರಿತ ಕಾನೂನಿನ ಚೌಕಟ್ಟು ಕಾರ್ಯಗಳನ್ನು ಸುಲಭಗೊಳಿಸಲು, ಕಾಲವನ್ನು ವ್ಯರ್ಥಗೊಳಿಸದಂತೆ ನೋಡಿಕೊಳ್ಳಲು ಸಹಕರಿಸುತ್ತವೆ. ಬೌದ್ಧಿಕ ಹಕ್ಕಿನ ಟ್ರಿಬ್ಯುನಲ್ಲುಗಳು ಈ ಕೆಳಗಿನ ಕೆಲವು ಪ್ರಮುಖ ಬೌದ್ಧಿಕ ಹಕ್ಕುಗಳನ್ನು ನಿಭಾಯಿಸುತ್ತವೆ.

೧. ಪೇಟೆಂಟ್ ಗಳು

೨. ವ್ಯಾವಹಾರಿಕ ಚಿನ್ಹೆಗಳು (ಟ್ರೇಡ್‌ಮಾರ್ಕ್)

೩. ಗ್ರಂಥ ಸ್ವಾಮ್ಯ

೪. ಕೈಗಾರಿಕಾ ವಿನ್ಯಾಸಗಳು

೫. ಭೌಗೋಳಿಕ ಸೂಚನೆಗಳು

೬. ಕೌಟುಂಬಿಕ ವ್ಯಾಜ್ಯಗಳು

೭. ಕಾರ್ಮಿಕ ಸಮಸ್ಯೆಗಳು

೮. ಆದಾಯ ತೆರಿಗೆ ಕುರಿತ ವ್ಯಾಜ್ಯಗಳು

೯. ಗ್ರಾಹಕ ಹಿತಾಸಕ್ತಿಗಳು

ಈ ಟ್ರಿಬ್ಯುನಲ್ಲುಗಳು ಅರೆ ನ್ಯಾಯಿಕ ಸಂಸ್ಥೆಗಳಾಗಿದ್ದು ಈ ಕೆಳಗಿನ ಮಾಹಿತಿಗಳನ್ನು ವ್ಯವಹರಿಸುವ ಅಧಿಕಾರವನ್ನು ಹೊಂದಿರುತ್ತವೆ.

೧. ಬೌದ್ಧಿಕ ಹಕ್ಕಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯನ್ನು ಪರೀಕ್ಷಿಸುವ ಮತ್ತು ನೋಟೀಸ್‌ಜಾರಿ ಮಾಡುವ ಅಧಿಕಾರ.

೨. ಯಾವುದೇ ಪತ್ರ ಇತ್ಯಾದಿಯನ್ನು ಕಂಡುಕೊಳ್ಳುವ ಮತ್ತು ಉತ್ಪಾದಿಸುವ ಹಕ್ಕು.

೩. ಪ್ರಮಾಣ ಪತ್ರ ಪಡೆಯುವ ಅಧಿಕಾರ.

೪. ಸಾಕ್ಷಾಧಾರ ಪುರಾವೆ ಒದಗಿಸುವ ಮತ್ತು ಪ್ರಶ್ನಿಸುವ ಅಧಿಕಾರ.

೫. ಭಾರತೀಯ ಪುರಾವೆ ನಿಯಮದಡಿ ಯಾವುದೇ ಕಛೇರಿಯಿಂದ ವ್ಯಕ್ತಿಯಿಂದ ಸಾಕ್ಷಿ ಪುರಾವೆ ಪತ್ರ ಪಡೆಯುವ ಹಕ್ಕು ಮತ್ತು ಅಧಿಕಾರ.

೬. ವ್ಯಕ್ತಿ ರಹಿತ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳುವ ಮತ್ತು ವಜಾಗೊಳಿಸುವ ಹಕ್ಕು.

೭. ನ್ಯಾಯಾಂಗ ನಿಂದನೆ ಶಿಕ್ಷೆ ಜಾರಿ ಗೊಳಿಸುವ ಹಕ್ಕು.

೮. ಯಾವುದೇ ತನ್ನದೆ ತೀರ್ಮಾನವನ್ನು ಪುನರ್ವಿಮರ್ಶಿಸುವ ಹಕ್ಕು.

ಭಾರತೀಯ ಬೌದ್ಧಿಕ ಹಕ್ಕಿನ ಬಳಕೆಗೆ ನಮ್ಮಲ್ಲಿ ಈಗ ಜಾರಿಯಲ್ಲಿರುವ ವಿವಿಧ ಬೌದ್ಧಿಕ ಹಕ್ಕುಗಳನ್ನು ಅವುಗಳ ವಿಶೇಷತೆಗಳನ್ನು ಅರಿಯುವುದು ಸೂಕ್ತ.