ಮಾನವ ಸಮುದಾಯವು ಈ ಭೂಮಿಯ ಅತ್ಯಂತ ಪ್ರಮುಖವಾದ ಜೈವಿಕ ಸಮುದಾಯ. ಪ್ರಾಯಃ ಎಲ್ಲಾ ಜೈವಿಕ ಸಮುದಾಯಗಳಲ್ಲೇ ವಿಭಿನ್ನವಾಗಿ ಗುರುತಿಸಿಕೊಂಡಂತಹ ಸಮುದಾಯ. ಈ ಮಾನವರ ಜೀವನ ಕ್ರಮವು ಎಲ್ಲಾ ಜೀವರಾಶಿಗಳಲ್ಲೇ ಅತ್ಯಂತ ಭಿನ್ನವಾದ ಹಾಗೂ ಅಸಹಜವಾದ ಪದ್ದತಿಗಳನ್ನು ಒಳಗೊಂಡಿದೆ. ಪ್ರಾಣಿವರ್ಗದಲ್ಲೇ ಮಾನವರು ತಮ್ಮನ್ನು ಮೇಲುಸ್ತರದಲ್ಲಿ ಕಂಡುಕೊಳ್ಳುವ ಮೂಲಕ ಇಡೀ ಜೀವರಾಶಿಯ ಮೇಲೆ ಹಿಡಿತ ಸಾಧಿಸುವ ಮಟ್ಟಿಗೆ ವಿಕಾಸ ಹೊಂದಿದ್ದಾರೆ. ಆದಿಕಾಲದಲ್ಲಿ ಎಲ್ಲಾ ಜೀವಿಗಳಂತೆ ಮಾನವರೂ ಅಲೆಮಾರಿಯಾಗಿದ್ದರು. ಕ್ರಮೇಣ ಪ್ರಕೃತಿಯ ವೈಪರಿತ್ಯಗಳಿಂದ ರಕ್ಷಿಸಿಕೊಳ್ಳಲು ಒಂದೆಡೆ ನೆಲೆಯಾದರು. ಹೀಗೆ ಮೊದಲು ಗುಹೆಗಳಲ್ಲಿ ಅವರು ನೆಲೆಗಳನ್ನು ಕಂಡುಕೊಂಡ ಬಗ್ಗೆ ಅನೇಕ ಪುರಾವೆಗಳು ಈಗ ಸಾಮಾನ್ಯ ವಿಚಾರ. ಈ ಗುಹೆಗಳಿಂದ ಅವರು ತಮ್ಮ ವಸಾಹತುಗಳನ್ನು ನಿರ್ಮಿಸಿಕೊಳ್ಳುವುದನ್ನು ಕಲಿತರು. ವಾಸಕ್ಕೆ ಯೋಗ್ಯ ವಸತಿಗಳನ್ನು ಕಂಡುಕೊಂಡರು. ತಾವೆ ನಿರ್ಮತಿಗೂ ತೊಡಗಿದರು. ಅಲೆಮಾರಿಯಾಗಿದ್ದ ಮಾನವ ಒಂದೆಡೆ ಕಲೆತು, ನೆಲೆ ನಿಂತು, ತನ್ನ ವಾಸ ಸ್ಥಳದಲ್ಲಿ ತಾನೆ ತಿಂದೆಸೆದ ಹಣ್ಣಿನ ಬೀಜ ಮೊಳೆತು. ಗಿಡವಾಗಿ-ಬಲಿತು ಹೂ ಬಿಟ್ಟು ತಿಂದೆಸೆದ ಹಣ್ಣಿನಂತಹದ್ದೇ ಹಣ್ಣು ಬಿಟ್ಟ ವಿಸ್ಮಯವನ್ನು ಜೀವನಕ್ಕೂ ತಂದು ಕೊಂಡದ್ದೇ ಕೃಷಿಗೂ ನಾಂದಿಯಾಯಿತು. ಈ ಮೊದಲ ಹಂತದ ನೆಲೆಗಳಲ್ಲಿ ತಮ್ಮ ವಸಾಹತುಗಳಿಂದ ತಾವೆ ತಿಂದು ಎಸೆದ ಯಾವುದೋ ಫಲದ ಬೀಜ ಮೊಳೆತು ಗಿಡವಾಗಿ ತಿಂದ ಫಲವನ್ನೇ ಬಿಟ್ಟ ವಿಸ್ಮಯವನ್ನು ಕಂಡು ಬೆರಗಾಗಿರಬೇಕು. ಬೆರಗುಗೊಂಡ ಜೀವನಕ್ಕೂ ತಂದುಕೊಂಡದೇ ಕೃಷಿಗೆ ಮುನ್ನೆಡೆಯಿಟ್ಟಿತು. ಕೃಷಿ ಒಂದು ಜೀವನ ಕ್ರಮ. ಭಾರತೀಯ ದೇಶದಲ್ಲಿ ಬಹು ಜನರ ಉದ್ಯೋಗ. ಸ್ವತಂತ್ರ ಬದುಕಿಗೆ ನಿಸರ್ಗದೊಡನೆಯೇ ಕಲಿತ ಬಹು ಮುಖ್ಯವಾದ ಬದುಕಿನ ಕಲೆ. ಬಹುಕಾಲದವರೆಗೂ ಇದಕ್ಕೆ ಯಾವುದೇ ಹೊರ ಪ್ರಪಂಚದ ಜ್ಞಾನ ಶಿಸ್ತುಗಳ ಹೇರಿಕೆಯಾಗಲಿ, ಪ್ರಭಾವಗಳಾಗಲಿ ಇರಲಿಲ್ಲ. ಕೃಷಿಯು ೧೦,೦೦೦ ಕ್ಕಿಂತಲೂ ಪುರಾತನವಾದದ್ದು.

ತಮ್ಮ ನೆಲೆಯಲ್ಲಿಯೇ ತಮ್ಮೆಲ್ಲಾ ಅಗತ್ಯಗಳನ್ನು ಪೂರೈಸುವ ಆಲೋಚನೆಗಳು ವಿಕಾಸಗೊಂಡದ್ದೇ ಆರಂಭಿಕ ನೈಸರ್ಗದ ದಾಳಿಯ ಉಗಮಕ್ಕೆ ಕಾರಣವಾಯಿತು. ತಮ್ಮ ಅಗತ್ಯಗಳನ್ನೇ ಮೂಲವಾಗಿಟ್ಟುಕೊಂಡು ನಾಗರೀಕತೆಯ ಆರಂಭಕ್ಕೆ ಮೊದಲಾಯಿತು. ಅದರಿಂದ ನಿಸರ್ಗವನ್ನು ತಮ್ಮ ಅಗತ್ಯಕ್ಕೆ ಅಷ್ಟೇ ಅಲ್ಲದೆ ನಿರಂತರವಾದ ಆಸೆಗಳ ಪೂರೈಕೆಗೆ ಬಳಸುವ ಸಾಧನವಾಗಿಸಿ, ನಿಸರ್ಗವನ್ನು ಶೋಷಿಸುವ ತಂತ್ರಗಳನ್ನು ಹುಟ್ಟಿಹಾಕಲಾಯಿತು. ಜಾಗತಿಕವಾಗಿ ಬಹುತೇಕ ಜನಾಂಗಗಳು ಒಟ್ಟಾರೆ ಜೀವನ ಕ್ರಮವನ್ನು ಅವರ ಕೃಷಿಯಿಂದ ವಿಕಾಸಗೊಳಿಸಿಕೊಂಡದ್ದೇ ಹೆಚ್ಚು. ಇದೊಂದು ಬಗೆಯಲ್ಲಿ ಯಾವುದೇ ಜೀವಿ ನಿಸರ್ಗದ ಭಾಗವಾಗಿ ತನ್ನ ಬದುಕಿಗೆ ಕಂಡುಕೊಂಡ ಕ್ರಮವೆಂದರೂ ಆದೀತು. ಅಷ್ಟು ಸಹಜವಾಗಿ ಇದರ ಚಟುವಟಿಕೆಗಳು ಪಾರಂಪರಿಕವಾಗಿ ಸಂತತಿಗಳಲ್ಲಿ ಹರಿದು ಬಂದಿವೆ. ಸುಮಾರು ೩೦೦ ವರ್ಷಗಳ ಹಿಂದೆಯೇ ವಿಜ್ಞಾನದ ಅವಿಷ್ಕಾರಗಳು ಈ ಜಗತ್ತಿನ ಕುತೂಹಲದಿಂದ ಆರಂಭಗೊಂಡು ಇಂದು ಅದ್ಭುತ ಮಾಯಾಲೋಕವನ್ನೇ ಸೃಷ್ಟಿಸಿದ್ದರೂ, ಕೇವಲ ೧೦೦ – ೧೨೫ ವರ್ಷಗಳ ಹಿಂದೆಯಷ್ಟೇ ಇವು ಕೃಷಿಯನ್ನು ಆವರಿಸಿದೆ. ಮೊದಲ ರಸಾಯನಿಕ ಗೊಬ್ಬರ, ‘ರಂಜಕ’ ಪೂರೈಸುವ ಸೂಪರ್ ಪಾಸ್ಫೇಟ್‌. ನಂತರ ‘ಹೇಬರ್’-ಸಾರಜನಕವನ್ನು ಕೃತಕವಾಗಿ ತಯಾರಿಸುವ ಬಗೆಯನ್ನು ಅನ್ವೇಷಿಸಿದ ಮೇಲೆ ಅಷ್ಟೇ ಇದರ ವ್ಯಾಪ್ತಿ ಹಿರಿದಾಗಿದೆ. ಹಾಗಾಗಿ ಇವು ಅತ್ಯಂತ ಪ್ರಭಾವಶಾಲಿ ಗೊಬ್ಬರಗಳಾಗಿ ಪ್ರಚಲಿತವಾದವು. ಅನಂತರ ಇವುಗಳ ಹೆಚ್ಚು ಹೆಚ್ಚು ಬಳಕೆಯನ್ನು ಪ್ರಚೋದಿಸುವಂತಹ ಕ್ರಮಗಳು ಬೆಳೆದವು. ಮುಖ್ಯವಾಗಿ ಇವು ಕೃಷಿಗೆ ಏನೆಲ್ಲಾ ಬೇಕು ಎಂಬ ಪರಿಕಲ್ಪನೆಯನ್ನು ಹುಟ್ಟಿಸಿದವು. ಕೃಷಿಗೆ ಏನು ಬೇಕು? ಎಷ್ಟು ಬೇಕು? ಎಂಬ ಪ್ರಶ್ನೆಗಳೇ ಮುಂದೆ ಇದರ ಬಯಕೆಯನ್ನು ಅದರ ವಿಸ್ತಾರವನ್ನು ಹಿಗ್ಗಿಸಿದವು.

ಗ್ರೆಗರ್ ಜಾನ್‌ಮೆಂಡಲ್‌ಎಂಬ ಕ್ರಿಸ್ತ ಪಾದ್ರಿಯ ಬಟಾಣಿಕಾಳುಗಳ ಪ್ರಯೋಗ, ಹೊಸ ತಳಿಗಳಿಗೆ ನಾಂದಿಯಾಯಿತು. ಬಗೆಬಗೆಯ ತಳಿಗಳು ಬಂದವು. ಇವೇ ಮುಂದೆ ಹೆಚ್ಚು ಗೊಬ್ಬರ ಬೇಡುವ-ದೊಡ್ಡ ಹೊಟ್ಟೆಯ- ಜೀವಿಗಳಾದವು. ಜೊತೆಗೆ ಅಧಿಕ ಇಳುವರಿಯನ್ನು ತಂದು ರೈತರ ಪ್ರೀತಿಯನ್ನು ಸಂಪಾದಿಸಿದವು. ತಳಿಗಳಲ್ಲಿ ನಮಗೆ ಪ್ರಿಯವಾದ ಗುಣಗಳನ್ನು ವರ್ಗಾಯಿಸುವ ವೈಜ್ಞಾನಿಕ ಪ್ರಯತ್ನಗಳು ವಿಜ್ಞಾನದಲ್ಲಿ ಸಾಧಿಸಿದ ಮೇಲೆ ಅವುಗಳನ್ನು ವ್ಯವಹಾರಕ್ಕೆ ಹಚ್ಚುವುದು ತಡವಾಗಲಿಲ್ಲ. ನೂರಾರು ಕಂಪನಿಗಳು ಹೊಸ ಹೊಸ ತಳಿಗಳ ಮೂಲಕ ಹೊಸ ಕನಸುಗಳನ್ನು ಹೊತ್ತು ತಂದು ಕೃಷಿಯ ಒಳಸುರಿಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು. ಇದೇ ಒಂದು ಉದ್ಯಮವಾಗಿ ಇದರ ಅಪಾರ ವಹಿವಾಟಿನ ತೊಡಗುವಿಕೆಯ ಬಂಡವಾಳ ಮತ್ತು ಲಾಭದ ಹಿನ್ನೆಲೆಯಲ್ಲಿ ಇದು ಒಂದು ಪ್ರಬಲವಾದ ಬೌದ್ಧಿಕ ಆಸ್ತಿಯಾಗಿ ಬೆಳೆಯಿತು. ಮತ್ತು ರೈತರನ್ನು ವಹಿವಾಟಿನ ಮತ್ತು ಮಾರುಕಟ್ಟೆಯ ಹಿಡಿತಕ್ಕೆ ತರುವ ಪ್ರಯತ್ನವು ಯಶಸ್ವಿಯಾಯಿತು. ಇಂದು ರೈತೋದ್ಯಮದಲ್ಲಿ ಪೇಟೆಂಟು ಅಥವಾ ಬೌದ್ಧಿಕ ಹಕ್ಕಿನ ರೂಪದಲ್ಲಿ ಕಾಡುತ್ತಿರುವ ಅಥವಾ ಅಂತಹ ಅನುಮಾನಗಳನ್ನು ಬಿತ್ತಿರುವ ಅತ್ಯಂತ ಪ್ರಬಲವಾದ ಮೂಲ ಸಾಮಗ್ರಿ ಎಂದರೆ ತಳಿ ಮತ್ತು ಅದರ ಸಂರಕ್ಷಣೆಗೆ ಕಾಯ್ದೆಗಳು ಮತ್ತು ಅವುಗಳನ್ನು ಉತ್ಪಾದಿಸುವ ಕಂಪನಿಗಳು. ಇದರ ಜತೆಯಲ್ಲಿ ಆಹಾರದ ಉತ್ಪನ್ನಗಳು ಮುಂದೆ ಕಂಪನಿ ವಹಿವಾಟಿನಲ್ಲಿ ಮತ್ತು ಪೇಟೆಂಟೀಕರಣದಲ್ಲಿ ಬರುವ ಕಾರಣದಿಂದ ಅವೂ ರೈತನನ್ನು ಆಲೋಚನೆ ಹಚ್ಚುವ ಸಾಧ್ಯತೆಗಳಿವೆ.

ಮನುಷ್ಯ ಮೂಲತಃ ಕುತೂಹಲಿ, ಪ್ರಯೋಗ ಶೀಲ, ಸೃಜನಶೀಲ ಹಾಗೇನೆ ತುಂಬಾ ಶ್ರಮವಹಿಸಿ ಏನಾದರು ನಿಭಾಯಿಸಿಯೇನು ಎನ್ನುವ ಛಲವುಳ್ಳವನು. ಹಾಗಾಗಿ ನಾವಿನ್ಯ ಮಾದರಿಗಳನ್ನು ಒಗ್ಗಿಕೊಳ್ಳುತ್ತಾ ಬೆಳೆದ. ಇವೆಲ್ಲಾ ಬಹುದಿನ ತಡೆಯಲಿಲ್ಲ. ಏಕೆಂದರೆ ಕೃಷಿಯು ಒಂದು ನಿಸರ್ಗದ ನಿಯಮಗಳಲ್ಲೇ ಅದರ ಮಿತಿಯೊಳಗೇ-ದೊಡ್ಡದಾಗಿ – ಅದರಿಂದ ವಿಸ್ತಾರಗೊಂಡ ಕ್ರಮವಾಗಿ ಮುಂದುವರಿಯಬೇಕಿತ್ತು. ಹಾಗಾಗಲಿಲ್ಲ. ಬಹು ದೊಡ್ಡ ಜೈವಿಕ ಸಾಮ್ರಾಜ್ಯವಾದ ಕೀಟಗಳು ಕೃಷಿಯನ್ನು ಆಳುವಂತೆ ಪರಿಭಾವಿಸತೊಡಗಿ, ಅವನ್ನು ನಿಯಂತ್ರಿಸುವ ಅನೇಕ ಬಗೆಯ ವಿಷವಸ್ತುಗಳು ಅವಿಷ್ಕಾರವಾಗತೊಡಗಿತು. ಆಗ ರಸಾಯನ ಶಾಸ್ತ್ರವು ಏಳಿಗೆಯ ಹಂತದಲ್ಲಿತ್ತು. ಈ ಏರು ಗತಿಯು ಲಕ್ಷಾಂತರ ರಸಾಯನಿಕಗಳನ್ನು ಸೃಷ್ಟಿಸಿತು.

ಹೀಗೆ ಒಂದು ಅಭಿವೃದ್ಧಿಯ ಮಾನದಂಡವೆಂದರೆ ಹೊಸ ಹೊಸ ಉತ್ಪತ್ತಿ ಎಂಬಂತಹ ಸಂದರ್ಭದಲ್ಲಿ ಕೃಷಿಯು ಅದರ ಪ್ರಭಾವಕ್ಕೆ ಒಳಗಾಯಿತು. ಆಧುನಿಕ ಕೃಷಿಯು ಇಡೀ ಈ ಹೊಸ ಹೊಸ ಒಳಸುರಿಗಳ ಭರಾಟೆಯಿಂದ ಬೆಳೆಯತೊಡಗಿತು. ರಂಜಕ, ಸಾರಜನಕ, ಪೊಟ್ಯಾಷ್‌ ಇತ್ಯಾದಿ ಗೊಬ್ಬರಗಳ ಜತೆಗೆ ಸಹಸ್ರಾರು ಕೀಟನಾಶಕ, ಕಳೆನಾಶಕ, ಶಿಲೀಂದ್ರನಾಶಕ ಇತ್ಯಾದಿ, ಇತ್ಯಾದಿಗಳು ಸೇರಿದವು. ಉತ್ಪನ್ನ ಪ್ರೇರಿತ-ಮಾರುಕಟ್ಟೆಯನ್ನೇ ಗುರಿಯಾಗಿಸಿಕೊಂಡ – ಕೃಷಿಯೇ ಆಧುನಿಕತೆ ಎನ್ನುವಂತಾಯಿತು. ಇದು ಸಹಜವಾಗಿ ವ್ಯವಹಾರ, ಲಾಭ ವಸಾಹತುಶಾಹಿತನ, ಇತ್ಯಾದಿ ಆರ್ಥಿಕ ನಿಲುವುಗಳಲ್ಲಿ ಪ್ರಕಾಶಿಸತೊಡಗಿತು. ಆದರೂ ಯಾವುದೇ ಒಂದೇ ಬಗೆಯ ತೀರ್ಮಾನಗಳು ಸಂಪೂರ್ಣವಾಗಿ ಕೃಷಿಯನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ. ಕಾರಣ ಇದೊಂದು ಜೈವಿಕ ಪರಂಪರೆಯಿಂದ ವಿಕಾಸಗೊಂಡ ವಹಿವಾಟು. ಕೀಟಗಳು ಒಮ್ಮೆಲೆ ನಿರೋಧಕತೆಯನ್ನು ಬೆಳೆಸಿಕೊಂಡವು ಹೊಸ ರಸಾಯನಿಕ ಬೇಕಾಯಿತು. ರೋಗ ನಿಯಂತ್ರಣವೂ ಹಾಗೆಯೆ ತಪ್ಪತೊಡಗಿತು. ಆಗ ಹುಡುಕಾಟ ಆರಂಭವಾಯಿತು. ಜಗತ್ತಿನಾದ್ಯಂತ ೧೯೭೫ ರ ನಂತರ ಪರ್ಯಾಯದ ಗಾಳಿ ಬಲವಾಗಿ ಬೀಸತೊಡಗಿತು. ೧೯೯೦ರ ದಶಕದಲ್ಲಿ ಭಾರತದಲ್ಲಿ ಈ ಬೆಳವಣಿಗೆಗೆ ಸಾಕಷ್ಟು ಪ್ರಭಾವ ಬೀರಿತು. ರೈತರೂ ಸಮ್ಮೇಳನಗಳು, ಕಮ್ಮಟಗಳು, ಕಾರ್ಯಾಗಾರಗಳು ಎಂದೆಲ್ಲಾ ಸುತ್ತುತ್ತಾ ಹುಡುಕಾಟದಲ್ಲಿ ತೊಡಗಿದರು.

ಜಗತ್ತಿನಾದ್ಯಂತ ಜಾಗತೀಕರಣದ ಗಾಳಿ ಬೀಸ ತೊಡಗಿದಾಗಿನಿಂದ, ಬೌದ್ಧಿಕ ಹಕ್ಕುಗಳು ಅಪಾರ ಜನಪ್ರಿಯತೆ ಪಡೆದವು. ಆದರೂ ರೈತರನ್ನು ಅವು ಆಲೋಚನೆಗೆ ಹಚ್ಚಿರಲಿಲ್ಲ. ಅದಕ್ಕೂ ಮೊದಲೇ ಎಲ್ಲೋ ಕೆಲವು ಉತ್ಪನ್ನಗಳಿಗೆ ಪೇಟೆಂಟುಗೊಳಿಸುವಷ್ಟಕ್ಕೆ ಸೀಮಿತಗೊಂಡಿತ್ತು. ಈಗ ಹಾಗಿಲ್ಲ. ಬೌದ್ಧಿಕ ಹಕ್ಕುಗಳ ಹರಹು ತುಂಬಾ ವಿಶಾಲವಾಗಿದೆ, ವಿಸ್ತಾರಗೊಂಡಿದೆ. ಅಲ್ಲದೆ ಈ ಹರಹು ಕೇವಲ ಪೇಟೆಂಟಿಗಷ್ಟೇ ಅಲ್ಲ ಎಂದು ಪ್ರಮುಖವಾಗಿ ಅರಿವಾದಾಗಿನಿಂದ, ಹಾಗೂ ಇದು ಜಾಗತೀಕರಣ ಪ್ರಭಾವದಿಂದ ವ್ಯಾಪಾರದಲೂ ಅತಿ ಮುಖ್ಯವಾದುದರಿಂದ ಬೌದ್ಧಿಕ ಹಕ್ಕುಗಳನ್ನು ಬಲಗೊಳಿಸುವುದು ಅನಿವಾರ್ಯ ಮತ್ತು ಒತ್ತಾಯವೂ ಆಗಿದೆ. ಆದ್ದರಿಂದ ನಮ್ಮ ಜ್ಞಾನ, ಅನುಭವ ಇವು ಯಾವುದೇ ಮಾರುಕಟ್ಟೆಯನ್ನು ಲಾಭ-ನಷ್ಟದಲ್ಲಿ ಪ್ರಭಾವಿಸುವ ಎಲ್ಲಾ ಸಾಧ್ಯತೆಯೂ ಇರುವುದರಿಂದ ಇದರ ಅರಿವು ಇಂದು ಪ್ರಸ್ತುತವೆನಿಸಿದೆ. ಅದರಲ್ಲೂ ರೈತವರ್ಗವು ಬಹುಪಾಲು ಅನಕ್ಷರಸ್ಥ ಸಮುದಾಯದಿಂದ ವಿಕಾಸಗೊಂಡಿದೆ. ಇದರಿಂದ ಇಲ್ಲಿ ಜ್ಞಾನದ ಮೂಲ – ಮೌಖಿಕ ಪರಂಪರೆಯನ್ನೇ ಹೆಚ್ಚಾಗಿ ನಂದಿದೆ. ಇಲ್ಲಿನ ಜ್ಞಾನದ ಹಕ್ಕುಗಳನ್ನು ಸಾಬೀತು ಮಾಡುವ ಅವಕಾಶಗಳು ಕಷ್ಟ ಸಾಧ್ಯ. ಅಲ್ಲದೆ ಇವೆಲ್ಲ ಇಂದಿನ ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಸುಲಭವಾಗಿ ಒಳಗಾಗುವುದರಿಂದ ಇದರ ಅರಿವು ಅವಶ್ಯಕವಿದೆ. ಈ ಕುರಿತು ರೈತರಿಗೆ, ಕೃಷಿ ಪರ ಆಸಕ್ತರಿಗೆ, ಕೃಷಿ ಚಿಂತಕರಿಗೆ, ಕೃಷಿ ವಿದ್ಯಾರ್ಥಿಗಳಿಗೆ ವಿವರವಾದ ಹಿನ್ನೆಲೆಯ ಅರಿವು ಅವಶ್ಯಕವಾಗಿರಲೇಬೇಕು. ಹಾಗೆಂದೇ ಈ ಪ್ರಸ್ತುತ ಟಿಪ್ಪಣಿಗಳು ಅಂತಹ ಕೊರತೆಯನ್ನು ನೀಗುವ ಪ್ರಯತ್ನವನ್ನು ಮಾಡುತ್ತವೆ.

ಕೃಷಿಯಲ್ಲಿ ಬೌದ್ಧಿಕ ಹಕ್ಕುಗಳ ಪ್ರಸ್ತಾವ ಮತ್ತು ಅನ್ವಯಗಳಿಗೆ ಕಾರಣವಾಗುವ ವಿಚಾರಗಳ ಪ್ರಮುಖವಾಗಿ ಪ್ರಭಾವ ಬೀರುವದೆಂದರೆ ಔಷಧ, ರಸಾಯನಿಕಗಳು, ಮತ್ತು ಆಹಾರ ಪದಾರ್ಥಗಳು. ಔಷಧಗಳು ಏಕೆಂದರೆ ಈ ಹಿಂದೆ ಪ್ರಸ್ತಾಪಿಸಿದಂತೆ ಅನೇಕ ಔಷಧಗಳು ಸಸ್ಯಮೂಲದವು ಮತ್ತು ಅವನ್ನು ಬೆಳೆಯುವ ರೈತ ಮತ್ತು ಅವುಗಳ ಕುರಿತ ಜ್ಞಾನ ಪರಂಪರಾಗತವಾಗಿರುವ ಸಾಧ್ಯತೆಗಳು ಇವೆ. ಅಲ್ಲದೆ ಮುಖ್ಯವಾಗಿ ಕೃಷಿ ಸಂಬಂಧಿತ ವೈವಿಧ್ಯ ಮತ್ತು ತಳಿ ವೈವಿಧ್ಯ ಅಪಾರವಾಗಿದೆ. ಪ್ರತೀ ಬೆಳೆ ಜಾತಿಯು ಅನೇಕ ಸಂಬಂಧಿಗಳನ್ನು ಹೊಂದಿದ್ದು ಅವು ಆಯಾ ಮೂಲ ಸ್ಥಳದಲ್ಲಿ ಹೇರಳವಾಗಿ ಹರಡಿಕೊಂಡಿವೆ. ಅಲ್ಲದೆ ೧೦,೦೦೦-೧೨,೦೦೦ ವರ್ಷಗಳ ಹಿಂದೆ ಆರಂಭಗೊಂಡ ವ್ಯವಸಾಯ/ಪಶು ಸಂಗೋಪನೆಯಿಂದಾಗಿ ಅವುಗಳ ತಳಿ ವೈವಿಧ್ಯವೂ ಅನೇಕ ಮಜಲುಗಳನ್ನು ದಾಟಿದೆ. ತಳಿ ವೈವಿಧ್ಯದ ಅಗಾಧತೆಯನ್ನು ವಿವರಿಸಲು ಒಂದು ಉದಾಹರಣೆಯನ್ನು ಕೊಡಬೇಕೆಂದರೆ ಮಧ್ಯಪ್ರದೇಶದ ರಾಜ್ಯ ಒಂದರಲ್ಲೇ ಒಬ್ಬರೇ ವ್ಯಕ್ತಿ ತನ್ನ ಸಹಾಯಕರೊಡನೆ, ೧೭,೦೦೦ ಬತ್ತದ ತಳಿಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ. ಡಾ.ಆರ್.ಎಚ್‌ ರಿಚಾರಿಯಾ ಎಂವ ಜನಪರ ಕೃಷಿ ವಿಜ್ಞಾನಿಯೊಬ್ಬರೇ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಂದರೆ ಈ ಕೃಷಿಯಲ್ಲಿ ಅಡಕವಾಗಿರುವ ನೂರಾರು ಪ್ರಭೇದಗಳ ತಳಿಸಂಖ್ಯೆಯನ್ನು ಊಹಿಸಿ ನಮ್ಮ ದೇಶದಲ್ಲೇ ವಿಕಾಸಗೊಂಡಿರುವ ಲಕ್ಷಾಂತರ ರೈತರ ತಳಿಗಳು ಮತ್ತು ಅವುಗಳನ್ನು ಕುರಿತ ಅಪಾರ ಜ್ಞಾನ ನಮ್ಮಲಿದೆ. ಈಗ ಇದೆಲ್ಲವನ್ನೂ ನೋಂದಾಯಿಸದಿದ್ದರೆ ಅದೂ ಮತ್ತೊಬ್ಬರ ಪಾಲಾಗುವ ಸಾಧ್ಯತೆಗಳಿವೆ ಎಂಬ ಕಾರಣದಿಂದ ರೈತರ ಹಕ್ಕುಗಳ ತಳಿಕಾಯದೆಯನ್ನು ಜಾರಿಗೊಳಿಸಲಾಗಿದೆ. ಸಾಲದ್ದಕ್ಕೆ ಜೀನ್‌ಗಳ ಮಾರ್ಪಾಡಿನಿಂದಾದ ಬೆಳೆಗಳು (ಜಿ.ಎಮ್‌ ಬೆಳೆಗಳು), ಸೂಕ್ಷ್ಮಜೀವಿಗಳು ಇನ್ನು ಪೇಟೆಂಟಿನ ಪರಿಧಿಗೆ ಬರಲಿವೆ. ಈಗಾಗಲೇ ಚರ್ಚಿಸಿದಂತೆ ಉತ್ಪನ್ನ ಪೇಟೆಂಟು ಕೂಡ ಜಾರಿಯಾಗಲಿದೆ. ಇವು ಕೃಷಿಯನ್ನು ಆವರಿಸುವುದರಿಂದ ಅವುಗಳ ವಿಸ್ತೃತ ಅರಿವು ಬೇಕು. ಜತೆಯಲ್ಲಿ ಇವುಗಳನ್ನು ನಿಭಾಯಿಸಿ ನಮ್ಮತನವನ್ನು ಉಳಿಸಿಕೊಂಡು ಕೃಷಿಯನ್ನು ಮಾಡಬೇಕಾಗಿದೆ. ಆದ್ದರಿಂದ ಇವನ್ನೇ ಸ್ವಲ್ಪ ವಿವರವಾಗಿ ತಿಳಿಯಬೇಕಿದೆ.

ಕೃಷಿಯೆಂಬ ಉತ್ಪಾದಕ ಜಗತ್ತು

ಇಂದು ಭಾರತೀಯ ಕೃಷಿರಂಗದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. ಕೇವಲ ಜೀವನಾಧಾರವಾಗಿದ್ದ ಕಸುಬಾದ ಕೃಷಿಯು ಮಹತ್ತರವಾದ ಬದಲಾವಣೆಗಳೊಂದಿಗೆ ಹೊಸ ಜಗತ್ತಿನಲ್ಲಿ ಕಾಣತೊಡಗಿದೆ. ಮನುಕುಲದ ಅನೇಕ ಅವಶ್ಯಕತೆಗಳನ್ನು ಪೂರೈಸುವತ್ತ ವಿಕಾಸಗೊಂಡ ಈ ಕೃಷಿಯು ಮಾನವ ಸಂಸ್ಕೃತಿಯ ಅತ್ಯಂತ ಅಗಾಧವಾದ ಉತ್ಪಾದಕ ಜಗತ್ತು. ಮನುಕುಲವು ಕೇವಲ ಹಸಿವಿನ ನಿವಾರಣೆಯಲ್ಲಿ ಕೃಷಿಯನ್ನು ವಿಕಾಸಗೊಳಿಸಿ ಬಹು ಜನರ ಕಸುಬಾಗಿ ತಲೆಯೆತ್ತಿತು. ಈ ಭೂಮಿಯ ಅತಿ ಹೆಚ್ಚು ಜನರನ್ನು ತೊಡಗಿಸಿಕೊಂಡಿರುವ ಇದನ್ನು ವೈಜ್ಞಾನಿಕವಾಗಿ ಬಲಗೊಳಿಸುವ ಪ್ರಯತ್ನಗಳು ೨೦ನೇ ಶತಮಾನದ ಆದಿಯಲ್ಲಿ ಆರಂಭವಾದವು. ಆಗಲೇ ಅತಿಹೆಚ್ಚು ವೈಜ್ಞಾನಿಕ ಚಟುವಟಿಕೆಗಳೂ ನಡೆಯುತ್ತಿದ್ದವು ಹಾಗೂ ಮೂಲ ವಿಜ್ಞಾನವನ್ನು ಅನ್ವಯಗೊಳಿಸುವ ಪ್ರಯತ್ನದಲ್ಲಿ ಕೃಷಿಯು ಒಂದಾಯಿತು. ವಿಶಾಲತೆಯ ಅರ್ಥದಲ್ಲಿ ಅಗಾಧವಾದ ಈ ಕೃಷಿಯು ಬಹಳ ಒಳ್ಳೆಯ ಅವಕಾಶವನ್ನು ಒದಗಿಸಿತು. ಆಗ ನಡೆಯುತ್ತಿದ್ದ ರಸಾಯನಶಾಸ್ತ್ರ ಪ್ರಯೋಗಗಳ ಅನ್ವಯಕ್ಕೆ ಕೃಷಿಯು ಉತ್ತಮ ಮೈದಾನವಾಯಿತು. ಕೃಷಿಯನ್ನು ಉತ್ತಮ ಪಡಿಸುವ ಅಥವಾ ಹೆಚ್ಚುಮಾಡುವ ಅಥವಾ ಹೀಗೆ ಉತ್ಪಾದನಾ ಪ್ರಪಂಚವಾಗಿ ಹುಟ್ಟಿಹಾಕಿರುವ ಇದರ ಬಯಕೆಗಳೆನು ಎಂಬ ಪ್ರಶ್ನೆಗಳು ಸಹಜವಾಗಿ ಕಾಡಿರಬೇಕು. ಅಂದು ರಸಾಯನಿಕ ವಿಮರ್ಶೆಗಳಿಂದ ಉತ್ತರಿಸುತ್ತಿದ್ದ ಕಾಲ. ಸುಲಭವಾಗಿ ಕೃಷಿಯನ್ನು ರಸಾಯನ ವಿಜ್ಞಾನ ಅಪ್ಪಿಕೊಂಡಿತು.

೧೮೩೬ರಲ್ಲಿ ಜರ್ಮನಿಯ ಖ್ಯಾತ ರಸಾಯನ ವಿಜ್ಞಾನಿ ಜಸ್ಟಸ್‌ ವ್ಯಾನ್‌ ಲೀಬಿಗ್‌ ಅವರ ಪ್ರಮುಖ ಅನ್ವೇಷಣೆ ಮತ್ತು ವೈಜ್ಞಾನಿಕ ತತ್ವಗಳು ಕೃಷಿಯನ್ನು ಕುರಿತು ಆವರೆಗೆ ಇದ್ದ ಅರಿವನ್ನು ಸಂಪೂರ್ಣ ಬದಲಾಯಿಸಿಬಿಟ್ಟವು. ಅಂದರೆ ಕೃಷಿಯಲ್ಲಿ ಮಣ್ಣಿಗೂ ಮತ್ತು ಬೆಳೆವ ಬೆಳೆಗೂ-ಬೆಳೆಯ ಬಯಕೆಗಳಿಗೂ ನೇರ ರಸಾಯನಿಕ ಸಂಬಂಧವನ್ನು ಮೊದಲ ಬಾರಿಗೆ ಆತನು ವ್ಯಾಖ್ಯಾನಿಸಿದ್ದ. ಅದೇ ಇಂದಿನ ಅಧಿಕ ಇಳುವರಿ ಪರಿಕಲ್ಪನೆಗೂ ಗ್ರಾಸ ಒದಗಿಸಿತು. ಭೂಮಿಯು ನೀಡುವ ಕೆಲವು ಪದಾರ್ಥಗಳು ಕೃಷಿಗೆ ಅಥವಾ ಸಸ್ಯಗಳಿಗೆ ನೇರ ಸಂಬಂಧವನ್ನು ಹೊಂದಿದೆ ಎಂಬುದೇ ಅದರ ತಿರುಳು. ಈ ಸಂಬಂಧವು ಭೂಮಿಯು ಇದಗಿಸುವ ರಸಾಯನಿಕ ಮೂಲಗಳ ಆಯ-ವ್ಯಯವಾಗಿ ಮುಂದೆ ಇಡೀ ಕೃಷಿಯನ್ನೇ ಆಳತೊಡಗಿತು. ಬಂಡವಾಳವಿಲ್ಲದ ವಹಿವಾಟು ಇಲ್ಲ ಎಂಬ ತತ್ವ ಕೃಷಿಯಲ್ಲಿ ಆರಂಭವಾಯಿತು. ಭೂಮಿಯ ಕೊಡುಗೆಯನ್ನು ಪ್ರಮುಖವಾಗಿ ಪರಿಗಣಿಸಿ ಅದಕ್ಕಾಗಿ ಹುಟ್ಟಿಕೊಂಡವು ಗೊಬ್ಬರಗಳು, ಬಗೆ ಬಗೆಯ ರಸಾಯನಿಕಗಳು. ಇವುಗಳ ಬಯಕೆಗಳು ಜೈವಿಕ ಅರಿವಿನ ವಿಸ್ತಾರದಿಂದ ಮತ್ತಷ್ಟು ವಿಕಾಸಗೊಂಡವು ಹರಹನ್ನು ಹೆಚ್ಚಿಸಿಕೊಂಡವು.

ಕೃಷಿಯು ಜೀವ ಜಾತಿಯ ಹೊಟ್ಟೆ ಹೊರೆಯುವ ಜವಾಬ್ದಾರಿಯನ್ನು ಹೊತ್ತಿರುವ ಹಿನ್ನೆಲೆಯಲ್ಲಿ – ಮಣ್ಣನನ್ನು ಎಲ್ಲಾ ಜೀವಿಗಳ ಹೊಟ್ಟೆ – ಎಂದೇ ವ್ಯಾಖ್ಯಾನಿಸುತ್ತರೆ. ರಸಾಯನಶಾಸ್ತ್ರದ ಬೆಳವಣಿಗೆಗಳು ತಿಳುವಳಿಕೆಗಳೂ ಹೆಚ್ಚಿದಂತೆಲ್ಲಾ, ಅದರ ಅನ್ವಯಗಳೂ ಹೆಚ್ಚಿದವು. ೨೦ನೇ ಶತಮಾನದ ಕೃಷಿಯು ಅದರಲ್ಲೂ ಒಂದು ಉತ್ಪಾದಕ ಜಗತ್ತಾಗಿ ಬಂಡವಾಳಶಾಹಿ ಗುಣಗಳನ್ನು ಅಪ್ಪಿ ಹಿಡಿದು ಬೃಹತ್ತಾಗಿ ಬೆಳೆದಿದೆ. ಇಂದು ಒಂದು ಉತ್ಪಾದಕ ಜಗತ್ತಾಗಿ ಅಗಾಧ ಪ್ರಮಾಣದ ಒಳಸುರಿಗಳನ್ನು ಹೊಂದಿರುವ ವಹಿವಾಟಾಗಿದೆ. ಇವು ಕೇವಲ ರಸಾಯನಿಕಗಳು ಮಾತ್ರವಲ್ಲದೆ ಅವುಗಳನ್ನೂ ನಿರ್ದೇಶಿಸುವ ತಳಿಗಳನ್ನು ಒಳಗೊಂಡಿವೆ.