ಸಹಸ್ರಾರು ವರ್ಷ ಕೃಷಿಯನ್ನು ನಿರಂತರವಾಗಿ ಬೆಳೆಸಿ ಉಳಿಸಿಕೊಂಡು ಬಂದಿರುವ ರೈತರು ಈಗ ಜಾಣರಲ್ಲ ಎಂದು ಹೇಳಲು ಸಾಧ್ಯವೇ? ಖಂಡಿತಾ ಆ ಅರ್ಥವಲ್ಲ. ಅವರು ನಿಜಕ್ಕೂ ಜಾಣರೇ. ಆ ಜಾಣತನವನ್ನು ಈಗ ಅಂತಾರಾಷ್ಟ್ರೀಯ ನಿಲುವಿನಲ್ಲೂ ಪ್ರದರ್ಶಿಸಬೇಕಿದೆ. ಈಗ ಹೊಸ ಕಾಯಿದೆಗಳ ನಿಲುವುಗಳ ಸಂದರ್ಭದಲ್ಲಿ ರೈತರು ತಾವೆಂದೂ ಊಹಿಸದಂತಹ ದಿನಗಳನ್ನು ಎದುರಿಸಬೇಕಿದೆ. ಅದಕ್ಕಾಗಿ ಒಂದಷ್ಟು ತಯಾರಿಯನ್ನು ಮಾಡಿದರೆ ಮತ್ತಷ್ಟು ಒಳ್ಳೆಯ ದಿನಗಳನ್ನು ಕಾಣಲು ಅನುವಾದಿತೆಂಬ ಹಂಬಲ. ಇದೇ ಈ ಪುಟ್ಟ ಟಿಪ್ಪಣಿಗಳ ಆಶಯ. ರೈತರಿಗೆ ತಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಇದು ಅನಿವಾರ್ಯತೆಯನ್ನು ತಂದಿದ್ದರೂ ಅದನ್ನು ಜಾಣತನದಿಂದ ಬಳಸಿಕೊಳ್ಳಬೇಕಿದೆ. ಮುಖ್ಯವಾಗಿ ರೈತರಿಂದು ತಮ್ಮ ಹಕ್ಕುಗಳ ಚಲಾವಣೆಗೆ ಈ ಹಿಂದಿಗಿಂತಲೂ ಭಿನ್ನವಾಗಿ ವರ್ತಿಸುವುದು ಅನಿವಾರ್ಯವಾಗಬಹುದು. ಅದಕ್ಕಾಗಿ ಅವರೆಂದೂ ಖಿನ್ನರಾಗಬೇಕಿಲ್ಲ. ಈ ಹಿಂದಿನಂತೆಯೆ ತಮ್ಮ ಸ್ವಾತಂತ್ರ ಜೀವನವನ್ನು ಅನುಸರಿಸಬಹುದು. ಆದರೆ ಕೆಲವು ವಿಚಾರಗಳನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಲೇಬೇಕಿದೆ.

ಹಿಂದಿನ ಅಧ್ಯಾಯದಲ್ಲಿ ಪ್ರಸ್ತಾಪಿಸಿದಂತೆ ಪೇಟೆಂಟು ನೀಡಿಕೆ ಅದರ ಜಾರಿ ಕುರಿತಂತೆ ಹಲವಾರು ಗೊಂದಲಗಳು ಅನುಮಾನಗಳು ಕಾನೂನು ತಜ್ಞರನ್ನೂ ಕಾಡುತ್ತಿರುವಾಗ ಸಾಮಾನ್ಯ ಜನರನ್ನು ಬಿಡುವುದಾದರೂ ಹೇಗೆ? ಅಲ್ಲದೆ ಗ್ಯಾಟ್‌ ಒಪ್ಪಂದದ ಒಟ್ಟು ಪುಟಗಳು ಸುಮಾರು ೨೬,೦೦೦ ಅಂದ ಮೇಲೆ ಅದರ ವಿಸ್ತಾರದ ಜಾರಿ ವಿಮರ್ಶೆ ಎಲ್ಲವೂ ಅದಷ್ಟು ಸಂಕೀರ್ಣತೆಯನ್ನು ಹೊಂದಿರಬೇಡ. ವಾಸ್ತವವಾಗಿ ರೈತ ವರ್ಗವೇ ಈ ನಿಸರ್ಗದಲ್ಲಿ ನಿಜವಾದ ಸ್ವಾತಂತ್ರವನ್ನು ಅನುಭವಿಸುತ್ತಿದ್ದವನು. ಈಗೀಗ ಆಧುನೀಕತೆಯಲ್ಲಿ ಬಸವಳಿಯುತ್ತಿರುವುದು ಸಾಮಾನ್ಯವಾಗಿ ಬಹುಜನರಿಗೆ ಅರಿವಾಗುತ್ತಿದೆ.

ಔಷಧಿಗಳನ್ನೇ ಕುರಿತು ಆಲೋಚಿಸಿದರೂ ಒಂದು ಸಮಾಧಾನದ ಸಂಗತಿಯೆಂದರೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಅನೇಕ ಜೀವರಕ್ಷಕಗಳು ಶೇ ೯೦ ಕ್ಕೂ ಹೆಚ್ಚು ಸಾಮಾನ್ಯ ಕಾಯಿಲೆಯ ಮದ್ದುಗಳು. ಇವು ಬಹುಶಃ ಹಾಗೆಯೇ ಮುಂದುವರಿಯುತ್ತವೆ. ಬಹುಶಃ ಒಂದು ವೇಳೆ ಹೊಸ ಮಾದರಿ ಉತ್ಪನ್ನಗಳು ಉದಾಹರಣೆಗೆ ಮುಂದೆ ಪ್ರಭಾವಶಾಲಿಯಾಗಿ ಬಳಕೆಯಾಗಬಲ್ಲ ಜೈವಿಕ ತಂತ್ರಜ್ಞಾನದ ಅಳವಡಿಕೆಯ ಉತ್ಪನ್ನಗಳು ಮಾತ್ರ ದುಬಾರಿಯಾಗಬಲ್ಲವು ಅಥವಾ ಭಿನ್ನವಾಗಿ ದೊರಕುತ್ತವೇನೋ. ಆದಾಗ್ಯೂ ಅಲ್ಲಿಯೂ ಅನ್ವೇಷಕ ಮಾನವೀಯ ಮನಸ್ಸಿನವನಾಗಿರುವುದಿಲ್ಲ ಎಂಬ ಋಣಾತ್ಮಕ ಮನೋಭಾವಕ್ಕೆ ಕಾರಣವಿಲ್ಲ. ವಿಜ್ಞಾನದಲ್ಲಿ ಈ ಹಿಂದೆ ಬಹುತೇಕ ಅನ್ವೇಷಣೆಗಳು ಈ ರೀತಿಯಲ್ಲಿ ಮನುಕುಲಕ್ಕೆ ದೊರಕದಿದ್ದರೆ ಜೀವನ ಬಹಳ ದುಸ್ತರವಾಗಿರುತ್ತಿತ್ತೇನೋ? ಆದರೆ ಹಾಗಾಗುತ್ತಿಲ್ಲವಲ್ಲ. ನಾವೀಗ ಅನುಭವಿಸುತ್ತಿರುವ ಪ್ರಪಂಚವೆಂತಹದು. ಸಾಮಾನ್ಯ ಅರಿವಿಗೆ ಆಲೋಚನೆಗೆ ಎಟಕುವಂತಿರುವುದಲ್ಲವೆ. ಸ್ವಲ್ಪ ಭಿನ್ನವಾದ ಬೌದ್ಧಿಕ ಪ್ರಪಂಚ ಮಾತ್ರ ತನ್ನನ್ನು ಬೇರೆಯಾಗಿ ಗುರುತಿಸಿಕೊಳ್ಳುತ್ತಿದೆ.

ವಿಜ್ಞಾನದ ಮಾನವೀಯ ಮುಖಕ್ಕೆ ಇತ್ತೀಚೆಗಿನ ಉದಾಹರಣೆಯನ್ನು ನೋಡೋಣ. ಇತ್ತೀಚೆಗಿನ ವಿಟಮಿನ್‌‘ಎ’ ಅಂಶವುಳ್ಳ ಅಕ್ಕಿಯನ್ನು (ಗೋಲ್ಡನ್‌ರೈಸ್‌) ಅನ್ವೇಷಿಸಿದ ಮಹಾನುಭಾವ ಅನ್ನ ಉಣ್ಣುವ ರಾಷ್ಟ್ರಗಳು ಬಹುತೇಕ ಬಡರಾಷ್ಟ್ರಗಳು ಮತ್ತು ಬಹು ಸಂಖ್ಯೆಯ ರೈತರು ಎಂದು ಆ ತಿಳಿವನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ. ಪೇಟೆಂಟು ಪಡೆಯದೆ ಅದನ್ನು ಉಚಿತವಾಗಿ ಎಲ್ಲಾ ಏಷಿಯಾದ ರಾಷ್ಟ್ರಗಳಿಗೆ ಉಚಿತವಾದ ಕೊಡುಗೆಯೆಂದು ನೀಡಿದ್ದಾರೆ ಆ ಮೂಲಕ ತನ್ನ ಮಾನವೀಯ ಮುಖವನ್ನು ಪರಿಚಯಿಸಿದ್ದಾರೆ. ಹೀಗೆ ಮನುಕುಲವನ್ನು ಕಾಪಾಡುವ ಮಾನವೀಯ ಅಂಶಗಳು ಸದಾ ಕಾಪಾಡಿಲ್ಲವೇ? ಇಂತಹ ಭರವಸೆಗಳನ್ನು ನಾವು ಎಲ್ಲ ಕಾಲದಲ್ಲೂ ನಿರೀಕ್ಷಿಸಬಹುದಲ್ಲವೆ?

ವ್ಯವಸಾಯದ ಕುರಿತ ಕಾಯಿದೆಗಳು ಸಮಾಜದ ಆಸಕ್ತಿಗೆ ಎಂದು ಅಮೇರಿಕ ೧೯೦೮ರ ಸುಮಾರಿಗೆ ಹೇಳುತ್ತಾ ಮೊದಲ ಮಸೂದೆಯನ್ನು ತಂದಿದ್ದಾರೆ. ೧೯೧೦ ರ ಸುಮಾರಿಗೆ ಅದು ಕಾನೂನು ಆಗಿ ಅಲ್ಲಿ ಜಾರಿಗೆ ಬಂದಿದೆ. ಆಧುನಿಕ ಕೃಷಿಯ ಅಭಿವೃದ್ಧಿಯ ಮಾನದಂಡಗಳನ್ನು ಅಮೆರಿಕಾವೇ ಕಟ್ಟಿಕೊಟ್ಟಿರುವಾಗ ಕಾಯಿದೆಗಳು ಸಹಜವಾಗಿಯೇ ಅಲ್ಲಿಂದಲೇ ಚಿಂತನೆಯನ್ನು ಆಮದು ಮಾಡಿಕೊಂಡಿದ್ದರಲ್ಲಿ ಆಶ್ಚರ್ಯವಿಲ್ಲ.

ಏನೇ ಇರಲಿ ರೈತರು ತಮ್ಮ ಉತ್ಪಾದಕ ಪ್ರಪಂಚದಲ್ಲಿರುವ ಸ್ವಾತಂತ್ರ ಮತ್ತು ಸಂತೋಷವನ್ನು ಋಣಾತ್ಮಕವಾಗಿ ಜೀವನದಲ್ಲಿ ಬಳಸಿಕೊಳ್ಳಲು ಈಗಾಗಲೇ ಪ್ರಯತ್ನಿಸುತ್ತಿರುವಂತೆ ಪರ್ಯಾಯ ಆಲೋಚನೆಗಳನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡು ಮುಂದಿನ ಸುದಿನಗಳನ್ನು ಹುಡುಕುವುದು ಒಳಿತು. ಈಗ ಸದ್ಯದ ಪರಿಸ್ಥಿತಿಯಲ್ಲಿ ರೈತರು ಹಕ್ಕುಗಳನ್ನು ಚಲಾಯಿಸುವಲ್ಲಿ ಈಗಿನ ಸಂದರ್ಭಕ್ಕೆ ತಮ್ಮ ತಳಿಯ ಕುರಿತಂತೆ ನಿಭಾಯಿಸಿದರೆ ಸಾಕು. ಪ್ರಮುಖವಾಗಿ ತಾವು ಬೆಳೆಯುತ್ತಿರುವ, ಜೋಪಾನವಾಗಿ ಕಾಯ್ದಿಟ್ಟುಕೊಂಡು ಬಂದ ತಳಿಗಳನ್ನು ತಮ್ಮದೇ ಗ್ರಾಮ ಪಂಚಾಯಿತಿಯ ಮೂಲಕ ನೊಂದಾಯಿಸಿ ಗ್ರಾಮ ಬೀಜ ಸಂಗ್ರಹಣೆಯನ್ನು ಕೈಗೊಳ್ಳಬಹುದು. ಆಮೂಲಕ ಗ್ರಾಮೀಣ ಸಮುದಾಯದ ರೈತರ ತಳಿಗಳನ್ನು ನೊಂದಯಿಸಲು ಸಹಾಯಕವಾಗಬಹುದು. ಈ ಕಾರ್ಯದಲ್ಲಿ ಕೃಷಿ ಇಲಾಖೆಯ ಕೃಷಿಸಹಾಯಕರು ಗ್ರಾಮದ ಮಟ್ಟದಲ್ಲಿ ರೈತರ ಸಹಾಕಾರದಿಂದ ಕೈಗೊಳ್ಳಬಹುದು. ಅಲ್ಲದೆ ಇಂತಹ ಕಾರ್ಯಕ್ಕೆಂದೇ ವಿಶೇಷ ನೆರವನ್ನೂ ಸರ್ಕಾರ ಕೈಗೊಳ್ಳುವಂತೆ ರೈತರು ಒತ್ತಡ ತರಬಹುದು.

ಅನೇಕ ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಗ್ರಾಮೀಣ ಸಂಘಟನೆಗಳನ್ನು ಈ ಕುರಿತು ಕೈಗೊಂಡು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಉದಾಹರಣೆಗೆ ಸ್ವಾಮಿನಾಥನ್‌ ಸಂಶೋಧನಾ ಪ್ರತಿಷ್ಠಾನದಲ್ಲಿ ಈ ಬಗೆಯ ಗ್ರಾಮೀಣ ತಳಿಸಂಶೋಧನೆ ಮತ್ತು ಸಂಗ್ರಹಣೆಗೆ ಕಾರ್ಯಗಳನ್ನು ಆಯೋಜಿಸಿದ್ದಾರೆ. ಜತೆಯಲ್ಲಿ ‘ಹನೀ ಬೀ – ನೆಟ ವರ್ಕ್’ ಮತ್ತು ರಾಷ್ಟ್ರೀಯ ನಾವೀನ್ಯ (ಇನೊವೆಷನ್‌) ಪ್ರತಿಷ್ಠಾನವು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆಯೋಜನೆಯೊಂದಿಗೆ ತಳಮಟ್ಟದ ಸಂಶೋಧಕರನ್ನು ಸಂಶೋಧನೆಯನ್ನು ಗುರುತಿಸುವುದರ ಮೂಲಕ ಗ್ರಾಮೀಣ ಜನತೆಗೆ ಮತ್ತು ರೈತರಿಗೆ ಸಹಾಯಕವಾಗಿದ್ದಾರೆ. ಅಲ್ಲದೆ ಈ ದೆಸೆಯಲ್ಲಿ ಮತ್ತಷ್ಟು ಪ್ರಯತ್ನಗಳು ಮುಂದೆಯು ಆರಂಭವಾಗುವುದರಲ್ಲಿ ನಿಸ್ಸಂಶಯ.

ಇದೊಂದು ರೀತಿಯಲ್ಲಿ ಹೊಸ ಸವಾಲಾಗಿ ಕಾಣಬರುತ್ತಿದ್ದರೆ ಆಶ್ಚರ್ಯವಿಲ್ಲ. ಕೃಷಿಯನ್ನು ನಿಸರ್ಗದ ಜತೆಯಲ್ಲಿ ಕೊಂಡೊಯ್ಯಲು ಸಮೃದ್ಧ ವೈವಿಧ್ಯವನ್ನು ಕಾಪಾಡಿಕೊಂಡೇ ಉಳಿಯಬೇಕಿದೆ. ಅವನ್ನೆಲ್ಲಾ ಕಾಪಾಡಿಕೊಂಡು ಬರುವಲ್ಲಿ ಅವುಗಳ ವಾಸಸ್ಥಾನದ ಪೋಷಣೆಯು ಇಡೀ ಮನುಕುಲದ ಹೊಣೆ. ರೈತರ ಅವಶ್ಯಕತೆಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಈ ಜೈವಿಕ ಸಂಪತ್ತೇ ಸಲಹುತ್ತಿರುವುದರಿಂದ ಇದನ್ನು ಗೌರವಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಸವಾಲನ್ನು ಎದುರಿಸಲು ರೈತರಿಗೆ ಖಂಡಿತ ಬಹಳ ಕಷ್ಟ ಆಗಲಾರದು. ಕಾರಣ ಈಗಾಗಲೆ ರೈತ ಸಾಕಷ್ಟು ಕಷ್ಟಗಳ ನಿಭಾಯಿಸುವಲ್ಲಿ ತರಬೇತಿಯನ್ನು ಹೊಂದಿದ್ದಾರೆ. ಇದನ್ನು ಅದರ ಜತೆಯಲ್ಲಿ ಕೊಂಡೊಯ್ಯುವುದಾದರೆ ಸಾಕು.

ನಮ್ಮ ರೈತರಲ್ಲಿ ಆಯಾ ಭೌಗೋಳಿಕ ಸನ್ನಿವೇಶಕ್ಕೆ ತಕ್ಕಂತಹ ಅನೇಕ ತಂತ್ರಜ್ಞಾನವನ್ನು ರೂಪಿಸಿಕೊಂಡು ಬಂದಿದ್ದಾರೆ. ಅವನ್ನು ಭೌಗೋಳಿಕ ನಿಯಮಗಳ ಅಡಿ ತರುವಂತೆ ಪ್ರೇರೇಪಿಸಬಹುದು. ನಮ್ಮಲ್ಲಿರುವ ಆಹಾರ ವೈವಿಧ್ಯ ಅಪಾರವಾದುದು ಅವಂತೂ ಆಯಾ ಪರಿಸರ ಮತ್ತು ಭೌಗೋಳಿಕ ಮಹತ್ವವನ್ನು ಹೊಂದೇ ಇರುತ್ತವೆ. ಇವಕ್ಕೆಲ್ಲಾ ವಿಶೇಷ ಕಾನೂನಿನ ರಕ್ಷಣೆಕೊಡುವಂತೆ ಮಾಡುವಲ್ಲಿ ನಾವು ಜಾಣತನವನ್ನು ಮೆರೆಯಬೇಕಿದೆ. ಉದಾಹರಣೆಗೆ ಸ್ಕಾಚ್‌ವಿಸ್ಕಿ ಸ್ಕಾಟ್ಲೆಂಡಿನಲ್ಲಿ ಮಾತ್ರ ತಯಾರಾಗುತ್ತದೆ. ಅದೇ ರೀತಿಯ ವಿಸ್ಕಿಯು ಎಲ್ಲೇ ತಯಾರಾದರೂ ಅದನ್ನು ಸ್ಕಾಚ್‌ಎನ್ನುವಂತಿಲ್ಲ. ಅದಕ್ಕೆ ಅಲ್ಲಿನ ಕಾನೂನಿನ ರಕ್ಷಣೆಯಿದೆ. ಅದೇ ರೀತಿ ಶಾಂಪೆನ್‌ಕೂಡ ಭೌಗೋಳಿಕ ರಕ್ಷಣೆಯನ್ನು ಪಡೆದಿದೆ. ನಮ್ಮಲ್ಲಿ ಅನೇಕ ಸಾಧ್ಯತೆಗಳನ್ನು ಕಂಡುಕೊಳ್ಳಬಹುದು. ಮಲೆನಾಡಿನ “ಅಕ್ಕಿ ಬೋಜ” ಇದೊಂದು ಅಕ್ಕಿಯಲ್ಲೇ ತಯಾರಿಸುವ ಪೇಯ. ಧಾರವಾಡದ ಪೇಡ ಇನ್ನೊಂದು ಉತ್ತಮ ಉದಾಹರಣೇ. ಅದೇ ಪೇಡವನ್ನು ಎಲ್ಲೀ ತಯಾರಿಸದರೂ ಹಾಗೆ ಕರೆಯದಂತಹ ಕಾನೂನು ನಮ್ಮಲಿಲ್ಲ. ಇದನ್ನು ಭೌಗೋಳಿಕ ರಕ್ಷಣೆ ಕೊಡುವಂತೆ ಒತ್ತಡ ಹೇರಬಹುದು. ಇಂತಹ ಅನೇಕ ಸಾಧ್ಯತೆಗಳನ್ನು ಒಟ್ಟು ಮಾಡಬಹುದು. ಕೊಡಗಿನ ಕಿತ್ತಳೆ. ನಂಜನಗೂಡಿನ ರಸಬಾಳೆ, ಧಾರವಾಡದ ಆಪೂಸು, ಕೋಲಾರದ ಭೈರನೆಲ್ಲು (ಅಕ್ಕಿ), ಸಿರ್ಸಿಯ ಔಗ (ಅವುಗ), ಗೋಕಾಕದ ಕರದಂಟು, ಬೆಳಗಾಮ್‌ನ ಕುಂದಾ. ಹೀಗೆ ಹಲವಾರು ದಾಖಲಿಸಬಹುದು. ಈಗ ಇವುಗಳತ್ತ ಗಮನ ಬಂದಿದೆ.

ಈ ಕಾನೂನುಗಳು ವಿಕಾಸ ಮತ್ತು ಜನಪರ ನಿಲುವುಗಳನ್ನು ಸೆಮಿಕರಿಸಿ ನೋಡಿದರೆ ಅನೇಕ ಬಾರಿ ವಿಚಿತ್ರಗಳು ಕಂಡುಬರುತ್ತವೆ. ಕಾನೂನುಗಳು ಆಳುವ ವರ್ಗದ ವಿಕಾಸ. ಅದರಲ್ಲಿ ಅಧಿಕಾರಿಶಾಹಿ ಹಿಡಿತಕ್ಕೆ ಬೇಕಾದ ಆಯಾಮಗಳೇ ಹೆಚ್ಚು ಮತ್ತು ಅದರ ಜಾರಿಗೆಂದೇ ಜನತೆಯ ಮೇಲೆ ದಬ್ಬಾಳಿಕೆಗಳು ಸಾಮಾನ್ಯ. ಹಾಗೆಂದೆ ಪ್ರತಿಭಟನೆಗಳು ಚಳುವಳಿಗಳು ವಿಕಾಸಗೊಂಡಿವೆ. ಕಡೆಯಲ್ಲಿ ಒಂದು ಕಥೆಯ ಸಂದರ್ಭ ನೆನಪಾಗುತ್ತಿದೆ ಇದರ ಮೂಲಕ ಈ ಪುಟ್ಟ ಟಿಪ್ಪಣಿಗಳನ್ನು ಮುಗಿಸಬಹುದೇನೋ.

ಒಂದು ಊರಿನ ಓರ್ವ ವ್ಯಕ್ತಿ ಊರನ್ನು ತೊರೆದು ದೂರದ ಕಾಡಿನಲ್ಲಿ ವಾಸಿಸುತ್ತಿರುತ್ತಾನೆ. ಯಾವ ಜನ ಸಂಪರ್ಕವಿಲ್ಲದೆ ಒಂಟಿಯಾಗಿ ಅಲ್ಲಿದ್ದುಕೊಂಡು ಹೆಚ್ಚೂ ಕಡಿಮೆ ಎಲ್ಲರಿಗೂ ಮರೆತೇ ಹೋಗಿರುತ್ತಾನೆ. ಕೆಲವು ಜನ ಆಕಸ್ಮಾತ್‌ಕಾಡಿನ ಕಡೆ ಹೋಗಿರುವಾಗ ಆತ ಕಾಣ ಬರುತ್ತಾನೆ. ಯಾರೋ ಮಾನವ ಪ್ರಾಣಿ ಹೀಗೆ ಒಂಟಿಯಾಗಿ ಜೀವನ ತಳ್ಳುತ್ತಿರುವುದನ್ನು ಪತ್ತೆಹಚ್ಚಿದವರಂತೆ ಅವನನ್ನು ಪ್ರಶ್ನಿಸಲು ಮೊದಲಾಗುತ್ತಾರೆ. ಆತನೋ ಶ್ರೀಮದ್ಗಾಂಭೀರ್ಯದಿಂದ ತನ್ನಪಾಡಿಗೆ ತಾನಿರುವುದು ಜನರಿಗೆ ಮತ್ತಷ್ಟು ಆಶ್ಚರ್ಯವಾಗುತ್ತದೆ. ಆದರೂ ಜನರಿಗೆ ಕುತೂಹಲ ಮತ್ತು ಆತನ ಬಗ್ಗೆ ಊರವರಿಂದ ಕೇಳಿದ ಕತೆಗಳು ನೆನಪಿನಲ್ಲಿರುತ್ತವೆ. ಕನಿಷ್ಟ ವಿಚಾರವನ್ನಾದರೂ ಆತನಿಂದ ತಿಳಿಯುವ ಕುತೂಹಲದಿಂದ ಮತ್ತೆ ಕೇಳುತ್ತಾರೆ. ಆತನಿಗೆ ಕಾಡಿನಲ್ಲಿ ಭಯವಾಗುವುದಿಲ್ಲವೇ? ಎಂದು ಪ್ರಶ್ನಿಸುತ್ತಾರೆ. ಆತ ನಕ್ಕು ಕಾಡಿನಲ್ಲೆಂತಹ ಭಯ ಎಂದು ಮತ್ತೆ ಅದೇ ಸಂಯಮದಿಂದ ಇವರತ್ತ ಕಣ್ಣು ಹಾಯಿಸುತ್ತಾನೆ. ಆಗ ಅವರು ಕಾಡಿನಲ್ಲಿರುವ ಹುಲಿ ಚಿರತೆ ಇತ್ಯಾದಿ ಪ್ರಾಣಿಗಳಿಲ್ಲವೆ ಎಂಬ ಪ್ರಶ್ನೆಗೆ ಹೀಗನ್ನುತ್ತಾನೆ. “ಇಲ್ಲಿರುವ ಹುಲಿಗಳೆನು ಮಾಡಿಯಾವು? ಹೇಳಬೇಕೆಂದರೆ ನನಗೆ ಊರೆ ಭಯ ಏಕೆಂದರೆ ಅಲ್ಲಿ ಸರ್ಕಾರವಿದೆ” ಇರಬಹುದು ನಿಸರ್ಗದ ಕೂಸಾದ ಮಾನವ ಸಹಜವಾಗಿ ಸ್ವತಂತ್ರಜೀವಿ ಕಾಯಿದೆ ಕಟ್ಟಳೆಗಳು ಕೇವಲ ಆಳುವರ ನೆಪಕ್ಕೆ. ಅದಕ್ಲದೆ ಸಾಮಾನ್ಯರ ಜೀವನಕ್ಕೆ ಅವೇನೂ ವಿಶೇಷವನ್ನು ಸೇರಿಸಲಾರವು