‘ಗಂಧವತೀ ಧರಣಿ’ ಎಂಬ ಮಾತಿನಂತೆ ಮಣ್ಣು ಸಕಲ ಚರಾಚರಗಳ ಜೀವಚೈತನ್ಯದ ಸೆಲೆ. ಭೂಮಿಯನ್ನು ಸಜೀವವನ್ನಾಗಿ ಇಟ್ಟಿರುವುದೇ ಈ ಮೇಲ್ಮಣ್ಣು. ಹಬ್ಬುವ ಕಾಡು, ಹರಿಯುವ ನದಿಗೂ ಕಸುವು ನೀಡುವ ಈ ಮೇಲ್ಮಣ್ಣು ಕೃಷಿಯಲ್ಲಂತೂ ಸರ್ವಸ್ವ! ಇಂತಹ ಸಂಜೀವಿನಿ ಮಣ್ಣು ಇಂದು ಅಪಾಯದ ಅಂಚಿನಲ್ಲಿದೆ. ಮಾನವ ದುರಾಸೆ ಮತ್ತು ಅವಿವೇಕಿತನದ ಬಲಿಪಟ್ಟಿಯಲ್ಲಿ ಮಣ್ಣು ಕೂಡ ಇಂದು ಮೇಲಿನ ಸ್ಥಾನವನ್ನೇ ಪಡೆದಿದೆ.

ಮಣ್ಣೆಂದರೆ ಒಂದು ನಿರ್ಜೀವವಾದ ಜಡ ವಸ್ತುವಲ್ಲ, ಪೃಥ್ವಿಯ ಮೇಲೆ ಅವರಿಸಿರುವ ನಿರ್ಜೀವ ವೃತ್ತಿಕೆಯಲ್ಲ, ಬದಲಾಗಿ ಅದೊಂದು ಜೀವ ತುಂಬಿದ ಸಚೇತನ ವಸ್ತು. ಮಣ್ಣು ರಾತ್ರೋರಾತ್ರಿ ಉದ್ಭವ ವಸ್ತುವಲ್ಲ, ಕೋಟಿ- ಕೋಟಿ ವರುಷಗಳ ಕಾಲ ವಾತಾವರಣದ ಹಲವು ಕ್ರಿಯೆಗಳಿಗೆ ಒಳಗಾಗಿ ಮಾರ್ಪಾಡಾಗಿ ಬಂದಿರುವ ಒಂದು ಸಂಕೀರ್ಣ ವಸ್ತು. ಮಣ್ಣಿನಲ್ಲಿರುವ ಜೀವ ಸತ್ವ ಚಟುವಟಿಕೆಗಳೇ ನಮಗೆ ಜೀವನಾಧಾರ. ಕೇವಲ ಅಂಗುಲ ಮಣ್ಣು ತಯಾರಾಗಬೇಕಾದರೆ 300ರಿಂದ 500 ವರ್ಷಗಳೇ ಬೇಕಾಗುತ್ತವೆ.

ಮಣ್ಣು ಮತ್ತು ನೀರು ಇವೆರಡು ನೈಸರ್ಗಿಕ ಸಂಪನ್ಮೂಲಗಳು, ಇವುಗಳ ಸಮರ್ಪಕ ಬಳಕೆ ಬೆಳೆಗಳ ಉತ್ಪಾದನೆಯಲ್ಲಿ ಬಹಳ ಅವಶ್ಯಕ. ಬೆಳೆಯುತ್ತಿರುವ ಬೆಳೆಗಳಿಗೆ ಬೇಕಾದ ಪೋಷಕಾಂಶ ಹಾಗೂ ನೀರನ್ನು ಹಿಡಿದಿಟ್ಟುಕೊಳ್ಳುವ ಮಾಧ್ಯಮ ಮಣ್ಣು. ಉತ್ತಮ ಬೆಳೆಯನ್ನು ತೆಗೆಯಬೇಕಾದರೆ ಮಣ್ಣಿನಲ್ಲಿ ನೀರಿನ ಬಸಿಯುವಿಕೆಯ ಅವಶ್ಯಕತೆ ಇರುತ್ತದೆ. ಮಣ್ಣಿನ ಸ್ಥಿತಿಯನ್ನು ಕಾಪಾಡಿಕೊಂಡು ಬರಬೇಕಾದರೆ ಭೂಮಿಯಲ್ಲಿ ನಿರಾತಂಕವಾಗಿ ನೀರು ಚಲಿಸುವುದಕ್ಕೆ ಅವಕಾಶವಿರಬೇಕು. ವಾಯುಚಲನೆ, ನೀರಿನ ಬಸಿಯುವಿಕೆಗೆ ಅಡಚಣೆ ಉಂಟಾದರೆ ಬೆಳೆಗಳ ಬೆಳವಣಿಗೆ ಕುಂಠಿತವಾಗುವುದು.

ಕರ್ನಾಟಕವನ್ನು ಮಣ್ಣಿನ ರಚನೆ, ಆದ್ರತೆ, ಎತ್ತರ, ಮೇಲ್ಮೈ ರಚನೆ, ಸಸ್ಯ ವೈವಿಧ್ಯ, ಮಳೆ ಹಾಗೂ ಇತರ ಕೃಷಿ- ಹವಾಮಾನ ಅಂಶಗಳ ಆಧಾರದ ಮೇಲೆ ಹತ್ತು ಕೃಷಿ-ಹವಾಮಾನ ವಲಯಗಳಾಗಿ ವಿಂಗಡಿಸಲಾಗಿದೆ. ರಾಜ್ಯದಲ್ಲಿ ಮುಖ್ಯವಾಗಿ ನೈಋತ್ಯ ಮಾರುತ (ಜೂನ್ದ್ ನಿಂದ ಸೆಪ್ಟೆಂಬರ್- 806 ಮಿ.ಮೀ.) ಹಾಗೂ ಈಶಾನ್ಯ ಮಾರುತಗಳ (ಅಕ್ಟೋಬರ್ ನಿಂದ ಡಿಸೆಂಬರ್- 195 ಮಿ.ಮೀ.) ಮೂಲಕ 1139 ಮಿ.ಮೀ.ನಷ್ಟು ಸಾಮಾನ್ಯ ಮಳೆಯಾಗುತ್ತದೆ.

ಮಳೆಗಾಲ ನಂತರದ (ಜನವರಿಯಿಂದ ಮಾರ್ಚಿವರೆಗೆ) ಮಳೆ ಸುಮಾರು 14 ಮಿ.ಮೀ. ಹಾಗೂ ಮಳೆಗಾಲದ ಮುನ್ನಾ ಅವಧಿಯಲ್ಲಿ (ಏಪ್ರಿಲಿನಿಂದ ಮೇ ವರೆಗೆ) 124 ಮಿ.ಮೀ.ನಷ್ಟಿರುತ್ತದೆ. ಹಾಗಾಗಿ ರಾಜ್ಯವು ಮೂರು ಕೃಷಿ ಋತುಮಾನಗಳನ್ನು ಹೊಂದಿದೆ- ಮುಂಗಾರು (ಏಪ್ರಿಲಿನಿಂದ ಸೆಪ್ಟೆಂಬರ್), ಹಿಂಗಾರು (ಅಕ್ಟೋಬರ್ ನಿಂದ ಡಿಸೆಂಬರ್) ಮತ್ತು ಬೇಸಿಗೆ (ಜನವರಿಯಿಂದ ಮಾರ್ಚಿ).

ಮಣ್ಣು ಆರೋಗ್ಯಪೂರ್ಣವಾಗಿ ಸಕಲ ಪೋಷಕಾಂಶ, ಖನಿಜಾಂಶಗಳ ಖಜಾನೆಯಂತಾಗಲು, ಗಿಡಗಳಿಗೆ ಪೋಷಕಾಂಶಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿರಬೇಕು. ಅವು ಯಾವುವೆಂದರೆ;

ಮಣ್ಣಿನ ತೇವಾಂಶ (Soil Moisture)

ವಿವಿಧ ಪೋಷಕಾಂಶಗಳು ಕರಗಲು ಮಣ್ಣಿನಲ್ಲಿ ನೀರಿನ ಅಂಶವಿರಬೇಕು. ಮಣ್ಣಿನಲ್ಲಿ ನೀರು ಅತೀ ಕಡಿಮೆಯಾದಲ್ಲಿ, ಪೋಷಕಾಂಶಗಳು ಕರಗಲು ಅಸಾಧ್ಯ. ನೀರು ಹೆಚ್ಚಿನ ಪ್ರಮಾಣದಲ್ಲಿದ್ದಲ್ಲಿ, ಪೋಷಕಾಂಶಗಳು ಹರಿದು ಹೊರಹೋಗುವ ಸಾಧ್ಯತೆಯೂ ಇದೆ. ಮಳೆ ಅಥವಾ ನೀರಾವರಿ ವ್ಯವಸ್ಥೆಯಿಂದ ಸಿಗುವ ನೀರು ಗಿಡಗಳ ಬೆಳವಣಿಗೆಗೆ ಸಹಾಯಕವಾಗಿರಬೇಕು. ಅಂದರೆ ಮಣ್ಣು ಹದವಾಗಿ ತೇವಾಂಶದಿಂದ ಹೊಂದಿರಬೇಕು.

ಮಣ್ಣಲ್ಲಿ ಗಾಳಿಯಾಡುವಿಕೆ (Soil Aeration)

ಮಣ್ಣು ಉತ್ತಮ ರಚನೆಯಿಂದಿರಬೇಕು. ಮಣ್ಣಿನ ಕಣದಲ್ಲಿ ಸೂಕ್ಷ್ಮ ರಂಧ್ರಗಳಿರಬೇಕು. ಮಣ್ಣಿನೊಳಗೆ ಕಾಲುವೆಗಳಿರಬೇಕು. ಇವುಗಳ ಮೂಲಕ ಗಾಳಿ (ಗಿಡದ ಬೇರುಗಳಿಗೆ ಗಾಳಿ ಬಹಳ ಮುಖ್ಯವಾಗಿ ಬೇಕು) ಮತ್ತು ನೀರು ಹರಿದಾಡುತ್ತಿರಬೇಕು. ಮಣ್ಣಿನಲ್ಲಿ ಆಮ್ಲಜನಕದ ಕೊರತೆಯಿದ್ದಲ್ಲಿ, ಗಿಡದ ಬೆಳವಣಿಗೆ ಕುಂಠಿತಗೊಳ್ಳುತ್ತವೆ ಹಾಗೂ ಮಣ್ಣಿನಲ್ಲಿ ವಾಸಿಸುವ ಅಸಂಖ್ಯಾತ ಸೂಕ್ಷ್ಮಾಣುಜೀವಿಗಳು ನಾಶವಾಗುತ್ತವೆ.

ಮಣ್ಣಿನಲ್ಲಿ ಚಲನಶೀಲತೆಯಿಲ್ಲದಿದ್ದಲ್ಲಿ, ಮಣ್ಣಿನ ರಾಸಾಯನಿಕ ರಚನೆಯೇ ಬದಲಾಗುತ್ತದೆ. ಜೊತೆಗೆ ಆಮ್ಲಜನಕದ ಕೊರತೆಯಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಬೇರುಗಳಿಗೆ ಸಿಗುವ ಅವಕಾಶವೂ ಸಹ ಕಡಿಮೆ. ಜಿಗುಟು ಮಣ್ಣಿನ ರಚನೆ ಸಂಕುಚಿತವಿರುವುದರಿಂದ, ಪೋಷಕಾಂಶಗಳನ್ನು ಹಿಡಿದುಕೊಳ್ಳಲು ಕಷ್ಟ. ಅದ್ದರಿಂದ ಮಣ್ಣು ಜಿಗುಟು, ಮರಳು, ಸಾವಯವ ವಸ್ತುಗಳಿಂದ ಕೂಡಿರಬೇಕು.

ಮಣ್ಣಿನ ರಸಸಾರ (Soil PH)

ಮಣ್ಣಿನ ರಸಸಾರದ ಸ್ಥಿತಿ ಮಣ್ಣಿನ ರಾಸಾಯನಿಕ ರಚನೆಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಆಮ್ಲೀಯ ಅಥವಾ ಕ್ಷಾರೀಯ ಮಣ್ಣುಗಳಲ್ಲಿ ಪೋಷಕಾಂಶಗಳು ಬಿಡುಗಡೆಹೊಂದದೆ ಬಂಧಿಯಾಗುತ್ತವೆ. ಕೃಷಿಗೆ ಮಣ್ಣಿನ ರಸಸಾರ 6 ರಿಂದ 8 ಪ್ರಮಾಣವಿದ್ದಲ್ಲಿ ಯೋಗ್ಯ.

ಸೂಕ್ಷ್ಮಾಣುಜೀವಿಗಳು (Soil Microbes)

ಮಣ್ಣಿಗೆ ಸೇರಿಸಿದ ಸಾವಯವ ವಸ್ತುಗಳನ್ನು ಕೊಳೆಯಿಸಿ, ಅದರಲ್ಲಿರುವ ಪೋಷಕಾಂಶಗಳು ಮಣ್ಣಿನಲ್ಲಿ ಸೇರುವಂತೆ ಮಾಡುವುದೇ ಸೂಕ್ಷ್ಮಾಣುಜೀವಿಗಳ ಕೆಲಸ. ಈ ಕೊಳೆಯುವಿಕೆ ಪ್ರಕ್ರಿಯೆಯಲ್ಲಿ ಸೂಕ್ಷ್ಮಾಣುಜೀವಿಗಳು ಕೆಲವು ರೀತಿಯ ಆಮ್ಲವನ್ನು (Organic Acid) ಬಿಡುಗಡೆ ಮಾಡುತ್ತದೆ. ಈ ಆಮ್ಲ  ಮಣ್ಣಿನ ಕೆಳಪದರದಲ್ಲಿರುವ ಬಂಡೆಗಳನ್ನು ಹಾಗೂ ಖನಿಜಯುಕ್ತ ವಸ್ತುಗಳನ್ನು ಕರಗಿಸುತ್ತದೆ.

ಇವುಗಳ ಮೂಲಕ ಮಣ್ಣಿನ ರಾಸಾಯನಿಕ ಸ್ಥಿತಿ ಬದಲಾಗುತ್ತದೆ. ಮಣ್ಣಿನ ಸ್ಥಿತಿ ಚೆನ್ನಾಗಿದ್ದಲ್ಲಿ, ಬಂಧಿಯಾಗಿ ಗಿಡದ ಬೇರುಗಳಿಗೆ ಸಿಗದಂತಿರುವ ಬಹುತೇಕ ಪೋಷಕಾಂಶಗಳೂ ಸಹ ಈ ಸಾವಯವ ಆಮ್ಲದ ಕಾರಣದಿಂದ ಕರಗಿ ಬೇರುಗಳಿಗೆ ಸುಲಭವಾಗಿ ಸಿಗುತ್ತವೆ. ಕೆಲ ಸೂಕ್ಷ್ಮಾಣುಜೀವಿಗಳು ಇಲ್ಲವಾದರೆ ಮಾನವನಿಗೆ ತರಕಾರಿ ರೂಪದಲ್ಲಿರುವ ಪೋಷಕಾಂಶಗಳು ಗಿಡಗಳಿಗೆ ಸಿಗುವುದಿಲ್ಲ.

ಉಷ್ಣತೆ/ತಾಪಮಾನ (Soil Temperature)

ಮಣ್ಣಲ್ಲಿ ಉಷ್ಣತೆ ಹೆಚ್ಚಾದಲ್ಲಿ, ಅದು ಸೂಕ್ಷ್ಮಾಣುಜೀವಿಗಳ ಚಟುವಟಿಕೆಗಳಿಗೆ ಮಾರಕವಾಗುತ್ತದೆ ಹಾಗೂ ಪೋಷಕಾಂಶಗಳು ಗಿಡದ ಬೇರುಗಳಿಗೆ ಸಿಗುವುದು ಕಷ್ಟವಾಗುತ್ತದೆ. ಜಮೀನಿನಲ್ಲಿ ಮುಚ್ಚುಗೆಯಿಂದ ಮಣ್ಣಿ ಉಷ್ಣತೆಯನ್ನು ಕಡಿಮೆ ಮಾಡಬಹುದು.

ನೀರು ಹೀರುವ/ಹಿಡಿದಿಡುವ ಸಾಮರ್ಥ್ಯ (Soil Water holding capacity)

ಬಿದ್ದ ಮಳೆ ನೀರು ಅಥವಾ ನೀರಾವರಿ ವ್ಯವಸ್ಥೆಯಲ್ಲಿ ಹಾಯಿಸಿದ ನೀರು ಮಣ್ಣಿನ ಮೇಲೆಯೇ ನಿಂತಿರದೇ ಮಣ್ಣಿನೊಳಗೆ ಇಳಿಯುತ್ತಿರಬೇಕು. ಅಂದರೆ, ನೀರನ್ನು ಹಿಡಿದಿಡುವ ಸಾಮರ್ಥ್ಯ ಮಣ್ಣಿಗೆ ಇರಬೇಕು. ಗಿಡಗಳ ಬೇರುಗಳು ಆಳವಾಗಿ ಬೆಳೆದು ನೀರನ್ನು ಹೀರುವಂತಿರಬೇಕು.

ಮೇಲ್ಮಣ್ಣು (Top Soil)

ಭೂಮಿಯೊಳಗಿನ ಗಟ್ಟಿ ಪದರದ ಮೇಲ್ಭಾಗದ ಮಣ್ಣು ಸಸ್ಯಗಳ ಬೇರುಗಳು ಬೆಳೆಯಲು ಹಾಗೂ ತೇವಾಂಶ ಸಂಗ್ರಹಗೊಳ್ಳಲು ಅಗತ್ಯವಾದಷ್ಟು ದಪ್ಪಗಿರಬೇಕು.

ಮಣ್ಣಿನಲ್ಲಿ ಮೇಲೆ ಚರ್ಚಿಸಿದ ಗುಣಗಳಿದ್ದಲ್ಲಿ, ಅದರಲ್ಲಿರುವ ಪೋಷಕಾಂಶಗಳು ಗಿಡದ ಬೇರುಗಳಿಗೆ ಯಾವ ಅಡೆತಡೆಯಿಲ್ಲದಂತೆ ಸಿಗುತ್ತವೆ.

ಆದರೆ, ಇತ್ತೀಚೆಗೆ ಜಗತ್ತಿನ ವಿವಿಧೆಡೆ ಮಾಯವಾಗುತ್ತಿರುವ ಮೇಲ್ಮಣ್ಣಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು, ಅದರಿಂದಾಗಿ ಕೃಷಿಯ ಮೇಲಾಗುವ ಪರಿಣಾಮ ಮತ್ತು ಎದುರಾಗಬಹುದಾದ ಆಹಾರ ಬಿಕ್ಕಟ್ಟುಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ- ಆತಂಕಗಳು ಹೆಚ್ಚುತ್ತಿವೆ. ಮುಂದಿನ  ಅರವತ್ತು ವರ್ಷದಲ್ಲಿ ಬ್ರಿಟನ್ನಿನ ಕೃಷಿಯ ಮೇಲ್ಮಣ್ಣು ಹಾಳಾಗುತ್ತದೆ ಎಂಬ ವರದಿ ಇತ್ತೀಚಿಗೆ ಬಿಡುಗಡೆಯಾಗಿದೆ. ಈಗಾಗಲೇ ಬ್ರೀಟನ್ ಶೇ.40ರಷ್ಟು ಆಹಾರವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಹಾಗಾದರೆ ಮುಂದಿನ ಅರವತ್ತು ವರ್ಷಗಳ ನಂತರ ಪರಿಸ್ಥಿತಿ ಊಹಿಸಿಕೊಳ್ಳಿ. ಆಹಾರ ವಸ್ತುಗಳ ಬೆಲೆ ಗಗನಮುಖಿಯಾಗಿರುತ್ತದೆ.

ಕೃಷಿಯ ಮೇಲ್ಮಣ್ಣು ಕಣ್ಮರೆಯಾಗುವುದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ಅತಿಯಾದ ಮಣ್ಣಿನ ಬಳಕೆ, ರಾಸಾಯನಿಕ ಕೃಷಿಯಿಂದ ಮೇಲ್ಮಣ್ಣು ಹಾಳಾಗಿದೆ ಎಂದು ಇತ್ತೀಚೆಗೆ ಆಸ್ಷ್ರೇಲಿಯಾದಲ್ಲಿ ನಡೆದ ವಿಜ್ಗಾನಿಗಳ ಸಮ್ಮೇಳನದಲ್ಲಿ ಕಳವಳ ವ್ಯಕ್ತವಾಗಿದೆ.

ಇದರ ಜೋತೆಗೆ ಹೇಳಲಾದ ಸಂಗತಿಗಳು…

 • ಪ್ರತಿ ವರ್ಷ ಸರಿ ಸುಮಾರು 75 ಬಿಲಿಯನ್ ಟನ್ ಮೇಲ್ಮಣ್ಣು ಕೃಷಿ ಭೂಮಿಯಿಂದ ಕೊಚ್ಚಿ ಹೋಗುತ್ತದೆ.
 • ಬ್ರಿಟನ್ನಿನ ಕೃಷಿ ಜಮೀನಿನ ಮೇಲ್ಮಣ್ಣು ಮುಂದಿನ 60 ವರ್ಷಗಳಲ್ಲಿ ಹಾಳಾಗುತ್ತದೆ ಮತ್ತು ಯುರೋಪ್ ಖಂಡದಲ್ಲಿ ಸರಾಸರಿ ಮುಂದಿನ 100 ವರ್ಷದಲ್ಲಿ ಕೃಷಿಯ ಮೇಲ್ಮಣ್ಣು  ಮಾಯವಾಗುತ್ತದೆ.
 • ಸಿಡ್ನಿ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ ನೈಸರ್ಗಿಕ ಕ್ರಿಯೆ ಮೂಲಕ ಕೃಷಿಯ ಮೇಲ್ಮಣ್ಣು ಉತ್ಪತ್ತಿಯಾಗುವುದಕ್ಕಿಂತ ಶೇ.57ರಷ್ಟು ಬೇಗ ಕೃಷಿಯ ಮೇಲ್ಮಣ್ಣು ಮಾಯವಾಗುತ್ತದೆ.
 • ಅದೇ ತರಹ ಯುರೋಪಿನಲ್ಲಿ ಶೇ.17 ರಷ್ಟು, ಅಮೇರಿಕಾದಲ್ಲಿ ಶೇ.10ರಷ್ಟು ಕೃಷಿಯ ಮೇಲ್ಮಣ್ಣು ಮಾಯವಾಗುತ್ತದೆ.
 • ಅಧ್ಯಯನದ ಪ್ರಕಾರ ಮಣ್ಣು ಇಂಗಾಲವನ್ನು ಹಿಡಿದಿಟ್ಟುಕೊಂಡಿರುತ್ತದೆ, ಮಣ್ಣನ್ನು ಉಳುಮೆ ಅಥವಾ ಅಗೆದರೆ ಇಂಗಾಲ ಪರಿಸರಕ್ಕೆ ಸೇರುತ್ತದೆ. ಮಣ್ಣು ಉಳುಮೆ ಮಾಡುವುದರಿಂದ ಹವಾಮಾನ ಬದಲಾವಣೆ ಪರಿಣಾಮ ಎದುರಿಸಬೇಕಾಗುತ್ತದೆ.
 • 2008ರಲ್ಲಿ ಯುರೋಪ್ ದೇಶವು 1920 ಬಿಲಿಯನ್ ರೂಪಾಯಿಯಷ್ಟು ಆಹಾರವನ್ನು ಆಮುದು ಮಾಡಿಕೊಂಡಿದೆ.
 • ಒಂದು ಅಂದಾಜಿನ ಪ್ರಕಾರ ಪ್ರಪಂಚದ ಜನಸಂಖ್ಯೆ 2050 ರ ಇಸ್ವಿಗೆ 9 ಬಿಲಿಯನ್ ಮುಟ್ಟಬಹುದು ಎಂದು ಹೇಳಲಾಗಿದೆ, ಇದೇ ರೀತಿ ಕೃಷಿಯ ಮೆಕ್ಕಲು ಮಣ್ಣು ಮಾಯವಾದರೆ ಅಷ್ಟು ಹೂಟ್ಟೆಗಳಿಗೆ ಊಟ ಎಲ್ಲಿಂದ ತರುವುದು?!

 ಭಾರತ ಮಣ್ಣಿನ ಸ್ಥಿತಿಗತಿ

ರೈತರ ಒಂದು ಸಭೆಯಲ್ಲಿ ಇತ್ತೀಚೆಗೆ ಸಾವಯವ ಕೃಷಿ ಬಗ್ಗೆ ಮಾತನಾಡುತ್ತಿದ್ದಾಗ ಹಿರಿಯರೊಬ್ಬರಿಗೆ ಇವತ್ತಿನ ರೈತರ ಸ್ಥಿತಿಗೆ ಮಣ್ಣು ಫಲವತ್ತತೆ ಕಳೆದುಕೊಂಡಿರುವುದೇ ಹೇಗೆ ಕಾರಣ ವಿವರಿಸಿ ಎಂದೆ. “ರೈತರಿಗೆ ಎಷ್ಟೆ ನಷ್ಟವಾದರೂ ಬೆಳೆಯುವ ಛಲ ಬಿಡುವುದಿಲ್ಲ. ಮತ್ತೆ- ಮತ್ತೆ ಪ್ರಯತ್ನಿಸುತ್ತಾನೆ. ಮನೆಗೆ ಹತ್ತಾರು ಜನ ಬಂದರೂ ಹೆದರದ ರೈತ ಈಗ ಹೆದರುತ್ತಿದ್ದಾನೆ. ಅವನು ಮಣ್ಣಿನ ಮೇಲೆ ನಂಬಿಕೆ ಕಳೆದುಕೊಂಡಿದ್ದಾನೆ. ಮತ್ತೆ ಬೀಜ ಹಾಕಿದರೆ ಬೆಳೆಯಬಲ್ಲೆ ಎಂಬ ನಂಬಿಕೆ ಕಳೆದುಕೊಂಡಿದ್ದಾನೆ. ಇದರಿಂದ ಆತ್ಮಹತ್ಯೆ ಕಡೆಗೆ ಯೋಚಿಸುತ್ತಿದ್ದಾನೆ” ಎಂದರು. ಆ ಹಿರಿಯರ ಮಾತು ನಿಜಕ್ಕೂ ಸತ್ಯ ಎಂದು ಅಂದು ಎಲ್ಲರೂ ತಲೆದೂಗಿದ್ದರು.

ಭಾರತದಲ್ಲೂ ಕೃಷಿಯ ಮೇಲ್ಮಣ್ಣು ಕೊಚ್ಚಿ ನದಿ/ ಸಮುದ್ರ ಸೇರುತ್ತಿದೆ. ಪ್ರತಿ ವರ್ಷ 4.7 ಬಿಲಿಯನ್ ಟನ್ನಷ್ಟು ಕೃಷಿಯ ಮೇಲ್ಮಣ್ಣು ಹರಿದು ಹೋಗುತ್ತಿದೆ. ಮೇಲ್ಮಣ್ಣು ಸೆವೆತದಿಂದ ಭೂಮಿ ಬರಡಾಗುತ್ತಿದೆ. ಕೃಷಿಯ ಮೇಲ್ಮಣ್ಣು ಸೆವೆತದಿಂದ 1,65,000 ಎಕರೆ ಭೂಮಿ ಬರಡಾಗಿದೆ. ಇದಕ್ಕಿಂತ ಕೆಟ್ಟ ವಿಚಾರ ಒಂದಿದೆ. ಭಾರತದಲ್ಲಿ ಹೆಚ್ಚು ಬರಡು ಭೂಮಿ ಹೊಂದಿರುವುದು ಕರ್ನಾಟಕ ರಾಜ್ಯ.

ಇದು ಕೇಳಲು ಬೇಸರವಾದರೂ ಸತ್ಯ ಸಂಗತಿ. ಅನೇಕ ರೈತರ ಆತ್ಮಹತ್ಯೆಗಳನ್ನು ಅವಲೋಕನ ಮಾಡಿದಾಗ, ಮುಖ್ಯವಾಗಿ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ. ಬಹಳಷ್ಟು ಕಡೆ ಕೃಷಿ ಭೂಮಿ ಬೇರೆ- ಬೇರೆ ಕಾರಣಗಳಿಂದಾಗಿ ಕೃಷಿಕರ ಕೈತಪ್ಪಿ ಹೋಗುತ್ತಿದೆ. ಬೃಹತ್ ಅಣೆಕಟ್ಟು, ಜಲವಿದ್ಯುತ್ ಯೋಜನೆ, ಗಣಿಗಾರಿಕೆ, ಕೈಗಾರಿಕೆಗಳಿಂದ ಹಿಡಿದು ಇಟ್ಟಿಗೆ ತಯಾರಿಕೆ ಉದ್ಯಮದ ವರೆಗೆ ಕೃಷಿ ಭೂಮಿಯನ್ನು ಆಪೋಷಣಗೈಯುತ್ತಿವೆ. ಅತ್ಯಂತ ಶಕ್ತಿಯುತ ಮತ್ತು ಕಸುವುಯುಕ್ತ ಕಪ್ಪು ಮಣ್ಣಿನ ಕರುನಾಡಿನಲ್ಲೇ ಕೃಷಿ ಮೇಲ್ಮಣ್ಣಿನ ಸ್ಥಿತಿ ಹೀಗಿದ್ದರೆ ಇನ್ನು ಜಗತ್ತಿನ ಕೈಗಾರಿಕೆ ಮತ್ತು ಉದ್ಯಮಗಳ ಆಡುಂಬೊಲಗಳಾದ ನಾಡುಗಳ ಸ್ಥಿತಿ ಏನಾಗಿರಬಹುದು ಊಹಿಸಿ!

ನದಿ, ಜಲಾಯಶಗಳ ಸಂಗ್ರಹಣಾ ಮಟ್ಟ ದಿನೇ- ದಿನೆ ಕುಸಿಯುತ್ತಿದೆ. ಕೃಷಿ ಯೋಗ್ಯ ಉತ್ಕೃಷ್ಟ ಮಣ್ಣು ಹರಿದು ನದಿಗೆ ಸೇರುತ್ತಿದೆ. ರೈತರ ಸಾಂಪ್ರದಾಯಿಕ ಮಣ್ಣು ಸಂರಕ್ಷಣಾ ಕ್ರಮಗಳು ಕಣ್ಣರೆಯಾಗುತ್ತಿವೆ. ಪ್ರತಿಯೊಂದಕ್ಕೂ ಸರ್ಕಾರದ ಕಡೆಗೆ ಮುಖ ಮಾಡುತ್ತಿದ್ದೇವೆ. ಆಧುನೀಕತೆ ಹೆಸರಿನಲ್ಲಿ ಮಣ್ಣನ್ನು ಕಡೆಗಣಿಸುತ್ತಿದ್ದೇವೆ. ‘ನಗರೀಕರಣದ ಓಟದಲ್ಲಿ ಕಾಡುಗಳು ಮರೆಮಾಚುತ್ತಿವೆ, ಮರುಭೂಮಿಗಳು ನಾಗರೀಕತೆಯನ್ನು ಹಿಂಬಾಲಿಸುತ್ಖತಿವೆ’. ಕಾಡುಗಳು ಕಣ್ಮರೆಯೊಂದಿಗೆ ಮಣ್ಣು ಸಹ ಮಾಯವಾಗುತ್ತಿದೆ.

ಮುಂದಿನ ಮಾರ್ಗಗಳು

 • ಕೃಷಿ ನೆಲವನ್ನು ಕಡಿಮೆ ಉಳುಮೆ ಅಥವಾ ಉಳುಮೆ ಮಾಡಲೇಬಾರದು. ಭೂಮಿಯನ್ನು ಸದಾ ಸಾವಯವ ವಸ್ತುಗಳಿಂದ ಮುಚ್ಚಿರಬೇಕು.
 • ವರ್ಷದಲ್ಲಿ ಕೆಲ ತಿಂಗಳ ಕಾಲ ಭೂಮಿಯನ್ನು ಉಳುಮೆ ಮಾಡಬಾರದು, ಅಂದರೆ ಕೆಲ ಸಮಯ ಭೂಮಿಗೆ ಬಿಡುವು ಕೊಡಬೇಕು.
 • ಸಾವಯವ ಅಥವಾ ಸುಸ್ಥಿರ ಕೃಷಿ ವಿಧಾನಗಳಿಂದ ಕೃಷಿಯ ಮೇಲ್ಮಣ್ಣನ್ನು ಕಾಪಾಡಿಕೊಳ್ಳಬಹುದು.
 • ಜಲಾನಯನ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಮಣ್ಣು ಸಂರಕ್ಷಣಾ ನೀತಿಗಳನ್ನು ಅಳವಡಿಸಿಕೊಂಡು ಕೃಷಿಯ ಮೇಲ್ಮಣ್ಣು ಕಾಪಾಡಿಕೊಳ್ಳಬಹುದು.