ಕೃಷಿ ಎಂದರೆ ಆಹಾರ ಹಾಗೂ ವಾಣಿಜ್ಯ ಬೆಳೆ ಬೆಳೆಯುವುದು ಮತ್ತು ಪ್ರಾಣಿಗಳನ್ನು ಸಾಕುವುದು. ಬೇಸಾಯ, ಒಕ್ಕಲುತನ, ಜಿರಾಯಿತಿ, ವ್ಯವಸಾಯ ಎಂಬ ಅರ್ಥವೂ ಇದೆ. ಇಂಗ್ಲಿಷಿನಲ್ಲಿ agriculture ಎನ್ನುತ್ತಾರೆ.
ಮಾನವನ ನಾಗರಿಕತೆಯೊಂದಿಗೆ ಕೃಷಿಯೂ ಬೆಳೆದು ಬಂದಿದೆ. ಗೊತ್ತಾದ ಜಾಗದಲ್ಲಿ ಆಹಾರ ಅಥವಾ ವಾಣಿಜ್ಯ ಬೆಳೆ ಬೆಳೆಯುವ ಉದ್ದೇಶದಿಂದಲೇ ಮಣ್ಣನ್ನು ಹಸನು ಮಾಡಿ, ಬೀಜ ಬಿತ್ತಿ, ನೀರು ಗೊಬ್ಬರ ಒದಗಿಸಿ, ರೋಗ-ರುಜಿನ, ಕೀಟಬಾಧೆ ತಗುಲದಂತೆ ಎಚ್ಚರಿಕೆ ವಹಿಸಿ ಫಸಲು ಪಡೆಯುವುದು ಮುಖ್ಯವಾಗಿ ಕೃಷಿ ಎನಿಸಿಕೊಳ್ಳುತ್ತಿದ್ದರೂ, ಇದಕ್ಕೆ ಪೂರಕವಾದ ಮತ್ತು ಮಾನವನ ಆಹಾರ ಅವಶ್ಯಕತೆಗಳನ್ನು ಪೂರೈಸುವ ಇತರ ಚಟುವಟಿಕೆಗಳನ್ನೂ (ಉದಾ: ಹಾಲು ಮತ್ತು ಮಾಂಸದ ಉದ್ದೇಶದಿಂದ ಪ್ರಾಣಿಗಳನ್ನು ಸಾಕುವುದು) ಕೂಡ ಕೃಷಿ ಎಂದೇ ಪರಿಗಣಿಸಲಾಗುತ್ತಿದೆ.

ಇತಿಹಾಸ: ಕೃಷಿಗೆ ಸುಮಾರು 10ಸಾವಿರ ವರ್ಷಗಳ ಇತಿಹಾಸವಿದೆ. ಮಾನವ ತನಗೆ ಬೇಕಾದ ಆಹಾರವನ್ನು ತಾನೇ ಬೆಳೆದುಕೊಳ್ಳಲಾರಂಭಿಸಿದ ದಿನದಿಂದ ಈ ಕೃಷಿ ಆರಂಭವಾಗಿದೆ. ಇತಿಹಾಸಕಾರರು ಮತ್ತು ಮಾನವಶಾಸ್ತ್ರಜ್ಞರ ಪ್ರಕಾರ ಕೃಷಿಯಿಂದಾಗಿಯೇ ನಾಗರಿಕತೆ ಸೃಷ್ಟಿಯಾಗಿದೆ.
ಭಾರತ, ಈಜಿಪ್ಟ್ ಹಾಗೂ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಮೊದಲಿಗೆ ಕೃಷಿ ಚಟುವಟಿಕೆ ಆರಂಭಗೊಂಡಿತೆಂದು ಹೇಳಲಾಗಿದೆ. ಕ್ರಿ.ಪೂ. 7000 ಸುಮಾರಿಗೆ ಭಾರತ ಮತ್ತು ಅದರ ಉಪಖಂಡಗಳಲ್ಲಿ ಹೆಚ್ಚು-ಕಡಿಮೆ ವ್ಯವಸ್ಥಿತರೀತಿಯಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು. ಭತ್ತ, ಜೋಳ, ಸೋಯಾ, ಹಲವು ರೀತಿಯ ಗೆಡ್ಡೆ-ಗೆಣಸುಗಳನ್ನು ಮೊದಲಿಗೆ ಬೆಳೆಯಲಾಯಿತು. ಬೆಳೆಗಳಿಗೆ ನೀರನ್ನುಣಿಸುವುದನ್ನು ಕ್ರಿ.ಪೂ.5000 ಆರಂಭಿಸಲಾಗಿದೆ. ಈ ಸಂದರ್ಭದಲ್ಲಿಯೇ ವಿವಿಧ ತರಕಾರಿ ಬೆಳೆಯುವ ಪರಿಪಾಠ ಆರಂಭಗೊಂಡಿದೆ.
ಮಧ್ಯಕಾಲದಲ್ಲಿ ಪ್ರಪಂಚದಾದ್ಯಂತ ವ್ಯವಸ್ಥಿತಿ ಕೃಷಿ ಆರಂಭಗೊಂಡಿತು ಎಂದು ಗುರುತಿಸಲಾಗಿದೆ. ಕ್ರಿ.ಶ.1500ರ ನಂತರ ಕೃಷಿಯಲ್ಲಿ ಮಹತ್ವದ ಬದಲಾವಣೆಗಳಾದವು. ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಇಳುವರಿ ಹೆಚ್ಚಿಸಿಕೊಳ್ಳಲು ಹೊಸ ಹೊಸ ಪ್ರಯೋಗ ನಡೆಸಲಾಯಿತು. ಭಾರತದ ರಾಜ-ಮಹಾರಾಜರು ಕೃಷಿಗೆ ಹೆಚ್ಚಿನ ಒತ್ತು ನೀಡಿದರು. ಕೃಷಿ ಉತ್ಪನ್ನಗಳಿಗೆ ಮಾರಕಟ್ಟೆ ಲಭ್ಯವಾಯಿತು. ‘ಬ್ರಿಟಿಷ್ ಕೃಷಿ ಕ್ರಾಂತಿ’, `ಹಸಿರು ಕ್ರಾಂತಿ’ ಕೃಷಿ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಿದವು. ಯಂತ್ರಗಳ ಮತ್ತು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಕೃಷಿಯನ್ನು ಉದ್ಯಮವಾಗಿಯೂ ಪರಿವತರ್ಿಸಿದವು. ರಾಸಾಯನಿಕ ಗೊಬ್ಬರಗಳ ಪ್ರಕಾರಗಳಾದ ‘ಯೂರಿಯಾ’, `ಕಾಂಪ್ಲೆಕ್ಸ್’, `ಸಲ್ಫೇಟ್’ ಬಳಕೆ ಬೆಳೆಗಳ ಇಳುವರಿಯನ್ನು ಹಲವಾರು ಪಟ್ಟು ಹೆಚ್ಚಿಸಿ, ಮನುಕುಲವನ್ನು ಹಸಿವಿನಿಂದ ರಕ್ಷಿಸಿದವು. ಈಗ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಬೆಳೆಗಳನ್ನು ಬೆಳೆದು, ಸಂಸ್ಕರಿಸಿ, ಮಾರಾಟಮಾಡುವುದನ್ನು ಉದ್ಯಮವೆಂಬಂತೆ ಪರಿಗಣಿಸಲಾಗುತ್ತಿದೆ. ಆದರೆ ಭಾರತದಲ್ಲಿ ಮಾತ್ರ ಕೃಷಿ ಬಹುಸಂಖ್ಯಾತರ ಜೀವನ ಪದ್ಧತಿಯಾಗಿದೆ.

ಕೃಷಿ ವಿಧಾನಗಳು: ಇತ್ತೀಚಿಗೆ ಕೃಷಿಯಲ್ಲಿ ಹೊಸ ಹೊಸ ವಿಧಾನಗಳು ಹುಟ್ಟಿಕೊಳ್ಳುತ್ತಿವೆ. ಪೂರ್ವದಲ್ಲಿ ಮಾನವ ಸಹಜವಾಗಿಯೇ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದ. ಮುಂದೆ ನಿಗದಿತ ಫಸಲನ್ನು ಪಡೆಯಲೇಬೇಕೆಂಬ ಉದ್ದೇಶದಿಂದ ನೀರುಣಿಸುವುದು, ಕೀಟನಾಶಕಗಳ ಸಿಂಪರಣೆ ಮತ್ತಿತರ ಚಟುವಟಿಕೆ ಆರಂಭಿಸಿದ. ಯಂತ್ರಗಳ ಮತ್ತು ರಾಸಾಯನಿಕಗಳ ಬಳಕೆ ಆರಂಭವಾದ ಮೇಲೆ ಕೃಷಿಯಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಿತು. ಹೊಸ ಹೊಸ ಪ್ರಯೋಗಗಳು ನಡೆದವು. ಈಗ ಕೀಟಬಾಧೆಗೊಳಪಡದ ಮತ್ತು ಹೆಚ್ಚುಇಳುವರಿ ನೀಡುವ ಕುಲಾಂತರ ತಳಿಗಳನ್ನು ರೂಪಿಸಲಾಗಿದೆ.
ಕೃಷಿಯಲ್ಲಿನ ವೈಜ್ಞಾನಿಕ ಪ್ರಯೋಗಗಳು ಸರಿ-ತಪ್ಪುಗಳ ವಾದ-ವಿವಾದ ನಡೆಯುತ್ತಲೇ ಇದೆ. ಸಹಜವಾಗಿಯೇ ಆಹಾರ ಬೆಳೆಗಳನ್ನು ಬೆಳೆಯಬೇಕೆಂಬ ಕೂಗೂ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಕೃಷಿ ವಿಧಾನವನ್ನು ಎರಡು ಭಾಗವಾಗಿ ವಿಂಗಡಿಸಬಹುದು.
1. ವೈಜ್ಞಾನಿಕ ಕೃಷಿ: ಈ ಪದ್ಧತಿಯಲ್ಲಿ ಯಂತ್ರೋಪಕರಣ, ರಾಸಾಯನಿಕಗಳ ಬಳಕೆ, ಕುಲಾಂತರಿ ತಳಿಗಳಿಗೆ ಅವಕಾಶವಿದೆ.
2. ಸಹಜ ಕೃಷಿ: ಈ ಪದ್ಧತಿಯನ್ನು ಸಾವಯವ, ಸಜಹ, ಜೈವಿಕ ಕೃಷಿ ಎಂದೂ ಕರೆಯಲಾಗುತ್ತಿದೆ. ಪ್ರಕೃತಿ ಸಹಜವಾಗಿ,

ಪ್ರಕೃತಿದತ್ತವಾದ ಸಾಮಗ್ರಿಗಳನ್ನೇ ಬಳಸಿಕೊಂಡು ಕೃಷಿ ಮಾಡಬೇಕೆಂದು ಈ ಪದ್ಧತಿ ಹೇಳುತ್ತದೆ.

ಕೃಷಿ ಅವಲಂಬನೆ: ಅಂತಾರಾಷ್ಟ್ರೀಯ ಹಣಕಾಸ ಸಂಸ್ಥೆ ಪ್ರಕಾರ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ನಂತರ ಐರೋಪ್ಯ ಒಕ್ಕೂಟ, ಭಾರತ ಮತ್ತು ಅಮೆರಿಕ ಸ್ಥಾನ ಪಡೆದಿವೆ. ಆದರೆ ದವಸ-ಧಾನ್ಯ ರಫ್ತಿನಲ್ಲಿ ಅಮೆರಿಕ, ಕೆನಡಾ, ಫ್ರಾನ್ಸ್, ಆಸ್ಟ್ರೆಲಿಯಾ ಅಜರ್ೆಂಟೈನಾ ಮತ್ತು ಥೈಲ್ಯಾಂಡ್ ಮುಂಚುಣಿಯಲ್ಲಿವೆ. ಹಸಿರು ಕ್ರಾಂತಿ ನಂತರ ಆಹಾರ ಭದ್ರತೆ ಕಾಪಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದ್ದರೂ ಧಾನ್ಯಗಳನ್ನು ಈಗಲೂ ಆಮದು ಮಾಡಿಕೊಳ್ಳುತ್ತಿದೆ.
ಪ್ರಪಂಚದ ಮೂವರಲ್ಲಿ ಒಬ್ಬರಿಗೆ ಕೃಷಿ ಉದ್ಯೋಗ ನೀಡಿದೆ. ಭಾರತದ ಶೇ. 70ಕ್ಕೂ ಹೆಚ್ಚು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಭಾರತ ದೇಶದಲ್ಲಿಯೇ 8ನೇ ಅತಿದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ ಶೇ.71 ರಷ್ಟು ಜನತೆ ಕೃಷಿಯನ್ನೇ ಅವಲಂಬಿಸಿದ್ದಾರೆ. 1995ರಲ್ಲಿ ನಡೆಸಿದ ಕೃಷಿ ಸಮೀಕ್ಷೆ ಪ್ರಕಾರ ಕೃಷಿಕರು ತಲಾ ಸರಾಸರಿ 1.95 ಹೆಕ್ಟೇರ್ ಪ್ರದೇಶ ಹೊಂದಿದ್ದಾರೆ.
ಕರ್ನಾಟಕದಲ್ಲಿ ಕೃಷಿ: ರಾಜ್ಯದ ಆರ್ಥಿಕತೆಗೆ ಕೃಷಿಯೇ ಮೂಲಾಧಾರ. ರಾಜ್ಯದಲ್ಲಿ 12.31 ದಶಲಕ್ಷ ಹೆಕ್ಟೇರ್ ಅಂದರೆ ರಾಜ್ಯದ ಒಟ್ಟಾರೆ ವಿಸ್ತೀರ್ಣದಲ್ಲಿ ಶೇ. 64.6 ರಷ್ಟು ಜಾಗದಲ್ಲಿ ಕೃಷಿ ನಡೆಸಲಾಗುತ್ತಿದೆ. ಕೇವಲ ಶೇ. 26.5 ರಷ್ಟು ಜಾಗ ನೀರಾವರಿಯಾಗಿದ್ದು, ಉಳಿದ ಪ್ರದೇಶಗಳು ಮಳೆಯನ್ನು ಅವಲಂಬಿಸಿವೆ. ಮುಂಗಾರು ಮಾರುತಗಳು ರಾಜ್ಯದ ಕೃಷಿಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿವೆ.
1991 ಜನಗಣತಿ ಪ್ರಕಾರ ರಾಜ್ಯದ ಉದ್ಯೋಗಿಗಳಲ್ಲಿ ಶೇ. 66.6 ರಷ್ಟು ಜನರ ಕೃಷಿ ಅಥವಾ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೂ ಕಳೆದ ಎರಡು ದಶಕಗಳಲ್ಲಿ ಈ ಕ್ಷೇತದಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಖಾಸಗಿ ಬಂಡವಾಳ ಹೂಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ರಾಜ್ಯ ಸರ್ಕಾರ ಕೃಷಿಗೆ ಹೆಚ್ಚಿನ ಅಧ್ಯತೆ ನೀಡುತ್ತಿದ್ದು, ಇದಕ್ಕೇ ಪ್ರತ್ಯೇಕ ಇಲಾಖೆ ಹೊಂದಿದೆ. ನೀರಾವರಿ ಇಲಾಖೆ ಕೂಡ ಕೃಷಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ರಾಜ್ಯ ಪ್ರತ್ಯೇಕವಾದ ಕೃಷಿ ನೀತಿ ಹೊಂದಿದೆ.

(ಣಣಠಿ://ಡಿಚಿಣಚಿಟಣಡಿಚಿ.ಞಚಿಡಿ.ಟಿಛಿ.ಟಿ/ಂರಡಿ%20ಕಠಟಛಿಥಿ%202006%20ಏಚಿಟಿ.ಠಿಜಜಿ) ಸಾವಯವ ಕೃಷಿಗೇ ವಿಶೇಷ ನೀತಿ ಪ್ರಕಟಿಸಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ರೂಪಿಸಿ, ರೈತರ ಉತ್ಪನ್ನಗಳ ಮಾರಾಟಕ್ಕೆ ನೇರ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ರೈತ ಸಂತೆ, ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ಅನೇಕ ಬೆಳೆಗಳಿಗೆ ಬೆಂಬಲ ಬೆಲೆ ಪ್ರಕಟಿಸಿ ಧಾರಣೆ ಕುಸಿಯದಂತೆ ವ್ಯವಸ್ಥೆ ಮಾಡಲಾಗಿದೆ.
ಕೃಷಿಗೆ ವಿಶೇಷ ಸಾಲ ಯೋಜನೆ ಪ್ರಕಟಿಸಿ, ಸಬ್ಸಿಡಿ ನೀಡಿ ಉತ್ತೇಜನ ನೀಡಲಾಗುತ್ತಿದೆ. ಗ್ರಾಮ ಮಟ್ಟದಲ್ಲಿ ರೈತ ಮಿತ್ರ ಕೇಂದ್ರ, ಬೀಜ ಕೇಂದ್ರ ತೆರೆಯಲಾಗಿದೆ. ರೈತ ಸಹಾಯಕರನ್ನು ನೇಮಿಸಿ ಕೃಷಿಕರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಸಾವಯವ ಕೃಷಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಸಾವಯವ ಕೃಷಿಕರನ್ನು ಪ್ರೋತ್ಸಾಹಿಸಲೆಂದೇ ಸಾವಯವ ಕೃಷಿ ಮಿಷನ್ ರಚಿಸಲಾಗಿದೆ.
ರಾಷ್ಟ್ರಕವಿ ಕುವೆಂಪು ರಚಿಸಿರುವ ‘ನೇಗಿಲ ಯೋಗಿ’ ಗೀತೆಯನ್ನು ರೈತಗೀತೆ ಎಂದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.

ಪ್ರಮುಖ ಬೆಳೆಗಳು: ಹಲವಾರು ವಿವಿಧ ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ. ಭತ್ತ, ರಾಗಿ, ಜೋಳ ಪ್ರಮುಖ ಆಹಾರ ಬೆಳೆಗಳು. ತೊಗರಿ, ಉದ್ದು, ಹೆಸರು ಪ್ರಮುಖ ಬೇಳೆಗಳು. ನೆಲಗಡಲೆ, ಸೂರ್ಯಕಾಂತಿ, ಮೆಣಸನ್ನು ಕೂಡ ರಾಜ್ಯದ ಪ್ರಮುಖ ಬೆಳೆಯಾಗಿವೆ. ಈರುಳ್ಳಿ, ಆಲುಗೆಡ್ಡೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ದೊಡ್ಡದು. ವಾಣಿಜ್ಯಬೆಳೆಯಾದ ಅಡಿಕೆ, ಕಾಫಿಯನ್ನು ಬೆಳೆಯುವುದರಲ್ಲಿ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ತಂಬಾಕು, ಟೀ ಯೂ ಇಲ್ಲಿ ಸ್ಥಾನ ಪಡೆದಿವೆ. ತೆಂಗು, ಮಾವು, ಬಾಳೆ ಇನ್ನಿತರ ಪ್ರಮುಖ ಬೆಳೆಗಳು. ಸಾಂಬಾರ ಪದಾರ್ಥಗಳಾಗಿ ಬಳಕೆಯಾಗುವ ಕಾಳು ಮೆಣಸು, ಏಲಕ್ಕಿ, ಲವಂಗ, ವೆನಿಲಾ, ದಾಲ್ಚಿನ್ನಿಯನ್ನು ಹೇರಳವಾಗಿ ಬೆಳೆಯಲಾಗುತ್ತಿದೆ. ವಿವಿಧ ರೀತಿಯ ತರಕಾರಿ ಬೆಳೆದು ಇತರ ರಾಜ್ಯಗಳ ಮಾರುಕಟ್ಟೆಗೂ ಕಳುಹಿಸಲಾಗುತ್ತಿದೆ.
ಔಷಧಿ ಸಸ್ಯಗಳ ಕೃಷಿ ಮತ್ತು ರಫ್ತು ಉದ್ದೇಶದಿಂದ ಹೂ ಬೆಳೆಯುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಒಟ್ಟಾರೆ ವೈವಿಧ್ಯಮಯ ಕೃಷಿಯಲ್ಲಿ ರಾಜ್ಯ ಮುಂದಿದೆ.

ಸಮಸ್ಯೆಗಳು:ದೇಶದ ರೈತರು ಸಂಕಷ್ಟದಲ್ಲಿರುವಂತೆ ರಾಜ್ಯದ ರೈತರೂ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಮಾರುಕಟ್ಟೆ, ಕೃಷಿ ಕಾರ್ಮಿಕರ ಕೊರತೆ, ವಿದ್ಯುತ್ ಅಡಚಣೆ, ನೀರಾವರಿ ವ್ಯವಸ್ಥೆ, ಮೂಲ ಸೌಕರ್ಯ, ಸಂಸ್ಕರಣಾ ವ್ಯವಸ್ಥೆಯ ಕೊರತೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಜಾಗತಿಕ ವಿದ್ಯಮಾನಗಳು ರಾಜ್ಯದ ರೈತರನ್ನು ಕಂಗೆಡಿಸಿದ್ದು, ರೈತ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.