ಮೊಳಗಿ ಬರೆ ಕುಮಾರವ್ಯಾಸನಾವೇಸ ವಾಣಿ

ರೋಮಾಂಚನದಿ ಕಂಪಿಸಿತು ಸಹ್ಯಾದ್ರಿ ಶ್ರೇಣಿ !

ರಾಷ್ಟ್ರಕವಿ ಕುವೆಂಪು ಅವರ ಕವಿಹೃದಯ ಸ್ಫರಣೆಗೊಂಡು  ಕವನವೊಂದರ ರಚನೆಗೆ ಸ್ಪೂರ್ತಿಯಾದ “ಆ ಅರಣ್ಯಾಕಾಶಗಳ ಬೃಹನ್ಮೌನದಲಿ, ಕತ್ತಲಲಿ ಕನಸಾದ ವಿಸ್ತೀರ್ಣಧಾತ್ರಿಯಲಿ, ಚೈತ್ರ ರಾತ್ರಿಯಲಿ ಮೊಳಗಿ ಬಂದ ಕುಮಾರವ್ಯಾಸನಾವೇಶವಾಣಿ” ಮತ್ಯಾರದ್ದಲ್ಲ ಕೃಷ್ಣಗಿರಿ ಕೃಷ್ಣರಾಯರದು.

ಕೃಷ್ಣಗಿರಿ ಕೃಷ್ಣರಾಯರು, ಭಾರತದ ಕೃಷ್ಣರಾಯರು, ಗಮಕಿ ಕೃಷ್ಣರಾಯರು, ಲೈಬ್ರರಿಯನ್‌ ಕೃಷ್ಣರಾಯರು-ಹೀಗೆ ಹಲವು ಹೆಸರುಗಳಿಂದ ಚಿರಪರಿಚಿತರಾಗಿದ್ದವರು, ನಾಡಿನ ಪ್ರಖ್ಯತ ಗಮಕ ವಿದ್ವಾಂಸರಾಗಿದ್ದ ಕೃಷ್ಣರಾಯರು.

‘ಕೃಷ್ಣಗಿರಿ’ ತಮಿಳುನಾಡಿನ ಹೊಸೂರು ಬಳಿ ಇರುವ, ರಾಯರ ಪೂರ್ವಿಕರಿದ್ದ ಸ್ಥಳ. ರಾಯರ ಮನೆತನದ ಇತಿಹಾಸವೇ ಒಂದು ಕುತೂಹಲಕರವಾದ ವಿಷಯ. ಗುಂಟೂರು ಪಟ್ಟಣದಿಂದ ಸುಮಾರು ೨೧ ಮೈಲಿ ದೂರದಲ್ಲಿ ಕೃಷ್ಣಾನದೀ ತೀರದ ದಕ್ಷಿಣಕ್ಕಿರುವ ಅಮರಾವತಿಗೆ ಕಸಮೀಪದ ಈಗಿನ ಧರಣಿಕೂಟವೆಂಬ ಸ್ಥಳಕ್ಕೆ ಸುತ್ತಮುತ್ತ ಹಬ್ಬಿದ ಪ್ರಾಂತ. ಒಂದು ಕಾಲಕ್ಕೆ ಆರುವೇಲು ಪ್ರಾಂತ ಎಂದು ಹೆಸರಾಗಿತ್ತು. ಈ ೬೦೦೦ (ತೆಲುಗು ಆರುವೇಲು) ಗ್ರಾಮಗಳ ಸಮುಚ್ಚಯದ ಪ್ರದೇಶ ಶಾಸನಗಳಲ್ಲಿ ‘ಕೃಷ್ಣವೇಣ್ಯಾನದೀ ದಕ್ಷಿಣ ಷಟ್‌ ಸಹಸ್ರ ಗ್ರಾಮಾವನೀ’ ಎಂಬುದಾಗಿ ಕರೆಯಲ್ಪಟ್ಟಿದೆ. ಮೂಲತಃ ಆರುವೇಲು ಬ್ರಾಹ್ಮಣರು ಈ ನೆಲೆಯವರು. ಇವರು ಸ್ಮಾರ್ತರು, ಯಜುರ್ವೇದಿಗಳು (ಕರ್ನಾಟಕದವರಲ್ಲಿ ಸ್ಮಾರ್ತರೂ ಮಾಧ್ವರೂ ಇದ್ದಾರೆ: ಕನ್ನಡ, ತೆಲುಗು ಎರಡನ್ನೂ ಆಡುತ್ತಾರೆ). ಇಂತಹ ಕೆಲವು ಆರುವೇಲು ಪಂಗಡಕ್ಕೆ ಸೇರಿದ ಕುಟುಂಬಗಳು ಮುಸ್ಲಿಮರ ಆಕ್ರಮಣದ ಭಯದಿಂದಲೊ ಏನೋ, ಆಂಧ್ರ ಪ್ರದೇಶದಿಂದ ದಕ್ಷಿಣಂದ ಕಡೆ ವಲಸೆ ಬಂದು, ಅಂದಿನ ಮದರಾಸು ಪ್ರಾಂತದ ಧರ್ಮಪುರಿ, ಕೃಷ್ಣಗಿರಿ ಹಾಗೂ ಹಳೆಯ ಮೈಸೂರು ಪ್ರಾಂತದ ಚನ್ನಪಟ್ಟಣ, ನಾಗಮಂಗಲ ಮೊದಲಾದ ಸ್ಥಳಗಳಿಗೆ ನೆಲಸಿದುವು. ಹೀಗೆ ಕೃಷ್ಣಗಿರಿಯಲ್ಲಿ ನೆಲಸಿದ ಮಾಧ್ವಬ್ರಾಹ್ಮಣ ಆರುವೇಲು ಪಂಗಡಕ್ಕೆ ಸೇರಿದ ಒಂದು ಕುಟುಂಬದ ಅನಂತಯ್ಯ ಮತ್ತು ನಾಮಗಿರಿಯಮ್ಮ ದಂಪತಿಗಳಲ್ಲಿ ಜ್ಯೇಷ್ಠ ಶುಕ್ಲ ಹುಣ್ಣಿಮೆ, ವಟಸಾವಿತ್ರಿ ವ್ರತದ ಶುಭ ದಿನದಂದು  (೦೩.೦೬.೧೮೯೩) ಹಾಸನದಲ್ಲಿ ಕೃಷ್ಣರಾಯರು ಜನಿಸಿದರು. ಪೂರ್ವಿಕರ ಸ್ಥಳ ‘ಕೃಷ್ಣಗಿರಿ ಕೃಷ್ಣರಾಯರ ಹೆಸರಿನೊಂದಿಗೆ ಸೇರಿ ‘ಕೃಷ್ಣಗಿರಿ ಕೃಷ್ಣರಾಯರು’ ಎಂದು ಪ್ರಚಲಿತಕ್ಕೆ ಬಂದದ್ದಲ್ಲದೇ, ಕೃಷ್ಣರಾಯರಿಂದ ‘ಕೃಷ್ಣಗಿರಿ’ಯೂ ಸಾಕಷ್ಟು ಪ್ರಚಾರವಾಯಿತು. ಅಂದಿನ ಬಾಲಬೋಧೆಯ ರೂವಾರಿಗಳೂ, ಪ್ರಸಿದ್ಧ ಶಿಕ್ಷಣ ತಜ್ಞರೂ  ಆಗಿದ್ದ ಚ. ವಾಸುದೇವಯ್ಯನವರು, ಸರ್.ಎಂ. ವಿಶ್ವೇಶ್ವರಯ್ಯನವರ ಸಮಕಾಲೀನರೂ, ಮುಖ್ಯ ಎಂಜಿನಿಯರೂ ಆಗಿದ್ದ ಎಂ.ಜಿ. ರಂಗಯ್ಯನವರು ಕೃಷ್ಣರಾಯರ ಮನೆತನಕ್ಕೆ ಸೇರಿದವರು.

ಕೃಷ್ಣರಾಯರ ತಂದೆ ಅನಂತಯ್ಯ ಹಾಸನದಲ್ಲಿ ಕೋರ್ಟ್‌‌ನಲ್ಲಿ ಕೆಲಸ ಮಾಡುತ್ತಿದ್ದರು. ರಾಯರಿಗೆ ಒಬ್ಬ ಅಣ್ಣ ಶ್ರೀನಿವಾಸ, ಒಬ್ಬ ಅಕ್ಕ ಜಾನಕಿ. ರಾಯರು ಆರು ತಿಂಗಳ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ತಾಯಿ ನಾಮಗಿರಿಯಮ್ಮ ತಬ್ಬಲಿ ಮಕ್ಕಳೊಂದಿಗೆ ಅಣ್ಣ ರಂಗರಾಯರ ಆಶ್ರಯ ಪಡೆದರು. ರಂಗರಾಯರ ಪತ್ನಿ, ರಾಯರ ಸೋದರತ್ತೆ ಸುಬ್ಬಾಳಮ್ಮ ರಾಯರಿಗೆ ವಾವೆಯಲ್ಲಿ ತಾತ ಆಗಬೇಕಾಗಿದ್ದ ‘ರಾಮಾಯಣದ ರಾಮಚಂದ್ರರಾಯರು’ ಎಂದೇ ಪ್ರಸಿದ್ಧರಾಗಿದ್ದವರ ಮಗಳು. ರಾಮಚಂದ್ರರಾಯರು ಮೈಸೂರು ಸರ್ಕಾರದ ರೆವಿನ್ಯೂ ಕಮೀಷನರ್ ಆಗಿದ್ದವರು. ತೆಲುಗು, ಕನ್ನಡ, ಸಂಸ್ಕೃತ ಹಾಗೂ ಇಂಗ್ಲೀಷ್‌ ಭಾಷೆಗಳಲ್ಲಿ ಪ್ರಭುತ್ವವನ್ನು  ಪಡೆದಿದ್ದ ಅವರು ಕನ್ನಡ, ತೆಲುಗು ಭಾಷೆಗಳಲ್ಲಿ ಕೀರ್ತನೆಗಳನ್ನು ರಚಿಸುತ್ತಿದ್ದರು. ಅವರು ವಿಕ್ಟೋರಿಯ ಮಹಾರಾಣಿಯ ವಜ್ರ ಮಹೋತ್ಸವಕ್ಕೆ ಆಗಿನ ವಾಣೀವಿಲಾಸ ರೀಜೆಂಟ್‌ ಮೂಲಕ ತಾವು ರಚಿಸಿದ ಕವನವನ್ನು ಒಪ್ಪಿಸಿ ಸನ್ಮಾನಿತರಾಗಿದ್ದರು. ಜಮಾಬಂದಿಗೆ ಹೋದ ಕಡೆಯಲ್ಲೆಲ್ಲಾ, ತಮ್ಮ ಕರ್ತವ್ಯದ ನಂತರ ರಾಮಾಯಣ ಪಾರಾಯಣ ಮಾಡಿ ಶ್ರೀರಾಮ ಪಟ್ಟಾಭಿಷೇಕವನ್ನು ನಡೆಸುತ್ತಿದ್ದ ಕಾರಣ ‘ರಾಮಾಯಣದ ರಾಮಚಂದ್ರ’ರಾಯರೆಂದೇ ಹೆಸರು ಪಡೆದರು. ಅವರ ಪ್ರಭಾವ ಮಗಳು ಸುಬ್ಬಾಳಮ್ಮನ ಮೇಲೆ ಆಗಿತ್ತು. ಸುಬ್ಬಾಳಮ್ಮನ ಸಂಪರ್ಕ ಬಾಲಕ ಕೃಷ್ಣರಾಯರು  ಮತ್ತು ಅಕ್ಕ ಜಾನಕಿಯ ಮೇಲೆ ಪರಿಣಾಮ ಬೀರಿ ರಾಯರಿಗೆ ಬಾಲ್ಯದಿಂದಲೇ ಸಂಗೀತ, ಸಾಹಿತ್ಯಗಳಲ್ಲಿ ಆಸಕ್ತಿ ಉಂಟಾಯಿತು.

ಕೃಷ್ಣರಾಯರಿಗೆ ಚಿಕ್ಕಂದಿನಿಂದಲೂ ಸಂಗೀತದ ಕೇಳ್ಮೆ ಬಹಳವಾಗಿತ್ತು. ಅಂದಿನ ಪ್ರಸಿದ್ಧ ಸಂಗೀತ ವಿದ್ವಾಂಸರ ಕಚೇರಿಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಸಂಗೀತ ಕ್ಷೇತ್ರದ ದಿಗ್ಗಜಗಳೆನಿಸಿದ್ದ ಸಂಗೀತ ಕಲಾನಿಧಿ ವಾಸುದೇವಾಚಾರ್ಯರು, ವೈಣಿಕ ಶಿಖಾಮಣಿ ವೀಣೆ ಶೇಷಣ್ಣ, ಗಾನವಿಶಾರದ ಬಿಡಾರಂ ಕೃಷ್ಣಪ್ಪ, ಟೈಗರ್ ವರದಾಚಾರ್ಯರು, ಚಂಬೈ ವೈದ್ಯನಾಥ ಭಾಗವತರು, ಅರಿಯಾಕುಡಿ ರಾಮಾನುಜಯ್ಯಂಗಾರ್ ಮೊದಲಾದವರ ಸಂಗೀತ ಕಚೇರಿ ಕೇಳಿ ಕೇಳಿ ರಾಯರಿಗೆ ಗಾಢವಾದ ಅಸ್ಥೆ ಉಂಟಾಗಿ ಸಂಗೀತ ಕಲಿಯಲು ಪ್ರೇರಣೆಯಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿದ್ದ ಕೊಯಮತ್ತೂರು ರಂಗಪ್ಪನವರ ಮಗ ಸಮಗೀತ ವಿದ್ವಾನ್‌ ಸುಬ್ಬಣ್ಣನವರಲ್ಲಿ ಎರಡುವರ್ಷ ಸಂಗೀತ ಅಭ್ಯಾಸ ಮಾಡಿದರು. ಇದಲ್ಲದೆ, ದ್ವಾರಂ ವೆಂಕಟಸ್ವಾಮಿ ನಾಯ್ಡು ಅವರ ಪಿಟೀಲು ವಾದನ ಕಚೇರಿಯಿಂದ ಆಕರ್ಷಿತರಾದ ರಾಯರು ಬಾಲ್ಯದಲ್ಲೇ ತಮ್ಮ ಎದುರುಮನೆಯ ಪಿಟೀಲು ವಿದ್ವಾಂಸರು ಶೇಷಗಿರಿಯರನ್ನು ಗುರುವೆಂಬ ಅನುಸಂಧಾನದಿಂದ ಏಕಲವ್ಯನಂತೆ ಅಭ್ಯಾಸಮಾಡಿ ಸಣ್ಣಪುಟ್ಟ ಸಂಗೀತ ಕಚೇರಿ, ಹರಿಕಥೆ, ನಾಟಕಗಳಿಗೆ ನುಡಿಸುವ ಮಟ್ಟಿಗೆ ಪಿಟೀಲು ವಾದನದಲ್ಲಿ ಪ್ರಾವೀಣ್ಯತೆಯನ್ನು  ಪಡೆದರು.

ಸಂಗೀತ ಪ್ರಧಾನವಾದ ಅಂದಿನ  ಕಂಪನಿ ನಾಟಕಗಳನ್ನು ನೋಡುವುದು ರಾಯರ ಹವ್ಯಾಸವಾಗಿತ್ತು. ವರದಾಚಾರ್ಯರೇ ಮೊದಲಾದ ನಟಶ್ರೇಷ್ಠರ ರಂಗ ಸಂಗೀತದ ಪ್ರಭಾವ ರಾಯರ ಮೇಲೆ ಸಾಕಷ್ಟು ಉಂಟಾಯಿತು. ನಾಟಕದ ಮಟ್ಟಿನಲ್ಲಿ ತೆಲುಗು, ಕನ್ನಡ ಪದ್ಯಗಳನ್ನು ಹಾಡುವ ಪರಿಪಾಠವೂ ರಾಯರದ್ದಾಯ್ತು.

ರಾಯರಿಗೆ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗುವುದಕ್ಕೆ ಅವರ ವಿದ್ಯಾಭ್ಯಾಸದಲ್ಲಿನ ಗುರುಗಳಾಗಿದ್ದ ಕಾನಕಾನಹಳ್ಳಿ ವರದಾಚಾರ್ಯರರು, ಪಿ.ಆರ್. ಕರಿಬಸವಪ್ಪಶಾಸ್ತ್ರಿಗಳು ಮತ್ತು ಬಿ.ಎಂ.ಶ್ರೀ ಮೊದಲಾದ ವಿದ್ವಾಂಸರೇ ಕಾರಣ ಪುರುಷರು.

ವಕೀಲರಾಗಬೇಕೆಂಬ ಅಭಿಲಾಷೆ ಹೊಂದಿದ್ದ ರಾಯರು ಎಫ್‌.ಎ. ವರೆಗೆ ವಿದ್ಯಾಭ್ಯಾಸ ಮಾಡಿದರೂ ಸಂಸಾರದ ಜಂಜಾಟದ ಕಾರಣ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದೇ ಉದ್ಯೋಗವನ್ನು ಹುಡುಕಬೇಕಾಗಿ ಬಂತು. ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಿ.ಆರ್. ರೆಡ್ಡಿಯವರಲ್ಲಿ ಕೆಲಸಕ್ಕಾಗಿ ರಾಯರು ಮನವಿ ಮಾಡಿಕೊಂಡಾಗ, ಸಿ.ಆರ್. ರೆಡ್ಡಿಯವರು “ನನಗೆ ಒಬ್ಬ ಪಾರ್ಟ್‌ಹ್ಯಾಂಡ್‌ ಟೈಪಿಸ್ಟ್‌” ಅಗತ್ಯವಿದೆ ಎಂದರಂತೆ. ಅದನ್ನೂಕಲಿತಿದ್ದ ರಾಯರಿಗೆ ಆ ಹುದ್ದೆ ದೊರಕುವುದು ಕಷ್ಟವಾಗಲಿಲ್ಲ. ರೆಡ್ಡಿಯವರಿಗೆ ಉನ್ನತ ಪದವಿ ದೊರಕಿದ ಸಂದರ್ಭದಲ್ಲಿ ಏರ್ಪಡಿಸಿದ್ದ ಗೌರವಾರ್ಥ ಸಮಾರಂಭದಲ್ಲಿ ಕೃಷ್ಣರಾಯರು ಕಂಚಿನ ಕಂಠದಿಂದ ಸುಶ್ರಾವ್ಯವಾಗಿ ಹಾಡಿದ ತೆಲುಗು ಪದ್ಯಗಳನ್ನು ಕೇಳಿದ ರೆಡ್ಡಿಯವರು ಕೃಷ್ಣರಾಯರನ್ನು ಬಹುವಾಗಿ ಮೆಚ್ಚಿಕೊಂಡರು. ಸ್ವಲ್ಪ ಕಾಲದಲ್ಲೇ ಕೃಷ್ಣರಾಯರು ಮಹಾರಾಜಾ ಕಾಲೇಜಿನ ಗ್ರಂಥ ಭಂಡಾರದ ಪಾಲಕರಾಗಿ ನೇಮಿಸಲ್ಪಟ್ಟರು. ಸಾಹಿತ್ಯದ ಆಳವಾದ ಅಧ್ಯಯನಕ್ಕೆ ಕೃಷ್ಣರಾಯರಿಗೆ ಇದೊಂದು ಸುವರ್ಣ ಅವಕಾಶವಾಯಿತು. ರಾಯರು ತಮ್ಮ ಸರಳ, ನೇರ ನಡೆ ನುಡಿಯಿಂದ, ಪ್ರೀತಿ ವಿಶ್ವಾಸದಿಂದ ಅಧ್ಯಾಪಕರಕ ಹಾಗೂ ವಿದ್ಯಾರ್ಥಿಗಳ  ಮೆಚ್ಚುಗೆಯ ನ್ನು ಪಡೆದದ್ದಲ್ಲದೇ “ಲೈಬ್ರರಿಯನ್ ಕೃಷ್ಣರಾಯರು” ಎಂದೇ ವಿಶ್ವವಿದ್ಯಾನಿಲಯದ ವಲಯದಲ್ಲಿ ಚಿರಪರಿಚಿತರಾಗಿ, ಗ್ರಂಥಭಂಡಾರದಲ್ಲಿ ಅವರು ನೀಡುತ್ತಿದ್ದ ಸಹಕೃ, ಉಪಕಾರಗಳನ್ನು ವಿದ್ಯಾರ್ಥಿ ಸಮೂಹದಲ್ಲಿ ಸ್ಮರಿಸಿಕೊಳ್ಳುವಂತಾಯ್ತು.

ಕೃಷ್ಣರಾಯರ ಮಾತೃಭಕ್ತಿ ಅತಿಶಯವಾಗಿತ್ತು. ತಮ್ಮ ಕೆಲಸದಿಂದ ಹಿಂತಿರುಗಿದ ಮೇಲೆ ಮನೆಯಲ್ಲಿ ತಾಯಿಯವರಿಗೆ ಕಾವ್ಯ  ಪುರಾಣಾದಿ ಗ್ರಂಥಗಳನ್ನು ಓದಿ ಹೇಳಲುತ್ತಿದ್ದುದು ಅವರ ರೂಢಿಯಾಗಿತ್ತು. ಅಲ್ಲದೆ, ಅಕ್ಕ ಜಾನಕಿ ಹಾಡುವ ದೇವರ ನಾಮಗಳಿಗೆ ಪಿಟೀಲು ನುಡಿಸುತ್ತಿದ್ದರು. ಸುಮರು ೨೫ ವರ್ಷದ ಕೃಷ್ಣರಾಯರಿಗೆ ಒಮ್ಮೆ ಸ್ವಜನರಾದ, ಪ್ರಸಿದ್ಧ ಸಾಹಿತಿಗಳಾಗಿದ್ದ ಎಂ.ಆರ್. ಶ್ರೀಯವರ ಮೂಲಕ ಭಾರತದ ಬಿಂದೂರಾಯರ ಹಾಗೂ ಧೀರೇಂದ್ರ ದಾಸರ ಪರಿಚಯವಾಗಿ, ಅದೊಂಧು ಸಂಜೆ ಅವರುಗಳು ವಾಯುವಿಹಾರಕ್ಕಾಗಿ ಹೊರಟಾಗ ಬಂಬೂ ಬಜಾರ್ ನ ಸಮೀಪದಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ವಿಶ್ರಾಂತಿಗೆಂದು ಕುಳಿತರು. ಅಲ್ಲಿ, ಧೀರೇಂದ್ರದಾಸರು “ನನಗೆ ಮೈಸೂರಿನಲ್ಲಿ ಎರಡು ಆಕರ್ಷಣೇಗಳು. ಒಂದು ಬಿಂದೂರಾಯರ ಭಾರತವಾಚನ, ಇನ್ನೊಂದು ನರಸಿಂಹದಾಸರ ದೇವರ ನಾಮಗಳು” ಎಂದು ಹೇಳಿದಾಗ “ಹಾಗಾದರೆ, ಬಿಂದುರಾಯರು ಭಾರತವಾಚನ ಮಾಡಲಿ, ನಾವೆಲ್ಲರೂ ಕೇಳೋಣ” ಎಂದು ಎಂ.ಆರ್.ಶ್ರೀ. ದನಿಗೂಡಿಸಿದರು. ಬಿಂದೂರಾಯರ ‘ಕಿರಾತಾರ್ಜುನೀಯ’ದಿಂದ “ಎಲೆ ಕಿರಾತ ಮದೀಯ ಬಾಣದ ಬಲೆಗೆ ನೀ ಮೃಗವಾಗದಿರು…” ಎಂಬ ಪದ್ಯದಿಂದ ಆರಂಭಗೊಂಡು ಕೇವಲ ನೆನಪಿನಿಂದಲೇ ತಮ್ಮದೇ ಆದ ಶೈಲಿಯಲ್ಲಿ ‘ವೀರರಸೋತ್ಕರ್ಷ’ವಾಗುವಂತೆ ವಾಚನ ಮಾಡಿದರು. ಇದನ್ನು ಬಹು ಆಸಕ್ತಿಯಿಂದ ಕೇಳಿದ ಕೃಷ್ಣರಾಯರಿಗೆ, ಸಂಗೀತ ಸಾಹಿತ್ಯಗಳೆರಡರಲ್ಲೂ ಅಸ್ಥೆ ಇರುವ ತಾನೂ ಏಕೆ ಭಾರತವಾಚನ ಮಾಡಬಾರದು ಎಂಬ ಅಂತಃಪ್ರೇರಣೆ ಸ್ಫರುತಿಗೊಂಡಿತು. ಅಂದಿನಿಂದ ಭಾರತವಾಚನವೂ ಅವರ ದಿನನಿತ್ಯ ಜೀವನದ ಅಂಗವಾಯಿತು. ಕೃಷ್ಣರಾಯರ ದೈವದತ್ತವಾದ ಸಿರಿಕಂಠ, ರಾಗಮಿಳಿತಗೊಳಿಸಿ ಸಾಹಿತ್ಯವನ್ನು ಸುಶ್ರಾವ್ಯವಾಗಿ ಶ್ರೋತೃಗಳನ್ನು  ರಂಜಿಸುವ ಅವರ ವಾಚನದ ವೈಖರಿ ರಸಿಕರನ್ನು ಆಕರ್ಷಿಸಿತು. ನಾಡಿನಾದ್ಯಂಥ ರಾಯರ ಭಾರತವಾಚನದ ಜಯಭೇರಿ ಮೇಲಿಂದ ಮೇಲೆ ನಡೆದು ಅವರ ಕಂಠಶ್ರೀ ಮೊಳಗಿತು.

ರಾಯರು ತಮ್ಮ ವಾಚನಕ್ಕೆ ತಾವೇ ಸಮರ್ಥವಾಗಿ ವ್ಯಾಖ್ಯಾನ ಮಾಡುತ್ತಿದ್ದರು. ಇಂಗ್ಗೀಷ್‌ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದ ರಾಯರು ತಮ್ಮ ವ್ಯಾಖ್ಯಾನದಲ್ಲಿ ಇಂಗ್ಲೀಷ್‌ ಸಾಹಿತ್ಯದ ಉಲ್ಲೇಖವನ್ನು ಸಮಯೋಚಿತವಾಗಿ ಮಾಡುತ್ತಿದ್ದುದು ವಿದ್ವತ್‌ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗುತ್ತಿದ್ದರು. ಸುಶ್ರಾವ್ಯವಾಚನ, ಪೂರಕವ್ಯಾಖ್ಯಾನ, ಸಂಭಾಷಣೆಗಳ ಸಂದರ್ಭದಲ್ಲಿ ನಾಟಕೀಯತೆ, ನವಿರಾದ ಹಾಸ್ಯ, ಗಹನವಾದ ವಿಚಾರಗಳನ್ನೊಳಗೊಂಡ ಕೃಷ್ಣರಾಯರ ಕಾರ್ಯಕ್ರಮ ರಸಿಕರಿಗೆ ರಸದೌತಣವಾಗಿ ಪರಿಣಮಿಸಿತು.

ಕೆ.ವಿ. ಪುಟ್ಟಪ್ಪನವರ ಹುಟ್ಟಿದೂರು ಕುಪ್ಪಳ್ಳಿಯಲ್ಲಿ ನಡೆದ ವಿವೇಕಾನಂದರ ಜಯಂತಿ ಕಾರ್ಯಕ್ರಮಕ್ಕೆ ಕುವೆಂಪುರವರ ಆಹ್ವಾನದ ಮೇರೆಗೆ ಕೃಷ್ಣರಾಯರು, ಶ್ರೀರಾಮಕೃಷ್ಣಮಠದ ಸಿದ್ಧೇಶ್ವರಾನಂದ ಸ್ವಾಮಿಜಿಯವರು, ಬಿ.ಎಂ.ಶ್ರೀ, ವೆಂಕಣ್ಣಯ್ಯನವರು,ನಾ. ಕಸ್ತೂರಿ ಅವರು ಹೋಗಿದ್ದರು. ಆ ಸಂದರ್ಭದಲ್ಲಿ ಮಲೆನಾಡಿನ ಸುಂದರ ಪ್ರದೇಶದಲ್ಲಿ ತಿರುಗಾಡಲು ಹೊರಟಾಗ ಬಿ.ಎಂ.ಶ್ರೀ ಮತ್ತು ಕೃಷ್ಣರಾಯರು ಒಂದು ಕಡೆ ಸೇರಿದರು. ಹಾಗೆಯೇ ಮಾತನಾಡುತ್ತಾ ಇದ್ದಕ್ಕಿದ್ದ ಹಾಗೆ ಬಿ.ಎಂ.ಶ್ರೀಯವರು “ಕೃಷ್ಣರಾವ್‌, ನೀವು ಭಾರತವನ್ನು ಓದಿದ್ದೀರಲ್ಲಾ, ಅದರಲ್ಲಿ ಮೊದಲಿನಿಂದ ಕಡೆಯವರೆಗೂ ಇರತಕ್ಕ ಸ್ವಾರಸ್ಯವಾದ ಭಾಗಗಳು ಯಾವುವು? ಹೇಳಿ ನೋಡೋಣ” ಎಂದರು. ಕೃಷ್ಣರಾಯರು ಭಾರತವನ್ನು ಸಮಗ್ರವಾಗಿ ಓದಿದ್ದರಿಂದ ಇವರಿಗೆ ತೋರಿದ ಸ್ವಾರಸ್ಯ ಭಾಗಗಳನ್ನು ತಿಳಿಸಿದರು.ಹಾಗೆಯೇ ಮಾತನಾಡುತ್ತಾ ಬಿ.ಎಂ.ಶ್ರೀಯವರು ಸ್ವಲ್ಪ ದೂರ ಸಾಗಿ ಹಠಾತ್ತನೆ ನಿಂತು, ಕೃಷ್ಣರಾಯರನ್ನು ಕುರಿತು “ಕೃಷ್ಣರಾವ್‌ ಎಷ್ಟೋಜನ ಭಾರತ ಓದುತ್ತಾರೆ. ಚೆನ್ನಾಗಿಯೂ ಓದುತ್ತಾರೆ. ಆದರೆ ಆ ಕಲೆ ನಿಮಗೆ ಸಿದ್ಧಿಸಿದ ಹಾಗೆ ಇನ್ನು ಯಾರಿಗೂ ಸಿದ್ಧಿಸಿಲ್ಲ ಎಂಬುದು ನನ್ನ ಭಾವನೆ” ಎಂದು ಹೇಳಿದರು. ಆಗ ಕೃಷ್ಣರಾಯರು ತಮ್ಮ ಆಶೀರ್ವಾದ ಎಂದು ತಿಳಿಸಿ, ಈ ಸಂಗತಿಯನ್ನು ವೆಂಕಣ್ಣಯ್ಯನವರಲ್ಲಿ ಪ್ರಸ್ತಾಪಿಸಿದಾಗ ಅವರು ಸಂತೋಷಪಟ್ಟು “ಬಿ.ಎಂ.ಶ್ರೀಯವರು ಯಾರಿಗೂ ಹಾಗೆ ಹೇಳುವುದಿಲ್ಲ. ಅವರು ಅಷ್ಟು ಸಂತೋಷದಿಂದ ನಿಮ್ಮ ಬಗ್ಗೆ ಹೇಳಿರಬೇಕಾದರೆ ಅವರ ಪರಮಾನುಗ್ರಹ ಉಂಟಾದ ಹಾಗಾಯಿತು. ಅದರಿಂದ ನಿಮಗೆ ಒಳ್ಳೆಯ ಶ್ರೇಯಸ್ಸಿದೆ” ಎಂದು ಹೇಳಿದರು. ವೆಂಕಣ್ಣಯ್ಯನವರ ಈ ನುಡಿ ಕೃಷ್ಣರಾಯರ ಜೀವನದಲ್ಲಿ ನಿಜವಾಯಿತು.

ಇನ್ನೊಮ್ಮೆ, ಮಲೆನಾಡಿನ ಇಂಗ್ಲಾದಿ (ದೇವಾಂಗಿ)ಯಲ್ಲಿ ಮಲೆನಾಡು ಯುವಕ ಸಂಘದ ವಾರ್ಷಿಕೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು. ತೀರ್ಥಹಳ್ಳಿ, ಕೊಪ್ಪ, ಮಂಡಗದ್ದೆ, ಮೇಗರವಳ್ಳಿ ಮೊದಲಾದ ಗ್ರಾಮಗಳಿಂದ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ಕುವೆಂಪು ಅವರ ಅಧ್ಯಕ್ಷತೆಯಲ್ಲಿ ಮೈಸೂರಿನಿಂದ ಆಮಂತ್ರಿಸಿದ್ದ ಕೃಷ್ಣಗಿರಿ ಕೃಷ್ಣರಾಯರ ಭಾರತವಾಚನ ಅದ್ಭುತವಾಗಿ ನಡೆಯಿತು. ಈ ಕಾರ್ಯಕ್ರಮದಲ್ಲೇ ರಾಯರ ಭಾರತವಾಚನ ಕುವೆಂಪು ಮೇಲೆ ಬಹಳ ಪರಿಣಾಮ ಬೀರಿ ಅವರ ಕವಿ ಹೃದಯ ಸ್ಪೂರ್ತಿಗೊಂಡು “ಹಾಡಿದನು ಗಮಕಿ ನಾಡು ನಲಿದುದು ರಸದ ಕಡಿನಲಿ ಧುಮುಕಿ” ಎಂದು ಪ್ರಾರಂಭವಾಗುವ ಅಸಮ ಪಂಕ್ತಿ ಛಂದಸ್ಸಿನ ರಚನೆ ಹೊರಹೊಮ್ಮಿದ್ದು. ಇದನ್ನು ಕುವೆಂಪು ಅವರು ತಮ್ಮ ಆತ್ಮಕಥೆ “ನೆನಪಿನ ದೋಣಿ”ಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿವರುಷ, ತಿರುಪತಿಯಲ್ಲಿ ಉತ್ತರಾದಿಮಠದ ಆಗಿನ ಪೀಠಾಧಿಪತಿಗಳೂ ಮಹಾತಪಸ್ವಿಗಳೂ ಆಗಿದ್ದ ಶ್ರೀ ಸತ್ಯಧ್ಯಾನತೀರ್ಥರು ವಿದ್ವತ್ಸಭೆಯನ್ನು ಕರೆಯುತ್ತಿದ್ದರು. ಒಂದು ವರ್ಷ ವಿದ್ವತ್ಸಭೆಗೆ ತಮ್ಮ ಅಭಿಮಾನಿ ಶಿಷ್ಯರಾದ ಕೃಷ್ಣರಾಯರನ್ನು ಬರಮಾಡಿಕೊಂಡಿದ್ದರು. ಕೃಷ್ಣರಾಯರ ಅಮೋಘ ಭಾರತವಾಚನದ ಕಾರ್ಯಕ್ರಮವೂ ನಡೆಯಿತು. ಆಗ ನೆರೆದ ವಿದ್ವಾಂಸರ ಮುಂದೆ, ಹೆಮ್ಮೆಯಿಂದ ಗುರುಗಳು ಕೃಷ್ಣರಾಯರನ್ನು ಉದ್ದೇಶಿಸಿ “ಇವರು ನಮ್ಮ ಮಠದ ಲೌಕಿಕ ಪುರಾಣಿಕ. ಈ ಹಿಂದೆ ಎಂದೂ ನೀವು ಈ ರೀತಿಯ ಭಾರತ ವಾಚನವನ್ನು ಕೇಳಿರಲಿಕ್ಕಿಲ್ಲ. ಇವರು ಕೇವಲ ಕೃಷ್ಣಗಿರಿ ಕೃಷ್ಣರಾಯರಷ್ಟೆ ಅಲ್ಲ! ನಮ್ಮ ಮಠದ ಭಾರತದ ಕೃಷ್ಣರಾಯ” ಎಂದು ಶ್ಲಾಘಿಸಿದರು. ಆ ಗುರುವಿನ ಅನುಗ್ರಹವೇ ರಾಯರನ್ನು “ಭಾರತದ ಕೃಷ್ಣರಾಯ”ರೆಂದು ಕರ್ನಾಟಕಾದ್ಯಂತ ಜನಜನಿತವಾಗುವಂತೆ ಮಾಡಿತು. ತಳುಕಿನ ವೆಂಕಣ್ಣಯ್ಯನವರು ಮತ್ತು ಎ.ಆರ್.ಕೃಷ್ಣಶಾಸ್ತ್ರಿಗಳನ್ನು ಕನ್ನಡ ಸಾಹಿತ್ಯದ ಅಶ್ವಿನೀದೇವತೆಗಳೆಂದು ಗುರುತಿಸುವಂತೆ, ಭಾರತದ ಬಿಂದೂರಾಯರು ಮತ್ತು ಭಾರತದ ಕೃಷ್ಣರಾಯರನ್ನು ಗಮಕ ಪ್ರಪಂಚದ ಅಶ್ವಿನೀ ದೇವತೆಗಳೆಂದು ಗುರುತಿಸುವಂತಾಯ್ತು.

‘ಗಮಕ’ವೆಂದರೆ ಭಾರತವಾಚನ ಅನ್ನುವಷ್ಟರಮಟ್ಟಿಗೆ ಗಮಕಿಗಳು ಕುಮಾರವ್ಯಾಸ ಭಾರತ ವಾಚನಕ್ಕೆ ಮಾತ್ರ ಸೀಮಿತವಾಗಿದ್ದರು. ಕನ್ನಡ ಸಾಹಿತ್ಯದ ಸಮಗ್ರ ಪರಿಚಯ ಮಾಡಿಕೊಂಡಿದ್ದ ಕೃಷ್ಣರಾಯರು ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ, ಆದಿಪುರಾಣ ಮೊದಲ್ಗೊಂಡು ಅನೇಕ ಪ್ರಾಚೀನ ಕಾವ್ಯಗಳನ್ನು ವಾಚನಕ್ಕೆ ಅಳವಡಿಸಿ ಕಾರ್ಯಕ್ರಮ ನೀಡಲು ಪ್ರಾರಂಭಿಸಿ ರಸಿಕರ ಗಮನ ಸೆಳೆದರು.

ಒಮ್ಮೆ ಮೈಸೂರಿನಲ್ಲಿ ನಡೆದ ಪಂಪ ಜಯಂತಿಯ ಸಂದರ್ಭದಲ್ಲಿ ‘ಆದಿಪುರಾಣ’ದಿಂದ ಆಯ್ದ ಪ್ರಸಂಗವನ್ನು ರಾಯರು ವಾಚನ ಮಾಡುತ್ತಾ ಒಂದು ಘಟ್ಟದಲ್ಲಿ ಥಟ್ಟನೆ ನಿಲ್ಲಿಸಿದರು. ಆಗ ಅಧ್ಯಕ್ಷತೆ ವಹಿಸಿದ್ದ ಬಿ.ಎಂ.ಶ್ರೀ ಅವರು ಕೃಷ್ಣರಾಯರನ್ನು ಕುರಿತು “ನಮ್ಮ ಭಾಷಣ ಇದ್ದೇ ಇದೆ. ಪಂಪನನ್ನೇ ಕೇಳೋಣ. ನಿಮ್ಮ ಕಾವ್ಯವಾಚನವನ್ನು ಮುಂದುವರೆಸಿ” ಎಂದು ಪ್ರೋತ್ಸಾಹಿಸಿದರು.

ಮಲೆನಾಡಿನ ಮೇಗರವಳ್ಳಿಯಲ್ಲಿ ನಡೆದ ಯುವಕ-ಯುವತಿಯ ಪ್ರೇಮ ಪ್ರಸಂಗದ ಪರಿಹಾರಕ್ಕೆ ಮಲೆನಾಡು ಒಕ್ಕಲಿಗ ಯುವಕರ ಸಂಘಕ್ಕೆ ತಂದೆ ತಾಯಿಗಳು ಮೊರೆಯಿಟ್ಟಾಗ, ಕುವೆಂಪುರವರಿಗೆ ಆ ವರುಷದ ಸಂಘದ ವಾರ್ಷಿಕ ಸಭೆಗೆ ಅಧ್ಯಕ್ಷತೆ ವಹಿಸಲು ಆಹ್ವಾನ ಬಂತು. ಆದರೆ ಕೆಲಸದ ನಿಮಿತ್ತ ಕುವೆಂಪು ಅವರಿಗೆ ಹೋಗಲಾಗಲಿಲ್ಲ. ಅವರು ಕೃಷ್ಣಗಿರಿ ಕೃಷ್ಣರಾಯರಿಗೆ ಸಂದರ್ಭದ ವಿವರ ತಿಳಿಸಿ ರುಕ್ಮಣೀ ಕಲ್ಯಾಣದ ಭಾಗವನ್ನು ವಾಚನಮಾಡಿ ನಿಜವಾದ ಪ್ರೇಮವೇ ಮದುವೆಗೆ ಕಾರಣವಾಗಬೇಕೆಂದೂ ಹಣವಾಗಲೀ ಬಲತ್ಕಾರವಾಗಲೀ ಆಗಬಾರದು ಎಂಬುದನ್ನು ಆ ಗ್ರಾಮಸ್ಥರ ಮನಮುಟ್ಟುವಂತೆ ತಿಳಿಸಬೇಕೆಂದು ಸೂಚಿಸಿ ಕಳುಹಿಸಿಕೊಟ್ಟರು. ಕೃಷ್ಣರಾಯರು  ಕನ್ನಡ ಭಾಗವತದಿಂದ ರುಕ್ಮಣೀ ಕಲ್ಯಾಣದ ಪ್ರಸಂಗವನ್ನು ಸೂಕ್ತ ವ್ಯಖ್ಯಾನದೊಂದಿಗೆ ಬಹು ಯಶಸ್ವಿಯಾಗಿ ನಡೆಸಿಕೊಟ್ಟರು. ಕೃಷ್ಣರಾಯರ ವಾಚನ ಜಯ ಡಿಂಡಿಮ ಬಾರಿಸಿತು ಎಂದು ಕುವೆಂಪು ಅವರು ಆತ್ಮಕಥೆ “ನೆನಪಿನ ದೋಣಿ”ಯಲ್ಲಿ ಸ್ಮರಿಸುತ್ತಾರೆ.

ಹಲವು ಬಾರಿ ಆಹ್ವಾನದ ಮೇರೆ ರಾಷ್ಟ್ರಕವಿ ಗೋವಿಂದ ಪೈಗಳ ಸ್ಥಳ ಮಂಜೇಶ್ವರದ ಶ್ರೀಮದನಂತೇಶ್ವರ ದೇವಸ್ಥಾನದಲ್ಲಿ ರಾಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ನರಹರಿಯ ತೊರವೆ ರಾಮಾಯಣವನ್ನು ರಾಯರು ಸಂಗ್ರಹಿಸಿ ಶಿಷ್ಯ ಅಶ್ವತ್ಥನಾರಾಯಣನೊಂದಿಗೆ ವಾಚನ-ವ್ಯಾಖ್ಯಾನ ಮಾಡುತ್ತಿದ್ದಾಗ ರಾಯರು ಅರ್ಥೈಸುವುದನ್ನು ಪೈಗಳು ಮೆಚ್ಚಿಕೊಂಡು, “ಮೆಟ್ರಿ”, “ಲೋಂಚನ” ಶಬ್ದಗಳ ಅರ್ಥಗಳ ಬಗ್ಗೆ ರಾಯರು ಅರ್ಥೈಸಿದುದು ತಮ್ಮ ಶಬ್ಧ ಭಂಡಾರಕ್ಕೆ ದೊರಕಿದುದರ ಬಗ್ಗೆ ರಾಯರನ್ನು ಬಹುವಾಗಿ ಮೆಚ್ಚಿಕೊಂಡರು. ಒಮ್ಮೆ, ರಾಯರು ಪೈಗಳ ಕೃತಿ “ಹೆಬ್ಬೆರಳು” ವಾಚನ ಮಾಡಿ ಕವಿಗಳೇ ವ್ಯಾಖ್ಯಾನಮಾಡಿದರು. ಅಲ್ಲದೆ, ಗೋವಿಂದ ಪೈಗಳ ಗೊಲ್ಕೊಥಾ, ವೈಶಾಖಿ ಕಾವ್ಯಗಳನ್ನಲು ವಾಚನ ಮಾಡಿ ರಸಿಕರಿಂದ ಮೆಚ್ಚಿಗೆ ಪಡೆದವರು ಕೃಷ್ಣರಾಯರು.

ಹೀಗೆ ಪಂಪ, ರನ್ನ, ಹರಿಹರ, ರಾಘವಾಂಕ, ಷಡಕ್ಷರಿ, ಚಾಮರಸ, ಕುಮಾರವ್ಯಾಸ, ಲಕ್ಷ್ಮೀಶ, ನರಹರಿ, ನಿತ್ಯಾತ್ಮ ಶುಕಯೋಗಿ ಮೊದಲಾದ ಪ್ರಾಚೀನ ಕವಿಗಳ ಕಾವ್ಯಗಳನ್ನು ಗಮಕದ ಮೂಲಕ ಕನ್ನಡ ಜನತೆಗೆ ಪರಿಚಯಿಸಿಕೊಟ್ಟು ಕೃಷ್ಣರಾಯರ ಮುಂದಿನ ಗಮಕಿಗಳ ಪೀಳಿಗೆಗೆ ಮಾರ್ಗದರ್ಶನ ನೀಡಿದವರು.

ಕುವೆಂಪುರವರು ತಮ್ಮ ‘ಚಿತ್ರಾಂಗದಾ’ ಖಂಡಕಾವ್ಯವನ್ನು ರಾಗರಹಿತವಾದ ಧೀರಶೈಲಿಯಿಂದ ಓದುವುದಕ್ಕೆ ಸಾಧ್ಯವಾಗುವಂತೆಯೇ ರಾಗಸಹಿತವಾಗಿ ಭಾರತವೋದಿದಂತೆ ಓದಲು ಸಾಧ್ಯ ಎಂಬುದನ್ನು ಗಮಕಿವರ್ಯರಲ್ಲೊಬ್ಬರಾಗಿರುವ “ಶ್ರೀಮಾನ್‌ ಕೆ. ಕೃಷ್ಣರಾಯರು ಮನೋಹರವಾಗಿ ನಿದರ್ಶಿಸಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ” ಎಂದು ತಮ್ಮ ಕಾವ್ಯದ ಅರಿಕೆಯಲ್ಲಿ ನುಡಿದಿದ್ದಾರೆ. ಅಲ್ಲದೆ ೧೯೭೬ರಲ್ಲಿ ಪ್ರಕಟಗೊಂಡ “ವಿಚಾರ ಕ್ರಾಂತಿ” ಎಂಬ ಪುಸ್ತಕದಲ್ಲಿ ಕುವೆಂಪು ಅವರು “ದಿವಂಗತ ಕೃಷ್ಣಗಿರಿ ಕೃಷ್ಣರಾಯರು ದಿವಂಗತ ‘ಆನಂದ’-ಎ. ಸೀತಾರಾಂರೊಡನೆ ನನ್ನ ಕಾವ್ಯಗಳು ಹಸ್ತ ಪ್ರತಿಯಲ್ಲಿದ್ದಾಗಲೇ ನಮ್ಮ ಮನೆ ‘ಉದಯರವಿ’ಗೆ ಬಂದು ಗಂಟೆಗಟ್ಟಲೆ ನನಗೆ ತಮ್ಮ ಅನ್ಯಾದೃಶ್ಯಗಮಕದಿಂದ ರಸದೂಟ ಉಣಬಡಿಸಿ, ನಾವು ಕೊಟ್ಟ ಕಾಫಿ, ತಿಂಡಿ, ಹೋಳಿಗೆ, ತುಪ್ಪ, ಪಾಯಸ ಎಲ್ಲ ಸ್ವೀಕರಿಸುತ್ತಿದ್ದರು” ಎಂದು ಉಲ್ಲೇಖಿಸಿದ್ದಾರೆ.

ಕುವೆಂಪುರವರ “ಶ್ರೀ ರಾಮಾಯಣದರ್ಶನಂ” ಮಹಾಕಾವ್ಯ ರಚನೆಯಾಗುತ್ತಿರುವ ಸಂಧರ್ಭದಲ್ಲೇ, ಕುವೆಂಪು ಅವರ ನಿವಾಸದಲ್ಲಿ ವೆಂಕಣ್ಣಯ್ಯ, ಎ.ಆರ್.ಕೃಷ್ಣಶಾಸ್ತ್ರಿಗಳು ಮೊದಲಾದ ಸಾಹಿತಿಗಳ ಸಮ್ಮುಖದಲ್ಲಿ ಕೃಷ್ಣರಾಯರು ಕಾವ್ಯವಾಚನ ಮಾಡಿ ಕವಿ ಹಾಗೂ ಶ್ರೋತೃಗಳ ಮನೆ ತಣಿಸುತ್ತಿದ್ದು ಆನಂದದ ಲೋಕಕ್ಕೆ ಕರೆದೊಯ್ಯುತ್ತಿದ್ದರಂತೆ.

“ಭಾರತದ ಕೃಷ್ಣರಾಯರೆಂದೇ ಖ್ಯಾತರಾದರೂ ಚಂಪೂ, ರಗಳೆ, ಸಾಂಗತ್ಯಗಳನ್ನು ವಾಚನಕ್ಕೆ ಅಳವಡಿಸಿದುದು. ಮಾತ್ರವಲ್ಲ, ಶ್ರೀ ಕುವೆಂಪು ಅವರ ಚಿತ್ರಾಂಗದಾ ಖಂಡಕಾವ್ಯದ ಹೃದಯಂಗಮ ವಾಚನದಿಂದ ಕವಿ ಹೃದಯಕ್ಕೂ ತಂಪು ತಂದವರು. ರಾಮಾಯಣದರ್ಶನಂ ಕಾವ್ಯ ವಾಚನದ ಪ್ರಯೋಗ ಮಾಡಿದವರು. ಗಮಕಕಲೆಯ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಕರತಲಾಮಲಕವಾಗಿ ಬಲ್ಲವರು. ನಾನು ತಿಳಿದಂತೆ ಆಧುನಿಕ ಮಹಾಕಾವ್ಯಗಳ ವಾಚನಕ್ಕೆ ಅಸ್ತಿಭಾರ ಹಾಕಿಕೊಟ್ಟು ಮಾರ್ಗದರ್ಶಕರಾದ ಪುಣ್ಯಶ್ಲೋಕರು ಶ್ರೀಕೃಷ್ಣಗಿರಿ ಕೃಷ್ಣರಾಯರು” ಎಂದು ಹಿರಿಯ ಸಾಹಿತಿ ಡಾ.ಎ.ಎಸ್‌. ವೇಣುಗೋಪಾಲರಾವ್‌ ಅಭಿಪ್ರಾಯ ಪಡುತ್ತಾಋಎ.

ಪ್ರಾಚೀನ ಹಾಗೂ ಆಧುನಿಕ ಖಂಡ ಮತ್ತು ಮಹಾಕಾವ್ಯಗಳನ್ನು ಗಮಕಕ್ಕಳವಡಿಸಿ ಜನಸಮೂಹದಲ್ಲಿ ಕವಿಕಾವ್ಯಗಳ ಪರಿಚಯ ಮಾಡಿದ್ದಲ್ಲದೆ ಕಾವ್ಯಾನಂದ ಉಂಟು ಮಾಡುವುದರ ಮೂಲಕ ಕನ್ನಡಿಗರಲ್ಲಿ ಕಾವ್ಯವಾಚನ ಕೇಳುವ ಆಸ್ಥೆಯನ್ನು ಬೆಳೆಸಿದ ಕೃಷ್ಣರಾಯರು ನಾಡಿನಾದ್ಯಂತ ‘ಗಮಕಿಕೃಷ್ಣರಾಯರು’ ಎಂದೇ ಪ್ರಸಿದ್ಧರಾದರು.

ಕೃಷ್ಣರಾಯರ ಭಾರತ ವಾಚನಕ್ಕೆ ಜನರು ಎಷ್ಟು ಹಾತೊರೆಯುತ್ತಿದ್ದರು ಎನ್ನುವುದಕ್ಕೆ ನಡೆದ ಒಂದು ಘಟನೆ. ಶಿವಮೊಗ್ಗದ ಕರ್ನಾಟಕ ಸಂಘದ ನೂತನ ಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲೆಯ ಆರಂಭೋತ್ಸವ. ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರು ಪ್ರೊ. ಜೆ.ಸಿ. ರಾಲೊ ಅವರ ಅಧ್ಯಕ್ಷತೆ, ಕಾರ್ಯಕ್ರಮದ ಆರಂಭದಲ್ಲಿ ಕೃಷ್ಣರಾಯರಿಂದ ಭಾರತದ ನಾಂದಿಪದ್ಯಗಳ ವಾಚನ. ನಂತರ ಪ್ರಾಧ್ಯಾಪಕರಿಂದ ವಿದ್ವತ್‌ಪೂರ್ಣ ಉಪನ್ಯಾಸ ನಡೆಯುವುದಿತ್ತು. ಆ ಪ್ರಕಾರ ಕೃಷ್ಣರಾಯರು ನಾಂದಿ ಪದ್ಯಗಳನ್ನು ಹಾಡಿ ನಿಲ್ಲಿಸಿದರೆ, ಕೂಡಲೆ ಸಭೆಯಿಂದ “We want Bharatha Vachana only. Don’t want Lectures” ಎಂಬ ಘೋಷಣೆಗಳು ಕೇಳಿಬಂದವು. ಸಭಿಕರ ಮನೋಧರ್ಮವನ್ನರಿತು ಅಧ್ಯಕ್ಷ ಪೀಠದಿಂದ ಪ್ರೊ.ರಾಲೊ ಅವರು ಎದ್ದು ನಿಂತು “As a chairman of the house I suspend all the other Programmes slated for lthe day. I request Mr. krishna Rao to continue Bharatha Vachana Programme honouring the sentiment of the People assembled here. I apologise him for not arranging earlier his full-fledged programme” ಎಂದು ಘೋಷಿಸಿದರು. ಜನತೆ ಈ ಹೇಳಿಕೆಯನ್ನು ಕರತಾಡನದಿಂದ ಸ್ವಾಗತಿಸಿತು.

ಯೂನಿವರ್ಸಿಟಿ ಟೀಚರ್ಸ್ ಅಸೋಸಿಯೇಷನ್‌ (U.T.A.) ಕೈಗೊಳ್ಳುತ್ತಿದ್ದ ಪ್ರವಾಸಗಳಲ್ಲಿ ಪ್ರಚಾರೋಪನ್ಯಾಸದ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದು ಅದರಲ್ಲಿ ಬಿ.ಎಂ.ಶ್ರೀ, ನಾ. ಕಸ್ತೂರಿ, ವೆಂಕಣ್ಣಯ್ಯ, ಯಾಮುನಾಚಾರ್ಯ ಮೊದಲಾದ ವಿದ್ವಾಂಸರ ಉಪನ್ಯಾಸಗಳಿಗೆ ಮುಂಚೆ ಕೃಷ್ಣರಾಯರ ಭಾರತ ವಾಚನ ಏರ್ಪಾಡಾಗುತ್ತಿತ್ತು. ಜನರು ವಾಚನವಾಗುವವರೆಗೂ ಇದ್ದು ಎಷ್ಟಂಓ ಮಂದಿ ಇತರ ಭಾಷಣ ಕಾರ್ಯಕ್ರಮಗಳಿಗೆ ಇರದೇ ಹೊರಟು ಹೋಗುತ್ತಿದ್ದರು. ಇದನ್ನು ಕಂಡು ಮುಂದೆ ಸಾಮಾನ್ಯವಾಗಿ ಮೊದಲು ಭಾಷಣದ ಕಾರ್ಯಕ್ರಮ ಹಾಕಿ ಕೊನೆಯಲ್ಲಿ ರಾಯರ ವಾಚನ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ನಾ. ಕಸ್ತೂರಿ ಮತ್ತು ವೆಂಕಣ್ಣಯ್ಯನವರು ಹಾಸ್ಯವಾಗಿ “ಸಭೆಗಳಿಗೆ ಜನರನ್ನು ಸೇರಿಸುವುದಕ್ಕೆ ಕೃಷ್ಣರಾಯರ ವಾಚನ, ಆ ಜನಗಳನ್ನು  ಚದುರಿಸುವುದಕ್ಕೆ ನಮ್ಮ ಭಾಷಣಗಳು” ಎಂಬುದಾಗಿ ಹೇಳುತ್ತಿದ್ದರಂತೆ.

ಕೃಷ್ಣರಾಯರ ವಾಚನದ ಪ್ರಭಾವ ಪಾಶ್ಚಾತ್ಯರಾದ ಜೆ.ಸಿ. ರಾಲೊ ಮೇಲೂ ಬಹಳವಾಗಿ ಪರಿಣಾಮ ಬೀರಿತು. ಪ್ರೊ. ರಾಲೊ ಇರುತ್ತಿದ್ದ ಸಭೆಗಳಲ್ಲಿ ರಾಯರು ಇಂಗ್ಲೀಷಿನಲ್ಲಿ ವ್ಯಾಖ್ಯಾನ ಮಾಡುತ್ತಿದ್ದುದೂ ಉಂಟು. ರಾಲೊ ಅವರಿಗೆ ಗ್ರಂಥಪಾಲಕರಾಗಿದ್ದ ಕೃಷ್ಣರಾಯರಲ್ಲಿ ವಿಶೇಷವಾಗ ಗೌರವಾಭಿಮಾನಗಳಿತ್ತು. ಕೃಷ್ಣರಾಯರ ಬಗ್ಗೆ ರಾಲೊಲ ಅವರು “ನಮ್ಮ ಲೈಬ್ರರಿಯನ್‌ ಮಧ್ಯಮಯುಗದ ತಿರುಗುಗಾಯಕ ಕವಿಗಳಂತೆ (Troubadours) ದೇಶವನ್ನೆಲ್ಲಾ ಸುತ್ತಿ ಸಾಹಿತ್ಯ ಭಿಕ್ಷೆ  ಹಾಕುತ್ತಿದ್ದಾರೆ” ಎಂದು ಹೊಗಳಿಕೆಯ ಮಾತಾನಾಡುತ್ತಿದ್ದರು. ಯಾರೋ ಒಬ್ಬರು ಲೈಬ್ರರಿಯನ್‌ ಕೃಷ್ಣರಾಯರ ಮೇಲೆ ದೂರು ಕೊಟ್ಟರು. “ಇವರು ಶನಿವರ ಮಧ್ಯಾಹ್ನ ಮತ್ತು ಭಾನುವಾರ ಊರಿನಲ್ಲೇ ಇರುವುದಿಲ್ಲ. ಭಾರತವಾಚನಕ್ಕೆ ಎಲ್ಲೆಲ್ಲಿಗೋ ಹೊರಟು ಹೋಗುತ್ತಾರೆ. ಇದು ನಿಯಮ ವಿರುದ್ಧ” ಎಂದು. ಈ ಸಂಬಂಧ, ರಾಲೊ ಅವರು ವಿಶ್ವವಿದ್ಯಾನಿಲಯದ ಅಧ್ಯಾಪಕ ಸಮಘದ ಸಭೆಯೊಂದರಲ್ಲಿ ಮಾತನಾಡುತ್ತ “ಲೈಬ್ರರಿಯನ್ನರು ಭಾರತವಾಚನಕ್ಕಾಗಿ ಹೋಗುವುದರಿಂದ ಕಾಲೇಜಿನ ಕೆಲಸಕ್ಕೆ ಇದುವರೆಗೆ ಧಕ್ಕೆ ಬಂದಿಲ್ಲ. ಬಂದರೆ ನನಗೆ ತಿಳಿದೇ ತಿಳಿಯುತ್ತದೆ. ಕೈಗೊಳ್ಳಬೇಕಾದ ಕಾರ್ಯವನ್ನು ಕೈಗೊಳ್ಳುತ್ತೇನೆ. ಧಕ್ಕೆ ಬರದಿದ್ದರೆ ಅವರು ಸಾಹಿತ್ಯ ಪರಿಮಳವನ್ನು ದೇಶದಲ್ಲೆಲ್ಲಾ ಹರಡುತ್ತಿರುವುದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ” ಎಂದು ರಾಯರ ಬಗ್ಗೆ ಮೆಚ್ಚುಗೆ ವ್ಯಕ್ತಿ ಪಡಿಸಿದುದನ್ನು ಪ್ರೊ. ಎ.ಎನ್‌.ಮೂರ್ತಿರಾಯರು ಅವರ “ಚಿತ್ರಗಳು-ಪತ್ರಗಳು” ಗ್ರಂಥದಲ್ಲಿ ದಾಖಲಿಸಿದ್ದಾರೆ. ರಾಲೊ ಭಾರತದಿಂದ ಸ್ವದೇಶಕ್ಕೆ ಮರಳಿದರೂ ಕೃಷ್ಣರಾಯರನ್ನು ಮರೆಯಲಿಲ್ಲ. ಪ್ರತಿ ಕ್ರಿಸ್‌ಮಸ್‌ಗೆ ರಾಯರಿಗೆ ಶುಭಾಶಯ ಪತ್ರ ಕಳುತ್ತಿದ್ದುದಲ್ಲದೆ, ಮಹಾರಾಜ ಕಾಲೇಜಿನ ಶತಮಾನೋತ್ಸವ ಸಂಧರ್ಭದಲ್ಲಿ ೧೯೫೧ರಲ್ಲಿ ಹೊರತಂದ ಸಂಚಿಕೆಗಾಗಿ ಬರೆದ ಅವರ ಲೇಖನ “In a reminiscent mood”ನಲ್ಲಿ ಕೃಷ್ಣರಾಯರ ಬಗ್ಗೆ ಪ್ರಸ್ತಾಪಿಸುತ್ತಾ “I can remember villAges made house proud and street proud by the visits of our student evangelists of cleanliness, scout camps in different places. Lecture campus which were long remembered in teh Mofussil, for many things but always chiefly for the Bharatha readings of Mr. krishna Rao (anotehr proof of the supremacy of poetry)” ಎಂದು ಉಲ್ಲೇಖಿಸಿದ್ದಾರೆ. ಒಬ್ಬ ವಿದೇಶಿಯನ ಗತಸ್ಮೃತಿಯಲ್ಲಿ ಚಿರಸ್ಥಾಯಿಯಾಗಿ ನಿಂತ ದೇಶೀಯನ ಪ್ರತಿಭೆಗೆ ಸಂದ ಗೌರವವನ್ನು ಈ ಸಾಲುಗಳಲ್ಲಿ ಕಾಣಬಹುದು ಎಂದು ರಾಯರ ಹಿರಿಯ  ಮಗ ಕೃ. ನಾಗರಾಜರಾಯರು ಅಭಿಪ್ರಾಯಪಡುತ್ತಾರೆ.

ಗಮಕ ಕಲೆಯ ಕೀರ್ತಿಕಳಶ ಪ್ರಾಯರಾದ ಕೃಷ್ಣಗಿರಿ ಕೃಷ್ಣರಾಯರು ಗಮಕ ಕಲಾ ಪ್ರಪಂಚಕ್ಕೆ ನೀಡಿದ ಮತ್ತೊಂದು ವಿಶಿಷ್ಟ ಕೊಡುಗೆಯೆಂದರೆ ಗಮಕ ಪರಂಪರೆ ಉಳಿದು ಬೆಳೆಯುವುದಕ್ಕೆ ಅಗತ್ಯದ ಶಿಷ್ಯ ಸಂಪತ್ತು. ಮೈಸೂರಿನ ವನಿತಾಸದನ, ಭಗಿನೀ ಸೇವಾಸಮಾಜ, ಸೀತಾಸದನ, ಮಹಿಳಾ ಸಮಾಜಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಮಕ ತರಗತಿ ಆರಂಭಿಸುವುದಕ್ಕೆ ಮುಂಚಿತವಾಗಿಯೇ ಗಮಕ ತರಗತಿಗಳನ್ನು ನಡೆಸಿ ಅನೇಕ ಶಿಷ್ಯರನ್ನು ತರಬೇತಿಗೊಳಿಸಿದರು. ಡಿ.ವಿ. ಗುಂಡಪ್ಪನವರು ೧೯೩೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗಮಕ ತರಗತಿಯನ್ನು ಪ್ರಾರಂಭಿಸಿದಾಗ, ಮೊದಲ ವರುಷ ಭಾರತದ ಬಿಂದೂರಾಯರೂ, ಮರುವರುಷ ಕೃಷ್ಣಗಿರಿ ಕೃಷ್ಣರಾಯರೂ ಪರಿಷತ್ತಿನಲ್ಲಿ ಗಮಕತರಗತಿ ನಡೆಸಿದರು. ಮೈಸೂರಿನ ರಾಯರ ತಮ್ಮ ಸ್ವಗೃಹದಲ್ಲಿ ನಿರಂತರವಾಗಿ ಗಮಕ ತರಗತಿ ನಡೆಸುತ್ತಿದ್ದರು. ಅವರ ನಿವಾಸಕ್ಕೆ ‘ಕುಮಾರವ್ಯಾಸ ಗುರುಕುಲ’ ಎಂದು ರಾಯರು ಹೆಸರಿಡಬೇಕಾಗಿ ಬಂದದ್ದು ಒಂದು ಕುತೂಹಲದ ಸನ್ನಿವೇಶವೇ ಸರಿ! ಪಂಡಿತರತ್ನ ಬಿ. ಶಿವಮೂರ್ತಿ ಶಾಸ್ತ್ರಿಗಳು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ, ಕೃಷ್ಣರಾಯರು ಗಮಕ ತರಗತಿಯನ್ನು ಸಂಸ್ಥೆಯ ಪರವಾಗಿ ನಡೆಸದೆ ಮನೆಯಲ್ಲಿ ನಡೆಸುತ್ತಾರೆ ಎಂಬ ವಿರೋಧದ ಮಾತು ಬಂದಾಗ, ಕೃಷ್ಣರಾಯರು ಪರಿಷತ್ತಿಗೆ ಪತ್ರ ಬರೆದು, “ಇದು ಮನೆಯಲ್ಲ, ಕುಮಾರವ್ಯಾಸ ಗುರುಕುಲ. ಪರಿಷತ್ತು ಗಮಕ ತರಗತಿ ಆರಂಭಿಸುವುದಕ್ಕಿಂತಲೂ ಮುಂಚಿತವಾಗಿಯೇ ಇಲ್ಲಿ ಗಮಕ ತರಗತಿಗಳು ನಡೆಯುತ್ತಿದೆ” ಎಂದು ತಿಳಿಸಿ ಪರಿಷತ್ತು ರಾಯರನ್ನು ಕ್ಷಮಾಪಣೆ ಕೇಳುವಂತೆ ಆಯಿತು.

ರಾಯರು ನೀಡುತ್ತಿದ್ದ ಪ್ರೋತ್ಸಾಹ, ತೋರಿಸುತ್ತಿದ್ದ ವಾತ್ಸಲ್ಯಭಾವ, ಕಲೆಯನ್ನು ಧಾರೆಯೆರೆಯುವಲ್ಲಿನ ಔದಾರ್ಯ ಶಿಷ್ಯರನ್ನು ಆಕರ್ಷಿಸುತ್ತಿತ್ತು. ರಾಯರಲ್ಲಿ ಗಮಕ ಕಲಿಯಬೇಕೆಂದು ಬಂದ ಯಾರೊಬ್ಬರೂ  ನಿರುತ್ಸಾಹಿಯಾಗಿ ಹಿಂತಿರುಗಿ ಹೋಗುತ್ತಿರಲಿಲ್ಲ. ಅವರ ಶಿಷ್ಯ ಸಮೂಹದಲ್ಲಿ ಬಡಗಿಯಿಂದ ಹಿಡಿದು ಸಂನ್ಯಾಸಿಯವರೆಗೂ ಇದ್ದರು. ಕಲೆಯ ಗಂಧವೇ ಇಲ್ಲದವರಲ್ಲಿಯೂ ಕಲಾಭಿಮಾನ, ಕಲಾಭಿರುಚಿ ಮೂಡಿಸುತ್ತಿದ್ದುದು ರಾಯರ ಮೋಡಿಯೇ ಸರಿ. ರಾಯರಲ್ಲಿ ಕಲಿಯಲು ಬಂದವರೆಲ್ಲಲ ಅವರ ಆತ್ಮೀಯರಾಗಿ ಬಿಡುತ್ತಿದ್ದರು. ಇದು ಅವರ ಸಜ್ಜನಿಕೆಯ ದ್ಯೋತಕ. ಕಲಿತವರೆಲ್ಲರೂ ಪ್ರಸಿದ್ಧರಾಗದಿದ್ದರೂ ಕೆಲವರಾದರೂ ಆ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬಲ್ಲರು ಎಂಬುದೇ ರಾಯರ ಭರವಸೆಯಾಗಿತ್ತು. ಇದಕ್ಕೆ ಸಾದೃಶವಾಗಿ ಕೆಲವು ಶಿಷ್ಯರನ್ನು ಹೆಸರಿಸಬಹುದಾಗಿದೆ. ದಿವಂಗತರಾದ ಕಳಲೆ ಸಂಪತ್ಕುಮಾರಾಚಾರ್ಯರು, ಮೈ.ಶೇ. ಅನಂತಪದ್ಮನಾಭರಾವ್‌, ಪಂಡಿತ ನಂ.ಅಶ್ವತ್ಥನಾರಾಯಣ, ಎಸ್‌. ನರಸಿಂಗರಾವ್‌, ಎಸ್‌. ನಾಗೇಶರಾವ್‌, ಪಿ.ಹೆಚ್‌. ಸೇತೂರಾವ್‌, ಪಂಡಿತ ರಮಾಬಾಯಿ, ಅನ್ನಪೂರ್ಣಮ್ಮ ರಘುಪತಿಶಾಸ್ತ್ರಿ, ಹೆಚ್‌. ಜಾನಕಿ, ಪಿ. ಸತ್ಯವತಿ ಹಾಗೂ ಈಗಲೂ ಸೇವೆ ಮಾಡುತ್ತಿರುವ ಗಮಕ ಕಲಾ ಕೋವಿದ ಬಿ.ಎಸ್‌.ಎಸ್‌. ಕೌಶಿಕ್‌, ಪಿ.ಎ. ಗಿರಿಧರ್, ಶ್ರೀಮತಿಯರಾದ ಗೌರಮ್ಮ ಶ್ರೀನಿವಾಸಮೂರ್ತಿ, ಆರ್. ಚಂದ್ರ, ಕಮಲಾ ರಾಮಕೃಷ್ಣ ಮೊದಲಾದವರಲ್ಲದೆ, ರಾಯರ ಮಕ್ಕಳೂ (ನಾಲ್ವರು ಗಂಡು ಮಕ್ಕಳು-ನಾಗರಾಜ, ಶ್ರೀನಿವಾಸ, ರಾಮಚಂದ್ರ, ಮುರುಳೀಧರ ಮತ್ತು ಮೂವರು ಹೆಣ್ಣು ಮಕ್ಕಳು ಕಮಲ, ಶಾಂತ, ರತ್ನ) ವಾಚನ-ವ್ಯಾಖ್ಯಾನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಂದೆಯವರ ಗಮಕ ಪರಂಪರೆಯನ್ನು ಉಳಿಸಿ ಬೆಳೆಸುವುದಕ್ಕೆಕ ತಮ್ಮ ಕೈಯಲ್ಲಾದ ಸೇವೆ ಮಾಡುತ್ತಿದ್ದಾರೆ.

ಶಿಷ್ಯರು ಕಲೆಯನ್ನು ಅಭ್ಯಸಿಸುತ್ತಿರುವಾಗಲೇ ಅವರನ್ನು ತಮ್ಮ ಜೊತೆಯಲ್ಲಿ ಪ್ರವಾಸಗಳಲ್ಲಿ ಕರೆದುಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿ ಮಾರ್ಗದರ್ಶನ ನೀಡುತ್ತಿದ್ದುದು ರಾಯರ ವೈಶಿಷ್ಟ್ಯವಾಗಿತ್ತು. ತಮ್ಮ ಜೊತೆ ಜೊತೆಯಲ್ಲೇ ಶಿಷ್ಯರನ್ನು ಪ್ರೋತ್ಸಾಹಿಸಿ ಬೆಳಕಿಗೆ ಬರುವಂತೆ ವೇದಿಕೆ ಕೊಡುತ್ತಿದ್ದ ರಾಯರಂಥ ಗುರುಗಳು ಅತಿ ವಿರಳವೆನ್ನಬೇಕು.

ಕಲೆ ನಿಂತ ನೀರಾಗಬಾರದು, ಕಲಾವಿದರಲ್ಲಿ ಪ್ರಯೋಗಶೀಲತೆ ಇರಬೇಕು ಎಂಬುದು ಕೃಷ್ಣರಾಯರ ಅಭಿಪ್ರಾಯವಾಗಿತ್ತು. ಮೈಸೂರಿನಲ್ಲಿ ದಿ. ಗೋಪಾಲಸ್ವಾಮಿಯವರು ಆಕಾಶವಾಣಿಯನ್ನು ಪ್ರಾರಂಭಿಸಿದಾಗ ಪ್ರತಿ ಗುರುವಾರ ರಾಯರ ಭಾರತವಾಚನ ಪ್ರಸಾರವಾಗುತ್ತಿದ್ದುದಲ್ಲದೆ, ನಾ. ಕಸ್ತೂರಿಯವರ ನಿರ್ದೇಶಕತ್ವದಲ್ಲಿ ರಾಯರು ಕವಿ ಕಾವ್ಯಗಳ ಪರಿಚಯ ಆಕಾಶವಾಣಿಯ ಮೂಲಕ ಬಿತ್ತರಿಸಲು ನೆರವಾದರು. ತಮ್ಮ ಪ್ರಯೋಗಶೀಲತೆಯನ್ನು ಶಿಷ್ಯರಲ್ಲೂ ಹುರಿದುಂಬಿಸುತ್ತಿದ್ದುದು ರಾಯರ ರೀತಿಯಾಗಿತ್ತು. ಶಿಷ್ಯರಿಗೆ ಹೆಚ್ಚಿನ ಕಟ್ಟುಪಾಡಿಲ್ಲದೆ ಪೂರ್ಣ ಸ್ವಾತಂತ್ಯ್ರವನ್ನು ಕಲ್ಪಿಸಿಕೊಟ್ಟಿದ್ದರು. ಅದಕ್ಕೆ ನಿದರ್ಶನವಾಗಿ ರಾಯರ ಮೆಚ್ಚಿನ ಶಿಷ್ಯರಾಗಿದ್ದ ಕಳಲೆ ಸಂಪತ್ಕುಮಾರಾಚಾರ್ಯರು ಗಮಕದಲ್ಲಿ ಹಿಂದುಸ್ತಾನಿ ರಾಗಗಳನ್ನಳವಡಿಸಲು ಆರಂಭಿಸಿದ್ದು, ಬಿ.ಎಸ್‌.ಎಸ್‌. ಕೌಶಿಕ್‌ರವರು ವೇಷಭೂಷಣಗಳೊಂದಿಗೆ ಗಮಕರೂಪಕಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸಿದ್ದನ್ನು ಹೆಸರಿಸಬಹುದು.

ಅಂದಿನ ಗಮಕಕಾರ್ಯಕ್ರಮದಲ್ಲಿ ಹೆಚ್ಚಿನ ರಾಗಗಳ ಬಳಕೆಯಾಗುತ್ತಿರಲಿಲ್ಲ. ಕೆಲವೇ ರಾಗಗಳನ್ನು ಬಳಸುತ್ತಿದ್ದರು. ರಾಯರಿಗೆ ಶಾಸ್ತ್ರೀಯವಾಗಿ ಸಂಗೀತದ ಕಲಿಕೆ, ಹಿರಿಯ ಸಂಗೀತ ವಿದ್ವಾಂಸರ ಕಚೇರಿಯ ನಿರಂತರ ಕೇಳ್ಮೆ, ಸಂಗೀತ ಪ್ರಧಾನದ ನಾಟಕಗಳನ್ನು ನೋಡುವ ಪರಿಪಾಠದಿಂದ ನಾಟಕಮಟ್ಟುಗಳಲ್ಲಿ ಹಾಡುವಿಕೆ ಗೊತ್ತಿದ್ದುದರಿಂದ ರಾಯರು ತಮ್ಮ ವಾಚನದಲ್ಲಿ ಭಾವಕ್ಕೆ ತಕ್ಕಂತೆ ಮುಖಾರಿ, ಜುಂಜೂಟಿ, ಖಮಾಚ್‌, ಬೇಹಾಗ್‌, ಹಿಂದುಸ್ತಾನಿ ಕಾಪಿ, ಕೇದಾರ, ದೇಶೀತೋಡಿ ಮುಂತಾದ ರಾಗಗಳನ್ನು ಬಳಸುತ್ತಿದ್ದ ರೀತಿ ವಿಶಿಷ್ಟವಾಗಿತ್ತು. ಕವಿಯ ಕಾವ್ಯದಲ್ಲಿನ ರಸೋತ್ಕರ್ಷವನ್ನು ಶ್ರೋತೃವಿನ ಮೇಲೆ ಹೆಚ್ಚು ಪರಿಣಾಮಕಾರಿಯಾಗುವಂತೆ ವಾಚನ ಮಾಡಬಹುದೆಂದು ತೋರಿಸಿಕೊಟ್ಟವರು ಕೃಷ್ಣಗಿರಿ ಕೃಷ್ಣರಾಯರು.

ಕೃಷ್ಣರಾಯರ ಕಲಾಪ್ರಾವೀಣ್ಯತೆ, ನಿಸ್ವರ್ಥ ಸೇವೆ, ಕಲೆಯನ್ನು ಉಳಿಸಿ ಬೆಳೆಸಬೇಕೆಂಬ ಕಳಕಳಿಗೆ ಸರಿಸಮನಾಗಿ ಅವರನ್ನು ಗುರುತಿಸದಿದ್ದುದೂ, ಗೌರವಿಸದಿದ್ದುದು ಒಂದು ಕೊರತೆಯೇ ಸರಿ! ಆದರೆ ಯಾವತ್ತೂ ರಾಯರು ಪ್ರಶಸ್ತಿ ಗೌರವಗಳ ಹಿಂದೆ ಬಿದ್ದವರಲ್ಲ. ನಿಷ್ಕಾಮಕರ್ಮಯೋಗಿಯಂತೆ ತಮ್ಮ ಕಲಾತಪಸ್ಸನ್ನು ನಡೆಸಿಕೊಂಡು  ಬಂದು ಬಡತನದಲ್ಲೂ ಅತ್ಯಂತ ತೃಪ್ತಿ ಹಾಗೂ ಸಂತಸ ಜೀವನ ನಡೆಸಿದವರು. ಮಿತ್ರ ಹಾಗೂ ಶಿಷ್ಯ ವರ್ಗದಲ್ಲಿ ಸದಾ ಹಿರಿಕಿರಿಯರೆನ್ನದೆ ಬೆರೆತು ನಗುನಗುತ ರಸಿಕತನದಿಂದ ಸಹೃದಯನಾಗಿ ಸಾರ್ಥಕ ಜೀವನ ನಡೆಸಿದರು. ರಾಯರು ಸಂಸಾರದ ಜಂಜಾಟದ ಕಡೆಗೆ ಹೆಚ್ಚಿನ ಗಮನ ಕೊಡದೆ ಗಮಕ ಕಲಾ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನೆರವಾದ ಅವರ ಸಹಧರ್ಮಿಣಿ ಸರಸ್ವತಿಬಾಯಿಯವರ ಪಾತ್ರವೂ ಮಹತ್ವದ್ದೇ ಆಗಿದೆ.

ಎಂ.ಆರ್. ಶ್ರೀಯವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಾಗ ೧೯೫೨ರಲ್ಲಿ ಬೇಲೂರಿನಲ್ಲಿ ನಡೆದ ೩೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಗಮಕಗೋಷ್ಠಿಗೆ ಕೃಷ್ಣರಾಯರನ್ನು ಅಧ್ಯಕ್ಷರನ್ನಾಗಿ ಆಹ್ವಾನಿಸಿ ಕನ್ನಡ ಸಾಹಿತ್ಯ ಪರಿಷತ್ತು ರಾಯರು ನಾಡು ನಾಡಿಗೆ ಸಲ್ಲಿಸಿದ ಗಮಕ ಕಲಾ ಸೇವೆಯನ್ನು ಗುರುತಿಸಿ ತನ್ನ ಗೌರವವನ್ನು ವ್ಯಕ್ತಪಡಿಸಿತು. ಅ.ನ.ಕೃ.,  ಟಿ. ಚೌಡಯ್ಯನವರು ಮತ್ತು ದೇವೇಂದ್ರಪ್ಪನವರ ಸತತ ಪ್ರಯತ್ನದ ಫಲವಾಗಿ ೧೯೬೨ರಲ್ಲಿ ವಿಶಾಲ ಮೈಸೂರಿನ ಸಂಗೀತ ಸಾಹಿತ್ಯ ಅಕಾಡೆಮಿಯಿಂದ ರಾಯರನ್ನು ಪ್ರಶಸ್ತಿ ರೂಪದಲ್ಲಿ ಗೌರವಿಸಲ್ಪಟ್ಟಿತು. ಸರ್ಕಾರ ಕಲಾವಿದರಿಗೆಂದು ನೀಡಿದ ಮಾಸಾಶನವನ್ನು ರಾಯರಿಗೆ ಸಲ್ಲಿಸಿ ತನ್ನ ಗೌರವನ್ನು ವ್ಯಕ್ತಪಡಿಸಿತು.

ಸರಳತೆ, ಸರಸತೆ, ಔದಾರ್ಯ, ಸ್ನೇಹಪರತೆ, ಶಿಷ್ಯ ವಾತ್ಸಲ್ಯ, ವಿನಯಶೀಲತ್ವ ಮೊದಲಾದ ವಿಶಿಷ್ಟ ಗುಣಗಳ ಕೃಷ್ಣಗಿರಿ ಕೃಷ್ಣರಾಯರು, ಭಾರತದ ಕೃಷ್ಣರಾಯರಾಗಿ ನಾಡಿನಾದ್ಯಂತ ತಮ್ಮ ಕಂಠಶ್ರೀಯನ್ನು ಗಮಕದ ಮೂಲಕ ಮೊಳಗಿಸಿ, ಕನ್ನಡಿಗರನ್ನು ಪವಿತ್ರ ಹೃದಯರನ್ನಾಗಿ ಮಾಡಿ, ಸಾರ್ಥಕತೆಯ ತುಂಬು ಜೀವನ ನಡೆಸಿ ತಮ್ಮ ೭೩ನೇ ವಯಸ್ಸಿನಲ್ಲಿ ದಿನಾಂಕ ೦೬,೦೯.೧೯೬೬ ಮಂಗಳವಾರದಂಧು ಇಹಲೋಕವನ್ನು  ಬಿಟ್ಟು ಕೀರ್ತಿ ಶೇಷರಾದರು.

ಗಮಕ ಕಲೆಗೆ ಕೃಷ್ಣಗಿರಿ ಕೃಷ್ಣರಾಯರ ಪ್ರವೇಶ ಆಕಸ್ಮಿಕ. ಆದರೆ ಆ ಕಲೆಗೆ ಅವರ ಕೊಡುಗೆ ಅಪಾರ. ಸಂಸ್ಕಾರದಿಂದಲೇ ಬಾಲ್ಯದಿಂದಲೂ ಸಂಗೀತವನ್ನು ಮೈಗೂಡಿಸಿಕೊಂಡದ್ದಲ್ಲದೆ ಪಿಟೀಲು ವಾದನದಲ್ಲೂ ನಿಷ್ಣಾತರಾಗಿದ್ದ ರಾಯರು ಸಂಗೀತಕ್ಷೇತ್ರದಲ್ಲೇ ಮುಂದುವರಿದಿದ್ದರೆ, ಪ್ರಸಿದ್ಧ ಸಂಗೀತ ವಿದ್ವಾಂಸರಾಗಬಹುದಿತ್ತೇನೋ! ಹಾಗಾಗದಿದ್ದುದು ಸಂಗೀತ ಕ್ಷೇತ್ರಕ್ಕೆ ನಷ್ಟವಾದರೂ ಗಮಕ ಪ್ರಪಂಚಕ್ಕೆ ನವೋದಯವಾಯಿತೆಂದರೆ ಅತಿಶಯೋಕ್ತಿಯೇನಲ್ಲ! ವೃತ್ತಿಯಲ್ಲಿ ಮೈಸೂರಿನ ಮಹಾರಾಜ ಕಾಲೇಜಿನ ಸರಸ್ವತಿ ಭಂಡಾಋದ ಗ್ರಂಥಪಾಲಕರಾಗಿದ್ದು ಆಚಾರ್ಯ, ಬಿ.ಎಂ.ಶ್ರೀ, ಟಿ.ಎಸ್‌. ವೆಂಕಣ್ಣಯ್ಯ ಮುಂತಾದ ಪ್ರಖ್ಯಾತ ಸಾಹಿತಿಗಳ ನಿಕಟಕ ಸಂಪರ್ಕವಿದ್ದು ರಾಯರೇನಾದರೂ ಲೇಖನಿ ಹಿಡಿದಿದ್ದರೆ, ಉತ್ತಮ ಸಾಹಿತಿಯೂ ಆಗಬಹುದಿತ್ತೇನೋ! ಲೇಖನಿಯನ್ನು ಹಿಡಿಯದೆ ರಾಯರು ಅವರ ಸಿರಿಕಂಠದ ಧ್ವನಿಯನ್ನು ನಾಡಿನಾದ್ಯಂತ ಮೊಳಗಿಸಿದ್ದು ಗಮಕ ಕಲೆಯ ಅಭ್ಯುದಯವಾಯಿತಷ್ಟೆ!

________________________________________________________________________________________________

ಗ್ರಂಥ ಋಣ:

. ಭಾರತ ಕೃಷ್ಣರಾಯರು (ಜನ್ಮಶತಾಬ್ದಿ ಪ್ರಕಟಣೆ)

. ಮುಲಕನಾಡು ಬ್ರಾಹ್ಮಣರು (ಸಮುದಾಯ, ಸಂಸ್ಕೃತಿ)

:ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ

. ಗಮಕ ಭಗೀರಥರು: ಬಿ.ಶ್ರೀ ಪಾಂಡುರಂಗರಾವ್‌

. ಗಮಗ ದಿಗ್ಗಜಗಳು: ಎಂ.ಎ. ಜಯರಾಮರಾವ್‌

. ಕುವೆಂಪು ಅವರ ಆತ್ಮಕಥೆ: ‘ನೆನಪಿನ ದೋಣಿಯಲ್ಲಿ’

. ಚಿತ್ರಗಳು  ಪತ್ರಗಳು: ಎ.ಎನ್‌. ಮೂರ್ತಿರಾವ್

. ಗಮಕರತ್ನ: ಕೆ. ವೆಂಕಟಸುಬ್ಬಯ್ಯ ಅಭಿನಂಧನ ಗ್ರಂಥ ೧೯೮೪

. ತುಂಗಭದ್ರ: ಗಮಕ ಗಂಧರ್ವ ಎಚ್‌.ಆರ್. ಕೇಶವಮೂರ್ತಿ

ಅಭಿನಂದನಾ ಗ್ರಮಥ ೧೯೯೪

. ಗಮಕ ವಿದುಷಿ ಜಯಲಕ್ಷ್ಮಿ ಇನಾಮದಾರ ಅಭಿನಂದನಾ ಸಂಚಿಕೆ ೧೯೯೫.