ವಾಣಿಯ ವರದ ಕಲ್ಯಾಣಿಯ ಘನತರ

ವೀಣೆಯ ಕಡುಚೆಲ್ವ ಪಾಳಿಯಳs | ಸುಖ
ಶ್ರೇಣಿಯ ಅತಿ ಮೃದುವಾಣಿಯಳs |  ಫಣಿ
ವೇಣಿಯ ಕರ ಚೆಲ್ವ ಜಾಣಿಯಳs |  ಸುಪ್ರ
ವೀಣೆಯ ಬ್ರಹ್ಮನ ರಾಣಿಯ ಅತಿವಿದ್ಯ
ತ್ರಾಣಿಯ ಬಿಡದಿಂಥ ಚೂಣಿಯ ಪೊಗಳ್ವೆ     ೧

ತಾವರೆದಳನೇತ್ರ ದೇವಕಿ ವರವಸು
ದೇವರ ಗರ್ಭದಿ ಜನಿಸುತಲಿ | ಸರ್ವ
ದೇವತೆಗಳು ನಲಿದಾಡುತಲಿ | ಮೊಲೆ
ಸೇವಿಸಿ ಪೂತನಿಯ ನೀಗುತಲಿ | ಗೋವ
ಕಾವಲನಾಗಿ ಕುಲದೊಳು ನೆರೆ ಸೋಲ
ರಾವಳಿಯೊಳು ನಲಿದಾಡಿ ಪಾಡುತಲೀ      ೨

ಬಿಲ್ಲ ಹಬ್ಬಕೆ ಹೋಗಿ ಭರದಿಂದ ದೈತ್ಯಾಳಿ
ಮಲ್ಲಮಲ್ಲರನೆಲ್ಲ ಕೊಲ್ಲುತಲಿ | ಅಲ್ಲಿ
ಖುಲ್ಲ ಕಂಸನ ಸಂಹರಿಸುತಲಿ | ಮುಂದೆ
ಅಲ್ಲಿಯೇ ಪಟ್ಟವ ಕಟ್ಟುತಲಿ | ಮತ್ತೆ
ಬಲ್ಲಿದ ಸಗತೀನ ಮುರಿದು ದನುಜರೆದೆ
ದಲ್ಲಣ ನಿರ್ಝರ ಪತಿ ಗರ್ವಹರಣs           ೩

ಅರಳೆಲೆ ಬಿಂದುಲಿ ಕೊರಳ ತಾಯಿತ ಗೆಜ್ಜಿ
ಎರಡು ಕಾಲೊಳು ಝಣ ಝಣವೆನುತ | ರತ್ನ
ದ್ಹರಳಿನುಂಗುರ ಬೆರಳೊಳಗಿಡುತ | ಚೆಲ್ವ
ಮುರಲಿಯನೂದಿಸಿ ಸ್ವರದೋರುತ | ಬಂದು
ಮರುಳುಗೊಳಿಸಿ ತುರುಗಳನೇರಿ ವೃಕ್ಷದ
ನೆರಳಲಿ ಸರಿಗೆಳೆಯರ ಕೂಡಿಯಾಡಿ                   ೪

ಕಾಳಿಯ ಮಡುವ ಸದಾ ಮುಳುಗುತಲ್ಲಿರೋ
ಕಾಳೋರಗನ ಫಣಿ ಮೆಟ್ಟುತಲಿ | ಅಲ್ಲಿ
ತಾಳಗತ್ತಿಲೆ ನಾಟ್ಯವಾಡುತಲಿ | ಮತ್ತೆ
ತೋಳದಂಡಿಗೆ ಏರಿ ಮೆರೆವುತಲಿ | ಸಖ
ರಾಳಿಯೊಳತಿ ಚೆಂಡು ಬೊಗರಿ ಗುಂಡು ಚಿಣಿ
ಕೋಲವಿಡಿದು ಆಡೋದೇನ ಬಣ್ಣಿಪೆನು        ೫

ಆಲಯಗಳ ಪೊಕ್ಕು ಕುಲುಕುಲು ನಗುತಲಿ
ಬಾಲಕಿಯರ ಕಣ್ಣ ಮುಚ್ಚುತಲಿ | ಸಾಲ
ಸಾಲ ನೆಲುವ ಸರಕುಚ್ಚತಲಿ | ಮೀಸ
ಲ್ಪಾಲ ಬೆಣ್ಣಿಗೆ ಕೈಯ ಹಚ್ಚುತಲಿ | ಸವಿ
ದಾಲಸ್ಯವಿಲ್ಲದೀ ಪರಿಯಲಿ ಮಾಳ್ಪ ಗೋ
ಪಾಲನ ಲೀಲೆಯೊಳಿಪ್ಪುದಿನ್ನು ಜನರು        ೬

ಮತ್ತೇಭ ನಡೆಯರು ಮಧುರೆಗೆ ಪಾಲ್ಮೊಸ
ರ‍್ಹೊತ್ತುಂಬರುತ ಸತಿಮೊತ್ತಗಳು | ಗಳ
ಹತ್ತಿಟ್ಟ ಸರಿಗಿ ಚಿಂತಾಕಗಳು | ನವ
ರತ್ನ ಖಚಿತ ಮುತ್ತಿನ್ಹಾರಗಳು | ಮೆರೆ
ವುತ್ತ ಕಂಗಳ ನೆರೆವುತ್ತೆಡಬಲನಿಟ್ಟ
ಸುತ್ತಾಡಿ ಜೆತ್ತಿಲಿ ಬಂದರಾ ಪುರಕೆ   ೭

ಬಾಲೇರು ಮದನನುಕೂಲೇರು ಯೌವನ
ಕಾಲೇರು ಕನಕ ಕಪೋಲೆಯರು | ಸುವಿ
ಶಾಲೇರು ಚಂಪಕ ಮಾಲೆಯರು | ಸ್ಮರ
ನೀಲೇರು ಕಂದರ್ಪ ಸಾಲೆಯರು | ರತಿ
ಗಾಲೇರು ಘನತರ ಲೋಲೇರು ಮೋಹನ್ನ
ಜಾಲೇರು ಸತಿಶಿರೋಮಣೇರು ಬರಲು       ೮

ಮಜ್ಜಿಗೀಮೊಸರುಪಾಲ್ಬೆಣ್ಣೆಯನು ಹೊತ್ತು
ಕಾಲ್ಗೆಜ್ಜಿಯು ಝಣ ಝಣವೆನ್ನುತಲಿ | ನಯದ
ಕಜ್ಜಳ ಕಣ್ಣಿಗೆ ತೀಡುತಲಿ | ಸುತ್ತ
ಸಜ್ಜೇರ ಮನೆಗಳ ನೊಡುತಲಿ | ಸಾಧು
ಸಜ್ಜನರಿಂದ ಕೊಳ್ಳಿರೆನುತ ಮಧುರಾಪುರ
ಗುಜ್ಜರಿಯೊಳು ಬಂದು ನಿಂತರಾಕ್ಷಣಕೆ       ೯

ಮೇಲು ಸ್ವರಗಳೆತ್ತಿ ಕೂಗುವ ಧ್ವನಿಗಳ
ಕೇಳಿ ಬಂದನು ಕೃಷ್ಣ ತಾನಲ್ಲಿಗೆ | ಸಾಲು
ಸಾಲು ಕೊಡೆಷ್ಟವೆ ತೋರ್ಕಣ್ಣಿಗೆ | ಸುಂಕ
ಹೇಳಿರೆಂದನು ಹೊತ್ತ ಪಾಲ್ಬೆಣ್ಣಿಗೆ | ಇಕೋ
ನಾಳಿಗೆಂದರೆ ಕೇಳಿ ಬಿಟ್ಟವನಲ್ಲ ನಿ
ಮ್ಮೊಳೆಷ್ಟು ಲೆಕ್ಕವ ಹೇಳಿ ನೀವೆನಲು         ೧೦

ದುಡುಕು ಮಾಡುವನೀತ ಹುಡುಗನ್ಯಾರವ ನಮ್ಮ
ತಡೆವುದ್ಯಾತಕೆ ಹೊತ್ತ ಕೊಡ ಭಾರಿಯ | ಸುಂಕ
ಕೊಡುವವರಲ್ಲವು ಬಿಡು ದಾರಿಯ | ಕೇಡು
ಕೊಡುವವರಾರೊಗದೇವು ಸೋರೆಯ | ಬಿಡು
ಗೊಡವಿಯಾತಕ್ಕೆ ಹಾಲ ಕುಡಿದೇನೆಂದರೆ ಹಿಡಿ
ಹಿಡಿಯೆಂದು ಗಲ್ಲ ಪಿಡಿದು ಮುದ್ದಿಪರು                  ೧೧

ಕಣ್ಣ ಸೊನ್ನೆಗಳಿಂದ ಕೈಯ ಗಲ್ಲಕೆ ತಂದು
ಬಣ್ಣಿಸುವುದ ಬಲ್ಲೆನಾ ನಿಮ್ಮದು | ಉಟ್ಟ
ಸಣ್ಣ ಸೀರಿಯ ನೀರಿ ಚಿಮ್ಮುವದು | ಹೋದ
ರಣ್ಣಪ್ಪನಾಣೆ ಇದೆ ನಾ ನಿಮ್ಮದು | ದಿನ
ಕಣ್ಣಿಗೆ ಕಾಂಬದು ಕದ್ದು ಹೋಗುವಿರೆಲ್ಲ
ಬಣ್ಣಗಾರಿಕಿ ಬಿಟ್ಟು ಕೊಟ್ಟು ಹೋಗೆಂದ         ೧೨

ಮೊಸರುಹಾಲಿಗೆ ಸುಂಕ ವಸುಧಿಯೊಳ್ಕುಡುವರೆ
ಹೆಸರೇನು ನಿನಗಿನ್ನು ಹೇಳೆನುತ | ಗಂಡ
ಅಸವಲ್ಲದವ ಕಂಡೆ ಕೇಳೆನುತ | ಬಾಯ
ಕಿಸಿದು ಬೇಡುವದ್ಯಾಕೆ ಹೋಗೆನುತ | ಸುಳ್ಳ
ರಸಕಸಿಯರ ತಡೆವುದು ನಮ್ಮ ದನಿಯರ
ಹಸನಲ್ಲ ಬಿಡು ದಾರಿಯೆಂದು ಗೋಪಿಯರು            ೧೩

ಹಿಂಡ ಗೋಪಿಯರೆಲ್ಲ ಭಂಡಾಗದಿರಿ ಮತ್ತೆ
ಗಂಡ ಲೋಕಕೆ ನಾನೇ ತಿಳಿ ಎಂದನು | ನಿಮ್ಮ
ಉಂಡು ಕುಚವ ಕೈಯೊಳಿಡು ಎಂದನು | ಕರ
ದಂಡಾಕ್ಷಿಯರ ಮುದ್ದು ತೋರೆಂದನು | ಉಳ
ಕೊಂಡೆಮ್ಮ ಮನೆಯೊಳು ಉಂಡು ವಿಶ್ರಮಗಳ
ಕೊಂಡು ರಾತ್ರಿಯೊಳಿರ್ದು ಹೋಗೆಂದನು    ೧೪

ಹೋರಾಟದಲಿ ಬಂದು ನಾರಿಯರಿಗೆ ಬಲು
ಭಾರಿ ಯೌವನ ಬಾ ಬಾ ಬಾರಂತೀದಿ | ಕೈಗೆ
ತೋರ ಕುಚವ ತಾ ತಾ ತಾರಂತೀದಿ | ಮನೋ
ಹಾರ ರತ್ನವ ಹಾ ಹಾ ಹಾರಂತೀದಿ | ಇಂಥ
ಜಾರತ್ವ ಬಿಡು ನೀ ಬಜಾರದೊಳ್ಮೆರವ ಹ
ಜಾರ ಮಂದಿಯನು ಸೇಜಾರ ಮಾಡುವೆವು   ೧೫

ಬಾ ಗೊಲ್ಲ ನಾರಿಯರೀ ಪ್ಯಾಟಿಯೊಳು ಸೋಗು
ಸೋಗು ಸೊಗಸು ಕಣ್ಗೆ ತೋರುವಿರಿ  | ಕಂಡು
ಹೋಗುತಲಡಿಗಡಿಗ್ಹಾರುವಿರಿ | ಮುಂದೆ
ಬಾಗಿ ಬಳಕಿ ಬಿಂಕ ಬೀರುವಿರಿ | ಕಂಡು
ಹ್ಯಾಂಗ ಸೈರಿಸಲೀ ಬಿಡು ಲೆಕ್ಕ ತೀರಿಸಿ
ಹೋಗೆಂಬುತಲಿ ಸೆರಗ್ಹಿಡಿದು ನಿಲಿಸಿದ        ೧೬

ವಾಸವುಳ್ಳವ ನೀನು ನೀ ಸೆರಗ್ಹಿಡಿವುತ
ಲೇ ಸುಂಕಕೊಂಬುದು ನೀನೆ ಚೋರ | ನಿನ
ಗೇಸು ಕಣ್ಣುಗಳವೆ ಹೇಳೊ ಪೋರ | ಸುಳ್ಳೆ
ಗಾಸಿಯಾಗಲಿ ಬೇಡ ತಿಳಿಯೊ ಚೋರ | ಒಂದು
ಕಾಸು ಕೊಟ್ಟರೆ ಎದೆ ಮೇಲಿದ್ದ ಕುಚವೊತ್ತು
ಈ ಸೀರಿ ನಿರಿಯಲ್ಲವೆಂದು ಹೋಗೆನಲು      ೧೭

ಬೆಡಗಿನ ಮಾತಷ್ಟು ಬಡಿವಾರ ಬಿಡು ನಿಮ್ಮ
ಒಡವಿ ವಸ್ತುಗಳ್ಹಾರ ಹರಿವುವೆನೆ | ಮತ್ತೆ
ಜಡಿದಂಥ ನತ್ತುಗಳ್ಮುರಿವುವೆನೆ | ಈಗ
ಬೆಡಗಿನ ಒಡ್ಡ್ಯಾಣವು ಕಳೆಚುವುದೆನೆ | ಸೀರಿ
ಸಡಲಿಸಿ ಸರಳ ಮಂಚಕೆಳದೊಯ್ದು ಎಲ್ಲರ
ಕೆಡಿಸದೆ ಬಿಟ್ಟರೆ ಹುಡುಗ ನಾನಲ್ಲಾ           ೧೮

ಚಿಕ್ಕ ಹುಡುಗ ಹೊರ ತಕ್ಕಷ್ಟು ಇರು ಕಂಡ್ಯಾ
ಅಕ್ಕತಂಗೇರು ಬಾ ಬಾ ಮತ್ತೆನುತ | ಕೈಗೆ
ಸಿಕ್ಕದ್ಹೋಗುವ ಕರಕಷ್ಟೆನುತ | ಮುಸ
ಗಿಕ್ಕಿ ಸೆಳೆದು ಬಗಲೊಳಗಿಡುತ | ಇಂಥ
ಮಕ್ಕಳಾಟಿಕೆ ಬಿಟ್ಟು ಮನಿಗೆ ಪೋಗೆಂದು ಮುಂ
ದಕ್ಕೆ ಹೆಜ್ಜೆಯನಿಟ್ಟು ಸುತ್ತಗಟ್ಟಿದರು  ೧೯

ಎತ್ತೆತ್ತ ನೋಡಲು ಮುತ್ತಿದ ಸಖಿಯರ
ಎತ್ತಿ ಸೀರಿಯ ಸೆರಗ್ಹಿಡಿವುತಲಿ | ಮುಖ
ವೆತ್ತಿ ಮುಖಕೆ ಮುದ್ದನಿಡುವುತಲಿ | ಘನ
ವೃತ್ತ ಕುಚಗಳೊತ್ತಿ ಹಿಡಿವುತಲಿ | ತನ್ನ
ತ್ತತ್ತಲಿ ಸುತ್ತಲಿ ಜತ್ತಿಲಿ ನರೆ ರಂಜಿ
ಸುತ್ತಾಲಿಗೊಳ್ಳಲಿ ಅರ್ತಿಯಾಡುವನು                   ೨೦

ಆಡುವನು ಕೊಳಲೂದಿ ಹಾಡುವನು ಸಖಿಯರ
ಕಾಡುವನು ಕಾಮಿನಿನಿಕರದೊಳು | ಚೆಂಡ
ನಾಡುವನವರ ಕಚಗೆಮಕದೊಳು | ಮುದ್ದು
ಬೇಡುವನು ಅತಿ ಚಮತ್ಕಾರದೊಳು | ತಂತ್ರ
ಮಾಡುವನು ಮನದಿ ಲೋಲಾಡುವನು ಸಿಗದೆದ್ದು
ಓಡುವನು ನಿಂತು ಮಾತಾಡುವನು ನಯದೀ          ೨೧

ಜಡಜಾಕ್ಷ ತಾನಿಂತು ಮಾಡದೆ ಒಳಗೆ ಬಲು
ಬೆಡಗ ತೋರಿಸಿ ಸೀರಿ ಸೆಳೆವುತಲೀ | ಗಜ
ನಡೆಯರೆಲ್ಲರು ಬತ್ತಲಾಗುತಲೀ | ತಮ್ಮ
ತೊಡೆ ತೋಳು ಕುಚ ನೋಡಿ ನಾಚುತಲೀ | ಕೃಷ್ಣ
ತಡೆಯದೆ ಮುಗುಳ್ನಗೆಯೊಡಗೂಡಿ ಬಂದು ತಾ
ಗಿಡವನಡರಿ ಮತ್ತೆ ಬಿಡದೆ ನೋಡಿದನು       ೨೨

ಬಾಲೇರೆಲ್ಲರು ಬತ್ತಲಾಗುತ್ತ ಗಿಡದಡಿ
ಮೇಲಕ್ಕೆ ಕರವೆತ್ತಿ ಸ್ತುತಿಸುತಲಿ | ಶ್ರೀ ಗೋ
ಪಾಲ ನಿಮ್ಮ ಮರೆಹೊಕ್ಕೆವೆನುತಲಿ | ಘನ
ನೀಲಮೇಘಶ್ಯಾಮ ಕರುಣದಲಿ | ಹಿಂದೆ
ಪಾಲಿಸಲಿಲ್ಲವೇ ಆ ಡಂಬರೀಶನ
ಶಾಲೆಯ ಕೊಟ್ಟೆಮ್ಮ ಕಾವುದೆಂದೆನಲು       ೨೩

ದುರುಳ ದುಶ್ಯಾಸನನು ನೆರೆದ ಸಭೆಯೊಳಗೆ
ತರುಣಿ ದ್ರೌಪತಿ ಸೀರಿ ಸೆಳೆವುತಿರೇ | ಕಂಡು
ಪರಿವಾರ ಜನರೆಲ್ ಮರುಗುತಿರೇ | ಕೃಷ್ಣ
ಪೊರೆಯೊ ಪೊರೆಯೊ ಎಂದು ಸ್ಮರಿಸುತಲಿರೇ | ಅಂದು
ಪೊರೆಯಲಿಲ್ಲವೆ ದೇವ ಪರವರ ದಯಾಳು ನೀನು
ಕರುಣದಿ ಕಾಯೋ ಮಾನವೆಂದೆನುತ        ೨೪

ಮಾರಜನಕ ಮಾಯಕಾರ ಮಹಿಮನೆಂದು
ನಾರೇರು ಸ್ತುತಿವಾಕ್ಯ ಸುರಿಸುತಿರೇ | ಬಾರಿ
ಬಾರಿಗೆ ಬಾಯನು ತೆರೆವುತಿರೇ | ಮನ
ಸೂರ್ಯಗುವಂದದಿ ಪರಿವುತಿರೇ | ಮತ್ತೆ
ಧಾರುಣಿಯೊಳು ಕುಂದಗೋಳ ಶ್ರೀಗುರುಸಖ
ಭೂರುಹನಿಳಿದು ನೀರೆಯರ ರಕ್ಷಿಸಿದ.                   ೨೫