. ಈರಣ್ಣನ ಕಾವ್ಯ : ಚಿತ್ತಯ್ಯನ ಕಾವ್ಯದ ಕಥನದಲ್ಲಿ ಕಾಟಯ್ಯನ ಜನನ ಹಾಗೂ ಜೀವನದ ಕಥೆಯೂ ಈಗಾಗಲೇ ನಿರೂಪಿತವಾಗಿರುವುದು. ಬಂಜಿಗೆರೆಯ ಕಲಾವಿದೆಯರಲ್ಲಿ ಕಾಟಯ್ಯ ಮತ್ತು ಈರಣ್ಣ ಬೇರೆ ಬೇರೆಯಲ್ಲ. ಅವರಿಬ್ಬರೂ ಒಂದೇ. ಇಲ್ಲಿ ಈರಣ್ಣನ ಕಾವ್ಯ, ಮತ್ತೊಂದು ಬಗೆಯ ಕಥಾನಕವಾಗುವುದು.

ಕಾಡಾಡಿ ಗೊಲ್ಲರ ಸಣ್ಣಮಲೈಗೊಂಡ(ಗೌಡ) ಹತ್ತು ಸಾವಿರ ಎಮ್ಮೆಗಳ ಒಡೆಯ. ಅವನಲ್ಲಿ ಐದು ಸಂಬಳದ ನೌಕರರು ಎಮ್ಮೆಗಳನ್ನು ಕಾಯುವವರಾದರೆ, ಮ್ಯಾಸ ನಾಯಕರ ಕುರಿಪಾಲಿ ಎಂಬ ಹೆಣ್ಣು ಹತ್ತು ಸಾವಿರ ಕುರಿಗಳ ಒಡತಿ. ಅವಳಲ್ಲಿಯೂ ಐದು ಸಂಬಳದ ನೌಕರರು ಕುರಿಗಳನ್ನು ಕಾಯುವವರಾಗಿದ್ದರು. ಕುರಿಪಾಲಿಗೆ ಸಂಬಂಧಿಸಿದ ಗಾಡಿಬಾವಿಯಲ್ಲಿ ಸಣ್ಣ ಮಲೈಗೊಂಡನ ಎಮ್ಮೆಗಳು ನೀರು ಕುಡಿಯಲು ಬಂದು ಸಗಣಿ ಇಟ್ಟು ನೀರು ಹೊಲಸು ಮಾಡಿರುವುದರಿಂದ ಕುರಿಪಾಲಿಯ ಕುರಿಗಳು ಆ ನೀರು ಕುಡಿಯದಂತಾದಾಗ, ಇಬ್ಬರ ಆಳುಗಳಿಗೆ ಜಗಳವಾಗಿ ತಮ್ಮ ತಮ್ಮ ಒಡೆಯರಿಗೆ ದೂರು ಹೇಳುವರು. ಕುರಿಪಾಲಿಯ ಮಾತು ಕಿವಿಗೆ ಹಾಕಿಕೊಳ್ಳದೆ ಅವಳೊಂದಿಗೆ ಸಣ್ಣಮಲೈಗೊಂಡ ಯುದ್ಧ ಮಾಡಬೇಕಾಯಿತು. ನಾಯ್ಕನ್ಹಟ್ಟಿ ಹಿರೆಕೆರೆಯಲ್ಲಿ ನಡೆದ ಯುದ್ಧದಲ್ಲಿ ಕುರಿಪಾಲಿಗೆ ಗೆಲುವಾಗುತ್ತಿತ್ತು. ಆದರೆ ಯುದ್ಧ ಸೋಮವಾರಕ್ಕೆ ಮುಂದೂಡಿತು.

ಕುರುಡಮ್ಮ ಸಣ್ಣಮಲೈಗೊಂಡನ ಸ್ಫುರದ್ರೂಪಿ ಮಗಳು. ಅವಳ ಸೋದರ ಮಾವ ಸ್ವಾಮಗೊಂಡರಾಯ. ಸ್ವಾಮಗೊಂಡರಾಯ ಮೊದಲು ಕೊರಚರಲ್ಲಿ ಗೋವುಗಳನ್ನು ಕಾಯುತ್ತಿದ್ದ. ಒಂದು ದಿನ ಹುಲಿಯು ಹಸು ಕರುವನ್ನು ತಿನ್ನಲು ಬಂದಾಗ ಅದನ್ನು ಉಳಿಸಲು ಓಡಿ ಹೋಗುವಾಗ ಈಚಲು ಮರದ ಮುಳ್ಳು ಕಾಲಲ್ಲಿ ಮುರಿದು ಹುಣ್ಣಾಯಿತು. ಅದನ್ನು ವಾಸಿ ಮಾಡಿಕೊಳ್ಳಲು ಅಕ್ಕನ ಮನೆಗೆ ಬಂದ. ಭಾವ ಸಣ್ಣಮಲೈಗೊಂಡ ಮೇಟೌಷಧಿಯಿಂದ ಸರಿಪಡಿಸಿದ. ಅಂದಿನಿಂದ ಅವನಿಗೆ ಕುಂಟ ಸ್ವಾಮಗೊಂಡರಾಯ ಅಂತ ಕರೆಯತೊಡಗಿದರು. ಆತನು ಚಲುವನೂ ಜಾಣನೂ ಆಗಿದ್ದ. ಆತನಿಗೆ ಮತ್ತು ಮಗಳಾದ ಕುರುಡಮ್ಮಳಿಗೆ ಎಮ್ಮೆ ಕಾಯಲು ಸಣ್ಣಮಲೈಗೊಂಡ ಮತ್ತು ಅವನ ಹೆಂಡತಿ ನೇಮಕ ಮಾಡಿ ಕೆಲವು ಕಟ್ಟೆಚ್ಚರ ನೀಡಿದ್ದರು. ಅವರಿಬ್ಬರು ಪ್ರತ್ಯೇಕ ಗುಡುಸಿಗಳಲ್ಲಿ ಇದ್ದು ಮಾತನಾಡದಂತೆ ಎಮ್ಮೆಗಳನ್ನು ಕಾಯುವುದೇ ಆ ಎಚ್ಚರವಾಗಿತ್ತು. ಆದರೆ ಒಂದು ದಿನ ಧಾರಾಕಾರವಾಗಿ ಮಳೆ ಬೀಳುತ್ತಿದ್ದಾಗ ಕುರುಡಮ್ಮಳಿಗೆ ಎಮ್ಮೆಗಳನ್ನು ಕಾಯಲು ಆಗಲಿಲ್ಲ. ಆಗ ಸ್ವಾವಗೊಂಡನೆ ಎಲ್ಲ ಎಮ್ಮೆಗಳನ್ನು ಕಾಯ್ದು ದಣಿದಿದ್ದಿಯಾ ಈಗ ನಾನು ಅಡಿಗೆ ಮಾಡಿದ್ದೇನೆ,  ನೀನು ಸ್ನಾನ ಮಾಡಿಕೊಂಡು ಊಟ ಮಾಡು ಎಂದು ಸ್ವಾಮಗೊಂಡನಿಗೆ ವಿನಂತಿಸಿಕೊಂಡಾಗ ಆತ ಅಕ್ಕನ ಮತ್ತು ಭಾವನ ಕಟ್ಟೆಚ್ಚರಕ್ಕೆ ಭಯಗೊಂಡು ನಿರಾಕರಿಸಿದ. ಆಗ ಕುರುಡಮ್ಮ ಒತ್ತಾಯಪೂರ್ವಕವಾಗಿ ಊಟಮಾಡಿಸಿ ಅಂದು ರಾತ್ರಿ ಆತನೊಂದಿಗೆ ಕಳೆದಳು. ಕೆಲವು ದಿನಗಳಾದ ಮೇಲೆ ತಾನು ಬಸಿರಿ ಎಂಬುದು ಎಲ್ಲರಿಗೂ ತಿಳಿಯಿತು. ಕಟ್ಟೆಚರ ಮೀರಿದ ಇವರಿಬ್ಬರಿಗೆ ಕೊಲ್ಲಿಸಬೇಕೆಂದು ಬೇಡರಿಗೆ ಸಣ್ಣಮಲೈಗೊಂಡ ಆಜ್ಞೆಮಾಡಿದ. ಬೇಡರು ಇವರಿಬ್ಬರನ್ನು ಗವಾಸರಾಯನ ಗುಡ್ಡಕ್ಕೆ ಕರೆದೊಯ್ದು ಜೀವದಾನ ಬಿಟ್ಟು ಕೊಲ್ಲಿದೆವೆಂದು ಸುಳ್ಳು ಹೇಳುವರು. ಗವಾಸರಾಯನ ಗುಡ್ಡದಲ್ಲಿ ಕುರುಡಮ್ಮ ಏಳು ಜನ ಗಂಡು ಮಕ್ಕಳಿಗೆ ಜನ್ಮ ನೀಡುವಳು. ಮಕ್ಕಳು ಬೆಳೆದು ದೊಡ್ಡವರಾಗುವರು. ಅವರಲ್ಲಿ ಹಿರಿಯವ್ನೆ ಈರಣ್ಣ ಉಳಿದವರು ಅಪ್ಪಣ್ಣ, ತಿಪ್ಪಣ್ಣ, ಕೆಂಗುರಿಯ ತಿಪ್ಪಣ್ಣ, ಗಾಳಣ್ಣ, ಗೂಳಣ್ಣ ಮತ್ತು ಮುತ್ತಿನ ಚೆಂಡು ಮುರಾರಿ. ಮಕ್ಕಳು ಬೇಟೆಗೆ ಹೋಗಿದ್ದಾಗ ಕುರಿಪಾಲಿಯಿಂದ ತನ್ನ ತಂದೆ ಸಣ್ಣಮಲೈಗೊಂಡ ಯುದ್ಧದಲ್ಲಿ ಸೋಲುತ್ತಿರುವ ವಿಷಯ ನೆರೆಯವರಿಂದ ತಿಳಿದು ದುಃಖಿತಳಾಗಿ ಮನೆಯಲ್ಲಿ ಕುಳಿತಾಗ ಮಕ್ಕಳು ಬೇಟೆಯಿಂದ ಬಂದು ಏನಮ್ಮ ದುಃಖಿತಳಾಗಿದ್ದೆ, ಏನು ಕಾರಣವೆಂದು ಕೇಳಿದರು. ಏನಿಲ್ಲ ನಿಮ್ಮಜ್ಜ ಸಣ್ಣಮಲೈಗೊಂಡ ಕುರಿಪಾಲಿಯಿಂದ ಸೋಲುವುದರಲ್ಲಿದ್ದಾನೆ. ನೀವು ನಿಮ್ಮ ತಾತನಿಗೆ ಗೆಲ್ಲಿಸಿ ಬರ್ಬೇಕು ಮತ್ತು ನಿಮ್ಮಜ್ಜ ಹೊಲಮನಿ, ಗೋವುಗಳು, ಬೆಳ್ಳಿ ಬಂಗಾರ ಕೊಟ್ರೆ ತರಬ್ಯಾಡ್ರಿ ನಿಮ್ಮಜ್ಜ ಉಂಡ ಎಂಜಲು(ಜಾತಿ) ಮತ್ತು ಎಲೆ ಅಡಿಕೆ, ವೀಳ್ಯದೆಲೆ, ತಾಂಬೂಲ(ಜನಿಗೆ) ಕೇಳಿ ಪಡೆಯಿರಿ ಅಂದ್ಳು, ಹಂಗಾದ್ರೆ ಕೊಡುವಮ್ಮ ಆರ್ಸಿ ಕತ್ತಿಯನ್ನ ಯುದ್ಧಕ ಎಂದು ಮಕ್ಕಳು ಅನ್ನುವರು.

ಉಪ್ಪರಿಗೆ ಮನಿಯಾಗ ತುಪ್ಪಾವ ಕಾಸೊಳೆ
ಕಪ್ಪೀನ ಕಿವಿಯ ಕುರುಡಮ್ಮ | ಈರಣ್ಣಾಗ
ಕತ್ತಿ ಅರ್ಸಿ ಕೊಡುತಾಳೆ

ಕುರುಡಮ್ಮ ಕತ್ತಿ ಅರ್ಸಿ ಈರಣ್ಣನಿಗೆ ಕೊಡುವುದನ್ನು ಮೇಲಿನ ಪದ್ಯದಲ್ಲಿ ಅವಲೋಕಿಸಬಹುದು. ತಾಯಿಯಿಂದ ಪಡೆದ ಆಯುಧಗಳನ್ನು ತೆಗೆದುಕೊಂಡು ಯದ್ಧಕ್ಕೆ ಹೋಗುವಾಗ ಗವಾಸರಾಯನ ಗುಡ್ಡದ ಸಮೀಪ ಯಳವತ್ತಿ ಹಳ್ಳದಲ್ಲಿ ಊಟಕ್ಕೆ ಕೂತಾಗ ಕಲಹದಲ್ಲಿ ಒಬ್ಬ ಮಡಿಯುವನು. ಉಳಿದ ಆರು ಜನ ಅಣ್ಣ ತಮ್ಮಂದಿರು ನಾಯ್ಯನ್ಹಟ್ಟಿ ಹಿರೇಕೆರೆಯಲ್ಲಿಯ ಯುದ್ಧದಲ್ಲಿ ತಮ್ಮ ತಾತನ ಪರವಾಗಿ ಯುದ್ಧಮಾಡಿ, ಕುರಿಪಾಲಿಗೆ ಸೋಲಿಸಿ, ತಾಯಿಯ ಆಜ್ಞೆಯಂತೆ ಸಣ್ಣಮಲೈಗೊಂಡನಿಂದ ಜಾತಿ ಜನಿಗೆ ತರುವರು. ಆ ನಂತರದ ಯುದ್ಧದಲ್ಲಿ ಏಳು ಜಂಬತೆಲ್ಲಿ ಎಲ್ಲರು ಮಡಿಯುವರು.

ಈ ಹಿನ್ನೆಲೆಯ ಸ್ಮರಣಾರ್ಥ ಬಂಜಿಗೆರಿಯ ಕೃಷ್ಣಗೊಲ್ಲರು ತಮ್ಮೂರಲ್ಲಿ ೧೯೮೭ರಲ್ಲಿ ಈರಣ್ಣ ಮತ್ತು ನಿಂಗಣ್ಣ ದೇವರ ಗುಡಿಕಟ್ಟಿ ಮೀಸಲು ಹಾಲು ಕರೆದು, ಉತ್ಸವ ಮೂರ್ತಿಗಳನ್ನು (ಈರಣ್ಣ ದೇವರು, ಬತವಿನ ದೇವರು, ಈರಬಡಕ್ಕ) ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಸುಮಾರು ೪೦ ಕಿ.ಮೀಟರ ಅಂತರದ ಯಳವತ್ತಿ ಹಳ್ಳದ ದಡದಲ್ಲಿದ್ದ ಗೊಲ್ರಹಟ್ಟಿಗೆ ಮನ್ನೆಕೋಟೆ, ಜಂಬಯ್ಯನ ಹಟ್ಟಿ, ಗಿಡ್ಡಾಪುರ, ಮಹಾದೇವಪುರ, ನಾಯಕನ ಹಟ್ಟಿ, ದೊಡ್ಡಗಡ, ತುರುನೂರು, ಭೊಗೆಳೆರ ಹಟ್ಟಿ, ಸಂಗೇನ ಹಳ್ಳಿ ಮಾರ್ಗವಾಗಿ ತಲುಪಿ ತಂಗಿದ್ದರು. ಮರುದಿನ ಯಳವರ್ತಿ ಹಳ್ಳದಲ್ಲಿ ಸ್ನಾನ ಮಾಡಿಕೊಂಡು ಗಂಗಾ ಪೂಜೆ, ಕುರಿಮರಿಯ ಅಥವಾ ಆಡಿನ ಮರಿಯ ಬಲಿ ಪೂರ್ಣಗೊಂಡಂತೆ ಎತ್ತರದ ಗವಾಸರಾಯನ ಗುಡ್ಡಕ್ಕೆ ದೈವಗಳನ್ನು ಪೂಜೆಗಾಗಿ ಒಯ್ದರು. ಅಲ್ಲಿಂದ ಆ ರಾತ್ರಿ ಏಳು ಜಂಬಿಗೆ ದೈವಗಳನ್ನು ಒಯ್ದರು. ಅಲ್ಲಿ ಅಂದು ತಂಗಿ ಅಲ್ಲಿದ್ದ ಏಳು ಬನ್ನಿಮರಗಳಿಗೆ ಮತ್ತು ಏಳು ಕಲ್ಲು(ದೈವ)ಗಳಿಗೆ ಪೂಜಿಸಿ ಮರುದಿನ ಬಂಜಿಗೆರೆಗೆ ತಲುಪಿರುವರು. ಇದೊಂದು ಜಾತ್ರೆಯಂತೆ ಜರುಗುವ ಈರಣ್ಣ ಹಾಗೂ ಆತನ ಸೋದರರ ಜ್ಞಾಪಕಾರ್ಥವಾಗಿ ಜರುಗುವ ಆಚರಣೆ. ಹನ್ನೆರಡು ವರ್ಷಗಳ ನಂತರ ಮತ್ತೇ ಈ ವರ್ಷ (೭.೨.೧೯೯೯ ರಿಂದ ೧೧.೨.೧೯೯೯) ಬಂಜಿಗೆರಿಯ ಕೃಷ್ಣಗೊಲ್ಲರು ಅತಿ ಉತ್ಸಾಹದಿಂದ ಈರಣ್ಣದೇವರ ಜಾತ್ರೆಯನ್ನು ನೆರವೇರಿಸಿದರು. ಮಾರ್ಗಮಧ್ಯದ ಗ್ರಾಮಸ್ಥರಲ್ಲಿಯ ಗೊಲ್ಲರು ಕಾಯಿ ಕರ್ಪೂರ ಅರ್ಪಿಸಿ ದೇವರನ್ನು ನೆನೆಯುವರು. ತಮ್ಮೂರಿಗೆ ಬಂದ ಭಕ್ತರಿಗೆ ಊಟದ ಹಾಗೂ ಉಳಿಯುವ ವ್ಯವಸ್ಥೆ ಮಾಡುವರು. ಉತ್ಸವದಲ್ಲಿ ಬಹುಮುಖ್ಯವಾಗಿ ಪ್ರತಿಬಿಂಬಿಸುವವೆಂದರೆ ಬೆಳ್ಳಿಯ ಕೊಂಬುಗಳು. ಅವು ಪಶುಪಾಲನೆಯನ್ನು ಪ್ರತಿನಿಧಿಸುವವು. ಇಲ್ಲಿ ಸಂಶೋಧನೆಗೆ ಒಳಪಡಿಸಬೇಕಿದ್ದ ಹಲವಾರು ಅಂಶಗಳಿವೆ. ಚಿತ್ತಯ್ಯನ ಕಾವ್ಯದಲ್ಲಿ ಪ್ರಸ್ತಾಪಿಸಿದ ಈರಣ್ಣ (ಕಾಟಯ್ಯ)ನ ಅಂಶಗಳಲ್ಲಿ ಹಾಗೂ ಇಲ್ಲಿ ಪ್ರಸ್ತಾಪಿಸಿರುವ ಈರಣ್ಣನ ಅಂಶಗಳಲ್ಲಿ ಹಲವಾರು ಭಿನ್ನತೆಗಳು ವ್ಯಕ್ತವಾಗುವವು. ಯಾವುವು ನಿಜವೆಂದು ಶೋಧಕರಿಗೆ ಬಿಟ್ಟ ವಿಷಯ. ವಾಸ್ತವದಲ್ಲಿ ಈರಣ್ಣ ಸಾಂಸ್ಕೃತಿಕ ವೀರನಾಗಿ ಗೊಲ್ಲರಲ್ಲಿ ಪೂಜ್ಯನೀಯವಾಗಿರುವುದಂತು ಸತ್ಯ.

. ನಿಂಗಣ್ಣನ ಕಾವ್ಯ : ನಿಂಗಣ್ಣನು ಕೃಷ್ಣಗೊಲ್ಲರ ಪ್ರಧಾನ ದೈವ. ಈತನ ಇನ್ನೊಂದು ಹೆಸರು ಕ್ಯಾತುರಲಿಂಗ. ಆಳುವಾನೂರಿನ ಬಾಲಕ ಬೊಮ್ಮೈಲಿಂಗ ಹೇಮರಡ್ಡಿ ಪಟ್ಟಣಕ್ಕೆ ಬಂದು ರೆಡ್ಡಿ ಗೌಡರ ಮನೆಯಲ್ಲಿ ಆಶ್ರಯ ಪಡೆದು ಗೋವುಗಳನ್ನು ಕಾದುಕೊಂಡಿರುತ್ತಾನೆ. ಸ್ವಭಾವದಿಂದಲೇ ಅನುಪಮ ದೈವಭಕ್ತನಾಗಿದ್ದ ಬೊಮ್ಮೈಲಿಂಗನ ಅಚಲ ನಿಷ್ಠೆಗೆ ಮೆಚ್ಚಿ ನಿಂಗಣ್ಣ ಆತನಿಗೆ ಒಲಿಯುತ್ತಾನೆ. ಇದ್ದಕ್ಕಿದಂತೆಯೆ ಬೊಮ್ಮೈಲಿಂಗನಿಗೆ ನಿಂಗಣ್ಣನನ್ನು ಹೇಮರೆಡ್ಡಿಯ ಮನೆಯ ‘ಸೋಮಸಾಲೆ’ಗೆ ಹೊತ್ತು ತರುವಂತೆ ಪ್ರೇರಣೆಯಾಗುತ್ತದೆ. ನಿಂಗಣ್ಣ ಕೆಲಕಾಲ ರೆಡ್ಡಿಮನೆಯಲ್ಲಿಯೆ ಇರುತ್ತಾನೆ. ಸಂಕೋಚ ಸ್ವಭಾವಶೀಲನಾದ ಬೊಮ್ಮೈಲಿಂಗ ‘ನಾನು ಹುರುಳಿ ನವಣೆ ಬೆಲೆಯುವ ಒಕ್ಕಲುಮಗ ; ಸ್ವಾಮಿಯನ್ನು ನಾನು ಸ್ಪರ್ಶಿಸಬಾರದು’ ಎಂದು ಸಂಕಲ್ಪಿಸಿ ಬಲಿಷ್ಟರಾಗಿದ್ದ ಹಟ್ಟಿಗೊಲ್ಲರು ನಿಂಗಣ್ಣನನ್ನು ಬಳಸಿದರೆ ಅವರಿಗೆ ಆ ದೋಷ ಬರುವುದಿಲ್ಲ’ ಎಂದು ಗೊಲ್ಲರನ್ನು ಒಲಿದುಕೊಳ್ಳಬೇಕೆಂದು ದೇವರಲ್ಲಿ ಅರಿಕೆಮಾಡಿಕೊಳ್ಳುತ್ತಾನೆ. ಅಂತೆಯೇ ನಿಂಗಣ್ಣ (ಕ್ಯಾತುರಲಿಂಗ) ಸ್ವಲ್ಪಕಾಲ ಪುರ್ಲಳ್ಳಿಯ ಸಮೀಪದಲ್ಲಿರುವ ವಸಲಿ ದಿಬ್ಬದಲ್ಲಿ ನೆಲೆಗೊಳ್ಳುತ್ತಾನೆ. ಆ ನಡುವೆ ವಸಲಿದಿಬ್ಬದ ಹಟ್ಟಿಯ ಗೊಲ್ಲರೊಳಗೆ ಘರ್ಷಣೆಗಳುಂಟಾಗಿ ದೇವತೆಯನ್ನು ದೋಷಾರೋಪಣೆಗೆ ಗುರಿಪಡಿಸುತ್ತಾರೆ. ನಿಂಗಣ್ಣ ಅದಕ್ಕಾಗಿ ನೊಂದು ಹತ್ತಾರು ರಾಜ್ಯಗಳನ್ನು ತಿರುಗುತ್ತಾನೆ. ಅಷ್ಟಾದರೂ ತನಗೆ ಎಲ್ಲ ವಿಧದಲ್ಲಿಯೂ ಒಪ್ಪಿಗೆಯಾಗುವ ಗೊಲ್ಲಕುಲ ದೊರಕದಿದ್ದ ಕಾರಣ ಚಿಕ್ಕ ಮಾಯಸಂದ್ರಕ್ಕೆ ಪ್ರಯಾಣ ಮುಂದುವರಿಸುತ್ತಾನೆ. ಅಲ್ಲಿ ಮಾಯಸಂದ್ರದ ಕರಿಯಣ್ಣನ ನಿರ್ಮಲ ಹೃದಯ, ನಿರ್ವ್ಯಾಜ ಪ್ರೇಮಕ್ಕೆ ಕಟ್ಟುಬಿದ್ದು ಆತನಿಗೆ ಒಲಿಯುತ್ತಾನೆ. ಮೂರು ತಿಂಗಳ ಪರ್ಯಂತ ತನ್ನ ವ್ರತ ಕೈಗೊಂಡರೆ ಬೇಡಿದ್ದನ್ನು ನೀಡುವುದಾಗಿ ಕರಿಯಣ್ಣನಿಗೆ ಮಾತುಕೊಡುತ್ತಾನೆ. ಆದರೆ ಅದೇ ವೇಳೆಯಲ್ಲಿ ಚಿತ್ರದುರ್ಗದ ದೊರೆ ಭರಮಪ್ಪ ನಾಯಕ ಬರುವನು. ದಂಡು ನಾಡಿನ ಮೇಲೆ ಹೊರಟಿದೆ ಎಂಬ ಸುದ್ದಿ ತಿಳಿದು ಕರಿಯಣ್ಣ ಕಂಗಾಲಾಗುತ್ತಾನೆ. ದಂಡು ಹಟ್ಟಿಯ ಮೇಲೆ ದಾಳಿ ಮಾಡಿದರೆ ನಿಂಗಣ್ಣನಿಗೆ ಮೈಲಿಗೆಯಾಗುತ್ತದೆಂದು ಕರಿಯಣ್ಣ ಅಳುಕುತ್ತಾನೆ. ಎಷ್ಟೇ ಕಷ್ಟಬಂದರೂ ಹಟ್ಟಿ ಬಿಡದಿರಲು ನಿಂಗಣ್ಣ ಹೇಳುತ್ತಾನೆ. ದಂಡು ಹಟ್ಟಿಯ ಮೇಲೆ ಆಕ್ರಮಣ ಮಾಡಿ ನಿಂಗಣ್ಣನಿಗೆ  ಸೆರೆ ಹಿಡಿದು ಉಚ್ಚಂಗಿ ದುರ್ಗಕ್ಕೆ ಒಯ್ಯುತ್ತಾರೆ. ಆಕ್ರಮಣದಲ್ಲಿ ಕರಿಯಣ್ಣ ಮಡಿಯುತ್ತಾನೆ. ಸೆರೆಹೋದ ನಿಂಗಣ್ಣನಿಗೆ ಗೊಲ್ಲರು ಬಿಡಿಸಲು ಪ್ರಯತ್ನಿಸಿದಾಗ ಫಲಕಾಣುವುದಿಲ್ಲ ಭರಮಪ್ಪ ನಾಯಕನ ಅನೀತಿಯುತವಾದ ಆಳ್ವಿಕೆಗೆ ಪೂರ್ಣ ವಿರಾಮ ಹಾಕಲು ನಿಂಗಣ್ಣ ಕಿನ್ನರಿ ಜೋಗಿ ವೇಷ ಹಾಕುತ್ತಾನೆ. ಪಟ್ಟಣವಾಸಿಗಳಿಗೆ ಬೆರಗುಂಟು ಮಾಡಿ ಗೌರಸಂದ್ರ ಮಾರಮ್ಮಗೆ ಉರಿಗಣ್ಣು ಬಿಡುತ್ತಾನೆ. ಮಾರಕ್ಕ ಅಣ್ಣನ ಸೆರೆಬಿಡಿಸಲು ದಂಡಿ ದಾಳಿ ತಂದು ದುರ್ಗ ನಾಶಗೈಯುತ್ತಾಳೆ. ತನ್ನ ಪಟ್ಟಣದ ಸರ್ವನಾಶವನ್ನು ಕಣ್ಣಾರೆ ಕಂಡ ಭರಮಪ್ಪನಾಯಕ ಕಣಿ ಕೇಳಲು ಹೊರಡುತ್ತಾನೆ. ಕೊರವಂಜಿ ವೇಷ ಧರಿಸಿದ ಮಾರಕ್ಕ ಭರಮಪ್ಪನಿಗೆ ‘ನಿಂಗಣ್ಣನಿಗೆ ಸೆರೆಯಿಂದ ಬಿಟ್ಟರೆ ರಾಜ್ಯ ಕೋಶವೆಲ್ಲ ಮರಳಿ ಲಭಿಸುವುದೆಂದೂ ಎಸಗಿದ ಅಪರಾದ ಕೃತ್ಯಕ್ಕೆ ಪ್ರಾಯಶ್ಚಿತ್ತವಾಗಿ ಹಣ ಮುಡುಪ ಕಟ್ಟಬೇಕು’ ಎಂದು ಬೋಧಿಸುತ್ತಾಳೆ. ಅದರಂತೆ ಭರಮಪ್ಪ ನಡೆದುಕೊಂಡು ನಿಂಗಣ್ಣನ ಭಕ್ತನಾಗುತ್ತಾನೆ. ಭರಮಪ್ಪನಾಯಕನಿಗೆ ಈ ಕಾವ್ಯದಲ್ಲಿ ಕಲಾವಿದೆಯರು ತುರುಕನೆಂದು ಸಂಭೋಧಿಸಿದ್ದಾರೆ. ಈ ಕಥನವನ್ನೇ ಕಾವ್ಯದಲ್ಲಿ ಕಲಾವಿದೆಯರು ಹೀಗೆ ನಿರೂಪಿಸುತ್ತಾರೆ.

ನಿಂಗಣ್ಣನ ಸೆರೆ ಹಿಡಿಯಲಿಕ್ಕೆ ತುರುಕ್ರು ಬಂದ್ರು. ಅಲ್ಲಿ ನಿಂಗಣ್ಣ ಸಿಗದ್ಹಂಗ ಇದ್ದ.

ಅಳಾನೆ ತುರುಕಾರು ಕೇರಿಯ ಹೊಕ್ಕಾರು
ಗಟ್ಟೀಯ ಹರಿವಾಣ ಗಳಿರಂತು| ಶಿವನಿಗೆ
ಮುಟ್ಟಾಲಂಜಾರು ತುರುಕಾರು

ಕೆಟ್ಟಾನೆ ತುರುಕಾರು ಕೇರಿಯಾ ಹೊಕ್ಕಾರು
ಗಾಲೀಯ ಹರಿವಾಣ ಗಳಿರಂದು| ಶಿವನಿಗೆ
ನೋಡಾಲಂಜಾರು ತುರುಕಾರು

ದಂಡಿನ ಮುಖಂಡ ಭರಮಪ್ಪನು
ಹಟ್ಟೀಯ ಗೊಲ್ಲಾಗೆ ಸತ್ತೇವಿನ್ನೆಲ್ಲೇದು
ಮುಟ್ಟಿ ತಗಿಯೆಂದ ಕಣುಸಾವ

ಕಡಿದರು ಕರಿಯಣ್ಣುನ ಒಡುದ್ರು ಸಿರಿಯಣ್ಣುನ
ಪದುಗಾಲಾರ ಚಿಕ್ಕಣ್ಣಿನ ತಲಿಯೊಡದು| ತುರುಕಾರು
ಜೆಡಿಯೋನ ಸೆರಿ ಹಿಡುದಾರು

ಅಲ್ಲಿ ಸೆರೆ ಹಿಡಿದಾಗ ನಿಂಗಣ್ಣ
ದುರ್ಗಾವ ಹತ್ಯಾನೆ ಗಡಬಡಿಯ ನುಡಿಸ್ಯಾನೆ
ಗಗ್ಗಾರಿ ಕಾಲ ತಿರಿವ್ಯಾನೆ| ಗೌರುಸಂದುರುದ
ಸತ್ಯವ್ವಗ ಕಣ್ಣ ಬಿಟ್ಟಾನೆ

ಗೌರಸಂದ್ರದ ಮಾರಕ್ಕ ಅಣ್ಣನಿಗೆ ಏನಾಯಿತೆಂದು ಬಂದು ಅರಿತು

ಅಚ್ಚಾಕೀದ ಬಂಡಿ ಹತ್ತು ಸಾವಿರ ಬಂದು
ಸೊಪ್ಪೀನ ಪ್ಯಾಟ್ಯಾಗೆ ಇಳುದಾರೆ| ಸುಡುಗಾಡಿಗೆ
ದಬ್ಬೂಸುತಾಳೆ ಹೆಣುಗಾಳ
ಪಾರೆ ಹಾಕೀದ ಗಾಡಿ ಆರು ಸಾವಿರ ಒಂದು
ರಾಗಿ ಪ್ಯಾಟ್ಯಾಗೆ ಇಳುದಾರೆ| ಸುಡುಗಾಡಿಗೆ
ಏರುಸುತಾಳೆ ಹೆಣುಗಾಳ

ಅಲ್ಲಿಂದ ಕಣಿ ಹೇಳಾಕ ಮಾರಮ್ಮ ಹೋಗುವಳು
ಕಣಿಯ ಹೇಳ್ಯಾಳೆ ಕಣಿಯಾ
ರಾಯಾ ಸಿಂತರಕಲ್ಲು ದೊರಿಗಳಾರ| ಪ್ಯಾಟ್ಯಾಗೆ
ದೇವಿ ಹೇಳ್ಯಾಳೆ ಕಣಿಯಾ

ಭಯಗ್ರಸ್ತಗೊಂಡ ಭರಮಪ್ಪ ಮತ್ತು ಆತನ ಸೈನಿಕರು ತಮ್ಮ ಉಳಿವಿಗಾಗಿ ಕಣಿ ಕೇಳುವರು. ಕೊರವಂಜಿಯಾದ ಮಾರಮ್ಮ ಭರಮಪ್ಪನ ತಪ್ಪಿನ ಅರಿವುಮಾಡಿ

ತಪ್ಪನ್ನ ತಪ್ಪನ್ನ ತಪ್ಪಂದು ಅಡ್ಡಬೀಳು
ಇಪ್ಪತ್ತೆ ಹೊನ್ನ ಮುಡುಪು ಕಟ್ಟು | ಭರಮಪ್ಪ ತನ್ನ
ಮುತ್ತೀನ ಕೊರವಂಜಿಗೆ ಅಳವಳಸು

ಹಟ್ಟಿಗೊಲ್ಲನ ಸತ್ಯ ಅರಿತು ನಿಂಗಣ್ಣನ ಸೆರೆ ಬಿಡವನು. ಭರಮಪ್ಪ ಮಾರಮ್ಮ ನಿಂಗಣ್ಣ ದುರುಗ ಹಾಳುಮಾಡಿ ಕೆಳಗೆ ಇಳಿಯುವರು. ಗೊಲ್ಲರು ಹಟ್ಟಿಗಳನ್ನು ಲೂಟಿ ಮಾಡಿದ ತುರುಕ ದೊರೆಗಳ ಅರಮನೆ ನಾಶಮಾಡಿ ಗೊಲ್ಲರನ್ನು ರಕ್ಷಿಸಿದ ನಿಂಗಣ್ಣನಿಗೆ ಮಾರಮ್ಮಳಿಗೆ ಗೊಲ್ಲರು ಭಕ್ತಿಯಿಂದ ಪೂಜಿಸುವರು ಮತ್ತು ವರ್ಷಕೊಮ್ಮೆ ಜಾತ್ರೆ ಮಾಡುವರು. ನಿಂಗಣ್ಣನ ಜಾತ್ರೆ ಶಿವರಾತ್ರಿಯಂದು ವಸಲಿದಿಬ್ಬದಲ್ಲಿ ಜರುಗುವುದು. ಹದಿಮೂರು ಗುಡಿಕಟ್ಟಿನವರು ನಿರ್ಧರಿಸಿ. ಜಾತ್ರೆ ನೆರವೇರಿಸುವರು. ಜನಿಗೆ ಕುರಿಯ ಮೀಸಲು ಹಾಲು ಬ್ರತ ಹುರುಳಿ ನವಣೆ ಬ್ರತ, ಅಕ್ಕಮ್ಮಗಳ ಒಳ್ಳಕ್ಕಿಪೂಜೆ, ಹರಿಸೇವೆ ಇತ್ಯಾದಿ ಆಚರಣೆಗಳು ಹದಿಮೂರು ಗುಡಿಕಟ್ಟಿನ ಹದಿಮೂರು ದೇವ್ರು ವಸಲಿದಿಬ್ಬಕ್ಕೆ ಬಂದು ನೆರವೇರಿಸುವವು. ಪೂಜೆ ಸಲ್ಲಿಸುವಾಗ ನೂರೊಂದು ಎಲೆ, ಅಡಿಕೆ, ಹಣ್ಣು ಇತ್ಯಾದಿ ಎಡೆ ಇಟ್ಟು ಮೂರು ಸಲ ಹೀಗೆನ್ನುವರು.

ಸಾವಿರ ನೂರು ತಪ್ಪು
ನೂರ ಒಂದು ತಪ್ಪು

ವಸಲಿದಿಬ್ಬದಲ್ಲಿ ನಿಂಗಣ್ಣನ ಜಾತ್ರೆಯಲ್ಲಿ ವಿಶೇಷವಾಗಿ ಜರುಗುವ ಎರಡು ಬೆರಗುಗೊಳಿಸುವ ಆಚರಣೆಗಳೆಂದರೆ ನವಣಿ ಅನ್ನ ಮತ್ತು ಬಾರೆಯ ಹಣ್ಣಿನ ಗಿಡದ ಮುಳ್ಳಿನ ಗುಡಿ (ಕಳ್ಳೆಗುಡಿ). ವಸಲಿದಿಬ್ಬದ ಅಂಗಳದಲ್ಲಿ ಮಣ್ಣಿನಲ್ಲಿ ಕುಟ್ಟಿ ತಯಾರಿಸಿದ ನವಣೆ ಅಕ್ಕಿಯ ಅನ್ನ ದೇವರಿಗೆ ಏರಿಸಿ ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಿದ್ದಾಗ ಯಾರಿಗೂ ನವಣೆ ಅನ್ನದಲ್ಲಿ ಹಳ್ಳುಗಳು ಸಿಗದೆಯಿರುವುದು ವಿಶಿಷ್ಟವೇ. ಹಾಗೆಯೇ ಬಾರೆಗಿಡದ ಮುಳ್ಳನ್ನು ಕಡಿದು ಬಣಿಮೆಯಂತೆ ಒಟ್ಟಿದ ಕಣ. ಆ ಮುಳ್ಳಿನ ಮೇಲಿದ್ದ ಕಣಸಕ್ಕೆ ಮುಟ್ಟಿ ನಮಸ್ಕರಿಸಲು ಬರಿಗಾಲಲ್ಲಿ ಹತ್ತುವುದು. ಅಲ್ಲಿಯೂ ಯಾರಿಗೂ ಮುಳ್ಳು ಮುರಿಯದೇ ಇರುವುದು ಎಲ್ಲರಿಗೂ ಆಶ್ಚರ್ಯತರುವಂತದ್ದೆ. ಈ ಎರಡು ಪವಾಡಗಳು ಇಂದಿಗೂ ಮುಂದುವರಿದಿರುವುದು ನೋಡಿದರೆ ಗೊಲ್ಲರಲ್ಲಿಯ ದೈವಭಕ್ತಿ ಪ್ರಶ್ನಾತೀತವಾದುದು ಎನಿಸುವುದು ಹೀಗಾಗಿ ಗೊಲ್ಲರಲ್ಲಿ ಇದೊಂದು ವಿಶಿಷ್ಟವಾದ ಜಾತ್ರೆ.

. ಬೊಮ್ಮೈಲಿಂಗನ ಕಾವ್ಯ : ಬೊಮ್ಮೈಲಿಂಗನು ಚಾರಿತ್ರಿಕ ವ್ಯಕ್ತಿಯಾಗಿಯೂ, ಪೌರಾಣಿಕ ವ್ಯಕ್ತಿಯಾಗಿಯೂ ಕಂಡುಬರುವನು. ಈತನಿಗೆ ಬೊಮ್ಮಣ್ಣ, ಎತ್ತಿನಬೊಮ್ಮ, ಬೊಮ್ಮಯ್ಯ, ಬೊಮ್ಮಲಿಂಗ, ಬೊಮ್ಮೈಲಿಂಗ, ಬೊಮ್ಮಗೊಂಡ ಇತ್ಯಾದಿ ಹೆಸರುಗಳಿಂದ ಕರ್ನಾಟಕದ ಅಡವಿಗೊಲ್ರು, ಮ್ಯಾಸನಾಯಕರು, ಗೊಂಡರು ಕರೆಯುವರು. ಚಳ್ಳಿಕೆರೆ ಆಸುಪಾಸಿನಲ್ಲಿ ಈತನ ಹೆಸರಿನ ಗ್ರಾಮಗಳು ಕೆರೆಗಳು, ದೇವಸ್ಥಾನಗಳು ಲಭ್ಯವಾಗುವಂತೆ ಬೀದರಿನಲ್ಲಿಯೂ ಬೊಮ್ಮಗೊಂಡನ ಕೆರೆ ಮತ್ತು ದೇವಸ್ಥಾನಗಳು ಕಾಣಸಿಗುವವು. ಬೀದರಿನ ಗೊಂಡರಿಗೂ ಬೊಮ್ಮಗೊಂಡ ಬಲು ಪ್ರಿಯ ದೈವ ಮತ್ತು ಪ್ರೇರಕ ಶಕ್ತಿ. ಈ ಹಿನ್ನೆಲೆಯಲ್ಲಿಯೂ ಅಡವಿಗೊಲ್ಲ, ಮ್ಯಾಸ (ಮೇಷ) ನಾಯಕ ಹಾಗೂ ಗೊಂಡ ಸಮುದಾಯಗಳು ಒಂದೇ ಸಮುದಾಯವಾಗಿದ್ದವೆಂದು ಖಚಿತ ಪಡಿಸುತ್ತದೆ. ಈತನು ಸೊಂಡಲೂರಿನ ಒಬ್ಬ ದೊರೆಯಾಗಿ ಒಂದೆಡೆ ಕಂಡುಬಂದರೆ ಇನ್ನೊಂದೆಡೆ ಈತನೊಬ್ಬ ದೈವಭಕ್ತ ಪಶುಪಾಲಕನಂತೆ ಕಂಡುಬರುವನು. ಆದರೆ ಕಲಾವಿದೆಯರು ಕಟ್ಟಿಕೊಟ್ಟ ಈ ಕಾವ್ಯದಲ್ಲಿ ಈತನು ಮೂಲತಃ ರೈತನಾಗಿಯೂ ಆಮೇಲೆ ಪಶುಪಾಲಕನಾಗಿಯು ಚಿತ್ರಿತವಾಗುವನು. ಕಾವ್ಯದ ಕಥಾಸಾರ ಹೀಗೆ ನಿರೂಪಿಸಬಹುದು.

ಕರಿಯಣ್ಣ ಬೊಮ್ಮೈಲಿಂಗನ ಅಣ್ಣ. ನಾಗಮ್ಮ ಕರಿಯಣ್ಣನ ಹೆಂಡತಿ. ಬೊಮ್ಮೈಲಿಂಗನ ಅತ್ತಿಗೆ, ಅವಳು ಬಾಣಂತಿ. ಬೊಮ್ಮೈಲಿಂಗನಿಗೆ ಬಿತ್ತಲು ಜೊತೆಯಾರಿಲ್ಲ. ಬೀಜ ಬಿತ್ತಲು ನಾಗಮ್ಮಳಿಗೆ ಆಜ್ಞಾಪಿಸುತ್ತಾನೆ. ಏಳು ದಿನದ ಹಸುಗೂಸನ್ನು ಬಿಟ್ಟು ಬಿತ್ತಲು ಹೋದರೆ ಜನರೇನೆಂದಾರು ಎಂದು ನಿರಾಕರಿಸಿದಾಗ, ಬರದಿದ್ದರೆ ತಲೆಸೀಳಿ ರಕ್ತ ಬರಿಸುತ್ತೆನೆಂದು ಹೆದರಿಸುತ್ತಾನೆ. ನಾಗಮ್ಮ ಬೊಮ್ಮೈಲಿಂಗನೊಂದಿಗೆ ರಾತ್ರಿಯಿಡಿ ಬಿತ್ತುತ್ತಾಳೆ. ಸಸಿಗಳು ನಳನಳಿಸುತ್ತವೆ. ಬಾಲಗ್ಹಾಲಿಲ್ಲೆಂಬುದು ಬೊಮೈಲಿಂಗ ಅರಿತು ಹಾಲು ಕೋರಿ ಶಿವನಲ್ಲಿಗೆ ಮೊರೆಹೋಗುವನು. ಶಿವನಾಜ್ಞೆಯಂತೆ ಜಿಂಕೆಯ ಹಾಲು ಕರ್ದುಮಗುವಿಗೆ ಕುಡಿಸುವನು. ಅಲ್ಲಿಂದ ಮನೆ ತೊರೆದು ಹೇಮರೆಡ್ಡಿ, ಭೀಮರೆಡ್ಡಿ ಪಟ್ಣಕ್ಕೆ ದನಕಾಯಲು ಹೊರಡುವನು. ಹೊರಟು ಹೇಮರೆಡ್ಡಿ ಪಟ್ಟದ ಕಟ್ಟೆಯ ಮೇಲೆ ಮಲಗಿರುವ ಬೊಮ್ಮಣ್ಣನನ್ನು ಕಂಡು ಯಾವೂರಪ್ಪ ಯಾವ ಕುಲವೆಂದು ಕೇಳುವರು. ಅದಕ್ಕೆ ಬೊಮ್ಮೈಲಿಂಗ

ಊರೂನೆ ಹೇಳಾಕೆ ದಿಕ್ತಪ್ಪಿ ನಾ ಬಂದೆ
ನಾನು ನಿಮ್ಮನೆಯ ಅವುಗಳು | ಕಾದೇನು
ನಿತ್ತೆ ಪಡಿಜ್ವಾಳ ಕೊಡಿರಮ್ಮ

ಕುಲವೇನ್ಹೇಳಲಮ್ಮ
ಕುಲಗೆಟ್ಟು ಬಂದಿದ್ದಿನಿ
ದಿನಾ ಪಡಿಜ್ವಾಳಾ ಕೊಟ್ಟರ
ಅವು ಕಾಯಾಕ ಇರ್ತಿನಿ

ಅಂತ ಹೇಳುವನು. ಆವು ಕಾಯಾಕೆ ಒಳ್ಳೆ ಕಿಲಾರಿ ಸಿಕ್ಕನೆಂದು ಸಂತೋಷದಿಂದ ಮಗಳು ಸೊಸೆಯರು ಮನೆಗೆ ಕರೆದುಕೊಂಡು ಹೋಗುವರು. ಗೌಡ ಗೌಡ್ತಿಯರು ಆನಂದದಿಂದ ಆವು(ದನ)ಗಳು ಕಾಯಲು ಬೊಮ್ಮಣ್ಣನಿಗೆ ನೇಮಿಸಿ

ಆವು ಜತುನ ನಮ್ಮ ಮನಿಜತುನ ಗುಡ್ಡಾದ
ನಾಗುರುಗ್ಹಾಲು ಯರದು ಬರುತೀವಿ

ಎಂದ್ಹೇಳಿ ಹೊರಡುವರು. ಬೊಮ್ಮಣ್ಣ ಎತ್ತಿನ ಬೊಮ್ಮನಾದ. ಅವುಗಳ ಪಾಲಕನಾದ.

ಒಂದು ದಿನ ಅವುಗಳನ್ನು ಕಾಯಲು ಬಿಟ್ಟು ತಾನು ಜಾಲಿಯ ಮರದ ನೆರಳಲ್ಲಿ ಕಂಬಳಿ ಹಾಸಿ ಸುಖ ನಿದ್ರೆ ಮಾಡುತ್ತಿದ್ದಾಗ ನಿಂಗಣ್ಣ ಕರೆದ. ಯಾರಿರಬಹುದೆಂದು ನೋಡಿದಾಗ ನಿಂಗಣ್ಣ ನಿರುವನು ಮತ್ತು ದನ (ಆವ್ರು) ಹೊಡೆಯಲು ಹೇಳುವನು. ಆಗ ಬೊಮ್ಮಣ್ಣ

ಉಂಬಾಕ ಇಕ್ಕವರೆ ಕಂಬಳಿ ಕೊಟ್ಟವರೆ
ಉಂಡ ಮನಿಗೆ ಎರಡು ಬಗಿಲಾರೆ

ಎಂದು, ದನ ಹೊಡೆಯಲು ನಿರಾಕರಿಸಿದಾಗ, ನಿಂಗಣ್ಣ

ಅಂಡ ಉಂಡವನು ಮಾಡಿ ದಂಡೆ ಕೊರಳಿಗ್ಹಾಕಿ
ಭಂಡ ಜಂಗಮನುನು ಜಡಿಯೋನು | ರೆಡ್ಡಿಮನಿಯ
ದುಂಡಾವೆ ಗೆದ್ದು ಗ್ವಾವೆ ದುರುಗಕ್ಕ ಬರುತಾನೆ

ಹುತ್ತಿಗೆ ತನಿಯರಿದು ಬಂದು ಹೇಮರಡ್ಡಿ ಪಟ್ಣದ ಗೌಡರು ತಮ್ಮ ಅವುಗಳನ್ನ ಮತ್ತು ಕಿಲಾರಿಯನ್ನು ಹುಡುಕುತ್ತಾರೆ. ಬೊಮ್ಮಣ್ಣ ಮುದುಕನಾಗಿ ಮೈಮೇಲೆ ಕಂಬಳಿ ಹೊದ್ದುಕೊಂಡು ಅವುಗಳನ್ನು ಮೇಯಿಸುತ್ತಿರುತ್ತಾನೆ. ಗೌಡರು ತಮ್ಮ ಅವುಗಳ ಬಗ್ಗೆ ಕೇಳಿದಾಗ ಬೊಮ್ಮಣ್ಣ ಈ ಅವುಗಳು ನಿಮ್ಮವಲ್ಲ ನಾನೂ ನಿಮ್ಮ ಕಿಲಾರಿ ಅಲ್ಲವೆಂದು ಸುಳ್ಳು ಹೇಳುತ್ತಾನೆ. ಇತ್ತ ಗೌರಸಂದ್ರ ಮಾರಕ್ಕ ಗಕ್ನ ಕಣಿ ಹೇಳುವ ಕೊರವಂಜ್ಯಾಗಿ ಗೌಡರ ಮನಿಗೆ ಹೋಗುತ್ತಾಳೆ. ಇಲ್ಲಿಯ ಅವುಗಳು ನಿಮ್ಮವಲ್ಲ ಮತ್ತು ಈ ಕಿಲಾರಿಯೂ ನಿಮ್ಮವನಲ್ಲ, ನಿಂಗಣ್ಣ ನಿಮ್ಮ ಅವುಗಳನ್ನು ಗೆದ್ದು ಗ್ವಾವೆ ದುರುಗಕ್ಕೆ ಒಯ್ದಾನೆ. ‘ಆತನನ್ನು ತಡೆಯದಿರಿ’ ಎಂದು ಹೇಳಿದ ಮಾರಮ್ಮನ ಧ್ವನಿ ಈ ಪದ್ಯದಲ್ಲಿ ವ್ಯಕ್ತವಾಗುವುದು.

ಸ್ವಾಮಿ ನಿಂಗಣ್ಣನೆತ್ತು ಗ್ವಾವೆ ದುರುಗಿಳುದಾವೆ
ಆವ್ಹಿಂಡು ನೀವು ತಡದಿದ್ದು | ಉಂಟಾದರೆ
ಏಳು ಕೇಡುಗಳು ಕೇಡುತೀರೊ

ಕೊನೆಗೂ ಬೊಮ್ಮೈಲಿಂಗ ನಿಂಗಣ್ಣನಿಗೆ ತನ್ನ ಅಸಹಾಯಕತೆಯನ್ನು ಅರಹುವನು.

ಹುಟ್ಟನೊಕ್ಕಲುಮಗ ಬಿತ್ತಿದ್ದು ಉಳ್ಳೆನವಣಿ
ಅಪ್ಪುಗೆ ನಾನೆಲ್ಲಿ ಬಳಸಲಿ | ಮಾಲಿಂಗ
ಹಟ್ಟಿಗೊಲ್ಲರಿಗೆ ವಲಿಯಪ್ಪ

ಭಕ್ತ ಬೊಮ್ಮೈಲಿಂಗನ ಭಕ್ತಿಗೆ ಮೆಚ್ಚಿ ನಿಂಗಣ್ಣ ಉಳ್ಳೆನವಣಿಯೇ ಸ್ವೀಕರಿಸಿ ಬಿಂದಿಗಿಲ್ಹೊನು ಅಳಕೊಟ್ಟ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ಅಡವಿಗೊಲ್ಲರು ಉಳ್ಳಿ ಬ್ರತ ಬಹಳ ಕಟ್ಟುನಿಟ್ಟಾಗಿ ಮಾಡುವುದುಂಟು.

ಆರತಿದ್ದು ನನಗಿರಲಿ ಮರತಿದ್ದು ನನಗಿರಲಿ
ಸರ್ವೇ ತಪ್ಪುಗಳು ನನಗಿರಲಿ | ಅಂದ ನಿಂಗಣ್ಣ
ಬಲಗೈಲಿ ಬಾಷೆ ಬೊಮ್ಮಣ್ಣಗೆ ಕೊಡುತಾನೆ.

ಭಾಷೆ ಕೊಟ್ಟು ವಸಲಿ ದಿಬ್ಬದಲ್ಲಿ ನಿಂಗಣ್ಣ ಐಕ್ಯನಾಗುತ್ತಾನೆ. ಅನಂತರ ಅವರ ಭಕ್ತರಾದ ಬೊಮ್ಮೈಲಿಂಗ, ಏಳು ಜನ ಅಕ್ಕಮಗಳು, ಹಾಗೂ ಕರಿಯಣ್ಣ, ಸಿರಿಯಣ್ಣ, ಹೇಮರೆಡ್ಡಿ, ಭೀಮರೆಡ್ಡಿ, ಸಿರಿಯಮ್ಮ ಎಲ್ಲರೂ ವಸಲಿದಿಬ್ಬದಲ್ಲಿ ಐಕ್ಯರಾಗುವರು. ಇವರೆಲ್ಲರೂ ನಿಂಗಣ್ಣನ ಭಕ್ತರೆ. ಇವರ ಹಾಗೂ ನಿಂಗಣ್ಣನ ಸವಿನೆನಪಿನಲ್ಲಿ ಇಂದಿಗೂ ವಸಲಿದಿಬ್ಬದಲ್ಲಿ ಅಡವಿ ಗೊಲ್ಲರು ಭಯಭಕ್ತಿಯಿಂದ ಜಾತ್ರೆ ನೆರವೇರಿಸುತ್ತಾರೆ.