ಕಗ್ಗವ ನಿಮ್ಮದಯ್ಯ ಕಾಳಗದ ಸಿಬ್ಬಂದಿ ಗೆದ್ದು ಬಂದ ||ದನಿ||
ಎತ್ತಿದುರೇ ನಮ್ಮ ಕುತ್ತಿಗ್ಯಾಗಿರುವೋರು
ಸಕ್ಕಬೋಸುರದ ಮನದವರು | ಈರಣ್ಣ
ಎತ್ತಿದರೆ ನಮ್ಮ ಮನುದಾಗ || ಕಗ್ಗವ ||
ಆಡಿದುರೇ ನಮ್ಮ ನಾಲಿಗ್ಯಾಗಿರುವೋರು
ನಾಗಬೋಸುರದ ಮನದವರು || ನಿಂಗಣ್ಣ
ಆಡಿದರೆ ನಮ್ಮ ಮನುದಾಗ || ಕಗ್ಗವ ||
ಬಲಗೊಂಡೆ ಬಲಗೊಂಡೆ ಬಲಬದ್ರಗಾರನ
ಗಂಗಿ ಮಾಳಮ್ಮನ ಪುರುಷ | ಸಿತ್ತಯ್ಯನ
ಬಲಗೊಂಡೀ ಪದುವ ನಡಿಸೇನ || ಕಗ್ಗವ ||
ರಂಗಯ್ಯ ನಿಮ್ಮ ನೆನೆಯದಿದ್ದರು ಭಂಗ
ಬಂಗಾರುದ ಗಿರಿಯ ಬಲುಸಿರಿಯೆ | ಮೇಳಿಕುಂಟೆ
ರಂಗೂನ ನೆನದರಿಗೆ ಭಯವಿಲ್ಲ || ಕಗ್ಗವ ||
ಎತ್ತಯ್ಯ ನಿಮ್ಮ ಎತ್ತದಿದ್ದರೆ ಭಂಗ
ಮುತ್ತಗಿನ್ನರಿಯ ನುಡಿಸೋರು | ಗುಡ್ಡಾದ
ಅಜ್ಜೂನ ನೆನದೋರಿಗೆ ಭಯವಿಲ್ಲ || ಕಗ್ಗವ ||
ಅಪ್ಪಾನ ನೆನದಾರೆ ತಪ್ಪಿಲ್ಲ ತೊಡರಿಲ್ಲ
ಸರ್ಪ ಕಚ್ಚಿದುರೆ ವಿಷವಿಲ್ಲ | ಕಲ್ಲಾರ್ಹಳಿ
ಪಟ್ಟೆದಟ್ಟೇರನ ನೆನದೇವು || ಕಗ್ಗವ ||
ದೇವಾರ ನೆನದಾರೆ ದಾವೂತಿ ನಮಗಿಲ್ಲ
ಹಾವೆ ಕಚ್ಚಿದರೆ ಇಸವಿಲ್ಲ | ಕಲ್ಲಾರ್ಹಳ್ಳಿ
ಪಟ್ಟಸಾಲೆದಟ್ಟೇರನ ನೆನದೇವು || ಕಗ್ಗವ ||
ಎದ್ದೇನೆ ನೆನದೇವು ಮುದ್ದು ಮೂಡಲುಗಿರಿಯ ನಾವು
ಮುದ್ರೆ ನಾಮದ ಒಡಿಯಾನ | ತಿಮ್ಮಯ್ಯನ
ಮೊಗ್ಗರಳ್ಹೊತ್ತಿಲಿ ನೆನದೇವೋ || ಕಗ್ಗವ ||
ಎದ್ದೇನೆ ನೆನೆದೇವು ಸಿದ್ಧಶಿವಬೋಗಿಯ ನಾವು
ಉದ್ದೀಯ ಕೆರೆಯ ಬಯ್ಹಿರಾನ | ನೆನುದಾರೆ
ಇದ್ದ ಪಾಪುಗಳು ಪರಿಹಾರ || ಕಗ್ಗವ ||
ದುಡ್ಡಿನ ದೂಪಗೊಯ್ದು ದೊಡ್ಡೊರು ನೆನದೇವೆ
ದೊಡಡ ಬೀದ್ಯಾಗ ಇರುವೋರು | ಉಂಜಪ್ಪಾಗ
ದೊಡ್ಡೋರುನ ಮೊದಲೆ ನೆನದೇವೋ || ಕಗ್ಗವ ||
ಸಾಮುರಾಣಿನೋಯ್ದು ಸ್ವಾಮಿ ನಿನ್ನ ನೆನೆದೇವೆ
ಸಾಲು ಬೀದ್ಯಾಗ ಇರುವ | ಕಾಟಯ್ಯನ
ಸ್ವಾಮೀಯ ಮೊದಲೆ ನೆನೆದೇವೋ || ಕಗ್ಗವ ||
ಈರಣ್ಣನ ಗುಡಿಸುತ್ತ ರುವ್ಹಾರದ ಬಸವಣ್ಣ
ತೀರಾಲೋದಿರಿ ಅಲಗೀಯ | ಗುಡಿಯಾಗಿರುವ
ದೇವ್ರೇ ಕೇಳೀರಿ ಶಿವನುಡಿಯ || ಕಗ್ಗವ ||
ನಿಂಗಾನ ಗುಡಿಸುತ್ತ ಬಂಗಾರುದ ಬಸವಣ್ಣ
ತುಂಬಾಲೋದಿರಿ ಅಲಗೀಯ | ಗುಡಿಯಾಗಿರುವ
ಲಿಂಗವೇ ಕೇಳೀರಿ ಶಿವನುಡಿಯ || ಕಗ್ಗವ ||
ಅತ್ತೆ ಮಾವುನ ಮುಂದೆ ಹತ್ತಿರದ ಬಳಗದ ಮುಂದೆ
ಅಪ್ಪಾ ಈರಣ್ಣನ ಗುಡಿಯ | ಬಾಗುಲು ಮುಂದೆ
ಸೊಸೆಯಾಗಿ ಪದುವಾ ನಡುಸೇವು || ಕಗ್ಗವ ||
ತಾಯಿ ತಂದೆ ಮುಂದೆ ದೂರಲು ಬಳಗದ ಮುಂದೆ
ಸ್ವಾಮಿ ಶಿತ್ತಯ್ಯಾನಾ ಗುಡಿಯಾ | ಬಾಗುಲು ಮುಂದೆ
ಮಗುಳಾಗಿ ಪದುವಾ ನಡುಸೇವು || ಕಗ್ಗವ ||
ಎತ್ತ ಹೋದರೂ ನಮ್ಮ ಶಿತ್ತಾದಾಗಿರುವೋಳೆ
ಸಕ್ಕಬೋಸುರದ ಮನದೋಳೆ | ಮಾರಮ್ಮನ
ಎತ್ಹೋದರ ತಾಯಿ ದಯವಿರಲಿ || ಕಗ್ಗವ ||
ಎಲ್ಲಿ ಹೋದರೂ ನಮ್ಮ ಸೊಲ್ಲಿನಾಗಿರುವೋಳೆ
ನಲ್ಲೆ ಬೋಸುರದ ಮನದೋಳೆ | ಈರಬಡಮ್ಮ
ಎಲ್ಹೋದರ ತಾಯಿ ಭಯವಿರಲಿ || ಕಗ್ಗವ ||
ಎದ್ದೇನೆ ನೆನದೇನೆ ಎದರ ಗುಡಿಯಮ್ಮಾನ
ಅಡ್ಡ ಕುಂಕುಮದ ಹಣಿಯೋಳು ಕೆಂಚಮ್ಮನ
ನಿದ್ರೆಗಣ್ಣಾಗ ನೆನದೇವೋ || ಕಗ್ಗವ ||
ಹಳ್ಳದಾಗಿರುವೋಳೆ ಹನ್ನೆರಡು ಜಡಿಯೋಳೆ
ಅರಳಿದ್ಹೂವ ಮುಡಿಯೋಳೆ | ಕನ್ನೇರಮ್ಮ
ಇಲ್ಲಿಂದ ಕೈಯ್ಯಿ ಮುಗದೇವೋ || ಕಗ್ಗವ ||
ಬೇಡಿಕೊಂಡೆನು ಬಾರೆ ಬೆಳ್ಳಿಕಣ್ಣಮ್ಮನ್ನ
ರಾಜಂಗಳದಾಗ ಇರುವೊಳು | ಕರಿಯಮ್ಮನ
ಬೇಡಿಕೊಂಡೇವು ಸೆರಗೊಡ್ಡಿ || ಕಗ್ಗವ ||
ಮಜ್ಜಿಗೆ ಕಂಬದ ಮುಂದೆ ಎದ್ದು ಮೂಡಿರುವೋಳೆ
ನೆಗ್ಗಲ್ಹೂವ್ವಿನ ಸೀರೆ ನೆರಿಗೆವ್ಳೆ | ಮಾರಮ್ಮ
ಬದ್ರಿ ಬಾ ನನ್ನ ವಸುನಾಕ || ಕಗ್ಗವ ||
ಕಡಲೆ ಕಂಬುದ ಮುಂದೆ ವಡದು ಮೂಡಿರುವೋಳೆ
ಕಡಲ್ಹೂವ್ವಿನ ಸೀರೆ ನೆರಿಗೆವ್ಳೆ | ಮಾಳಮ್ಮ
ಅರದಿ ಬಾ ನನ್ನ ವಸುನಾಕ || ಕಗ್ಗವ ||
ಕುಚ್ಚಿಗಿನ್ನಾ ಕುಚ್ಚು ಮುತ್ತು ಪೋಣಿಸಿದ್ಹಂಗೆ
ಅಪ್ಪಾನ ಮ್ಯಾಲೆ ಪದಾಬಂದು | ಸರಸ್ವತಿಯೇ
ಕುತ್ತಿಗೆ ತೊಡರು ಬಿಡಿಸಮ್ಮಾ | ಸರಸ್ವತಿಯೇ
ಒಕ್ಕುಳದ ಧೂಪ ವಯಿಸೇನು || ಕಗ್ಗವ ||
ದಾರಕಿನ್ನಾದಾರ ಹೂವು ಏರಿಸಿದ್ಹಂಗೆ
ಸ್ವಾಮಿಯ ಮ್ಯಾಲೆ ಪದಾಬಂದು | ಸರಸ್ವಿಯೇ
ನಾಲಿಗೆ ತೊಡರು ಬಿಡಿಸಮ್ಮ | ಸರಸ್ವತಿಯೇ
ನಾಗುಳದ ಧೂಪ ವಯಿಸೇನು || ಕಗ್ಗವ ||
ತಂದಾನ ತಾನ ಕೋಲು ಕೋಲೇನ್ನ ಕೋಲೆ || ದನಿ ||
ಚಿಕ್ಕ ಸಿಂತರಗಿರಿಯ ಹೊಕ್ಕು ನೋಡುನು ಬನ್ನಿ
ಉಕ್ಕೀನ ಕಂಬ ನಗುತಾವ || ಬಡಿಗೇರಣ್ಣ
ಕೆತ್ತುತ್ಲೆ ಮುತ್ತು ಸುರುದಾವೆ || ತಂದಾನ ||
ರಾಯ ಚಿತ್ರಗಿರಿಯ ಹೋಗಿ ನೋಡುನು ಬನ್ನಿ
ಗಾಜೀನ ಕಂಬ ನಗುತಾವ | ಬಡಿಗೇರಣ್ಣ
ಮಾಡುತ್ಲೆ ಮುತ್ತು ಸುರುದಾವೆ || ತಂದಾನ ||
ಸೂರ್ಯ್ಯದ್ಹುಟ್ಟಿದ್ಹಂಗ ಹುಟ್ಟಿದ ಚಿತ್ತಯ್ಯ
ಉಕ್ಕೀನ ಉರಿಬಾಣ ಹಿಡ್ಕೊಂಡು | ಚಿತ್ತಯ್ಯ
ಹುಟ್ಟೀದ ಶಿವನ ಜಡಿಯಾಗ || ತಂದಾನ ||
ಚಂದ್ರ ಮೂಡಿದ್ಹಂಗ ಮೂಡಿದ ಚಿತ್ತಯ್ಯ
ಹೂವ್ವೀನ ಉರಿಬಾಣ ಹಿಡ್ಕೊಂಡು | ಚಿತ್ತಯ್ಯ
ಮೂಡಿದ ಶಿವನ ಜಡಿಯಾಗ || ತಂದಾನ ||
ಭದ್ರ ಮಾಳಮ್ಮ ವಜ್ಜುಗಾರ ವಾಲಿಯನಿಟ್ಟು
ಮಜ್ಜುಣದ ಕಲ್ಲು ಇಳುವೂತ | ಕಂಡಾಳೆ
ಮಜ್ಜುಣಕ ಬರುವ ಪುರುಸಾನ || ತಂದಾನ ||
ಆಕೆ ಮಾಳಮ್ಮ ತೂಕದ ವಾಲಿಯನಿಟ್ಟು
ಸಾಪಾನದ ಕಲ್ಲು ಇಳುವೂತ | ಕಂಡಾಳೆ
ಊಟಕ ಬರುವ ಪುರುಸಾನ || ತಂದಾನ ||
ಬ್ಯಾಟೆಗ್ಹೋಗಲು ಬ್ಯಾಡ ಮಿಕವು ಕೊಲ್ಲಲು ಬ್ಯಾಡ
ಬ್ಯಾಟಿಲ್ಲದ ಮನಿಗೆ ಬರುಬ್ಯಾಡ | ಪುರುಷಾರ
ಸತ್ತ ಮಿಕುವ ಮನಿಗೆ ತರಬ್ಯಾಡ || ತಂದಾನ ||
ಜಡಿಯ ಜಂಗಮ ತಂದು ಮಡಿಯ ಏನಂದಾಳೆ
ಉಣಬ್ಯಾಡ ಉಪವಾಸ ಇರಬ್ಯಾಡ | ಎನ್ನರಸಿ
ಸಂಗಬ್ಯಾಡ ಒಬ್ಬಳಿರಬ್ಯಾಡ || ತಂದಾನ ||
ಬ್ಯಾಟೆಗ್ಹೋಗಲುತೀನಿ ಊಟಾಕ ಇಡುಬಾರೆ
ಕ್ವಾಟೆ ಮಾರಿ ಮಾಡಿ ಅಳದೀರೆ | ಚಿತ್ತರದುರುಗ
ಬ್ಯಾಟೆಲ್ಲ ನಿನ್ನ ಬಳಗಾವೆ || ತಂದಾನ ||
ದಂಡಿಗ್ಹೋಗಲುತೀನಿ ಉಂಬಾಕ ಇಡುಬಾರೆ
ಕಂಬ ಮಾರಿ ಮಾಡಿ ಅಳದೀರೆ | ಸಿತ್ತರದುರುಗ
ಮುಂದ್ಯೆಲ್ಲ ನಿನ್ನ ಬಳಗಾವೆ || ತಂದಾನ ||
ಕುಂಬಾರ ಮನಿಯ ಗಂಜಿ ಕುಡಿದ ನಾಯಿ
ರೆಂಭೆ ಮಾಳಮ್ಮ ಸಲುವಿದ್ದಂತ | ಜಾಲ
ಎಂಬತ್ಹೊನ್ನಿಗೆ ಬೆಲೆಯಾಗಿ || ತಂದಾನ ||
ಹಾರೂರ ಮನಿಯ ಹಾಳೆ ಬಾಸಿದ ನಾಯಿ
ನಾರಿ ಮಾರಮ್ಮ ಸಲುವಿದ್ಹಂತ | ಜಾಲ
ನಾಲವತ್ಹೊನ್ನಿಗೆ ಬೆಲೆಯಾಗಿ || ತಂದಾನ ||
ಮುತ್ತೀನ ನಾಯಿಗೆ ಇಪ್ಪತ್ತು ಸರುಪಣಿ
ಪನ್ನಂಗದಾಗ ಕುದಿನೀರು | ಕುಡಿಸಿಕ್ಯಂಡು
ಅಪ್ಪ ಚಿತ್ತಯ್ಯ ಜಗಬ್ಯಾಟೆ | ಹೊರಟಾನೆ
ಗುಂಪು ತುಗ್ಗೂಲಿ ವನಗಳಿಗೆ || ತಂದಾನ ||
ಹನ್ನೊಂದು ನಾಯಿಗಳಿಗೆ ಚಿನ್ನದ ಸರುಪಣಿ
ಪನ್ನಂಗದಾಗ ಕುಡಿ ನೀರು | ಕುಡಿಸಿಕ್ಯಂಡು
ಅಣ್ಣ ಚಿತ್ತಯ್ಯ ಜಗಬ್ಯಾಟೆ | ಹೊರಟಾನೆ
ಸಾಲು ತಗ್ಗೂಲಿ ವನಗಳಿಗೆ || ತಂದಾನ ||
ದಂಡಿಗ್ಹೋಗಣ್ಣಾಗ ಮಂಡೇಲ್ಲ ಮಲ್ಲಿಗೆ
ದಂಡೆಕೋರೆಲ್ಲ ದವುನಾವೆ | ಚಿತ್ತಯ್ಯಾನ
ದಂಡು ಬ್ಯಾಟ್ಯಾಡಲ್ಹೊರಟಾನೆ || ತಂದಾನ ||
ಜಾಲದಾಗ ಜಾಲ ಜಾಲ ಮುತ್ತೀನ ಜಾಲ
ಜಾಲ ಶಿತ್ತಯ್ಯ ಕರುದಾನೆ | ಆ ಜಾಲ
ಒಳ್ಳೋಳ್ಳೆ ಮಿಕುವ ಹಿಡುದಾನೆ || ತಂದಾನ ||
ಆ ಕಾಲು ಸಾಸೈತಿ ಈ ಕಾಲು ಮುದುರೈತಿ
ಹಾಸು ಬಂಡಿಗಿ ಮೀಸೆ ತಿರುವಿರುವ | ಹಂದೀದು
ಭೂಪ ಶಿತ್ತಯ್ಯ ಹೊಡುದಾನೆ || ತಂದಾನ ||
ಅಂಗಾಲು ಸಾಸೈತಿ ಮುಂಗಾಲು ಮುದುರೈತಿ
ಮಂಗಾರ ಗಿಡಕ ಮಲಗಿರುವ | ಹಂದೀಯ
ಚೆನ್ನೀಗ ಶಿತ್ಯ್ಯ ಹೊಡುದಾನೆ || ತಂದಾನ ||
ಚಿಕ್ಕ ಸಾಣಿಕೆರೆಯ ಗಚ್ಚಿನ್ಹಳ್ಳದಾಗ
ಅಪ್ಪ ಚಿತ್ತಯ್ಯ ಜಗಬ್ಯಾಟೆ | ಆಡಲುವಾಗ
ಅಪ್ಪಾಗ ಮಾರು ಮಲದಾವೆ || ತಂದಾನ ||
ರಾಯ ಸಾಣಿಕೆರೆಯ ಕಾನ್ಹಳ್ಳದಾಗ
ಚೆನ್ನಿಗ ಚಿತ್ತಯ್ಯ ಜಗಬ್ಯಾಟೆ | ಆಡಲುವಾಗ
ಅಪ್ಪಾಗ ಮಾರು ಮಲದಾವೆ || ತಂದಾನ ||
ಎರಡು ಕೈಯಿಗಿ ಎರಡು ಮರಡಿಯ ಸರಪುಣಿ
ಗರಡಿ ಮಠಲಿಂದ ಬರುವನೆ | ಚಿತ್ತಯ್ಯ
ಕುಲವ್ಹೇಳ ನಿನ್ನ ತೆರವ್ಹೆಳ || ತಂದಾನ ||
ಕುಲವೆ ಕುರುಬರೊಳು ತೆರವ ನೂರವಂದು
ಉಡುವ ಸೀರಿಗಳು ಹದಿನಾರು | ಚಿತ್ತಯ್ಯ
ಕುರುಬೂತಿಗೊಡವೆ ನಿನಗ್ಯಾಕ || ತಂದಾನ ||
ಗಂಡರುಳ್ಹೆಣ್ಣಿಗೆ ಗಂಧಾವ ಧರಿಸ್ಯಾನೆ
ಮಂದ್ಯಾಗ ಬಳಿಯ ಇಡಿಸ್ಯಾನೆ | ಚಿತ್ತಯ್ಯ
ಗಂಡ ನಮಗೇನು ಎದುರುಂಟೆ || ತಂದಾನ ||
ಪುರುಷರುಳ್ಹೆಣ್ಣಿಗೆ ಅರಿಷಿಣವ ಧರಿಸ್ಯಾನೆ
ಪುರಸ್ಯಾಗ ಬಳಿಯ ಇಡಿಸ್ಯಾನೆ | ಚಿತ್ತಯ್ಯ
ಪುರುಷ ನಮಗೇನು ಎದುರುಂಟೆ || ತಂದಾನ ||
ಅರಗಿನ ಗುಡ್ಡಕ್ಹೋಗಿ ಪುನುಗಿನ ಬ್ಯಾಟೆಯನಾಡಿ
ಸುರನಾರಿಯ ಕಂಡು ಮರನೇರಿ | ನಾ ಬಂದೆ
ಮೈಯಿಗೆ ನೀರಿಡೆಯೆ ಮನಿಯಾಗೆ | ಅಂದಾರೆ
ತಂದಿಟ್ಟಾಳೆರಡು ಹೊಸಮಣಿ || ತಂದಾನ ||
ಗಂಗಿ ಮಾಳಿ ನಿನ್ಗೆ ಗಂಡರಿಬ್ಬರೆನೇ
ತಂದಿಟ್ಟಿದಿ ಎರಡು ಹೊಸಮಣಿ || ತಂದಾನ ||
ನನಗಿಬ್ಬರಾದರೆ ಜಗವೆ ತಲ್ಲಣಿಸ್ಯಾವು
ಚಿನ್ನದ ಕೆಂಜಡೆಯ ಸಿರಿಮುಗುಟ | ಒಳಗಾಳ
ಕುರುಬೂತಿಗೊಂದು ನಿನಗೊಂದು || ತಂದಾನ ||
ಅರಸೇಯ ತಂದಿದ್ದು ಮಾಳಿಗ್ಯಾರ್ಹೇಳಿದ್ದು
ಚಾಡಿ ಕರಸೆನ್ನ ಓಬಳಪತಿ | ಇದ್ದಲ್ಲಿ
ಜಗವೆ ತಲ್ಲಣಿಸಿ ಮುಗಿದಾವು || ತಂದಾನ ||
ಗುಡ್ಡಾದ ಸುತ್ತಲು ಒಡ್ಡು ತರುಗು ಗುಡಿಸೋಳೆ
ಜಡ್ಡ ತುರುಬಿನ ಕುರುಬೂತಿ | ನಿನಗಾಗಿ
ದೊಡ್ಡವ್ನು ಚಿತ್ತಯ್ಯ ಮನಸೋತ || ತಂದಾನ ||
ಹಾರೋದು ಹುಲ್ಲೆ ಕಣೆ
ಚಿತ್ತಯ್ಯ ಏರೋದು ಸೇಜಿ ಕಣೆ || ದನಿ ||
ಇದ್ದ ನೀರ್ಹೋಯ್ಕಂಡು ಎದ್ಹೋಗೊ ಪೂಜಾರಿ
ಗುದ್ದಾಟ ಬ್ಯಾಡ ಮನಿಯಾಗ | ಸಾಣಿಕೆರಿಯ
ದೊಡ್ಡವ್ನ ಪೂಜೆ ತಡದಾವು || ಹಾರೋದು ||
ಕಾದ ನೀರ್ಹೋಯ್ಕಂಡು ವಾರ್ಯಾಗೊ ಪೂಜಾರಿ
ಕಾದಾಟ ಬ್ಯಾಡ ಮನಿಯಾಗ | ಸಾಣಿಕೆರಿಯ
ದೊಡ್ಡವ್ನ ಪೂಜೆ ತಡದಾವು || ಹಾರೋದು ||
ನೀರುಗಳು ಹೋಯ್ಯಮ್ಮ ಬಟ್ಟೆಗಳು ಕೊಡಮ್ಮ
ಬಂದು ಹೇಳಮ್ಮ ನಮಗೀಟು | ಈರಮ್ಮ
ಕಂದನ ಹೊರಕ್ಕೆ ಕಳುಸಮ್ಮ || ಹಾರೋದು ||
ಉಂಬಾಕ ನೀಡಮ್ಮ ತಂಬೂಲಿ ಕೊಡಮ್ಮ
ತಿಳಿದು ಹೇಳಮ್ಮ ನಮಗೀಟು | ಈರಮ್ಮ
ಬಾಲಾನ ಹೊರಕ್ಕೆ ಕಳುಸಮ್ಮ || ಹಾರೋದು ||
ಅಂಗಾಳ ಸಾರಿಸಿ ಗಂಗಿ ಸೆಳಿಯ ಕೊಟ್ಟು
ಕಂಬಳಿ ಹಾಸ್ಯಾರೆ ಕರಿಮೋಡ | ಸಾಣಿಕೆರಿಯ
ದೊಡ್ಡವ್ನ ಹೊರಕ್ಕ ತಗುದಾರೆ || ಹಾರೋದು ||
ಬಾಗಾಲ ಸಾರಿಸಿ ನೀರ ಸೆಳಿಯ ಕೊಟ್ಟು
ಜಾಡಿ ಹಾಸ್ಯಾರೆ ಕರಿಮೋಡ | ಸಾಣಿಕೆರಿಯ
ದೇವರ ಹೊರಕ್ಕ ತಗುದಾರೆ || ಹಾರೋದು ||
ಎದ್ದೆಬಾ ಚಿತ್ತಯ್ಯ ಹೆಜ್ಜೆಯ ನೋಡೆನು
ಹೆಜ್ಜೆ ವಳಗಾಳ ಪದುಮಾವ | ಪಾಚ್ಚ್ಯದ ತೆನಿಯ
ಎದ್ದು ಬಾ ಗಂಗಿ ಶದುರಿಗಿ || ಹಾರೋದು ||
ನಡುದೆ ಬಾ ಚಿತ್ತಯ್ಯ ನಡುಗೆಯ ನೋಡೆನು
ನಡಿಗಿ ವಳಗಾಳ ಪದುಮಾವ | ಪಾಚ್ಚ್ಯದ ತೆನಿಯ
ನಡುದೆ ಬಾ ಗಂಗಿ ಶದುರಿಗಿ || ಹಾರೋದು ||
ಅಪ್ಪಾನ ಹೋರುಬರ ತುಪ್ಪುಂಡು ಮೈಯೊನೆ
ಸುತ್ತುಗಂಬಿ ದಟ್ಟ ಚೆಲುವನೆ | ಕೃಷ್ಣಪ್ಪ
ಅಪ್ಪನಂದುಲುವ ಹೋರುಬಾ || ಹಾರೋದು ||
Leave A Comment