ಅಲೆ ಕುಲ್ಡುಮುಂಡೆ ಬುಡ್ಡೀನೆ ಮನಿಯಾಗೆ ಇಳಿವುದಲ
ಕಂಕುಳಕೆತ್ತೀಕಂಡು ಬಂದವಳೇಯೇ ನೋಡು
ಪಾತುರುದರು ಕಾಣಯ್ಯ ಬಗ್ಗುದುರು ಕಾಣಯ್ಯ
ನಾಂತೇವು ತುಣಿಯೋರಂತೆ ಮತ್ತೇನೆ ಆವಾಗ
ನೋಡಿಕಂಡು ಪಾಡಿಕಂಡು ಕುಂತಕಂಡು ಕುಲ್ಡುಮುಂಡೆ
ಹಾಡಿಕಂಡ ವಲಿಗಾನೆ ಮತ್ತೇನೆ ಮಲ್ಲಯ್ಯ
ಒಂದೊಂದೆ ಪಾವುಟಿಗೆ ಹತ್ತಿದುನಣ್ಣಾ ವೋ

ಅಲೆ ಗವ್ವಾಸುಲಿ ಸರಿಸರಿಗೇನೆ ಹೋಗೇನೆ ಮಲ್ಲಯ್ಯ
ಸೊಂಡಲೂರು ಬೊಮ್ಮಯ್ಯ
ಏಳುಮಂದಿ ಸೂಳೇರುನ
ಮಂದೆ ಕುಂದ್ರಿಸಿಕಂಡು
ಏಳು ಮಂದಿ ಹೆಂಡುರುನ
ಪಕ್ಕಿಗೆ ಕುಂದರಿಸಿಕೊಂಡು
ನೆಡಿವೇ ಕುಂತವನೆ ಬೊಮ್ಮಯ್ಯ ವೋ

ಕಳ್ಳಾ ನನ್ನಂದೀರಿ
ಸುಳ್ಳಾ ನನ್ನಂದೀರಿ
ಸತ್ತೇದಲ್ಲೆ ಶರಣ
ಉತ್ತುಮುರೇನೆ ಮಗಾ
ಎತ್ತಯ್ಯನ್ನ ನಾನು
ನಟ್ಟಿಮುರುದೆ ಬಂದಿವಿನಿ
ಇಸಬಾಯಿ ತೊಳಿತೀನಂದ ಬೊಮ್ಮಯ್ಯ ವೋ

ಮೊದಲೇನೆ ಕೂತೇನೆ ಕೂಗ್ಯವನೆ ಬೊಮ್ಮಯ್ಯ
ಆಲಿಸಿ ಕೇಳಿದಾನೆ ವಲಿಗಾನೆ ಮಲ್ಲಯ್ಯ
ಇನ್ನೊಂದೆ ಕೂತೇನೆ ಯಾವಾಗ ಕೂಗಿದುನೆ
ಶಿನ್ನುದು ಸಿರಿವಗ್ಗಾನೆ ಇಳಿಯೇನೆ ಬಿಟ್ಟವನೆ
ಇನ್ನೊಂದೆ ಕೂತೇನೆ ಯಾವಾಗ ಕೂಗಿದುನೆ
ಯಳಕಂಡ ಮಲ್ಲಯ್ಯ ಸೆಳಕಂಡಾ ವೋ

ಅಂಬೆರಾಯೂರಾಣೆ ತುಂಬೆರಾಯೂರಾಣೆ
ಅಕ್ಕಾಮಾರಿ ನಿನ್ನಾಣೆ ಶಿಕ್ಕುಮಾರಿ ನಿನ್ನಾಣೆ
ಕಡುವೋ ಕೊಡಲಿಯಾಣೆ ಕಟ್ಟೊ ಕವಣೀಯಾಣೆ
ಬಟ್ಟಣ್ಣುನ ಪಾದುದಾಣೆ ಮತ್ತೇಯೇನೆ ನೋಡು
ನಮ್ಮಾ ಭಾವನ ಪ್ರಾಣ್ಹೋಗಾತಂಕ ನಿನ ಪ್ರಾಣ್ಹೋದೀತಂದ
ಆಣೆ ಕಟ್ಟಿದು ಕಾಣೊ ವಲಿಗಾನೆ ಮಲ್ಲಯ್ಯ
ಶೆಂಡು ಕೈಯಾಗಿಡುಕಂಡು ಮುಂಡಾನೇನೆ ಕಡದು
ಮುಂಡಾನೆ ಕೆಳಿಯಾ ಒಗುದವುನಣ್ಣಾ ವೋ

ಕಳ್ಳ ನನ್ನಾಂದೀರಿ ಸುಳ್ಳು ನನ್ನಂದೀರಿ
ಸತ್ತೇದಲ್ಲೇ ಶರಣ ಉತ್ತುಮುರೆನೆ ಮಗ
ಎತ್ತಯ್ಯನ ಭಾಮೈದನ ವಲಿಗಾನೆ ಮಲ್ಲಯ್ಯ
ಭಾವನ ಪ್ರಾಣ ತಗಿಯಾಕೆ ಇವನಿದ್ದ ಬೊಮ್ಮಯ್ಯ
ಇವನ ಪ್ರಾಣ ತಗಿಯಾಕೆ ನಾನೇ ಹುಟ್ಟಿವಿನಂದ
ಮೂರು ಕೂತೆ ಕೂಗ್ಯವನೆ ಮೂರು ಕ್ಯಾಕೆ ಹೊಡುದವನೆ
ಕಾಕ್ಯಾರೆ ಬಂದ್ಹಂಗೆ ಬಂದವುನಣ್ಣಾ ವೋ

ಏಳು ಮಂದೀ ಸೂಳೇರು
ಏಳು ಮಂದೀ ಹೆಂಡೂರು
ಅಲ್ಲಿ ಕುಂತಕಂಡೆ ಸೋಬಾನ ಹೇಳ್ಯಾರಣ್ಣಾ ವೋ

ಹಾಳಾ ಸೊಂಡುಲೂರಿಗೆ ಮ್ಯಾಲೇಳು ಸೌಕಿಪಾರ
ವಲಿಗಾನೆ ಮಲ್ಲಯ್ಯ ತಲಿಯೆ ಕೊಂಡ್ಹೋದ

ಕೆಟ್ಟಾ ಸೊಂಡಲೂರಿಗೆ ಸುತ್ತೇಳ ಸೌಕಿಪಾರ
ವಲಿಗನೆ ಮಲ್ಲಯ್ಯ ತಲಿಯೇನೆ ಕೊಂಡ್ಹೋದ ವೋ

ಅಲೆ ಏಳು ಮಂದೀ ಅವರೇನೆ
ಸೊ ಬಾನ ಹೇಳಿಕಂಡು ಕುಂತವರಣ್ಣಾ ವೋ

ಬಾರಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ
ಈವತ್ತು ಕಡದೂ ಕಳ್ಳೆ ಹಿಂದೆಂದು ಕಡುದೇವು
ವಾದಿ ಬೀದೀಕೆ ಕಳ್ಳೆ ಕಡುದೇವಂದೋ ವೋ

ವಾದೀ ಬೀದಿಗೆ ಕಳ್ಳೆ ಕಡದವುರೆ ಆವಾಗ
ಈವತ್ತ ಕಟ್ಟಿದ ಗೂಡು ಇನ್ನೆಂದು ಕಟ್ಟೇವು
ವಾದಿಗೆ ಬೀದಿಗೆ ಗೂಡೇ ಕಟ್ಟೇನಂದಾ ವೋ

ವಾದೀ ಬೀದಿಗೆ ಗೂಡೆ ಕಟ್ಟಿದವನೆ ಎತ್ತಯ್ಯ
ಇವತ್ತೆ ಕರದ್ಹಾಲು ಇನ್ನೆಂದು ಕರದೇವು
ವಾದಿಗೆ ಬೀದಿಗೆ ಹಾಲು ಕರಿಯನಂದಾ ವೋ

ಎತ್ತಿಗ್ಹೆಸರೆ ಕರದನಲ್ಲ ಆವಿಗ್ಹೆಸರೆ ಕರದನಲ್ಲ
ಈವತ್ತೆ ಎತ್ತಯ್ಯ ಹೆಸರೇ ಕರದವುನಣ್ಣಾ ವೋ

ಕರಿಯ ಓಬ್ಹಾನಳ್ಳಿ ಕರದರೆ ಓ ಅಂಬೋಳೆ
ನೀನೆದ್ದೆ ಬಾರಮ್ಮ ನಿಮ್ಮ ಕರುವೀಗೋ

ಕಡಿಯಂಚಿನಾಗ್ಹುಟ್ಟಿದೋಳೆ ಕರದರು ಓ ಅಂಬೋಳೆ
ನೀನೆದ್ದೆ ಬಾರಮ್ಮ ನಿಮ್ಮ ಕರುವೀಗೋ

ಗುತ್ತಿಲಿ ಗುಡಿಕ್ವಾಟೆ ಸುತ್ತಿಲಿ ಮೇದಕ್ಕಯ್ಯ
ನೀನೆದ್ದೆ ಬಾರಮ್ಮ ನಿಮ್ಮ ಕರುವೀಗೋ

ಆದುವಾನಿ ಸೀಮೆ ಹೋಗಿ ಬಂದಕ್ಕಯ್ಯ
ನೀನೆದ್ದೆ ಬಾರಮ್ಮ ನಿಮ್ಮ ಕರುವೀಗೋ

ಸೊಂಡಾಲೂರು ಸೀಮ್ಯಾಗೆ ದುಂಡಾಪುಮೇದೊಳೆ
ಗಂಡುರು ಗೂಳಿಗರತಿ ನೀನೆದ್ದೆ ಬಾರಮ್ಮ ನಿಮ್ಮ ಕರುವೀಗೋ

ವಾದಿಗಿಬೀದಿಗೆ ಹಾಲು ಕರಿತಾನೇ ಎತ್ತಯ್ಯ
ಗುಡ್ಡುದು ಬೋರಿತಮ್ಮ
ಗಂಟಾವುಲು ಶಿನ್ನಯ್ಯ
ಮೂಲಗ್ಗ ತಕ್ಕಂಡು
ಸ್ವಾರೇನೇ ತಕ್ಕಂಡು
ಸೂರೀನೆ ತಕ್ಕಂಡು
ಗೊಡ್ಡುಗಾಳಿ ಮಾತೇನೆ ಕೊಟ್ಟಿದ್ದಾ ಎತ್ತಯ್ಯ
ಮೋಸೂಗಾಳಿಗ್ಹಗ್ಗ ಬೀಸಿದುನಣ್ಣಾ ವೋ

ಮೋಸೂಗಾಳಿಗ್ಹಗ್ಗ ಯಾವಾಗ ಬೀಸಿದುನೆ
ಎತ್ತಯ್ಯನ ಮುಂದಾಕೆ ಯಳಕಂಡೇ ಹೋದಣ್ಣ
ಉಕ್ಕುಡುಕಾನಿಸಿದ್ದ ಸುಕ್ಕುನು ಸುರನಾರಿಬಿಲ್ಲು
ತಕ್ಕಂಡು ಎತ್ತಯ್ಯ ಎಳಸಿದುನೋ
ಭಾವಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ
ಎಂಜೂಲಾದವು ಕಾಣೋ ಮಲ್ಲಯ್ಯ ವೋ

ನಮ್ಮಿಗೆ ಸರಿಯಾದೋರು ಬ್ಯಾಡರಲ್ಲ ಮಲ್ಲಯ್ಯ
ಶೆಕ್ಕೇಲಲ್ಹಾಲೊಯ್ದಿದಿದ್ದು ಜಕ್ಕಣಿಪುಲ್ಲಾರಾವು
ಹಾಲೇನೆ ಕರಿಯಯ್ಯ ವಲಿಗಾನೆ ಮಲ್ಲಯ್ಯ
ಅವನ ಬಾಯಾಕೆ ಈಸು ಇವನು ಬಾಯಾಕೆ ಈಸು
ಹಾಲೇನೆ ಬೀಡಯ್ಯ ವಲಿಗಾನೆ ಮಲ್ಲಯ್ಯ
ಕ್ಯಾಕುರಿಸಿ ಮಕದ ಮ್ಯಾಲೆ ಉಗುಳಯ್ಯ ಮಲ್ಲಯ್ಯ
ಯಡಗಾಲೀಲೆ ನೋಡು ಯಬ್ಬಟ್ಟೀಲೇ ನೋಡು
ಗುಡ್ಡಾದ ಕೆಳಿಯಾಕೆ ವದಿಯಣ್ಣಾ ವೋ

ಶೆಕ್ಕೇಲಾಲ್ಹೊಯ್ದಿದ್ದು ಜಕ್ಕಣಿಪುಲ್ಲಾರಾವು
ಹಾಲೇನೆ ಕರುದವುನೆ ವಲಿಗಾನೆ ಮಲ್ಲಯ್ಯ
ಅವುನು ಬಾಯಾಕೆ ಈಸು ಇವುನು ಬಾಯಾಕೇ ಈಸು
ಹಾಲೇನೆ ಬಿಟ್ಟವನೆ ವಲಿಗಾನೆ ಮಲ್ಲಯ್ಯ
ಕ್ಯಾಕುರಿಸಿ ಮಕದ ಮ್ಯಾಲೆ ಉಗುದವುನೆ ಮಲ್ಲಯ್ಯ
ಎಡಗಾಲೀಲೇ ನೋಡು ಯಬ್ಬಟ್ಟೀಲೇ ನೋಡು
ಗುಡ್ಡಾದ ಕೆಳಿಯಾಕೆ ವಗುದವುನಣ್ಣಾ ವೋ

ಬಾರಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ
ಸೂರಿದು ಹುಟ್ಟಿದುತಾಕೆ ಶೆಂದುರು ಮುಣಿಗಿದುತಾಕೆ
ಏನು ವರುವೆ ಕೇಳೀಯೋ
ಕೇಳಿದ್ದೆ ವರುವೆ ಕೊಡತೀನಂದಾ ವೋ

ಸ್ವಾಮವಾರದೊತ್ತುಗುಳು ತಪ್ಪುತಾವೇ ಮಲ್ಲಯ್ಯ
ಕೇಳಿದ್ದೆ ವರುವೆ ಕೊಡತೀನಂದಾ ವೋ

ಏನು ಕೊಟ್ಟರೇ ಭಾವ ಹೆಸರಿರತೈತೆ ಭಾವ
ಮುಂದುಲು ಪೂಜೆಕೊಡು ಮುಂದಲುಬಾಗುಲು ಕೊಡು
ಮುಂದಲಿಳ್ಳೇವು ಭಾವ ಕೊಡಬೇಕಂದಾ ವೋ

ಸೂರಿದು ಮುಳಗೀದುತಾಕೆ ಶಂದುರು ಹುಟ್ಟಿದು ತಾಕೆ
ಎಂಥವರುವೇ ಕೇಳಿದೋದೆ ಮತ್ತೇನೆ ಮಲ್ಲಯ್ಯ
ಕೊಟ್ಟೇ ಹೋಗಯ್ಯ ಅಂದವುನಣ್ಣಾ ವೋ

ಬಾರಯ್ಯ ವಲಿಗಾನೆ
ಸ್ವಾಮಾರಾ ದೊತ್ತುಗಳು
ಕೆಡತಾವಲಿಗಾನಯ್ಯ
ಇತ್ತುಲಾಗೇನು ನೋಡುತೀಯಿ
ಅತ್ತುಲಾಗೆ ನೋಡಂದ
ಮಾಯಿಕಾರ ಎತ್ತಯ್ಯ ಮಾಯಿವಾಗೈನೋ

ಅಲೆ ಎತ್ತಯ್ಯ ಯಾವಾಗ
ಮಾಯವಾದನೆ ನೋಡು
ಕರಿಯೇನೆ ಆಕಾಳು
ಕರಿಯ ಕಲ್ಲಾಗವಣ್ಣ
ಬಿಳಿಯೇನೆ ಆಕಳು
ಬಿಳಿಯ ಕಲ್ಲಾಗೋವಂತೆ
ಗೊಡ್ಡಗಾಳಿ ನಿಲುವುಗಲ್ಲಾಗಿ ನಿಂತೈತಣ್ಣಾ ವೋ

ಅವುರೆಲ್ಲರೂನು ಮ್ಯಾಲೆ
ನಾನ್ಯಾಕಿರುಬೇಕಂದ
ವಲಿಗಾನೇ ಮಲ್ಲಯ್ಯ
ಬಾಗಲು ಪಂಚಿ ಹಿಡುಕಂಡು ನಿಂತವುನಣ್ಣಾ ವೋ

ಕುರಿಯಾಳ್ಹಿರಿಯ್ಹಟ್ಟ್ಯಾಗೆ
ತಾವುರಿಗಿರಿ ಬಸುವಂಗೆ
ಸೀಮ್ಯಾಗೆ ಇದ್ದಂತ
ಅಬುಗಾನೆ ಮಲ್ಲಮ್ಮ
ನೆಲಿಮಾಳಿಗ್ಯಾಗೇ ಮಲ್ಲಮ್ಮ ಮಡಿಗಿದುಳೋ ವೋ

ಅಣ್ಣಾ ನಿಮ್ಮುನಾಡೇವೋ ಅಪ್ಪಾ ನೀಮ್ಮಾ ಮೆರಿಸೇವೋ
ಅಪ್ಪಾ ನಿಮ್ಮ ನಿದ್ರಿಗುಳೇ ಕೆಡಿಸೇವೋ | ಚಳ್ಳಾಕೆರಿ
ಪಟ್ಟೆ ಮಂಚದು ಮೇಲೆ ಪವಡಿಂಚೋ

ಅಣ್ಣಾ ನಿಮ್ಮಾನಾಡೇವೋ ಅಪ್ಪ ನಿಮ್ಮುನ ಮೆರಿಸೇವೋ
ಅಪ್ಪ ನಿಮ್ಮ ನಿದ್ರಿಗುಳೆ ಕೆಡಿಸೇವೋ | ತಳುಕಿನ ಬೆಟ್ಟಾ
ತೂಗೂ ಮಂಚುದು ಮ್ಯಾಲೆ ತೂಗ್ಯಾವೋ
ತಾಯಿ ನಿಮ್ಮನ್ಹಾಡೇವೋ ತಾಯಿ ನಿಮ್ಮುನ ಪಾಡೇವೋ
ತಾಯಿ ನಿಮ್ಮು ನಿದ್ರಿಗುಳೇ ಕೆಡಿಸೇವೋ | ಗೌರೂಸಂದ್ರ
ತೂಗೋ ಮಂಚುದು ಮ್ಯಾಲೆ ತೂಗ್ಯಾಡೋ

ರಾಮು ಲಚ್ಯುಮುಣ್ಣಂಬೊ ಗಂಡುಮಕ್ಕಳು ಕೊಡು ದೊರಿಯೇ
ಗಂಗಮ್ಮ ಗೌರಮ್ಮಂಬೋ ಹೆಣ್ಣು ಮಕ್ಕಳು ಕೊಡು ದೊರಿಯೆ
ಬಕ್ಕುಸು ಬಂಢಾರ ಕೊಡು ಮೈಗುದು ಗೌಡಾ ವೋ

ಹಣವೇ ಹೆಚ್ಚಾಲಾಗಿ ಮನಿತುಂಬ ಮಕ್ಕುಳಾಗಿ
ನೀನು ಮಾಡೀದ ಭೂಮಿ ಬೆಳಿಯಾಲೋ | ಕಾಮಣ್ಣ ನಿನಿಗೆ
ಹೆಚ್ಚೊಕ್ಕಲಾಗಿ ನೀನು ಬದುಕಣ್ಣೋ

ಮಕ್ಕಳು ಮನಿತುಂಬಾಗಿ ರೊಕ್ಕ ಕೈತುಂಬಾಗಿ
ನಿ ಮಾಡೀದ ಭೂಮಿ ಬೆಳಿಯಾಲೋ | ಕಾಮಣ್ಣ ನಿನಿಗೆ
ಹೆಚ್ಚಿಬರಲೊ ನಿಮ್ಮ ದೊರಿತಾನೋ

ರೆಡ್ಡಿಯಳ್ಳೀ ಶೆಲುವ ಕಾಣೋ
ಬಂಜಿಗರಿಯೇ ಈರಣ್ಣ
ಗ್ವಾಪುನಳ್ಳಿ ಈರಣ್ಣ
ಮೊದ್ದುಲು ಬಂಡೀರಣ್ಣ
ದುಪ್ಪೆ ಬಂಡೇ ಈರಣ್ಣ
ಸಾಲುಸತ್ತಿರಿಗಿರಿ ಈರಣ್ಣ
ನೂರೊಂದಲಿಗೀನ ಸೆಲುವ
ಬಂದಂತ ಗಂಡಾಂತ್ರ ಬಯಿಲು ಮಾಡಯ್ಯ ವೋ

ಅಕ್ಕಮಾರಿ ಶಿಕ್ಕುಮಾರಿ
ದ್ಯಾವುರು ದಯಿಮಾರವ್ವ
ಗೌರುಸಂದ್ರುದಕ್ಕಯ್ಯ
ಬಳ್ಳಾರಿ ದುರುಗಮ್ಮ
ಅಡ್ಡ ಬೆಟ್ಟುದ ಮಾರಮ್ಮ
ಯರಬಳ್ಳಿ ಮಾರಕ್ಕ
ಬಂದಂತೆ ಗಂಡಾಂತ್ರ ಬಯಿಲು ಮಾಡಮ್ಮ ವೋ
ವದ್ದಿ ಕೇರಿಯೇ ಸಿದ್ದಕಾಣೆ
ಗಾಳಿ ಪೂಜೆ ಗಾಡಿಗುನೆ
ಹೊನ್ನು ಬಂಡೇಶನಿಗೆ
ಬಂದಂತಾ ಗಂಡಾಂತ್ರ ಬಯಲು ಮಾಡಯ್ಯ ವೋ

ಕಲ್ಲೇ ಕಂಬಂದಯ್ಯ ಬಿಲ್ಲು ಬಾಣಾದಯ್ಯ
ಎಲ್ದೇ ಐದಾನೆ ನಮ್ಮ ಮನಿಸ್ವಾಮಿ | ನರಸಿಂಹ
ಮಲ್ಲೀಗ್ಹೋನ್ನುದಾಗೆ ಸಿವುಪೂಜೇ

ಲೆಕ್ಕಾವಿಲ್ಲಾದ್ಹೋವು ಲೆಕ್ಕುಸುವೇಳಿದುರೇನು
ಹೊಂದೀಕಿಲ್ಲಾದ್ಹೋವು ಒಂಬತ್ತೇಳಿದುರೇನು
ಮುದ್ರಿಕಿಲ್ಲಾದ್ಹೋವು ಮೂವತ್ತೇಳಿದುರೇನು
ಹೊನ್ನಾಬಂಡೆ ನಮ್ಮಪ್ಪುನ ಶಿನ್ನಿಗನೇ ಇನ್ನಾಮ್ಯಲೆ
ಹೇಳಿದ್ದು ರಾಗೆ ಫಲವಿಲ್ಲೋ ವೋ

ಶರಣಯ್ಯ ಶಿವುನೀಗೆ
ಶರಣಯ್ಯ ಈ ಮನಿಯ
ಒಡೆಯ ಆಂಜೀಣಯ್ಯಗೆ
ಶರಣಂದೇ ಕೈ ನಾವು ಮುಗುದೇವೋ

ಎಡಗೈಯೇ ಎಂಜಾಲು
ಬಲಗೈಯೇ ಎಂಜಾಲು
ಒಪ್ಪಿಕಳ್ಳೊ ಅಂಜಿನಯ್ಯ ನೀನು ಮೆಚ್ಚಿಕಳ್ಳಪ್ಪಾ ವೋ

ಮ್ಯಾಕೆ ಕಾಯಣ್ಣಾಗೆ ಲೋಕದ ಪುಳುಗೋವಾದೆ
ಕುರಿಯ ಕಾಯಣ್ಣಾಗೆ ಕುರಿಗಣ್ಣಿನ ಕೋಲಾದೆ
ಆವು ಕಾಯೇ ಅಣ್ಣಾಗೆ ದೇವುಗಣ್ಣಿನ ಬೆತ್ತಾದೆ
ದೊಡ್ಡಾನೆತ್ತಯ್ಯಗೊಂದು ವಡ್ಡಿದ ಮರುಬಿಲ್ಲಾದೆ
ದೊಡ್ಡೊನು ಜುಂಜಪ್ಪಾಗೆ ವಡ್ಡಿದ ಅರುಮನಿಯಾದೆ
ಆಲು ಕ್ಯಾತೆಲಿಂಗಾಗೆ ತೂಗೊ ತೊಟ್ಟಿಲು ನೀನಾದೆ
ಹಟ್ಟಿ ಕ್ಯಾತಯ್ಯಗೊಂದು ಪಟ್ಟಿದು ಮಂಚಾನಾದೆ
ಮೂಡುಲುಗಿರಿ ತಿಮ್ಮಪ್ಪಗೆ ಮುತ್ತಿನ ಬವುನಾಸಾದೆ
ಹಂದುಲುಗಿರಿ ತಿಮ್ಮಪ್ಪಗೆ ಶೆಂದುವಾದ ಗೊನಿಯಾದೆ
ಅಜ್ಜಾಗೆ ಕೋಲಾದೆ ಅಜ್ಜಿಗೆ ಪುಟ್ಟಿಗ್ಗ್ಯಾದೆ
ಗೆಜ್ಜೆಕಾಲ್ ಮೊಮ್ಮಗ್ಗೆ ತೂಗೊ ತೊಟಿಲು ನೀನಾದೆ
ನೀನ್ಯಾರಿಗಲ್ಲದೋಳೆ ಬಿದುರಮ್ಮ ವೋ

03_85_KK-KUH

ದೊಡ್ಡೀರಿ ಸೀಮೀಗೆ ಒಳ್ಳೆ ದೊಡ್ಡಳುಕಾಣೆ ಬಿದುರಮ್ಮ
ಒಡ್ಡೀದಲ್ಲೋ ತಾಯಿ ಮರಬಿಲ್ಲೋ | ಥಳಕೀನ
ವಬ್ಬೆಲಾಡೀದಮ್ಮ ಜಗುಬ್ಯಾಟೆ ವೋ

ಸಾರಾನೂರು ಗುಡ್ಡಾದೋಳೆ ಸಾಗಿಗಣ್ಣಿನ ಸೊತ್ತಿ
ಸೋಬಾನಿಲ್ಲಿ ಗೆಸಾಕು ಮಾಡಮ್ಮ ವೋ

ಜಯಮಂಗಳಂ

ಒಂದಂಡ ವರದಂಡ
ವರಗೆ ನಾಲಕ್ಕು ದಂಡ
ಕಾಡು ಗೊಲ್ಲುನುತಾಗೆ
ಕೈದಂಡ ತಕ್ಕಂಡು
ಈರಾದ ಈರಗೆ
ಈರ ಜುಂಜಪ್ಪಗೆ
ಮಾರ ಮುತ್ತಪ್ಪಗೆ
ಗುರುವೆ ಶಿತ್ಯ್ಯಗೆ
ಗುಡಡದೆತ್ತಯ್ಯಗೆ
ತಂದೆ ಮುರಿವಣ್ಣಗೆ
ತಾಯಿ ಶಿನ್ನಮ್ಮಗೆ
ಆವೀನ ಮ್ಯಾಲಾಡೊ ಮಾರಣ್ಣಗೆ
ಜಯಮಂಗಳಂ ನಿತ್ಯಸುಬಮಂಗಳಂ

ಒಳದಂಡ ವರದಂಡ
ವರಗೆ ನಾಲಕ್ಕು ದಂಡ
ಕಾಡು ಗೊಲ್ಲುನುತಾಗೆ
ಕೈದಂಡ ತಕ್ಕಂಡು
ಈರಾದ ಈರಗೆ
ಈರ ಜುಂಜಪ್ಪಗೆ
ಮಾರ ಮುತ್ತಪ್ಪಗೆ
ಗುರುವೆ ಶಿತ್ತಯ್ಯಗೆ
ಗುಡ್ಡದೆತ್ತಯ್ಯಗೆ
ತಂದೆ ಮುರಿವಣ್ಣಗೆ
ತಾಯಿ ಶಿನ್ನಮ್ಮಗೆ
ಆವೀನ ಮ್ಯಾಲಾಡೋ ಮೈಲಣ್ಣಗೆ
ಜಯಮಂಗಳಂ ನಿತ್ಯಸುಬಮಂಗಳಂ

ಒಳದಂಡ ವರದಂಡ
ವರಗೆ ನಾಲಕ್ಕು ದಂಡ
ಕಾಡು ಗೊಲ್ಲುನುತಾಗೆ
ಕೈದಂಡ ತಕ್ಕಂಡು
ಈರಾದ ಈರಗೆ
ಈರ ಜುಂಜಪ್ಪಗೆ
ಮಾರ ಮುತ್ತಪ್ಪಗೆ
ಗುರುವೆ ಶಿತ್ತಯ್ಯಗೆ
ಗುಡ್ಡದೆತ್ತಯ್ಯಗೆ
ತಂದೆ ಮುರಿವಣ್ಣಗೆ
ತಾಯಿ ಶಿನ್ನಮ್ಮಗೆ
ಎತ್ತೀನ ಮ್ಯಾಲಾಡೋ ಜುಂಜಪ್ಪಗೇ
ಜಯಮಂಗಳಂ ನಿತ್ಯ ಸುಬಮಂಗಳಂ

* * *