ದೇವರ ಹೋರುಬಾರ ಹಾಲುಂಡ ಮೈಯೋನೆ
ಸಾಲುಗಂಬಿ ದಟ್ಟ ಚೆಲುವನೆ | ಕೃಷ್ಣಪ್ಪ
ದೇವರಂದುಲುವ ಹೋರುಬಾ || ಹಾರೋದು ||
ಹತ್ತುರಿಮೆ ಬಡುದಾರೆ ಅಪ್ಪನ ಕಾಲು ಏಳಾವು
ಚಿಕ್ಕ ಅಗ್ರಹಾರದ ಉರಿಮೆ | ಬಸಣ್ಣಗೆ
ಗಕ್ಕನಂದಾಳೊ ಬಡಿರಣ್ಣ || ಹಾರೋದು ||
ಆರುರಿಮೆ ಬಡುದಾರೆ ಸ್ವಾಮಿ ಕಾಲೇಳಾವು
ರಾಯ ಅಗ್ರಹಾರದ ಉರಿಮೆ | ಬಸಣ್ಣಗೆ
ಬ್ಯಾಗನಂದಾಳೊ ಬಡಿರಣ್ಣ || ಹಾರೋದು ||
ಪೆಟ್ಟೀಗೆ ಹೊರಸ್ಯಾರೆ ಅಚ್ಚ ಕ್ವಾಮಾರಾಗ
ಒಕ್ಕಲೊಪ್ಪಿದ ಮಗನಿಗೆ | ಕೃಷ್ಣಪ್ಪಗ
ಪೆಟ್ಟಿಗೆ ಹೊರಸ್ಯಾರೆ ಹಿರಿಯರು || ಹಾರೋದು ||
ಅಗ್ಗೂಣಿ ಮಿಂದವ್ನೆ ಸದ್ದಿಕೆ ಧರಿಸ್ಯವ್ನೆ
ಸದ್ದಿಕೆ ಮುಂದಾಕ ಮಣಿ ಮುತ್ತು | ನೆಡುವಾಕ
ದೊಡ್ಡ ರುದ್ರಾಕ್ಷಿ ಧರಿಸ್ಯಾನೆ || ಹಾರೋದು ||
ನೀರಾನ ಮಿಂದವ್ನೆ ದಾರಾವ ಧರಿಸ್ಯವ್ನೆ
ದಾರದ ಮುಂದಾಕ ಮಣಿ ಮುತ್ತು | ನೆಡುವಾಕ
ಜೋಡ ರುದ್ರಾಕ್ಷಿ ಧರಿಸ್ಯಾನೆ || ಹಾರೋದು ||
ಕೆಟ್ಟಗಣೈಯ ಕಟ್ಟಿಗ್ಹೋಗಲುವಾಗ
ರಟ್ಟ್ಯಾಳ ಕಾಣೆ ಮಡಿವಾಳ | ಚಿತ್ತಯ್ಯಾಗ
ಪಟ್ಟೇದ ಸೀರೆ ನೆಡುಮಾಡಿ || ಹಾರೋದು ||
ಕೆಂಗೇನಗಣ್ಣಯ್ಯ ಗಂಗೀಗ್ಹೋಗಲುವಾಗ
ಗಂಭೀರ ಕಾಣೆ ಮಡಿವಾಳ | ಚಿತ್ತಯ್ಯಾಗ
ಗಂಜೀಯ ಸೀರೆ ನೆಡುಮಾಡಿ || ಹಾರೋದು ||
ಊರು ಬಿಟ್ಹೋಗುವಾಗ ಏನಂದ ಚಿತ್ತಯ್ಯ
ಬಾಲಾರು ಜತುನ ಮನಿ ಜತುನ | ಸಾಣಿಕೆರಿಯ
ಬಾವಿಗೆ ಹೋಗಿ ಬರುತೀನಿ || ಹಾರೋದು ||
ಅಪ್ಪ ಹೊರಟ ಸುದ್ದಿ ಉತ್ತಾಸ ಕರುದಾವೆ
ಊತ್ತೂತ್ತಿ ಗಮಲ ಎಸುದಾವೆ | ಸಾಣಿಕೆರಿಯ
ಬಾವಿಗೆ ಹೋಗಿ ಬರುತೀನಿ || ಹಾರೋದು ||
ಅಣ್ಣ ಹೊರಟ ಸುದ್ದಿ ಅಂಗುಳಕ್ಕೆ ಹರುದಾವೆ
ಹೊಂಬಾಳೆ ಗಮಲ ಎಸುದಾವೆ | ಸಾಣಿಕೆರಿಯ
ಅಣ್ಣ ಹೊರಟಾನೆ ಹರಿವ ಜಲಧಿಗೆ || ಹಾರೋದು ||
ಎಕ್ಕೆ ಕಾಯ್ಹಂಗ ಪಕ್ಕೆ ತುಂಬ ಗೆಜ್ಜೆ
ಒಕ್ಕಾಲ ನಡುವೆ ಬರುವನು ಚಿತ್ತಯ್ಯನ
ಒಕ್ಕಾಲ ಇನ್ನ್ಹೆಂತ ಧನಿಕಾನೆ || ಹಾರೋದು ||
ಬಾಳೆ ಕಾಯ್ಹಂಗ ತೋಳು ತುಂಬ ಗೆಜ್ಜೆ
ವಾಲಗದ ನಡುವೆ ಬರುವನು | ಚಿತ್ತಯ್ಯನ
ಪೂಜಾರಿ ಇನ್ಹೆಂತ ಧನಿಕಾನೆ || ಹಾರೋದು ||
ಬೆಟ್ಟವ ಇಳಿವಾಗ ಬಿಟ್ಟವು ಪಾದದ ಗೆಜ್ಜೆ
ಉಷ್ಟಾಂಗದ ಉಡಿಗೆ ಸೊಡಲ್ಯಾವೆ | ಚಿತ್ತಯ್ಯ
ಬೆಟ್ಟಾವ ಇಳಿಯ ರವಸಿಗಿ || ಹಾರೋದು ||
ಹಳ್ಳವ ಇಳಿವಾಗ ಛೆಲ್ಯಾವು ಪಾದದ ಗೆಜ್ಜೆ
ಹುಲ್ಲಾಂಗದ ಉಡಿಗೆ ಸೊಡಲ್ಯಾವೆ | ಚಿತ್ತಯ್ಯ
ಹಳ್ಳವ ಇಳಿಯ ರವಸಿಗಿ || ಹಾರೋದು ||
ಭೂಪ ಹೋದಲ್ಲಿ ಧೂಪಾದ ಮರುನ್ಹುಟ್ಟಿ
ಹೂಕ್ರುಸುತ್ತಾವೆ ಹುಲಿಕರಡಿ | ಚಿತ್ತಯ್ಯ
ತೊತ್ತುರ್ಸಿ ಹೊಳಿಯ ಇಳಿದಾನೆ || ಹಾರೋದು ||
ಲಿಂಗ ಹೋದಲ್ಲಿ ಗಂಧದ ಮರುನ್ಹುಟ್ಟಿ
ರಂಗ್ಳಸುತ್ತಾವೆ ಹುಲಿಕರಡಿ | ಚಿತ್ತಯ್ಯ
ನಂಬೂಸಿ ಹೊಳಿಯ ಇಳಿದಾನೆ || ಹಾರೋದು ||
ಪೂಜಾರಿ ಚಲುವನಮ್ಮ ಹೂವಿನ ಮಾಲೆಯೊಳಗಿರುವನಮ್ಮ || ದನಿ ||
ನಿಂಬೆಯ ವನದಾಗ ಅಂದಕ ಚಲುಮೆ ತೋಡಿ
ಅಂದಕ ವರವ ತಿಳಿನೀರು | ತಕ್ಕೊಂಡು
ಒಪ್ಪುಳ್ಳ ಮಕವ ತೊಳದಾರ || ಪೂಜಾರಿ ||
ಇಪ್ಪೆಯ ವನದಾಗ ವಪ್ಪಕ ಚಲುಮೆ ತೋಡಿ
ವಪ್ಪಕ ವರವ ತಿಳಿನೀರು | ತಕ್ಕೊಂಡು
ಒಪ್ಪುಳ್ಳ ಮಕವ ತೊಳದಾರ || ಪೂಜಾರಿ ||
ಬಾಳೆಯ ವನದಾಗ ಬಾಗಿ ಚಲುಮೆ ತೋಡಿ
ಹಾಯಾಕ ವರವ ತಿಳಿನೀರು | ತಕ್ಕೊಂಡು
ರೂವಾರುದ ಮಕವ ತೊಳದಾರ || ಪೂಜಾರಿ ||
ಅಲ್ಲೆ ಹೂ ಇಲ್ಲೆ ಹೂ ಒಲ್ಲೆನೆಂದ ಚಿತ್ತಯ್ಯ
ಅಲ್ಲಿ ಸಾಣಿಕೆರಿಯ ಕೆಡಗಿನ | ಕಾಲ್ಯದ್ಹೂವು
ಮಲ್ಲೀಗೆ ಸರವೆಂದು ಮುಡುದಾನೆ || ಪೂಜಾರಿ ||
ಅತ್ತಲಿತ್ತ ಹೂ ಒಪ್ಪಿನಂದ ಚಿತ್ತಯ್ಯ
ಚಿಕ್ಕ ಸಾಣಿಕೆರಿಯ ಕೆಡಗಿನ | ಕಾಲ್ಯದ್ಹೂವು
ಮುತ್ತೀನ ಸರವೆಂದು ಮುಡುದಾನೆ || ಪೂಜಾರಿ ||
ತಣ್ಣೀರು ಮಿಂದವ್ನೆ ಬಣ್ಣಕೊಡಿವಿ ಹೊದ್ದವ್ನೆ
ಚಿನ್ನದ ಕರಡಿಗಿ ಬಲಗೈಲಿ | ಕೃಷ್ಣಪ್ಪ
ಸಣ್ಣ ಮಲ್ಲಿಗೆ ಹೂ ಬಿಡಿಸಲ್ಹೋರಟಾನೆ || ಪೂಜಾರಿ ||
ಬಿಸಿನೀರು ಮಿಂದವ್ನೆ ಬಣ್ಣಕೊಡಿವಿ ಹೊದ್ದವ್ನೆ
ಕುಸುಲದ ಕರಡಿಗಿ ಬಲಗೈಲಿ | ಕೃಷ್ಣಪ್ಪ
ಎಸಲ್ಮಲ್ಲಿಗೆ ಹೂ ಬಿಡಿಸಲ್ಹೋರಟಾನೆ || ಪೂಜಾರಿ ||
ಕಟ್ಟೆಮ್ಯಾಲ್ಹೋಗುತ್ತಾ ಹೊತ್ತಿಗೆ ಓದೂತ್ತ
ಒಪ್ಪಕೊಂದ್ಹೆ ಜ್ಜೆ ನನೆಯೂತ | ಕೃಷ್ಣಪ್ಪ
ಅಪ್ಪಗ ಹೂ ಎತ್ತಲು ಹೊರಟಾನೆ || ಪೂಜಾರಿ ||
ಏರಿಮ್ಯಾಲ್ಹೋಗುತ್ತಾ ವ್ಯಾಳೆವೊ ನೋಡೂತ
ಜಾವಕೊಂದ್ಹೆ ಜ್ಜೆ ನೆನೆಯೂತ | ಕೃಷ್ಣಪ್ಪ
ದೇವರಿಗ್ಹೂ ಎತ್ತಲು ಹೊರಟಾನೆ || ಪೂಜಾರಿ ||
ಹಿಂದುಲು ಪಾದದ ಮ್ಯಾಲೆ ಮುಂದಲ ಪಾದನೂರಿ
ಜಂಗೂಸಿ ಹೂವು ಮುಡಿಸೋನೆ | ಕೃಷ್ಣಪ್ಪ
ಉಂಗುರು ಬಂದಾವೆ ಉಡುಗೊರೆ || ಪೂಜಾರಿ ||
ಆಚೆ ಪಾದದ ಮ್ಯಾಲೆ ಈಚೆ ಪಾದನೂರಿ
ತೊತ್ತೂರ್ಸಿ ಹೂವು ಮುಡಿಸೋನೆ | ಕೃಷ್ಣಪ್ಪಾ
ಜೋತುರು ಹೂ ಬಂದಾವೆ ಉಡುಗೊರೆ || ಪೂಜಾರಿ ||
ಮೊಗ್ಗು ಎಲಿಯ ಪೂಜೆ ಉದ್ದವಾದವೆಂದು
ಬಗ್ಗಿ ನೋಡ್ಯಾರೆ ಹಿರಿಯರು | ಚಿತ್ತಯ್ಯನ
ಮೊಗ್ಗೆಲಿಯ ಪೂಜೆ ಹಸುನಂದು || ಪೂಜಾರಿ ||
ಕರಿಯ ಎಲಿಯ ಪೂಜೆ ಕಳಿಯವಿಲ್ಲವೆಂದು
ತಿರುಗಿ ನೋಡ್ಯಾರೆ ಹಿರಿಯರು | ಚಿತ್ತಯ್ಯನ
ಕರಿಯೆಲೆಯ ಪೂಜೆ ಹಸುನಂದು || ಪೂಜಾರಿ ||
ಗಂಧದ ಬಂಡಿ ಬಂದು ಅಂಗಳ ದಾಗೈದಾವೆ
ಛಂದವಿಲ್ಲ ಇವರ ಮನುದಾಗ | ಕೃಷ್ಣಪ್ಪ
ಮಂದಾಲ್ಸು ನಿಮ್ಮ ಒಡಿಯಾನ || ಪೂಜಾರಿ ||
ಧೂಪದ ಬಂಡಿ ಬಂದು ಬಾಗಾಲದಾಗೈದಾವೆ
ಅಂದವಿಲ್ಲ ಇವರ ಮನುದಾಗ | ಕೃಷ್ಣಪ್ಪ
ಮಾತ್ನಾಡಿಸು ನಿಮ್ಮ ಒಡಿಯಾನ || ಪೂಜಾರಿ ||
ಗಂಧದ ಹೊಗೆ ಹೋಗಿ ಅಂಬಾರಕ ಮುಟ್ಟ್ಯಾವೆ
ತಂದೆ ಚಿತ್ತಯ್ಯನ ಶಿವಪೂಜೆ | ಆಗಲುವಾಗ
ಅಂಬಾರದಾಗ ಗಂಟೆ ಗರುಳಂದು || ಪೂಜಾರಿ ||
ಧೂಪದ ಹೊಗೆ ಹೋಗಿ ಆಕಾಶಕ ಮುಟ್ಟ್ಯಾವೆ
ಅಪ್ಪ ಚಿತ್ತಯ್ಯನ ಶಿವಪೂಜೆ | ಆಗಲುವಾಗ
ಆಕಾಶದಾಗ ಗಂಟೆ ಗರುಳಂದು || ಪೂಜಾರಿ ||
ರಾಗಿ ರಾಗಿ ಪೂಜೆ ರಾಗಿ ರನ್ನಾದ ಪೂಜೆ
ರಾಯರು ಕಟ್ಟಿಸಿದ ಹೊಸ ಪೂಜೆ | ಬಾಳಕದಲೆ
ಹೋಗಿ ನೋಡ್ಯಾರೆ ಗೌಡರು | ತಿಮ್ಮಣ್ಣಾಗೆ
ಕೊಡಬಂದರು ಕೊರಳ ಪದಕವ || ಪೂಜಾರಿ ||
ಅಕ್ಕಿ ಅಕ್ಕಿ ಪೂಜೆ ಅಕ್ಕಿ ರನ್ನಾದ ಪೂಜೆ
ಒಕ್ಕಲು ಕಟ್ಟಿಸಿದ ಹೊಸಪೂಜೆ | ಬಾಳಕದಲೆ
ಹೊಕ್ಕು ನೋಡ್ಯಾರೆ ಗೌಡರು | ತಿಮ್ಮಣ್ಣಾಗೆ
ಇಡುಬಂದರು ಬೆರಳಿಗೆ ಉಂಗುರವ || ಪೂಜಾರಿ ||
ಚಿಕ್ಕ ಪೂಜಾರೆಂದು ಸಿಟ್ಟಾದರೊಕ್ಕಲು
ಚಿಕ್ಕ ಪೂಜಾರಿಯಲ್ಲ ಹಸುಮಗ | ಕೃಷ್ಣಪ್ಪ
ಸುತ್ತಿಟ್ಟು ಪೂಜೆ ತಿರುವ್ಯಾನೆ || ಪೂಜಾರಿ ||
ಸಣ್ಣ ಪೂಜಾರೆಂದು ಬೆಸರಾದರೊಕ್ಕಲು
ಸಣ್ಣ ಪೂಜಾರಿಯಲ್ಲ ಹಸುಮಗ | ಕೃಷ್ಣಪ್ಪ
ಎಸಲಿಟ್ಟು ಪೂಜೆ ತಿರುವ್ಯಾನೆ || ಪೂಜಾರಿ ||
ಅಣ್ಣನ ಪೂಜೆ ಮಾಡಿ ಅಣ್ಣಿಲಿ ಕುಂತಿರುವನೆ
ಸಣ್ಣಂಗಿ ಒಪ್ಪಿ ರೆವೆ | ಕೃಷ್ಣಪ್ಪ
ಅಣ್ಣಗನೀತ ಚಲುವನೆ || ಪೂಜಾರಿ ||
ಅಪ್ಪುನ ಪೂಜೆ ಮಾಡಿ ಹೊತ್ತಿಲಿ ಕುಂತಿರುವನೆ
ಬುಟ್ಟಂಗಿ ಒಪ್ಪಿ ರೆವೆ ರೆವೆ | ಕೃಷ್ಣಪ್ಪ
ಅಪ್ಪಗನೀತ ಚಲುವನೆ || ಪೂಜಾರಿ ||
ಒಂದೆಲೆ ಒಂದಡಿಕೆ ಒಂದು ಬೊಟ್ಟಿನ ಗಂಧ
ಬಂದಾವೆ ಗಂಗಾ ನಿನ ಸ್ಯಾಜ | ನಿಮ್ಮಳಿಯಾಗ
ನಿಂಗಣೈದಾನೆ ಕಳುವಮ್ಮ || ಪೂಜಾರಿ ||
ಮೂರೆಲೆ ಮೂರಡಿಕೆ ಮೂರು ಬೊಟ್ಟಿನ ಗಂಧ
ಕೊಟ್ಟೆವೆ ಗಂಗ ನಿನ ಸ್ಯಾಜ | ನಿಮ್ಮಳಿಯಾಗ
ಚಿತ್ತಯ್ಯ ವೈದಾನೆ ಕಳುವಮ್ಮ || ಪೂಜಾರಿ ||
ಹತ್ತೂರು ತಿರುಗಿದ್ರೆ ಅಪ್ಪಗ ಕಳೆವಿಲ್ಲ
ಚಿಕ್ಕ ಸಾಣಿಕೆರಿಯ ಕೆರಿಯಾಗ | ಚಿತ್ತಯ್ಯ
ಒಪ್ಪತ್ತೇ ಸಾಕ ಸುಖನಿದ್ರೆ || ಪೂಜಾರಿ ||
ಆರೂರು ತಿರುಗಿದ್ರೆ ದೇವರಿಗ ಕಳೆವಿಲ್ಲ
ಚಿಕ್ಕ ಸಾಣಿಕೆರಿಯ ಕೆರಿಯಾಗ | ಚಿತ್ತಯ್ಯ
ಜಾವತ್ತೆ ಸಾಕ ಸುಖನಿದ್ರೆ || ಪೂಜಾರಿ ||
ಗಂಗೀಯ ದಡದಲ್ಲಿ ನಿಂಬೆ ಛಪ್ಪರನ್ಹಾಕಿ
ಟೆಂಗೆ ಉರಿಗೆಜ್ಜೆ ಕುಣುಸುತ್ತ | ಚಿತ್ತಯ್ಯ
ಚೆಂಡುನಾಡ್ಯಾನೆ ಹೊಳಿಯಾಗೆ || ಪೂಜಾರಿ ||
ಬಾವೀಯ ದಡದಲ್ಲಿ ಬಾಳೆ ಛಪ್ಪರನ್ಹಾಕಿ
ತೋಳು ಉರಿಗೆಜ್ಜೆ ಕುಣಿಸುತ್ತ | ಚಿತ್ತಯ್ಯ
ದಾಯವಾಡ್ಯಾನೆ ಹೊಳಿಯಾಗೆ || ಪೂಜಾರಿ ||
ಅಪ್ಪ ನಿನ ಅಂದಾಲು ಮತ್ತೆಲ್ಲಿ ಬರುತಾವೆ
ಚಿಕ ಸಾಣಿಕೆರಿಯ ತುರುಮಂದಿ | ಬಯಿಲಾಗ
ಅಪ್ಪನ ಅಂದಾಲುವೆ ಬರುತಾವೆ || ಪೂಜಾರಿ ||
ಅಣ್ಣ ನಿನ್ನ ಅಂದಾಲು ಇನ್ನೆಲ್ಲಿ ಬರುತಾವೆ
ರಾಯ ಸಾಣಿಕೆರಿಯ ತುರುಮಂದಿ | ಬಯಿಲಾಗ
ಅಣ್ಣನ ಅಂದಾಲುವೆ ಬರುತ್ತಾವೆ || ಪೂಜಾರಿ ||
ಅಣ್ಣಾ ನಿನ್ನ ಕುದುರೆ ಹನ್ನೆರ್ಡು ಸಾವಿರ
ಹಣ್ಣುಮದಿತಿಂದು ಮದವೇರಿ | ಬರುವಾಗ
ಹಣ್ಣಿನೆಡಿಗೊಳು ಅರಗಾಗೆ || ಪೂಜಾರಿ ||
ಹಣ್ಣಿನೆಡಿಗಳನ್ನು ಯಾಕೆ ತುಳಿದ್ಯೋ ಬಟ್ಟಣ್ಣ
ಚಿತ್ತವಿಲ್ಲವಳ ಮನದಾಗ | ಸಿರಿಪಾದಾಕ
ಮುತ್ತುನ್ಹರಡೋದು ಮರುತಾಳೆ || ಪೂಜಾರಿ ||
ಅಪ್ಪ ಚಿತ್ತಯ್ಯನ ಕುದುರೆ ಇಪ್ಪತ್ತು ಸಾವಿರ
ಸುಖಮದ್ದಿ ತಿಂದು ಮದವೇರಿ | ಬರುತಾವೆ
ಸೊಪ್ಪಿನೆಡಿಗೊಳು ಅರಗಾಗೆ || ಪೂಜಾರಿ ||
ಸೊಪ್ಪಿನೆಡಿಗಳನ್ನು ಯಾಕೆ ತೊಳೆದ್ಯೋ ಬಟ್ಟಣ್ಣ
ಗ್ಯಾನವಿಲ್ಲವಳ ಮನದಾಗ | ಸಿರಿಪಾದಾಕ
ಹೂವ್ವನ್ಹರಡೋದು ಮರುತಾಳೆ || ಪೂಜಾರಿ ||
ಪೆಟ್ಟಿಗೆ ಪೆಟ್ಟಿಗೆ ಬೊಟ್ಟಿಟ್ಟು ಬರುತ್ತಾವೆ
ಹಚ್ಚಡುದ ತಮ್ಮ ಅರಗಾಗ | ಚಿತ್ತಯ್ಯಾನ
ಪೆಟ್ಟಿಗೆ ಬಂದು ಹೋಗುತ್ತಾನೆ || ಪೂಜಾರಿ ||
ಪಾಲಿಗೆ ಪಾಲಿಗೆ ಸೋಲಿಟ್ಟು ಬರುತಾವೆ
ಪಾವುಡುದ ತಮ್ಮ ಅರಗಾಗ | ಚಿತ್ತಯ್ಯಾನ
ಪಾಲಿಕೆ ಬಂದು ಹೋಗುತ್ತಾವೆ || ಪೂಜಾರಿ ||
ಗದ್ದಿಗೆ ಮಾಡಿರಣ್ಣ
ಮುದ್ದು ಮೂರು ಲೋಕ ಗೆದ್ದು ಬಂದೈಯ್ಯಾನ ಮಂಚಕ ಕಳುವಿರಣ್ಣ ||ದನಿ||
ಗಟ್ಟೀನೆ ಬಾಣಗಳು ನೆಲಬಿರುಸು ಪಂಚಾರತಿಯ
ಹಚ್ಚುತ್ತವೆ ನಮ್ಗೆ ತಡವಾಗಿ || ಗದ್ಗಿಗೆ ||
ಓಣ್ಯಾಗ ನನೈಯ್ಯ ಗ್ಯಾನಗೊಳ್ಳುವುದಿರು
ಜೋಡೆ ಬಾಣಗಳು ನೆಲಬಿರುಸು | ಪಂಚಾರತಿಯ
ಜೋಡುಸ್ತ ನಮ್ಗೆ ತಡವಾಗಿ || ಗದ್ಗಿಗೆ ||
ಆನೆಮ್ಯಾಲೆ ಬರುವ ಜ್ಯಾಣ ಚಿತ್ತಯ್ಯಾಗ
ಆರೂಸಿ ಛೆಲ್ಲ್ಯಾರೆ ರಥನೀರು | ಚಿತ್ತಯ್ಯಾಗ
ಆನೆಯ ಜಲವು ಹರದಾವು || ಗದ್ಗಿಗೆ ||
ಒಂಟೆಮ್ಯಾಲೆ ಬರುವ ಭಂಟ ಚಿತ್ತಯ್ಯಾಗ
ಅಂತುರ್ಸಿ ಛೆಲ್ಲ್ಯಾರೆ ರಥನೀರು | ಚಿತ್ತಯ್ಯಾಗ
ಒಂಟೆಯ ಜಲವು ಹರದಾವು || ಗದ್ಗಿಗೆ ||
ಮುದ್ದುರ್ಸಿ ಅಕ್ಕಯ್ಯ ನಿದ್ರೆಗಣೈಯಾನ
ಗೆಜ್ಜೆಗುದುರಿಮ್ಯಾಲೆ ಬರುವನು | ಚಿತ್ತಯಾನ
ಮುದ್ದುರ್ಸಿ ಕೈಯೆ ಮುಗಿದೇವು || ಗದ್ಗಿಗೆ ||
ಲೋಲೂಸಿ ಅಕ್ಕಯ್ಯ ಹಾಲಗಣೈಯಾನ
ನೀಲುಗುದುರಿಮ್ಯಾಲೆ ಬರುವನು | ಚಿತ್ತಯಾನ
ಲೋಲೂಸಿ ಕೈಯೆ ಮುಗಿದೇವು || ಗದ್ಗಿಗೆ ||
ಜಯಮಂಗಳಂ
ತುಪ್ಪದಲ್ಲಿ ಸಾರೂಸಿ ರೊಕ್ಕದಲ್ಲಿ ಗುಡಿಕಟ್ಟಿ
ಬೊಟ್ಟ ಮುತ್ತಿನೆಂಬ ರಂಗೋಲಿನಿಟ್ಟು
ತುಪ್ಪವಕೊಡೊನೂರು ಪುತ್ರಸಂತಾನವ ಕೊಡೊ
ಹೆಚ್ಚಿಗೆ ಕೊಡುನಮ್ಮ ಚಿತ್ತಯ್ಯಾನೆ
ಜಯಮಂಗಳಂ ನಿತ್ಯ ಶುಭಮಂಗಳಂ
ಹಾಲಿನಲ್ಲಿ ಸಾರೂಸಿ ಹವಳದಲ್ಲಿ ಗುಡಿಕಟ್ಟಿ
ಮಾನ ಮುತ್ತಿನೆಂಬ ರಂಗೋಲಿನಿಟ್ಟು
ಹಾಲವ ಕೊಡೊನೂರು ಬಾಳಸಂತಾನವ ಕೊಡೊ
ಏಳಿಗೆ ಕೊಡೊನಮ್ಮ ಚಿತ್ತಯ್ಯಾನೆ
ಜಯಮಂಗಳಂ ನಿತ್ಯ ಶುಭಮಂಗಳಂ
* * *
Leave A Comment