ಕಗ್ಗವ ನಿಮ್ಮದಯ್ಯ ಕಾಳಗದ ಸಿಬ್ಬಂದಿ ಗೆದ್ದು ಬಂದ ||ದನಿ||

ತುಪ್ಪ ಬಾನ ಉಂಡು ಇಪ್ಪತಿಳ್ಳೆವು ಮಿದ್ದು
ಅಪ್ಪುಗಳು ಹೊರಟಾರೆ ಮಲೆಸೀಮೆ | ಬೆಟ್ಟಕ್ಕೆ
ಒಪ್ಪುಳ್ಳ ಬಿದಿರ ಕಡಿಸಿ | ಒಡ್ಡ್ಯಾರಮ್ಮ
ಇಪ್ಪತ್ತು ಗೇಣಿನ ಅರಮನಿ | ಒಳಗಿರುವ
ಅಪ್ಪ ತಿಮ್ಮಯ್ಯನ ಮದಲಿಂಗ || ಕಗ್ಗವ ||

ಹಾಲುಬಾನ ಉಂಡು ನಾಲವತ್ತು ವಿಳ್ಳೆಯು ಮಿದ್ದು
ಅಣ್ಣುಗಳು ಹೊರಟಾರೆ ಮಲೆಸೀಮೆ | ಬೆಟ್ಟಕ್ಕೆ
ಆಯವುಳ್ಳ ಬಿದಿರ ಕಡಿಸಿ | ಒಡ್ಡ್ಯಾರಮ್ಮ
ನಲವತ್ತು ಗೇಣಿನ ಅರಮನಿ | ಒಳಗಿರುವ
ಅಣ್ಣ ತಿಮ್ಮಯ್ಯನ ಮದಲಿಂಗ || ಕಗ್ಗವ ||

ಎತ್ತುಗಳು ಬಂದಾವು ಈರಣ್ಣ ಬರಲಿಲ್ಲ
ಸುತ್ತೇಳ ಜಂಬಿ ತುರುನೂರು | ಯರಿಯಾಗ
ಎತ್ತಿಗೆ ಬೆರಗು ತಿರಿವ್ಯಾರೆ || ಕಗ್ಗವ ||

ಹೋರಿಗಳು ಬಂದಾವು ಈರಣ್ಣ ಬರಲಿಲ್ಲ
ಸಾಲೇಳ ಜಂಬಿ ತುರುನೂರು | ಯರಿಯಾಗ
ಹೋರಿಗೆ ಬೆರಗು ತಿರಿವ್ಯಾರೆ || ಕಗ್ಗವ ||

ಸಾಮಿ ಈರಣ್ಣಾನ ತೂಗ ಮಂಚುದು ಕೆಳಗೆ
ಸಾಣಿಕಲ್ಲಾಗಿ ಸವುದೇವೋ |  ಈರಣ್ಣಾನ
ಪಾದ ಸೋಕಿದರೆ ಬದುಕೇವು || ಕಗ್ಗವ ||

ಅಪ್ಪ ನಿಂಗಣ್ಣಾನ ಪಟ್ಟೆ ಮಂಚುದ ಕೆಳಗೆ
ಹಿಟ್ಟುಗಲ್ಲಾಗಿ ಸವುದೇವೋ | ನಿಂಗಣ್ಣಾನ
ಬಟ್ಟೆ ಸೋಕಿದರೆ ಬದುಕೇವು || ಕಗ್ಗವ ||

ಕುರಿಯ ಕಾಯೋರಂತೆ ಕುರಿಯ ಪಾಲಕುರಂತೆ
ಕುರಿಯಾಗ ಪರಸ್ತಾಪು ನಡದಾವಂತೇ | ಸುದ್ದಿ
ಯಾರು ಹೇಳಿದುರೇ ಹಡದಮ್ಮಾ || ಕಗ್ಗವ ||

ನಾಯ್ಕನ್ಹಟ್ಟಿ ಹುಡುಗಾರು ಸವದಿಗ ಬಂದಿದ್ದಾರು
ಸವದಿ ಹುಡುಗಾರು ಹೇಳಿದರಪ್ಪಾ || ಕಗ್ಗವ ||

ಉಂಬಾಕ ನೀಡಮ್ಮ ತಂಬೋಲಿ ಕೊಡಮ್ಮಾ
ತಿಳದೆ ಹೇಳಮ್ಮ ನಮಿಗೋಟು | ಏಳಾಜಂಬಿ
ಮಾಯ ಒಬ್ಬೂರಿಗೆ ಗೊರತಿಲ್ಲ || ಕಗ್ಗವ ||

ಆಗಲಿ ಹೋದಾವಂದು ಜಗಲಿಗಳು ಹಾಕುಸಿದ
ಆಗಲಿ ಹೋದಾವು ಎರುಡಾನಿ | ಏಳಾಜಂಬಿ
ಅಗಲೆ ಲಗ್ಗುಗಿ ಗವುದಾವೆ || ಕಗ್ಗವ ||

ದಾಟಿ ಹೋದಾವಂದು ಕ್ವಾಟಿಗಳು ಹಾಕುಸಿದ
ದಾಟಿ ಹೋದಾವು ಎರುಡಾನಿ | ಏಳಾಜಂಬಿ
ಧೂಳೇ ಲಗ್ಗೀಗೆ ಗವುದಾವು || ಕಗ್ಗವ ||

ಉಪ್ಪನೀರ್ ಬಾವಿತಾವ ಹತ್ತಿ ಬಂದಾವ ಕುದಿರಿ
ಕರಪೂರ ಕೊಳ್ಳಿರಿ ಗೆಣಿಯಾರು | ಅರಸೆ
ನೀವು ಹೊಗಿ ಮಾಡಂದ ಜಗುಳಾವ || ಕಗ್ಗವ ||

ಸೀನೀರ್ ಬಾವಿತಾವ ಏರಿ ಬಂದಾವ ಕುದಿರಿ
ವಿಳ್ಳೇವ್ ಕೊಳ್ಳಿರಿ ಗೆಣಿಯಾರು | ಅರಸೆ
ನೀವು ಬಂದೆ ಮಾಡಂದ ಜಗುಳಾವ || ಕಗ್ಗವ ||

ಸುತ್ತೇಳ ಜಂಬೀಗೆ ಅತ್ತೇ ವೀರನ ಬಿಲ್ಲು
ಅಕ್ಕಿ ಹೊಂಬಾಳೆ ಜಗವೂತ | ಏಳಾಜಂಬಿ
ಲೆಗ್ಗಿಗೆ ಬಿಟ್ಟಾನ ಗೆಣಿಯಾರುನ || ಕಗ್ಗವ ||

ಸಾಲೇಳ ಜಂಬೀಗೆ ಹೋದ ವೀರನ ಬಿಲ್ಲು
ಕಾಯಿ ಹೊಂಬಾಳೆ ಜಗವೂತ | ಏಳಾಜಂಬಿ
ಕಾಳಗಕ ಬಿಟ್ಟಾನ ಗೆಣಿಯಾರುನ || ಕಗ್ಗವ ||

ಉಪ್ಪರಿಗೆ ಮನಿಯಾಗ ತುಪ್ಪಾವ ಕಾಸೋಳೆ
ಕಪ್ಪಿನ ಕಿವಿಯ ಕುರುಡಮ್ಮ | ಈರಣ್ಣಾಗ
ಕತ್ತಿ ಅರೂಸಿ ಕೊಡುತಾಳೆ || ಕಗ್ಗವ ||

ವಾವುರಿಗೆ ಮನಿಯಾಗ ಹಾಲು ಕಾಯಿಸೋಳೆ
ವಾಲೀಯ ಕಿವಿಯ ಕುರುಡಮ್ಮ | ಈರಣ್ಣಾಗ
ಆಯುದಾವ ಆರೂಸಿ ಕೊಡುತಾಳೆ || ಕಗ್ಗವ ||

ಹತ್ತುಬಂಡಿ ಕರಿಯಲೆ ಹತ್ತುಬಂಡಿ ಬಿಳಿಯಲೆ
ಮತ್ತೇಳು ಬಂಡಿ ಯಳಿಗಾಯಿ | ಹೇರಿಕಂಡು
ಅತ್ತಿ ಮರುಕಯ್ಯ ಸಕುಣಾವ || ಕಗ್ಗವ ||

06_85_KK-KUH

ಅತ್ತೇನೆ ಮರುಕಯ್ಯ ಸಕುಣಾಕ್ಹೊ ಗುಲುವಾಗ
ಸುಕ್ಕೆ ಬಣ್ಣಾದ ಹಿರಿಹಕ್ಕಿ | ರಾಯರ ಪೂಜೆ
ಹತ್ತಿದಯ್ಯಗ ಮರುಣಾವ || ಕಗ್ಗವ ||

ಆರುಬಂಡಿ ಕರಿಯಲೆ ಆರುಬಂಡಿ ಬಿಳಿಯಲೆ
ಮ್ಯಾಲೇಳು ಬಂಡಿ ಯಳಿಗಾಯಿ | ಹೇರಿಕಂಡು
ಆಲುದ ಮರಕಯ್ಯ ಸಕುಣಾವ || ಕಗ್ಗವ ||

ಆಲುದ ಮರಕಯ್ಯ ಸಕುಣಾಕ್ಹೋಗಲುವಾಗ
ಗ್ಯಾರೆ ಬಣ್ಣಾದ ಹಿರಿಹಕ್ಕಿ | ರಾಯರ ಪೂಜೆ
ಏರಿದಯ್ಯಾಗ ಮರುಣಾವ || ಕಗ್ಗವ ||

ಹಿಂದೆ ಏಳ ಜಂಬಿ ದಂಡಿಗ್ಹೋಗೊ ಅಣ್ಣಾನ
ತಂಗ್ಯಮ್ಮ ಹಿಂದಾಕ ಕರುದಾಳ | ಬುದ್ದೀಹೇಳಿ
ಕಂಬಮರಿಗೊಳ್ಳು ಹಿರಿಯಣ್ಣಾ || ಕಗ್ಗವ ||

ಕಂಬ ಮರಿಗೊಳ್ಳಾಕ ಹೇಡಿ ನಾನಲ್ಲವ್ವ
ಎಂಬತ್ತು ಮಂದಿ ಗೆಣಿಯಾರರರಸೇ | ನೀವು ಬಂದು
ಮಾಡಂದ ಜಗುಳಾವ || ಕಗ್ಗವ ||

ಇಂದು ಏಳು ಜಂಬಿ ದಾಳಿಗ್ಹೋಗೊ ಅಣ್ಣಾನ
ತಾಯಮ್ಮ ಹಿಂದಾಕ ಕರುದಾಳ | ಬುದ್ಧೀಹೇಳಿ
ಗೋಡೆ ಮರಿಗೊಳ್ಳು ನನ್ನ ಕಂದಾ || ಕಗ್ಗವ ||

ಗೋಡೆ ಮರಿಗೊಳ್ಳಾಕ ಹೇಡಿ ನಾನಲ್ಲವ್ವ
ನಲವತ್ತು ಮಂದಿ ಗೇಣಿಯಾರರರಸೇ | ನೀವು ಬಂದು
ಮಾಡಂದ ಜಗುಳಾವ || ಕಗ್ಗವ ||

ಹಿಂದೆ ಏಳಾ ಜಂಬಿ ದಂಡಿಗ್ಹೋಗೊ ಅಣ್ಣಾನ
ಉಂಡಡಿಕೆ ಅವುರ ಮಡುಲಾಗ | ಏಳಾಜಂಬಿ
ದಂಡೇ ನನಮ್ಯಾಲೆ ತಿರುವಂದ || ಕಗ್ಗವ ||

ಇಂದು ಏಳಾ ಜಂಬಿ ದಾಳಿಗ್ಹೋಗೊ ಅಣ್ಣಾನ
ಹೋಳಡಿಕೆ ಅವರ ಮಡುಲಾಗ | ಏಳಾಜಂಬಿ
ದಾಳೇ ನನಮ್ಯಾಲೆ ತಿರುವಂದ || ಕಗ್ಗವ ||

ತೆಗ್ಗೀಲಾಗಿನ ಜಗುಳ ದಿಬ್ಬದಲ್ಲಿ ಆಗ್ಯಾವೆ
ಬುದ್ಧಿವಂತನ್ಯಾರೆ ಮಗನಮ್ಮ | ಈರಮ್ಮ
ಯಡ್ಡುಬ್ಯಾಡರ ಕೂಟ ಸವುಲಗ್ಗಿ || ಕಗ್ಗವ ||

ಹಳ್ಳಿಲಾಗೋ ಜಗುಳ ದಿಳ್ಳೀಯಲ್ಲಿ ಆಗ್ಯಾವ
ಬಲ್ಲಿದೋನ್ಯಾರೆ ಮಗನಮ್ಮ | ಈರಣ್ಣ
ಮ್ಯಾಸಬೇಡರ ಕೂಟ ಸವುಲಗ್ಗಿ || ಕಗ್ಗವ ||

ಬಿದ್ದನಲ್ಲೆ ಈರಣ್ಣ ಬಿಳಿಯಂಗಿ ಮೇಲಾಗಿ
ವಜ್ಜುರದ ಬಾಕು ಅಡಿಯಾಗಿ | ಈರಣ್ಣ
ಬಿದ್ದಾ ಸೂರ್ಯಗೆ ಎದುರಾಗಿ || ಕಗ್ಗವ ||

07_85_KK-KUH

ಮಡುದಲ್ಲೆ ಈರಣ್ಣ ಕರಿಯಂಗಿ ಮೇಲಾಗಿ
ಹವಳಾದ ಬಾಕು ಅಡಿಯಾಗಿ | ಈರಣ್ಣಾ
ಮಡದನು ಸೂರ್ಯಾಗೆ ಎದುರಾಗಿ || ಕಗ್ಗವ ||

ಬಿದ್ದನಲ್ಲೇ ಈರ ಬಿದ್ದನಲ್ಲೇ ಸೂರ
ಬಿದ್ದಸ್ವಾಮನೋರು ಮಗ ವೀರಾ | ಈರಣ್ಣಾ
ಬಿದ್ದನು ಸೂರ್ಯದುಕೆ ಎದುರಾಗಿ || ಕಗ್ಗವ ||

ಮಡದನಲ್ಲೇ ಈರ ಮಡದನಲ್ಲೇ ಸೂರ
ಮಡ್ದ ಸ್ವಾಮನೋರು ಮಗ ವೀರಾ | ಈರಣ್ಣಾ
ಮಡದನು ಸೂರ್ಯದುಕೆ ಎದುರಾಗಿ || ಕಗ್ಗವ ||

ವಣಕೆ ವಣಕೆ ಬಂಟ ಮಣಕಾಲಲಿ ಸಮರಂತ
ವಣಿಕೇಯಿ ಬಂಟ ಈರಣ್ಣ | ಏಳಾಜಂಬಿ
ಮಣಕಾಲೆ ಊರಿ ಮಡುದಾನೆ || ಕಗ್ಗವ ||

ಬಿಲ್ಲೆ ಬಿಲ್ಲೀನ ಬಂಟ ಬಿಲ್ಲಂಬಲಿ ಸಮರಂತ
ಬಿಲ್ಲೀನ ಬಂಟ ಈರಣ್ಣ | ಏಳಾಜಂಬಿ
ಬಿಲ್ಲೊಂದೆ ಊರಿ ಮಡುದಾನೆ || ಕಗ್ಗವ ||

ಒಂಟೆ ಮ್ಯಾಲೆ ಬಂದಾವೆ ಎಂಟು ಸಾವುರ ಬಾಣ
ಕಂಚೀನ ಗುಂಡು ಸರುಳಂಬಾ | ಏರಿಬಂದಾವು
ಬಂಟ ಈರಣ್ಣುನ ಜಗುಳಾಕೆ || ಕಗ್ಗವ ||

ಆನೆ ಮ್ಯಾಲೆ ಬಂದಾವೆ ಆರು ಸಾವುರ ಬಾಣವೆ
ಗಾಜೀನ ಗುಂಡು ಸರುಳಂಬಾ | ಏರಿಬಂದಾವು
ಜಾಣ ಈರಣ್ಣುನ ಜಗುಳಾಕೆ || ಕಗ್ಗವ ||

ಆಸೆ ಕೊತ್ತುಲು ಬಿದ್ದು ಈಸೆ ಕೊತ್ತುಲು ಬಿದ್ದು
ದಾಟಿ ಹೋಗೋರು ತೆಲೆ ಬಿದ್ದು | ಈರಣ್ಣಾನ
ಬಾಕು ಬಿದ್ದಾವೆ ರಣದಾಗ || ಕಗ್ಗವ ||

ಹಿಂದೆ ಕೊತ್ತುಲು ಬಿದ್ದು ಮುಂದೆ ಕೊತ್ತುಲು ಬಿದ್ದು
ಮುಂದೆ ಹೋಗೋರು ತೆಲೆಬಿದ್ದು | ಈರಣ್ಣಾನ
ಅಂಬು ಬಿದ್ದಾವೆ ರಣದಾಗೆ || ಕಗ್ಗವ ||

ಕೆಂದ್ಹೋರಿ ಕೆದಿರ್ಯಾವೆ ಮಂಡೆ ಮಣ್ಣುಂಡಾವೆ
ಚಂದ್ರೂನೀಬೂತ್ತಿ ಬೆವುತಾವೆ | ಏಳಾಜಂಬಿ
ಚಂದ್ರಪತಿ ಕಾದು ಮಡುದಾನೆ || ಕಗ್ಗವ ||

ಕ್ಯಾಸ್ಹೋರಿ ಕೆದಿರ್ಯಾವೆ ಮೀಸೆ ಮಣ್ಣುಂಡಾವೆ
ಈಸ್ಟೂರನೀಬೂತ್ತಿ ಬೆವುತಾವೆ | ಏಳಾಜಂಬಿ
ದೇಸಪತಿ ಕಾದು ಮಡುದಾನೆ || ಕಗ್ಗವ ||

ತುಪ್ಪ ಹಚ್ಚಿದ ಮಂಡೆ ಹಟ್ಟ್ಯಾಗ ಯಳವೂತ
ಮುತ್ತೀನ ತೂರಾಯಿ ಮುಡಕೊಂಡು | ಏಳಾಜಂಬಿ
ಪಟ್ಟುದ ಕ್ವಾಮಾರ ಮಡುದಾನೆ || ಕಗ್ಗವ ||

ಎಣ್ಣೆ ಹಚ್ಚಿದ ಮಂಡೆ ಮಣ್ಣಾಗ ಯಳವೂತ
ಶಿನ್ನದ ತೂರಾಯಿ ಮಂಡಕೊಂಡ | ಏಳಾಜಂಬಿ
ಶಿನ್ನದ ಕ್ವಾಮಾರ ಮಡುದಾನೆ || ಕಗ್ಗವ ||

ಎಕ್ಕೇಯ ಗಿಡದಡಿಗೆ ಕಿಚ್ಚಂಬು ಬಿದ್ದಾವೆ
ಗಕ್ಕಾನೆ ಸುದ್ದಿ ಅರುದಾವೆ | ಏಳಾಜಂಬಿ
ಪಟ್ಟುದ ಕೋಮಾರ ಮಡುದಾನೆ || ಕಗ್ಗವ ||

ಕಾರೇಯ ಗಿಡದಡಿಗೆ ಈರಂಬು ಬಿದ್ದಾವೆ
ರಾಮ ರಾಮ ಸುದ್ದಿ ಅರುದಾವೆ | ಏಳಾಜಂಬಿ
ಮೋವುದ ಕೋಮಾರ ಮಡುದನಾ || ಕಗ್ಗವ ||

ಕಟ್ಟೇಯ ಹಿಂದಾಕ ಹೊಕ್ಕವೆರಡಂದಾಲ
ಹೊಕ್ಕಿದ್ದು ಕಂಡೆ ಬರಲಿಲ್ಲ | ಏಳಾಜಂಬಿ
ಮುಚ್ಚಾರ್ಯೆ ಸಣ್ಣಾ ಮರುಳಾಗೆ || ಕಗ್ಗವ ||

ಏರೀಯ ಹಿಂದಾಕ ಹೋದವೆರಡದಂದಾಲ
ಹೋಗಿದ್ದು ಕಂಡೆ ಬರಲಿಲ್ಲ | ಏಳಾಜಂಬಿ
ಮಜಾರೆ ಸಣ್ಣಾ ಮರುಳಾಗೆ || ಕಗ್ಗವ ||

ಅಪ್ಪ ನಿನ್ನ ಪಾದ ತುಪ್ಪಕಿನ್ನಾ ಮಿದುವು
ಮತ್ತೆಲ್ಲಿ ತುಳುದೆ ಎಳೆಮುಳ್ಳು | ಈರಣ್ಣಾನ
ಸುತ್ತೇಳು ಜಂಬಿ ವನುದಾಗ || ಕಗ್ಗವ ||

ಅಣ್ಣ ನಿನ್ನ ಪಾದ ಹಾಲಿಗಿನ್ನಾ ಮಿದುವು
ಮ್ಯಾಲೆಲ್ಲಿ ತುಳುದೆ ಎಳೆಮುಳ್ಳು | ಈರಣ್ಣಾನ
ಸಾಲೇಳು ಜಂಬಿ ವನುದಾಗ || ಕಗ್ಗವ ||

ಕೊತ್ತುಲುಕೆ ಕೊತ್ತುಲುಕೆ ಇಕ್ಕ್ಯಾರ ಕೈಪಂಜು
ಕೊತ್ತುಲುದಾಗವ್ನೆ ಮನಿಗಾರ | ಈರಣ್ಣ
ಕೊತ್ತುಲುಕೆ ಕಾದಿ ಮಡುದಾನೆ || ಕಗ್ಗವ ||

ಹೂಡೇವ್ಕೆ ಹೂಡೇವ್ಕೆ ನೀಡ್ಯಾರ ಕೈಪಂಜು
ಹೂಡೇದಾಗವ್ನೆ ಮನಿಗಾರ | ಈರಣ್ಣ
ಹೂಡೇವ್ಕೆ ಕಾದಿ ಮಡುದಾನೆ || ಕಗ್ಗವ ||

ಹತ್ತಾಳು ಉದ್ದಾಕ ಕಿತ್ತಾರ್ಯೆ ಆ ಮರುಳು
ಗಚ್ಚೀನ ಕರಡೀಲಿ ನೆಲುಗಾರೆ | ಈರಣ್ಣಾನ
ಮುಚ್ಚ್ಯಾರೆ ಸಣ್ಣ ಮರುಳಾಗ || ಕಗ್ಗವ ||

ಆರಾಳು ಉದ್ದಾಕ ತೋಡ್ಯಾರೆ ಆ ಮರುಳು
ಗಾಜೀನ ಕರಡೀಲಿ ನೆಲುಗಾರೆ | ಈರಣ್ಣಾನ
ಮುಚ್ಚ್ಯಾರೆ ಸಣ್ಣ ಮರುಳಾಗ || ಕಗ್ಗವ ||

ಪಡಗಾರ ಈರಣ್ಣ ಉಂಡು ಹೋಗಾಲಿಲ್ಲ
ಗಂದ್ವಿಡಿ ಕೈಯಾಗ ಇರಲಿಲ್ಲ | ಏಳಜಂಬಿ
ಅಂಗುಡಾಗುವರ ಸುಳಿವಿಲ್ಲ || ಕಗ್ಗವ ||

ಸುಳಿಗಾರ ಈರಣ್ಣ ಹೇಳಿ ಹೋಗಿಲಿಲ್ಲ
ಈಳ್ಳೇವು ಕೈಯಾಗ ಇರಲಿಲ್ಲ | ಏಳಾಜಂಬಿ
ಗಂಧಸಾಲಗವುರ ಸುಳಿವಿಲ್ಲ || ಕಗ್ಗವ ||

ಸುತ್ತೇಳ ಜಂಬ್ಯಾಗ ಕಿತ್ತಾಟವೇನಮ್ಮ
ಅಪ್ಪಣ್ಣ ತಿಪ್ಪಣ್ಣ ಕೆಂಗುರಿಯ ತಿಪ್ಪಣ
ಕಿತ್ತಾಡಿ ಮಡುದಾರೆ ಅಲಗೀಗೆ || ಕಗ್ಗವ ||

ಸಾಲೇಳ ಜಂಬ್ಯಾಗ ಕಾದಾಟವೇನಮ್ಮ
ಗಾಳಣ್ಣ ಗೂಳಣ್ಣ ಕೆಂಗುರಿಯ ತಿಪ್ಪಣ
ಕಾದಾಡಿ ಮಡುದಾರೆ ಅಲಗೀಗೆ || ಕಗ್ಗವ ||

08_85_KK-KUH

ಸುತ್ತೇಳ ಜಂಬ್ಯಾಗ ಸುತ್ತು ಜಂಬಿ ಮರಕ
ಪುತ್ರಾನ ತೂಗಿ ಬಿಡುತಾಳೆ | ಕುಲ್ಡಮ್ಮ
ಕರುಪುರದ ಬಾಯಿ ಬಿಡುತಾಳೆ || ಕಗ್ಗವ ||

ಸಾಲೇಳ ಜಂಬ್ಯಾಗ ಸಾಲು ಜಂಬೀ ಮರುಕೆ
ಬಾಲಾನ ತೂಗಿ ಬಿಡುತಾಳೆ | ಕುಲ್ಡಮ್ಮ
ಇಳ್ಳ್ಯಾದ ಬಾಯಿ ಬಿಡುತಾಳೆ || ಕಗ್ಗವ ||

ಶಿಕ್ಕಣ್ಣಿನ ಬಂಟಾರು ಶಿಕ್ಕಾರನ್ನಲುದೀರ
ಹೊಕ್ಕೋರು ಸೀಗೆ ಪೆಳಿಯಾಗೆ | ಏಳಾಜಂಬಿ
ತಿಪ್ಪೀಯ ದನುವ ತಿರಿವಿದ್ಹಂಗ || ಕಗ್ಗವ ||

ಈರಣ್ಣುನ ಬಂಟಾರು ಅರಿಯರನ್ನಲುದೀರ
ಅಡಿಗವರೆ ಸೀಗೆ ಪೆಳಿಯಾಗೆ | ಏಳಾಜಂಬಿ
ಅಡವೀಯ ದನುವ ತಿರಿವಿದ್ಹಂಗ || ಕಗ್ಗವ ||

ಸತ್ತು ಹೋದೊನಿಗೆ ಸತ್ತೆವಿನ್ನೆಲ್ಲೇದು
ಸಪ್ಪಾಲಗಣ್ಣು ನೆಗಿಮಾರಿ | ಈರಣ್ಣ
ಸತ್ಯವು ಪಡುದಾನೆ ಸಿವುನಲ್ಲಿ || ಕಗ್ಗವ ||

ತೀರಿ ಹೋದೊನಿಗೆ ಏರಿಕಿನ್ನೆಲ್ಲೇದು
ಸಾವಾಲಗಣ್ಣು ನೆಗಿಮಾರಿ | ಈರಣ್ಣ
ಏರಿಕೆ ಪಡುದಾನೆ ಸಿವುನಲ್ಲಿ || ಕಗ್ಗವ ||

ಅಪ್ಪೇನೆ ಈರಣ್ಣ ದುಷ್ಟನನ್ನಲುದೀರ
ಹಟ್ಟಿಗೆ ತರಿಸಿದನೇ ಉರುಮೇಯಾ | ಏಳಾಜಂಬಿ
ಹಟ್ಟ್ಯೆಲ್ಲರಾಮ ರೈತಾವ || ಕಗ್ಗವ ||

ಈರಾನೆ ಈರಣ್ಣ ಧೀರನನ್ನಲುದೀರ
ಊರಿಗೆ ತರುಸಿದನೆ ಉರುಮೇಯಾ | ಏಳಾಜಂಬಿ
ಊರೆಲ್ಲರಾಮ ರೈತಾವ || ಕಗ್ಗವ ||

ಎತ್ತು ಮಾರಿದಾವು ಹತ್ಹೊನ್ನು ಐದಾವೆ
ಹೆತ್ತಮ್ಮ ತಾರೇ ಕೈಸಂಚಿ | ಏಳಾಜಂಬಿ
ಅಪ್ಪಯ್ಯಗಲುಗು ತರಬೇಕು || ಕಗ್ಗವ ||

ಹೋರಿ ಮಾರಿದಾವು ಆರ್ಹೊನ್ನು ಐದಾವೆ
ತಾಯಮ್ಮ ತಾರೇ ಕೈಸಂಚಿ | ಏಳಾಜಂಬಿ
ಈರಣ್ಣಗಲುಗು ತರಬೇಕು || ಕಗ್ಗವ ||

ಅತ್ತಲಿದ್ದಲು ಬಂದು ಇತ್ತಲ ಕೆಬ್ಬುಣ ಬಂದು
ಚಿಕ್ಕನೇ ಮರಿಯಣ್ಣ ತಿದಿವೂದಿ | ಶೆಮ್ಮಿಟಿಗ್ಹಿಡದು
ಹುಟ್ಟುಸುತಾನೆ ಹಿರಿಯಲುಗು || ಕಗ್ಗವ ||

ಅಲ್ಲೆ ಇದ್ದುಲು ಬಂದು ಇಲ್ಲೆ ಕೆಬ್ಬುಣ ಬಂದು
ಜಾಣನೇ ಮರಿಯಣ್ಣ ತಿದಿವೂದಿ | ಶೆಮ್ಮಿಟಿಗ್ಹಿಡುದು
ಮಾಡುಸುತಾನೆ ಹಿರಯಲುಗು || ಕಗ್ಗವ ||

ಸುತ್ತೇಳ ಜಂಬ್ಯಾಗ ಶಕ್ಕೆಗಲ್ಲಿನ ಮ್ಯಾಲೆ
ಚಿಕ್ಕನೇ ಮರಿಯಣ್ಣ ತಿದಿವೂದಿ | ಶೆಮ್ಮಿಟಿಗ್ಹಿಡುದು
ಶಿತ್ತಾರದಲುಗು ಕಡಿಸ್ಯಾನೆ || ಕಗ್ಗವ ||

ಸಾಲೇಳ ಜಂಬ್ಯಾಗ ಜಾರಗಲ್ಲಿನ ಮ್ಯಾಗೆ
ಜಾಣ ಮರಿಯಣ್ಣ ತಿದಿವೂದಿ | ಶೆಮ್ಮಿಟಿಗ್ಹಿಡುದು
ರುವ್ವಾರದಲುಗು ಕಡಿಸ್ಯಾನೆ || ಕಗ್ಗವ ||

ಉಪ್ಪೂರಿಗ್ಯಾಗ ಹತ್ತು ಕುಮ್ಮಟನಿಟ್ಟು
ಇಟ್ಟೇ ಸಿರಿಗಂಧ ಬೆವರೂತ | ಭೂಮಣ್ಣ
ಹುಟ್ಟುಸುತಾನೆ ಹಿರಿಯಲುಗು || ಕಗ್ಗವ ||

ವಾವೂರಿಗ್ಯಾಗ ಆರು ಕುಮ್ಮಟನಿಟ್ಟು
ಈರ ಸಿರಿಗಂಧ ಬೆವರೂತ | ಭೂಮಣ್ಣ
ಮಾಡಿಸುತಾನೆ ಹಿರಿಯಲುಗು || ಕಗ್ಗವ ||

ಬಿಚ್ಚಾರೆ ಬಿಚ್ಚಾರೆ ಬಿಚ್ಚ್ಯಾರೆ ನಿನ್ನಲಗು
ಬಿಚ್ಚ್ಯಾರೆ ಅರುದು ಪಡುವಾಲ | ದಿನ್ನ್ಯಾಗ
ಬಿಚ್ಚ್ಯಾರೆ ಈರಣ್ಣುನ ಬಿಳಿಯಲುಗು || ಕಗ್ಗವ ||

ಶೆಲ್ಲ್ಯಾರೆ ಶೆಲ್ಲ್ಯಾರೆ ಶೆಲ್ಲ್ಯಾರೆ ನಿನ್ನಲಗು
ಶೆಲ್ಲ್ಯಾರೆ ನಿನ್ನ ಪಡುವಾಲ | ದಿನ್ನ್ಯಾಗ
ಶೆಲ್ಲ್ಯಾರೆ ಈರಣ್ಣುನ ಬಿಳಿಯಲುಗು || ಕಗ್ಗವ ||

ಹಸಿಯಲುಗು ಬಂದಾವು ಹಸನಾಗು ಈರಣ್ಣ
ಯಸಲೆ ಬಾಸಿಂಗ ತಣಿಗ್ಯಾಗೆ |ಆರುತಿ ಬಂದು
ಹಸನಾಗು ಈರಣ್ಣನ ಅಲಗೀಗೆ || ಕಗ್ಗವ ||

ದುಂಡಲಗು ಬಂದಾವು ಅಂದವಾಗು ಈರಣ್ಣ
ತೊಂಡಲು ಬಾಸಿಂಗ ತಣಿಗ್ಯಾಗೆ | ಆರುತಿ ಬಂದು
ಅಂದವಾಗು ಈರಣ್ಣನ ಅಲಗೀಗೆ || ಕಗ್ಗವ ||