ಆತ್ತಾಲಿತ್ತಾಲಲುಗು ಒಪ್ಪಾನು ಈರಣ್ಣ
ಶಿಕ್ಕಾನೆ ಗೊಂದಿ ದೊರಿಗಾಳು | ಕೈಯಾಗಳ
ಮುತ್ತಿನಲುಗು ನಮ್ಮ ಶೆಲುವಾಗ || ಕಗ್ಗವ ||

ಅಲ್ಲೆ ಇಲ್ಲೆಯ ಅಲುಗು ವಲ್ಲಾನು ಈರಣ್ಣ
ಹಲ್ಲಾನೆಗೊಂದಿ ದೊರಿಗಾಳು | ಕೈಯಾಗಳ
ಹೊನ್ನಲುಗು ನಮ್ಮ ಶೆಲುವಾಗ || ಕಗ್ಗವ ||

ಹತ್ತು ಸಾವಿರದಲುಗು ತೆಕ್ಕಿಗವುಸಿಕಂಡು
ಪಟ್ಟೆದಟ್ಟೀಲಿ ಬಿಗುದಾರೆ | ಈರಮ್ಮಾನ
ಪುತ್ರ ಬಳಬಳುನೆ ಬಳುಕ್ಯಾನು || ಕಗ್ಗವ ||

ಆರು ಸಾವಿರದಲುಗು ತೋಳಿಗವುಸಿಕಂಡು
ಸಾಲೆದಟ್ಟೀಲಿ ಬಿಗುದಾರೆ | ಬಡಮ್ಮಾನ
ಬಾಲ ಬಳಬಳುನೆ ಬಳುಕ್ಯಾನು || ಕಗ್ಗವ ||

ಈರಣ್ಣ ಸಾರಿ ಹೊರಟ ತಾವೂರಿ ಕಮಲಕ್ಕ ದಂಡು ಬಿಟ್ಟು || ದನಿ ||

ಮುತ್ತು ಹಿಡತನ್ನಿ ಮಾಣಿಕವು ಹಿಡತನ್ನಿ
ಮುತ್ತೈದೆರು ನೀರು ಹಿಡತನ್ನಿ | ಈರಣ್ಣಾನ
ಮುತ್ತೀನ ಶೆತ್ತಿರಿಕೆ ನೆರುಳಾಗ || ಈರಣ್ಣ ||

ಹೊನ್ನ ಹಿಡತನ್ನಿ ಶಿನ್ನಾವ ಹಿಡತನ್ನಿ
ಇನೈವರು ನೀರು ಹಿಡತನ್ನಿ | ಈರಣ್ಣಾನ
ನೀಲೀಯ ಶೆತ್ತಿರಿಕೆ ನೆರುಳಾಗ || ಈರಣ್ಣ ||

ಬಾಗಾಲು ಸಾರಿಸಿ ನೀರು ಶೆಳಿಯ ಕೊಟ್ಟು
ಜಡಿಯಾಸ್ಕಾರೆ ಕರಿಮೋಡ | ಏಳಾಜಂಬಿ
ಈರನ್ಹೊರಿಯಾಕ ತಗುದಾರೆ || ಈರಣ್ಣ ||

ಅಂಗಾಳ ಸಾರಿಸಿ ಗಂಗಿ ಶೆಳಿಯಾ ಕೊಟ್ಟು
ಕಂಬುಳಾಸ್ಯಾರೆ ಕರಿಮೋಡ | ಹೊನ್ನಾಬಂಡೆ
ನಿಂಗಾನ್ಹೊರಿಯಾಕ ತಗುದಾರೆ || ಈರಣ್ಣ ||

ಪೆಟ್ಟಿಗ್ಹೊರುವಣ್ಣಾಗ ಬಟಟ್ಮುತ್ತು ಬಾವೂಲಿ
ಪಟ್ಟೆದಟ್ಟೆವುರು ನಡುವೀಲಿ | ಈರಣ್ಣಾನ
ವಪ್ಪುಳ ಮಗನೆ ನಡಿಮುಡಿ || ಈರಣ್ಣ ||

ದೇವರ್ಹೊರುವಣ್ಣಾಗ ಮನಮುತ್ತು ಬಾವೂಲಿ
ಸಾಲೆದಟ್ಟುವುರು ನಡುವೀಲಿ | ನಿಂಗಣ್ಣಾನ
ಆಯವುಳ್ಳ ಮಗನೆ ನಡಿಮುಡಿ || ಈರಣ್ಣ ||

ಒಪ್ಪಾಕ ಈರಣ್ಣ ಶೆಕ್ರಕಾಂತನ್ಹೊದ್ದ
ಜೊತ್ತೆರಡೆ ಮುತ್ತು ಕಿವಿಗಿಟ್ಟ | ಈರಣ್ಣಾನ
ವಪ್ಪವುಳ್ಳ ಮಗನೆ ನಡಿಮುಡಿ || ಈರಣ್ಣ ||

ಆಯಾಕ ನಿಂಗಣ್ಣ ಸೂರದೆಕಾಂತನ್ಹೊದ್ದ
ಜೋಡೆರೆಡೆ ಮುತ್ತು ಕಿವಿಗಿಟ್ಟ | ನಿಂಗಣ್ಣಾನ
ಆಯವುಳ್ಳ ಮಗನೆ ನಡಿಮುಡಿ || ಈರಣ್ಣ ||

ಕೆಟ್ಟಗಣ್ಣಯ್ಯ ಕಟ್ಟೆಗ್ಹೋಗಲುವಾಗ
ರಟ್ಟ್ಯಾಳ ಕಾಣೆ ಮಡಿವಾಳ | ಈರಣ್ಣಾಗೆ
ಪಟ್ಟೇದ ಸೀರೆ ನಡಿಮುಡಿ || ಈರಣ್ಣ ||

ಕೆಂಗಗಣ್ಣಯ್ಯ ಗಂಗೀಗ್ಹೋಗಲುವಾಗ
ಗಂಭೀರ ಕಾಣೆ ಮಡಿವಾಳ | ನಿಂಗಣ್ಣಾಗೆ
ಗಂಜೀಯ ಸೀರೆ ನಡಿಮುಡಿ || ಈರಣ್ಣ ||

ಹೊಳೆಗ್ಹೋಗು ಅಂದಾರೆ ಕಳೆಯವಾದ ಈರಣ್ಣ
ಕಡಿವಾಣ ತಂದ ಕುದುರೀಗೆ | ಪಂಜನಿಡುವ
ಕಂದ ನೀ ಮುಂದೆ ನಡಿಯಂದ || ಈರಣ್ಣ ||

ಗಂಗೀಗ್ಹೋಗು ಅಂದಾರೆ ಕಳೆಯವಾದ ನಿಂಗಣ್ಣ
ಗೊಂಡೇವು ತಂದ ಕದುರೀಗೆ | ಪಂಜನಿಡುವ
ಬಾಲ ನೀ ಮುಂದೆ ನಡಿಯಂದ || ಈರಣ್ಣ ||

ಹತ್ತು ತೆಂಗಿನಕಾಯಿ ಪುಟ್ಟಿಗೆ ತುಂಬಿಕೊಂಡು
ಮಾತರಿಯದವುರ್ನ ಕರಕಂಡು | ಈರಣ್ಣ
ತೂತ್ತರಿಸಿ ಹೊಳಿಯ ಇಳುದಾನೆ || ಈರಣ್ಣ ||

ಆರೆ ತೆಂಗಿನಕಾಯಿ ಗೂಡಿಗೆ ತುಂಬಿಕೊಂಡು
ಮುಂದರಿಯದವುರ್ನ ಕರಕಂಡು | ನಿಂಗಣ್ಣ
ನಂಬೂಸಿ ಹೊಳಿಯ ಇಳುದಾನೆ || ಈರಣ್ಣ ||

ಕಾಸಿ ಮ್ಯಾಲೆ ಕಾಸಿ ದೇಸಾದ ನಡುಕಟ್ಟು
ಈಸ್ಟೂರೀರಣ್ಣ ಜಲದಿಗೆ | ಹೋಗಲುವಾಗ
ಕಾಸ್ಯಾಗಳ ಲಿಂಗ ಹೊಳುದಾವೆ || ಈರಣ್ಣ ||

ಅಂಗಿ ಮ್ಯಾಲಂಗಿ ಬಂಗಾರುದ ನಡುಕಟ್ಟು
ಜಂಗಮ ನಿಂಗಣ್ಣ ಜಲದಿಗೆ | ಹೋಗಲುವಾಗ
ಅಂಗ್ಯಾಗಳ ಲಿಂಗ ಹೊಳುದಾವೆ || ಈರಣ್ಣ ||

ಮುತ್ತು ಹೊಳುದಾವೆ ಮಾಣಿಕವು ಹೊಳುದ್ಹಂಗೆ
ಶಿಕ್ಕ ಮಾವುಗಳ ಯಗಲಮ್ಯಾಲೆ | ಈರಣ್ಣ
ಮುತ್ತೆ ಶಿನ್ನವಾಗಿ ಹೊಳುದಾನೆ || ಈರಣ್ಣ ||

ಹಕ್ಕಿ ಹಾರುದು ಗುಡ್ಡ ಪಕ್ಷಿ ತೂರುದು ಗುಡ್ಡ
ಹೊಕ್ಕೆ ಮಾನ್ಯವರು ಸುಳಿಯಾದ | ಗುಡ್ಡದ ಮ್ಯಾಲೆ
ಪಟ್ಟೆದಟ್ಯಾವರ ಅರಮನೆ | ವಳಗಿರುವ
ಅಪ್ಪ ಈರಣ್ಣಗೆ ಶಿವಪೂಜೆ || ಈರಣ್ಣ ||

ಕಾಗೆ ಹಾರುದು ಗುಡ್ಡ ಗೂಬೆ ತೂರುದು ಗುಡ್ಡ
ಹೋಗಿ ಮಾನ್ಯವರು ಸುಳಿಯಾದ | ಗುಡ್ಡದ ಮ್ಯಾಲೆ
ಸಾಲ್ಲೆದಟ್ಟ್ಯಾರ ಅರಮನೆ | ವಳಗಿರುವ
ಸ್ವಾಮಿ ನಿಂಗಣ್ಣಗೆ ಶಿವಪೂಜೆ || ಈರಣ್ಣ ||

ಹಟ್ಟಿ ಬಿಟ್ಹೋಗುವಾಗ ಏನಂದ ಈರಣ್ಣ
ಮಕ್ಕಳು ಜತುನ ಮನಿ ಜತುನ | ಏಳಾಜಂಬಿ
ದಿಕ್ಕಾಯ ನೋಡಿ ಬರುತೀನಿ || ಈರಣ್ಣ ||

ಊರು ಬಿಟ್ಹೋಗುವಾಗ ಏನಂದ ನಿಂಗಣ್ಣ
ಬಾಲಾರು ಜತುನ ಮನಿ ಜತುನ | ಹೊನ್ನಾಬಂಡಿ
ದೂರಾಯ ನೋಡಿ ಬರುತೀನಿ || ಈರಣ್ಣ ||

ಬೀಗಾ ಬರುತಾನಂದು ಬೀಸಣಿಕಿ ಕಳುವೀದೆ
ಬೀಗ ಎತ್ತಯ್ಯ ಬರಲಿಲ್ಲ ಅಂದು | ಈರಣ್ಣ
ಬೀಸಣಿಕಿ ಸೋಲು ಕಳುವ್ಯಾನೆ || ಈರಣ್ಣ ||

ನೆಂಟಾ ಬರುತಾನಂದು ಗಂಟುಮಾಲೆ ಕಳುವ್ಯಾನೆ
ನೆಂಟ ಎತ್ತಯ್ಯ ಬರಲಿಲ್ಲ ಅಂದು | ನಿಂಗಣ್ಣ
ಗಂಟುಮಾಲೆ ಸೋಲು ಕಳುವ್ಯಾನೆ || ಈರಣ್ಣ ||

ಅಗ್ಗುಣಿಲ್ಲದ ಕೆರಿಗೆ ಎದ್ಹೋದ ಈರಣ್ಣ
ಅಗ್ಗುಣುಂಟು ಮರುದ ನೆರಳುಂಟು | ಗುಡ್ಡದ ಮ್ಯಾಲೆ
ಅಗ್ಗುಣಿಯೆಂಬ ದೇವಿ ಕೆರಿಯುಂಟು || ಈರಣ್ಣ ||

ನೀರು ಇಲ್ಲದ ಕೆರಿಗೆ ತಾನ್ಹೋದ ನಿಂಗಣ್ಣ
ನೀರುಂಟು ಮರುದ ನೆರಳುಂಟು | ಗುಡ್ಡದ ಮ್ಯಾಲೆ
ಅಗ್ಗುಣಿಯೆಂಬ ದೇವಿ ಕೆರಿಯುಂಟು || ಈರಣ್ಣ ||

ಅಟ್ಟು ಬೆಟ್ಟದಾಗೆ ಕಟ್ಟಿರುವ ಕಣಿಮ್ಯಾಗೆ
ದುತ್ತೆ ನೀರೆಂಬ ಹೊಳಿಯಾಗ | ಈರಣ್ಣ
ಮುತ್ತೀನ ಗುಡಾರ ವಯಿಸ್ಯಾನೆ || ಈರಣ್ಣ ||

ಹಳ್ಳ ಕೊಳ್ಳದಾಗೆ ಮಲ್ಲೀಗೆ ವನುದಾಗೆ
ಹುಲ್ಲೆ ನೀರೆಂಬ ಹೊಳಿಯಾಗ | ನಿಂಗಣ್ಣ
ಮಲ್ಲಿಗೆ ಗುಡಾರ ವಯಿಸ್ಯಾನೆ || ಈರಣ್ಣ ||

ಭೂಪ ಇಳುದುತಾವ ಧೂಪಾದ ಮರನ್ಹುಟ್ಟಿ
ಊಕೂರುಸುತಾವೆ ಹುಲಿಕರಡಿ | ನಿಂಗಣ್ಣ
ತೂತ್ತುರಿಸಿ ಹೊಳಿಯ ಇಳುದಾನೆ || ಈರಣ್ಣ ||

ನಿಂಗ ಇಳುದುತಾವ ಗಂಧಾದ ಮರನ್ಹುಟ್ಟಿ
ರಂಗಳುಸುತಾವೆ ಹುಲಿಕರಡಿ | ನಿಂಗಣ್ಣ
ನಂಬೂಸಿ ಹೊಳಿಯ ಇಳುದಾನೆ || ಈರಣ್ಣ ||

ನಿಂಬೆ ಹಣ್ಣೀನ್ಹಂಗೆ ತುಂಬ್ಹರಿಯೆ ಗಂಗಮ್ಮಾ
ಇಂಬು ಬಿಡುನನ್ನ ಗುರುವೀಗೆ | ಈರಣ್ಣಾನ
ಕಂಡುಗದ ಗೆಜ್ಜೆ ತೊಳಿಯಾಕೆ || ಈರಣ್ಣ ||

ಬಾಳೆ ಹಣ್ಣೀನ್ಹಂಗೆ ಬಾಗ್ಹರಿಯೆ ಗಂಗಮ್ಮಾ
ಬಾಜು ಬಿಡುನನ್ನ ಗುರುವೀಗೆ | ನಿಂಗಣ್ಣಾನ
ನಾಗುಳುದ ಗೆಜ್ಜೆ ತೊಳಿಯಾಕೆ || ಈರಣ್ಣ ||

ಕುದುರೆ ಬರುತಾವಂದು ಕುಂದುರುಪಿ ನಡಿಗ್ಯಾವೆ
ಕುದುರಲ್ಲ ನನ್ನ ಮನಿಸ್ವಾಮಿ | ಈರಣ್ಣ
ಕುರಿಯ್ಹಟ್ಟಿಗ್ಹೋಗಿ ಬರುತಾನೆ || ಈರಣ್ಣ ||

ಆನೆ ಬರುತಾವಂದು ಅಂದುಲುವ ನಡಿಗ್ಯಾವೆ
ಆನೆಲ್ಲ ನನ್ನ ಮನಿಸ್ವಾಮಿ | ನಿಂಗಣ್ಣ
ಆನ್ಹಟ್ಟಿಗ್ಹೋಗಿ ಬರುತಾನೆ || ಈರಣ್ಣ ||

ಗಂಗೀಯ ಪಾಲಿಸಯ್ಯ
ಗಂಗಿಯಾ ಪಾಲಿಸೋ ಶಿವುನೆ | ನಾರಾಯಣ
ಗಂಗಮ್ಮನ ಪಾಲಿಸಯ್ಯ || ದನಿ ||

ಕಡ್ಲೇಯ ಕಾಳ್ಹಂಗ ಕಡದು ಕಟ್ಟೇ ಮ್ಯಾಲೆ
ಪಗಡೀಯನಾಡೋ ಹಿರಿಯಾರು | ಹೋಗೋನು ಬನ್ನಿ
ಅರದಿ ಗಂಗಮುನ ಕರೂವಾಕೆ || ಗಂಗೀಯ ||

ಉದ್ದೀನ ಕಾಳ್ಹಂಗ ತಿದ್ದಿದ ಕಟ್ಟೇ ಮ್ಯಾಲೆ
ಉದ್ದ್ಯೋಗಮಾಡೊ ಹಿರಿಯಾರು | ಹೋಗೋನು ಬನ್ನಿ
ಭದ್ರೆ ಗಂಗಮುನ ಕರೂವಾಕೆ || ಗಂಗೀಯ ||

ಹಕ್ಕೀಗೆ ನೀರಿಲ್ಲ ಪಕ್ಷೀಗೆ ನೀರಿಲ್ಲ
ಶಿಕ್ಕ ಮಕ್ಕಳಿಗೆ ಬಲುಗೋಳು | ಶಿವಗಳಿರಾ
ಒಪ್ಪದ್ಹೆಂಡತಿಯ ಖಳುವಯ್ಯ || ಗಂಗೀಯ ||

ನಾನೇನ ಖಳುವಾಕೆ ನಾನೇನಂದೊನಲ್ಲ
ಅಂದೊವ್ಳು ನೀನ್ಹೋಗಿ ಕರೆತಾರೆ || ಗಂಗೀಯ ||

ಆವೀಗೆ ನೀರಿಲ್ಲ ಗೋವಿಗೆ ನೀರಿಲ್ಲ
ಆಡ ಮಕ್ಕಳುದು ಬಲುಗೋಳು | ಶಿವಗಳಿರಾ
ಮೋಹದ್ಹೆಂಡತಿಯ ಖಳುವಯ್ಯ || ಗಂಗೀಯ ||

ನಾನೇನು ಖಳುವಾಕೆ ನಾನೇನಂದೋನಲ್ಲ
ಅಂದೊವ್ಳು ನೀನ್ಹೋಗಿ || ಗಂಗೀಯ ||

ಆರೇರ ಕೇರಿಗ್ಹೋಗಿ ಆರು ಕೊಡ ನೀರು ತಂದು
ಕಡಲೀಯ ನೆನೆವೆ ಸಿರಿಗೌರಿ | ನಾವೂ ನೀವು
ದೇವಿ ಗಂಗಮುನ ಕರೆಯೋನೆ || ಗಂಗೀಯ ||

ಜಂಗಮುರ ಕೇರಿಗ್ಹೋಗಿ ತಂಬಿಗೆ ನೀರು ತಂದು
ತಮ್ಮುಟವೆ ಕರುಸೆ ಸಿರಿಗೌರಿ | ನಾವೂ ನೀವು
ದೇವಿ ಗಂಗಮುನ ಕರೆಯೋನೆ || ಗಂಗೀಯ ||

ಒಕ್ಕಾಲು ಕೇರೇರು ಚಿಕ್ಹೆಣ್ಣ ಮಕ್ಕಳಿರಾ
ಕಪ್ಪೆ ಬಂಗಾರ ನಾಲದಿಡಿರೆ | ನಾವೂ ನೀವು
ದೇವಿ ಗಂಗಮುನ ಕರೆಯೋನೆ || ಗಂಗೀಯ ||

ಆರೇರ ಕೇರೇರು ದೊಡ್ಹೆಣ್ಣು ಮಕ್ಕಳಿರಾ
ವಾಲೆ ಬಂಗಾರ ನಾಲದಿಡಿರೆ | ನಾವೂ ನೀವು
ದೇವಿ ಗಂಗಮುನ ಕರೆಯೋನೆ || ಗಂಗೀಯ ||

ಪಟ್ಟೇದ ಸೀರ್ಯೋರು ಕಪ್ಪಿನ ಬಟ್ಟಿನೋರು
ಮುಕ್ಕಮ್ಮ ಎಂಬ ಶರಣೋರು | ಹೋಗೋನು ಬನ್ನಿ
ದೇವಿ ಗಂಗಮುನ ಕರೆಯೋಕೆ || ಗಂಗೀಯ ||

ಸಾಲ್ಲೇದ ಸೀರ್ಯೋರು ಸಾದಿನ ಬಟ್ಟಿನೋರು
ನೀಲಮ್ಮ ಎಂಬ ಶರಣೋರು | ಹೋಗೋನು ಬನ್ನಿ
ದೇವಿ ಗಂಗಮುನ ಕರೆಯೋಕೆ || ಗಂಗೀಯ ||

ಗಂಜೀಯ ಸೀರ್ಯೋರು ಗಂಧದ ಬಟ್ಟಿನೋರು
ಗಂಗಮ್ಮ ಎಂಬ ಶರಣೋರು | ಹೋಗೋನು ಬನ್ನಿ
ದೇವಿ ಗಂಗಮುನ ಕರೆಯೋಕೆ || ಗಂಗೀಯ ||

ಪಟ್ಟೇದ ಸೀರ್ಯೋರು ಇಪ್ಪತ್ತೊಂದ್ಹೆಣ್ಣುಗಳು
ಮತ್ತವರ ನಡುವೆ ಗೌರಮ್ಮ | ಹೊರುಟಾಳೆ
ತಟ್ಟೆ ಬಟ್ಟುಲುವ ಹಿಡುಕೊಂಡು || ಗಂಗೀಯ ||

ಸಾಲ್ಯದ ಸೀರ್ಯೋರು ನಲವತ್ತೊಂದ್ಹೆಣ್ಣುಗಳು
ತಾನವರ ನಡುವೆ ಗೌರಮ್ಮ | ಹೊರುಟಾಳೆ
ತಾಟು ಬಟ್ಟಲುವ ಹಿಡುಕೊಂಡು || ಗಂಗೀಯ ||

ನೆನಿಯಕ್ಕಿ ನೆನುಗಡುಲೆ ಗೊನಿಯ ಬಾಳೇಯ್ಹಣ್ಣು
ಅನುವಾಗಿ ಬೆಳುದ ಬಿಳಿಯಾಲೆ | ಕಬ್ಬಿನ ಕೋಲು
ಹರಿದು ಸಾಗುರಕೆ ನಡುದಾವೆ || ಗಂಗೀಯ ||

ಅಕ್ಕುಸಿ ಅಂಗುದಾರ ವಡೆವ ತೆಂಗಿನಕಾಯಿ
ಹೆಚ್ಚಾಗಿ ಬೆಳುದ ಬಿಳಿಯಾಲೆ | ಕಬ್ಬಿನ ಕೋಲು
ಹರಿದು ಸಾಗುರಕೆ ನಡುದಾವೆ || ಗಂಗೀಯ ||

ಕಟ್ಟೆಯ ಗಂಗಮ್ಮಾಗೆ ಇಟ್ಟುಸಿಗಳೀ ಉಂಡೆ
ಮುಕ್ಕಣ್ಣಾಗಾರು ಬಿಳಿಯಾಲೆ | ತಂದೈದೀವಿ
ಕಟ್ಟೆಯ ಗಂಗಮ್ಮ ದ್ರಾಯಾವಾಗು || ಗಂಗೀಯ ||

ಹಳ್ಳುದ ಗಂಗಮ್ಮಾಗೆ ಎಳ್ಳುಸಿಗಳೀ ಉಂಡೆ
ಮಲ್ಲಯ್ಯಗಾರು ಬಿಳಿಯಾಲೆ | ತಂದೈದೀವಿ
ಹಳ್ಳುದ ಗಂಗಮ್ಮಾ ದ್ರಾಯವಾಗು || ಗಂಗೀಯ ||

ಹಟ್ಟೀಯ ಬಳುಕಳ್ಳೆ ಬೆಟ್ಟಾವ ಬಳುಕಳ್ಳೆ
ಕಟ್ಟೇಯ ನೀರು ಬಳುಕಳ್ಳಿ | ಗಂಗಮ್ಮ
ಯತ್ತುರುಸೆ ನಿನ್ನ ತವರೂರು || ಗಂಗೀಯ ||

ಹಳ್ಳಾವ ಬಳುಕಳ್ಳೆ ಕೊಳ್ಳವ ಬಳುಕಳ್ಳೆ
ಶೆಲ್ಲೀದ ನೀರು ಬಳುಕಳ್ಳೆ | ಗಂಗಮ್ಮ
ಏರೂಸೆ ನಿನ್ನ ತವರೂರು || ಗಂಗೀಯ ||

ಹಟ್ಟೀಯ ಕೆಸರಂದು ಸಿಟ್ಟೂನೆಗೊಂಡ್ಯಲ್ಲೆ
ಶಿಕ್ಕಮಕ್ಕಳನ ಕರಸಿ ಹೊಡಸೀದೆ | ಸಿರಿಗೌರಿ
ಹೊಡದೋವ್ಳು ನೀನ್ಹೋಗಿ ಕರತಾರೆ || ಗಂಗೀಯ ||

ಓಣೀಯ ಕೆಸರಂದು ಬೇಜಾರುಗೊಂಡ್ಯಲ್ಲೆ
ಆಡಮಕ್ಕಳನ ಕರಸಿ ಹೊಡಸೀದೆ | ಸಿರಿಗೌರಿ
ಹೊಡದೋವ್ಳು ನೀನ್ಹೋಗಿ ಕರುತಾರೆ || ಗಂಗೀಯ ||

ತಂಗಿ ಗಂಗಾ ನಮ್ಮಾ ತಂದೆ ಒಬ್ಬಾನಲ್ಲೆ
ನಂದಿಗೀಸ್ಪುರರು ಹಗರಣವ | ಮಾಡ್ಯಾರು
ವಂದಾಗನ ಬಾರೆ ಸಿರಿಗಂಗಿ ನನುಮ್ಯಾಲೆ
ನೀನಾಳುವಂತೆ ಪುರುಸಾನ || ಗಂಗೀಯ ||

ಶಿಕ್ಕನೆ ಮರುಳಾಗೆ ಅಕ್ಕ ಗೌರಮ್ಮ ಕುಂತು
ವಕ್ಕು ತೋಡ್ಯಾಳೆ ಶಲಿಮೇಯ | ಪರಮೇಸ್ವರುನ
ಸತ್ಯ ದೊಡ್ಡೋಳೇ ದ್ರಯಾವಾಗು || ಗಂಗೀಯ ||

ಆದಾ ಮರುಳಾಗೆ ತಾಯಿ ಗೌರಮ್ಮ ಕುಂತು
ತಾನೆ ತೋಡ್ಯಾಳೆ ಶಲಿಮೇಯ | ಪರಮೇಸ್ವರುನ
ದೇವಿ ದೊಡ್ಡವಳೆ ದ್ರಯಾವಾಗು || ಗಂಗೀಯ ||

ಆಕೇರಿ ರನ್ನಾವೆ ಈಕೇರಿ ಶಿನ್ನಾವೆ
ಲೋಕ ದಗ್ಗುಳುಸಿ ಅರುವೋಳೆ | ಗಂಗಮ್ಮಾನ
ಜ್ಯಾತೊಳ್ಳೆದಂದೆ ಶಿವುತಂದ || ಗಂಗೀಯ ||

ಹೊಲಗೇರಿಯನ್ನಾದೆ ಸಲಗೇರಿಯನ್ನಾದೆ
ಜಲವೆ ದಗ್ಗುಳುಸಿ ಅರುವೋಳೆ | ಗಂಗಮ್ಮಾನ
ಕುಲುವಳ್ಳೆದಂದೆ ಶಿವುತಂದ || ಗಂಗೀಯ ||

ಒಂದೇಲೆ ಒಂದಡಿಕೆ ಒಂದು ಬಟ್ಟಿನ ಗಂಧ
ಒಂದು ನೂರಡಿಕೆ ಬಿಳಿಯಾಳೆ | ಬುಕ್ಕಿಟ್ಟು
ಬಂದಾವೆ ಗಂಗ ನಿಮ್ಮಶಾಜ | ನಮ್ಮಕೊಡಕೆ
ಬಂದೆ ತೋರಮ್ಮ ಉದುಕಾವ || ಗಂಗೀಯ ||

ಎರಡೇಲೆ ಯರಡಡಿಕೆ ಎರಡು ಬಟ್ಟಿನ ಗಂಧ
ಎರಡು ನೂರಡಿಕೆ ಬಿಳಿಯಾಲೆ | ಬುಕ್ಕಿಟ್ಟು
ಆದಾವೆ ಗಂಗ ನಿಮ್ಮ ಶಾಜ | ನಮ್ಮ ಕೊಡಕೆ
ಹೋಗಿ ತೋರಮ್ಮ ಉದುಕಾವ || ಗಂಗೀಯ ||

ಮೂರೇಲೆ ಮೂರಡಿಕೆ ಮೂರು ಬಟ್ಟಿನ ಗಂಧ
ಮೂರು ನೂರಡಿಕೆ ಬಿಳಿಯಾಲೆ | ಬುಕ್ಕಿಟ್ಟು
ಬಂದಾನೆ ಗಂಗಾ ನಿಮ್ಮ ಶಾಜ | ನಮ್ಮ ಕೊಡಕೆ
ಬಂದೆ ತೋರಮ್ಮ ಉದುಕಾವ || ಗಂಗೀಯ ||

ನಿಂಬೆ ನಿಂಬೇಗುಂಟ ಬಂದ ಮುತ್ತೈದೇರು
ನಿಂಬೇಯ ಹೂವು ಗುಡಿಸ್ಯಾರೆ | ಗುಡಿಸಿ ಗುಡ್ಡೇ ಮಾಡಿ
ನಂಬೂಸಿ ಗಂಗಾನ ಕರುದಾರೆ || ಗಂಗೀಯ ||

ಬಾಳೆ ಬಾಳೇಗುಂಟ ಹೋದ ಮುತ್ತೈದೇರು
ಬಾಳೆಯ ಹೂವು ಗುಡಿಸ್ಯಾರೆ | ಗುಡಿಸಿ ಗುಡ್ಡೇ ಮಾಡಿ
ಭಾವೀಸಿ ಗಂಗಾನ ಕರುದಾರೆ || ಗಂಗೀಯ ||

ಹಿಂದಲ ಕೋಡಿನ ಗಂಗಿ ಮುಂದಲ ಕೋಡಿಗೆ ಬಾರೆ
ಹ್ಯಾಂಗಮ್ಮ ಗಂಗಿ ಬಡುವಾದೆ | ನಿಮ್ಮಳಿಯಾಗ
ನಿಂಗಣ್ಣೈದಾನೆ ಕಳುವಮ್ಮ || ಗಂಗೀಯ ||

ಆಚೆ ಕೋಡಿನ ಗಂಗಿ ಈಚೆ ಕೋಡಿಗೆ ಬಾರೆ
ಯಾಕಮ್ಮ ಗಂಗಿ ಬಡುವಾದೆ | ನಿಮ್ಮಳಿಯಾಗ
ಈರಣ್ಣೈದಾನೆ ಕಳುವಮ್ಮ || ಗಂಗೀಯ ||

ಈರಣ್ಣ ಸಾರಿ ಹೊರಟ ತಾವೂರಿ ಕಮಲಕ್ಕ ದಂಡು ಬಿಟ್ಟ || ದನಿ ||

ಅಪ್ಪಾನು ಹೋರುಬಾರ ತುಪ್ಪುಂಡ ಮೈಯೋನೆ
ಸುತ್ತಗೊಂಬಿದಟ್ಟಿ ಸೆರುಗೀನ | ಈರಣ್ಣ
ಅಪ್ಪನಂದಲುವ ಹೋರುಬಾರ || ಈರಣ್ಣ ||

ದ್ಯಾವಾರು ಹೋರುಬಾರ ಹಾಲುಂಡ ಮೈಯೋನೆ
ಸಾಲಗೊಂಬಿದಟ್ಟಿ ಸೆರುಗೀನ | ಈರಣ್ಣ
ದೇವರಂದಲುವ ಹೋರುಬಾರ || ಈರಣ್ಣ ||

ಪೆಟ್ಟಿಗ್ಹೋರುವಣ್ಣಾಗ ಪಟ್ಟೆದಚ್ಚೂಡಿಲ್ಲ
ರಟ್ಟಿಗೆ ತಾಯಿತ | ಮಣಿಗಳಿಲ್ಲಾವೆಂದು
ಪುತ್ರನ ಈರಮ್ಮ ಕಳುವಾಲು || ಈರಣ್ಣ ||

ದೇವನ್ಹೋರುವಣ್ಣಾಗ ಸಲ್ಲೇದಚ್ಚೂಡಿಲ್ಲ
ತೋಳಿಗೆ ತಾಯಿತ | ಮಣ್ಣಿಗಳಿಲ್ಲಾವೆಂದು
ಬಾಲೂನ ಬಸಮ್ಮ ಕಳುವಾಲು || ಈರಣ್ಣ ||

ಪೆಟ್ಟಿಗ್ಹೊರುವಣ್ಣಾಗೆ ಪಟ್ಟೆದಚ್ಚಡೈದಾವೆ
ರಟ್ಟಿಗೆ ತಾಯಿತ | ಮಣಿಗಳು ಐದಾವೆ
ಪುತ್ರನ್ಹೋರಾಕ ಕಳುವಮ್ಮ || ಈರಣ್ಣ ||