ದೇವನ್ಹೋರುವಣ್ಣಾಗೆ ಸಾಲ್ಲೆದಚ್ಚೂಡೈದಾವೆ
ತೋಳಿಗೆ ತಾಯಿತ | ಮಣಿಗಳು ಐದಾವೆ
ಬಾಲನ್ಹೋರಾಕ ಕಳುವಮ್ಮ || ಈರಣ್ಣ ||

ದೇವಾರು ಹೊರಿಸ್ಯಾರೆ ಬಾಲಾ ಕ್ವಾಮಾರಾಗೆ
ದೇವಕ್ಕ್ಯರ್ಹಡುದ ಮಗನೀಗೆ | ಈರಣ್ಣಾಗೆ
ದೇವರ್ಹೊರಿಸ್ಯಾರೆ ಹಿರಿಯಾರು || ಈರಣ್ಣ ||

ಪೆಟ್ಟೀಗೆ ಹೊರಿಸ್ಯಾರೆ ಅಚ್ಚಗ್ವಾಮಾರಾಗೆ
ಮುತ್ತಯ್ಯದಾರ್ಹಡುದ ಮಗನೀಗೆ | ಈರಣ್ಣಾಗೆ
ಪೆಟ್ಟಿಗ್ಹೊರಿಸ್ಯಾರೆ ಹಿರಿಯಾರು || ಈರಣ್ಣ ||

ಒಪ್ಪಾಕೆ ಈರಣ್ಣ ಶಕ್ರಕಾಂತೆನ್ಹೊದ್ದ
ಜೊತ್ತೆರಡು ಮುತ್ತು ಕಿವಿಗಿಟ್ಟ | ಈರಣ್ಣಾನ
ಒಪ್ಪುವುಳ್ಳ ಮಗನೆ ನಡಿಮುಂದೆ || ಈರಣ್ಣ ||

ಆಯಾಕೆ ನಿಂಗಣ್ಣ ಸೂರದೆ ಕಾಂತೆನ್ಹೊದ್ದ
ಜೊಡೆರಡು ಮುತ್ತು ಕಿವಿಗಿಟ್ಟ | ನಿಂಗಣ್ಣಾನ
ಆಯುವುಳ್ಳ ಮಗನೆ ನಡಿಮುಂದೆ || ಈರಣ್ಣ ||

ಪೆಟ್ಟಿಗ್ಹೋರುವಣ್ಣಾಗೆ ಬಟಮುತ್ತು ಬಾವೂಲಿ
ಪಟ್ಟೆದಟ್ಟೆವರಾ ನೆಡುವೀಗೆ | ಈರಣ್ಣಾನ
ಒಪ್ಪವುಳ್ಳ ಮಗನೆ ನಡಿಮುಂದೆ || ಈರಣ್ಣ ||

ದೇವರ್ಹೋರುವಣ್ಣಾಗೆ ಮನಮುತ್ತು ಬಾವೂಲಿ
ಸಾಲೆದಟ್ಟವರ ನೆಡುವೀಗೆ | ನಿಂಗಣ್ಣಾನ
ಆಯುವುಳ್ಳ ಮಗನೆ ನಡಿಮುಂದೆ || ಈರಣ್ಣ ||

ಅಗ್ಗೂಣಿ ಮಿಂದಾನೆ ಸದ್ದೀಕೆ ಧರಿಸ್ಯಾನೆ
ಸದ್ದೀಕೆ ಮುಂದಾಕೆ ಮಣಿಮುತ್ತು | ನಡುವಾಕೆ
ದೊಡ್ಡ ರುದ್ರಾಕ್ಷಿ ಧರಿಸ್ಯಾನೆ || ಈರಣ್ಣ ||

ನೀರೇನೆ ಮಿಂದಾನೆ ದಾರ್ಹೂವ ತರಿಸ್ಯಾನೆ
ದಾರದ ಮುಂದಾಕೆ ಮುಣಿಮುತ್ತು | ನಡುವಾಕೆ
ಜೋಡ ರುದ್ರಾಕ್ಷಿ ಧರಿಸ್ಯಾನೆ || ಈರಣ್ಣ ||

ಕೆಟ್ಟಗಣ್ಣಯ್ಯ ಕಟ್ಟಿಗ್ಹೋಗುಲುವಾಗ
ರೆಟ್ಟಾಳ ಕಾಣೆ ಮಡಿವಾಳ | ಈರಣ್ಣಾಗ
ಪಟ್ಟೇದ ಸೀರೆ ನೆಡೆಮುಡಿ || ಈರಣ್ಣ ||

ಕೆಂಗಣ್ಣಯ್ಯ ಗಂಗಿಗ್ಹೋಗುಲುವಾಗ
ಗಂಭೀರ ಕಾಣೆ ಮಡಿವಾಳ | ನಿಂಗಣ್ಣಾಗ
ಗಂಜೀಯ ಸೀರೆ ನೆಡೆಮುಡಿ || ಈರಣ್ಣ ||

ಹತ್ತುಸಾವುರು ಅಲಗು ತೆಕ್ಕೀಗವುಸಿಕೊಂಡು
ಪಟ್ಟೆದಟ್ಟೀಲಿ ಬಿಗುದಾರೆ | ಈರಮ್ಮಾನ
ಪುತ್ರ ಬಳುಬಳುನೇ ಬಳಿಕ್ಯಾನೆ || ಈರಣ್ಣ ||

ಆರುಸಾವುರು ಆಲುಗು ತೋಳಿಗವುಸಿಕೊಂಡು
ಸಾಲೆದಟ್ಟೀಲಿ ಬಿಗುದಾರೆ | ಬಡಮ್ಮಾನ
ಬಾಲ ಬಳುಬಳುನೆ ಬಳಿಕ್ಯಾನೆ || ಈರಣ್ಣ ||

ಗಂಗಿಗ್ಹೋಗಂದಾರೆ ಅಂದುವಾದ ಈರಣ್ಣ
ಗೊಂಡೇವ ತಂದ ಕುದುರೀಗೆ | ಪಂಜುನಿಡುವ
ಕಂದಾ ನೀ ಮುಂದೆ ನಡಿಯಂದ || ಈರಣ್ಣ ||

ಹೊಳಿಗ್ಹೋಗಂದಾರೆ ಕಳಿಯವಾದ ನಿಂಗಣ್ಣ
ಕಡಿವಾಣ ತಂದ ಕುದುರೀಗೆ | ಪಂಜುನಿಡುವ
ಕಂದಾ ನೀ ಮುಂದೆ ನಡಿಯಂದ || ಈರಣ್ಣ ||

ಹತ್ತು ತೆಂಗಿನಕಾಯಿ ಪುಟ್ಟೀಗೆ ತುಂಬಿಕೊಂಡು
ಮಾತರಿಯದರುನ ಕರಕೊಂಡು | ಈರಣ್ಣ
ತೂತುರಿಸಿ ಹೊಳಿಯಾ ಇಳದಾನೆ || ಈರಣ್ಣ ||

ಆರು ತೆಂಗಿನಕಾಯಿ ಗೂಡಿಗೆ ತುಂಬಿಕೊಂಡು
ಮುಂದರಿಯದರುನ ಕರಕೊಂಡು | ನಿಂಗಣ್ಣ
ನಂಬೂಸಿ ಹೊಳಿಯಾ ಇಳದಾನೆ || ಈರಣ್ಣ ||

ಕಟ್ಟೀಗೆ ಹೋಗುಲುವಾಗ ಬಿಟ್ಟಾವು ಪಾದುದ ಗೆಜ್ಜೆ
ಉಟ್ಟಂಗದುಡಿಗೆ ಸೋಡಿಲಾವೆ | ಈರಣ್ಣಾನ
ಕಟ್ಟೀಗೆ ಹೋಗೋ ರವಸೀಗೆ || ಈರಣ್ಣ ||

ಹಳ್ಳಕೆ ಹೋಗುಲುವಾಗ ಶೆಲ್ಯಾವು ಪಾದುದ ಗೆಜ್ಜೆ
ಉಟ್ಟಂಗಾದುಡಿಗೆ ಸೋಡಿಲಾವೆ | ನಿಂಗಣ್ಣಾನ
ಹಳ್ಳಕೆ ಹೋಗೊ ರವಸೀಗೆ || ಈರಣ್ಣ ||

ಮುತ್ತೇ ಹೊಳುದಾವೆ ಮಾಣಿಕವು ಹೊಳುದಂಗೆ
ಶಿಕ್ಕಮಾವುಗಳ ಯಗಲಮ್ಯಾಲೆ | ಈರಣ್ಣ
ಮುತ್ತೇ ಮಾಣಿಕ್ಯವಾಗಿ ವಳುದಾನೆ || ಈರಣ್ಣ ||

ಹೊನ್ನೇ ಹೊಳುದಾವೆ ಶಿನ್ನಾವ ಹೊಳುದಂಗೆ
ಇನ್ನಮಾವುಗಳ ಯಗುಲಮ್ಯಾಲೆ | ನಿಂಗಣ್ಣಾನ
ಹೊನ್ನೇ ಶಿನ್ನವಾಗಿ ವಳುದಾನೆ || ಈರಣ್ಣ ||

ಕಾಸೀಮೇಲೆ ಕಾಸಿ ದೇಸಾದ ನಡುಕಟ್ಟು
ಈಸ್ಪೂರೀರಣ್ಣ ಜಲದೀಗೆ | ಹೋಗಲುವಾಗ
ಕಾಸ್ಯಾಗಳಲಿಂಗ ವಳುದಾವೆ || ಈರಣ್ಣ ||

ಅಂಗೀಮ್ಯಾಲೆ ಅಂಗಿ ಬಂಗಾರುದ ನಡುಕಟ್ಟು
ಜಂಗುಮ ನಿಂಗಣ್ಣಾ ಜಲದೀಗೆ | ಹೋಗಲುವಾಗ
ಅಂಗ್ಯಾಗಳಲಿಂಗ ವಳುದಾವೆ || ಈರಣ್ಣ ||

ಅಸಿಯ ಆಲು ಕರುದು ಬಿಸಿಯ ಉಗ್ಗೀಮಾಡಿ
ಅಸುಮಕ್ಕಳಕೂಟೆ ವರಿಸ್ಯಾರೆ | ಗುಡ್ಡಾದ
ಎತ್ತಯ್ಯಗೆ ಧಾರೆ ಯರುದಾರೆ || ಈರಣ್ಣ ||

ಆಲುಗಳು ಕರುದಾರೆ ಉಗ್ಗಿಗಳು ಮಾಡ್ಯಾರೆ
ಸಣಮಕ್ಕಳುಕೂಟೆ ವರಿಸ್ಯಾರೆ | ಗುಡ್ಡಾದ
ಎತ್ತಯ್ಯಗೆ ಧಾರೆ ಯರುದಾರೆ || ಈರಣ್ಣ ||

ನೆಂಟ ಬರುತಾನೆಂದು ಕಂಟುಮಾಲೆ ಕಳಿವ್ಯಾನೆ
ನೆಂಟ ಈರಣ್ಣ ಬರಲಿಲ್ಲ | ಎಂದೆತ್ತಯ್ಯ
ಕಂಟುಮಾಲೆ ಸೋಲು ಕಳುವ್ಯಾನೆ || ಈರಣ್ಣ ||

ಬೀಗ ಬರುತಾನೆಂದು ಬೀಸುಣಿಕೆ ಕಳಿವ್ಯಾನೆ
ಬೀಗ ಈರಣ್ಣ ಬರಲಿಲ್ಲ | ಎಂದೆತ್ತಯ್ಯ
ಬೀಸುಣಿಕೆ ಸೋಲು ಕಳುವ್ಯಾನೆ || ಈರಣ್ಣ ||

ಅಗ್ಗು ಇಲ್ಲುದ ಕೆರಿಗೆ ಎದ್ದೋದ ಈರಣ್ಣ
ಅಗ್ಗಣುಂಟು ಮರದ ನೇರಳುಂಟು | ಗುಡ್ಡದ ಮ್ಯಾಲೆ
ಅಗ್ಗುಣದೇವಿಯೆಂಬ ಕೆರಿ ಉಂಟು || ಈರಣ್ಣ ||

ನೀರು ಇಲ್ಲುದ ಕೆರಿಗೆ ತಾನ್ಹೋದ ನಿಂಗಣ್ಣ
ನೀರುಂಟು ಮರದ ನೆರಳುಂಟು | ಗುಡ್ಡದ ಮ್ಯಾಲೆ
ನೀಲಂಜಿಯಂಬ ಕೆರಿ ಉಂಟು || ಈರಣ್ಣ ||

ಹಟ್ಟಿ ಬಿಟ್ಹೋಗುವಾಗ ಏನಂದ ಈರಣ್ಣ
ಮಕ್ಕಾಳು ಜತುನ ಮನಿಜತುನ | ಏಳುಜಂಬಿ
ದಿಕ್ಕಾಯ ನೋಡಿ ಬರುತೀನಿ || ಈರಣ್ಣ ||

ಊರೂ ಬಿಟ್ಹೋಗುವಾಗ ಏನಂದ ನಿಂಗಣ್ಣ
ಬಾಲಾರು ಜತುನ ಮನಿಜತುನ | ಹೊನ್ನಬಂಡೆ
ದೂರಾಯ ನೋಡಿ ಬರುತೀನಿ || ಈರಣ್ಣ ||

ಗುರುವು ಬರುತಾನಂದು ಗುಡ್ಡಾವು ತಿರುಗಿದೆ
ಗೂಡಾಣ ಹಾಲು ಮೀಸಲಿಟ್ಟೆ | ಗುಡ್ಡಾದ ಗುರುವೆ
ಈರಣ್ಣಾ ಬರಲಿಲ್ಲ || ಈರಣ್ಣ ||

ತಾನೆಂತ ಶೆಲುವ
ಹೂವೇ ಸೂರಾಡಿ ಮಠಕ್ಕೆ ಬರುವೋರು || ದನಿ ||

ಹಿಟ್ಟು ಶೆಲ್ಲೀದ್ಹಂಗ ಹಟ್ಟಿ ಮುಂದಕ ಬಂದಾರ
ಅಕ್ಕಯ್ಯ ತಾರೆ ರತನೀರು | ಈರಣ್ಣಾನ
ಪೆಟ್ಟೀಗ್ಹೋರುವಣ್ಣಗೆ ಬಲುದೃಷ್ಠಿ || ತಾನೆಂತ ||

ಹೂವೇ ಶೇಲ್ಲೀದ್ಹಂಗ ಊರ ಮುಂದಕ ಬಂದಾರ
ತಾಯಮ್ಮಾ ತಾರೆ ರತನೀರು | ನಿಂಗಣ್ಣಾನ
ದೇವಾರೊರುವಣ್ಣಗೆ ಬಲುದೃಷ್ಠಿ || ತಾನೆಂತ ||

ಕಣಸ ಹಿಡಿದು ನಮ್ಮ ಮೊಣಕ್ಕೆಯೇ ನೊಂದಾವೆ
ಕುಣಕೀಯ ಕೀಲು ಸೊಡಿಲ್ಯಾವೆ | ಈರಣ್ಣಾನ
ಧನುಕಾನ ಸಾಗಿ ಬರಹೇಳೆ || ತಾನೆಂತ ||

ಆರೂತಿ ಹಿಡಿದು ನಮ್ಮ ಅಂಗೈಯೇ ನೊಂದಾವೆ
ಮುಂಗೈಯಿ ಕೀಲು ಸೊಡಿಲ್ಯಾವೆ | ನಿಂಗಣ್ಣಾನ
ನಿಂಗನ್ನ ಸಾಗಿ ಬರಹೇಳೆ || ತಾನೆಂತ ||

ಹತ್ತೂ ಸಾವಿರುದೆಲಿಯಾ ಒಪ್ಪುದಲೆ ಕೊಯ್ಯತನ್ನಿ
ನಿಸ್ತ್ರೇರು ಕೈಗೆ ಕೊಡಿರಣ್ಣ | ಈರಣ್ಣಾನ
ಪೆಟ್ಟೀಗ್ಹೋರುವಣ್ಣಗೆ ಬಲುದೃಷ್ಟಿ || ತಾನೆಂತ ||

ಆರೂ ಸಾವಿರುದೆಲಿಯಾ ಒಪ್ಪುದಲೆ ಕೊಯ್ಯತನ್ನಿ
ನಾರೇರ ಕೈಗೆ ಕೊಡಿರಣ್ಣ | ನಿಂಗಣ್ಣಾನ
ಪಾಲಿಕ್ಹೊರುವಣ್ಣಗೆ ಬಲುದೃಷ್ಠಿ || ತಾನೆಂತ ||

ಹಟ್ಟ್ಯಾಗೆ ಹಾಕಿದ್ದೆ ನೆಟ್ಟ ಗಾರೇಮುಳ್ಳು
ಅಪ್ಪಾ ಈರಣ್ಣಾನ ಅಲಿಗೋರು | ಬಂಟಾರು
ನುಚ್ಚು ನುಚ್ಚೇಳು ತುಳುದಾರು || ತಾನೆಂತ ||

ಓಣ್ಯಾಗೆ ಹಾಕಿದ್ದೆ ನ್ಯಾರಾ ಗಾರೇಮುಳ್ಳು
ಸ್ವಾಮಿ ನಿಂಗಣ್ಣಾನ ಅಲಿಗೋರು | ಬಂಟಾರು
ನೂಲೊ ನೂಲೇಳು ತುಳುದಾರು || ತಾನೆಂತ ||

ಗುಡಿಯ ಸುತ್ತಿಟ್ಟಾರೆ ದಡಿಯ ಜೋತುರುದವರು
ಗುಲಗಂಜಿ ತಾಯಿತುದ ಮಣಿಯೋರು | ಮಾವುಗಳು
ಗುಡಿಸುತ್ತಿ ಪರುಸೆ ನೆರಿಸ್ಯಾರೆ || ತಾನೆಂತ ||

ತೋಪು ಸುತ್ತಿಟ್ಟಾರೆ ಆಪೀನಚ್ಚುಡುದವರು
ಏಕಾಂತೆ ತಾಯಿತುದ ಮಣಿಯೋರು | ಮಾವುಗಳು
ತೋಪುಸುತ್ತಿ ಪರುಸೆ ನೆರಿಸ್ಯಾರೆ || ತಾನೆಂತ ||

ಬಾಳೆಕಾಯಿ ಪೂಜೆ ಬಾಳೆ ಎಲೆಯ ಪೂಜೆ
ಬಾಳೆಹಣ್ಣಿನ ಪೂಜೆ ಉದಿಯಾಗ | ಈರಣ್ಣ
ಬಾಲನ ಬೇಡೋರು ಎಡನಿಲ್ಲ || ತಾನೆಂತ ||

ಬಾಲನ ಬೇಡೋರು ಮ್ಯಾಗಾಳ ಮಠಕ್ಹೋಗಿರಿ
ಕಂಬಿಲ ಹಾಲು ಒಂದ್ಹೊತ್ತು | ಬಂದೋರಿಗೆ
ತಂದೆ ಈರಣ್ಣಾನ ಗುರುಮಠಕ್ಕ || ತಾನೆಂತ ||

ನಿಂಬೆಕಾಯಿ ಪೂಜೆ ನಿಂಬೆ ಎಲಿಯ ಪೂಜೆ
ನಿಂಬೆ ಹಣ್ಣಿನ ಪೂಜೆ ಉದಿಯಾಗ | ನಿಂಗಣ್ಣ
ಕಂದನ ಬೇಡೋರು ಎಡನಿಲ್ಲ || ತಾನೆಂತ ||

ಕಂದನ ಬೆಡೋರು ಮುಂದಿನ ಮಠಕ್ಹೋಗಿರಿ
ಕಾಗೂಡಿ ಹಾಲು ಒಂದ್ಹೊತ್ತು | ಬಂದೋರಿಗೆ
ಸ್ವಾಮಿ ನಿಂಗಣ್ಣಾನ ಗುರುಮಠಕ್ಕ || ತಾನೆಂತ ||

ಪೊಪ್ಪದ ಪೂಜೆ ನೋಡೆ ಈರಗಣ್ಣ ಒಪ್ಪುವ ಶದುರ ನೋಡೆ || ದನಿ ||

ಹಟ್ಟ್ಯಾಗ ಆಡೇವು ಸಿಟ್ಟು ಬೆಳವಾನ್ಹಿಂಡು
ಅಪ್ಪ ಈರಣ್ಣನ ಪವುಳ್ಯಾಗೆ | ಆಡ್ಯಾವು
ಹತ್ತೇ ಸುತ್ತೀನ ಯಳಿನಾಗ || ಪೊಪ್ಪದ ||

ಓಣ್ಯಾಗ ಆಡೇವು ಬೂದು ಬೆಳವಾನ್ಹಿಂಡು
ಸ್ವಾಮಿ ನಿಂಗಣ್ಣನ ಪವುಳ್ಯಾಗೆ | ಆಡ್ಯಾವು
ಆರೇ ಸುತ್ತೀನ ಯಳಿನಾಗ || ಪೊಪ್ಪದ ||

ಹೂವ್ವಾ ಇಲ್ಲದೊಂದು ಹೂವ್ವಿಗ್ಹೋಗಲುವಾಗ
ಹೂವ್ವೇ ಈರಣ್ಣನ ಗುಡಿ ಹಿಂದೆ | ಸೂರೇಕಾಂತಿ
ಹೂವ್ವರಳಿ ಬಾಯಿ ಬಿಡುತಾವೆ || ಪೊಪ್ಪದ ||

ಮೊಗ್ಗು ಇಲ್ಲಾದೊಂದು ಮೊಗ್ಗಿಗ್ಹೋಗುಲುವಾಗ
ಮೊಗ್ಗೆ ನಿಂಗಣ್ಣನ ಗುಡಿ ಹಿಂದೆ | ಸೂರೇಕಾಂತಿ
ಮೊಗ್ಗರಳಿ ಬಾಯಿ ಬಿಡುತಾವೆ || ಪೊಪ್ಪದ ||

ನಿಂಗಾನ ಗುಡಿಸುತ್ತ ಬಂಗಾರುದ ಬಸವಣ್ಣ
ತುಂಬಾಲ್ಹೋದೀರಿ ಅಲಗೀಯ | ಗುಡಿಯಾಗಿರುವ
ದೇವ್ರೆ ಕೇಳಿರಿ ಶಿವ ನುಡಿಯ || ಪೊಪ್ಪದ ||

ಈರಾನ ಗುಡಿಸುತ್ತ ರುವ್ವಾರುದ ಬಸವಣ್ಣ
ತೀರಾಲ್ಹೋದೀರಿ ಅಲಗೀಯ | ಗುಡಿಯಾಗಿರುವ
ದೇವ್ರೆ ಕೇಳಿರಿ ಶಿವ ನುಡಿಯ || ಪೊಪ್ಪದ ||

ಕಟ್ಟೇಮ್ಯಾಲ್ಹೋಗುತ್ತಾ ಹೊತ್ತುಗಳು ನೋಡುತ್ತ
ಒಪ್ಪಕೊಂದ್ಹೆಜ್ಜೆ ಇಡವುತ್ತ | ಈರಣ್ಣ
ಅಪ್ಪಗ್ಹೂವೆತ್ತಾಲು ಹೊರುಟಾನೆ || ಪೊಪ್ಪದ ||

ಏರೀಮ್ಯಾಲ್ಹೋಗುತ್ತಾ ಯಾಳ್ಳೇವು ನೋಡುತ್ತ
ಒಪ್ಪಕೊಂದ್ಹೆಜ್ಜೆ ಇಡವುತ್ತ | ಈರಣ್ಣ
ದೇವರಿಗ್ಹೂವ್ವೆತ್ತಾಲು ಹೊರುಟಾನೆ || ಪೊಪ್ಪದ ||

ಬಾಳೆ ಬಾಳೇಗುಂಟ ಹೋದಾನೆ ಈರಣ್ಣ
ಬಾಳ್ಯಾಗ ಆರುವ ತಿಳಿನೀರು | ತಕ್ಕೊಂಡು
ಈರಣ್ಣನ ಮಕನ ತೊಳುದಾನೆ || ಪೊಪ್ಪದ ||

ನಿಂಬೆ ನಿಂಬೇಗುಂಟ ಹೋದಾನೆ ಈರಣ್ಣ
ನಿಂಬ್ಯಾಗ ಅರುವ ತಿಳಿನೀರು | ತಕ್ಕೊಂಡು
ನಿಂಗಣ್ಣನ ಮಕನ ತೊಳುದಾನೆ || ಪೊಪ್ಪದ ||

ಬಾಳೆ ಬಾಳೇಗುಂಟ ಹೋದಾನೆ ಈರಣ್ಣ
ಬಾಳೆಗೊಂದ್ಹೂವ್ವ ಕೊಯಿದು | ಮಾಲೇಕಟ್ಟಿ
ಬಲವಂತರ ಕೂಟ ಕಳಿವ್ಯಾನೆ || ಪೊಪ್ಪದ ||

ಪೂಜಾರಿ ಈರಣ್ಣ ಹೂವ್ವಿಗ್ಹೋಗುಲುವಾಗ
ಸಾಲಗೇರೆಲ್ಲ ಸೊಸಿಯಾರು | ಹೆಣುಮಕ್ಕಾಳು
ಹೂವ್ವಿನಾರುತಿಯ ರಚಿಸ್ಯಾರು || ಪೊಪ್ಪದ ||

ಪೂಜಾರಿ ಈರಣ್ಣ ಪೊಪ್ಪಾಗ್ಹೊಗುಲುವಾಗ
ಸುತ್ತುಲುಗೇರೆಲ್ಲ ಸೊಸಿಯಾರು | ಹೆಣುಮಕ್ಕಾಳು
ಮುತ್ತಿನಾರುತಿಯ ರಚಿಸ್ಯಾರು || ಪೊಪ್ಪದ ||

ಅರಗಿದ ಹೊಲುದಾಗೆ ಮರುಗು ಬಿಡಿಸೋನ್ಯಾರೆ
ಮರುಗಿನ ಭಾರಕೆ ಬಳುಕೋನೆ | ಈರಣ್ಣಾನ
ಹೆತ್ತಮ್ಮಿನ್ಹೆಂತಾ ಶಿವಶೆರಣಿ || ಪೊಪ್ಪದ ||

ಬಿತ್ತೀದ ಹೊಲುದಾಗೆ ಪೊಪ್ಪು ಬಿಡಿಸೋನ್ಯಾರೆ
ಪೊಪ್ಪಿನ ಭಾರಕೆ ಬಳುಕೋನೆ | ಈರಣ್ಣಾನ
ಹೆತ್ತವ್ವಿನ್ಹೆಂತಾ ಶಿವಶೆರಣಿ || ಪೊಪ್ಪದ ||

ಆಯವುಳ್ಳ ತ್ವಾಟಾಕೆ ಸ್ರಾಯವುಳ್ಳ ಏಣೀನ್ಹಾಕಿ
ಸಾಲ್ಲೆದಚ್ಚುಡುವೆ ಮಡುಲೊಡ್ಡಿ | ಹೂವ್ವಾಕೊಯ್ದು
ಸೂರಿದಮ್ಮನ್ಯಾರ ಮಗನಂದು | ಶಿವ ಕೇಳಿದರೆ
ರಂಭೆ ಬಸಮ್ಮನ ಮಗ ಜಾಣ || ಪೊಪ್ಪದ ||

ಗಂಜೀನಚ್ಚುಡುವೆ ಮಡುಲೊಡ್ಹೂವ್ವ ಕೊಯ್ದು
ಸೂರಿದಮ್ಮನ್ಯಾರ ಮಗನಂದು | ಶೀವ ಕೇಳಿದರೆ
ರಂಭೆ ಈರಮ್ಮನ ಮಗ ಜಾಣ || ಪೊಪ್ಪದ ||

ಅಂದವುಳ್ಳ ತ್ವಾಟಾಕೆ ಶೆಂದವುಳ್ಳ ಏಣಿನ್ಹಾಕಿ
ಗಂಜೀನಚ್ಚುಡುವೆ ಮಡುಲೊಡ್ಡಿ | ಹೂವ್ವಾಕೊಯ್ದು
ಶೆಂದ್ರಮ್ಮ ನ್ಯಾರ ಮಗನಂದು | ಶಿವು ಕೇಳಿದರೆ
ರಂಭೆ ಬಸಮ್ಮ ಮಗ ಜಾಣ || ಪೊಪ್ಪದ ||

ಗಂಜೀನಚ್ಚುಡುವೆ ಮಡುಲೊಡ್ಹೂವು ಕೊಯ್ದು
ಚಂದ್ರಮ್ಮ ನ್ಯಾರ ಮಗನಂದು | ಶಿವ ಕೇಳಿದರೆ
ರಂಭೆ ಈರಮ್ಮನ ಮಗ ಜಾಣ || ಪೊಪ್ಪದ ||

ಅಲ್ಲೇ ಇಲ್ಲೇ ಹೂವ್ವು ವಲ್ಲಾನೆ ಈರಣ್ಣ
ಅಲ್ಲಿ ಬಂಜಿಗೆರಿ ಒಳಗಿನ | ಕಾಲ್ಲೇದ್ಹೂವ್ವ
ಮಲ್ಲಿಗೇ ಸರವೊಂದು ಮುಡಿದಾನೆ || ಪೊಪ್ಪದ ||

ಅತ್ತಲಿತ್ತಾಲೂವ್ವು ಒಪ್ಪಾನ ನಿಂಗಣ್ಣ
ಮತ್ತೇ ಬೇಡರೆಡ್ಡಿಹಳ್ಳಿ ಒಳಗಿನ | ಕಾಲ್ಲೇದ್ಹೂವ್ವ
ಮುತ್ತೀನ ಸರವೊಂದು ಮುಡಿದಾನೆ || ಪೊಪ್ಪದ ||

ಹಗಲೆಲ್ಲ ಕೊಯ್ದಾರೆ ಅರಳ ಮಲ್ಲಿಗ್ಹೂವ್ವು
ಇರುಳೆಲ್ಲ ದಂಡೆ ಹೆಣುದಾರೆ | ಬಂಜಿಗೆರಿ
ಈರಣ್ಣಗ್ಹಾಕ್ಯಾರೆ ಸರಾನೂರು || ಪೊಪ್ಪದ ||

ಮಧ್ಯಾನ್ನಕ್ಕ ಕೊಯ್ದಾರೆ ಮೊಗ್ಗು ಮಲ್ಲಿಗ್ಹೂವ್ವು
ನಿದ್ರಿಲ್ಲದಲೆ ದಂಡೆ ಹೆಣುದಾರೆ | ಬೇಡರೆಡ್ಡಿಹಳ್ಳಿ
ದೊಡ್ಡೊವ್ನಿಗ್ಹಾಕಾರೆ ಸರಾನೂರು || ಪೊಪ್ಪದ ||

ಆಶೆ ಪಾದದುಮ್ಯಾಲೆ ಈಶೆಪಾದನೂರಿ
ತೋತುರಿಸಿ ಹೂವು ಮುಡಿಸೋನೆ | ಈರಣ್ಣಾಗ
ಜೋತುರು ಬಂದಾವೆ ಉಡುಗೋರೆ || ಪೊಪ್ಪದ ||

ಹಿಂದಲ ಪಾದದುಮ್ಯಾಲೆ ಮುಂದಲ ಪಾದನೂರಿ
ವಂದೂಸಿ ಹೂವು ಮುಡಿಸೋನೆ | ಈರಣ್ಣಾಗ
ಉಂಗುರು ಬಂದಾವೆ ಉಡುಗೋರೆ || ಪೊಪ್ಪದ ||

ನಿಂಬೆಹೂವು ಶೆಂದ ನಿಂಬೆಕಾಯಿ ಶೆಂದ
ಅಂಗೂಡಿ ಶೆಂದ ವಸದೀಯ | ದಿಬ್ಬದಲಿ
ಈರಣ್ಣ ಇರುವ ಮಠ ಶೆಂದ || ಪೊಪ್ಪದ ||

ಬಾಳೆಹೂವು ಶೆಂದ ಬಾಳೆಕಾಯಿ ಶೆಂದ
ಬಾಜಾರು ಶೆಂದ ವಸದೀಯ | ದಿಬ್ಬದಲಿ
ಈರಣ್ಣ ಇರುವ ಮಠ ಶೆಂದ || ಪೊಪ್ಪದ ||

ಕಿತ್ಲಣ್ಣು ಮಡುಲಾಗೆ ತುಪ್ಪದಾಗ್ರ ಕೈಯ್ಯಾಗ
ಹತ್ತಾರದ್ವಾಲೆ ಕಿವಿಯಾಗ | ಈರಮ್ಮ
ಹಟ್ಟ್ಯಾಗ ಮಗುನಾ ಕರುದಾಳೆ || ಪೊಪ್ಪದ ||

ಹಟ್ಟ್ಯಾಗ ಮಗುನ ಏನೆಂದು ಕರುದಾಳೆ
ಅಪ್ಪ ಈರಣ್ಣನ ಶಿಖುರಾವ | ಮ್ಯಾಗಾಳ
ಮುತ್ತೆ ಬಾರೆಂದು ಕರುದಾಳೆ || ಪೊಪ್ಪದ ||

ಬಾಳೆಹಣ್ಣು ಮಡುಲಾಗೆ ಹಾಲಾಗ್ರ ಕೈಯಾಗ
ಆರಾರದ್ವಾಲೆ ಕಿವಿಯಾಗ | ಬಸಮ್ಮ
ಓಣ್ಯಾಗ ಮಗುನ ಕರುದಾಳೆ || ಪೊಪ್ಪದ ||

ಓಣ್ಯಾಗ ಮಗುನ ಏನೆಂದು ಕರುದಾಳೆ
ಸ್ವಾಮೀನೆ ನಿಂಗಣ್ಣನ ಶಿಖುರಾವ | ಮ್ಯಾಗಾಳ
ಹೂವೇ ಬಾರೆಂದು ಕರುದಾಳೆ || ಪೊಪ್ಪದ ||

ಹರಿಕೆ ಹನ್ನೆರ್ಡೊರುಸ ಬರತೀವಿ ಈರಣ್ಣ
ಸರಪುಳಿಗಂಟೆ ಸಾವುಮ್ಯಾಳ | ನಂದಿಕೋಲು
ಕುಣಿಸುತಲಿ ನಿಮ್ಮಾಲೆ ತರೂತೀವಿ || ಪೊಪ್ಪದ ||

ಮಾಲೇನ ತಂದೀವಿ ಮಾತ್ನಾಡೋ ಈರಣ್ಣ
ಕಾಯಿ ತಂದೈದಿವಿ ವಡಕೋಡು | ಗುಡಿಯಾಮುಂದೆ
ಬಾಲನ ತಂದೈದಿವಿ ಹೆಸರಿಡೊ || ಪೊಪ್ಪದ ||

ಮಂಗಳಂ ಜಯ ಜಯ ಜಂಗಳಂ
ಜಯಜಯ ಮಂಗಳಂ ಜಯಜಯ ಜಗದೀಶ

ಒಪ್ಪುದುಲಿ ಸಾರುಸಿ ತುಪ್ಪುದಲಿ ಗುಡಿಕಟ್ಟಿ
ಬಟ್ಟಮುತ್ತೀನಾ ರಂಗೋಲಿ | ಹಾಕಿಸಿಕ್ಕಂಬ
ಅಪ್ಪ ಈರಣ್ಣಗೆ ಜಯವೆನ್ನಿರೋ || ಮಂಗಳಂ ||

ಕೆಸರಿಲಿ ಸಾರೂಸಿ ಮೊಸರಿಲಿ ಗುಡಿಕಟ್ಟಿ
ಮಾನಮುತ್ತೀನಾ ರಂಗೋಲಿ | ಹಾಕಿಸಿಕ್ಕಂಬ
ಸ್ವಾಮಿ ನಿಂಗಣ್ಣಗೆ ಜಯವೆನ್ನಿರೋ || ಮಂಗಳಂ ||

ಬಗ್ಗೀರಿ ಬಗ್ಗೀರಿ ಬಗ್ಗಿ ಶರಣನ್ನೀರಿ
ಮಗ್ಗುಲಾಗೆ ಇರುವ ವಡಿಯಾಗೆ | ಈರಣ್ಣಾಗೆ
ಭದ್ರೆಯರಾರೂತಿಯ ಜಯವೆನ್ನಿರಿ || ಮಂಗಳಂ ||

ಬಾಗೀರಿ ಬಾಗೀರಿ ಬಾಗಿ ಶರಣನ್ನೀರಿ
ಬಾಗುಲಾಗೆ ಇರುವ ವಡಿಯಾಗೆ | ನಿಂಗಣ್ಣಾಗೆ
ಬಾಲೆಯರಾರೂತಿಯ ಜಯವೆನ್ನಿರಿ || ಮಂಗಳಂ ||

ವಡಿಯ ತಿಪ್ಪಯ್ಯಾಗೆ ಕಡದು ಬಾಗಾಲೆರಡು
ನಂದಿಕೋಲೆರೆಡು ಪಟನೂರು | ತಿಪ್ಪೇಸ್ವಾಮಿ
ಮಂಗಳಾರೂತಿಯ ಹದಿನಾರು || ಮಂಗಳಂ ||

* * *