ಬುಟ್ಟುರಾಜಣು ಗದ್ದೆ ಹುಟ್ಟು ಹೇಳುದು ಮ್ಯಾಲೆ
ಅಪ್ಪುಗುಳಾ ಮನಿಯಾ ಗುರುಸ್ವಾಮಿನ | ನೆನಿಯುದು ಮ್ಯಾಲೆ
ಅಕ್ಕಾನು ಹುಟ್ಟಿ ಫಲವೇನೆ || ತಂದಾನ್ನ ತಾನ ||

ಬಾಲಾರಾಜಣ್ಣ ಗದ್ದೆ ಬಗಿಯಾ ಹೇಳುದು ಮ್ಯಾಲೆ
ಮಾವುಗಳಾ ಮನಿಯಾ ಗುರುಸ್ವಾಮಿನ | ನೇನಿಯುದು ಮ್ಯಾಲೆ
ತಾಯೀನ ಹುಟ್ಟಿ ಫಲವೇನೆ || ತಂದಾನ್ನ ತಾನ ||

ಹೊತ್ತುಂಟೆ ಎದ್ದು ಹಟ್ಟಿ ಸಾರುಸುತ್ತಿದ್ದೆ
ಅಪ್ಪುಗುಳಾ ಮನಿಯಾ ಗುರುಸ್ವಾಮೀನ | ಬರುವುದು ಕಂಡೆ
ಕಪ್ಪು ಸಿರುಬಾಗಿ ಶರಣೆಂದೆ ಹೋಗುಲುವಾಗ
ಪುತ್ರಿ ನೀನ್ಯಾರ ಮಗಳಮ್ಮ || ತಂದಾನ್ನ ತಾನ ||

ಯಾರ ಮಗಳೆಂದಾರೆ ಏನು ಹೇಳಲಿ ಗುರುವೆ
ರಾಯ ಓಬ್ನಹಳ್ಳಿ ಗೌಡರ | ಸಿಂಹಾಸುಣುವ
ತೂಗೀ ಆಳೋರ ಮಗಳೆಂದೆ || ತಂದಾನ್ನ ತಾನ ||

ಏಳುವುತುಲೆ ಎದ್ದು ಕಟ್ಟೆ ಸಾರುಸುತಿದ್ದೆ
ಮಾವುಗಳ ಮನಿಯಾ ಗುರುಸ್ವಾಮೀನ | ಬರುವುದು ಕಂಡೆ
ವಾಲೇ ಸಿರುಬಾಗಿ ಶರಣೆಂದೆ | ಹೋಗುಲುವಾಗ
ಬಾಲ ನೀನ್ಯಾರ ಸೊಸಿಯಮ್ಮಾ || ತಂದಾನ್ನ ತಾನ ||

ಯಾರ ಸೊಸಿಯೆಂದಾರೆ ಏನು ಹೇಳಲಿ ಗುರುವೆ
ರಾಯ ತಾಳವ್ಹಟ್ಟಿ ಗೌಡರ | ಸಿಂಹಾಸುಣುವ
ಹತ್ತೀ ಆಳೋರ ಸೊಸಿಯೆಂದೆ || ತಂದಾನ್ನ ತಾನ ||

ಅಪ್ಪುಗಳ ಕಾಣಾಸಿ ಬಟ್ಟೀಲಿ ತೋರಿಸಿ
ಕುಟ್ಟಿ ಡಂಗುರವಾನೆ ವಯ್‌ಸೇನು | ಓಬೇನ್ಹಳ್ಳಿ
ಕಾಣಾಸಿ ಗೌಡಾರಾ ಮಗಳಂದು || ತಂದಾನ್ನ ತಾನ ||

ಮಾವುಗಳ ಕಾಣಾಸಿ ತೊಳಿಲಿ ತೋರಿಸಿ
ಸಾರಿ ಡಂಗುರವಾನೆ ವಯ್‌ಸೇನು | ತಾಳಾವ್ಹಟ್ಟಿ
ಕಾಣಾಸಿ ಗೌಡಾರಾ ಸೊಸಿಯೆಂದು || ತಂದಾನ್ನ ತಾನ ||

ಹತ್ತಾಳು ತುರುಕಾರು ಹಟ್ಟೀಯ ಹೊಕ್ಕ್ಯಾರೆ
ಪೆಟ್ಟೀಗೆ ಬಾಯಿ ತಗುದಾರೆ | ನಿಂಗಣ್ಣಾನ
ಗಟ್ಟಿ ಹರಿವಾಣ ಗರುಳಂಬೋ | ರವಸೀಗೆ
ಮುಟ್ಟಾಲಂಜಾರೆ ತುರುಕಾರು || ತಂದಾನ್ನ ತಾನ ||

ಆರಾಳು ತುರುಕಾರು ಜೋಡಾಗಿ ಬಂದಾರೆ
ಕೀಲೀನ ಬಾಯಿ ತಗುದಾರೆ | ನಿಂಗಣ್ಣಾನ
ನೋಡಲಂಜಾರೆ ತುರುಕಾರು || ತಂದಾನ್ನ ತಾನ ||

ಹತ್ತಾಳು ತುರುಕಾರು ಜೊತ್ತಾಗಿ ಬಂದಾರೆ
ಅಪ್ಪೂನ ನಾವೆಲ್ಲಿ ಮಡುಗಾರೆ | ಬೊಮ್ಮನ ಕುಂಟೆ
ಕುಕ್ಕೂಸಿ ಬೆಳೆವಾ ಬಯಿಲಾಗೆ || ತಂದಾನ್ನ ತಾನ ||

ಆರಾಳು ತುರುಕಾರು ಜೋಡಾಗಿ ಬಂದಾರೆ
ಸ್ವಾಮೀನ ನಾವೆಲ್ಲಿ ಮಡುಗಾರೆ | ಬೊಮ್ಮನ ಕುಂಟೆ
ಮಾನಂಗಿ ಬೆಳೆವ ಬಯಿಲಾಗೆ || ತಂದಾನ್ನ ತಾನ ||

ಹಟ್ಟೀಯ ಗೊಲ್ಲಾಗೆ ಸತ್ತ್ಯೇಏನ್ನೆಲ್ಲೇದು
ಮುಟ್ಟಿ ತೆಗಿಯೆಂದಾ ಕಣುಸಾವ ಭರಮಪ್ಪ ತನ್ನ
ಮಕ್ಕಾಳು ಸಾಯೋದೇ ಗುರುತರಿಯ || ತಂದಾನ್ನ ತಾನ ||

ಅಡವೀಯ ಗೊಲ್ಲಾಗೆ ದುಡುಗಳಿನ್ನೆಲ್ಲೇವು
ನೋಡಿ ತೆಗಿಯಿಎಂದಾ ಕಣುಸಾವ | ಭರಮಪ್ಪ ತನ್ನ
ಮಡದಿ ಸಾಯೋದೇ ಗುರುತರಿಯ || ತಂದಾನ್ನ ತಾನ ||

ಒಂದು ಒಂದು ಮರನೆ ಒಂದೆಲೆ ತಿರುಗಿದ ಮರನೆ
ಒಂದೆಲೆ ಹರುದಾವೋ ಹುಲುಗೂಲಿ | ಮರುದಡಿಯಾ
ನಿಂಗಣ್ಣಾನ ಸೆರೆಯಾ ಹಿಡುದಾರೆ || ತಂದಾನ್ನ ತಾನ ||

ಮೂರಾ ಮೂರಾ ಮರನೆ ಮೂರೆಲೆ ತಿರುಗಿದ ಮರನೆ
ಮೂರೆಲೆ ಹರುದಾವೋ ಹುಲುಗೂಲಿ | ಮರುದಡಿಯಾ
ಮಾಲಿಂಗನ ಸೆರೆಯಾ ಹಿಡುದಾರೆ || ತಂದಾನ್ನ ತಾನ ||

ಹಿಡ್ಡಾರ ಹಿದ್ದಾರ ಹಿದ್ದಾರ ನಿಂಗಣ್ಣಾನ
ನಡುವಲುಪ್ಪುರಿಗೆ ಶರಣಾನ | ನಿಂಗಣ್ಣಾನ
ಹಿಡಿಯ್ಹಗ್ಗ ಹಾಕಿ ಹಿಡುದಾರ || ತಂದಾನ್ನ ತಾನ ||

09_85_KK-KUH

ಮುಟ್ಟ್ಯಾರೆ ಮುಟ್ಟ್ಯಾರೆ ಮುಟ್ಟ್ಯಾರೆ ನಿಂಗಣ್ಣಾನ
ಗಚ್ಚಿನುಪ್ಪುರಿಗೆ ಶರಣಾನ | ನಿಂಗಣ್ಣಾನ
ಮುಟ್ಟಿಕೊಂಡಾರೆ ತಗುದಾರೆ || ತಂದಾನ್ನ ತಾನ ||

ಅಪ್ಪಾ ನಿನ್ನ ಬಣ್ಣ ಸುತ್ತಿ ಸಿಂಬೆ ಮಾಡಿ
ಹೊತ್ತ ಪೆಟ್ಟೀಗೆ ಇಳುವಾದೋ | ಒಯ್ದಾರೆ
ಉಚ್ಚಂಗಿಯೆಂಬಾ ದುರುಗಾಕೆ || ತಂದಾನ್ನ ತಾನ ||

ಸ್ವಾಮಿ ನಿನ್ನ ಬಣ್ಣ ಸೀಳಿ ಸಿಂಬೆ ಮಾಡಿ
ಹಿಡದ ಪೆಟ್ಟೀಗೆ ಇಳುವಾದೋ | ವಯ್ದಾರಮ್ಮಾ
ಶನಮಾಲೆಂಬೋ ದುರುಗಾಕೆ || ತಂದಾನ್ನ ತಾನ ||

ಮುತ್ತೇನ ಸುಲುದಾರು ಮಾಣಿಕುವ ಸುಲುದಾರು
ಮುತ್ತೀನ ಕೆಂಜಡಿಯ ಸುಲುದಾರೆ | ನೇ ವಯ್ದಾದಾರಮ್ಮ
ಉಚ್ಚಂಗಿಯೆಂಬೊ ದುರುಗಾಕೆ || ತಂದಾನ್ನ ತಾನ ||

ಹೊನ್ನೇನ ಸುಲುದಾರು ಶಿನ್ನಾವ ಸುಲುದಾರು
ಶಿನ್ನದ ಕೆಂಜಡಿಯ ಸುಲುದಾರೆ | ನೇ ವಯ್ದಾರಮ್ಮ
ಶನಮಾಲೆಂಬೋ ದುರುಗಾಕೆ || ತಂದಾನ್ನ ತಾನ ||

ಗಂಜೀಯ ಸೀರ್ಯೋಳೆ ಗಂಧದ ಬೊಟ್ಟೀನೋಳೆ
ಕಂದ ರಾಮುನಾ ಹಡದೋಳೆ | ಮಾರಮ್ಮ
ರಂಭೆ ನೀ ಬರುವ ದಿನವ್ಹೆಳೆ || ತಂದಾನ್ನ ತಾನ ||

ಅರಿಸಿಣಿದ ಸೀರ್ಯಮ್ಮ ಅರಿಸಿಣುದ ಕೊರಳಮ್ಮ
ಪರುಸರಾಮನ ಹಡದೋಳೆ | ಮಾರಮ್ಮ
ಅರಸಿ ನೀ ಬರುವ ದಿನವ್ಹೇಳೆ || ತಂದಾನ್ನ ತಾನ ||

ಬಂದೆನೊ ನಿಂಗಣ್ಣ ಬಂಡೀಯ ಹೊಡುಕಂಡು
ಬಂದಾ ದುರುತರುನ ವಡಗೊಂಡು | ಸಿಂತರಕಲ್ಲು
ನೀನ್ಹೋಗು ಮೇಲ ದುರುಗಾಕೆ || ತಂದಾನ್ನ ತಾನ ||

ಹೋದೆನೊ ನಿಂಗಣ್ಣ ಗಾಲೀಯ ಹೊಡಕೊಂಡು
ಹೋದಾಲಿ ದುರುತರುನ ವಡಗೊಂಡು | ಸಿಂತರಕಲ್ಲು
ನೀನ್ಹೊಗು ಮೇಲ ದುರುಗಾಕೆ || ತಂದಾನ್ನ ತಾನ ||

ದೊಡ್ಡ್ಹಾ ದೊಡ್ಡಾ ಮುತ್ತು ಅಡ್ಡಾದಂಡಿಗ್ಹಾಕಿ
ದೊಡ್ಡವ್ನ ಕಳುವಿ ಬರುವೋಳೆ | ಮಾರಮ್ಮ
ದೊಡ್ಡೊರಿಗ್ಹೊತ್ತೇ ಮುಣುಗ್ಯಾವೇ ಗೌರಸಂದ್ರದ
ಸತ್ತ್ಯವ್ವ ಓಡೋಡಿ ಬರುತಾಳೆ || ತಂದಾನ್ನ ತಾನ ||

ಸಣ್ಣ ಸಣ್ಣ ಮುತ್ತು ಬಿನ್ನಾದಂಡಿಗ್ಹಾಕಿ
ಮಾನ್ಯರನ್ನ ಕಳುವಿ ಬರುವೋಳೆ | ಮಾರಮ್ಮ
ಹೊನ್ನುರಿಗ್ಹೊತ್ತೇ ಮುಳಿಗ್ಯಾವೇ | ಗೌರಸಂದ್ರದ
ತಾಯಿ ಓಡೋಡಿ ಬರುತಾಳೆ || ತಂದಾನ್ನ ತಾನ ||

ಅಜ್ಜಿ ಕೊರಸರಜ್ಜಿ ಗದ್ದಿಗ್ಹೇಳು ಬಾರೆ
ಮುದ್ದೆ ಜಡಿಯೋನು ದುರ್ಗಕ್ಕೆ | ಹೋಗಿರುವನು
ಗೆದ್ದು ಬರುವುದು ನಿಜವ್ಹೇಳೆ || ತಂದಾನ್ನ ತಾನ ||

ತಾಯಿ ಕೊರಸರಜ್ಜಿ ದೇವರ್ಹೇಳು ಬಾರೆ
ನಾಗಾಳ ಜಡಿಯೋನು ದುರ್ಗಕ್ಕೆ | ಹೋಗಿರುವನು
ಹಾಳು ಮಾಡುವುದು ನಿಜವೇನೆ || ತಂದಾನ್ನ ತಾನ ||

ಅಪ್ಪಾನ ಸಂಗಡ ಮತ್ತ್ಯಾರು ಹೋಗ್ಯಾವ್ರೆ
ಅಕ್ಕ ಹೋಗ್ಯಾಳೆ ಐವೋಜಿ | ಮಾರಕ್ಕ
ಜೊತ್ತಿಲೇಳುಬಂಡಿ ಹೊಡಕೊಂಡು || ತಂದಾನ್ನ ತಾನ ||

ಹಳ್ಳಾದ ನೀರು ಹಳ್ಳಕ್ಕೆ ಬಂದರೆ
ಬಳುಗಟ್ಟಿ ಕಾಣೆ ಕಾನಿಹಳ್ಳ | ಗಂಗಮ್ಮ
ಮಾಲಿಂಗನ ಕೈಸೆರೆ ಕೊಡಬಹುದೆ || ತಂದಾನ್ನ ತಾನ ||

ವಡ್ಡೀನ ನೀರು ವಡ್ಡಿಗೆ ಬಂದರೆ
ವಡ್ಡಗಟ್ಟಿ ಕಾಣೆ ಕಾನಿಹಳ್ಳ | ಗಂಗಮ್ಮ
ದೊಡ್ಡವ್ನ ಕೈಸೆರೆ ಕೊಡಬಹುದೆ || ತಂದಾನ್ನ ತಾನ ||

ಹಳ್ಳಾದ ನೀರು ಹಳ್ಳಕ್ಕ ಬಂದರೆ
ಬಳುಗಟ್ಟಿ ಕಾಣೆ ಕಾನಿಹಳ್ಳ | ಗಂಗಂಮ
ಮಾಲಿಂಗನ ಕೈಸೆರೆ ಕೊಡಬಹುದೆ || ತಂದಾನ್ನ ತಾನ ||

ಹಾಲು ಕಾಯಿಸುತ್ತಿದ್ದೆ ಬಾನ ಬಸಿಯುತ್ತಿದ್ದೆ
ಬಾಲನ ತೂಗುತ್ತಲೆ ಒಳಗಿದ್ದೆ | ಸಿಂತರಕಲ್ಲು
ಮಾಲಿಂಗ ಸೆರೆಹೋಗೊದು ಅರಿಯಾದು || ತಂದಾನ್ನ ತಾನ ||

ತುಪ್ಪ ಕಾಸುತ್ತಿದ್ದೆ ಅಕ್ಕಿ ಬಸಿಯುತ್ತಿದ್ದೆ
ಪುತ್ರನ ತೂಗುತ್ತಲೆ ಒಳಗಿದ್ದೆ | ಸಿಂತರಕಲ್ಲು
ಅಪ್ಪಯ್ಯ ಸೆರೆಹೋಗೊದು ಅರಿಯಾದು || ತಂದಾನ್ನ ತಾನ ||

ಅಪ್ಪನ ಕೊಂಡ್ಹೋದವರ ಮಕ್ಕಳು ಸಾಯಾಲಿ
ಮಕ್ಕಳು ಸತ್ತು ಮನಿಬೆಂದು | ಒಳಗಾಳ
ಪುತ್ರಮ್ಮಗೆ ಸಿಡಿಲು ಬಡಿಯಲೆ | ಮ್ಯಾಗಾಳ
ಮುತ್ತೀನ ಕಳಸ ಸಿಡಿಯಾಲೆ || ತಂದಾನ್ನ ತಾನ ||

ದೇವರು ಕೊಂಡ್ಹೋದವರ ಬಾಲಾರು ಸಾಯಾಲಿ
ಬಾಲಾರು ಸತ್ತು ಮನಿಬೆಂದು | ಒಳಗಾಳ
ಬಾಲಮ್ಮಗೆ ಸಿಡಿಲು ಬಡಿಯಲೆ | ಮ್ಯಾಗಾಳ
ಹೂವೀನ ಕಳಸ ಸಿಡಿಯಾಲೆ || ತಂದಾನ್ನ ತಾನ ||

ಎತ್ತುಗಳು ಸೆರೆವಯ್ದು ಎಮ್ಮಿಗಳು ಸೆರೆವಯ್ದು
ಹೆತ್ತ ಬಾಲಾರುನ ಸೇರೆವಯ್ದ | ತುರುಕಾರ
ಉಪ್ಪರಿಗೆ ಇಂದು ಉರಿಯಾಲೆ || ತಂದಾನ್ನ ತಾನ ||

ಆವುಗಳು ಸೇರೆವಯ್ದು ಗೋವುಗಳು ಸೆರೆವಯ್ದ
ಆಡಾ ಮಕ್ಕಳುನ ಸೇರೆವಯ್ದ | ತುರುಕಾರ
ವಾವೂರಿಗೆ ಇಂದು ಉರಿಯಾಲೆ || ತಂದಾನ್ನ ತಾನ ||

ಹುತ್ತದ ಕ್ವಾಮ್ಯಾಗ ಬಿಕ್ಕುಸುವೆ ಅಂಬೋರೆ
ತುಪ್ಪ ಸಕ್ಕಾರಿ ಸಲ್ಲುಸೋರೆ | ಹೊನ್ನಬಂಡೆ
ಮುಕ್ಕಣ ಈಶ್ವರನೇ ಶಿವನಾದ || ತಂದಾನ್ನ ತಾನ ||

ಆರಣ್ಯಾದಾಗ ಕ್ವಾರಣ್ಯ ಮಾಡವ್ರೆ ಅಂಬೋರೆ
ಜವುದಾರಿ ಹಣ್ಣು ಮೆಲುವೊರೆ | ಹೊನ್ನಬಂಡೆ
ಮೂರು ಕಣ್ಣಯ್ಯ ಶಿವನಾದ || ತಂದಾನ್ನ ತಾನ ||

ಬಿಕ್ಕುಸುವೆ ಅನನಲ್ಲೆ ಬೊಟ್ಟಿಗೆ ಜಂಗಮನಲ್ಲೆ
ಬಿಕ್ಕುಸುವೆ ಒಂದೂ ಅನನಲ್ಲೆ | ಹೊನ್ನಬಂಡೆ
ಮುಕ್ಕಣೇಶ್ವರನೇ ಶಿವನಾದ || ತಂದಾನ್ನ ತಾನ ||

ಕ್ವಾರಣ್ಯ ಅನನಲ್ಲೆ ಕಾಲಿಗಿ ಜಂಗಮನಲ್ಲೆ
ಕ್ವಾರಣ್ಯ ಒಂದೂ ಅನನಲ್ಲೆ | ಹೊನ್ನಬಂಡೆ
ಮೂರು ಕಣ್ಣಯ್ಯ ಶಿವನಾದ || ತಂದಾನ್ನ ತಾನ ||

ಬಟ್ಟೆ ಕಾಂತೆ ಜೋಗಿ ಬಿಕ್ಕಸುಕಂಬುತ್ತ ಬಂದ
ಅಕ್ಕ ನೋಡೆ ಇವನ ಶೆಲುವರಿಕಿ | ನಿಂಗಣ್ಣಾನ
ಹುಟ್ಟೆ ಒಬ್ಬರಿಗೆ ತಿಳಿಯಾವು || ತಂದಾನ್ನ ತಾನ ||

ಕಾವ್ಯ ಕಾಂತೆ ಜೋಗಿ ಧ್ಯಾನಕಂಬುತ್ತ ಬಂದ
ತಾಯಿ ನೋಡೆ ಇವನ ಶೆಲುವರಿಕಿ | ನಿಂಗಣ್ಣಾನ
ಮಾಯ ಒಬ್ಬರಿಗೆ ತಿಳಿಯಾವು || ತಂದಾನ್ನ ತಾನ ||

ಮುತ್ತೀನ ಪಡಿಗಾಳು ಕೊಟ್ಟೇನಂದಾರೆ ವಲ್ಲಂದ
ಸಕ್ಕಂದುಗಾರ ಮರುಳಯ್ಯಾ | ಜಂಗುಮಯ್ಯಾ
ತಕ್ಕಳ್ಳಿ ನಿಮ್ಮ ಪಡಿಗಾಳು || ತಂದಾನ್ನ ತಾನ ||

ಹೊನ್ನೀನ ಪಡಿಗಾಳು ನೀಡೇನಂದಾರೆ ವಲ್ಲಂದ
ಆನಂದಗಾರ ಮರುಳಯ್ಯಾ | ಜಂಗುಮಯ್ಯಾ
ನೀಡಿಕಳ್ಳಿರಿ ನಿಮ್ಮ ಪಡಿಗಾಳು || ತಂದಾನ್ನ ತಾನ ||

ಸಣ್ಣ ಬೆತ್ತುದ ಕೋಲು ಚಿನ್ನಾದ ಜೋಳಿಗೆ
ಶೆನ್ನೀಗ ನಿಂಗಣ್ಣ ಪಡಿಯಾಡ | ಹೊರುಟಾನೆ
ಚೆನಮಲ್ಲೆಯಂಬಾ ಕುರುಗಾಕೆ || ತಂದಾನ್ನ ತಾನ ||

ಹಸಿಯಾ ಬೆತ್ತುದ ಕೋಲು ಕುಸುಲಾದ ಜೋಳಿಗೆ
ಹಸುಮಗ ನಿಂಗಣ್ಣ ಪಡಿಯಾಡ | ಹೊರುಟಾನ
ಕುಸುಮಾಲೆಯೆಂಬ ದುರುಗಾಕೆ || ತಂದಾನ್ನ ತಾನ ||

ಜೋಗಿ ಜಂಗಮನಾದ ಮಾಯಾದ ರೂಪಾದ
ಶಂಕಿನ ಮಣಿಯಾದ ನಿಜಲಿಂಗ | ನಿಂಗಣ್ಣಾ
ಸಂತ್ಯಾಗ ಅವನ ಸುಳಿವಿಲ್ಲ || ತಂದಾನ್ನ ತಾನ ||

ಒಕ್ಕುಳುದಾ ಜಡಿಯೋನು ಹತ್ತ್ಯಾನು ಮೇಲು ದುರುಗ
ಒಕ್ಕುಳದ ಜಡಿಯಾ ಉದರುತಾ | ಗೌರಸಂದ್ರ
ಸತ್ತ್ಯಿಗೆ ಬಿಟ್ಟಾನೆ ಉರಿಗಣ್ಣು | ಗೌರಸಂದ್ರ
ಸತ್ತ್ಯವ್ವ ಗಡಗಡನೆ ನಡಿಗ್ಯಾಳೆ | ಗೌರಸಂದ್ರ
ಸತ್ತ್ಯವ್ಯ ಓಡೋಡಿ ಬರುತ್ತಾಳೆ || ತಂದಾನ್ನ ತಾನ ||

ನಾಗುಳದ ಜಡಿಯೋನು ಏರ್ಯಾನ ಮೇಲು ದುರುಗ
ನಾಗುಳದ ಜಡಿಯಾ ಉದರುತಾ | ಗೌರಸಂದ್ರ
ದೇವಿಗೆ ಬಿಟ್ಟಾನೆ ಉರಿಗಣ್ಣು | ಗೌರಸಂದ್ರ
ದೇವಿ ಗದಗದನೆ ನಡುಗ್ಯಾಳೆ | ಗೌರಸಂದ್ರ
ದೇವಿ ಓಡೋಡಿ ಬರುತಾಳೆ || ತಂದಾನ್ನ ತಾನ ||

ಬಂಡೀನೆ ಬಂದಾವೆ ಅಂದಾವುಳ್ಳಮ್ಮಾಗೆ
ನಂದೀಶ್ವರನ ಮಗಳಿಗೆ | ಮಾರಮ್ಮಾಗೆ
ಬಂಡೀ ಬಂದಾವೆ ಶಿವನಲ್ಲಿ || ತಂದಾನ್ನ ತಾನ ||

ಗಾಲೀನೆ ಬಂದಾವೆ ಆಯಾವುಳ್ಳಮ್ಮಾಗೆ
ರೂಡೀಗಿಸ್ಪುರನ ಮಗಳಿಗೆ | ಮಾರಮ್ಮಾಗೆ
ಗಾಲೀ ಬಂದಾವೆ ಶಿವನಲ್ಲಿ || ತಂದಾನ್ನ ತಾನ ||

ಅಣ್ಣಯ್ಯ ಸೆರೆಹೋಗಿ ಹನ್ನೆರ್ಡು ದಿನವಾಯ್ತು
ಅಣ್ಣ ನಿಂಗಣ್ಣ ಸೆರೆಹೋಗಿ | ಸಿಂತರಕಲ್ಲು
ಹಣ್ಣುಳ್ಳ ವನಕ ವರಗವನೆ || ತಂದಾನ್ನ ತಾನ ||

ಅಪ್ಪಯ್ಯ ಸೆರೆಹೋಗಿ ಇಪ್ಪತ್ತು ದಿನವಾಯ್ತು
ಅಪ್ಪ ನಿಂಗಣ್ಣ ಸೆರೆಹೋಗಿ | ಸಿಂತರಕಲ್ಲು
ಕಿತ್ತಳೆ ವನಕ ವರಗವನೆ || ತಂದಾನ್ನ ತಾನ ||

ಲಿಂಗಾವ ಇಲ್ಲದ ಬಿಂಗೇರ್ಯಾಗೈದೀವಿ
ಬನ್ನೀರಿ ಬೊಮ್ಮಣ್ಣಾ ದುರುಗಾಕೆ | ಹೋಗಿನ್ನು
ನಿಂಗಣ್ಣನ ಸೆರೆಯಾ ಬಿಡಿಸಾನಿ || ತಂದಾನ್ನ ತಾನ ||

ದೇವಾರು ಇಲ್ಲದ ಬೋವೆರಾಗೈದೀವಿ
ಹೋಗನು ಬೊಮ್ಮಣ್ಣಾ ದುರುಗಾಕೆ | ಹೋಗಿನ್ನು
ಮಾಲಿಂಗನ ಸೆರೆಯಾ ಬಿಡಿಸಾನ || ತಂದಾನ್ನ ತಾನ ||

ಅಕ್ಕ ತುಮಬಲು ಮಾರಿ ಬುಕ್ಕಾಬೂದಿರಂಗ
ಚಿಕ್ಕ ಮಾಳಿಗೆ ಬಮ್ಮಯ್ಯ | ಮೂವಾರು
ಹೊರಟಾರು ಮ್ಯಾಲೆ ದುರುಗಾಕೆ || ತಂದಾನ್ನ ತಾನ ||

ತಾಯಿ ತುಮಬಲು ಮಾರಿ ಬೇವನ್ಹಳ್ಳಿ ರಂಗ
ಸಾಲ ಮಾಳಿಗೆ ಬೊಮ್ಮೈಲಿಂಗ | ಮೂವಾರು
ಹೋದಾರೆ ಮ್ಯಾಲ ದುರುಗಾಕೆ || ತಂದಾನ್ನ ತಾನ ||

ಮೂಡ್ಲಿಂದ ಬಂದಾವೆ ಮೂರು ಸಾವಿರ ಬಂಡಿ
ತಾವೇ ಕೊಡಯ್ಯ ಕರಿಹನುಮ || ತಂದಾನ್ನ ತಾನ ||

ಇಲ್ಲೆಲ್ಲೆ ತಾವಮ್ಮ ಇಲ್ಲೆಲ್ಲೆ ತಡಿಯಮ್ಮ
ಹೊಡಿಯಮ್ಮ ರಥವಾ ವರಿಯಾಕೆ | ಗೌರಸಂದ್ರ
ನೆರಿಹೋಗೆ ಪರಿಸೆ ಬಯಿಲಾಗೆ || ತಂದಾನ್ನ ತಾನ ||

ಅತ್ಲಿಂದ ಬಂದಾವೆ ಹತ್ತು ಸಾವಿರ ಬಂಡಿ
ಗೋತ್ತೇ ಕೊಡಯ್ಯಾ ಕರಿಹನುಮ || ತಂದಾನ್ನ ತಾನ ||

ಇನ್ನೆಲ್ಲೆ ಗೊತ್ತಮ್ಮಾ ಇನ್ನೆಲ್ಲೆ ಗುರಿಯಮ್ಮಾ
ಹೊಡಿಯಮ್ಮ ರಥವಾ ವರಿಯಾಕೆ | ಗೌರಸಂದ್ರ
ನೆರಿಹೋಗೆ ಪರಿಸೆ ಬಯಿಲಾಗೆ || ತಂದಾನ್ನ ತಾನ ||

ಕುಂತಿದ್ದ ಹನುಮಯ್ಯ ಕುಂತ್ಹಂಗೆ ಇರುಬೇಕು
ಅಂತುರಲಿ ಊರು ಹೋಗಬೇಕು | ಇಲ್ಲದಿದ್ದರೆ
ಶಂಭೋಶಂಕರನಾ ಮಗುಳಲ್ಲ || ತಂದಾನ್ನ ತಾನ ||

ನಿಂತಿದ್ದ ಹನುಮಯ್ಯ ನಿಂತ್ಹಂಗೆ ಇರುಬೇಕು
ಈಗಲೇ ಈವೂರು ಹೋಗಬೇಕು | ಇಲ್ಲದಿದ್ದರೆ
ನಂದೀಶ್ವರನಾ ಮಗುಳಲ್ಲ || ತಂದಾನ್ನ ತಾನ ||

ಕೆಂಪು ಅಂಚಿನ ಸೀರೆ ಕೊಂಕುಳದಾಗೆ ಕೊರವಂಜಿ
ಗಿಡುಗಳು ಮರಿಮಾಡಿ ಬರುವೊಳೆ | ಮಾರಮ್ಮ
ತಾಯಿ ಓಡೋಡಿ ಬರುತಾಳೆ || ತಂದಾನ್ನ ತಾನ ||

ಕೆಂಪು ಅಂಚಿನ ಸೀರೆ ಕಯ್ಯಾಗೆ ಕೊರವಂಜಿ
ಮರವೇ ಮರಿಮಾಡಿ ಬರುವೊಳೆ | ಕೊರವಂಜಿ
ತಾವುರುದ್ಹೊಳಿಯಾಗ ನೆಲೆ ನಿಂತು || ತಂದಾನ್ನ ತಾನ ||

ಉದ್ದನು ನೀರಿನಾಗೆ ಆದ್ದೇವು ವಗೆವೋಳೆ
ಮುದ್ದೀನ ಉಂಗುರುದ ಅಗಸೂತಿ | ಸಿಂತರಕಲ್ಲು
ಸುದ್ದೀಯಾನ್ಹೇಳೆ ನಮಗೋಟು || ತಂದಾನ್ನ ತಾನ ||

ಹರಿಯಾ ನೀರಿನಾಗೆ ಕಿರಿಗೇಯ ವಗೆವೋಳೆ
ಹವುಳದ ಉಂಗುರುದ ಅಗಸೂತಿ | ಸಿಂತರಕಲ್ಲು
ಹವಳಿಯಾನ್ಹೇಳಿ ನಮಗೋಟು || ತಂದಾನ್ನ ತಾನ ||

ರಾಗಿಯ ಪ್ಯಾಟಿಗೆ ರಣ ಮುತ್ತೂರು ಕಾವಲು
ಮೇಲ ದುರುಗಾಕೆ ಏಕನಾತಿ | ಏಳಾಮಂದಿ
ಸಿದ್ಧರ ಕಾವಲು ದುರುಗಾಕ || ತಂದಾನ್ನ ತಾನ ||

ಹತ್ತು ಸುತ್ತಿನ ಕ್ವಾಟಿ ಕೆತ್ತಿಸಿದ ಕಲ್ಲಗಸಿ
ಹತ್ತಲಾರದಕ್ಕ ಹೊರಹೊರಗೆ | ಸಿಂತರಕಲ್ಲು
ಹತ್ತಿಹೋದನ್ಹೆಂತ ಶಿವಶರಣ || ತಂದಾನ್ನ ತಾನ ||

ಆರು ಸುತ್ತಿನ ಕ್ವಾಟಿ ಏರಿಸಿದ ಕಲ್ಲಗಸಿ
ಏರುಲಾರದಕ್ಕ ಹೊರಹೊರಗೆ | ಸಿಂತರಕಲ್ಲು
ಏರಿಹೋದನ್ಹೆಂತ ಶಿವಶರಣ || ತಂದಾನ್ನ ತಾನ ||

ಹತ್ತುಲಾರದ ದನುವು ಹತ್ತ್ಯಾಳೆ ಮಾರಕ್ಕ
ಹತ್ತಿಳಿದು ತಾನು ಬರುತಾಳೆ | ಸಿಂತರಕಲ್ಲು
ಹೋದಾಳು ನಿಂಗಣ್ಣಿದ್ದ ವನಗಳಿಗೆ || ತಂದಾನ್ನ ತಾನ ||

ಏರುಲಾರದ ವನವು ಏರ್ಯಾಳೆ ಮಾರಕ್ಕ
ಏರಿಳಿದು ತಾನು ಬರುತಾಳೆ | ಸಿಂತರಕಲ್ಲು
ಹೋದಾಳು ನಿಂಗಣಿದ್ದ ಬನಗಳಿಗೆ || ತಂದಾನ್ನ ತಾನ ||

ಮಾಸ ತಿಂಬೋರಿವ್ರು ಭಾಸೆ ಮಾಡೋರಿವ್ರು
ಯಾಸಗಾರರಿವ್ರು ತುರುಕಾರ | ನೆರಿಯಾಗೆ
ಹ್ಯಾಗಿದ್ದೆ ನನ್ನ ನಿಜಲಿಂಗ || ತಂದಾನ್ನ ತಾನ ||