ಹೊನ್ನೀನ ಶತ್ತುರಿಕಿ ಹನ್ನೆರಡು ಜಗ ಜಂಪು
ಕೆನ್ನೇಯ ಮ್ಯಾಲೆ ಅರಳ್ಹೊತ್ತಿ | ಶತ್ತುರಿಕಿ
ಅಣ್ಣ ನಿಂಗಣ್ಣಗೆ ಇಡಿಸ್ಯಾರೆ || ಜಂಗಮ ||
ಮುತ್ತೀನ ಶತ್ತುರಿಕಿ ಮತ್ತಾರಿಗಿಡಿಸ್ಯಾರೆ
ಪಟ್ಟಣವಾಳೊ ದೊರೆಗಿಲ್ಲ | ಭರುಮಪ್ಪ
ಅಪ್ಪ ನಿಂಗಣ್ಣಗೆ ಇಡೀಸ್ಯಾರೆ || ಜಂಗಮ ||
ಹೊನ್ನಿನ ಶತ್ತುರಿಕಿ ಇನ್ನ್ಯಾರಿಗಿಡಿಸ್ಯಾರೆ
ಧರಣಿಯನಾಳೊ ದೊರೆಗಿಲ್ಲ | ಭರುಮಪ್ಪ
ಅಣ್ಣ ನಿಂಗಣ್ಣಗೆ ಇಡೀಸ್ಯಾರೆ || ಜಂಗಮ||
ಗಂಗೀಯ ದಡದಲ್ಲಿ ಎಂಬತ್ತು ಹೊರ್ತಿ ತೋಡಿ
ಗಂಜೀಯ ಹಚ್ಚಡವ ತೆರೆಹೊಯ್ದು | ಸಣ್ಣಕ್ಯಾದಿಗೆ
ಲೋಲೆ ತಿರುವ್ಯಾರೆ ನೆರಳಿಗೆ | ಕಾಟಯ್ಯ
ನಿಂಗಣ್ಣಾನ ಮಕವ ತೊಳುದಾರೆ || ಜಂಗಮ ||
ಬಾವೀಯ ದಡದಲ್ಲಿ ನಾಲವತ್ತು ಹೊರ್ತಿ ತೋಡಿ
ಸಾಲ್ಯಾದ ಹಚ್ಚಡವ ತೆರೆಹೊಯ್ದು | ಸಣ್ಣಕ್ಯಾದಿಗೆ
ಲೋಲೆ ತಿರುವ್ಯಾರೆ ನೆರಳಿಗೆ | ಚಿತ್ತಯ್ಯ
ನಿಂಗಣ್ಣಗೆ ಮಕವ ತೊಳುದಾರೆ || ಜಂಗಮ ||
ಆಯಿತ್ವಾರದಯ್ಯ ಹಾಲು ಮೀಸಲಯ್ಯ
ಹಾಲೆಂಜಲಯ್ಯ ಕರಕುಡಿದು | ಕಾಸಿದ
ತುಪ್ಪೆಂಜಲಯ್ಯ ನೊಣಮುಟ್ಟಿ | ಜೇನಿಗೆಯ
ಹೂವೆಂಜಲಯ್ಯ ಹುಳ ಮುಟ್ಟಿ | ತ್ವಾಟಾದ
ಕಾಯಿಯೆಂಜಲಯ್ಯ ಗಿಣಿ ಮುಟ್ಟಿ | ಸಮುದ್ರದ
ನೀರೆಂಜಲಯ್ಯ ಹುಲಿಮುಟ್ಟಿ | ಹೊರ್ತಿಯ
ಗಂಗೀ ಮೀಸಲಯ್ಯ ಹೊರ್ತ್ಯಾಗ | ಸ್ವಾಮನವರ
ಗೋ ಮೀಸಲಯ್ಯ ಉದಿಯಾಗ || ಜಂಗಮ||
ಸಿಕ್ಕಾ ಸಿಂತರುಕಲ್ಲು ಗಚೀನ ಚಾವೂಡ್ಯಾಗ
ಸುಟ್ಟು ಬಂದಯ್ಯ ಹೊರಗಮನೆ | ಹಿರಿಯಕ್ಕ
ಅಂತುರ್ಸಿ ಶೆಲ್ಲ್ಯಾರೆ ರಥನೀರು || ಜಂಗಮ ||
ಅಪ್ಪ ನಿಂಗಣ್ಣಾನ ವಪ್ಪದ್ಹಣುಮಕ್ಕಾಳು
ಅತ್ತಾಗುಡಿಸಿರಿ ಪವಳೀಯ | ಸಿಂತರಕಲ್ಲು
ಸದ್ದೀಕೇವೊಯ್ಯ ಹಿರಿಯಕ | ಸಿಂತರಕಲ್ಲು
ಸುಟ್ಟು ಬಂದಯ್ಯ ಹೊರಗವನೆ || ಜಂಗಮ ||
ಸ್ವಾಮಿ ನಿಂಗಣ್ಣಾನ ಮೋಹಾದ ಸೊಸಿಯಾರು
ಆಯಾ ಗುಡುಸಿರಿ ಪವಳೀಯ | ಸಿಂತರಕಲ್ಲು
ಸುದ್ದೀಕೆವೊಯ್ಯ ಹಿರಿಯಕ್ಕ | ಸಿಂತರಕಲ್ಲು
ಹಾಳು ಮಾಡಿದಯ್ಯ ಹೊರಗಮನೆ || ಜಂಗಮ ||
ಪೆಟ್ಟೀಗೆ ನಿಂಗಣ್ಣಾ ಪಟ್ಟುಣುದಾಗ ಪೂಜ್ಯಾರಿ
ಪಟ್ಟಾಸಾಲ್ಯಾಗೆ ಕರಿಯಣ್ಣ |ಕುಂತಗಂಡು
ನಿಂಗಣ್ಣನ ಮಕವಾ ತೊಳಿರಂದ || ಜಂಗಮ ||
ಮಂಗಳ ಮಹಿಮೆ ಕಣೆ ಶಿವಕಾಂತೆ ಜಂಗಮ ಲಿಂಗ ಕಣೆ || ದನಿ ||
ಹೊತ್ತುಂಟ್ಲೆ ಚಂದ್ರಣ್ಣ ಕೈ ಮಕವ ತೊಳ್ವಾನೆ
ಮುತ್ತೀನ ಚಂಬು ಬಲಗೈಲಿ | ಚಂದ್ರಣ್ಣ
ಹುತ್ತಾಕ ಆಣೆ ಕರುದಾನೆ || ಮಂಗಳ ||
ಹುತ್ತಾಕ ಆಣೆ ಏನೆಂದು ಕರುದಾನೆ
ಚಿತ್ತಯ್ಯನಾಣೆ ಶಿವನಾಣೆ | ನೀವು ನಿಮ್ಮ
ಹುತ್ತ ಬೆಟ್ಟು ಹೊರಯಾಕ ಹೊರಡದಿರಿ || ಮಂಗಳ |
ಏಳತ್ಲೆ ಚಂದ್ರಣ್ಣ ಕಾಲುಮಕವ ತೊಳ್ದಾನೆ
ತಾಮ್ರದ ಚಂಬು ಬಲಗೈಲಿ | ಚಂದ್ರಣ್ಣ
ಕ್ವಾಮೀಗಿ ಆಣೆ ಕರುದಾನೆ || ಮಂಗಳ||
ಕ್ಚಾಮೀಗೆ ಆಣೆ ಏನೆಂದು ಕರುದಾನೆ
ಕಾಟಯ್ಯನಾಣೆ ಶಿವನಾಣೆ | ನೀವು ನಿಮ್ಮ
ಕ್ವಾಮೆ ಬಿಟ್ಟು ಹೊರಯಾಕ ಹೊರಡದಿರಿ || ಮಂಗಳ ||
ಹಟ್ಟೀಯ ಬಿಟ್ಟಾರೆ ಹತ್ತೆಜ್ಜೆ ನಡುದಾರೆ
ತಪ್ಪೀನ ಕಾಯಿ ಹಿಡಕಂಡು | ಮಾವುಗಳು
ಹುತ್ತದ ಬಳಿಗೆ ನಡುದಾರೆ || ಮಂಗಳ||
ಓಣೀಯ ಬಿಟ್ಟಾರೆ ಆರ್ಹೇಜ್ಜೆ ನಡುದಾರೆ
ಹಣುವಿನ ಕಾಯಿ ಹಿಡಕಂಡು | ಮಾವುಗಳು
ಕ್ವಾಮೀಯ ಬಳಿಗೆ ನಡದಾರೆ || ಮಂಗಳ ||
ಯಳಿನಾಗ ಸುಳಿನಾಗ ಯಳಿಯ ಬೋದಿಗಿನಾಗ
ಹೆಡಿಯ ಅಲ್ಲಾಡಿ ಹರದೋಗ | ನಾಗಾನ
ಹಿಡ್ಡಾರ ಮವುಗಳು ಸಿವುಡಿಗೆ | ಸಿಂಬೆಮಾಡಿ
ಹೊತ್ತಾರೆ ಹಾಲ ಹರೆವೇಯ || ಮಂಗಳ ||
ಯಳಿನಾಗ ಸುಳಿನಾಗ ಯಳಿಯ ಬೋದಿಗಿನಾಗ
ಕತ್ತೇ ಅಲ್ಲಾಡಿ ಹರದ್ಹೋಗ | ನಾಗಾನ
ಸುತ್ತ್ಯಾರೆ ಮಾವುಗಳು ಸಿವುಡಿಗೆ | ಸಿಂಬೆಮಾಡಿ
ಹೊತ್ತಾರೆ ಹಾಲಹರವಿಗೆ | ಅಕ್ಕಮಗಳು
ಹೋದಾರು ಹೊಸ್ತಾಲಿ ದಿಬ್ಬಕ್ಕೆ || ಮಂಗಳ ||
ಕಳ್ಳ್ಯಾಗಿರುವೊದು ಮೆಳ್ಳಗಣ್ಣಿನ ನಾಗೀಂದ್ರ
ಬೆಳ್ಳೆ ಬೆಳ್ಳುದ ನಿನ ಕ್ವಾಮೆ | ಸ್ವಾಮನೂರು
ಜಾವ್ಹೊತ್ತಗೆ ತನಿಯ ಎರದಾರೆ || ಮಂಗಳ ||
ಕಟ್ಟ್ಯಾಗಿರುವೊದು ಬಟ್ಟಹಣ್ಣಿನ ನಾಗೀಂದ್ರ
ಬಟ್ಟೆ ಬೆಟ್ಟುದ್ದ ನಿನ ಕ್ವಾಮೆ | ಸ್ವಾಮನೂರು
ಒಪ್ಪತ್ತಿಗೆ ತನಿಯ ಎರದಾರೆ || ಮಂಗಳ||
ಕಟ್ಟೆ ಕಲ್ಲಿಗೆ ಹತ್ತಿಕೊಂಡಿರುವೋನೆ
ಹತ್ತು ಹೆಡಿಯೋವ್ನ ಯಳಿನಾಗ | ಕಂಡಿನ್ನ
ಮಕ್ಕಳು ತಾಯೋರು ಹೆದರ್ಯಾರೆ || ಮಂಗಳ ||
ಏರಿ ಕಲ್ಲಿಗೆ ತಾರಿಕೊಂಡಿರುವೋನೆ
ಯೇಳ ಹೆಡಿಯೋವ್ನ ಯಳಿನಾಗ| ಕಂಡಿನ್ನ
ಬಾಲ ತಾಯೋರು ಹೆದರ್ಯಾರೆ || ಮಂಗಳ ||
ಅಂಬಾರದಿಂದ ನಿಂಬೆ ಕಂಬ ಬಂದು
ಎಂಬತ್ತು ಯೇಳು ಎಲಿಗಣಸ | ಬಂದಾವೆ
ರೆಂಭೆ ನಾಗಮ್ಮನ ಮಗನಿಗೆ || ಮಂಗಳ ||
ಆಕಾಶದಿಂದ ಬಾಳೆ ಕಂಬ ಬಂದು
ನಲವತ್ತೇಳು ಎಲಿಗಣಸ | ಬಂದಾವೆ
ನಾರಿ ನಾಗಮ್ಮನ ಮಗನಿಗೆ || ಮಂಗಳ ||
ಹತ್ತು ವರ್ಷದ ಮಗನ ಪಟ್ಟಾಕ ಕೊಡುವಾಗ
ಹೆತ್ತಮ್ಮಲೊಡಲು ದಿಗಲಂದು || ಹೊನ್ನಬಂಡೆ
ಪಟ್ಟಾಕ ಮಗನ ಕೊಡುವಾಗ || ಮಂಗಳ ||
ಆರು ವರ್ಷದ ಮಗನ ದೇವರಿಗೆ ಕೊಡುವಾಗ
ತಾಯಮ್ಮ ನೋಡಲು ದಿಗಲಂದ | ಹೊನ್ನಬಂಡೆ
ಪಟ್ಟಾಕ ಮಗನ ಕೊಡುವಾಗ || ಮಂಗಳ ||
ಕುಂದುರ್ಪೆಲಿಂದ ಮುಂದೆ ಬಂದವು ಅರಣೆ
ಮುಂಗೈಲಿ ಧೂಪ ಎಸವೂತ | ಹೊನ್ನಬಂಡೆ
ಮುಂದಲರಮನಿಗೆ ಶಿವಪೂಜೆ || ಮಂಗಳ ||
ನಡುಗಲ್ಲಿಂದ ನಡುದು ಬಂದವು ಅರಣೆ
ಎಡಗೈಲಿ ಧೂಪ ಎಸವೂತ | ಹೊನ್ನಬಂಡೆ
ನೆಡವುಲರಮನಿಗೆ ಶಿವಪೂಜೆ || ಮಂಗಳ ||
ಸುತ್ತಲೊಕ್ಕಲು ಕಲ್ತು ಬಟ್ಟಲ್ಹೊನ್ನ ಕಲಸಿ
ಬಟ್ಟುಮುತ್ತೀಲಿ ಹಸೆಯ ಬರುದಾರೆ | ಹೊನ್ನಬಂಡೆ
ನಿಂಗಣ್ಣಗೆ ಬರೆದಾರೆ ಹಸೆಗಳು || ಮಂಗಳ ||
ಸಾವಿರಕ್ಕಲು ಕಲ್ತು ಸ್ಯಾರೆಲೆ ಹೊನ್ನ ಕಲಸಿ
ಮನಮುತ್ತೀಲಿ ಹಸೆಯ ಬರುದಾರೆ | ಹೊನ್ನಬಂಡೆ
ಮಾಲಿಂಗಗ ಬರೆದಾರೆ ಹಸೆಗಳು || ಮಂಗಳ ||
ಅಂಬಾರದಿಂದ ನಿಂಬೆಕ್ಹಂಬ ಬಂದು
ಕಾಯಿ ಹೊಂಬಾಳೆ ಬಿಗುದಾರೆ | ಹೊನ್ನಬಂಡೆ
ನಿಂಗಣ್ಣಗ ಧಾರೆ ಎರದಾರೆ || ಮಂಗಳ ||
ಆಕಾಶದಿಂದ ಬಾಳೆಕಂಬ ಬಂದು
ಅಕ್ಕಿ ಹೊಂಬಾಳೆ ಬಿಗುದಾರೆ | ಹೊನ್ನಬಂಡೆ
ಮಾಲಿಂಗಗ ಧಾರೆ ಎರದಾರೆ || ಮಂಗಳ ||
ಸಂಜೆ ಬೆಳದಿಂಗಳು ಮುಂದಿಬ್ಬರಾರೇರು
ಗಂಧ ಬಟ್ಟಾಲು ಹಿಡ್ಕೊಂಡು | ಹೊನ್ನಬಂಡೆ
ನಿಂಗಣ್ಣಗ ಧಾರೆ ಎರದಾರೆ || ಮಂಗಳ ||
ಎಳಿಯ ಬೆಳದಿಂಗಳು ಒಳಗಿಬ್ಬರಾರೇರು
ಸಾದ ಬಟ್ಟಾಲು ಹಿಡ್ಕೊಂಡು | ಹೊನ್ನಬಂಡೆ
ಮಾಲಿಂಗಗ ಧಾರೆ ಎರದಾರೆ || ಮಂಗಳ ||
ಅಪ್ಪ ಅರವಯ್ಯ ನೆತ್ತಿಮ್ಯಾಗಳ ಜುಟ್ಟು
ಇಪ್ಪತೆಸಳಿನ ಜನಿವಾರ | ಅರವಯ್ಯ
ಒಪ್ಪುವಾಗಿ ಹೂಡ ಬ್ರಹ್ಮಗಂಟು || ಮಂಗಳ ||
ಅಣ್ಣ ಅರವಯ್ಯ ಕೆನ್ನೆಮ್ಯಾಗಳ ಜುಟ್ಟು
ಇಪ್ಪತೆಸಳಿನ ಜನಿವಾರ | ಅರವಯ್ಯ
ಚಂದುವಾಗಿ ಹೂಡ ಬ್ರಹ್ಮಗಂಟು || ಮಂಗಳ ||
ಹಂದರಲ್ಲಾಡುತ್ತ ಮಂದ್ಯೇಲ್ಲ ನೋಡತ್ತ
ಕಂದ ನಿನ ಕಾಲ ತುಣುವೂತ | ಮಂಡೆಮ್ಯಾಲೆ
ದುಂಡಕ್ಕಿ ಬೀರ್ಯಾರೆ ಹಿರಿಯರು || ಮಂಗಳ ||
ಚಪ್ಪರಲ್ಲಾಡುತ್ತ ಸುತ್ತೇಲ್ಲ ನೋಡತ್ತ
ಪುತ್ರ ನಿನ ಕಾಲ ತುಣವೂತ | ಮಂಡೆಮ್ಯಾಲೆ
ಕ್ಯಾಸಕ್ಕಿ ಬೀರ್ಯಾರೆ ಹಿರಿಯರು || ಮಂಗಳ ||
ಗುಡಿಯ ಕಟ್ಟ್ಯಾರೆ ಗುಡಿಯ
ಸಾವಿರೊಕ್ಕಲ್ಲು ಕಲತು ನಾಳೆ ನಮ್ಮಾವುಗಳು
ಶಿಖುರ ಕಟ್ಟ್ಯಾರೆ ಶಿಖುರ || ದನಿ ||
ತುಪ್ಪ ಬಾನಾವುಂಡು ಇಪ್ಪತ್ತಿಳ್ಳೇವು ಮಿದ್ದು
ಮಾವುಗಳ್ಹೋರಟಾರೆ ಮಲೆನಾಡ | ಬೆಟ್ಟಾಕ
ಆಯವುಳ್ಳ ಬಿದಿರು ಕಡುದು ಕಟ್ಟ್ಯಾರೆಮ್ಮ || ಮಂಗಳ ||
ಆಯವುಳ್ಳ ಬಿದಿರು ಕಡದು ಕಟ್ಟ್ಯಾರೆಮ್ಮ
ನಲವತ್ತು ಗೇಣೀನಾ ಅರಮನೆ | ವಳಗಿರುವ
ಸ್ವಾಮಿ ನಿಂಗಣ್ಣ ಮದಲಿಂದ || ಗುಡಿಯ ||
ಹಾಲು ಬಾನಾವುಂಡ ನಲವತ್ತಿಳೇವು ಮಿದ್ದು
ಮಾವುಗಳ್ಹೋರಟಾರೆ ಮಲೆನಾಡ | ಬೆಟ್ಟಾಕ
ಒಪ್ಪುಳ್ಳ ಬಿದಿರು ಕಡುದಾರೆ || ಗುಡಿಯ ||
ಒಪ್ಪಳ್ಳ ಬಿದಿರು ಕಡದು ಕಟ್ಟ್ಯಾರಮ್ಮ
ಇಪ್ಪತ್ತು ಗೇಣೀನಾ ಅರಮನೆ | ವಳಗಿರುವ
ಸ್ವಾಮಿ ಈರಣ್ಣಗೆ ಶಿವಪೂಜೆ || ಗುಡಿಯ ||
ಹತ್ತು ಸಾವಿರ ಭಂಡಿ ಒತ್ತಿಲಿ ಕಲ್ಲುಕುಟಿಗಾರ
ಹಚ್ಚಡದವರು ಗೌವುಡಾರು | ಕ್ಯಾತಣ್ಣಾನ
ಕೊತ್ತಲಿಗೆ ಕಲ್ಲೆವಡಿಸ್ಯಾರೆ || ಗುಡಿಯ ||
ಆರು ಸಾವಿರ ಭಂಡಿ ವಾರೆಲಿ ಕಲ್ಲುಕುಟಿಗಾರು
ಪಾವಾಡದವರು ಗೌವುಡದಾರು | ಕ್ಯಾತಣ್ಣಾನ
ಚಾವುಡಿಗೆ ಕಲ್ಲೆ ವಡಿಸ್ಯಾರೆ || ಗುಡಿಯ ||
ಅಳ್ಳುಗಲ್ಲು ಗುಡಿಸಿ ನಿಲ್ಲಂದ ಮಠಗಾಳು
ಅಲ್ಲ್ಹೊನ್ನ ಬಂಡೆ ಬಯಿಲಾಗೆ ಮಾವುಗಳು
ನಿಲ್ಲಂದುರೆ ಗಾರೆ ಮಠಗಾಳು || ಗುಡಿಯ ||
ಹಿಟ್ಟಗಲ್ಲು ಗುಡಿಸಿ ಕಟ್ಟಂದ ಮಠಗಾಳು
ಮತ್ತ್ಹೊನ್ನ ಬಂಡೆ ಬಯಿಲಾಗೆ | ಮಾವುಗಳು
ಕಟ್ಟಂದರೆ ಗಾರಿ ಮಠಗಾಳು || ಗುಡಿಯ ||
ಕಲ್ಲುಗಳು ಕಡುದಾರೆ ಸೊಪ್ಪುಗಳು ಮುಳ್ಳುಗಳು ಅರಡ್ಯಾರೆ
ಅಲ್ಲ್ಹೊನ್ನ ಬಂಡೆ ಬಯಿಲಾಗೆ | ಮಾವುಗಳು
ಸನ್ನಾರದ ಬೆರಗು ತಿರುವ್ಯಾರೆ || ಗುಡಿಯ ||
ತೊಟ್ಟುಗಳು ಕಡುದಾರೆ ಸೊಪ್ಪುಗಳು ಅರಡ್ಯಾರೆ
ಮತ್ತ್ಹೊನ್ನ ಬಂಡೆ ಬಯಿಲಾಗೆ | ಮಾವುಗಳು
ಚಿತ್ತಾರದ ಬೆರಗು ತಿರುವ್ಯಾರೆ || ಗುಡಿಯ ||
ಬಂದೀಯ ಮುರಿಯ್ಹಂಗೇ ಅಂದವಾದ್ದು ಕಳ್ಳಿ
ಸ್ವಾಮೀನೇ ಈರಣ್ಣನ ಪವುಳೀಯ | ಬಾಕಲು ಕಳ್ಲಿ
ವಾಲೇಯ ಮುರಿಯ ತಿರುವ್ಯಾರೆ || ಗುಡಿಯ ||
ಕಪ್ಪೀನ ಮುರಿಯ್ಹಂಗೆ ಒಪ್ಪವಾದವು ಕಳ್ಳಿ
ಅಪ್ಪ ಕರಿಯಣ್ಣನ ಪವುಳೀಯ | ಬಾಕುಲ ಕಳ್ಳಿ
ಕುಪ್ಪೀಯ ಮುರಿಯ ತಿರುವ್ಯಾರೆ || ಗುಡಿಯ ||
ಮುತ್ತೀನ ಹೊರಕಳ್ಳಿ ಮುತ್ತೀನ ವಳಕಳ್ಳಿ
ಮುತ್ತೇ ಕೆತ್ತಿಸಿದ ಮರುದಕಳ್ಳಿ | ಗುಡಿಯ
ಕಟ್ಟಿಸಿದೋನು ಯಾರ ಮಗುನಮ್ಮಾ | ಅವನಿಗೆ
ಬಾಲೆರೈವರುನಾ ಕೊಡುಸ್ವಾಮಿ || ಗುಡಿಯ ||
ಚಿನ್ನದ ಹೊರಕಳ್ಳಿ ಚಿನ್ನದ ವಳಕಳ್ಳಿ
ಚಿನ್ನ ಕೆತ್ತಿಸಿದ ಮರುದಕಳ್ಳಿ | ಗುಡಿಯ
ಕಟ್ಟಿಸಿದೋನು ಗೊಲ್ಲಗೌಡ್ರ ಕ್ಯಾತಣ್ಣಮ್ಮ | ಅವನಿಗೆ
ಮಕ್ಕಾಳ ಸಂತಾನ ಇಪ್ಪತ್ತ ಕೊಡುಸ್ವಾಮಿ || ಗುಡಿಯ ||
ಮಕ್ಕಾಳ ಸಂತಾನ ಇಪ್ಪತ್ತ ಕೊಡುಸ್ವಾಮಿ
ಅಪ್ಪಾನ ಮುಂದೆ ಕಣಸವ | ಇಡವೋರಿಗೆ
ಬಾಲೆರೈವರುನಾ ಕೊಡುಸ್ವಾಮಿ || ಗುಡಿಯ ||
ಅಪ್ಪಾನ ಗುಡಿಕಟ್ಟಿ ಇಪ್ಪತ್ತು ದಿನವಾಯ್ತು
ಶೆಟ್ಟಿ ಈರಣ್ಣ ಬರಲಿಲ್ಲೆಂದು | ನಿಂಗಣ್ಣ
ಹತ್ತಿದಂದುಲವ ಇಳುದಾನೆ || ಗುಡಿಯ ||
ಹತ್ತಿದಂದುಲವ ಇಳಿದು ಸುತ್ತಾಯ ನೋಡ್ಯಾನೆ
ಶೆಟ್ಟಿ ಈರಣ್ಣ ಬರುವಾಗ | ನಿಂಗಣ್ಣ
ಪಟ್ಟೆದ್ಹಚ್ಚಡುವ ಮರೆಗೊಂಡ || ಗುಡಿಯ ||
ದೇವರ ಗುಡಿ ಕಟ್ಟಿ ನಲವತ್ತು ದಿನವಾಯ್ತು
ಜಾಣ ಈರಣ್ಣ ಬರಲಿಲ್ಲೆಂದು | ನಿಂಗಣ್ಣ
ಏರಿದಂದುಲುವ ಇಳಿದಾನೆ || ಗುಡಿಯ ||
ಏರಿದಂದುಲುವ ಇಳಿದು ದೂರಾಯ ನೋಡ್ಯಾನೆ
ಜಾಣ ಈರಣ್ಣ ಬರುವಾಗ | ನಿಂಗಣ್ಣ
ಸಾಲ್ಯದ್ಹಚ್ಚುಡವ ಮರೆಗೊಂಡ || ಗುಡಿಯ ||
ಚಿಕ್ಕನೆ ದುರುಗಕ್ಕ ಹೆಚ್ಚಿನಾಳು ಕಳುವು
ಚತ್ತರಿ ಈರಣ್ಣ ಬರಲಿಲ್ಲೆಂದು || ನಿಂಗಣ್ಣ
ಚತ್ತರ್ಗಿ ನೂರಾಳು ಕಳಿವ್ಯಾನೆ || ಗುಡಿಯ ||
ಹಿರಿಯನೆ ದುರುಗಕ್ಕ ಹಿರಿದುನಾಳು ಕಳುವು
ಕುದುರೆ ಈರಣ್ಣ ಬರಲಿಲ್ಲೆಂದು | ನಿಂಗಣ್ಣ
ಕುದುರಿಗಿ ನೂರಾಳು ಕಳಿವ್ಯಾನೆ || ಗುಡಿಯ ||
ಪೊಪ್ಪದ ಪೂಜೆ ನೋಡೆ ಈರಣ್ಣಗ ಒಪ್ಪುವ ಶದುರ ನೋಡೆ ||ದನಿ||
ಚಿಕ್ಕೊವ್ನು ಪೂಜಾರೆಂದು ಸಿಟ್ಟಾದರೊಕ್ಕಲು
ಚಿಕ್ಕ ಪೂಜಾರಲ್ಲ ಹಸುಮಗ | ಈರಣ್ಣ
ಸುತ್ತಿಟ್ಟು ಪೂಜೆ ತಿರುವ್ಯಾನೆ || ಪೊಪ್ಪದ ||
ಸಣ್ಣ ಪೂಜಾರೆಂದು ಬೆಸರಾದೊಕ್ಕಲು
ಸಣ್ಣ ಪೂಜಾರಲ್ಲ ಹಸುಮಗ | ಈರಣ್ಣ
ಹೆಸರಿಟ್ಟು ಪೂಜೆ ತಿರುವ್ಯಾನೆ || ಪೊಪ್ಪದ ||
ಬಾಳೆಕಾಯಿ ಪೂಜೆ ಬಾಳೆ ಎಲಿಯ ಪೂಜೆ
ಬಾಳೆಹಣ್ಣಿನ ಪೂಜೆ ವುದಿಯಾಗ | ಈರಣ್ಣ
ಬಾಲನ ಬೇಡೋರು ಎಡನಿಲ್ಲ ||ಪೊಪ್ಪದ ||
ಕಂದಾನ ಬೇಡೋರು ಮುಂದಿನ ಮಠಕ್ಹೋಗಿರಿ
ತುಂಬೀಗಿಲಿ ಹಲು ಒಂದ್ಹೊತ್ತು | ಬಂದರೆ
ತಂದಿ ಈರಣ್ಣನ ಗುರು ಮಠಕ್ಕ || ಪೊಪ್ಪದ ||
ನಿಂಬೆಕಾಯಿ ಪೂಜೆ ನಿಂಬೆ ಎಲಿ ಪೂಜೆ
ನಿಂಬೆಹಣ್ಣೀನ ಪೂಜೆ ವುದಿಯಾಗ | ನಿಂಗಣ್ಣ
ಕಂದಾನ ಬೇಡೋರು ಎಡನಿಲ್ಲ ||ಪೊಪ್ಪದ ||
ಕಂದಾನ ಬೇಡೋರು ಮುಂದಿನ ಮಠಕ್ಹೋಗಿರಿ
ತುಂಬೀಗಿಲಿ ಹಾಲು ಒಂದ್ಹೊತ್ತು | ಬಂದಾರೆ
ತಂದಿ ನಿಂಗಣ್ಣನ ಗುರು ಮಠಕ್ಕ ||ಪೊಪ್ಪದ ||
ಅಪ್ಪನ ಗುಡಿಸುತ್ತ ಮತ್ತೇನು ಬೆಳದಾವೆ
ಹಚ್ಚಗೂಲಾಲಿ ವನಮಾಲೆ | ಊದಿನಕಡ್ಡಿ
ಅಪ್ಪಗ ಗೂಲಾಲಿ ಬೆಳದಾವೆ || ಪೊಪ್ಪದ ||
ಅಣ್ಣನ ಗುಡಿಸುತ್ತ ಇನ್ನೇನು ಬೆಳದಾವೆ
ಸಣ್ಣವಲಗೂಲಿ ವನಮಾಲೆ | ಊದಿನಕಡ್ಡಿ
ಅಣ್ಣ ಗುಡಿಸುತ್ತ ಬೆಳದಾವೆ || ಪೊಪ್ಪದ ||
ಅಕ್ಕಿ ಅಕ್ಕಿಯ ಪೂಜೆ ಅಕ್ಕಿ ಅನ್ನದ ಪೂಜೆ
ಒಕ್ಕಲು ಕಟ್ಟಸಿದ ಹೊಸ ಪೂಜೆ | ಕದಲಿಯ
ಹೊಕ್ಕು ನೋಡ್ಯಾರೆ ಗೌಡರ | ಕ್ಯಾತಣ್ಣನ
ಕೊಡಬಂದಾರು ಕೊರಳ ಪದಕವ || ಪೊಪ್ಪದ ||
ರಾಗಿ ರಾಗಿಯ ಪೂಜೆ ರಾಗಿ ಅನ್ನದ ಪೂಜೆ
ರಯಾರು ಕಟ್ಟಸಿದ ಹೊಸ ಪೂಜೆ | ಕದಲಿಯ
ಹೋಗಿ ನೋಡ್ಯಾರೆ ಗೌಡರ | ಈರಣ್ಣನ
ಕೊಡಬಂದಾರು ಕೊರಳ ಪದಕವ || ಪೊಪ್ಪದ ||
* * *
Leave A Comment