ಅರುಳೆಗೆದ್ದು ಇರುಳೆ ಬಂದಾ
ರೆಡ್ಡೀಮನಿಯಾ ತರುವೆ ಗೆದ್ದು ಅರುಸೇ ಬಂದಾ || ದನಿ ||

ಬುಟ್ಟ ರಾಜಣಗದ್ದೆ ಉಟ್ಟು ಏಳುದು ಮ್ಯಾಲೆ
ಅಪ್ಪುಗುಳು ಮನಿಯ ಗುರುಸ್ವಾಮಿ | ನೆನಯದು ಮ್ಯಾಲೆ
ಅಕ್ಕಾನಾ ಹುಟ್ಟೀ ಫಲವೇನೆ || ಅರಳುಗೆದ್ದು ||

ಬಾಲ ರಾಜಣಗದ್ದೆ ಬಗೆಯ ಏಳುದು ಮ್ಯಾಲೆ
ಮಾವೂಗಳು ಮನಿಯ ಗುರೂಸ್ವಾಮಿ | ನೆನಿಯದೆ ಮ್ಯಾಲೆ
ತಾಯೀನಾ ಹುಟ್ಟೀ ಫಲವೇನೆ || ಅರುಳೆಗೆದ್ದು ||

ಹೊತ್ತುಟ್ಲೆ ಎದ್ದು ಕಟ್ಟೆ ಸಾರುಸುತ್ತಿದ್ದೆ
ಅಪ್ಪುಗಳು ಮನಿಯ ಗುರುಸ್ವಾಮಿ | ಬರುವುದು ಕಂಡು
ಕಪ್ಪೀನ ಸಿರುಬಾಗಿ ಶರಣೆಂದೆ | ಹೋಗುಲುವಾಗ
ಪುತ್ರಿ ನೀನ್ಯಾರ ಮಗಳಮ್ಮಾ || ಅರಳುಗೆದ್ದು ||

ಯಾರ ಮಗಳಂದಾರೆ ಏನು ಹೇಳಲಿ ಗುರುವೆ
ರಾಯ ಓಬೇನ್ಹಳ್ಳಿ ಗವುಡಾರ | ಸಿಮ್ಮಾಸುಣುವ
ತೂಗಿ ಆಳೋರ ಮಗುಳಂದೆ || ಅರಳುಗೆದ್ದು ||

ಎಳೊತ್ಲೆ ಎದ್ದು ಓಣೀ ಸಾರುಸುತಿದ್ದೆ
ಮಾವುಗಳು ಮನಿಯ ಗುರುಸ್ವಾಮಿ | ಬರುವುದು ಕಂಡು
ವಾಲೀಯ ಸಿರುಬಾಗಿ ಶರಣಂದೆ | ಹೋಗುಲುವಾಗ
ಬಾಲೆ ನೀನ್ಯಾರ ಸೋಸಿಯಮ್ಮಾ || ಅರಳೆಗೆದ್ದು ||

ಯಾರ ಸೊಸಿಯಂದಾರೆ ಏನು ಹೇಳಲಿ ಗುರುವೆ
ರಾಯ ತಾಳುವ್ಹಟ್ಟಿ ಗವುಡಾರ | ಸಿಮ್ಮಾ ಸುಣುವ
ಹತ್ತಿ ಆಳೋರ ಸೊಸಿಯೆಂದೆ || ಅರಳೆಗೆದ್ದು ||

ಅಪ್ಪುಗಳ ಕಾಣಾಸಿ ಬೊಟ್ಟೀಲಿ ತೋರೆನು
ಕುಟ್ಟಿ ಡಂಗುರವ ವಯಿಸೇನು | ಓಬೇನ್ಹಳ್ಳಿ
ಕಾಣಾಸಿ ಗವುಡಾರ ಮಗಳಂದು || ಅರುಳೆಗೆದ್ದು ||

ಮಾವುಗಳ ಕಾಣಾಸಿ ತೋಳೀಲಿ ತೋರೆನು
ಸಾರೇನೆ ಡಂಗುರವ ವಯಿಸೇನು | ತಾಳೂವ್ಹಟ್ಟಿ
ಕಾಣಾಸಿ ಗೌಡರ ಮಗುಳಂದೆ || ಅರುಳೆಗೆದ್ದು ||

ಕಾಣಾಸಿ ಕಲ್ಹತ್ತಿ ಕಣಸಾಕಕ್ಕಿವೈದು
ಯಾರ‍್ಹೆಸುರು ಹೇಳಾಲಿ ಹಿರಿಯಣ್ಣ | ಮಾರನೋರು
ಕಾಣಾಸಿ ಗವುಡಾರ ಮಗುಳಂದೆ || ಅರುಳೆಗೆದ್ದು ||

ಅತ್ತಿಗೆ ನಾಗಮ್ಮಾ ಪುತ್ರಗ್ಹಾಲೆರ್ದು
ಗಕ್ಕಾನೇಳಮ್ಮಾ ಹೊಲಮನಿಗೆ | ಬೊಮ್ಮಣ್ಣ
ನೆತ್ತೀಯ ಸೀಳಿ ರಯಿತಾವ | ತೆಗ್ದೆನೆಂದು
ವೆಚ್ಚದ ಮಾತೂ ನುಡುದಾನೆ || ಅರುಳೆಗೆದ್ದು ||

ಚಿಕ್ಕ ಮೈದಾನ ನುಡಿದ ವಚ್ಚದ ಮಾತೀಗೆ
ಬಿತ್ತಲು ಬೀಜಗಳು ಹೆಗಲಿಟ್ಟು | ಬೊಮ್ಮಣ್ಣನ
ಗುತ್ತೀಯ ಹೊಲಕ್ಕೆ ಸಡುದಾಳೆ || ಅರುಳೆಗೆದ್ದು ||

ನಾದೂನಿ ನಾಗಮ್ಮ ಬಾಲಗ್ಹಾಲೆರ್ದು
ಬೇಗನೇಳಮ್ಮಾ ಹೊಲಮನಿಗೆ ಬೊಮ್ಮಣ್ಣ
ನಾಲೀಗೆ ಸೀಳಿ ರಯಿತಾವ | ತೆಗ್ದೆದೆನೆಂದ
ವನಸಾಲಿಗೆ ಮಾತು ನಡುದಾನೆ || ಅರುಳೆಗೆದ್ದು ||

ಸಣ್ಣ ಮೈದುನ ನುಡಿದ ವನಸಾಲಿ ಮಾತೀಗೆ
ಬಿತ್ತಲು ಬೀಜಗಳು ಕೈಲ್ಹಿಡಿದು | ಬೊಮ್ಮಣ್ಣನ
ಮಾನ್ಯಾದ ಹೊಲುಕ್ಕೆ ನಡುದಾಳೆ || ಅರುಳೆಗೆದ್ದು ||

ಮುಕ್ಕಣ್ಣನೆಂಬ ಎರಡೆತ್ತೂ ಹೂಡಿಕೊಂಡು
ಹಗಲೇಳು ದಿವುಸಾ ಹೊಲಮನಿ | ಬೊಮ್ಮಣ್ಣ
ಹಗಲೆ ಸಾಲೇರಿ ಬರುತಾವೆ | ಬೊಮ್ಮಣ್ಣ
ಬಾಲವಮ್ಮಗ್ಹಾಲು ಮೊದಲಿಲೆಂದು | ನಾಗಮ್ಮ
ಗ್ಯಾನವಿಲ್ಲ ಬೊಮ್ಮಣ್ಣನ ಮನುದಾಗೆ || ಅರುಳೆಗೆದ್ದು ||

ರೇವಣ್ಣಾನೆಂಬ ಎರಡೆತ್ತೂಹೂಡಿಕೊಂಡು
ಹಗಲೇಳು ದಿವುಸಾ ಹೊಲಮನಿ | ಬೊಮ್ಮಣ್ಣ
ಇರುಳೇ ಸಾಲೇರಿ ಬರುತಾವೆ | ಬೊಮ್ಮಣ್ಣ
ಪುತ್ರಮ್ಮಾಗ್ಹಾಲು ಮೊದಲಿಲೆಂದು | ನಾಗಮ್ಮ
ನಿಟ್ಟಿಲ್ಲ ಬೊಮ್ಮಣ್ಣನ ಮನುದಾಗೆ || ಅರುಳೆಗೆದ್ದು ||

ಮುಕ್ಕುವಣ್ಣಾನೆಂಬ ಎರಡತ್ತು ಬಿಟ್ಟು
ಮುಟ್ಟೇಬಾರಿಕೋಲು ಹೆಗಲಿಗಿಟ್ಟುಕೊಂಡು | ಬೊಮ್ಮಣ್ಣ
ನಡುತಾನೆ ತನ್ನ ಅರಮನಿಗೆ || ಅರುಳೆಗೆದ್ದು ||

ಮುಟ್ಟೇನೆ ಬಾರಿಕೋಲು ಹೊಳಿಯಾಕೆ ಎಸುದಾನೆ
ನಡುದಾನೆ ಪಡುವಲ ಮಕನಾಗಿ || ಅರುಳೆಗೆದ್ದು ||

11_85_KK-KUH

ಹತ್ತು ಖಂಡುಗ ನವಣೆ ಮತ್ತಿರುಳು ಬೆಳಕಂಬೆ
ಪುತ್ರಮ್ಮಗ್ಹಾಲು ಕೊಡು ಶಿವನೆ || || ಅರುಳೆಗೆದ್ದು ||

ಆರು ಖಂಡುಗ ನವಣೆ ಮ್ಯಾಲಿರುಳು ಬೆಳೆಕಂಬೆ
ಬಾಲಮ್ಮಾಗ್ಹಾಲು ಕೊಡು ಶಿವನೆ || ಅರುಳೆಗೆದ್ದು ||

ಹೊಕ್ಕುಳುದ ಬವುನಾಸಿ ತೆಕ್ಕಿಗವಸಿಕೊಂಡ
ಬೆಟ್ಟದಾಗಿನ ಹುಲ್ಲೆ ಕರಕೊಂಡು | ಬೊಮ್ಮಣ್ಣ
ಪುತ್ರಮ್ಮಗ್ಹಾಲು ಯರುಕೊಂಡ || ಅರುಳೆಗೆದ್ದು ||

ಏರ್ಹೋಗೊ ಸರ್ಪ ತೋಳಿಗವುಸಿಕೊಂಡ
ಹಾರಿಹೋಗೊ ಹುಲ್ಲೆ ಕರಕೊಂಡು | ಬೊಮ್ಮಣ್ಣ
ಬಾಲಮ್ಮಗ್ಹಾಲು ಯರಕೊಂಡ || ಅರುಳೆಗೆದ್ದು ||

ನಾಗುಳದ ಬವುನಾಸಿ ತೋಳಿಗವುಸಿಕೊಂಡ
ಹಾರಿಹೋಗೊ ಹುಲ್ಲೆ ಕರಕೊಂಡು | ಬೊಮ್ಮಣ್ಣ
ಪುತ್ರಮ್ಮಗ್ಹಾಲು ಯರುದಾನೆ || ಅರುಳೆಗೆದ್ದು ||

ಪುತ್ರಗ್ಹಾಲು ಕಳುವಿ ಪಡುವಾಲ ಮಕನಾಗಿ
ನಡುದಾನೆ ಭೀಮರೆಡ್ಡಿ ಪಟ್ಟುಣುಕೆ | ಬೊಮ್ಮಣ್ಣ
ಕಟ್ಟೇಯ ಮ್ಯಾಲೆ ಮನಿಗ್ಯಾನೆ || ಅರುಳೆಗೆದ್ದು ||

ನಾಗುಳದ ಬವುನಾಸಿ ತೋಳೀಗವುಸೀಕೊಂಡು
ಹಾರಿಹೋಗೊ ಹುಲ್ಲೆ ಕರಕಂಡು | ಬೊಮ್ಮಣ್ಣ
ಬಾಲಮ್ಮಗ್ಹಾಲು ಕಳಿವ್ಯಾನೆ || ಅರುಳೆಗೆದ್ದು ||

ಬಾಲಗ್ಹಾಲು ಕಳುವಿ ಪಡುವಾಲ ಮಕುನಾಗಿ
ನಡುದಾನೆ ಹೇಮರೆಡ್ಡಿ ಪಟ್ಟುಣುಕೆ | ಬೊಮ್ಮಣ್ಣ
ಏರೀಯ ಮ್ಯಾಲೆ ಮನಿಗ್ಯಾನೆ || ಅರುಳೆಗೆದ್ದು ||

ಹಟ್ಟೀ ಗವುಡಾನ ಮಗಳು ಕಟ್ಟೆನೀರಿಗೆ ಬಂದು
ಯತ್ತಾಲ ಸೀಮಯ್ಯ ದೊರಿಮಗುನೆ | ನನುಕಂದ
ಹೆಸರ‍್ಹೇಳ ನಿನ್ನ ಬೇಡಗ್ಹೇಳ || ಅರುಳೆಗೆದ್ದು ||

ಹೆಸುರೆನ್ಹೇಳಲಮ್ಮ ದೇಸಿಗೆಟ್ಟು ಬಂದೈದಿನಿ
ಹತ್ತೇ ಪಡಿಜ್ವಾಳ ಕೂಲಿಗಳು | ಕೊಟ್ಟಾರೆ
ಎತ್ತೆ ಕಾವಲು ಇರುತಿನಿ || ಅರುಳೆಗೆದ್ದು ||

ಊರು ಗವುಡಾನ ಸೊಸಿ ಬಾವಿ ನೀರಿಗೆ ಬಂದು
ಯಾವ ಸೀಮಯ್ಯ ದೊರಿಮಗುನೆ | ನನುಕಂದ
ಕುಲವ್ಹೇಳೊ ನಿನ್ನ ಬೆಡಗ್ಹೇಳೋ || ಅರುಳೆಗೆದ್ದು ||

ಕುಲವೇನ್ಹೇಳಲಮ್ಮಾ ಕುಲಗೆಟ್ಟು ಬಂದ್ದೀದಿನಿ
ಆರೇ ಪಡಿಜ್ವಾಳ ಕೂಲಿಗಳು | ಕೊಟ್ಟಾರೆ
ಆವೇ ಕಾವಾಲು ಇರುತಿನಿ || ಅರುಳೆಗೆದ್ದು ||

ಹಟ್ಟಿ ಗವುಡಾನ ಮಗಳು ಕಟ್ಟೆನೀರು ತುಂಬಿ
ನಡುದಾಳೆ ತನ್ನ ಅರಮನಿಗೆ | ಹೋಗಿನ್ನು
ಅಪ್ಪಮ್ಮನ ಕೂಟೇ ಅರುಡ್ಯಾಳೇ || ಅರುಳೆಗೆದ್ದು ||

ಅಪ್ಪ ನೀ ಕೇಳೋ ಅಪ್ಪಯ್ಯ ನೀ ಕೇಳೋ
ಹತ್ತು ಪಡಿಜ್ವಾಳ ಕೂಲಿಗಳು | ಕೊಟ್ಟಾರೆ
ಎತ್ತ ಕಾಯಾಕ ಆಳುಂಟು || ಅರುಳೆಗೆದ್ದು ||

ಊರು ಗವುಡಾನ ಸೊಸಿ ಬಾವಿನೀರು ತುಂಬಿ
ನಡುದಾಳೆ ತನ್ನ ಅರುಮನಿಗೆ | ಹೋಗಿನ್ನು
ಮಾವಯ್ಯನ ಕೂಟೆ ಹರುವ್ಯಾಳೆ || ಅರುಳೆಗೆದ್ದು ||

ಮಾವ ನೀ ಕೇಳು ಮಾವಯ್ಯ ನೀ ಕೇಳು
ಆರೇ ಪಡಿಜ್ವಾಳ ಕೂಲಿಗಳು | ಕೊಟ್ಟಾರೆ
ಆವೇ ಕಾಯಾಕೆ ಆಳುಂಟು || ಅರುಳೆಗೆದ್ದು ||

ಎತ್ತೀನ ಬೊಮ್ಮುನ ಕರಿಸಿ ಗಕ್ನ ಬುದ್ದಿ ಹೇಳಿ
ಎತ್ತ ಜತುನಾ ನಮ್ಮ ಮನಿ ಜತುನ | ಗುಡ್ಡಾದ
ಹುತ್ತುಕ ತನಿಯರುದು ಬರುತಿವಿ || ಅರುಳೆಗೆದ್ದು ||

ಆವಿನ ಬೊಮ್ಮುನ ಕರಿಸಿ ಬ್ಯಾಗನ ಬುದ್ದಿ ಹೇಳಿ
ಆವು ಜತುನಾ ನಮ್ಮ ಮನಿ ಜತುನ | ಗುಡ್ಡಾದ
ನಾಗುರಿಗಿ ತನಿಯರುದು ಬರುತಿವಿ || ಅರುಳೆಗೆದ್ದೆ ||

ತರಿಯ ಗಿಡದಡಿಯ ಕರಿಯ ಕಂಬಳಿಯನ್ಹಾಸಿ
ದೊರಿಯ ಬೊಮ್ಮಣ್ಣುಗ ಸುಖನಿದ್ರೆ | ಕಾಡುಗೊಲ್ಲ
ಕೂಗಂದ ಆವು ಕರಿಯಂದ || ಅರುಳೆಗೆದ್ದು ||

12_85_KK-KUH

ಜಾಲೀಯ ಗಿಡದಡಿಯ ಜಾಡಿಗಂಬಳಿಸ್ಹಾಸಿ
ಜಾಣಾ ಬೊಮ್ಮಣ್ಣುಗೆ ಸುಖನಿದ್ರೆ | ಕಾಡುಗೊಲ್ಲ
ಕೂಗೆಂದ ಅವು ಕರಿಯಂದ || ಅರುಳೆಗೆದ್ದು ||

ಆಚೆಕೊಬ್ಬರಿಲ್ಲ ಈಚೆಕೊಬ್ಬರಿಲ್ಲ
ಯಾರಪ್ಪ ನನ್ನ ಕರದೊರು | ಬೊಮ್ಮಣ್ಣ
ನಿಟ್ಟೆಗೆಟ್ಟಂಗೆ ನಿಲುತಾನೆ || ಅರುಳೆಗೊದ್ದೆ ||

ಹಿಂದಕೊಬ್ಬಾರಿಲ್ಲ ಮುಂದಾಕೊಬ್ಬಾರಿಲ್ಲ
ಯಾರಪ್ಪ ನನ್ನ ಕರದೋರು | ಬೊಮ್ಮಣ್ಣ
ಗ್ಯಾನಗೆಟ್ಟಂಗೆ ನಿಲುತಾನೆ || || ಅರಳೆಗೆದ್ದು ||

ಆಚೆಕೆ ನಾನೈದೀನಿ ಆಚೆಕೆ ನೀನೈದೀಯ
ಹೊಡಿಯ ಬೊಮ್ಮಣ್ಣ ತುರುಗಾಳು || ಅರಳೆಗೆದ್ದು ||

ಹಿಂದಕ ನಾನೈದೀನಿ ಮುಂದಕ್ಕ ನೀನೈದೀಯ
ಹೊಡಿಯ ಬೊಮ್ಮಣ್ಣ ತುರುಗಳು  || ಅರುಳೆಗೆದ್ದು ||

ಉಂಬಾಕ ಇಕ್ಯವರೆ ಕಂಬೂಳಿ ಕೊಟ್ಟವರೆ
ಉಂಡುಮನಿಗೆ ಯರಡು ಬಗಿಲಾರೆ | ಮಾಲಿಂಗ
ಆವುಗಳು ಹಿಂದಾಕೆ ತಿರುವಂದ || ಅರುಳೆಗೆದ್ದೆ ||

ತುತ್ತುಗಳು ಇಟ್ಟಾರೆ ಬಟ್ಟಿಗಳೂ ಕೊಟ್ಟಾರೆ
ಕೊಟ್ಟಮನಿಗೆ ಯರಡು ಬಗಿಲಾರೆ | ಮಾಲಿಂಗ
ಎತ್ತಗಳು ಹಿಂದಾಕೆ ತಿರುವಂದ || ಅರುಳೆಗೆದ್ದೆ ||

ಒಕ್ಕೂ ಉಂಡ ಬೂದಿ ಶೆಟ್ಟಿಗೆ ತುಂಬೀಕೊಳ್ಳೊ
ಎತ್ತುವ್ಹಾಕಿದ ತೆಪ್ಪೆ ಕುಲಮೋಜಿ | ಅಳುವಾನೂರು
ಪುತ್ರಮ್ಮ ಗ್ಹೊಯ್ದ ತುರುಗಳು || ಅರುಳೆಗೆದ್ದೆ ||

ಮಾಡಿ ಉಂಡ ಬೂದಿ ಸ್ವಾರಿಗಿ ತುಂಬಿಕೊಳ್ಳೊ
ಆವು ಹೊಯ್ದು ಗಂಜು ಕುಲುಮೋಜಿ | ಅಳವಾನೂರು
ಬಾಲಮ್ಮಗಹೊಯ್ದ ತುರುಗಳು || ಅರಳೆಗೆದ್ದು ||

ಅಂಡ ಉಂಡನ ಮಾಡಿ ದಂಡೆ ಕೊರಳಿಗ್ಹಾಕಿ
ಬಂಡ ಜಂಗುಮುನೆ ಜಡೀಯೋನು | ರೆಡ್ಡೀಮನೀಯ
ದುಂಡಾವೆ ಗೆದ್ದು ಬರುತಾನೆ || ಅರುಳೆಗೆದ್ದೆ ||

ಕಾಳಾವುನೆಲ್ಲ ಮೂಳಾವು ಮಾಡ್ಯಾನೆ
ಲೋಲ ಜಂಗುಮುನೆ ಜಡೀಯೋನು | ರೆಡ್ಡೀಮನಿಯ
ಕಾಳಾವೆ ಗೆದ್ದು ಬರುತಾನೆ || ಅರುಳೆಗೆದ್ದೆ ||

ಅಂಡ ಉಂಡನು ಮಾಡಿ ದಂಡೆ ಕೊರಳಿಗ್ಹಾಕಿ
ಎತ್ತೀನ ಗೂಡು ಕುಲುಮೋಜಿ | ಅಳವಾನೂರು
ಪುತ್ರಮ್ಮ ವಯ್ದ ತುರುಗಾಳು || ಅರುಳೆಗೆದ್ದೆ ||

ಆಳಾ ಹೂಳುನು ಮಾಡಿ ದಾರ ಕೊರಳಿಗ್ಹಾಕಿ
ಆವೀನ ಗೂಡು ಕುಲುಮೋಜಿ | ಅಳವಾನೂರು
ಬಾಲಮ್ಮ ವಯ್ದ ತುರುಗಾಳು || ಅರುಳೆಗೆದ್ದೆ ||

ಅಕ್ಕಾನೆ ಮಾರಮ್ಮ ಗೊಕ್ಕಾನೆ ಕೊರವಂಜ್ಯಾಗಿ
ಹಟ್ಟಿಮುಂದ್ಹೋಗಿ ನಿಲುತಾಳೆ | ಹಟ್ಟಿಗೌಡ
ಒಂದು ಪಟ್ಟವ ಕೇಳು ನಿಲ್ಲೊಕಾಗಿ || ಅರುಳೆಗೆದ್ದೆ ||

ತಾಯೀನೆ ಮಾರಮ್ಮ ಬೇಗಾನೆ ಕೊರವಂಜ್ಯಾಗಿ
ಊರ ಮುಂದ್ಹೋಗಿ ನಿಲುತಾಲುಳೆ | ಊರಗೌಡ
ಒಂದು ದೆವರ ಕೇಳು ನಿಲ್ಲೊಕಾಗಿ || ಅರಳೆಗೆದ್ದೆ ||

ಅಪ್ಪಾ ನಿಂಗಣ್ಣನೆತ್ತು ಗುತ್ತಿ ದುರುಗಿಳುದಾವೆ
ಆ ಹಿಂಡು ನೀವು ತಡದಿದ್ದು | ಉಂಟಾದಾರೆ
ಕೆಟ್ಟ ಕೇಡುಗಳು ಕೆಡತೀರಿ || ಅರುಳೆಗೆದ್ದೆ ||

ಸ್ವಾಮಿ ನಿಂಗಣ್ಣನೆತ್ತು ಗ್ವಾವೆ ದುರುಗಿಳುದಾವೆ
ಆ ಹಿಂಡು ನೀವು ತಡದಿದ್ದು | ಉಂಟಾದರೆ
ಏಳು ಕೇಡುಗಳು ಕೆಡುತಿರಿ || ಅರುಳೆಗೆದ್ದ ||

ಹುಟ್ಟನೊಕ್ಕಾಲುಮಗ ಬಿತ್ತಿದು ಉಳ್ಳೇನವಣಿ
ಅಪ್ಪುಗೆ ನಾವ್ಹೆಂಗ ಬಳಸೋದು | ಮಾಲಿಂಗ
ಹಟ್ಟಿಗೊಲ್ಲರಿಗೆ ವಲಿಯಪ್ಪ || ಅರುಳೆಗೆದ್ದ ||

ಮಾಡಲೊಕ್ಕಾಲುಮಗ ಆಗೋದು ಉಳ್ಳೇನವಣಿ
ಸ್ವಾಮೀಗೆ ನಾವ್ಹೆಂಗ ಬಳಸೋದು | ಮಾಲಿಂಗ
ಅಡವಿಗೊಲ್ಲಿರಿಗೆ ವಲಿಯಪ್ಪ || ಅರುಳೆಗೆದ್ದ ||

ಕೆಂದಾವರೆ ಗೊನೆ ಕಂಬಿಮ್ಯಾಲ ಬರಲಂದ
ಹಿಂಬಾಗಿ ನವುಣೆ ಬಳುಸೀದ | ಮಗನಿಗೆ
ಬಂದೀಗೆಲ್ಹೊನ್ನು ಅಳಾಕೊಡುವೆ || ಅರುಳೆಗೆದ್ದ ||

ಕಾಡಾವರೆ ಗೊನೆ ಕೀಲಿನಮ್ಯಾಲ ಬರಲಂದ
ವಾರೀಲಿ ನವಣೆ ಬಳುಸೀದ | ಮಗನಿಗೆ
ಜೋಳೀಗೆಲ್ಹೊನ್ನು ಅಳಾಕೊಡುವೆ || ಅರುಳೆಗೆದ್ದ ||

ಅರತಿದ್ದು ನನಗಿರಲಿ ಮರತಿದ್ದು ನನಗಿರಲಿ
ಸರ್ವೆ ತಪ್ಪಗಳು ನನಗಿರಲಿ | ಎಂದ ನಿಂಗಣ್ಣ
ಬಲಗೈ ಭಾಸೆ ಬೊಮ್ಮಣ್ಣುಗೆ ಕೊಡುತಾನೆ || ಅರುಳೆಗೆದ್ದ ||

ಅಪ್ಪ ನಿಂಗಣ್ಣನೆತ್ತು ಗುತ್ತೆ ದುರುಗಿಳುದಾವೆ
ಹತ್ತೇನೆ ಸುತ್ತೀನ ಯಳಿನಾಗ  | ಕೂಗರಾಯ
ಹೊನ್ನುಬಂಡೆ ಕಟ್ಟೆ ಆವು ತೀರುವಂದ || ಅರುಳೆಗೆದ್ದ ||

ಸ್ವಾಮಿ ನಿಂಗಣ್ಣನೆತ್ತು ಗ್ವಾವೆ ದುರುಗಿಳುದಾವೆ
ಆರೇನೆ ಸುತ್ತೀನ ಯಾಳಿನಾಗ  | ಕೂಗರಾಯ
ಸಳಿಬಂಡೆ ಕಟ್ಟೆ ಆವು ತೀರುವಂದ || ಅರುಳೆಗೆದ್ದ ||

ಅತ್ಲಿಂದ ಇತ್ಲಿಂದ ಲಚ್ಚಾನಪೂರದಿಂದ
ಗುತ್ಲಿಂದ ಹೊಳಲ ಕೆರಿಲಿಂದ | ಬಂದಾರೆ
ಮುತ್ತೀನಡ್ಡಣದ ಐದೇರು || ಅರುಳೆಗೆದ್ದ ||

ಅಲ್ಲಿಂದ ಇಲ್ಲಿಂದ ಕಲ್ಯಾಣಪುಲರದಿಂದ
ದಿಳ್ಳಿಂದ ಹೊಳಲ ಕೆರೆಯಿಂದ | ಬಂದಾರೆ
ಬೆಳ್ಳೆಯಡ್ಡಣದ ಐದೇರು || ಅರಳೆಗೆದ್ದ ||

ಮುದ್ರುಸೆ ಅಕ್ಕ ನಿದ್ರೆಗಣ್ಣಯ್ಯಾನ
ಗೆದ್ದಗುದರೇ ಮ್ಯಾಲೆ ಬರುವ | ನಿಂಗಣ್ಣಾಗೆ
ಮುದ್ದರಿಸಿ ಕೈಯಾ ಮುಗದೇವೋ || ಅರಳೆಗೆದ್ದ ||

ನಿಲ್ಲೂಸೆ ಅಕ್ಕ ನೀಲಿ ನಾಮಯ್ಯಾನ
ನೀಲಗುದುರೆ ಮ್ಯಾಲೆ ಬರುವ | ಬೊಮ್ಮಣ್ಣಾಗೆ
ನಿಲ್ಲೂಸಿ ಕೈಯ ಮುಗುದೇವೋ || ಅರಳೆಗೆದ್ದ ||

ಅಪ್ಪಗ ಪೂಜೆ ಮಾಡಿ ಕಪಪುಕರಡಿಗೆ ತುಂಬಿ
ಹೊಸ್ತೂಲಿ ದಾಟಿ  ಬರುವ | ಈರಣ್ಣಾಗ
ಮಕ್ಕಳೇಸ್ಹಳೊ ಮನೀಯಾಗ || ಅರಳೆಗೆದ್ದ ||

ಅಪ್ಪ ನಿಂಗಣ್ಣಾನ ಪಟ್ಟೆ ಮಂಚುದ ಕೆಳಗೆ
ಹಿಟ್ಟುಗಲ್ಲಾಗಿ ಸವೂದೇವೋ | ಈರಣ್ಣಾನ
ಬಟ್ಟೆ ಸೋಕಿದರೆ ಬದುಕೇವೋ || ಅರಳೆಗೆದ್ದ ||

ಸ್ವಾಮಿ ಈರಣ್ಣಾನ ತೂಗು ಮಂಚುದ ಕೆಳಗೆ
ಸಾಣೆಗಲ್ಲಾಗಿ ಸಾವೂದೇವೊ | ಈರಣ್ಣಾನ
ಪಾದ  ಸೋಕಿದರೆ ಬದುಕೇವೋ || ಅರಳೆಗೆದ್ದ ||

ದೊಡ್ಡದೊಡ್ಡಾ ಹಾಡು ದೊಡ್ಡ ಭರಣಿಗೆ ತುಂಬಿ
ದೊಡ್ಡ ಮುದ್ರಿಕೆ ಬಿಗದೊತ್ತಿ | ಏಳಾಜಂಬಿ
ದೊಡ್ಡೋನಿಗೊಪ್ಪಿವೆ ಪದನೂರು || ಅರಳೆಗೆದ್ದ ||

ಸಣ್ಣಸಣ್ಣಾ ಹಾಡು ಸಣ್ಣ ಭರಣಿಗೆ ತುಂಬಿ
ಸಣ್ಣ ಮುದ್ದುರಿಕೆ ಬಿಗದೊತ್ತಿ | ಹೊನ್ನಾಬಂಡೆ
ಅಣ್ಣಾಗೊಪ್ಪಿಸುವೆ ಪದಾನೂರು || ಅರಳೆಗೆದ್ದ ||

ಅಪ್ಪ ನಿನ್ನಾ ಹಾಡೆವೆ ಅಪ್ಪ ನಿನ್ನ ಪಾಡೆವೆ
ಅಪ್ಪ ನಿನ್ನ ನಿದ್ರೆ ತಡದೇವು | ಏಳಾಜಂಬಿ
ಪಟ್ಟಮಂಚದ ದೊರೆಯ ಪ್ರವಡೂಸು || ಅರಳೆಗೆದ್ದ ||

ಅಣ್ಣ ನಿನ್ನಾ ಹಾಡೆವು ಅಣ್ಣ ನಿನ್ನ ಪಾಡೆವು
ಆಣ್ಣ ನಿನ್ನ ನಿದ್ರೆ ತಡದೇವು | ಏಳಾಜಂಬಿ
ತೂಗುಮಂಚದ ದೊರೆಯ ಪ್ರವಡೂಸು || ಅರಳೆಗೆದ್ದ ||

ಸಂದು ಮುಗಿಯೊಕ್ಕಿನ್ನ ತಂದಿಟ್ಟಾಳೆ ಭಂಡಾರ
ಗೊಂಡವಂತೇರು ಮಗಾಳಾಕಿ | ದ್ರಾಕ್ಷಾಯಣಿಯಮ್ಮ
ಭಂಡಾರ‍್ಹೆಚ್ಚೆವು ಘನವಾಗಿ || ಅರಳೆಗೆದ್ದ ||

ಹಾಡು ಮುಗಿಯೋಕಿನ್ನ ತಂದಿಟ್ಟಾಳೆ ಭಂಡಾರ
ಗೊಂಡಕರುಬವಂತೇರ ಮಗಳಾಕಿ | ದ್ರಾಕ್ಷಾಯಣಿಯಮ್ಮ
ಬಾಲಾರ‍್ಹೆಚ್ಚೇವು ಘನವಾಗಿ || ಅರಳೆಗೆದ್ದ ||

ಬಡರಾಯ ಮನಿಗೆ ಉಂಬಾಕ ನಾನ್ಹೋದೆ
ಹೊಂದೀದ ಭೂಮಿ ಬೆಳಿಯಾಲಿ | ಮೈತ್ರಿಯ
ರೆಂಬಿಟ್ಟವಾಲಿ ತಿರುನಾಳು || ಅರಳೆಗೆದ್ದ ||

ಸಣ್ಣರಾಯರ ಮನಿಗೆ ಊಟಾಕ ನಾನ್ಹೋದೆ
ನಾಟೀದ ಭೂಮಿ ಬೆಳಿಯಾಲಿ | ಮೈತ್ರಿಯ
ಖಾತಿಟ್ಟವಾಲಿ ತಿರುನಾಳು || ಅರಳೆಗೆದ್ದ ||

ನನ್ನ ಮನಿಸ್ವಾಮೀಗೆ ಮಂಡೆಲ್ಲ ಮಲ್ಲಿಗೆ
ದಂಡೆ ಕೋಲೆಲ್ಲ ದಾವುನಾವ | ಈರಣ್ಣಾನ
ಕೊಂಡಾಡೋರೆಲ್ಲ ಸೋಸಿಯೋರು || ಅರಳೆಗೆದ್ದ ||

ಮಜ್ಜೀಗೆ ಮಾಡೂತ ಮಗುನ ಮುದ್ದಾಡೂತ
ಹೆಜ್ಜೆಜ್ಜಿಗೆ ಪದವ ಕಲಿಸೋಳೆ | ಸಿರಿಯಮ್ಮಾನ
ಬುದ್ದಿರಲಿ ನಮ್ಮ ಮನುದಾಗೆ || ಅರಳೆಗೆದ್ದ ||

ಹಾಲುಗಳು ಕಾಸೂತ ಬಾಲುನ ಮುದ್ದಾಡೂತ
ಬರದ ಪದವ ಕಲಿಸೋಳೆ | ಈರಮ್ಮನ
ಗ್ಯಾನವಿರಲಿ ನಮ್ಮ ಮನುದಾಗೆ || ಅರಳೆಗೆದ್ದ ||

ಹಚ್ಚೆವಯಿಸೀದಮ್ಮ ಹಾಡು ಕಲಸೀದಮ್ಮ
ಹಸುಮಕ್ಕಳಿಗ್ಹಾಲು ಯರುದಮ್ಮ | ಬರುತ್ತಾಳೆ
ಕುಸಲದ ಛತ್ತರಿಕಿ ನೆರಳಾಗೆ || ಅರಳೆಗೆದ್ದ ||

* * *