ಹಳಸಿದಾ ಅನ್ನ ಕೊಳುತೇನೆ ಸೊಂಡೆಕಾಯಿ
ಅದುನಾನ್ನ ನೀಡು ಹಸುದಾಳು

ಹಳಸಿದ ಅನ್ನ ಕೊಳೆತ ಸೊಂಡೆಕಾಯಿ
ಓದುವ ಸೂರಿದಾರ ಉಂಡುಹೋದ

ಶಿಡಿಮೂಡು ಗುಟ್ಟೂತ ಮುಡಿಯೇನೆ ಅಲ್ಲಾಡುತ
ಯಡವೀದ ಯಬ್ಬೊಟ್ಟೊಂದು ಅರೀಯಾದ | ನೇ ಸುಪ್ಪಕ್ಕ
ಕೇರಿ ಕೇರಿ ಗುಂಟಾ ನಡುದಾಳೆ

ಸಣ್ಣಕ್ಕಿ ಕೊಡುತೀನಿ ಮುಳ್ಳಕ್ಕೀನೆ ಕೊಡಿರಮ್ಮಾ
ಮುಳ್ಳಕ್ಕಿ ಉಂಬೋರ ಸೊಸಿ ಬಂದ್ಳು

ತೊಗರಡಕಲು ಕೊಡುತೀನಿ ಉಳ್ಳಡಕಲು ಕೊಡಿರಮ್ಮಾ
ಉಳ್ಳಡಕಲು ಉಂಬುವುರ ಸೊಸಿ ಬಂದ್ಳು

ಬಿಳಿ ಬೆಲ್ಲ ಕೊಡುತೀನಿ ಉಳಿಬೆಲ್ಲನೇ ಕೊಡೀರಮ
ಉಳಿ ಬೆಲ್ಲ ಉಂಬುವುರ ಸೊಸಿ ಬಂದ್ಳು

ಒಳ್ಳೆ ತುಪ್ಪ ಕೊಡುತೀನಿ ಮುಗ್ಗ ತುಪ್ಪಾನೇ ಕೊಡಿರಮ್ಮ
ಮುಗ್ಗ ತುಪ್ಪುಂಬುವರ ಸೊಸಿ ಬಂದ್ಳು

ಮಣ್ಣುಪ್ಪುಕೊಡುತೀನಿ ಸವಳುಪ್ಪನೇ ಕೊಡಿರಮ್ಮಾ
ಸವಳುಪ್ಪು ಉಂಬುವರ ಸೊಸಿ ಬಂದ್ಳು

ಬಿಳಿಯಲೆ ಕೊಡುತೀನಿ ಕರಿಯಲಿನೇ ಕೊಡಿರಮ್ಮ
ಕರಿಯಲೆ ಹಾಕುವರ ಸೊಸಿ ಬಂದ್ಳು

ಒಳ್ಳೆಡಿಕೆ ಕೊಡುತೀನಿ ಗೋಟಡಿಕೇನೇ ಕೊಡಿರಮ್ಮ
ಗೋಟಡಿಕೆ ಹಾಕೋರ ಸೊಸಿ ಬಂದ್ಳು

ಒಳ್ಳೆ ಸುಣ್ಣ ಕೊಡತೀನಿ ಕಲ್ಲುಸುಣ್ಣಾನೇ ಕೊಡಿರಮ್ಮ
ಕಲ್ಲುಸುಣ್ಣ ಹಾಕೋರ ಸೊಸಿ ಬಂದ್ಳು

ಒಳ್ಳೆ ಸೀರೆ ಕೊಡುತೀನಿ ಬಿಳಿಸೀರೆನೇ ಕೊಡಿರಮ್ಮ
ಬಿಳಿ ಉಡುವೋರು ಸೊಸಿ ಬಂದ್ಳು

ಒಳ್ಳೆ ಕುಬಸ ಕೊಡತೀನಿ ಬಿಳಿ ಕುಬಸಾನೇ ಕೊಡಿರಮ್ಮ
ಬಿಳಿ ಕುಬಸ ತೊಡವೋರ ಸೊಸಿ ಬಂದ್ಳು

ಸಿಡಿಮಿಡಿ ಗುಟ್ಟುತ್ತಾ ಮುಡಿಯಾನೆ ಅಲ್ಲಾಡ್ಸುತ್ತಾ
ಯಡವೀದ ಯಬ್ಬೊಟ್ಟೊಂದು ಅರಿಯಾದ | ನೇ ಸುಪ್ಪಕ್ಕಾ
ನಡದಾಳೆ ಕುಂಬಾರಣ್ಣನ ಅರಮನಿಗೆ

ಯಂದೂ ಬಾರದ ಸುಪ್ಪಾಕ್ಕಾ ಹಿಂಗ್ಯಾಕ ಬಂದ್ಯಮ್ಮ
ಕುಂದುವಾರಗೊಳ್ಳೆ ಮನಿಹೊಳ್ಳೆ

ಕುಂದ್ರಾಕೆ ಬರಲಿಲ್ಲ ನಿಂದ್ರಾಕೆ ನಾನು ಬರಲಿಲ್ಲ
ಒಂದು ಸ್ವಾರಿಗೆ ಎರಡು ಸ್ವಾರೆ ಮಾಡಿ | ಕೊಟ್ಟಾರೆ
ಸ್ವಾರೆಗೆ ಎರಡು ಸ್ವಾರೆ ಮಾಡಿ | ಕೊಟ್ಟಾರೆ
ಬಾಯಿ ತುಂಬು ಹೊನ್ನ ಹೊಯಿಸೇನು

ಬಾಯಿಯಾಗಾಳ ಮಾತು ಬಾಯಾಗನೇ ಇದ್ದಂಗೆ
ಅವಿಗನ್ನಾ ತಗದು ಹದಮಾಡಿ | ಕುಂಬಾರಣ್ಣಾ
ಒಂದು ಸ್ವಾರಿಗೆ ಎರಡು ಸ್ವಾರೆ ಮಾಡಿ | ಕೊಟ್ಟಾರೆ
ಬಾಯಿ ತುಂಬ ಹೊನ್ನ ಹೊಯಿಸೇನು

ಸಿಡಿಮುಡಿ ಗುಟ್ಟುತ್ತಾ ಮುಡಿಯಾನೆ ಅಲ್ಲಾಡ್ಸುತ್ತಾ
ಯಡವೀದ ಯಬ್ಬೊಟ್ಟೊಂದು ಅರೀಯಾದು | ನೇ ಸುಪ್ಪಕ್ಕಾ
ನಡುದಾಳೆ ತನ್ನ ಅರಮನಿಗೆ

ಒಂದಂಬ ಕಡಿಯಾಕೆ ಸಣ್ಣಕ್ಕೀನೆ ಸುರಿವ್ಯಾಳೆ
ಕಂದಮ್ಮಗ ಕರುದ ನೊರಿಯ್ಹಾಲು | ಹುಗ್ಗಿಮಾಡಿ
ಹದಿನಾರು ಹಣ್ಣಾ ಸುಲೀದಿಟ್ಟು | ಅದುರಂದಾಕೆ
ಅದುನನ್ನಾ ಮಾಡಿ ಮುಗಿಸ್ಯಾಳೆ

ಒಂದಂಬ ಕಡಿಯಾಕೆ ಮುಳ್ಳಕ್ಕೀನೆ ಸುರಿವ್ಯಾಳೆ
ಹುಳಿಯನ್ನ ಮಜ್ಜೀಗೆ ಯರುದಾಳೆ | ಅದುರಂದಾಕೆ
ಅದುನನ್ನಾ ಮಾಡಿ ಮುಗಿಸ್ಯಾಳೆ

ಕರಿಯ ಕುಂಬಾಳ ಕಾಯಿ ಕರಿಯಾನೆ ಬದನೆಕಾಯಿ
ನುಗ್ಗಿಯನ್ನಕಾಯಿ ನೆಲಗೊಳಿಸಿ | ನೇ ತಾಳಾಲು
ಭದ್ರೆಯನ್ನ ಮಾಡಿ ಇಳಿವ್ಯಾರೆ

ಚಿಕ್ಕ ಹುಡಿಕಾಯಿ ತೊಟ್ಟುನೇ ತಗುದಿ ಈಡಾಡಿ
ತೊಟ್ಟುಯೆಣ್ಣೆ ಬಿಟ್ಟು ಮೆಣಸಿಟ್ಟು | ನೇ ತಾಳಾಲು
ನಿಸ್ತ್ರೇರನ್ನ ಮಾಡಿ ಇಳಿವ್ಯಾರೆ

ಕಾಯಿಲಿ ಕಡುಜಾಣೆ ಹೂವ್ವಿಲೆನೆ ಸುಗುಜಾಣೆ
ಕಮಧೇನು ಅಂಬಾ ಹುಣಸೇಯ | ಸಾರೂ ಮಾಡಿ
ನಾರೆರನ್ನ ಮಾಡಿ ಇಳಾವ್ಯಾರೆ

ಕಂಡೂಗ ಇಡುವ ಗಿಂಡಿಯಾ ಹರುವಾಣಕೆ
ಸುಣ್ಣ ಕೆಮ್ಮಣ್ಣಿಟ್ಟು ಬೆಳಿಗ್ಯಾಳೆ | ಅದುರಂದಾಕ
ಪನ್ನೀರು ಆಕಿ ತೊಳುದಾಳೆ

ಮುತ್ತಿನ ಗಿಂಡ್ಯಾಗ ಉತುಮಾದ ಗಂಗಿ ತಂದೇನು
ಅಚ್ಚೂತರಾಯ ಮಕ ತೊಳಿಯೊ

ಚಿನ್ನದ ಗಿಂಡ್ಯಾಗ ಮುಮ್ಮಯ ಗಂಗಿ ತಂದೇನು
ಪಾಂಡವರ ಸೊಸಿ ಮಕ ತೊಳಿಯೆ

ಅಣ್ಣಯ್ಯ ತಂಗ್ಯಮ್ಮ ಜೋಡಿಲೇ ಕೈ ತೊಳ್ದಾರೆ
ಸೂರಿದುಗೆ ಕರವ ಮುಗುದಾರೆ | ಸೂರ್ಯದೇವ
ಉಂಬುತಿವಿ ದೇವರ ದಯವಿರಲಿ | ಅವರಿಬ್ಬಾರು
ಜೋಡಿಲಿ ಹೋಗಿ ಕುಳುತಾರೆ | ನೇ ವಳುಗಳ
ಅತ್ತಿಗೆ ಊಟಕ್ಕೆ ಇಡುತ್ತಾಳೆ

ಅಣ್ಣನ ಮನಿ ಅಡಿಗೆ ಕಣ್ಣಿಗೇನೇ ಬಲುಶ್ರಾಯ
ಬಾಯಯಲ್ಲಿ ಇಟ್ಟಾರೆ ಕಡಿವುಳಿ

ಅಪ್ಪಯ್ಯ ಕಟ್ಟಸಿದ ಹತ್ತಂಕಣ ಅರಮನೆ
ಅದು ನೋಡೆ ತಂಗಿ ಶಲವುರಿಕೆ | ನಾರಂದಾನ
ಅತ್ತಲ ಭೂಮ ಇತ್ತ ತಿರುವ್ಯಾನೆ

ಅಣ್ಣ ಉಂಡ ಭೂಮ ತಂಗ್ಯಮ್ಮ ಉಣುಬಾರದಂದು
ಗಕ್ಕನ ಮುಂಗೈ ಹಿಡುದಾಳೆ

ಹತ್ತು ವರಹಕೊಟ್ಟು ಮುತ್ತನ ಬಾರುಕೋಲು
ನಿಸ್ರೇ ನಿನ್ನ ಮೈಯಿ ದಳದೂಳಿ | ನೆ ಮಾಡಿನ್ನ
ಮುತ್ತೀನ ಚಾವುಡಿಗೆ ನೆಡುದಾನೆ

ಆರು ವರಹಕ್ಕೆ ಕೊಂಡ ಹೂವ್ವೀನ ಬಾರುಕೋಲು
ನಾರಿನ ನಿನ್ನ ಮೈಯ್ಯಿ ದಳದೂಳಿ | ನೇ ಮಾಡಿನ್ನ
ಮುತ್ತೀನ ಚಾವುಡಿಗೆ ನಡುದಾನೆ

ಹೊತ್ತಿ ಹೊತ್ತಿಗೆ ಬ್ಯಾನೆ ಕತ್ತಿಲೀ ಬಾರಿಸಿದ್ಹಂಗೆ
ನಿತ್ತುರುಸಲಾರೆ ನಿಲಲಾರೆ | ನೇ ಎನಗುರುವೆ
ಹೆತ್ತಮ್ಮ ಇಲ್ಲ ಮರುಗಾಕ | ನೇ ಸುಭದ್ರ
ತೋರ್ಯಾಳೆ ಕೆಂಗಣ್ಣಿಲುದುಕಾವ

ಜಾವ ಜಾವಕೆ ಬ್ಯಾನೆ ತಾಳಾನೆ ಬಾರಿಸಿದ್ಹಂಗೆ
ತಾಳಲಾರೆ ಶಿವನೆ ತಡಿಯಲಾರೆ | ನೇ ಎನಗುರುವೆ
ತಾಯಿಯಮ್ಮ ಇಲ್ಲ ಮರುಗಾಕ | ನೇ ಸುಭದ್ರ
ತೋರ್ಯಾಳೆ ಕೆಂಗಣ್ಣಿಲುದುಕಾವ

ಪಟ್ಟಾನೆ ಸಾಲಾಗೆ ಕತ್ತೇನೆ ಹೊರುಳಿದ್ಹಂಗೆ
ಅತ್ತಿಗೆಗೆ ಬ್ಯಾನೆ ಗನುವಾಗಿ | ಕೀಲುಕಾರಣ್ಣ
ಅಚ್ಚುತನ ಕಂಡರೆ ಬರಹೇಳೋ

ಸಾಮಾನೆ ಸಾಲಾಗೆ ಸಾಯೆನೆ ಹೊರಳಿದ್ಹಂಗ
ನಾದುನಿಗೆ ಬ್ಯಾನೆ ಗನುವಾಗಿ | ಕೀಲುಕಾರಣ್ಣ
ನಾರಂದನ  ಕಂಡರೆ ಬರಹೇಳೋ

ಸಿರಿಮುಡಿ ಗುಟ್ಟುತ್ತಾ ಮುಡಿಯನೆ ಅಲ್ಲಾಡುತ್ತಾ
ಎಡವಿದ ಯೆಬ್ಬೆಟ್ಟೊಂದರಿಯಾದ | ನಾರಂದ
ಹೋದಾನೆ ಕಂಬಾರನ ಅರಮನಿಗೆ

ಎಂದು ಬಾರದ ನಾರಂದ ಹಿಂಗ್ಯಾಕೆ ನೀನು ಬಂದೆಪ್ಪ
ಕುಂಬಾರಗೋಳ್ಳೆ ಮನಿಗೊಳ್ಳೆ

ಕುಂದ್ರಾಕ ಬರಲಿಲ್ಲ ನಿಂದ್ರಾಕ ನಾನು ಬರಲಿಲ್ಲ
ಇಂದೆ ನಮ್ಮನೆಯಲ್ಲಿ ಅವುಸರ | ಕಂಬಾರಣ್ಣ
ಗಕ್ಕನ ಹುಲಿ ಉಗುರು ಮಾಡಿಕೊಡು | ಕಂಬಾರಣ್ಣ
ಬಾಯಿ ತುಂಬ ಹೊನ್ನೆ ವಯಿದೇನು

ಹಟ್ಟಿಯನ್ನಾ ಕಸವ ಅತ್ತಾನೆ ಗುಡಸೊ ಬಾಲೆ
ಯತ್ತಾಲೆ ಸಂಗಮ್ಮಾ ನಾರುಮಾನೇ | ನೇ ತೋರಿದರೆ
ಕಪ್ಪುಗೆ ವಜ್ಜುರವ ಬಿಗಸೇನು

ಓಣಿಯನ್ನಾ ಕಸವ ಆಯಾನೆ ಗುಡುಸೋ ಬಾಲೆ
ಯಾವಾದು ಸಂಗಮ್ಮನರುಮಾನೆ | ನೇ ತೋರಿದರೆ
ವಾಲಿಗೆ ವಜ್ಜುರವ ಬಿಗಿಸೇನು

ಬಾಳೀಯ ಬಲಕಿಡು ಸೀಗಿಯಾನೇ ಯಡಕಿಡು
ನಾಗಾನೆ ಸಂಪಂಗಿ ನೆಡಿಹೋಗೊ

ಬಣ್ಣ ಬಳುದ ಮನಿಗೆ ಸುಣ್ಣವಾನೇ ಬಳುದೈತೆ
ಮುಂದಾಲ ಹೊಸ್ತುಲುಗೆ ರವುರಾತ್ನ | ನೇ ಬಿಗುದೈತೆ
ಅದು ಕಾಣ ಸಂಗಮ್ಮನರುಮಾನೆ

ಎಂದು ಬರುವ ನಾರಂದ ಇಂಗ್ಯಾಕೆ ನೀನು ಬಂದ್ಯಪ್ಪ
ಕುಂದುವಾರಗೊಳ್ಳೆ ಮನೀಗೊಳ್ಳೆ

ಕುಂದ್ರಾಕ ಬರಲಿಲ್ಲ ನಿಂದ್ರಾಕ ನಾನು ಬರಲಿಲ್ಲ
ಹಿಂದೆ ನಮ್ಮನೆಯಲ್ಲಿ ಅವುಸಾರ | ನೇ ಸಂಗಮ್ಮ
ಗೊಕ್ಕೂನ ನೀನು ಬರಬೆಕು | ನೇ ಸಂಗಮ್ಮ
ಅಕ್ಕುವಯ್ಯಾನ ಪ್ರಾಣ ಉಳಿಬೇಕು | ನೇ ಪಾಂಡವರು
ಹುಟ್ಟೊ ಪುತ್ರನ ಗೋಣಾ ಮುರಿಯಾಬೇಕು

ಅತ್ತೆ ಅಂದಾಲಿಲ್ಲ ಮತ್ತೇ ಪಾಲಿಕಿಲ್ಲ
ಮತ್ತೇಯ್ಹಂಗೆ ಬರಲ್ಲೊ ಅರಿಯಾನೆ

ನಾನೇರೋ ಅಂದಾಲ ನೀನೇರೆ ಸಂಗಮ್ಮ
ನಾನು ಬರುವೆನು ಕಾಲ ನಡಿಗಿಲಿ

ಕರಿದೊಂದು ಉಟ್ಟಾಳೆ ಕರಿದೊಂದೆ ತೊಟ್ಟಾಳೆ
ನೊಸಲಿಗೆ ಸಾದಿನ ಬೊಟ್ಟು ಧರಿಸ್ಯಾಳೆ | ನೇ ಸಂಗಮ್ಮ
ದುಂಡಾನೆ ಗನ್ನೊಡಿಲಿ ಮಕಾನೋಡಿ | ನೇ ಸಂಗಮ್ಮ
ಆಯವಿಲ್ಲವಂದೂ ಬಿಡುತಾಳೇ

ಕೆಂಪೊಂದು ಉಟ್ಟಾಳೆ ಕೊಂಪೊಂದಾನೇ ತೊಟ್ಟಾಳೆ
ನೊಸಲಿಗೆ ಕುಂಕುಮ ಬಟ್ಟು ಧರಿಸ್ಯಾಳೆ | ನೇ ಸಂಗಮ್ಮ
ಸಾದಾನೇ ಗನ್ನೊಡಿಲಿ ಮಕಾನೋಡಿ | ನೇ ಸಂಗಮ್ಮ
ಆಯವಿಲ್ಲವಂದೂ ಬಡಿತಾಳೇ

ಬೆಳ್ಳಂದು ಉಟ್ಟಾಳೆ ಬೆಳ್ಳಂದಾನೇ ತೊಟ್ಟಾಳೆ
ನಸಲಿಗೆ ಮುತ್ತಿನ ಬೊಟ್ಟು ಧರಿಸ್ಯಾಳೆ | ನೇ ಸಂಗಮ್ಮ
ಸಾದೇನೆ ಗನ್ನೊಡಿಲಿ ಮಕನೋಡಿ | ನೇ ಸಂಗಮ್ಮ
ಒಪ್ಪವಾಗೈದಾವೆ ಈರಲಂದು

ಪಟ್ಟೆದನ್ನ ಸೀರೆ ಉಟ್ಟುಗಳ್ಳೇ ಸಂಗಮ್ಮ
ವಕ್ಕೂವುಳುದ ಗದ್ದೆ ಉಣ್ಣಾಲ್ಹೋಗೆ | ನೇ ಸಂಗಮ್ಮ
ಅಕ್ಕುವಯ್ಯನ ಪ್ರಾಣ ಪಡಿಯಬೇಕು | ನೇ ಪಾಂಡವರು
ಹುಟ್ಟೊ ಪುತ್ರುನ ಗೋಣಾ ಮುರಿಯಾಬೇಕು

ಸಾಲ್ಯೆದನ್ನ ಸೀರೆ ಉಟುಗಳ್ಳೆನೇ ಸಂಗಮ್ಮ
ನಾಗುವುಳುದ ಗದ್ದೆ ಉಣ್ಣಾಲ್ಹೋಗೆ | ನೇ ಸಂಗಮ್ಮ
ತಂಗಿಯಮ್ಮುನ ಪ್ರಾಣ ಪಡಿಯಬೇಕು | ನೇ ಪಾಂಡವರ
ಮುಡೊ ಪುತ್ರುನ ಗೋಣ ಮುರಿಯಬೇಕು

ಮುತ್ತೀನ ಅಂದಾಲು ಹತ್ತ್ಯಾಳೇ ನೇ ಸಂಗಮ್ಮ
ಮುತ್ತನ್ನು ಜಲಜಲನೆ ಉದುರುತ್ತಾ | ಅಂದಾಲೇರಿ
ಲಚ್ಚಿಯಾಣಪುರಕೆ ಇಳುದಾಳೆ

ಹೂವ್ವೀನ ಅಂದಾಲ ಏರ್ಯಾಳಮ್ಮ ಸಂಗಮ್ಮ
ಹೂವ್ವನ್ನು ಜಲಜಲನೆ ಉದುರೂತ್ತ | ಅಂದಾಲೇರಿ
ನಾರಂದನಪುರಕೆ ಇಳುದಾಳೆ

ಬಂದಂತ ಸಂಗಮ್ಮಗೆ ಗಿಂಡೀಲಿ ನೀರುಕೊಟ್ಟು
ಕುಂದಾರಲ್ಹಾಕ್ಯಾಳೆ ಶಳಿಮಂಚ | ನೇ ಸಂಗಮ್ಮುಗೆ
ಕೈ ತುಂಬ ಈಳ್ಳೇವು ಕೊಡುತಾರೆ | ಅವರಿಗ್ಹೇಳ್ಳಾಳೆ
ಹುಟ್ಟೋ ಪುತ್ರುನ ಗೋಣಾ ಮುರಿಯಬೇಕು

ಹೋದಂತ ಸಂಗಮ್ಮುಗೆ ಗಿಂಡೀಲಿ ನೀರುಕೊಟ್ಟು
ಕುಂದಾರಲ್ಹಾಕ್ಯಾರೆ ಶಳಿಮಂಚ | ನೇ ಸಂಗಮ್ಮುಗೆ
ತುಪ್ಪಾನೆ ಬಾನಗಳು ಉಣ್ಣಾಲಿಟ್ಟು | ನೇ ಸಂಗಮ್ಮುಗೆ
ಕೈ ತುಂಬ ಈಳ್ಳೇವು ಕೊಡುತಾರೆ | ಅವುಳಿಗ್ಹೆಳ್ಯಾರೆ
ತಂಗಿಯಮ್ಮುನ ಪ್ರಾಣ ಪಡಿಯಬೇಕು | ನೇ ಪಾಂಡವರು
ಮೂಡೋ ಪುತ್ರುನ ಗೋಣಾ ಮುರಿಯಬೇಕು

ಹಿಂದಕ್ಕ ಆಯ್ತವಾರ ಮುಂದಕ್ಕಾನೇ ಸ್ವಾಮಾರ
ಶೆಂದೂರುನ ಗ್ರಾಣ ತಿತಿಮತಿ | ಹೊತ್ತೀನಾಗ
ಹೆತ್ತಿ ಎಳವು ಮಗ ಕೊಮುರಾಮ
ನಾಳ ಆಯ್ತವಾರ ನಾಡುದಕ್ಕಾನೇ ಸ್ವಾಮಾರ
ಸೂರೀದುನ ಗ್ರಾಣಾ ತಿತಿಮತಿ | ಹೊತ್ತೀನಾಗ
ಹಡದಿ ಎಳುಮಗ ಕೊಮುರಾಮ

ಹೊತ್ತಿ ಹೊತ್ತಿಗು ಬ್ಯಾನೆ ಕತ್ತೀಲಿ ಬಾರಿಸಿದ್ಹಂಗೆ
ನಿತ್ತುರುಸುಲಾರೆ ನೀಲುಲಾರೆ | ನೇ ಎನಗುರುವೆ
ಹೆತ್ತುವಮ್ಮ ಇಲ್ಲ ಮರುಗಾಕೆ | ನೇ ಸುಭದ್ರ
ತೋರ್ಯಾಳೆ ಕೆಂಗಣ್ಣಿಲುದುಕಾವ

ಜಾವ ಜಾವಕು ಬ್ಯಾನೆ ತಾಲಾನೆ ಬಾರಿಸುದ್ಹಂಗೆ
ತಾಳಲಾರೆ ಶಿವನೆ ತಡಿಯಲಾರೆ | ನೇ ಶಿವಗುರುವೆ
ತಾಯಿಯಮ್ಮ ಇಲ್ಲ ಮರೂಗಾಕೆ | ನೇ ಸುಭದ್ರ
ತೊರ್ಯಾಳೆ ಕೆಂಗಣ್ಣಿಲುದುಕಾವ | ನೇ ಸಂಗಮ್ಮ
ಮುಂದುವಾಕೆ ಹೋಗಿ ಕುಳುತಾಳೆ | ನೇ ಸಂಗಮ್ಮುನ
ಮುಂದಾಲ ಮ್ಹೂರಲ್ಲು ಮುರಿಯಾಲೋದ್ದ

ಕೆಟ್ಟುಕಣೋ ನಾರಂದ ದುಷ್ಟ ಕಣೋನೋ ನಿನ್ನಳಿಯ
ಮುಂದಾಲ ಮೂರ್ಹಲ್ಲು ಮುರಿಯಾಲೋದ್ದ

ರನ್ನದ್ಹಲ್ಲು ಮುರಿದಾರೆ ಶಿನ್ನದ್ಹಲ್ಲು ಮಾಡಿಸಿ ಕೊಡುವೆ
ಇನ್ನೊಮ್ಮೆ ನೋಡೆ ಹಡುದಮ್ಮ | ನೇ ಅಂದಾರೆ
ಮುಂದುವಾಕೆ ಹೋಗಿ ಕಳುತಾಳೆ | ನೇ ಸಂಗಮುನ
ಮೊಣಕಾಲು ಚಿಪ್ಪು ಮುರಿಯಾಲೋದ್ದ

ಕೆಟ್ಟುಕಣೋ ನಾರಂದ ದುಷ್ಟ ಕಣೋನೋ ನಿನ್ನಳಿಯ
ಮಣಾಕಾಲ ಸಿಪ್ಪೆ ಮುರಿಯಾಲೋದ್ದ

ಪಟ್ಟೆದನ್ನ ಸೀರೆ ಉಟುಗಳ್ಳೇ ನೇ ಸಂಗಮ್ಮ
ವಕ್ಕೂವುಳುದ ಗದ್ದೆ ಉಣಾಲ್ಹೋಗೆ ನೇ ಸಂಗಮ್ಮ
ನೆತ್ತಿ ತುಂಬ ಮಣ್ಣು ವಯಿಕೊಳ್ಳೆ

ಸಾಲ್ಲೇದನ್ನ ಸೀರೆ ಸುಡಿಕಳ್ಳೇನೇ ಸಂಗಮ್ಮ
ನಾಗುವುಳುದ ಗದ್ದೆ ಉಣ್ಣಾಲ್ಹೋಗೆ | ನೇ ಸಂಗಮ್ಮ
ಬಾಯಿತುಂಬ ಮಣ್ಣು ವಯಿಕೊಳ್ಳೆ

ಹೊಟ್ಟಿಯಾಗುಳ ಕೂಸು ವಡುದೇನೇ ಮಾತ್ನಾಡುವಾಗ
ತಾಯಿಯಮ್ಮುಗ ದುಃಖ ಘನುವಾಗಿ
ವಡುಲಾಗುಳ  ಕೂಸು ವಡುದೇನೇ ಮಾತ್ನಾಡುವಾಗ
ತಾಯಿ ಯಮ್ಮುಗ ದುಃಖ ಘನುವಾಗಿ

ಅಂಜದಿರು ನನ್ನಮ್ಮ ಅಳುದಾದೀರೇ ನನ್ನಮ್ಮ
ಅಂಜುವುದುಲೆ ನಾನು ಬರತೀನಿ | ನೀನು ಇತ್ತಿರುವ
ವಾಲೆಲ್ಯಾವುಣವ ಸೊಡಾಲೊಸೆ

ಹೇದುರದಿರು ನನ್ನಮ್ಮ ಬೆದುರಾದೀರೇ ನನ್ನಮ್ಮ
ಹೇದುರುದುಲೇ ನಾನು ಬರುತೀನಿ ನೀನು ಕಟ್ಟಿರುವ
ಶಿತ್ತುವಾರುದ ತುರುಬು ಸೊಡಾಲುಸಿ

ಸಟ್ಟಸುಕ್ಕುರುವಾರ ಮಟ್ಟಾನೆ ಮಧ್ಯಾನುದಾಗ
ಸುಕ್ರುವುನ ಗ್ರಾಣ ಗಳಿಗ್ಯಾಗೆ | ಹೊತ್ತೀನಾಗೆ
ಹುಟ್ಟ್ಯಾನೆ ಅಭಿಮಾನ್ಯ ಗಳೀಗ್ಯಾಗೆ

ವಾರ ಸೋಮುವಾರನೇ ಮಾರ ಮಧ್ಯಾನುದಾಗೆ
ಸೂರೀದುನಾ  ಗ್ರಾಣ ಗಳಿಗ್ಯಾಗೆ | ಹೊತ್ತೀನಾಗೆ
ಮೂಡ್ಯಾನೆ ಅಭಿಮಾನ್ಯ ಗಳೀಗ್ಯಾಗೆ

ನಮ್ಮುವಮ್ಮಾ ಹಡುದು ಇಲ್ಲೀಗೆ ಮೂರು ದಿನ
ಯಾರು ಇಲ್ಲವಮ್ಮ ಮರುಗಾಕೆ

ನಮ್ಮುವಮ್ಮ ಹಡದು ಇಲ್ಲೀಗೆ ಆರು ದಿನ
ಯಾರು ಇಲ್ಲಾವೇನೆ ಮರುಗಾಕೆ

ಆಶೇನೆ ಕೇರ‍್ಯಾಗೆ ದೊಡ್ಡಪ್ಪನಾ ಮಗುಳಂತೆ
ದೊಡ್ಡೋಳು ಧರಿಣಮ್ಮ ಐದಾಳೆ

ಈಶೇನೆ ಕೇರ‍್ಯಾಗೆ ಶಿಕ್ಕಪ್ಪಾನಾ ಮಗುಳಂತೆ
ಶಿಕ್ಕೋಳು ಧರಿಣಮ್ಮ ಐದಾಳೆ

ಮರುದಾಗುಳ ಕೂಸು ಎದ್ದಾನೆ ಕಾಶಿಯ್ಹಾಕಿ
ಸಣ್ಣ ಹುಡುಗನಾಗಿ ನೆಡುದಾನೆ

ಮರುದಾಳ ಕೂಸು ಎದ್ದಾನೇ ಕಾಶಿಯ್ಹಾಕಿ
ಚೋಟು ಹುಡುಗನಾಗಿ ನಡುದಾನೆ

ಆಶೇನೆ ಕೇರ‍್ಯಾಗೆ ದೊಡ್ಡಪ್ಪನಾ ಮಗುಳಂತೆ
ದೊಡ್ಡೋಳು ಧರಿಣಮ್ಮ ಬರುಬೇಕು

ಈಶೇನೆ ಕೇರ‍್ಯಗ ಶಿಕ್ಕಪ್ಪಾನ  ಮಗಳಂತೆ
ಶಿಕ್ಕೋಳು ಧರಣಮ್ಮ ಬರುಬೇಕು

ನಮ್ಮುವಮ್ಮ ಹಡದು ಇಲ್ಲೀಗೆ ಮೂರು ದಿನ
ಯಾರು ಇಲ್ಲವಮ್ಮಾ ಮರುಗಾಕೆ

ನಮ್ಮುವಮ್ಮ ಹಡದು ಇಲ್ಲೀಗೆ ಆರು ದಿನ
ಯಾರು ಇಲ್ಲವಮ್ಮಾ ಮರುಗಾಕೆ

ಹತ್ತರಿವೆ ತಣ್ಣೀರು ಅರರಿವೇನೇ ಬಿಸಿ ನೀರು
ಪಟ್ಟೆದನ್ನ ಸೀರೆ ಹೆಗಲುಮ್ಮಾಲೆ! ಆಕ್ಕ್ಯಂಡು
ದೊಡ್ಡೋಳು ಧರಿಣಮ್ಮ ಬರುತಾಳೆ

ಆರರಿವೆ ತಣ್ಣೀರು ಆರಿರವೇನೇ ಬಿಸಿ ನೀರು
ಸಾಲೆದನ್ನ ಸೀರೆ ಹೆಗಲಮ್ಮಾಲೆ !ಆಕ್ಕ್ಯಯ
ಸಣ್ಣೋಳು ಧರಣಿಮ್ಮ  ಬರುತಾಳ

ಹತ್ತುನೊರು ಬಾಳೇಹಣ್ಣು ಮತ್ತೇನೊರು ಕಬ್ಬಿನ ಕೋಲು
ಕಣಲ ಪೂಜೆಗೆ ತಾನು ನೆಡುದಾಳೆ !ವಳುಗಾಳ
ಬಾಲುವಮ್ಮ ಕಾರಂದು ಅರಿಸ್ಯಾಸೆ | ನೇ ವಳುಗಾಳು
ಬಾಲುವಾನ ಯಾರೆ ಬಡುದೋರು