ಕತ್ರಿಸ್ದ ಕರಿಯಡಿಕೆ ಉತ್ರಿಸ್ದ ಬಿಳಿಯಲೆ
ಪಚ್ಚೆನ್ನ ಕರುಪುರದ ಕೆನಿಸುಣ್ಣ | ದಾ ಈಳ್ಳೇವು
ಕೊಟ್ಟಳಮ್ಮಾ ಅಳಿಯಾನ ಕೈ ತುಂಬ
ಆರಿಸಿದ ಕರಿಯಡಿಕೆ ಸೋದಿಸಿದ ಬಿಳಿಯಾಲೆ
ಜೇನನ್ನ ಕರುಪುರದ ಕೆನಿಸುಣ್ಣಾ | ದಾ ಈಳ್ಳೇವು
ಕೊಟ್ಟುಳಮ್ಮಾ ಮಗನ ಕೈತುಂಬಾ
ಭಾಮೈದ್ಮರಿಬ್ಬಾರು ಕೈಕೈಯೇನೇ ಹಿಡಕಂಡು
ಕೇರಿಕೇರಿಗುಂಟಾ ನೆಡುದಾರ
ಮುತ್ತೀನ ಒಳುಸಲಾಗೆ ಮುತ್ತೀನ ಹೊರಸಾಲೆ
ಮುತ್ತ್ಯ ಕಟ್ಟಸಿದ ಮಕುಸಾಲೆ | ಮಾಳೀಗ್ಯಾಗೆ
ನಾರೇರು ಇರೋದು ಬಲುಕಡಿಮೆ | ನೇ ನನ್ನಮ್ಮ
ನಿನ್ಹೋಗು ಅತ್ತಯಮ್ಮನ ಮಗಳ ಬೇಡು
ಹೊನ್ನೀನ ಒಳಸಾಲೆ ಹೊನ್ನೀನ ಹೊರಸಾಲೆ
ಹೊನ್ನೆಕಟ್ಟಿಸಿದ ಮಕಸಾಲೆ | ಮಾಳಿಗ್ಯಾಗೆ
ನಾರೇರು ಇರೊದು ಬಲುಕಡಿಮೆ | ನೇ ನನ್ನಮ್ಮ
ನಿನ್ಹೋಗು ಅತ್ತಯೆಮ್ಮನ ಮಗಳ ಬೇಡು
ಮುತ್ತೀನ ಅಂದಾಲು ಎತ್ತ್ಯಾಳಮ್ಮ ಸುಭದ್ರ
ಮುತ್ತನ್ನು ಜಲಜಲನೆ ಉದುರುಸ್ತ | ಅಂದಾಲೇರಿ
ಲಚ್ಚಿಯಾಣಪುರಕೆ ಇಳುದಾಳು
ಹೂವ್ವೀನ ಅಂದಾಲ ಏರ್ಯಾಳಮ್ಮ ಸುಭದ್ರ
ಹೂವನ್ನು ಜಲಜಲನೆ ಉದರಸ್ತ | ಅಂದಾಲೇರಿ
ನಾರಾಯಣಪುರಕೆ ಇಳುದಾಳೆ
ಅಂದಾಲೇರಿಕೂಂಡು ಅಣ್ಣಾನ ಊರಿಗ್ಹೋಗಿ
ನಿಲ್ಲುವಮ್ಮಾ ತಂಗಿ ಅರಗಳಿಗೆ | ನೇ ಮನಿಗ್ಹೋಗಿ
ಸತಿಯೋಳುವ ಕೇಳಿ ಬರತೀನಿ
ಏನೇನೆ ನಿನ ತಂಗಿ ಅಂದೂಳು ಬಾಂದೈದಾಳೆ
ನಿಲ್ಲುವಮ್ಮ ಅಲ್ಲೆ ಅರಗಳಿಗೆ
ಹಿಂದಾಕೆ ನಿನ ತಂಗಿ ಅಂದೂಳು ಅಡೀದಂತೆ
ಬಂಡು ಮಾಡಿ ನಮ್ಮನ್ನು ಬಯಿದಾಳು | ನೇ ಮಾರಾಯ
ಅಂದಾಳು ಹಿಂದಾಕ ತಿರುವೇಳು
ಏನಮ್ಮ ತಂಗ್ಯಮ್ಮ ಅಂದ್ಯಂತೆ ಅಡೀದಂತೆ
ಬಂಡು ಮಾಡಿ ಅವುಳ ಬಯಿದಂತೆ | ನನ್ನ ತಂಗ್ಯಮ್ಮ
ಅಂದಾಲು ಹಿಂದಾಕ ತಿರುವೇಳು
ಈಗ ಬರುವ ತಂಗಿ ಆಗಾಲೆ ಏನು ಮಾಡಿದೆ
ಅಗಲವಳ ಕಡಿಯ ಬಳುಗಾವ | ಅವು ಮಗಳೀಗ
ಬಣ್ಣ ಉಡುಸಿ ಬಳಿಯ ಇಡಿಸ್ಯಾರಂತೆ
ಆಗ ಬರುವ ತಂಗಿ ಈಗಾಲೇನು ಮಾಡಿದೆ
ಅಂದಲವುಳ ಕಡಿಯ ಬಳುಗಾವ | ಅವು ಮಗಳೀಗ
ರಂಗನೀಲದ ಬಳಿಯ ಇಡಿಸ್ಯಾರಂತೆ
ಕಟ್ಟೀದ ಬುತ್ತ್ಯತೆ ಕಟ್ಟೀಗೆ ನೀರ್ಯೆದಾವೆ
ಕೂಟ್ಟು ಊರು ಸಂತೆ ನೆರುದಾವೆ | ನೇ ಅಣ್ಣಯ್ಯ
ಕಟ್ಟುಂಬಲ್ಹೇಳೆ ನಿನ ಮಡಿದಿಗಿ
ಹೆಣ್ಣೇ ಕೂಡುತಾನೆಂದು ನಿಮ್ಮಲಿಗೆ ನಾ ಬಂದೆ
ಹೆಣ್ಣೇನೆ ಅಣ್ಣಯ್ಯ ಕೂಡಾಲಿಲ್ಲ | ಅಂಬಿಗುರಣ್ನ
ಅನ್ನೀರಿ ಅಂದಾಲುವ ಹೊರಿಯಾಕೆ
ಕೂಸು ಕೂಡುತಾನಂದು ನಿಮ್ಮಲಿಗೆ ನಾ ಬಂದೆ
ಕೂಸೇನೆ ಅಣ್ಣಯ್ಯ ಕೊಡಾಲಿಲ್ಲ | ಅಂಬಿಗುರಣ್ನ
ಬಿಸೀರಿ ಅಂದಾಲುವ ಹೊರಿಯಾಕ
ಮುತ್ತೀನ ಅಂದಾಲ ಹತ್ಯಾಳಾಮ್ಮ ಸುಭದ್ರ
ಮುತ್ತನ್ನ ಜಲಜಲನೆ ಉದರೂಸ್ತ | ಅಂದಾಲೇರಿ
ಪಾಂಡವರಪುರಕೆ ಹೊರುಟಾಳೆ
ಈಗಾಲೆ ಹೋದ್ಯಮ್ಮ ಆಗಾಲೆ ನೀ ಬಂದ್ಯಮ್ಮ
ಏನು ಅಂದಾನು ಮಾವ ಅರಿಯೇನು
ಹೋಗುವುತು ಹುಲಿಯಾ ಕಂಡೆ ಬರುವುತ ಕರಡಿ ಕಂಡೆ
ಏಳು ಹೆಡಿಯ ಸರುಪ ಹೆಡೆಯೆತ್ತೀ | ಆಡುದು ಕಂಡು
ಹೇಳದುಲೆ ಬಂದೇ ತವರಿಂದ
ಈಗ ಬರುವ ತಂಗಿ ಆಗಾಲೆ ಏನು ಮಾಡಿದೇ
ಅಗಲವಳು ಕಡಿಯ ಬಳುಗಾವ | ಅವು ಮಗಳಿಗ
ಬಣ್ಣ ಉಡಿಸಿ ಬಳಿಯ ಇಡಿಸ್ಯಾವ್ರಂತೆ
ಆಗ ಬರುವ ತಂಗಿ ಈಗಾಲೇನು ಮಾಡಿದೆ
ಅಂದಲವಳು ಕಡಿಯ ಬಳುಗಾವ | ಅವು ಮಗಳೀಗ
ರಂಗ ನೀಲುದ ಬಳಿಯ ಇಡಿಸ್ಯಾವ್ರಂತೆ
ಮುತ್ತೀನ ಅಂದಾಲನ ಹತ್ತ್ಯನಮ್ಮಾ ಆಭಿಮಾನ್ಯು
ಮುತ್ತನ್ನು ಜಲಜಲನೆ ಉದುರೂಸ್ತಾ ಅಂದಾಲೇರಿ
ಲಚ್ಚಿಯಾಣಪುರುಕೆ ಇಳುದಾನೆ
ಈಗ ಬರುವ ಅಳಿಯ ಆಗಾಲೆ ಏನು ಮಾಡಿದೆ
ಅಗಲವಳ ಕಡಿಯಾ ಬಳುಗವ | ಅವು ಮಗಳಿಗೆ
ಬಣ್ಣ ಉಡುಸಿ ಬಳಿಯಾ ಇಡಿಸ್ಯಾರಂತೆ
ಆಗ ಬರುವ ಅಳಿಯ ಈಗಾಲೇ ಏನು ಮಾಡಿದೆ
ಅಂದಲವಳು ಕಡಿಯ ಬಳುಗವ | ಅವ್ರು ಮಗಳಿಗ
ರಂಗ ನೀಲುದ ಬಳಿಯಾ ಇಡಿಸ್ಯಾರಂತೆ
ಶಳಿಯ ಶಳಿಯ ಮಾವ ಶಳಿಯಾದಿರು ಮಾವಯ್ಯ
ಸೇಡವು ಬಿಡಿಸಿದ ಕಾಲ ಗಳಿಗ್ಯಾಗೆ | ನನ್ನ ಮಾವಯ್ಯ
ಇನ್ನೂ ಆರು ತಿಂಗಳು ಗೆರೆಗೊಯ್ಯ
ಬಿಗಿಯ ಬಿಗಿಯ ಮಾವಯ್ಯ ಬಿಗಿಯಾದಿರು ಮಾವಯ್ಯ
ಬಿಗಿವು ಬಿಡಿಸ್ಯಾನೆ ಕಾಲ ಗಳಿಗ್ಯಾಗೆ | ನನ್ನ ಮಾವಯ್ಯ
ಇನ್ನೂ ಆರು ತಿಂಗಳು ಗೆರೆಗೊಯ್ಯ
ಅಳುವುತಿದ್ದ ಮಗಳು ತೊಡಿಯಾನೆ ಏರಿಸಿಗಂಡು
ನಮ್ಮ ಮಲಿಗಳು ನೀವು ಉಣು ಬಾರೆ
ನೀವು ಹಾರೊರಮ್ಮ ನಾವೇನೇ ಛತ್ರಿ ಕುಲುದೋರು
ನಿಮ್ಮ ಮಲಿಗಳು ನಾವು ಉಣಾದಿಲ್ಲ
ಅಳುವುತ್ತಿದ್ದ ಮಗಳು ತೊಡಿಯಾನೆ ಏರುಸಿಗಂಡು
ಯಾರ ಸೊಸಿಯಾದಿ ಮಾದೇವಮ್ಮ | ಅಂದಾರೆ
ಬಡವಿ ಸುಭದ್ರೆನ ಸೊಸೆ ನಾನು
ಮತಿಕಾಣೆ ನಿನ್ನ ಜಾತಿಯ ಮತಿಕಾಣೆ ನಿನ್ನ ರೀತಿಯ
ಯಾರಕೊಟ್ಟರ್ರೊಗಿದ್ದೆ ಅರುಜುಣನ್ದಿಂದೆ
ಹೊತ್ತೀಗೆ ಕೊಂಡ್ಹೋಗೊ ದಸಿಮಗುನ ವಳಿಯಾಕೆ ಕರುಸು
ತುಪ್ಪಾನೇ ಬಾನುಗಳು ಉಣಲಿಟ್ಟು | ದಸಿಮಗನ
ಉಪ್ಪರಿಗೆತಂಕ ಕಳುವಿಕೊಟ್ಟು | ಹೆಳ್ಯಾಳೆ
ಗೊಕ್ಕಾನೇ ಕೈಲಣ್ಣನ ಬರೂಹೇಳು | ಬರುದಿದದಾರೆ
ದಕ್ಕೀತು ಆ ಹೆಣ್ಣು ದರುಮರಿಗೆ
ವಾಲೇಯ ಕೊಂಡ್ಹೋಗೊ ದೆಸಿಮಗುನಾ ವಳಿಯಾಕೆ ಕರುದು
ಹಾಲೇ ಬಾನೂಗಳು ಉಣಲಿಟ್ಟು | ದೆಸಿಮಗನ
ವಾವೂರಿಗೆತಂಕ ಕಳುವೀಕೊಟ್ಟು | ಹೇಳ್ಯಾಳೇ
ಬೇಗಾನೆ ಕೈಲಣ್ಣುನ ಬರುಯ್ಹೇಳೇ | ಬರದಿದ್ದಾರೆ
ಆಗಿತು ಆ ಹೆಣ್ಣು ದರುಮರಿಗೆ
ಮೈಯೆಲ್ಲ ಕೆಂದೊಳು ಕೈಯೆಲ್ಲ ನೇ ಕಿರುಬೆವರು
ಯಾವ ನಾಡರಸಯ್ಯ ದೊರಿಮಗನೇ
ಯಾವ ನಾಡೀನೋರು ಯಾತಾಕೆ ಆದೀವಮ್ಮ
ನಾವು ನಾರಂದಾನ ಪುರದೋರು | ಬಂದೈದಿವಿ
ನಿಮ್ಮಕ್ಕ ಸುಪ್ಪಕೋ ಕಳುವ್ಯಾಳೆ | ಏನಂದೂನೇ ಕಳುವ್ಯಾಳೆ
ಗೊಕ್ಕಾನೇ ಕೈಲಣ್ಣಾನ ಬರ್ಹುಯೇಳೆ | ಬರುದಿದ್ದಾರೆ
ದಕ್ಕೀತು ಆ ಹೆಣ್ಣು ದರುಮರಿಗೆ
ನಮ್ಮಾನೆ ಕೈಲೋರು ಬಣ್ಣಾದ ಸೀರೆ ತಂದವ್ರೆ
ಉಟ್ಟುಕೊ ಬಾ ಮಗಳೇ ಮಾದೆವಮ್ಮ | ಅಂದಾರೆ
ಒಪ್ಪಲಿಲ್ಲ ನಮ್ಮ ನೆಡಾಗುಳಿಗೆ | ನೇ ಆಸೀರೆ
ಕೊಟ್ಟು ಬನ್ನೀರುವುರ ಅರುಮನಿಗೆ | ಮುಟ್ಟುದಿದ್ದಾರೆ
ಬಿಟ್ಟು ಬನ್ನೀರ್ಹರುವ ಜಲದೀಗೆ
ನಮ್ಮಾನೆ ಕೈಲೋರು ಬಣ್ಣಾದ ಕುಬುಸ ತಂದವ್ರೆ
ಉಟ್ಟುಕೊ ಬಾ ಮಗಳೇ ಮಾದೆವಮ್ಮ | ಅಂದಾರೆ
ಒಪ್ಪಲಿಲ್ಲ ನಮ್ಮ ಬುಜಾಗುಳಿಗೆ | ನೇ ಆ ಕುಬುಸ
ಕೊಟ್ಟು ಬನ್ನೀರುವರ ಅರುಮನೀಗೆ | ಮುಟ್ಟುದಿದ್ದಾರೆ
ಬಿಟ್ಟು ಬನ್ನೀರ್ಹರುವ ಜಲದೀಗೆ
ನಮ್ಮಾನೆ ಕೈಲೋರು ಬಣ್ಣಾದ ಬಳಿ ತಂದವ್ರೆ
ಇಟ್ಟುಕೋ ಬಾ ಮಗಳೇ ಮಾದೆವಮ್ಮ | ಅಂದಾರೆ
ಒಪ್ಪಲಿಲ್ಲ ನಮ್ಮ ಕಯ್ಯಿಗಳಿಗೆ | ನೇ ಆ ಬಳೆ
ಕೊಟ್ಟು ಬನ್ನೀರುವರ ಅರುಮನಿಗೆ | ಮುಟ್ಟುದಿದ್ದಾರೆ
ಬಿಟ್ಟು ಬನ್ನೀರ್ಹರುವ ಜಲದೀಗೆ
ನಮ್ಮಾನೆ ಕೈಲೋರು ಬಣ್ಣಾದ ವಾಲೆ ತಂದವ್ರೆ
ಇಟ್ಟುಕೋ ಬಾ ಮಗಳೇ ಮಾದೆವಮ್ಮ | ಅಂದಾರೆ
ಒಪ್ಪಲಿಲ್ಲ ನಮ್ಮ ಕಿವಿಗಳಿಗೆ | ನೇ ಆ ವಾಲೆ
ಕೊಟ್ಟು ಬನ್ನೀರುವರ ಅರುಮನಿಗೆ | ಮುಟ್ಟುದಿದ್ದಾರೆ
ಬಿಟ್ಟು ಬನ್ನೀರ್ಹರುವ ಜಲದೀಗೆ
ನಮ್ಮಾನೆ ಕೈಲೋರು ಬಣ್ಣಾದ ಟೀಗಿ ತಂದವ್ರೆ
ಇಟ್ಟುಕೋ ಬಾ ಮಗಳೇ ಮಾದೆವಮ್ಮ | ಅಂದಾರೆ
ಒಪ್ಪಲಿಲ್ಲ ನಮ್ಮ ನಡಗಳಿಗೆ | ನೇ ಆ ಟೀಗೀಯ
ಕೊಟ್ಟು ಬನ್ನೀರುವರ ಅರುಮನಿಗೆ | ಮುಟ್ಟದಿದ್ದಾರೆ
ಬಿಟ್ಟು ಬನ್ನೀರ್ಹರುವ ಜಲದೀಗೆ
ಕಟ್ಟೇನೆ ಪಾಂಡವರು ಬಿಳಿಯಾನೆ ಸೀರೆ ತಂದವ್ರೆ
ಉಟ್ಟುಕೋ ಬಾ ಮಗಳೇ ಮಾದೆವಮ್ಮ | ಅಂದಾರೆ
ಒಪ್ಪುವೆಮ್ಮ ನಮ್ಮ ನಡುವಳಿಗೆ
ಕಟ್ಟೇನೆ ಪಾಂಡವರು ಬಿಳಿಯಾನೆ ಕುಬುಸ ತಂದವ್ರೆ
ತೊಟ್ಟುಕೋ ಬಾ ಮಗಳೇ ಮಾದೆವಮ್ಮ | ಅಂದಾರೆ
ಒಪ್ಪುವೆಮ್ಮ ನಮ್ಮ ಬುಜಗಳಿಗೆ
ಕಟ್ಟೇನೆ ಪಾಂಡವರು ಹಿತ್ತಾಳೆ ಬಳಿ ತಂದವ್ರೆ
ತೊಟ್ಟುಕೋ ಬಾ ಮಗಳೇ ಮಾದೆವಮ್ಮ | ಅಂದಾರೆ
ಒಪ್ಪುವೆಮ್ಮ ನಮ್ಮ ಕೈಯಿಗಳಿಗೆ
ಕಟ್ಟೇನೆ ಪಾಂಡವರು ಹಿತ್ತಾಳೆ ಓಲೇ ತಂದವ್ರೆ
ಇಟ್ಟುಕೋ ಬಾ ಮಗಳೇ ಮಾದೆವಮ್ಮ | ಅಂದಾರೆ
ಒಪ್ಪೆವಮ್ಮ ನಮ್ಮ ಕರೂಣಾಕ
ಸಿಡಿಮುಡಿ ಗುಟ್ಟುತ್ತ ಮುಡಿಯಾನೆ ಅಲ್ಲಾಡುತ್ತ
ಯಡವೀದ ಯ್ಹಬ್ಬೊಟ್ಟೊಂದರಿಯಾದು | ನೇ ಸುಪ್ಪಕ್ಕ
ಹೋಗ್ಯಾಳೆ ಬಡಿಗೇರ ಅರಮನಿಗೆ
ಎಂದೂ ಬಾರದ ಸುಪ್ಪಕ್ಕ ಹಿಂಗ್ಯಾಕೆ ನೀನು ಬಂದ್ಯಮ್ಮ
ಕುಂದುವಾರಗೊಳ್ಳೆ ಮನಿಗೊಳ್ಳೆ
ಕುಂದ್ರಾಕೆ ಬರಲಿಲ್ಲ ನಿಂದ್ರಾಕೆ ನಾನು ಬರಲಿಲ್ಲ
ಹಿಂದ ನಮ್ಮಾನೆಯಲ್ಲಿ ಅವುಸಾರ | ಬಡಿಗೇರಣ್ಣ
ಗೊಕ್ಕಾನೆ ಸಂಕೋಲೆ ಅನುಬೇಕು | ಬಾಗುಲಾಗೆ
ಕಹುದಟ್ಟೀಲಿ ಕರಡಿ ಕಟ್ಟೀದಾಂಗೆ
ಬಂದನು ಬಡಿಗೇರಣ್ಣ ತೊಟ್ಟುಕಂಡಡೀರೇವು
ಮಾದೇವಿಗೆ ಸಂಕೋಲೆ ಅನುಬೇಗ | ಬಾಗುಲಾಗೆ
ಬೇಗಾನೆ ಹುಲಿಕರಡಿ ಕಟ್ಟೀದಾನೆ
ಸತ್ತ್ಯುಳ್ಳ ಪಾಂಡವರು ಅತ್ತೇ ನೇ ಮಾವಾದರೆ
ಹಾಕೀದ ಸಂಕೋಲೆ ಅರುಗಾಗಿ | ಬಾಗುಲಾಗೆ
ಕಟ್ಟೀರೊ ಹುಲಿಕರಡಿ ಕಡೀಗೋಗಿ | ಅಂದು ಮಾದೇವಿ
ಸತ್ತೇರಿಗೆ ಕರವ ಮುಗಿದಾಳೆ
ಆ ಕೈಯತ್ತ ಮಾಡಿ ಈ ಕೈಯಿ ಸಾಬುರ ಮಾಡಿ
ರಾತ್ರಿ ಬೆಳುದಿಂಗಾಳು ಅಗುಲೆಮಾಡಿ | ಮಾದೇವಿ
ಹೋದಾಳೆ ಬಾಳೆಯ ವನಗಳಿಗೆ
ದೇವುಳ್ಳ ಪಾಂಡವರು ಅತ್ತೆಮಾವಾದರೆ
ಹಾಕೀದಾ ಸಂಕೋಲೆ ಅರುಗಾಗಿ | ಬಾಗುಲಾಗೆ
ಕಟ್ಟೀರೊ ಹುಲಿ ಕರಡಿ ಕಡೀಗ್ಹೋಗಿ | ಮಾದೇವಿ
ಸತ್ತೇರಿಗೆ ಕರವ ಮುಗಿದಾಳೆ
ಅಂಗೈಯತ್ತು ಮಾಡಿ ಮುಂಗೈ ಸಾಬುರ ಮಾಡಿ
ಸಂಜೆ ಬೆಳದಿಂಗಳು ಹಗುಲೆಮಾಡಿ | ಮಾದೇವಿಇ
ಹೋದಾಳೆ ನಿಂಬೇಯ ವನುಗಳಿಗೆ
ನಿಂಬೇಯ ವನದೊಳಗೆ ಇರುವಂತ ಶಿಕ್ಕಾಕೋಗುಲಿ
ಅತ್ತೇರ ಮಗನಿರುವ ನೆಲೀಯ್ಹೇಳೆ
ಬಾಳೇಯ ವನುದಾಗ ಇರುವಂತಾ ಸಣ್ಣಕೋಗುಲಿ
ಮಾವಾನ ಮಗನಿರುವ ನೆಲೀಯ್ಹೇಳೆ
ನೀನು ಸಣ್ಣೋಳಲ್ಲ ನೀನೂನೇ ಶಿಕ್ಕೋಳಲ್ಲ
ಅತ್ತೆಮಗುನ ಗೊಡುವೆ ನಿನಿಗ್ಯಾಕೆ
ಅಚ್ಚ್ಯುತನ ಮಕ್ಕಳು ದಿಕ್ಕನಾಗೆ ಇಲ್ಲಾದೋರು
ಕೀಚನಾಗೆ ಗಂಡರುನ ಬೆದಕೋರು
ನಾರಂದುನ ಮಕ್ಕಲೂ ದಿಕ್ಕನಾಗೆ ಇಲ್ಲಾದೋರು
ಕೀಚನಾಗೆ ಗಂಡರುನ ಬೆದಕೋರು
ನಾರಂದುನ ಮಕ್ಕಾಳು ನಾಡಿನಾಗೆ ಇಲ್ಲಾದೋರು
ನೀರಿನಾಗೆ ಗಂಡಾನ ಬೆದಕೋರು
ಹಿಪ್ಪೆ ಹೂವು ತಂದು ಹಿತ್ತಾಲಾಗೆನೇ ವಣುಗ್ಹಾಕಿ
ತಾಯಿಯಮ್ಮುನ ಕೊಂದು ಮರನೇರಿ | ಸಣ್ಣ ಕೋಗೂಲಿ
ನೀನು ನಮ್ಮನುದಾಗೆ ಇರುಬ್ಯಾಡ
ಕಣಗಲ್ಹೂವು ತಂದು ಕಣದಾಗೇನೇ ವಣುಗ್ಹಾಕಿ
ತಾಯಿಯಮ್ಮುನ ಕೊಂದು ಮರನೇರಿ | ಸಣ್ಣ ಕೋಗೂಲಿ
ನೀನು ನಮ್ಮನುದಾಗೆ ಇರುಬ್ಯಾಡ
ಮೂರೇನೆ ತಿಂಗಾಳಿಗೆ ಬಾಯಿಗೆನೆ ಮುದ್ದಿರಿಕೆ
ತಾಯಿಯಂಬ ಸೊಲ್ಲೇ ನಿಮಿಗಿಲ್ಲ | ಶಿಕ್ಕ ಕೋಗೂಲಿ
ನೀನು ನಮ್ಮನುದಾಗೆ ಇರುಬ್ಯಾಡ
ಆರೇನೆ ತಿಂಗಳಿಗೆ ಬಾಯಿಗೆನೆ ಮುದ್ದಿರಿಕೆ
ಯತ್ತಮ್ಮಯೆಂಬ ಸೊಲ್ಲು ನಿಮಿಗಿಲ್ಲ | ಸಣ್ಣ ಕೋಗುಲಿ
ನೀನು ನಮ್ಮನುದಾಗೆ ಇರುಬ್ಯಾಡ
ನಿಂಬೇಯ ವನುದಾಗೆ ಇರುವಂತ ಶಿಕ್ಕ ರಾಮಯ್ಯ
ಅತ್ತೇರ ಮಗನಿರುವ ನೆಲಿಯ್ಹೇಳಾ
ಬಾಳೀಯ ವನುದಾಗೆ ಇರುವಂತ ಸಣ್ಣ ರಾಮಯ್ಯ
ಮಾವಾನ ಮಗನಿರುವ ನೆಲಿಯೇಳಾ
ನಿಂಬೀಯ ವನುದಾಗೆ ಮುಂದಾಲ ತೋಪೀನ್ಹಾಗೆ
ಶಂದ್ರಗನ್ನಕ್ಕೇರ ಮಠದಾಗೆ | ನೇ ಅಪಿಮಾನ್ಯು
ವಾಲೆ ವದುತಲಿ ಕುಳುತಾನೆ
ಬಾಳೇಯ ವನುದಾಗೆ ಮ್ಯಾಗಾಳ ತೋಪೀನ್ಹಾಗೆ
ಸೂರಿದಗನ್ನಕ್ಕೇರ ಮಠದಾಗೆ | ನೇ ಅಪಿಮಾನ್ಯು
ಕಪ್ಪನ್ನ ವದುತಲಿ ಕುಳುತಾನೆ
ಮಕ್ಕಳಿಲ್ಲದೊರಿಗೆ ಮಕ್ಕಳಾಗೋ ರಾಮಯ್ಯ
ಉತ್ತುತ್ತಿ ಹಣ್ಣು ಮೇಲಲ್ಹೋಗು | ಶಿಕ್ಕ ರಾಮಯ್ಯ
ಮುತ್ತೀನ ಪಂಜುರಾದಾಗೆ ನಲದಾಡೋ | ಸಣ್ಣ ರಾಮಯ್ಯ
ಹೂವ್ವಿನ ಪಂಜರುದಾಗ ನಲಿದಾಡೊ
ಅತ್ತಾಲ ದಣಿಯಲ್ಲ ಇತ್ತಾಲಾನೇ ಧಣಿಯಲ್ಲ
ಸ್ರತಿಯೋಳು ಮಾದೇವಿ ಧಣಿಗಾಳು | ಆಗಿದ್ದಾರೆ
ಹೋಗಿಯನ್ನ ಬಾರಾ ಸೂರೀದಾರ | ನೇ ಅಂದಾರೆ
ನೀನೇ ಹೋಗಿ ಬಾರೋ ಯನುಭಾವ
ಬಾವಮೈದ್ನ ಇಬ್ರಾಳು ಕೈ ಕೈಯಾನೇ ಇಡಕಂಡು
ಬಾಳಿ ಬಾಳಿಗುಂಟ ಬರುತಾರೆ | ನೇ ಸುರಿದಾವೆ
ಬಾಳಿಯನ್ನ ವನುವೇ ಮರಿಯಾದ
ಆವುಗಳು ಕರಿಯಾದ ಯಮ್ಮಕ್ಕಳ್ಳೇಳಾದ
ಬ್ರಮ್ಮಾಲೋಕದ ಕದವ ತಗೀಯಾದ | ವತ್ತಿನಾಗೆ
ಯನ್ನರಸಿ ನೀ ಬಂದು ತೆರನ್ಹೇಳೆ
ಗೋವುಗಳು ಕರಿಯಾದ ಯಮ್ಮಕ್ಕಳ್ಳೇಳಾದ
ದೇವಲೋಕುದ ಕದವ ತೆಗಿಯಾದ | ವತ್ತಿನಾಗೆ
ನನ್ನರಸಿ ನೀ ಬಂದು ತೆರನ್ಹೇಳೆ
ನಿಂಬೇಯ ವನುದಾಗೆ ಯಂಬತ್ತು ಸಾವುರದಂಡು
ಅಂದಶೆಂದಕು ದಂಡು ಇಳದಾವೆ | ಅತ್ತೇರು ಮಗನೆ
ಅತ್ತೇರು ಮಗುನಿಲ್ಲಿಗೆ ಕುಡಿಯಾದ
ಬಾಳೇಯ ವನುದಾಗೆ ನಲವತ್ತು ಸಾವುರು ದಂಡು
ಆಯಸ್ರಾಯಕ ದಂಡು ಇಳುದಾವೆ | ಮಾವುನ ಮಗನೆ
ಮಾವಾನ ಮಗುನಿಲ್ಲಿಗೆ ಕುಡಿಯಾದ
ಅತ್ತೇಮ್ಮ ನ್ಹೊಟ್ಟೇಲಿ ಹುಟ್ಟಿದಂದೀಗಿಲ್ಲೀಗೆ
ಅತ್ತೇರ ಮಗನಿಲ್ಲಿಗೆ ಕುಡಿಯಾದ
ಮಾವಯ್ಯಾನ್ಹೊಟ್ಟೇಲ್ಲಿ ಆದದೀಗಿಲ್ಲೀಗೆ
ಮಾವಾನ ಮಗನಿಲ್ಲಿಗೆ ಕುಡಿಯಾದ
ಅಳುವುತ್ತಿದ್ದ ಮಡದಿ ತೊಡಿಯಾನೆ ಯೇರುಸಿಗಂಡು
ಅಳುವರೇನೆ ನನ್ನ ಸ್ರತಿಯೋಳೆ | ನೇ ಅಂದಾರೆ
ಉಗುರೀಲಿ ಇಕ್ಕು ವಡುದಾನೆ | ಜಡಿಯಾನಾಕಿ
ಉದುರನ್ನ ಮಲ್ಲಿಗೆ ಮುಡಿಸ್ಯಾನೆ | ಮಕವನೋಡಿ
ಅಳುವರೇನೆ ನನ್ನ ಸ್ರತೀಯೋಳೆ
ಯತ್ತವಮ್ಮ ನೀನು ಕೊಟ್ಟರಿಗೆ ಹೋದೆನ್ನೆ
ಯತ್ತಮ್ಮಾ ಆ ಬಳಿಯ ಇಡುಸನ್ನೆ | ನಾ ನಿನ್ನ
ಬಾಳೆಸೆಟ್ಟಿಯಾಗೆ ಬರುತೀನಿ
ತಾಯಿಯಮ್ಮ ನೀನು ತೊರಿದರಿಗೆ ನೀ ಹೋದೆನ್ನೆ
ತಾಯಮ್ಮ ಆ ಬಳಿಯಾ ಇಡುಸನ್ನೆ | ನಾ ನಿನ್ನ
ಬಾಳೆಸೆಟ್ಟಿಯಾಗೆ ಬರುತೀನಿ
ಆ ಕೈ ಯತ್ತುಮಾಡಿ ಈ ಕೈ ಸಬುರ ಮಾಡಿ
ರಾತ್ರಿ ಬೆಳದಿಂಗಾಳು ಆಗಲೇ ಮಾಡಿ | ಮಾದೇವಿ
ಹೋದಾಳೆ ಸಂಕುವಾಲೆ ವಳೀಯಾಕೆ
ಅಂಗಯ್ಯತ್ತ ಮಾಡಿ ಮುಂಗೈಯ್ಯಿ ಸಬುರಮಾಡಿ
ಸಂಜೆ ಬೆಳದಿಂಗಾಳು ಆಗಲೇ ಮಾಡಿ | ಮಾದೇವಿ
ಹೋದಾಳೆ ಸಂಕುವಾಲೆ ವಳೀಯಾಕೆ
ಸತ್ತ್ಯುಳ್ಳ ಪಾಂಡವರು ಅತ್ತೇನೆ ಮಾವಾದಾರೆ
ಹಾಕಿದ ಸುಂಕುಮಾಲೆ ಹಾಕೀದ್ಹಾಂಗೆ | ಇರುಲಂದ
ಕಟ್ಟೀದ ಹುಲಿಕರಿಡಿ ಕಟ್ಟೀದ್ಹಾಂಗೆ | ನೇ ಇರುಲಂದ
ಸತ್ತೇಯೇರಿಗೆ ಕರವ ಮುಗುದಾಳೆ
Leave A Comment