ಭಾಮ್ಯೆರ‍್ನ ಇಬ್ರಾಳು ಕೈ ಕೈ ನೇ ಇಡಕಂಡು
ಹೋದಾರೆ ತಾಯಮ್ಮನ ಅರಮನಿಗೆ

ಅಮ್ಮಾನೆ ನೀಕೇಳೆ ಅಮ್ಮಯ್ಯಾ ನೀ ಕೇಳೆ
ಬಳೆ ಮಾಲಾರುನ ನನಿಗೆ ಕೊಡಬೇಕು | ನಿಮ್ಮಣ್ಣಾನ
ಬಾಲೆ ಬಂದು ನಮಿಗೆ ವಲುದಾಳೆ

ಸತ್ತ್ಯುಳ್ಳ ಪಾಂಡವರು ಅತ್ತೇನೆ ಮಾವಾದಾರೆ
ಬಳೆ ಮಾಲಾರುನ ನನಿಗೆ ಕೊಡಬೇಕು | ನಿಮ್ಮಣ್ಣನ
ಕಂದ ಬಂದು ನಮಿಗೆ ವಲುದಾಳೆ

ದೇವುಳ್ಳ ಪಾಂಡವರು ಅತ್ತೇನೆ ಮಾವಾದಾರೆ
ಬಳೆ ಮಾಲಾರುನ ನನಿಗೆ ಕೊಡಬೇಕು | ನಿಮ್ಮಣ್ಣನ
ಕೂಸು ಬಂದು ನಮಿಗೆ ವಲುದಾಳೆ

ವತ್ತುಂಟೆ ಸುಬದ್ರೆ ತುಪ್ಪಾಬಾನಾವುಂಡು
ಕಟ್ಟಿಯಾನ್ನ ಮ್ಯಾಲೆ ನೆಡುದಾಳೆ

ಏಳುತಲೆ ಸುಬದ್ರೆ ತುಪ್ಪಾಬಾನಾವುಂಡು
ಏರಿಯನ್ನ ಮ್ಯಾಕೆ ನೆಡುದಾಳೆ

ಕಟ್ಟಿಯನ್ನ ಮ್ಯಾಲೆ ಹತ್ತೋಗಾ ಸರುಪಾವ
ಕುಟ್ಟೆನ್ನ ಯಳತೆಗದು ಬಳೆಸುತ್ತಿ | ಮಾಲಾರ ಮಾಡಿ
ವಪ್ಪಿ ಇಟ್ಟಳು ಮಗುನಾ ಬುಜಗಳಿಗೆ

ಏರಿಯನ್ನ ಮ್ಯಾಲೆ ಏರ‍್ಹೋಗಾ ಸರುಪಾವ
ಸೀಳಿಯೇನ್ನೆಳಿ ತಗುದು ಬಳೆಸುತ್ತಿ | ಮಾಲಾರ ಮಾಡಿ
ಮೋವಿಯಿಟ್ಟಳು ಮಗುನ ಬುಜತುಂಬ

ಸತ್ತ್ಯುಳ್ಳ ಪಾಂಡವರು ಅತ್ತೇನೆ ಮಾವಾದಾರೆ
ವಡುದಾರೆ ಈ ಬಳೆಯ ವಡಿಯಾಬ್ಯಾಡ | ಅಂದು ಸುಭದ್ರ
ಸತ್ತಿಯೇರಿಗೆ ಕರವ ಮುಗುದಾಳೆ | ನೇ ಸುಬದ್ರ
ಪಪ್ಪಿಯಿಟ್ಟಾಳು ಮಗುನ ಬುಜಗಳಿಗೆ

ದೇವುಳ್ಳ ಪಾಂಡವರು ಅತ್ತೇನೆ ಮಾವಾದಾರೆ
ಉರುದಾರೆ ಈ ಬಾಳೆ ಉರಿಯಾಬ್ಯಾಡ | ಅಂದು ಸುಬದ್ರ
ಪಾಂಡವರಿಗೆ ಕರವ ಮುಗುದಾಳೆ | ನೇ ಸುಬದ್ರ
ಮೋವಿಲಿಟ್ಟಳು ಮಗನ ಬುಜಗಳಿಗೆ

ಮುತ್ತೀನ ಅಂದ್ಯಾಲ ಹತ್ಯ್ತಾ ನಮ್ಮ ಅಪಿಮಾನ್ಯ
ಮುತ್ತನ್ನ ಜಲಜಲನೆ ಉದರೂಸ್ತ | ಅಂದಾಲೇರಿ
ಲಚ್ಚಿಯಾಣಪುರಕೆ ಇಳುದಾನೆ | ನಮ್ಮ ಅಪಿಮಾನ್ಯ
ಮುತ್ತೀನ ಗುಡಾರೊಯ್ದ ಕುಳುತಾನೆ

ಆಶೆಕು ನೀಲುದುಬಾಳೆ ಈಶೆಕೆ ನೀಲುದುಬಾಳೆ
ದೇಸ ಪಾಂಡರು ಬಾಳಿ ನೆಡೀವಿಟ್ಟು | ನೇ ಅಪಿಮಾನ್ಯ
ಮುತ್ತೀನ ಗುಡಾರೊಯ್ದು ಕುಳುತಾನೆ

ನಾರುಂದುನ ಮನಿಯೋರು ದಾದೋರು ನೀರಿಗೆ ಬಂದು
ನೋಡ್ಯಾರಮ್ಮ ಬಳಿಯ ಕಡಿಗಣ್ಣು

ಅಚ್ಚ್ಯುತುನ ಮನಿಯೋರು ತತ್ತೇರು ನೀರಿಗೆ ಬಂದು
ಕಂಡರಮ್ಮ ಬಳಿಯ ಕಡಿಗಣ್ಣು

ಮೈಯೆಲ್ಲ ಕೆಂದೂಳು ಕೈಯಲ್ಲಾನೇ ಕಿರಿಬೆವರು
ಯಾವ ನಾಡರಸಯ್ಯ ದೆಸಿಮಗನೆ

ಯಾವ ನಾಡೀನೋರು ಯಾಕಾಗೀ ಆದೀವಮ್ಮ
ನಾವು ನಾರಂದಾನ ಪುರುದೋರು | ನಾರಂದಾನ
ತಂಗಿ ಕಾಣೆ ನನ್ನ ಹಡುದಮ್ಮ

ದೇಸ ಪಾಂಡರು ಕಸೀಯಾ ಅಸುನಾಗೆನೇ ಹಾಕ್ಯಾನೆ
ಸಿಂಗೂಡಿ ಬಿಲ್ಲು ಕುಡಿ ಉಬ್ಬು | ಬಣಜಿಗುನ
ಅಂದವನ್ನ ನೋಡೆ ಹಿರಿಯಕ್ಕ

ಯತ್ತಮ್ಮ ಅಂಬೋಳು ಮಿತುವಾಗೇ ನೇ ಐದಾಳೆ
ಒಪ್ಪೀದ ವಗುತನಕೆ ಕೊಡುತಳಲ್ಲೆ

ತಾಯಮ್ಮ ಅಂಬೋಳು ಮೂಲುವಾಗೇ ನೇ ಐದಾಳೆ
ವಾರಿಗುಳ್ಳ ವಗುತನಕೆ ಕೊಡುಳಲ್ಲೆ | ನೇ ಸುಪ್ಪಕ್ಕ
ಮಾದೆವಮ್ಮಗೆ ತಕ್ಕ ಬಾಳಿಯವ್ವ

ನಾರುಂದುನ ಮನಿಯೋರು ದಾದೋರು ನೇ ಇರುತಂದೆ
ಸಾಮ ಸಾಲೇಗೆ ತಂದು ಇಳಿವ್ಯಾರೆ | ಅವರ್ರಿ‍ಗ್ಹೇಳ್ಯಾರೆ
ಮಾದೆವಮ್ಮುಗೆ ತಕ್ಕ ಬಾಳೀಯವ್ವೆ

ಉಪ್ಪುರಿಗೆ ಮನಿಯಾಗೆ ಒಪ್ಪಾಕೊವಲೀಯಾ ಕೊರದು
ಉತ್ತುತ್ತಿ ಶಕ್ಕೆ ದಳಲೊಡ್ಡಿ | ಕಾದಾ ನೀರು
ಪುತ್ರ ಮಾದೇವಮ್ಮಗೆ ಎರಿರಮ್ಮ

ನಾವೂರಿಗೆ ಮನಿಯಾಗೆ ಮೇವಾಲೀಯಾ ಕೊರದು
ಮಾವೀನ ಶಕ್ಕೆ ದಳಲೊಡ್ಡಿ ಕಾದಾ ನೀರು
ಬಾಲ ಮಾದೇವಮ್ಮಾಗೆ ಎರಿರಮ್ಮ

ಮಿಂದು ಬಂದ ಮಗಳಿಗೆ ತಂದು ಕೊಡಿರೆ ಜವಳೀಯ
ಪೆಂಡಾದಾಗೊಂದು ನಿದೂನಾವ | ಸುಗುನಾಣ್ಯಾವು
ತಂದು ಕೊಡಿರೆ ಮಿಂದ ಮಗಳೀಗೆ

ಯರಕಂಡ ಮಗಳಿಗೆ ತಗತನ್ನೀರೇ ಜವಳೀಯ
ಸರಕೀನಾಗೆ ಒಂದು ನಿದೂನಾವ | ಸುಗುನಾಣ್ಯಾವು
ತಂದು ಕೊಡಿರಿ ಮಿಂದು ಮಗಳೀಗೆ

ದೊಡ್ಡಗಂಗುಳುದಾಗೆ ದೊಡ್ಡಕ್ಕಾನೇ ವಯ್ಯಕಂಡು
ದೊಡ್ಡೋಳು ದೊಡ್ಡಮ್ಮ ಬರಾಬೇಕು

ಸಣ್ಣ ಗುಂಗುಳುದಾಗ ಸಣ್ಣಕ್ಕೇನೇ ವಯ್ಯಕಂಡು
ಸಣ್ಣೋಳು ಸಣ್ಣಮ್ಮ ಬರಾಬೇಕು

ಮುಂದ ಮುಂದೆ ಮಾದೇವಿ ಹಿಂದ್ಹಿಂದೇನೇ ದೊಡ್ಡಮ್ಮ
ಬಂದಾರೆ ಗುಡಾರದರೀಗೀಲಿ

ಶಿಕ್ಕ ಪುರುಸುರು ಕೊಟೆ ಸಕ್ಕಂದಾವೇ ಆಡೂತ
ವೊಕ್ಕಾಳೆ ಗುಡಾರದೊಳೀಯಾಕೆ

ಸಣ್ಣ ಪುರುಸರು ಕೊಟೆ ಸಕ್ಕಂದಾವೇ ಆಡೂತ
ಹೋದಾಳ ಗುಡಾರದೊಳೀಯಾಕೆ

ಆಸೆಕೆ ನೀಲುದು ಬಾಳೆ ಈಸಾಕೆ ನೀಲುದು ಬಾಳೆ
ದೇಸ ಪಾಂಡರು ಬಾಳೆ ನಡೀವಿಟ್ಟ | ನೇ ಅಪಿಮಾನ್ಯ

ಪಾಂಡವುರಿಗೆ ಕರವ ಮುಗುದಾನೆ | ನೇ ಅಪಿಮಾನ್ಯ
ಉರುದಾರೆ ಈ ಬಾಳೆ ಉರಿಯ ಬ್ಯಾಡ

ಹಿಂದಕು ನೀಲದಬಾಳೆ ಮುಂದುಕೆ ನಿಲುದುಬಾಳೆ
ಚಂದ್ರಪಾಂಡರು ಬಾಳೇ ನಡುವೀಟ್ಟು | ನೇ ಅಪಿಮಾನ್ಯ
ಪಾಂಡವರಿಗೆ ಕರವ ಮುಗದಾನೆ

ದೊಡ್ಡಗಂಗುಳುದಾಕೆ ದೊಡ್ಡಕ್ಕೇನೇ ವಯ್ಕಂಡು
ದೊಡ್ಡಮ್ಮ ಸ್ಯಾಸೇವು ಇಡೂಬಾರೆ

ಸಣ್ಣಗಂಗುಳದಾಕೆ ಸಣ್ಣಕ್ಕೇನೆ ವಯ್ಕಂಡು
ಸಣ್ಣಮ್ಮ ಸ್ಯಾಸೇವು ಇಡೂಬಾರೆ

ನಮ್ಮುವಮ್ಮ ಬಂದು ಬಾಳಾನೆ ಹೊತ್ತಾಯಿತು
ನಮ್ಮಮ್ಮನ ವರಿಯಾಕೆ ಕಳುವಪ್ಪ | ಊರಾ ಮುಂದೆ
ನಾರಂದ ಕಂಡಾರೆ ಬಡುದಾನೆ

ಮುಂದ ಮುಂದೆ ಮಾದೇವಿ ಹಿಂದ್ಹಿದೆನೇ ದೊಡ್ಡಮ್ಮ
ಹೋಗುವಾರೆ ತಮ್ಮ ಅರಮನಿಗೆ

ಶಿಕ್ಕ ಪುರುಸರ ಕೊಟೆ ಸಕ್ಕಂದಾವೆ ಆಡೂತ
ಬಂದಾಳೆ ಗೂಡಾರದೊಳಿಯಾಕೆ

ಸಣ್ಣ ಪುರುಸರ ಕೊಟೆ ಜಾನಕ್ಕೀನೆ ಆಡೂತ
ಬಂದಾಳೆ ಗೂಡಾರದೊಳಿಯಾಕೆ

ಕಂಚೀನ ಬುಟ್ಟುಲುದಾಕೆ ಮಿಂಚೆಣ್ಣೇನ ವಯ್ಕಂಡು
ಸುಣ್ಣಾದ ಕಾರುಣೆ ತೆಗೀಯೋಳೆ | ನೇ ಸುಪ್ಪಕ್ಕ
ಕಂಡಳಮ್ಮ ಬಾಳೆ ಕಡಿಗುಣ್ಣು

ರಂಡೆ ಬಳಿಯೆಲ್ಲೇವು ಮುಂಡೇನ ಬಳಿಯೆಲ್ಲೇವು
ಶಂದ್ರಪಾಂಡವರ ಬಳೆ ವಸಬಳೆ | ನೇ ಈ ಬಳೆ
ಗುಂಡೇನೆ ಕಲ್ಲಿಕ್ಕಿ ವಡುಸಾಲೆ | ಆಬಳೆ
ವಡುದಾರೆ ಆ ಬಳೆ ವಡಿಯಾದಿಲ್ಲ

ಪಾಸೆ ಬಳಿಯೆಲ್ಲೇವು ಮೊಸಾನೇ ಬಳಿಯೆಲ್ಲೇವು
ದೇಸನೆ ಪಾಂಡವುರ ವಸುಬಳೆ | ನೇ ಈ ಬಳೆ

ಶಾವೇನೇ ಹುಲ್ಲಿಟ್ಟು ಉರಿಯಾಲಿ | ನೇ ಈ ಬಳೆ
ಉರುದಾರೆ ಈ ಬಳೆ ಉರಿಯಾಬ್ಯಾಡ

ಸಿಡಿಮುಡಿಗುಟ್ಟುತ್ತ ಮುಡಿಯಾನೆ ಅಲ್ಲಾಡುತ್ತಾ
ಯಡವೀದ ಯಬ್ಬೊಟ್ಟೊಂದರೀಯಾದ | ನೇ ಸುಪ್ಪಕ್ಕ
ಹೋದಾಳೇ ಅರವಯ್ಯನರಮನಿಗೆ

ಗಂಧಾದ ಬಾವ್ಯಾಗೆ ಅಂಗೀಯಾನೇ ವಗುವೋನೆ
ಬಾರ ಹಾರುವಯ್ಯ ಮನಿತಂಕ

ಜಾತಾದ ಬಾವ್ಯಾಗೆ ದೊತುರುವಾನೆ ವಗುವೋನೆ
ಬಾರ ಹಾರುವಯ್ಯ ಮನಿತಂಕ

ಮುತ್ತೀನ ಜನಿವಾರ ನೆತ್ತೀಮ್ಯಾಲೇ ವಲುವೂತು
ಮತ್ತೇ ಜನಿವಾರ ಯಳವೂತ | ಹಾರುವಯ್ಯ
ಬಂದಾನೆ ಸುಪ್ಪಕ್ಕನ ಅರಮನಿಗೆ

ಹೊನ್ನೀನ ಜನಿವಾರ ಕೆನ್ನೇಮ್ಯಾಲೇ ವಲುವೂತ
ಇನ್ನಾನೆ ಜನಿವಾರ ಯಳವೂತ | ಹಾರುವಯ್ಯ
ಬಂದಾನೆ ಸುಪ್ಪಕ್ಕನ ಅರಮನಿಗೆ

ಚಪ್ಪೂರ ಆಕ್ಕೈತೆ ಮುತ್ತೀನ ಶಳಿ ಕೊಟ್ಟಾಯ್ತೆ
ಸಪ್ಪುರುದಂಬ ಯಾಕೆ ಅಳುತಾವೆ | ನೇ ಸುಪ್ಪಕ್ಕ
ನಿನಗಂಡೇನೆ ನಾರಂದ ಮುಡುದಾನೆನೇ

ಹಂದಾರ ಹಾಕೈತೆ ಗಂಗೀಯ ಶಳಿ ಕೊಟ್ಟಯ್ತೆ
ಹಂದರಗಂಬ ಯಾಕೆ ಅಳುತಾವೆ | ನೇ ಸುಪ್ಪಕ್ಕ
ಮಗನೇನೆ ಕಾಮಣ್ಣ ಮಡುದಾನೇನೆ

ಏನೋ ಹಾರುವಯ್ಯಾ ಎಂಥ ದ್ವೋನಿ ನುಡಿದಲ್ಲೊ
ಯತ್ತ ನಿನ್ನನ್ಹೊತ್ತೀಗೆ ಕಡಿಗೀಡೊ | ಊರಾಮುಂದೆ
ಅಚ್ಚ್ಯುತ ಕಂಡಾರೆ ಬಡುದಾನ್ಹೋಗ

ಏನು ಹಾರುವಯ್ಯ ವಚ್ಚದಾ ಮಾತು ನುಡಿದಲ್ಲೊ
ತಗಿಯ ನಿನ್ಹೊತ್ತೀಗೆ ಕಡಿಗೀಡೊ | ಊರಾಮುಂದೆ
ನಾರಂದ ಕಂಡಾರೆ ಬಡುದಾನ್ಹೋಗ

ರಂಡೇಯ ಮದುವೀಗೆ ಕಂಡುಗದಾ ಅಕ್ಕಿಮಾಡಿದ್ದೆ
ದಾರಿವೂಟವನ್ನಾ ಉಂಬಾಲಿಲ್ಲ

ಬಂಜೀಯ ಮದುವಿಗೆ ಕಂಡುಗದಾ ಅಕ್ಕಿ ಮಾಡಿದ್ದೆ
ದ್ಯಾವರೂಟವನ್ನಾ ಉಂಬಾಲಿಲ್ಲಾ

ಬಂಜೀಯ ಮದುವಿಗೆ ನಾಗುಳದಾ ಅಕ್ಕಿ ಮಾಡಿದ್ದೆ
ದ್ಯಾವರೂಟವನ್ನಾ ಉಂಬಾಲಿಲ್ಲಾ

ಅತ್ತೇನೇ ತಕ್ಕಂಡು ಹಿತ್ತಲಿಗೇನೆ ಹೊಡುದಾನೆ
ನೆತ್ತಿಗೆನ್ನಾ ಅಂಬು ಸರುದಾನೆ | ನೇ ಅಭಿಮಾನ್ಯ
ಪುತ್ರಾನ ಕೊಟ್ಟೇನು ತಗೀ ಅಂಬು

ಮಾವನ್ನ ತಕ್ಕಂಡು ಬಾಗುಲಿಗೇ ಹೊಡುದಾನೆ
ಬಾಯಿಗನ್ನಅಂಬು ಸರುದಾನೆ | ನೇ ಅಭಿಮಾನ್ಯ
ಬಾಲಾನ ಕೊಟ್ಟೇನು ತಗೀಯಂಬು

ಕಲ್ಲು ಹಾಸಗೆ ಮಾಡಿ ಮುಳ್ಳೇನೆ ತೆಲಿಗಿಂಬುಮಾಡಿ
ಯಲ್ಲಿಯೇರೆ ಅಲ್ಲಿಗೋರಿಗಿದಿರಿ | ಈ ನಿಬ್ಬುಣ
ಯಲ್ಲಿಗೆ ಹೋಗಂತ ಪ್ರಾಯಿಣಾವು

ಅತ್ತೇರ ಮಗುನಂತೆ ಹತ್ತುರುಲೇನೇ ತಾವಂತೆ
ದುಷ್ಟನಂತೆ ಅವನು ಅಭಿಮಾನ್ಯ | ಬರುತಾನಂದು
ಒಬ್ಬನಿಗೆ ನೂರಾಳು ತಡದೀವಿ

ಮಾವಾನ ಮಗುನಂತೆ ಸ್ವಾದುರಿಕೇ ತಾವಂತೆ
ಧೀರನಂತೆ ಅವನು ಅಭಿಮಾನ್ಯಾ | ಬರುತಾನಂದು
ಒಬ್ಬನಿಗೆ ನೂರಾಳು ತಡದೀವಿ

ನಿಂಬೆಯ ವನುದಾಗ ಎಂಬತ್ತು ಸಾವುರ ದಂಡು
ಅದಶಂದುಕು ದಂಡು ಇಳುದಾವು | ಅತ್ತೇರು ಮಗನೆ
ದಿಕ್ಕ ಎಲ್ಲ ಕಾದು ಮನಿಗೆದಿವಿ

ಬಾಳೇಯ ವನುದಾಗ ನಲವತ್ತು ಸಾವುರ ದಂಡು
ಆಯಸ್ರಾಯಕ ದಂಡೆ ಇಳುದಾವೊ | ಮಾವುನು ಮಗನೆ
ನಾಡು ಎಲ್ಲ ಕಾದು ಮನಿಗೆದಿವಿ

ಡಿಮಿಡಿಮಿ ರವಳೆ ಶಂಕ
ಪಾಂಡವರ ಇಂದ್ರ ಮೊಮ್ಮಗನೇ ಬಂದ || ದನಿ ||

ಯತ್ತುವಮ್ಮನ ಸೀರೆ ಗಕ್ಕಾನೆ ಸೀರೆ ಗಕ್ಕಾನೆ ಹರುದಾನೆ
ಕೊಕ್ಕೂಸೆ ಪುಳ್ಳೆ ಮುರುದಾನೆ || ಡಿಮಿಡಿಮಿ ||

ಕೊಕ್ಕೂಸೆ ಪುಳ್ಳೆ ಮುರುದು ಅಂಬುಮಾಡಿ
ಹೋಳು ಬೀಳಾಲವರ ಹೊಡುದಾನೆ || ಡಿಮಿಡಿಮಿ ||

ಹೋಳು ಬೀಳಾಲವರ ಹೊಡುದು ಅಣ್ಣಾಗಳಿರಾ
ಹೇಳಿಕಳ್ಳಿರಿ ನಿಮ್ಮ ವಡಿಯಾಗೆ || ಡಿಮಿಡಿಮಿ ||

ತಾಯಿಯಮ್ಮುನ ಸೀರೆ ಜಾಗುರುಸಿ ಹರುದಾನೆ
ಕಾಮೂಸಿ ಪುಳ್ಳೆ ಮುರುದಾನೆ || ಡಿಮಿಡಿಮಿ ||

ಕಾಮೂಸಿ ಪುಳ್ಳೆ ಮುರುದು ಅಂಬುಮಾಡಿ
ಹೋಳು ಬೀಳಾಲವರ ಹೊಡುದಾನೆ || ಡಿಮಿಡಿಮಿ ||

ಹೋಳು ಬೀಳಾಲವರ ಹೊಡುದು ಅಣ್ಣಾಗಳಿರ
ಹೇಳಿಕೋಳ್ಳಿರಿ ನಿಮ್ಮ ವಡಿಯಾಗೆ || ಡಿಮಿಡಿಮಿ ||

ಮದಿವಿಯಾದೇನಮ್ಮ ಮಾತು ಗೆದ್ದೇನಮ್ಮ
ಸುಪ್ಪಕ ಕೊಟ್ಟಾಳೆ ಹಿಡಶಾಪ || ಡಿಮಿಡಿಮಿ ||

ಮದಿವಿಯಾದೇನಮ್ಮ ಮಾತುನೇ ಗೆದ್ದೇನಮ್ಮ
ಸುಪ್ಪಕ ಹರಿಕೆ ಕೊಡುತಾಳೆ || ಡಿಮಿಡಿಮಿ ||

ಕಾಳೇ ಹಿಡುದಾರೆ ಕಂಚಿನ ಡೇರೇ ವಯ್ದಾರೆ || ದನಿ ||

ಆರೇನೇ ತಿಂಗಾಳು ಹುಟ್ಟೀದಂದೀಲ್ಲಿಗೆ
ಹದಿನಾರು ವರುಸಾಕೆ ಮಡುದ್ಹೋಗೋ ಅಭಿಮಾನ್ಯ
ಮಾವನ ಮಗಳಂದು ಪಡದಲ್ಲೊ | ಅಭಮಾನ್ಯ
ಸುಪ್ಪಕ್ಕ ಮಾಡ್ಯಾಳ ಹಿಡಿಶಾಪ || ಕಾಳೆ ಹಿಡುದಾರೆ ||

ಹುಲ್ಲುಮಾರಲ್ಹೇಳೀರಿ ಉಣಸೆ ಕಾಯಿ ಮಾರೋರು
ದೊಳ್ಹೊಟ್ಟೆರ‍್ಹೇಳೀರಿ ದೊಂಬುರು ಪಾತುರುದೋರು
ಹದಿನೆಂಟು ಸಾವುರುದ ಶನಿಬಾಲರ‍್ಹೇಳಿರಿ
ಅಣ್ಣಾ ಡೊಂಕಣ್ಣಾನ ಮದೀವೀಗೆ || ಕಾಳೆ ಹಿಡುದಾರೆ ||

ಸೋಬಾನ ಹೇಳೋರು ಸಾಲ ಮುತ್ತೈದೇರು
ಬಾಲಾರು ಸ್ರಯಿವಾಗಿ ಮದುವಿಗೆ | ಬರದಿದ್ದಾರೆ
ನಲವತ್ತೆ ಅನ್ನೆಪುರಾದ || ಕಾಳೆ ಹಿಡುದಾರೆ ||

ಉಪ್ಪುರಿಗೆ ಅರುಮಾನೆ ಸುತ್ತಾನೇ ಬೀಗಾನ್ಹಾಕಿ
ಅತ್ತೀಗೆ ಮಕ್ಕುಳನಾ ವಡಾಗೊಂಡು | ಕಾವುಳೇರಾಯ
ನಿಲ್ಲುದುಲೆ ನಿಬ್ಬುಣವ ಹೊರುಟಾನೆ

ವಾವುರಿಗೆ ಅರಮಾನೆ ಸಾಲಾನೇ ಬೀಗಾನ್ಹಾಕಿ
ನಾದೂನಿ ಮಕ್ಕುಳುನ ವಡಗೊಂಡು | ಕಾವುಳೇರಾಯ
ತಾಳುದುಲೆ ನಿಬ್ಬುಣವ ಹೊರುಟಾನೆ

ನಿಲ್ಲಯ್ಯಾ ನಿಲ್ಲಯ್ಯಾ ನಿಲ್ಲಯ್ಯಾ ಅರುಜುಣರಾಯ
ನಿಲ್ಲುದುಲೆ ಬಾಣುಗಳು ಸಾಮೂರಾಂತ | ಕಾವುಳೇರಾಯ
ನಿಲ್ಲುದುಲೆ ನಿಬ್ಬುಣವ ಹೊರುಟಾನೆ

ತಾಳಯ್ಯಾ ತಾಳಯ್ಯಾ ತಾಳಯ್ಯಾ ಅರುಜುಣರಾಯ
ತಾಳೇನೆ ಬಾಣುಗಗಳು ಸಾಮೂರಾಂತ | ಕಾವುಳೇರಾಯ
ನಿಲ್ಲುದುಲೆ ನಿಬ್ಬುಣವ ಹೊರುಟಾನೆ
ಕಟ್ಟೆಗಂಗಮ್ಮಾಗೆ ಪನಿವಾರಾನೇ ಮಾಡಿಸಿದೆ | ಪಾಂಡವರು
ಬಾಲೆ ಬಂದು ನಮಗೆ ವಲುದಾಳೆ

ಸೆಜ್ಜೆ ವಲುದಾಗಿರುವ ಡೊಳ್ಹೊಟ್ಟೆ ಭರಮಪ್ಪ
ನಾಗುವುಳದುದ ಕಡಲೆ ಪಾನಿವಾರ | ನೇ ಪಾಂಡವರು
ಕೂಸು ಬಂದು ನಮಿಗೆ ವಲುದಾಳೆ

ಕತ್ತುಲಿಗೆ ಅಂಜಿ ಕರಿಯ ಮಾಡಾಕಂಜಿ
ಹುಲಿಗಂಜಿ ಹುಲಿಯ ಮರಿಗಂಜಿ | ನೇ ಅಪಿಮಾನ್ಯ
ನಿನಗಂಜಿ ಕೈಯಾ ಮುಗುದೇವು

ದೊಡ್ಡ ದೊಡ್ಡಾ ಹಾಡು ದೊಡ್ಡ ಭರಣಿಗೆ ತುಂಬಿ
ದೊಡ್ಡಾನೆ ಮುದ್ದುರಿಕ ಬೀಗುದೊತ್ತಿ | ನೇ ದಿಳ್ಳೀಯ
ದೊಡ್ಡೊವ್ನಿಗೊಪ್ಪಿಸುವೆ ಪದನೂರು

ಸಣ್ಣಸಣ್ಣ ಹಾಡೇ ಸಣ್ಣಾನೆ ಭರಣಿಗೆ ತುಂಬಿ
ಸಣ್ಣಾನೆ ಮುದ್ದುರಿಕ ಬೀಗುದೋತ್ತಿ | ನೇ ದಿಳ್ಳೀಯ
ಅಣ್ಣಾಗೆ ಒಪ್ಪಿಸುವೆ ಪದನೂರು

ಹಚ್ಚೆಹೊಯಿಸಿದಮ್ಮ ಹಾಡು ಕಲಸೀದಮ್ಮ
ಹಸುಮಕ್ಕಳಿಗ್ಹಾಲು ಯಾರುದಮ್ಮಾ | ನೇ ಬರುತಾಳೆ
ಕುಸುಲಾದ ಶೆತ್ತುರಿಕೆ ನೆರುಳಾಗೆ

ಸಣ್ಣರಾಯರಮನಿಗೆ ಉಂಬಾಕೆ ನಾನ್ಹೋದೆ
ಅವರ‍್ಹೊಂದಿದನ್ನ ಭೂಮಿ ಬೆಳಿಯಾಲೆ | ನೇ ಮೈತ್ರಿ
ರಂಬಿಯಿಟ್ಟ ವಾಲೇ ತಿರುನಾಳ

ಬಡರಾಯರ ಮನಿಗೆ ಉಟಾಕೆ ನಾನ್ಹೋದೆ
ನಾಟಿದ ಭೂಮಿ ಬೆಳಿಯಾಲಿ | ಮೈತ್ರಿ
ಕಾಂತೆ ಇಟ್ಟಾ ವಾಲೇ ತಿರುನಾಳ

ಸಂದು ಮುಗಿಯದ ಕಿನ್ನ ತಂದಿಟ್ಟಾಳೆ ಭಂಡಾರ
ಗೊಂಡವಂತೇರು ಮಗುಳಾಕಿ | ನೇ ದಾಕ್ಷಾಯಣೀಯಮ್ಮ
ಭಂಡಾರು ಹೆಚ್ಚೇವು ಘನುವಾಗಿ

ಹಾಡುಮುಗಿಯದ ಕಿನ್ನ ತೋರಿಟ್ಟಾಳೆ ಭಂಡಾರ
ಗೊಮಡವಂತೇರು ಮಗುಳಾಕಿ | ನೇ ದಾಕ್ಷಾಯಣೀಯಮ್ಮ
ಬಾಲಾರು ಹೆಚ್ಚೇವು ಘನುವಾಗಿ

ಮಜ್ಜೀಗೆ ಮಾಡುತ ಮಗುನ ಮುದ್ದಾಡುತ
ಹೆಜ್ಜಿ ಹೆಜ್ಜಿಗೆ ಪದುವ ಕಲುಸೋಳೆ | ಸೀರಿಯಮ್ಮಾನ
ಬುದ್ದಿಯಿರಲಿ ನಮ್ಮ ಮನುದಾಗೆ

ಹಾಲುಗಳು ಕಾಸೂತ ಬಾಲನ ಮುದ್ದಾಡುತಾ
ಬರದ ಪದವ ಕಲಿಸೋಳೆ | ಈರಮ್ಮನ
ಗ್ಯಾನವಿರಲಿ ನಮ್ಮ ಮನುದಾಗೆ

ಅಪ್ಪುಗಳ ಕಾಣಾಸಿ ಬಟ್ಟೀಲಿ ತೋರೇನು
ಕುಟ್ಟೇನು ಡಂಗುರುವ ವಯಿಸೇನು | ಓಬೇನ್ಹಳ್ಳಿ
ಕಾಣಾಸಿ ಗವುಡಾರ ಮಗುಳಂದು

ಮಾವುಗಳ ಕಾಣಾಸಿ ತೋಳಿಲೇ ತೋರೇನು
ಸಾರೇನು ದಂಡುರುನ ವಯಿಸೇನು | ತಾಳಾವ್ಹಟ್ಟಿ
ಕಾಣಾಸಿ ಗವುಡಾರ ಸೋಸಿಯಂದು

ಅತ್ತೇಮಾವುನ ಮುಂದೆ ಹತ್ತರ ಬಳಗದು ಮುಂದೆ
ಅಪ್ಪಾನೆ ಈರಣ್ಣನ ಗುಡಿಮುಂದೆ | ನೇ ಬಾಗುಲು ಮುಂದೆ
ಸೋಸಿಯಾಗಿ ಪದವ ಮುಗಿಸೇವು

ತಾಯಿತಂದೆ ಮುಂದೆ ದೂರಲ ಬಳಗುದು ಮುಂದೆ
ಸ್ಮಾಮೀನೆ ಸಿತ್ತಯ್ಯನ ಗುಡಿಮೆಂದೆ | ನೇ ಬಾಗುಲುಮುಂದೆ
ಮಗುಳಾಗಿ ಪದವ ಮುಗಸೇವು

ಹೇಳಿದೊರು ನಮ್ಮಿಬ್ಬುರಿಗೆ ಹಾಲೂನೆ ಬಾನಾಸಾಕು
ಜೋಡಿಲಾಡಿದರಿಗೆ ಅರುಳೆಲೆ | ಹಸ್ತಕಡುಗ
ಅಲ್ಲಿಂದ ದರುಮಣ್ಣ ಕಳುವ್ಯಾನೆ

ಹಾಡಿದ ನಮ್ಮಿಬ್ಬರಿಗೆ ತುಪ್ಪಾನೆ ಬಾನಾಸಾಕು
ಜೋತ್ತಿಲಾಡಿದರಿಗೆ ಅರುಳೆಲೆ | ಹಸ್ತಕಡುಗ
ಅಲ್ಲಿಂದ ಸೀತಣ್ಣ ಕಳುವ್ಯಾನೆ

ಜಯಾ ಜಯಾ ನಮಃ ಪಾರ್ವತಿ ಪತಿ ಹರಹರಾ ಮಹದೇವ

* * *