ಗಂಧ ಚೆಲ್ಲುತ್ತ ಬಂದಾಳ
ಗಂಧ ಚೆಲ್ಲುತ್ತ ಬಂದಾಳಾಕಿ ನಮ್ಮ ಕೇರಿಗೆ
ಭಂಢಾರಾಡುತ ಬಂದಾಳ ||ದನಿ||

ಹೊತ್ತೇ ಹೋಗದ ನಾವು ಸತ್ಯವ್ವನ ನೆನದೆವೆ
ಅತ್ತೆ ಗಾವುದಲೆ ಇರುಳೇ || ಗಂಧ ||

ಹಟ್ಟಿಯ ಗೌಡರ ಕೊಟ್ಟಿದೊಂದಿಳ್ಯವ
ಬಟ್ಟನ್ನು ಕಲ್ಲ ಬರಬೇಕು | ಗೌರಸಂದ್ರ
ಸತ್ಯವ್ವನ ಮಠವ ನಿಲ್ಲಬೇಕೊ || ಗಂಧ ||

ಹಳ್ಳಿಯ ಗೌಡರ ಕೊಳ್ಳಿರೊಂದಿಳ್ಳೆವು
ತೆಳ್ಳನ ಕಲ್ಲ ಬರಬೇಕು | ಗೌರಸಂದ್ರ
ತಾಯವ್ವನ ಮಠವ ನಿಲ್ಲಬೇಕೊ || ಗಂಧ ||

ಅಕ್ಕನೆ ಮಾರಮ್ಮ ಸತ್ಯವಂತಾದಾರೆ
ಹುತ್ತದ ಮಣ್ಣು ತರುಸ್ಯಾಳೆ | ಕುರಿಹಟ್ಟಿ
ಶೆಟ್ಟರ ಜಗ ದರಿಬಾಳೆ || ಗಂಧ ||

ತಾಯೀನೆ ಮಾರಮ್ಮಾ ಜ್ಞಾನವಂತಾದಾರೆ
ಬಾವಿಯ ನೀರು ತರುಸ್ಯಾಳೆ | ಕುರಿಹಟ್ಟಿ
ರಾಯರ ಜಗ ದರಿಬಾಳೆ || ಗಂಧ ||

ಹುತ್ತದ ಕ್ವಾಮ್ಯಾಗ ಹುಟ್ಟ್ಯಾಳಕ್ಕ ಮಾರಿ
ಹುಟ್ಟಿದೇಳ ದಿನಕ ಶಿವಪೂಜೆ | ಬೊಮ್ಮೈಲಿಂಗ
ಬಿತ್ತಿಬಂದ ಬಿಳಿಯ ಕನಗಲು || ಗಂಧ ||

ಹಾವಿನ ಕ್ವಾಮ್ಯಾಗ ಮೂಡ್ಯಾಳ ತಾಯಿ ಮಾರಿ
ಮೂಡಿದೇಳ ದಿನಕ ಶಿವಪೂಜೆ | ಬೊಮ್ಮೈಲಿಂಗ
ಛಲ್ಲಿ ಬಂದ ಸಾದ ಕನಗಲು || ಗಂಧ ||

ಮಟ್ಟ ಮಧ್ಯಾನ್ಹದಾಗ ಹುಟ್ಟಿತ್ತು ಬೇವಿನ ಮರ
ಹುಟ್ಟುತ್ತಲೆ ಕಾಯಿ ಜಗವುತಲೆ | ಮಾರಕ್ಕ
ಹುಟ್ಟ್ಯಾಳ ಬೇವಿನ ಮರದಾಗ || ಗಂಧ ||

ಮಾರ ಮಧ್ಯಾನ್ಹದಾಗ ಮೂಡಿತು ಬೇವಿನ ಮರ
ಮೂಡತ್ತಲೆ ಕಾಯಿ ಜಗವುತಲೆ | ಮಾರಕ್ಕ
ಮೂಡ್ಯಾಳ ಬೇವಿನ ಮರದಾಗ || ಗಂಧ ||

13_85_KK-KUH

ಅಕ್ಕ ಮಾರಮ್ಮ ಬಂದು ಹಟ್ಟಿ ಮುಂದೈದಾಳೆ
ಕೊಟ್ಟೇನು ಬಾರಮ್ಮ ನಿನಗಿಂಬು | ಈರಣ್ಣ
ನೆಟ್ಟನ ಬಾಳೆ ನೆಡುವಾಕೆ || ಗಂಧ ||

ತಾಯಿ ಮಾರಮ್ಮ ಬಂದು ಊರ ಮುಂದೈದಾಳೆ
ತೋರೆನು ಬಾರಮ್ಮ ನಿನಗಿಂಬು | ನಿಂಗಣ್ಣ
ನ್ಯಾರನ್ನ ಬಾಳೆ ನಡುವಾಕೆ || ಗಂಧ ||

ಗಂಜಿ ಸೀರೆ ಮ್ಯಾಲೆ ಕಂದನೆತ್ತಿಕೊಂಡು
ಸಂದು ಸಂದೆಲ್ಲ ತಿರುಗೊಳೆ | ಮಾರಕ್ಕ
ಮಾಯ ಮಾನ್ಯರಿಗೆ ತಿಳಿಯವು || ಗಂಧ ||

ಮಾಸಿದ ಸೀರೆ ಮ್ಯಾಲೆ ಕೂಸುನೆತ್ತಿಕೊಂಡು
ದೇಶ ದೇಶೆಲ್ಲ ತಿರಿಗೊಳೆ | ಮಾರಕ್ಕ
ಹಟ್ಟಿ ಗೊಲ್ಲರಿಗೆ ಅರಿಯಾದೆ || ಗಂಧ ||

ಅಕ್ಕ ಮಾರಮ್ಮನ ಸೀರೆ ಒಗಿಯೆಂದರೆ
ನೀರಿಲ್ಲವಂದ ಮಡಿವಾಳ | ಗೌರಸಂದ್ರ
ಏರಿಹಿಂದೈದಾವೆ ಕೆರೆ ಬಾವಿ || ಗಂಧ ||

ಕೆರೆಬಾವಿ ಉಂಟು ಕೆಳಗೆ ತ್ಯಾಟ ಉಂಟು
ಹಣ್ಣುಂಟು ಹಲಸಿನ ಮರವುಂಟು | ಮಾರಮ್ಮನ
ಮಾರಿಮ್ಯಾಲುಂಟು ಗಜನಿಂಬೆ || ಗಂಧ ||

ಹಟ್ಟಿಗೌಡರನ್ನ ಮತ್ತೇನ ಬೇಡ್ಯಾಳೆ
ಬೆಟ್ಟಿಗುಂಗುರ ಕೈಬಳೆ | ಬಲಗೈಬಂದಿ
ಹಟ್ಟಿಗೌಡರನ ತರಹೇಳು || ಗಂಧ ||

ಊರಗೌಡರ‍್ನ ಏನಬೇಡ್ಯಾಳೆ ಮಾರಕ್ಕ
ಕಾಲಿಗುಂಗರ ಕೈಬಳೆ | ಬಲಗೈಬಂದಿ
ಊರಗೌಡರನ್ನ ತರಹೇಳು || ಗಂಧ ||

ಅಕ್ಕ ಮಾರಮ್ಮ ಇಕ್ಕಿದುಂಬೊಳಲ್ಲ
ಅಚ್ಚಗೆಂಬತ್ತಿ ಕೆನೆಮೊಸರು | ಉಂಡೆನಂದು
ಹಟ್ಟಿಗೊಲ್ಲರಿಗೆ ಒಲದಾಳೆ || ಗಂಧ ||

ತಾಯಿ ಮಾರಮ್ಮ ಆಗಿದುಂಬೋಳಲ್ಲ
ಹಾಲಗೆಂಬತ್ತಿ ಕೆನೆಮೊಸರು | ಉಂಡೆನಂದು
ನಾಡ ಗೌಡರಿಗೆ ಒಲದಾಳೆ || ಗಂಧ ||

ಅಕ್ಕ ಹುಟ್ಟಲುವಾಗ ಮತ್ತೇನು ಗುರುತಾದೆ
ಹಟ್ಟಿಗೌಡರ ಮನಿಯಾಗ | ಮಾಯಣ್ಣನ
ಮುತ್ತೀನ ಕರಬಾನ ನಡಗ್ಯಾವೆ || ಗಂಧ ||

ತಾಯಿ ಹುಟ್ಟಲುವಾಗ ಮ್ಯಾಲೇನು ಗುರುತಾದೆ
ರಾಯಗೌಡರ ಮನಿಯಾಗ | ಮಾಯಣ್ಣನ
ಹೂವೀನ ಕರಬಾನ ನಡಗ್ಯಾವೆ || ಗಂಧ ||

ಬಾಗಲ ಕಡದಣ್ಣಗ ಬಾಳೆಹಣ್ಣು ಕೊಡಿರಿ
ಮ್ಯಾಲೆ ಜೋಳಿಗೆ ಹೊನ್ನ ಕೊಡಿರಿ | ಮಾರಕ್ಕನ
ಬಾಗಾಲ ಕಡಿದ ಬಡಿಗೀಗೆ || ಗಂಧ ||

ಉತ್ರಾಸ ಕಡದಣ್ಣಗ ಉತ್ತತಿಹಣ್ಣು ಕೊಡಿರಿ
ಮತ್ತೇ ಜೋಳಿಗೆ ಹೊನ್ನ ಕೊಡಿರಿ | ಮಾರಕ್ಕನ
ಉತ್ರಾಸ ಕಡಿದ ಬಡಿಗೀಗೆ || ಗಂಧ ||

ಕಂಬ ಕಡದಣ್ಣಗ ನಿಂಬೆ ಹಣ್ಣು ಕೊಡಿರಿ
ತುಂಬ ಜೋಳಿಗೆ ಹೊನ್ನ ಕೊಡಿರಿ | ಮಾರಕ್ಕನ
ಕಂಬವ ಕಡಿದ ಬಡಿಗೀಗೆ || ಗಂಧ ||

ಮುತ್ತು ತುಂಬಿರುವುದು ಅಕ್ಕನ ಗುಡಿಕಾಣೆ
ಚಿಕ್ಕ ಗೌರಸಂದ್ರಕ್ಕ ಎದುರಾಗಿ | ಇರುವುದು
ಅಕ್ಕ ಮಾರಕ್ಕನ ಗುಡಿಕಾಣೆ || ಗಂಧ ||

ಹೊನ್ನ ತುಂಬಿರುವುದು ತಾಯಮ್ಮನ ಗುಡಿಕಾಣೆ
ರಾಯ ಗೌರಸಂದ್ರಕ್ಕ ಎದುರಾಗಿ | ಇರುವುದು
ತಾಯಿ ಮಾರಮ್ಮನ ಗುಡಿಕಾಣೆ || ಗಂಧ ||

ಸುತ್ತುಲು ಒಕ್ಕಲು ಕಲ್ತು ಬಟ್ಟಲ್ಹೊನ್ನು ಕಲ್ಸಿ
ಪಟ್ಟಣವೆಲ್ಲ ವಳದಿರ್ಗಿ | ತಂದಾರೆ
ಅಕ್ಕ ನೀನುಡುವ ಉಡಿಗೆಯ || ಗಂಧ ||

ಸಾವಿರೊಕ್ಕಲು ಕಲ್ತು ಸ್ಯಾರೆ ಹೊನ್ನು ಕಲ್ಸಿ
ಸಿರೇವುನೆಲ್ಲ ವಳದಿರ್ಗಿ | ತಂದಾರೆ
ತಾಯಿ ನೀನುಡುವ ಉಡಿಗೆಯ || ಗಂಧ ||

ಹತ್ತು ಕೋಳಿ ನಿನ್ಗೆ ಅಚ್ಚಿನ ಬೆಲ್ಲ ನಿನ್ಗೆ
ಸುತ್ತಲೋಕದಾ ಕುರಿಕ್ವಾಣ | ಉಂಬಂತ
ಸತ್ಯವ್ವ ನೀ ಬಂದ ತೆರವೇನೆ || ಗಂಧ ||

ಅರು ಕೋಳಿ ನಿನ್ಗೆ ಸೂರೆ ಬೆಲ್ಲ ನಿನ್ಗೆ
ದೇವ ಲೋಕದ ಕುರಿಕ್ವಾಣ | ಉಂಬಂತ
ತಾಯಿ ನೀ ಬಂದ ತೆರವೇನೆ || ಗಂಧ ||

ವಡಗಾಯಿ ವಡದಾರ ಪುಡಿಗಾಯಿ ಆದಾವು
ಮದಗದ ಕೋಡಿ ಹರದಾವು | ಗೌರಸಂದ್ರ
ಸತ್ಯಮ್ಮ ಕುಂಡ್ರುವ ಬೈಲಾಗ || ಗಂಧ ||

ಹೆಗ್ಗಾಯಿ ವಡದಾರ ನುಗ್ಗಾಯಿ ಆದಾವು
ಮಜ್ಜಣದ ಕೋಡಿ ಹರದಾವು | ಗೌರಸಂದ್ರ
ಭದ್ರೆ ಕುಂಡ್ರುವ ಬೈಲಾಗ || ಗಂಧ ||

ಶುಕ್ರವಾರ ದಿವ್ಸ ಹೊಸ್ತೂಲ ಸಾರಿಸಿ
ಬೊಟ್ಟಿನ ಭರಣಿ ಬಲಗೈಲಿ | ಗೌರಸಂದ್ರ
ಅಕ್ಕ ಜೋಗಾಡಲು ಹೊರಟಾಳೆ || ಗಂಧ ||

ಮಂಗಳವಾರ ದಿವ್ಸ ಅಂಗೂಳ ಸಾರಿಸಿ
ಭಂಡಾರದ ಭರಣಿ ಬಲಗೈಲಿ | ಗೌರಸಂದ್ರ
ತಾಯಿ ಜೋಗಾಡಲು ಹೊರಟಾಳೆ || ಗಂಧ ||

ಮಟ್ಟ ಮಧ್ಯಾನ್ಹದಾಗ ಸೊಪ್ಪಿನ ಕೊನೆಮ್ಯಾಲೆ
ಹತ್ತಿ ನೋಡಾಳೆ ಗೌಡನ | ಕ್ಯಾತಣ್ಣನ
ಗಕ್ನ ಧೂಳಮರಿ  ತರಹೇಳ || ಗಂಧ ||

ಮಾರ ಮಧ್ಯಾನ್ಹದಾಗ ಬೇವಿನ ಕೊನೆಮ್ಯಾಲೆ
ಏರಿ ನೋಡ್ಯಾಳೆ ಗೌಡನ | ಕ್ಯಾತಣ್ಣನ
ಬೇಗ್ನ ಧೂಳಮರಿ ತರಹೇಳ || ಗಂಧ ||

14_85_KK-KUH

ಹಿಂಡಿನಾಗೆ ಮಾರಮ್ಮ ಚೆಂಡನಾಡುತ್ತ ಬಂದಳು
ಗಂಡುಮರಿಯ ಬಿಡೊ ಹಿರಿಯಣ್ಣ | ಮಾರಕ್ಕ
ಹಿಂಡಿಗಾಚ್ಚೇವು ಕೊಡತಾಳೆ || ಗಂಧ ||

ಆವಿನಾಗೆ ಮಾರಮ್ಮ ದಾಯನಾಡುತ್ತ ಬಂದಳು
ಹೊಸಿಳು ಬಿಡೊ ಹಿರಿಯಣ್ಣ | ಮಾರಕ್ಕ
ಆವಿಗಚ್ಚೇವು ಕೊಡತಾಳೆ || ಗಂಧ ||

ಅಕ್ಕನೇ ಮಾರಮ್ಮ ಮುತ್ತು ಮಡಲ ಕಟ್ಟಿ
ಬಿತ್ತಲ್ಹೋಗ್ಯಾಳೆ ತೊರಿಸಾಲು | ಕಟ್ಟೆಯಲಿ
ಮಕ್ಕಳ ಮ್ಯಾಲೆ ಸುರಿವ್ಯಾಳೆ || ಗಂಧ ||

ತಾಯಿನೇ ಮಾರಕ್ಕ ಜ್ವಾಳ ಮಡಲ ಕಟ್ಟಿ
ಛೆಲ್ಲುತ್ಹೋಗ್ಯಾಳೆ ತೊರಿಸಾಲು | ಮಾರಮ್ಮ
ಬಾಲಾರ ಮ್ಯಾಲೆ ಸುರಿವ್ಯಾಳೆ || ಗಂಧ ||

ಅಕ್ಕ ನೀನಿರುವುದು ಗೊತ್ತ್ಯಾವದ್ಹೇಳಮ್ಮ
ಉತ್ತುತ್ತಿ ಬೆಳೆವ ನಡುಗಡ್ಡೆ | ಗೌರಸಂದ್ರ
ಅಕ್ಕ ನೀನಿರುವ ನೆಲೆಹೇಳೆ || ಗಂಧ ||

ತಾಯಿ  ನೀನಿರುವುದು ತಾವ್ಯಾವುದ್ಹೇಳಮ್ಮ
ಯಾಲಕ್ಕಿ ಬೆಳೆವ ನಡುಗಡ್ಡೆ | ಗೌರಸಂದ್ರ
ತಾಯಿ ನೀನಿರುವ ನೆಲೆಹೇಳೆ || ಗಂಧ ||

ಉತ್ತಮರ ಮನಿಮುಂದೆ ಉತ್ತತ್ತಿ ಮರನೆಟ್ಟಿ
ಕೆತ್ತಿದರೆ ನಾಕು ಸಾವುಗಾಲಿ | ಬಡಿಗೇರಣ್ಣ
ಕೆತ್ತುತಲೆ ಮುತ್ತು ರಚಿಸ್ಯಾನೆ || ಗಂಧ ||

ಬಡಿಗೇರ ಮನಿಮುಂದೆ ಬೆಡಿಗಿನ ಬೇವಿನ ಮರ
ಕಡದಾರ ನಾಕು ಸಾವುಗಾಲಿ | ಬಡಿಗೇರಣ್ಣ
ಮಾಡುತ್ತಲೆ ಮುತ್ತು ರಚಿಸ್ಯಾನೆ || ಗಂಧ ||

ಅಕ್ಕನೆ ಮಾರಮ್ಮ ಸೊಪ್ಪಿನ ಕೊನಿಯ ಮ್ಯಾಲೆ
ಹತ್ತಿ ನೋಡ್ಯಾಳೆ ಗೌಡನ | ಗೌಡ ಈರಣ್ಣನ
ಅಕ್ಕಿ ಹೊಂಬಾಳೆ ಬರಲೆಂದು || ಗಂಧ ||

ತಾಯಿನೆ ಮಾರಮ್ಮ ಬೇವಿನ ಕೊನಿಯ ಮ್ಯಾಲೆ
ಏರಿ ನೋಡ್ಯಾಳೆ ಗೌಡನ | ಗೌಡ ಈರಣ್ಣನ
ಕಾಯಿ ಹೊಂಬಾಳೆ ಬರಲೆಂದು || ಗಂಧ ||

ಬುಡ್ಡೆಕಲ್ಲಿನ ಮ್ಯಾಲೆ ಎಡ್ಡಾಗಿ ಕುಂತಾಳೆ
ಗುಡ್ಡಕ್ಕ ಮಾರಿ ತಿರುವ್ಯಾವ್ಳೆ | ಮಾರಮ್ಮ
ಬುದ್ದಿಮಾನ್ಯಾರಿಗೆ ತಿಳಿಯಾವು || ಗಂಧ ||

ಹಾಸಗಲ್ಲಿನ ಮ್ಯಾಲೆ ಲೇಸಾಗಿ ಕುಂತಾಳೆ
ದೇಶಕ್ಕ ಮಾರಿ ತಿರುವ್ಯಾವ್ಳೆ | ಮಾರಮ್ಮ
ಮೋಸ ಒಬ್ಬರಿಗೆ ತಿಳಿಯದು || ಗಂಧ ||

ಎಳ್ಳುಕಾಳೋಟು ಶೆಲ್ಯುಟ್ಟೈದಾಳೆ
ಛೆಲ್ಯಾಡಿ ನೆರಿಗೆ ಹೊಯಿದಾಳೆ | ಗೌರಸಂದ್ರ
ಹಳ್ಳಕ್ಹಾಕ್ಯಾಳ ಕೊನಿಮುಸುಕು || ಗಂಧ ||

ಸ್ಯಾಸಿವೆ ಕಾಳೋಟು ರೇಶಿಮೆ ಉಟ್ಟೈದಾಳೆ
ಏಸೊಂದು ನೆರಿಗೆ ಹೊಯಿದಾಳೆ | ಗೌರಸಂದ್ರ
ಕ್ವಾಟಿಗ್ಹಾಕ್ಯಾಳ ಕೊನಿಮುಸುಕು || ಗಂಧ ||

ಉದ್ದೀನಕಾಳೀನೋಟು ಭದ್ರೆ ಉಟ್ಟೈದಾಳೆ
ಅಡ್ಡಾಡಿ ನೆರಿಗೆ ಹೊಯಿದಾಳೆ | ಗೌರಸಂದ್ರ
ಗುಡ್ಡಕ್ಹಾಕ್ಯಾಳೆ ಕೊನೆಮುಸುಕು || ಗಂಧ ||

ಗಂಜಿ ಸೀರೆ ಉಡುಸಣ್ಣ ಗಂಧದ ಬಟ್ಟಿಡಿರಣ್ಣ
ಮುಂದೀಟು ಸೆರಗು ಇಳಿಬಿಡು | ಬಂಜಿಗೆರಿ
ಬಂದೀಯ ತೋಳು ಕಡೆಗಿರಲೆ || ಗಂಧ ||

ಸಾಲ್ಯಾದ ಸೀರೆಯುಡುಸಣ್ಣ ಸಾದಿನ ಬಟ್ಟಿಡಿರಣ್ಣ
ಮ್ಯಾಲೀಟು ಸೆರಗು ಇಳಿಬಿಡು | ಬಂಜಿಗೆರಿ
ವಾಲೀಯ ಕಿವಿಯ ಕಡೆಗಿರಲೆ || ಗಂಧ ||

ಮಂಗಳವಾರ ದಿನ ಚಂದ್ರ ಮೂಡ್ಹೊತ್ತಿಗೆ
ಕೆಂಡ ಬಿದ್ದಾವೆ ಮುಗಲಿಗೆ | ಗೌರಸಂದ್ರ
ಕೆಂಗಣ್ಣಿನ ಗರತಿ ದಯವಿರಲಿ || ಗಂಧ ||

ಶುಕ್ರವಾರ ದಿನ ಚುಕ್ಕೆ ಮೂಡ್ಹೊತ್ತಿಗೆ
ಚಿತ್ತ ಬಿದ್ದಾವೆ ಮುಗಲಿಗೆ | ಮಾರಮ್ಮ
ಕೆಟ್ಟಗಣ್ಣೀನ ಗರತಿ ದಯವಿರಲಿ || ಗಂಧ ||

ಅಕ್ಕನ ಮಾರಿನ ಹೊಕ್ಕು ನೋಡನು ಬಾರೆ
ಕಪ್ಪೆ ಇಟ್ಟಾಳೆ ರವೆರವೆ | ಚಂದ್ರಗಾವಿ
ಕುಪ್ಪಸ ತೊಟ್ಟಾಳೆ ಭುಜತುಂಬ || ಗಂಧ ||

ತಾಯೀನೆ ಮಾರಿನ ಹೋಗಿ ನೋಡುನು ಬಾರೆ
ವಾಲಿ ಇಟ್ಟಾಳೆ ಕಿವಿ ತುಂಬಾ | ಚಂದ್ರಗಾವಿ
ಸೀರೆ ಉಟ್ಟಾಳೆ ನಡುತುಂಬಾ || ಗಂಧ ||

ಹಿಟ್ಟೀನಾರುತೇರು ಸೊಪ್ಪೀನ ಉಡುಗೇರು
ಸತ್ಯಮ್ಮ ನಿನ್ನ ಅರಿಕೇರು | ಬಂದೈದೀವಿ
ಗಕ್ಕನೆ ಕದವ ತೆಗಿಯಮ್ಮ || ಗಂಧ||

ಬಾಯಿ ಬೀಗಾದೋರು ಬೇವಿನ ಉಡುಗೇರು
ತಾಯಮ್ಮ ನಿನ್ನ ಅರಿಕೇರು | ಬಂದೈದೀವಿ
ಬ್ಯಾಗಾನೆ ಕದವ ತೆಗಿಯಮ್ಮ || ಗಂಧ ||

ಒಪ್ಪತೀನೊಂದತ್ತು ಚುಚ್ಚೀದ ಬಾಯೀಬೀಗ
ನುಚ್ಚುಗಲ್ಲಾಗ ಬರಲಾರೆ | ಸತ್ಯಮ್ಮ
ಒಪ್ಪಸ್ಯಗೊ ನಿನ್ನ ಮನದರಿಕೆ || ಗಂಧ ||

ಒಪ್ಪೀಸಗೊಂಬಾಕ ಎತ್ತಲ್ಲ ಎಮ್ಮೈಲ್ಲ
ಸುತ್ತೀ ಬಾನನ್ನ ಗುಡಿಯ | ಬಾಗುಲಮುಂದೆ
ಒಪ್ಪಸೊ ಮಗನ ಜಡೆನೂರು || ಗಂಧ ||

ಅಕ್ಕಕ್ಕ ಮಾತುನಾಡೆ
ಚಿಕ್ಕ ಗೌರಸಂದ್ರ ಹೆಚ್ಚಿನ ಮಾನ್ಯದ ಗರತಿ
ಮತ್ತೊಂದು ಮಾತುನಾಡೆ || ದನಿ ||

ಅರಿಕೆ ಹನ್ನೇರಡೋರುಸ ಬರ್ತಿವಿ ಮಾರಮ್ಮ
ಸರಪೋಣಿ ಗಂಟೆ ಸವುಮ್ಯಾಳೆ | ನಂದಿಕೋಲು
ಕುಣಿಸೂತ ನಿನ ಮಾಲೆ ತರುತೀವಿ || ಗಂಧ ||

ಮಾಲೆಯ ತಂದೈದಿವಿ ಮಾತನಾಡೆ ಮಾರಕ್ಕ
ಕಾಯಿ ತಂದೈದಿವಿ ವಡಕೋಡೆ | ಗುಡಿಯ ಮುಂದೆ
ಬಾಲನ ತಂದೈದಿವಿ ಹೆಸರಿಡೆ || ಅಕ್ಕಕ್ಕ ||

ಗಾಡಿಯ ಹೂಡಣ್ಣ ಮ್ಯಾಲೆತ್ತು ಬಿಗಿರಣ್ಣ
ಗಾಡೀಗೆ ಭಂಡಾರ ಇಡಿರಣ್ಣ | ಗೌರಸಂದ್ರ
ಗಾಡಿ ಹೋಗುತಾವೆ ವನಗಳಿಗೆ || ಅಕ್ಕಕ್ಕ ||

ಇತ್ತ ಸಾರಂದಾರೆ ಅತ್ತ್ಯಾಕೆ ಸಾರಿದುನೆ
ಎತ್ತ ಸಾರಿದನೆ ತಳವಾರ | ಗೌಡುರ ಮನಿಯ
ಹೂವಿನಾರುತಿ ಬರಲಂದ || ಅಕ್ಕಕ್ಕ ||

ಅಲ್ಲಿ ಸಾರಂದಾರೆ ಇಲ್ಲ್ಯಾಕೆ ಸಾರಿದುನೆ
ಎತ್ತ ಸಾರಿದನೆ ತಳವಾರ | ಗೌಡರ ಮನಿಯ
ಮುತ್ತಿನಾರುತಿ ಬರಲಂದ || ಅಕ್ಕಕ್ಕ ||

ಅಕ್ಕ  ನಿನ್ನ ಪರಿಸೆ ಮಟ್ಟ ಮಧ್ಯಾನ್ಹದಾಗ
ಹೊತ್ಹೋದರಿಲ್ಲೆ ಇರಬೇಡ | ಗೌರಸಂದ್ರ
ದುರಿತೇರು ಹುಟ್ಟ ಸುಲಿಗೆಯ ಸುಲಿದಾರು || ಅಕ್ಕಕ್ಕ ||

ತಾಯಿ ನಿನ್ನ ಪರಿಸೆ ಮಾರ ಮಧ್ಯಾನ್ಹದಾಗ
ತಾವೊದರಿಲ್ಲೆ ಇರಬೇಡ | ಗೌರಸಂದ್ರ
ತಾಯಿ ನಿನ್ನ ಹುಟ್ಟ ಸುಲಿಗೆಯ ಸುಲದಾರು || ಅಕ್ಕಕ್ಕ ||

ಹತ್ತುಕೋಳಿ ನಿನ್ಗೆ ಅಚ್ಚಿನ ಬೆಲ್ಲ ನಿನ್ಗೆ
ಆರು ಕೋಳಿ ನಿನಗೆ ಸೂರು ಬೆಲ್ಲ ನಿನಗೆ
ದಾವಣ ಕುರಿಕೋಣ ನಿನಗಮ್ಮ | ಗೌರಸಂದ್ರದ
ಗ್ರಾಮದಾಗಿರುವ ಗರತೀಗೆ || ಅಕ್ಕಕ್ಕ ||

ಸುತ್ತಲ ಕುರಿಕ್ವಾಣ ನಿನಗೆಮ್ಮ ಗೌರಸಂದ್ರದ
ಪಟ್ಟಣದಾಗಿರುವ ಗರತಿಗೆ || ಅಕ್ಕಕ್ಕ ||

ಪಟ್ಟೇದ ಸೀರೇರು ಕಪ್ಪಿನ ಬಟ್ಟಿನೋರು
ಇಪ್ಪತ್ತನೂರ ಕೊಡದೋರು | ಗೌರಸಂದ್ರ
ಸತ್ತವ್ವಗೆ ಹೊಯ್ದಾರೆ ಹರಿನೀರು || ಅಕ್ಕಕ್ಕ ||

ಸಾಲ್ಲೇದ ಸೀರೇರು ಸಾದಿನ ಬಟ್ಟಿನೋರು
ನಲವತ್ತೆನೂರು ಕೊಡದೋರು | ಗೌರಸಂದ್ರ
ತಾಯವ್ವಗೋಯ್ದಾರೆ ಹರಿನೀರು || ಅಕ್ಕಕ್ಕ ||

ಸತ್ಯವ್ವಂದಾರ ಎತ್ತೀ ಕೈ ಮುಗಿದೇವು
ಕುತ್ತಿಗ್ಗೆ ಬಂದಾಗ ನೆನಿಸೇವು | ಗೌರಸಂದ್ರ
ಸತ್ಯಾಡಿದ ಮಾತು ಹುಸಿಯಿಲ್ಲ || ಅಕ್ಕಕ್ಕ ||

ತಾಯವ್ವಂದಾರ ಹೋಗಿ ಕೈ ಮುಗಿದೇವು
ಪ್ರಾಣಕ ಬಂದಾಗ ನೆನಿಸೇವು |ಗೌರಸಂದ್ರ
ತಾಯಾಡಿದ ಮಾತು ಹುಸಿಯಿಲ್ಲ || ಅಕ್ಕಕ್ಕ ||

ಅಂಗೀಯ ಸಣ್ಣ ಜೋಡಂಗಿಯ ಸಣ್ಣ
ಅಂಗೀಯಮ್ಯಾಲೆ ಜಡಿಯಾಸು | ಗೌರಸಂದ್ರ
ರೆಂಬ್ಹೋಗುತ್ತಾಳೆ ಶರಣನ್ನು || ಅಕ್ಕಕ್ಕ ||

ಹಚ್ಚಾಡ ಸಣ್ಣ ಜೋಡಚ್ಯಾಡ ಸಣ್ಣ
ಹಚ್ಚ್ಯುಡಮ್ಯಾಲೆ ಜಡಿಯಾಸು | ಗೌರಸಂದ್ರ
ತಾಯ್ಹೋಗುತ್ತಾಳೆ ಶರಣನ್ನು || ಅಕ್ಕಕ್ಕ ||

ಹತ್ತೇ ವರುಸದ ತುಪ್ಪುಂಡ ಕ್ವಾಣಾವ
ಹತ್ತುಗಟ್ಟ್ಯಾರೆ ವಣಮರಕೆ | ಕ್ವಾಣಾವ
ನೆತ್ತೀಲಿ ನಣುವ ತಿಗಿಸ್ಯಾರೆ || ಅಕ್ಕಕ್ಕ ||

ನೆತ್ತೀಲಿ ನಣುಪ ತೆಗಿಸಿ ಕಕ್ಕುಡುಮಾಡಿ
ವಪ್ಪದಿಂದುರಿಯೆ ಜಗಜೋತಿ || ಅಕ್ಕಕ್ಕ ||

ಆರೇ ವರುಸಾದ ಹಾಲುಂಡ ಕ್ವಾಣಾವ
ಆರುಗಟ್ಟ್ಯಾರೆ ವಣುಮರಕೆ ಕ್ವಾಣಾವ
ನಾಲೀಗೆ ನಣುವ ತಗಿಸ್ಯಾರೆ || ಅಕ್ಕಕ್ಕ ||

ನಾಲೀಗೆ ನಣುವ ತಗಿಸಿ ಕಕ್ಕುಡುಮಾಡಿ
ಮೋವದಿಂದರಿಯೆ ಜಗಜೋತಿ || ಅಕ್ಕಕ್ಕ ||

ನೀ ಕೇಳೆ ಕರುಣೆ ನೀ ಕೇಳೆ ಕರುಣೆ
ಊರುಗೊಲ್ಲ ರಾಯರ ಕೂಟೋಂದಾನಂದವಾಡಿದಳು || ದನಿ ||

ಬ್ಯಾಟೆ ಆಡಲ್ಹೋಗಿ ದಾಟ್ಯಾಳೆ ಹಳ್ಳವ
ಕೋಟೆಗಾಳಂಗಳ್ಹರಿವ್ಯಾಳೆ | ಮಾರಕ್ಕ
ಬ್ಯಾಟಿ ಆಡುತ್ತಾಳೆ ರಣದಾಗ || ನೀ ||

ಚಂಡು ಆಡಲ್ಹೋಗಿ ಕಂಡಾಳೆ ಹಳ್ಳವ
ಹಿಂಡುಗಳ್ಹಂಗಾಳ್ಹರಿವ್ಯಾಳೆ | ಮಾರಕ್ಕ
ಶೆಂಡಾಡುತ್ತಾಳೆ ರಣದಾಗ || ನೀ ||

ಅಕ್ಕಯ್ಯ ಜಗಬ್ಯಾಟೆ ಮತ್ತೆಲ್ಲಿ ಆಡ್ಯಾಳೆ
ಚಿಕ್ಕ ಶೆಂಡೂರು ಜರುಮಾಲೆ | ಗುಡಿಯ ಕ್ಯಾಟೆ
ಕೂಟೆ ಜೋತ್ತಿಲಾಡ್ಯಾಳೆ ಜಗಬ್ಯಾಟೆ || ನೀ ||

ತಾಯವ್ವ ಜಗಬ್ಯಾಟೆ ಯಾವಲ್ಲಿ ಆಡ್ಯಾಳೆ
ಸಾಲ ಶೆಂಡೂರು ಜರಮಾಲೆ | ಗುಡಿಯ ಕ್ವಾಟೆ
ಕೂಟೆ ಜರುಗಿಲಾಡ್ಯಾಳೆ ಜಗಬ್ಯಾಟೆ || ನೀ ||

ಗಂಡ ಇಲ್ಲದವಳ ಗಂಭೀರ ನೋಡಿರಿ
ಗಂಧದ ಹೊಂಡ ಗುಡಿಮುಂದೆ | ಗೌರಸಂದ್ರ
ಗಂಡಿಲ್ಲದೆ ಪರಿಸೆ ನಡಸ್ಯಾಳೆ || ನೀ ||

ಪುರುಸ ಇಲ್ಲದವಳ ಸರಸಾವ ನೋಡಿರಿ
ಅರಿಷಿಣದ ಹೊಂಡ ಗುಡಿಮುಂದೆ | ಗೌರಸಂದ್ರ
ಪುರುಷರಿಲ್ಲದ ಪರಿಸೆ ನೆರಸ್ಯಾಳೆ || ನೀ ||

ಬಡವರ ಮಕ್ಕಳು ಬಾಗಲಾಗೈದಾರೆ
ಎಡವಿಕೊಂಡ್ಹೋಗು | ಮಾರಮ್ಮ
ನಿನ್ನ ಮಕ್ಕಳು ಎಡವಿಗಲ್ಲಾಗೆ ಬದುಕಲಿ || ನೀ ||

ಜಯಮಂಗಳಂ

ಅಕ್ಕ ಮಾರಕ್ಕ ನಿನ್ನ ಕಪ್ಪೀನ ಕೆಳಗಾಳ
ವಪ್ಪಾವಾದೈದು ಮುತ್ತು ಕೊಡೆ
ಮಕ್ಕಾಳ ಸಂತಾನ ಮ್ಯಾಲೆಸಿರಿ ಬಾಗ್ಯೇವು
ಹೆಚ್ಚೀಗೆ ಕೊಡು ನನ್ನ ಕಂದಾಮ್ಮಗೆ
ಜಯಮಂಗಳಂ ನಿತ್ಯಶುಭಮಂಗಳಂ

ತಾಯಿ ಮಾರಕ್ಕ ನಿನ್ನ ಪಾದಾದ ಮ್ಯಾಗಳ
ಅಯವಾದೈದು ಮುತ್ತು ತಗುದು ಕೊಡೆ
ಬಾಲಾರ ಸಂತಾನ ಮ್ಯಾಲೆ ಸಿರಿ ಬಾಗ್ಯೇವು
ಏಳಿಗೆ ಕೊಡು ನನ್ನ ಕಂದಮ್ಮಗೆ
ಜಯಮಂಗಳಂ ನಿತ್ತಶುಭಮಂಗಳಂ

ಅಕ್ಕ ಗೌರಸಂದ್ರ ಹೋಕ್ಕು ನೋಡನು ಬನ್ನಿ
ಶೆಟ್ಟೇರು ಕಟ್ಟಿಸಿದ ಹೊಸುಪೇಟೆ | ಹೊನ್ನರತಿ
ಹೊಕ್ಕೊಳು ನನ್ನಮ್ಮ ಹೊರುಡಲಿಲ್ಲ
ಜಯಮಂಗಳಂ ನಿತ್ಯಶುಭಮಂಗಳಂ

ರಾಯ ಗೌರುಸಂದ್ರ ಹೋಗಿ ನೋಡುನು ಬನ್ನಿ
ರಾಯರು ಕಲಿಸಿದ ಹೊಸುಪೇಟೆ | ಹೊನ್ನರತಿ
ಹೋದಾಳು ನನ್ನಮ್ಮ ಹೊರುಡಲಲ್ಲ
ಜಯಮಂಗಳಂ ನಿತ್ಯಶುಭಮಂಗಳಂ

* * *