ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ೧೯೯೮-೯೯ನೇ ಸಾಲಿನ ಸಾಂಸ್ಥಿಕ ಯೋಜನೆಯ ಅಂಗವಾಗಿ ‘ಮರಾಠಿ ಕುಣಬಿ ರಾಮಾಯಣ’ ಕಾವ್ಯದ ಸಂಗ್ರಹಣೆ ಹಾಗೂ ಸಂಪಾದನೆಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದೆನು. ಆದರ ಆ ಸಂಗ್ರಹದ ಗಾತ್ರ ಚಿಕ್ಕದೆನಿಸಿದ ಕಾರಣ ಬಯಲು ಸೀಮೆಯ, ‘ಕೃಷ್ಣಗೊಲ್ಲರ ಕಥನಕಾವ್ಯ’ಗಳ ಸಂಪಾದನೆಯನ್ನು ಆರಂಭಿಸಿ ಕೆಲವೇ ದಿನಗಳಲ್ಲಿ ಪೂರೈಸಿ, ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದ್ದೆನು. ಇದು ಪ್ರಕಟಣೆ ಪಟ್ಟಿಯಲ್ಲಿ ಕಣ್ಣುತಪ್ಪಿ ದಾಖಲಾಗದೆ ಇದ್ದಾಗ, ಕುಲಪತಿಗಳು ಸ್ವತಃ ಕಾಳಜಿ ವಹಿಸಿ ಪ್ರಕಟಿಸುವ ವ್ಯವಸ್ಥೆ ಮಾಡಿದ್ದು ಅವರಿಗೆ ಋಣಿಯಾಗಿದ್ದೇನೆ. ವಿಭಾಗದ ಮುಖಸ್ಥರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ ಹಾಗೂ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾಗಿದ್ದ ಡಾ. ಚಂದ್ರಶೇಖರ ಕಂಬಾರ ಅವರುಗಳ ಪ್ರೇರಣೆ, ಸಲಹೆ, ಸಹಕಾರಗಳೇ ನನ್ನಲ್ಲಿ ಕಾವ್ಯಗಳ ಸಂಗ್ರಹಣೆ ಹಾಗೂ ಸಂಪಾದನೆಯ ಅಭಿರುಚಿ ಮೂಡಿಸಿದ್ದವು ಮತ್ತು ಮೂಡಿಸುತ್ತಲಿವೆ. ನನ್ನನ್ನು ಈ ಕಾವ್ಯಗಳ ಹೊಸ ಜಗತ್ತಿಗೆ ಕರೆದೊಯ್ದ ಅವರುಗಳಿಗೆ ಕೃತಜ್ಞನಾಗಿದ್ದೇನೆ.

ಸೂಕ್ತ ಕಲಾವಿದರುಗಳನ್ನು ಪರಿಚಯಿಸಿ ಕಾವ್ಯಗಳನ್ನು ಸಂಗ್ರಹಿಸುವುದರಿಂದ ಹಿಡಿದು ಕಾವ್ಯಗಳು ರೂಪುಗೊಳ್ಳುವ ಹಂತದವರೆಗೂ ನನ್ನೊಂದಿಗೆ ತನುಮನದಿಂದ ಸಹಕಾರವನಿತ್ತ ನನ್ನ ವಿಭಾಗದ ಸಂಶೋಧನ ವಿದ್ಯಾರ್ಥಿ ಮಿತ್ರ ಬ್ಯಾಡರೆಡ್ಡಿ ಹಳ್ಳಿಯ ವಿ.ಸಿ.ಮಾರುತಿಯವರಿಗೆ ಹಾಗೂ ಈ ಕೆಲಸದಲ್ಲಿ ಮನಃಪೂರ್ವಕವಾಗಿ ತಮ್ಮ ಮನೆಯಲ್ಲಿರಿಸಿಕೊಂಡು ಕಾವ್ಯಗಳನ್ನು ಸಂಪಾದಿಸುವಲ್ಲಿ ಸಹಕಾರವಿತ್ತ ಮಾರುತಿಯವರ ತಂದೆ ಶ್ರೀ ಸೀತಾರಾಮರೆಡ್ಡಿ, ತಾಯಿ ಶ್ರೀಮತಿ ತಿಮ್ಮಮ್ಮ, ಅಣ್ಣ ಶ್ರೀ ಮಹೇಶ, ಅತ್ತಿಗೆ ಶ್ರೀಮತಿ ರಾಧಾ, ಚಿಕ್ಕಪ್ಪ ಶ್ರೀರಘುನಾಥರೆಡ್ಡಿ, ದ್ಯಾವಣ್ಣ ಹಾಗೂ ದೇವರೆಡ್ಡಿ ಹಳ್ಳಿಯ ಶ್ರೀರಾಮರೆಡ್ಡಿಯವರುಗಳಿಗೆ ಆಭಾರಿಯಾಗಿದ್ದೇನೆ.

ಕಾವ್ಯಗಳನ್ನು ಹಾಡಿದ ಕೃಷ್ಣಗೊಲ್ಲರ ಖ್ಯಾತ ಕಲಾವಿದೆಯರಾದ ಚಳ್ಳಿಕೆರೆ ತಾಲೂಕಿನ ಬಂಜಿಗೆರೆಯ ಶ್ರೀಮತಿ ಭೂಮನೋರ ಗೌರಮ್ಮ, ಶ್ರೀಮತಿ ಉಳ್ಳಿ ಬಡಮ್ಮ ಶ್ರೀಮತಿ ಅಜ್ಜಿಮಜ್ಜಿಯೋರ ಗೌರಮ್ಮ, ಶ್ರೀಮತಿ ಕುರಿಯಜ್ಜಿಯೋರ ಸಣ್ಣ ಈರಮ್ಮ; ಕಸ್ತೂರ ತಿಮ್ಮನ್ಹಳ್ಳಿಯ ಶ್ರೀಮತಿ ದೊಡ್ಡ ಈರಮ್ಮ ಇವರುಗಳು ಬಲು ಪ್ರೀತಿಯಿಂದ ಕೃಷ್ಣಗೊಲ್ಲರ ಸಾಂಸ್ಕೃತಿಕ ನಾಯಕ-ನಾಯಕಿಯರಾದ ಈರಣ್ಣ, ನಿಂಗಣ್ಣ, ಚಿತ್ತಯ್ಯ, ಬೊಮ್ಮಲಿಂಗ, ತಿಮ್ಮಪ್ಪ ಗೌರಸಂದ್ರ ಮಾರಮ್ಮ ಅವರ ಕಾವ್ಯಗಳೊಂದಿಗೆ ಅಭಿಮನ್ಯುವಿನ ಕಾವ್ಯ ಹಾಗೂ ಮದುವೆ ಪದಗಳನ್ನು ಹಾಡಿ ಅವುಗಳನ್ನು ಕಾವ್ಯ ರೂಪಕ್ಕಿಳಿಯುವುದರವರೆಗೆ ಸಹಕಾರ ನೀಡಿದವರು. ತಾಳಿಕೆರಿ ಗ್ರಾಮದ ಕೃಷ್ಣಗೊಲ್ಲರ ಶ್ರೀಕ್ಯಾತಪ್ಪ ತಮ್ಮಪ್ಪ ಸ್ವಾಮನೋರ ಮತ್ತು ಗಣೆ ನುಡಿಸುವ ಶ್ರೀ ಸಣ್ಣ ಈರಣ್ಣ ಬಡಪ್ಪ ಮಾರನೋರ ಅವರುಗಳು ಎತ್ತಯ್ಯನ ಕಾವ್ಯ ಹಾಡಿ ಕಾವ್ಯ ರೂಪಕ್ಕಿಳಿಯುವುದರವರೆಗೆ ಸಹಕಾರ ನೀಡಿದವರು. ಈ ಎಲ್ಲ ಕಲಾವಿದರ ತನುಮನದ ಸಹಕಾರಕ್ಕೆ ಪ್ರೀತಿಯಿಂದ ನೆನೆಯುವೆ. ಕಾವ್ಯ ಸಂಪಾದನೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ಸಲಹೆಗಳು ನೀಡಿದ ಬೆಳೆಗೆರೆ ಕೃಷ್ಣಶಾಸ್ತ್ರಿ, ಗೊಲ್ರಹಟ್ಟಿ ಸಿರಿಯಜ್ಜಿ ಬಂಜಿಗೆರೆಯ ಹುಚ್ಚಪ್ಪ ಮಾಸ್ತರ, ಪೂಜಾರಿ ಈರಣ್ಣ, ಅಜ್ಜಿಮಜ್ಜಿಗೋಳ ದಾಸಣ್ಣ, ಕುರಿಯಜ್ಜಿಯೋರ ಸಣ್ಣ ಈರಣ್ಣ, ಉಳ್ಳಿ ಬಡಮ್ಮನೋರ ಕ್ಯಾತಣ್ಣ ಅವರುಗಳಿಗೂ.

ಬುಡಕಟ್ಟು ಅಧ್ಯಯನ ವಿಭಾಗದ ಪ್ರವಾಚಕರಾದ ಡಾ.ಕೇಶವನ್ ಪ್ರಸಾದ್.ಕೆ ಅಧ್ಯಾಪಕರುಗಳಾದ ಚಲುವರಾಜು, ಗಂಗಾಧರ ದೈವಜ್ಞ, ಎ.ಎಸ್‌.ಪ್ರಭಾಕರ ಹಾಗೂ ಸಹೋದ್ಯೋಗಿಗಳಾದ ಜಿ.ಶಿವಕುಮಾರ, ಕೆ.ಗಣೇಶ, ಹನುಮಂತರಾಯ, ಮಾರಪ್ಪ, ನಿಂಗಪ್ಪ ಮತ್ತು ಸಂಶೋಧನಾ ವಿದ್ಯಾರ್ಥಿ ಮಿತ್ರರಾದ ನಿಂಗಪ್ಪ ಮುದೇನೂರು, ನಾಗಭೂಷಣ ಪಾಟೀಲ, ಸುಧೀರ ಡಿ. ಪುಲೆ, ಸುಚಿತಾನಂದ ಕೆ. ಮಲ್ಯಾಪುರೆ, ಜುಬೇರ ಚೆನ್ನಮಲ್ಲಪ್ಪ, ಬಂಡಯ್ಯ ಸ್ವಾಮಿ ಮತ್ತು ಶ್ರೀಮತಿ ಹೇಮಲತಾ ಡಿ.ಮಾಧಗೊಂಡ ಅವರುಗಳಿಗೆ

ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎ.ವಿ.ನಾವಡ, ಕುಲಸಚಿವರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಹಾಗೂ ಡೀನರುಗಳಾದ ಡಾ. ಕೆ.ವಿ.ನಾರಾಯಣ, ಪ್ರೊ. ಲಕ್ಷ್ಮಣ್ ತೆಲಗಾವಿ, ಪ್ರೊ. ಹನುಮಣ್ಣ ನಾಯಕ ದೊರೆಯವರುಗಳಿಗೆ ; ಕಾವ್ಯವನ್ನು ಅಕ್ಷರ ಸಂಯೋಜನೆಗೊಳಿಸಿದ ಹೊಸಪೇಟೆಯ ವಿ.ಆರ್. ಕಂಪ್ಯೂಟರ್ಸ್‌ನ ರಾಘವೇಂದ್ರ ಭಟ್ಟ, ಕುಮಾರಿ ಸುಮಿತ್ರ ಅವರಿಗೆ, ಪುಸ್ತಕದ ಪುಟವಿನ್ಯಾಸಕ್ಕೆ ನೆರವಾದ ಸುಜ್ಞಾನಮೂರ್ತಿಯವರಿಗೆ, ರೇಖಾಚಿತ್ರ ಮತ್ತು ಮುಖಪುಟ ವಿನ್ಯಾಸ ಮಾಡಿಕೊಟ್ಟ ಕೆ.ಕೆ.ಮಕಾಳಿಯವರಿಗೆ, ಕಾವ್ಯ ಸಂಪಾದನೆಯಲ್ಲಿ ಸಹಕರಿಸಿದ ಎಲ್ಲ ಮಿತ್ರರಿಗೂ ಹಾಗೂ ನನ್ನ ಪತ್ನಿ ಶ್ರೀಮತಿ ದಾಕ್ಷಾಯಣಿಯವರಿಗೆ ಕೃತಜ್ಞತೆಗಳು.

ಡಾ. ಕೆ.ಎಂ.ಮೈತ್ರಿ
ವಿದ್ಯಾರಣ್ಯ