ಆಲಗಿರಿ ಮೇಲಗಿರಿಯೆ
ತಿಮ್ಮಯ್ಯಗೆ ಮ್ಯಾಲೆ ಚಿನ್ನಾದ ಗಿರಿಯೆ || ದನಿ ||

ಅಪ್ಪಾನ ದಿನ ಬಂತು ರೊಕ್ಕಾಯತ್ತನು ಬನ್ನಿ
ಅಪ್ಪ ಮಕ್ಕಳು ಒಂದುಗೂಡಿ | ಮಾತುನಾಡಿ
ಅಪ್ಪಯ್ಯಗ್ಹೋಗಾ ದಿನ ಬಂತು || ಆಲಗಿರಿ ||

ಅಣ್ಣಾನ ದಿನ ಬಂತು ಹೊನ್ನುಯತ್ತನು ಬನ್ನಿ
ಅಣ್ಣತಮ್ಮಗಳೂ ಒಂದುಗೂಡಿ | ಮಾತನಾಡಿ
ಅಣ್ಣಾಯ್ಯಗ್ಹೋಗಾ ದಿನ ಬಂತು || ಆಲಗಿರಿ ||

ಹತ್ತು ಖಂಡುಗ ನೆಲ್ಲು ಕುಟ್ಟಿ ಕ್ಯಾಸರ ಮಾಡಿ
ಹಟ್ಟ್ಯಾಗ ಶಂಕು ಧ್ವನಿ ಮಾಡಿ || ಅಪ್ಪುಗಳು
ಸುತ್ತ ಮೂಡಲಗಿರಿಗೆ ನಡುದಾರೆ || ಆಲಗಿರಿ ||

ಆರು ಖಂಡುಗ ನೆಲ್ಲು ತೂರಿ ಕ್ಯಾಸರ ಮಾಡಿ
ಓಣ್ಯಾಗ ಶಂಕು ಧ್ವನಿ ಮಾಡಿ | ಅಣ್ಣುಗಳು
ರಾಯ ಮೂಡಲಗಿರಿಗೆ ನಡುದಾರೆ || ಆಲಗಿರಿ ||

ಮಾಳೀಗೆ ಮನಿಗಿರುವ ಬಸುವಾಗೆ
ಹೋಗಿ ಕಾಯಿವಡುದು ಕೈ ಮುಗುದು | ಧೂಪನ್ಹಾಕಿ
ಸ್ವಾಮಿ ಕಂಟುಣಿಗೆ ನಡಿ ಬಸುವಾ || ಆಲಗಿರಿ ||

ಕೊಟ್ಟೀಗೆ ಮನಿಯಾಗೆ ಕಟ್ಟಿರುವ ಬಸುವಾಗೆ
ಹೊಕ್ಕು ಕಾಯಿವಡುದು ಕೈ ಮುಗುದು | ಧೂಪನ್ಹಾಕಿ
ಸ್ವಾಮಿ ಕಂಟುಣಿಗೆ ನಡಿ ಬಸುವಾ || ಆಲಗಿರಿ ||

ಕೊಟ್ಟೀಗೆ ಮ್ಯಾಗಾಳ ಬಟ್ಟಲ್ಹೀರೇಕಾಯಿ
ತೊಟ್ಟೆಣ್ಣೆ ಬಿಟ್ಟು ಮೆಣಸಿಟ್ಟು | ತಾಳಾಲು
ಅಪ್ಪಗ್ಹೋಗೊರು ಹಸುದಾರು || ಆಲಗಿರಿ ||

ಮ್ಯಾಳೀಗೆ ಮ್ಯಾಗಾಳ ಬಾಡಲ್ಹೀರೇಕಾಯಿ
ಬೋರೆಣ್ಣೆ ಬಿಟ್ಟು ಮೆಣಸಿಟ್ಟು | ತಾಳಾಲು
ಸ್ವಾಮಿಗ್ಹೋಗೊರು ಹಸುದಾರು || ಆಲಗಿರಿ ||

ತುಪ್ಪದಾಗೆ ಬೆಯಾವು ಇಪ್ಪತ್ತು ಕಜ್ಜಾಯಾ
ಮತ್ತೆರಡು ಮಾಡೆ ಹಡುದಮ್ಮ | ಮೂಡಲಗಿರಿಯ
ಅಪ್ಪಗ್ಹೋಗೋರು ಹಸುದಾರು || ಆಲಗಿರಿ ||

ಯಣ್ಯಾಗೆ ಬೆಯಾವು ಹನ್ನೆರಡು ಕಜ್ಜಾಯ
ಇನ್ನೆರಡು ಮಾಡೆ ಹಡುದಮ್ಮ | ಮೂಡಲುಗಿರಿಯ
ಅಣ್ಣಾಗ್ಹೋಗೋರು ಹಸುದಾರು || ಆಲಗಿರಿ ||

ರೊಟ್ಟಿಗಳು ಆದಾವು ಬುತ್ತಿಗಳು ಆದಾವು
ಯತ್ತೀಗೆ ಸುಬುರ ಬಿಗಿರಣ್ಣ | ಮೂಡಲುಗಿರಿಯ
ಅಪ್ಪಗ್ಹೋಗೋರು ದಿನಾ ಬಂತು  || ಆಲಗಿರಿ ||

ಹೋಳೀಗೆ ಆದಾವು ಹುರಿಗಡಲೆ ಆದಾವು
ಹೋರೀಗೆ ಸಬುರ ಬಿಗಿರಣ್ಣ | ಮೂಡಲುಗಿರಿಯ
ಗೋವಿಂದಗ್ಹೋಗಾ ಬಸುವಾಗೆ || ಆಲಗಿರಿ ||

ಪಟ್ಟದ ಸೀರೆ ಹರ್ದು ಕಟ್ಟಮ್ಮ ಬುತ್ತೀಯ
ಇಪ್ಪತ್ತೆ ದಿನಕೆ ಬಳಸಂತ |ಬುತ್ತೀನ
ಪುತ್ರನ್ಹಸುವೀಗೆ ಮಡಗಮ್ಮ || ಆಲಗಿರಿ ||

ಸಾಲ್ಯೇದ ಸೀರಿ ಹರ್ದು ನೀಡಮ್ಮ ಬುತ್ತೀಯ
ನಲವತ್ತು ದಿನಕೆ ಬಳುಸೋದು | ಬುತ್ತೀಯ
ಬಾಲನ್ಹಸುವೀಗೆ ಮಡಲಮ್ಮ || ಆಲಗಿರಿ ||

ಹಿತ್ತುಲದಾಗೆ ಇರುವೋದು ಹತ್ತೆಲೆ ತುಳುಸೀಯ
ಅಕ್ಕ ನೀರ್ಹೊಯ್ದು ಸಲುವಮ್ಮ | ಗಿರಿಗ್ಹೋಗಿ
ಇಪ್ಪತ್ತೆ ದಿನಕೆ ಬರುತೀನಿ || ಆಲಗಿರಿ ||

ಬಾಗುಲಾಗೆ ಇರುವೋದು ಏಳಲೆ ತುಳಸೀಯ
ತಾಯಿ ನೀರ್ಹೊಯ್ಹು ಸಲುವಮ್ಮ | ಗಿರಿಗ್ಹೋಗಿ
ನಲವತ್ತ ದಿನಕೆ ಬರುತೀನಿ || ಆಲಗಿರಿ ||

ಹಿಂದಾಲ ಕೇರೇರು ರಂಭೆರ‍್ಹೆಣುಮಕ್ಕಾಳು
ಬಂದೀಬಂಗಾರ ಇಡಲೇಳು | ಪೆಟ್ಟಗೆಗಿರುವ
ಪಟ್ಟೇದ ಸೀರೆ ಉಡಲೇಳು | ಭರಣ್ಯಾಗಿರುವ
ಸಾದೀನ ಬೊಟ್ಟು ಇಡಲೇಳು || ಆಲಗಿರಿ ||

ಆಚೇನೆ ಕೇರೇರು ಕಾಂತೇರ‍್ಹೆಣುಮಕ್ಕಾಳು
ವಾಲೇಬಂಗಾರ ಇಡಲೇಳು | ಪೆಟ್ಟಿಗೆಗಿರುವ
ಸ್ಯಾಲೇದ ಸೀರೆ ಉಡಲೇಳು | ಭರಣ್ಯಾಗಿರುವ
ಸಾದೀನ ಬೊಟ್ಟು ಇಡಲೇಳು || ಆಲಗಿರಿ ||

ಅಪ್ಪಾಗೆ ಹೋಗೋರು ಮುಪ್ಪುನ್ನ ಮುದುಕಾರು
ನೆತ್ತೀಮ್ಯಾಲ್ಹಸಿವೆ ಬರಿಗಾಲಿಲಿ | ಬಂದವರಿಗೆ
ಮತ್ತೇನು ಕೊಡುವೆ ಸಿರಿಹರಿಯೆ || ಆಲಗಿರಿ ||

ತುಪ್ಪಾಬಾನ ಕೊಡುವೆ ಹೆಚ್ಚಿದ ಬಾಗ್ಯವು ಕೊಡುವೆ
ಪುತ್ರಾನ ಕೊಡುವೆ ಯಡಬಲುಕೆ || ಆಲಗಿರಿ ||

ಅಣ್ಣಾಗೆ ಹೋಗೋರು ಹಣ್ಣುಣ್ಣು ಮುಕಾರು
ಕೆನ್ನೆಮ್ಯಾಲ್ಹಸಿವೆ ಬರಿಗಾಲಿಲಿ | ಬಂದರಿಗೆ
ಇನ್ನೇನು ಕೊಡುವೆ ಸಿರಿಹರಿಯೆ || ಆಲಗಿರಿ ||

ಹಾಲುಬಾನ ಕೊಡುವೆ ಬೇಡಿದ  ಭಾಗ್ಯವ ಕೊಡುವೆ
ಬಾಲಾನ ಕೊಡುವೆ ಎಡಬಲಕ || ಆಲಗಿರಿ ||

ಮಂದಾಲ ಮನಿಯಾಗ ಚಂಬು ಪೂಜಾದಾವೆ
ನಂದಾ ದೀವೀಗೆ ಬೆಳಕೀಲಿ | ತಿಮ್ಮಯ್ಯ
ಕಂದಮ್ಮಗಿರಿಗೆ ನೆಡುದಾನೆ || ಆಲಗಿರಿ ||

ಒಳಗಾಳ ಮನಿಯಾಗ ಕೀಲು ಪೂಜಾದಾವೆ
ತ್ರಾಣ ದೀವೀಗೆ ಬೆಳಕೀಲಿ | ತಿಮ್ಮಯ್ಯ
ಬಾಲಮ್ಮಾಗಿರಿಗೆ ನೆಡುದಾನೆ || ಆಲಗಿರಿ ||

ಅಪ್ಪಾಗ ಹೋಗೋರು ತುಪ್ಪಕಂಬಿ ಹೊರವಾರು
ಚಿಕ್ಕ ನಾಮಾದ ಒಡಿಯಾಗ | ಹೋಗೋರು
ಮಕ್ಕಳಂಬಾಲ ಮರತಾರೆ || ಆಲಗಿರಿ ||

ಅಣ್ಣಗೆ ಹೋಗೋರು ಹಾಲಕಂಬಿ ಹೊರುವಾರು
ಸಣ್ಣ ನಾಮಾದ ಒಡಿಯಾಗ | ಹೋಗೋರು
ಹೆಂಡರಂಬಾಲ ಮರತಾರೆ || ಆಲಗಿರಿ ||

ಬಿತ್ತಿದ್ಹೊಲವ ಬಿಟ್ಟು ತುಪ್ಪದ್ಹರಿವೆ ಬಿಟ್ಟು
ಅಪ್ಪ ಗತಿಯೆಂದು ನೆಡದಂತ | ಭಕುತರಿಗೆ
ಮತ್ತೇನು ಕೊಡುವೆ ಸಿರಿಹರಿಯೆ || ಆಲಗಿರಿ ||

ತುಪ್ಪಬಾನ ಕೊಡುವೆ ಮತ್ತೇ ಭಾಗ್ಯವು ಕೊಡುವೆ
ಪುತ್ರಾನ ಕೊಡುವೆ ಬಲಗಡಿಗೆ | ನನಗಿರಿಗೆ
ತಪ್ಪುದಲೆ ಬರುವ ಭಕುತರಿಗೆ || ಆಲಗಿರಿ ||

ಹಾಲ್ಹರಿವೆ ಬಿಟ್ಟು ಅರಿಗಿದ್ಹೊಲವ ಬಿಟ್ಟು
ಸ್ವಾಮಿ ಗತಿಯೆಂದು ನೆಡದಂತಹ | ಭಕುತರಿಗೆ
ಮ್ಯಾಲೇನು ಕೊಡುವೆ ಸಿರಿಹರಿಯೆ || ಆಲಗಿರಿ ||

ಹಾಲುಬಾನ ಕೊಡುವೆ ಮ್ಯಾಲೆ ಭಾಗ್ಯವು ಕೊಡುವೆ
ಬಾಲಾನ ಕೊಡುವೆ ಬಲಗಡಿಗೆ | ನನಗಿರಿಗೆ
ಸೋಲುದಲೆ ಬರುವ ಭಕುತರಿಗೆ || ಆಲಗಿರಿ ||

ಅಪ್ಪ ತಿಮ್ಮಯ್ಯಾಗ ನೆಟ್ಟಾನ ನಿಲುವಂಗಿ
ಕೆನ್ನೆ ಬೋರಂಬ ಶಿವಶಂಕು | ದ್ಯಾವರ್ಹಟ್ಟಿ
ಅಪ್ಪ ಮ್ಯಾಲಗಿರಿಗೆ ನಡುದಾನೆ || ಆಲಗಿರಿ ||

ಅಣ್ಣ ತಿಮ್ಮಯ್ಯಾಗ ಸಣ್ಣನ ನಿಲುವಂಗಿ
ಕೆನ್ನೆ ಬೋರಂಬ ಶಿವಶಂಕು | ದ್ಯಾವರ್ಹಟಿ
ಅಪ್ಪ ಮ್ಯಾಲಗಿರಿಗೆ ನಡುದಾನೆ || ಆಲಗಿರಿ ||

ಎತ್ತಿನಾಗಿರುವ ಬಟ್ಟ ಪುಲ್ಹೋರಿಯ
ಒಪ್ಪಕ್ಕ ತಿಮ್ಮಯ್ಯ ಕರ್ದು | ಬೆನ್ನ ಸವುರಿ
ಅಪ್ಪಗೆ ನೀನು ನಡಿಯಂದ || ಆಲಗಿರಿ ||

ಆವಿನಾಗಿರುವ ಗ್ಯಾರಪುಲ್ಹೋರಿಗೆ
ಮೋಹಕ ತಿಮ್ಮಯ್ಯ ಕರ್ದು | ಬೆನ್ನ ಸವುರಿ
ಸ್ವಾಮೀಗೆ ನೀನು ನಡಿಯಂದ || ಆಲಗಿರಿ ||

ಹತ್ತುಲಾರೆ ಗಿರಿಯ ಸುತ್ತುಲಾರೆ ಪವಳಿಯ
ಹತ್ತಿ ಬರುಲಾರೆ ಗಿರಿದೂರ | ದಾಸರ ಮುಡುಪು
ಎತ್ತೀನ ಮ್ಯಾಲೆ ಕಳುವೇನು || ಆಲಗಿರಿ ||

ಹಾರುಲಾರೆ ಗಿರಿಯ ತೋರುಲಾರೆ ಪವಳಿಯ
ಹಾರಿ ಬರುಲಾರೆ ಗಿರಿದೂರ  | ದಾಸರ ಮುಡುಪು
ಹೋರೀಯ ಮ್ಯಾಲೆ ಕಳುವೇನು || ಆಲಗಿರಿ ||

ಮೂಡಾಲ ಸೀಮೀಗೆ ಹೋಗಿಬಾರೋ ಗೋವಿಂದ
ಮೂಡಾಲ ಪರುಸೆ ಕರದೆ ಬಾರೊ || ಆಲಗಿರಿ ||

ಮೂಡಾಲ ಪುರಸ ಕರದೆ ಬರುದಿದ್ದರೆ
ಕಾಳ್ಹೋರಿ ಕಾಲೆ ಮುರ್ದೆ ಬಾರೋ || ಆಲಗಿರಿ ||

ಕಾಳ್ಹೋರಿ ಕಾಲು ಮುರುದೆ ಬರುದಿದ್ದರೆ
ನಾರೀಗಿ ಬಂಧಾನ ತೋರಿ ಬಾರೋ || ಆಲಗಿರಿ ||

ನಾರೀಗಿ ಬಂಧಾನ ತೋರಿದುಂಟಾದರೆ
ಆರಂಭ ದಿನಕ ಹೊರಪಯಣ || ಆಲಗಿರಿ ||

ತೆಂಕಣ ಸೀಮೀಗೆ ಹೋಗಿ ಬಾರೋ ಗೋವಿಂದ
ತೆಂಕಾಲ ಪರುಸೆ ಕರುದೆ ಬಾರೊ || ಆಲಗಿರಿ ||

ತೆಂಕಾಲ ಪರುಸೆ ಕರೆದರು ಬರುದಿದ್ದರೆ
ಸಿಂಚ್ಹೋರಿ ಕಾಲು ಮುರುದೆ ಬಾರೊ || ಆಲಗಿರಿ ||

ಸಿಂಚ್ಹೋರಿ ಕಾಲು ಮುರುದು ಬರುದಿದ್ದರೆ
ಕೆಂಚೀಗಿ ಬಂಧಾನ ತೋರಿ ಬಾರೊ || ಆಲಗಿರಿ ||

ಕೆಂಚೀಗಿ ಬಂಧಾನ ತೋರಿದುಂಟಾದರೆ
ಎಂಟೆಂಬ ದಿನಕ್ಕ ಹೊಡಪಯಣ || ಆಲಗಿರಿ ||

ಅಪ್ಪಾನ ಗಿರಿಮ್ಯಾಲೆ ಮತ್ತೇನು ಬೆಳುದಾವೆ
ಕಪ್ಪೊತ್ತಿದಡಿಕೆ ಬಿಳಿಯಾಲೆ | ಹಂಗುನಗರಿಯ
ಅಪ್ಪಾಗ್ವಾಲಾಲಿ ಬೆಳುದಾವೆ || ಆಲಗಿರಿ ||

ಅಣ್ಣಾನ ಗಿರಿಮ್ಯಾಲೆ ಇನ್ನೇನು ಬೆಳುದಾವೆ
ಅಣ್ಣಚ್ಚಿದಡಿಕೆ ಬಿಳಿಯಾಲೆ | ಹಂಗುನಗರಿಯ
ಅಣ್ಣಾಗ್ವಾಲಾಲಿ ಬೆಳುದಾವೆ || ಆಲಗಿರಿ ||

ಅಪ್ಪೂನ ಗಿರಿಮ್ಯಾಲೆ ತುಪ್ಪಾದ ಜಾರೀಕೆ
ಬಿತ್ತಾರಿ ನೆರಿಗೆ ಬಿಗುದುಡು | ಕೈಯಾಗಿರುವ
ಮುತ್ತೀನ ಕೆಂಜಡಿಯ ಮಗ ಜತುನ || ಆಲಗಿರಿ ||

ಅಣ್ಣಾನ ಗಿರಿಮ್ಯಾಲೆ ಎಣ್ಣೇಯ ಜಾರೀಕೆ
ಬಿನ್ನಾರಿ ನೆರಿಗೆ ಬಿಗುದುಡು | ಕೈಯಗಿರುವ
ಚಿನ್ನೂದ ಕೆಂಜಡಿಯ ಮಗ ಜತುನ || ಆಲಗಿರಿ ||

ಕುಂತಲ್ಲೆ ಗೋವಿಂದ ನಿಂತಲ್ಲೆ ಗೋವಿಂದ
ಕೊಂಕಿದ್ದ ಕಲ್ಲೀಗೆ ಸಿರಿಹರಿಯೆ | ಅಯ್ಯನಪರಿಸೆ
ಕುಂತಾವೆ ಮೂಡ ಮುಕುನಾಗಿ || ಆಲಗಿರಿ ||

ನಡುದಲ್ಲೆ ಗೋವಿಂದ  ನುಡದಲ್ಲೆ ಗೊವೀಂದ
ಎಡವದ ಕಲ್ಲಿಗೆ ಸಿರಿಹರಿಯೆ | ಅಯ್ಯನಪರಿಸೆ
ಕುಂತಾವೆ ಮೂಡ ಮಕುನಾಗಿ || ಆಲಗಿರಿ ||

ದೊಡ್ಡಕ್ಕಿ ಉಂಬೋರು ದೊಡ್ಡಪಾಗು ಸುತ್ತೋರು
ದೊಡ್ಡಾನೆ ನಿಲುವಂಗಿ ತೊಡುವೋರು | ಅಪ್ಪುಗಳು
ದೊಡ್ಡವರು ಹೊರಟಾರೆ ಗಿರಿನೋಡ || ಆಲಗಿರಿ ||

ಸಣ್ಣಕ್ಕಿ ಉಂಬೋರು ಸಣ್ಣಪಾಗು ಸುತ್ತೋರು
ಸಣ್ಣಾನೆ ನಿಲುವಂಗಿ ತೊಡುವೋರು | ಅಣ್ಣುಗಳು
ಮಾನ್ಯವರು ಹೊರಟಾರೆ ಗಿರಿನೋಡ || ಆಲಗಿರಿ ||

ಅಪ್ಪಗ್ಹೊಗಲರ್ತಿ ತುಪ್ಪಬಾನ ಉಣಲರ್ತಿ
ಚಿಕ್ಕ  ಮರುಳಾಗೆ ನಡಲರ್ತಿ | ಮೂಡಲನಾಡ
ಅಪ್ಪಗ್ಹೋಗೊದು ನಮ್ಮಗರ್ತಿ || ಆಲಗಿರಿ ||

ಅಣ್ಣಗ್ಹೋಗಲರ್ತಿ ಎಣ್ಣೆಗಾರು ಉಣಲರ್ತಿ
ಸಣ್ಣ ಮರುಳಾಗೆ ನಡಲರ್ತಿ | ಮೂಡಲನಾಡ
ಅಣ್ಣಾಗ್ಹೋಗೊದು ನಮ್ಮಗರ್ತಿ || ಆಲಗಿರಿ ||

ಅಪ್ಪನ ಗಿರಿಗ್ಹೋಗಿ ತುಪ್ಪದ ಗಿರಿಕಂಡೆ
ಅಪ್ಪನ ತಿಮ್ಮಯ್ಯನ ಗಿರಿಗ್ಹೋಗಿ | ನಾ ಕಂಡೆ
ಕೊಚ್ಚಿಕ್ಕಿ ಮಾರೊ ಮಳಿಗೇಯ || ಆಲಗಿರಿ ||

ಅಣ್ಣನ ಗಿರಿಗ್ಹೋಗಿ ಬಣ್ಣದ ಗಿರಿಕಂಡೆ
ಅಣ್ಣ ತಿಮ್ಮಯ್ಯನ ಗಿರಿಗ್ಹೋಗಿ | ನಾ ಕಂಡೆ
ಸಣ್ಣಕ್ಕಿ  ಮಾರೊ ಮಳಿಗೇಯ || ಆಲಗಿರಿ ||

ಹೊನ್ನಿಗ ಬಡ್ಡಿತಿಂಬ ಅಣ್ಣೆಕರ ತಿಮ್ಮಯ್ಯ
ಸಣ್ಣಕ್ಕಿ ಪಡಿಯ ನಮದಂದ | ಗಿರಿಮ್ಯಾಲೆ
ನೋಡಿ ಉಣ್ಣಂದ ಮಡದೀಯ || ಆಲಗಿರಿ ||

ಕಾಸೀಗ ಬಡ್ಡಿತಿಂಬ ಪಾಸೆಗಾರ ತಿಮ್ಮಯ್ಯ
ಕ್ಯಾಸಕ್ಕಿ ಪಡಿಯ ನಮದಂದ | ಗಿರಿಮ್ಯಾಲೆ
ನೋಡಿ ಉಣ್ಣಂದ ಮಡದೀಯ || ಆಲಗಿರಿ ||

ಬಂದು ಬಂದರನೆಲ್ಲ ಮಂಡೆ ಬೋಳುಮಾಡಿ
ಬಂದ ಗಂಟುಗಳ ಸೆಳಕೊಂಡ | ತಿಮ್ಮಯ್ಯ
ಗದ್ದೂಲ ಬಹಳಂದ ಇಳಿಯಂದ || ಆಲಗಿರಿ ||

ಹೋದ ಹೋದರನೆಲ್ಲ ಮಾರಿ ಬೋಳುಮಾಡಿ
ಹೋದ ಗಂಟುಗಳ ಸೆಳಕೊಂಡ | ತಿಮ್ಮಯ್ಯ
ಹೋವೂಳಿ ಬಹಳಂದ ಇಳಿಯಂದ || ಆಲಗಿರಿ ||

ಸಣ್ಣ ನಾಮುದಯ್ಯ ಸುಣ್ಣ ಕಂಬುತ ಬಂದ
ಸೊನ್ನೆವುಳಕ್ಕ ಒಳಗಿಲ್ಲ | ತಿಮ್ಮಯ್ಯನ
ಚಿನ್ನದ ಶಂಖೀಲಿ ದನಿ ಮಾಡು || ಆಲಗಿರಿ ||

ನೀಲಿ ನಾಮುದಯ್ಯ ಧಾನ್ಯ ಕಂಬುತ ಬಂದ
ಗ್ಯಾಣವುಳಕ್ಕ ಒಳಗಿಲ್ಲ | ತಿಮ್ಮಯ್ಯನ
ಹೊನ್ನುದ ಶಂಖೀಲಿ ದನಿ ಮಾಡು || ಆಲಗಿರಿ ||

ಅಪ್ಪ ತಿಮ್ಮಯ್ಯನ ಇಪ್ಪತ್ತು ಸಾವಿರ ಕುದುರೆ
ಹಿಟ್ಟು ಮಡ್ಡಿ ತಿಂದು ಮದವೇರಿ | ಬರುತಾವೆ
ಹಿಟ್ಟಿನ್ಹೆಡಿಗೊಳೆ ಅರಗಾಗು || ಆಲಗಿರಿ ||

ಅಣ್ಣ ತಿಮ್ಮಯ್ಯನ ಹನ್ನರ್ಡು ಸಾವಿರ ಕುದುರೆ
ಹಣ್ಣು ಮಡ್ಲಿ ತಿಂದು ಮದವೇರಿ | ಬರುತಾವೆ
ಹಣ್ಣಿನ್ಹೆಡಿಗೊರೆ ಅರಗಾಗು || ಆಲಗಿರಿ ||

ಹತ್ತನೇ ವರುಷದ ತುಪ್ಪುಂಡ ಮಂಡೆಯ
ಅಪ್ಪಗ ನಾನು ಕೊಡುಲಾರೆ | ಅಂದಾರೆ
ಸುತ್ತಿ ಬಾ ನನ್ನ ಪವಳಿಯ | ಬಾಗಲ ಮುಂದೆ
ಒಪ್ಪುಸ ನಿನ್ನ ಜಡಿಗಳು || ಆಲಗಿರಿ ||

ಆರನೇ ವರುಷದ ಹಾಲುಂಡ ಮಂಡೇಯ
ಸ್ವಾಮಿಗೆ ನಾನು ಕೊಡಲಾರೆ | ಅಂದಾರೆ
ತಿರುಗಿ ಬಾ ನನ್ನ ಪವಳಿಯ | ಬಾಗಲ ಮುಂದೆ
ಒಪ್ಪುಸ ನಿನ್ನ ಜಡಿಗಳು || ಆಲಗಿರಿ ||

15_85_KK-KUH

ನಿಂಬೆ ಹಣ್ಣು ಕೊಡೊ ತುಂಬ ಭಾಗ್ಯವ ಕೊಡೊ
ಕಂದನ ಕೊಡೊ ನಮಗೊಂದು | ತಿಮ್ಮಯ್ಯ
ಬಾಗುಲಿಗೆ ಮುತ್ತು ಬಿಗಸೇವೊ || ಆಲಗಿರಿ ||

ಪೆಟ್ಟಿಗೆ ಬರುವಾಗ ಪಡಸಾಲ್ಯಾಗಿದ್ದೆ
ಮುತ್ತಿನ ಕಣಸ ಹಿಡದಿದ್ದೆ | ತಿಮ್ಮಯ್ಯ
ಉತ್ತುತಿ ಸೂರೆ ಬಿಡತಿದ್ದೆ || ಆಲಗಿರಿ ||

ದೇವಾರು ಬರುವಾಗ ಸಾಮಸಾಲ್ಯಾಗಿದ್ದೆ
ಹೂವ್ವಿನ ಕಣಸ ಹಿಡಿದಿದ್ದೆ | ತಿಮ್ಮಯ್ಯ
ಯಾಲಕ್ಕಿ ಸೂರೆ ಬಿಡುತಿದ್ದೆ || ಆಲಗಿರಿ ||

ಅಪ್ಪ ತಿಮ್ಮಯ್ಯಗೆ ಒಪ್ಪುವ ಮಗಳು ನಾನು
ಅಕ್ಕಿ ಹೊಂಬಾಳೆ ಕಳುವೇನು | ಗುಡಿಮುಂದೆ
ರೊಕ್ಕ ಸೂರ್ಯಾಡಿ ಬರುವೇನು || ಆಲಗಿರಿ ||

ಅಣ್ಣ ತಿಮ್ಮಯ್ಯಗೆ ಹೆಣ್ಣು ಮಗಳು ನಾನು
ಹಣ್ಣು ಹೊಂಬಾಳೆ ಕಳುವೇನು | ಗುಡಿಮುಂದೆ
ಹೊನ್ನೆ ಸೂರ್ಯಾಡಿ ಬರುವೇನು || ಆಲಗಿರಿ ||

ಅಪ್ಪನ ಮನಿಯ ಸ್ವಾಮಿ ದುಪ್ಪೆ ಬ್ಯಾಟೆಗಾರ
ಪುತ್ರೈದಾಳಂದ ಮನಿತಂಕ | ಬಂದೈಯ್ಯಾಗೆ
ಮುತ್ತೀನಾರುತಿಯ ಬೆಳುಗೇವು || ಆಲಗಿರಿ ||

ತವರು ಮನಿಯ ಸ್ವಾಮಿ ನವಲ ಬ್ಯಾಟೆಗಾರ
ಮಗಳೈದಾಳಂದ ಮನಿತಂಕ | ಬಂದೈಯ್ಯಾಗೆ
ಹೂವ್ವೀನರತಿಯ ಬೆಳಗೇವು || ಆಲಗಿರಿ ||

ರಾಮಾ ಗೋವಿಂದ ಅನ್ನೀರೆ || ದನಿ ||

ದೊಡ್ಡಚ್ಚಿನ ಬೆಲ್ಲಕ್ಕ ಗುಡ್ಡಾಡ್ಯಾರು ದಾಸರು
ದೊಡ್ಡ ಸರಪಣಿ ಹರಕೊಂಡು | ಮೂಡುಲಗಿರಿಯ
ದೊಡ್ಡವ್ನಿಗೆ ಹಾಡ್ಯಾರೆ ಮಣಿಗಳುರನ್ನಾದ || ಆಲಗಿರಿ ||

ಕಡಿಯಚ್ಚಿನ ಬೆಲ್ಲಾಕ ಕಡದಾಡ್ಯಾರು ದಾಸರು
ಜರಿಯ ಸರಪಣಿ ಹರಕೊಂಡು | ಮೂಡಲಗಿರಿಯ
ವಡಿಯಾಗ್ಹಾಡ್ಯಾರೆ ಮಣಿಗಳುರನ್ನಾದ || ರಾಮಾ ||

ದಾಸ ದಾಸಯ್ಯನೆ ದಾಸ ನನ್ನಯ್ಯಾನೆ
ಲೇಸುದಲೆ ಪಾರಿ ತಿರುಗೊ | ಮೇಳಿಕುಂಟೆ
ದಾಸಯ್ಯನ ಮ್ಯಾಲೆ ದಯವಿರಲಿರನ್ನಾದ || ರಾಮಾ ||

ರಂಗ ರಂಗಯ್ಯನೆ ರಂಗ ನನ್ನಯ್ಯಾನೆ
ಅಂಜುದಲೆ ಪಾರಿ ತಿರುಗೊ | ಮೇಳಿಕುಂಟೆ
ರಂಗಯ್ಯನ ಮ್ಯಾಲೆ ದಯವಿರಲಿರನ್ನಾದ || ರಾಮಾ ||

ದಾಸರುಂಡೆಂಜಾಲು ಬಾಸಿ ಬಚ್ಚಿಟ್ಟೇನು
ದಾಸರ ದಾಸ ಹರಿದಾಸರು | ಉಂಡೆಂಜಲು
ರಾಶಿಗ್ಹೊನ್ನಂದು ಮಡಿಗೆರನ್ನಾದ || ರಾಮಾ ||

ರಂಗರುಂಡೆಂಜಾಲು ತುಂಬಿ ಬಚ್ಚಿಟ್ಟೇನು
ರಂಗರ ರಂಗ ಹರಿರಂಗ | ಉಂಡೇಮಜಲು
ಬಿಂದಿಗ್ಹೊನ್ನಂದು ಮಡಿಗೆರನ್ನಾದ || ರಾಮಾ ||

ಹಟ್ಟ್ಯಾಗ ನನ್ನಯ್ಯ ಸಿಟ್ಟುಗೊಳ್ಳದಿರು
ಜೊತ್ತು ಬಾಣಗಳ ನೆಲಬಿರುಸು | ಪಂಚಾರತಿಯ
ಹಚ್ಚುತಲೆ ನನಗೆ ತಡವಾಗಿರನ್ನಾದ || ರಾಮಾ ||

ಓಣ್ಯಾಗ ನನ್ನಯ್ಯ ಗ್ಯಾನಗೊಳ್ಳಲುದಿರು
ಜೋಡ ಬಾಣಗಳ ನೆಲಬಿರುಸು | ಪಂಚಾರತಿಯ
ಜೋಡುಸ್ತಲೆ ನನಗೆ ತಡವಾಗಿರನ್ನಾದ || ರಾಮಾ ||

ಹತ್ತು ಸಾವಿರ ಎಲೆಯ ಒಪ್ಪುದಲೆ ಕೊಯ್ತಂದು
ನಿಸ್ರೇರ ಕೈಗೆ ಕೊಡಿರಣ್ಣ | ತಿಮ್ಮಯ್ಯನ
ಪೆಟ್ಟೀಗೆ ಹೋರುವಣ್ಣಗ ಬಲುದೃಷ್ಠಿರನ್ನಾದ || ರಾಮಾ ||

ಆರು ಸಾವಿರ ಎಲೆಯ ಮೋಹದಲೆ ಕೊಯ್ತಂದು
ನಾರೇರ ಕೈಗೆ ಕೊಡಿರಣ್ಣ | ತಿಮ್ಮಯ್ಯನ
ಪಾಲೀಕೆ ಹೊರುವಣ್ಣಗ ಬಲುದೃಷ್ಠಿರನ್ನಾದ || ರಾಮಾ ||

ಹಟ್ಟ್ಯಾಗ ಹಾಕಿದೆ ನೆಟ್ಟ ಗಾರೆ ಮುಳ್ಳ
ಅಪ್ಪ ತಿಮ್ಮಯ್ನ ಅಲಿಗೀನ | ಭಂಟರು
ನುಚ್ಚನುಚ್ಚೇಳ ತುಳದಾರೆರನ್ನಾದ || ರಾಮಾ ||

ಓಣ್ಯಾಗ ಹಾಕಿದ್ದೆ ನ್ಯಾರೆ ಗಾರೆ ಮುಳ್ಳ
ಸ್ವಾಮಿ ತಿಮ್ಮಯ್ನ ಅಲಗೀನ | ಭಂಟರು
ನೂಲು ನೂಲಾಗಿ ತುಳದಾರೆರನ್ನಾದ || ರಾಮಾ ||

ಹಿಟ್ಟು ಛೆಲ್ಲಿದ್ಹಂಗ ಹಟ್ಟಿ ಮುಂದಕ್ಕ ಬಂದ
ಅಕ್ಕಯ್ಯ ತಾರೆ ರಥನೀರು | ತಿಮ್ಮಯ್ಯನ
ಪೆಟ್ಗಿ ಹೋರುವಣ್ಣಗ ಬಲಿದೃಷ್ಟಿರನ್ನಾದ || ರಾಮಾ ||

ಹೂವ್ವಾ ಛೆಲ್ಲಿದ್ಹಂಗ ಊರ ಮುಂದಕ್ಕ ಬಂದ
ತಾಯಮ್ಮ ತಾರೆ ರಥನೀರು | ತಿಮ್ಮಯ್ಯನ
ಪಾಲ್ಕಿ ಹೊರವಣ್ಣಗ ಬಲದೃಷ್ಟಿರನ್ನಾದ || ರಾಮಾ ||

ಹಟ್ಟ್ಯಾಗ ಆಡ್ಯಾವು ಸೆಟ್ಟು ಬೆಳವಾನ್ಹಿಂಡು
ಅಪ್ಪ ತಿಮ್ಮಯ್ಯನ ಪವುಳ್ಯಾಗ ಆಡಾವು
ಹತ್ತೇ ಸುತ್ತೀನ ಎಳಿನಾಗರನ್ನಾದ || ರಾಮಾ ||

ಓಣ್ಯಾಗ ಆಡ್ಯಾವು ಬೂದು ಬೆಳವಾನ್ಹಿಂಡು
ಸ್ವಾಮಿ ತಿಮ್ಮಯ್ಯನ ಪವುಳ್ಯಾದ ಆಡಾವು
ಆರೇ ಸುತ್ತೀನ ಎಳಿನಾಗರನ್ನಾದ || ರಾಮಾ ||

ಗುಡಿಯ ಸುತ್ತಿಟ್ಟಾರೆ ದಡಿಯ ಧೋತುರದವ್ರು
ಗುಲಗಂಜಿ ತಾಯಿತದ ಮಣಿಯಾರು | ಅಪ್ಪಗಳು
ಗುಡಿ ಸುತ್ತ ಪರಿಸೆ ನೆರಸ್ಯಾರೆರನ್ನಾದ || ರಾಮಾ ||

ತೋಪು ಸುತ್ತಿಟ್ಟಾರೆ ಅಪ್ಪೀನ ಹಚ್ಚಡದವ್ರು
ಏಕಾಂತ ತಾಯಿತದ ಮಣಿಯಾರು | ಅಪ್ಪುಗಳು
ತೋಪು ಸುತ್ತ ಪರಿಸೆ ನೆರಸ್ಯಾರೆರನ್ನಾದ || ರಾಮಾ ||

ಉದುರ‍್ಯಾವೆ ಮಲ್ಲಿಗೆ ಕೆದುರ‍್ಯಾವೆ ಕ್ಯಾದಿಗೆ
ಗರಿ ಎರಡಾದಾವೆ ಕನಗಾಲು | ಶಿವಮ್ಮನ
ಕಂದ ಬಂದು ವನವ ಹೋಗುತಾನೆರನ್ನಾದ || ರಾಮಾ ||

ಹೊಂದ್ಯಾವೆ ಮಲ್ಲಿಗೆ ಕುಂದ್ಯಾವೆ ಕ್ಯಾದಿಗೆ
ಒಂದೆರಡಾದಾವೆ ಕನಗಾಲು | ಶಿವಮ್ಮನ
ಕಂದ ಬಂದು ವನವ ಹೋಗುತಾನೆರನ್ನಾದ || ರಾಮಾ ||

ಮಂಗಳಂ

ಹತ್ತು ಛತ್ತರಿಕೆಯೋರು ಎತ್ತಿಡುವ ಪಂಜಿನೋರು
ಮತ್ತೇ ಬಿಲ್ಲುಬಾಣದಲ್ಲೆ ಹಿಡಿಹೊಂಬಿನವರು
ಕಟ್ಟಿ ಕಟ್ಟಿ ಮನೆಯ ಹೊನ್ನ ಮುಡಪ ಕಟ್ಟಿ
ಉಚ್ಚಾಯ ಬಂದಾವು ತಿರುಪತಿ ತಿಮ್ಮಯ್ಯಗೆ
ಜಯ ಮಂಗಳಂ ನಿತ್ಯ ಶುಭಮಂಗಳಂ

ಆರು ಛತ್ತರಿಕೆಯೋರು ಏರಿಡುವ ಪಂಜಿನೋರು
ಮ್ಯಾಲೆ ಬಿಲ್ಲುಬಾಣದಲ್ಲೆ ಹಿಡಿಹೊಂಬಿನವರು
ತೋರಿ ತೋರಿ ಮನೆಯ ಹೊನ್ನ ಮುಡುಪ ತೋರಿ
ಥೇರು ಬಂದಾವು ತಿರುಪತಿ ತಿಮ್ಮಪ್ಪಗೆ
ಜಯ ಮಂಗಳ ನಿತ್ತ ಶುಭಮಂಗಳಂ

* * *