ಬೆಕ್ಕಿದ್ದ ಸಾಲಿಗೆ ಹೋದಾಳೇ ಕುಂತ್ಯಮ್ಮ
ಬೆಕ್ಕಿಗೆ ಹಾಲು ಯರುದಾಳೆ | ನೀವು ನಿಮ್ಮ
ಪಟ್ಟಾಣ ಬಿಟ್ಟು ಹೊರುಡಾದಿರು || ಕಾಳಿ ||

ಗಿಣಿಯಿದ್ದ ವನುಗಳಿಗೆ ಹೋದಾಳೇ ಕುಂತ್ಯಮ್ಮ
ಗಿಣಿಗುಳಿಗೆ ಹಾಲು ಯರುದಾಳೆ | ನೀವು ನಿಮ್ಮ
ಪಂಜುರುವ ಬಿಟ್ಟು ಹೊರಡಾದಿರು || ಕಾಳಿ ||

ಮುಂದಾಲ ಮನಿಯಾಕೆ ಹೋದಾಳೇ ಕುಂತ್ಯಮ್ಮ
ರಾವುರಂಗಿ ಕೀಲು ಜಡುದಾಳೆ | ನೇ ಕುಂತ್ಯಮ್ಮ
ಪಾಂಡವರಿಗೆ ಕರವ ಮುಗುದಾಳೆ || ಕಾಳಿ ||

ಬಳೆಗಾರರ ಮನಿಯಾಕೆ ಹೋದಾಳೇ ಕುಂತ್ಯಮ್ಮ
ರವುರಂಗಿ ಕೀಲು ಜಡುದಾಳೆ | ನೇ ಕುಂತ್ಯಮ್ಮ
ಸತ್ಯವಂತರಿಗೆ ಕರವ ಮುಗುದಾಳೆ || ಕಾಳಿ ||

 ಎದ್ದುಬಾರೆದ್ದುಬಾರೆ ಯೆನ್ನರಸಿ ಎದ್ದರೆ ಕಾಲೇಳವು || ದನಿ ||

ವುದ್ದೀನ ಹೊಲುದಾಗೆ ಭದ್ರೇಳ ಕುಂದುರಿಸಿ
ಭದ್ರೆಳಿಗೆ ಭಾಷೆ ಕೊಡುತಾರೆ | ಪಾಂಡವರು
ಉದ್ದೊಡದು ನೆಲಕೆ ಸುರುದಾವೆ || ಎದ್ದು ||

ಹೆಸರಿನ ಹೊಲುದಾಗೆ ಹಸಿಯೇಳ ಕುಂದರಿಸಿ
ಹಸಿಯೋಳಿಗೆ ಭಾಷೆ ಕೊಡುತಾರೆ | ಪಾಂಡವರು
ಹೆಸರೋಡದು ನೆಲಕೆ ಸುರುದಾವೆ || ಎದ್ದು ||

ಎಳ್ಳೀನ ಹೊಲುದಾಗೆ ನಲ್ಲೇನ ಕುಂದುರಿಸಿ
ನಲ್ಲೇಳಿಗೆ ಭಾಷೆ ಕೊಡುತಾರೆ | ಪಾಂಡವರು
ಯೆಳ್ಳೊಡದು ನೆಲಕೆ ಸುರುದಾವೆ || ಎದ್ದು ||

ಹತ್ತೀಯ ಹೊಲುದಾಗೆ ನಿಸ್ತ್ರೇಳ್ನ ಕುಂದುರಿಸಿ
ನಿಸ್ತ್ರ‍್ಯೋಳಿಗೆ ಭಾಷೆ ಕೊಡುತಾರೆ | ಪಾಂಡವರು
ಹತ್ತ್ಯೊಡದು ನೆಲಕ ಸುರುದಾರೆ || ಎದ್ದು ||

ವನುವಾಸ ಹೋಲದಲ್ಲಿ ತಗ್ಗುಗಳು ನಾವು ಇಳುದೇವು
ಸಿಬ್ಬಲ್ಹಿಡದು ಸೊಪ್ಪು ತರದೇವು | ನೇ ಸುಬದ್ರಾ
ಅಮ್ಮಾ ಹೋಗೆ ನಿನ್ನಾ ತವರೀಗೆ

ವನುವಾಸ ಹೋಲದಲ್ಲಿ ತಗ್ಗುಗಳು ನಾವು ಇಳುದೇವು
ಸಿಬ್ಬಲ್ಹಿಡದು ಸೊಪ್ಪು ತರದೇನು | ನೇ ಅತ್ತ್ಯಮ್ಮ
ನಾನು ಬರುವೆನು ನಿನ್ನಾ ಬಳಿಗುಂಟಾ

ವನುವಾಸ ಹೋಲದಲ್ಲಿ ತಗ್ಗುಗಳು ನಾವು ನಾವ್ಹತ್ತೇವು
ಮೂಡಾಲೊಡ್ಡಿ ಸೊಪ್ಪು ಕೊಯಿದೇವು | ನೇ ಸುಬದ್ರ
ಅಮ್ಮಾ ಹೋಗೆ ನಿನ್ನಾ ತವರೀಗೆ

ಅಷ್ಟಂಬ ಅಡಿವ್ಯಾಗ ಪುತ್ರನಾ ನೀನು ಪಡುದಾರೆ
ಮೈ ತೊಳುವಾಕೆ ನೀರು ಮೊದಲಿಲ್ಲಾ | ನೇ ಸುಬದ್ರ
ಅಮ್ಮ ಹೋಗೆ ನಿನ್ನ ತವರೀಗೆ

ಅಷ್ಟಂಬ ಅಡಿವ್ಯಾಗೆ ಪುತ್ರನ ನಾನು ಪಡುದಾರೆ
ಅಣ್ಣೇನೆ ದರುಮಣ್ಣ ಐದಾನೆ | ನನ್ನ ಅತ್ತ್ಯಮ್ಮ
ಬಾಲಾನ ಮೈಯಿ ತೊಳದೇನು

ಅಷ್ಟಂಬ ಅಡಿವ್ಯಾಗೆ ಪುತ್ರನ ನಾನು ಪಡುದಾರೆ
ಅಣ್ಣೇನೆ ಭೀಮಣ್ಣಾ ಐದಾನೆ | ನನ್ನ ಅತ್ತ್ಯಮ್ಮ
ನಾನು ಬರುವೆನು ನಿನ್ನ ಬಳಿಗುಂಟಾ

ಅಷ್ಟಂಬ ಅಡಿವ್ಯಾಗ ಪುತ್ರನಾ ನೀನು ಪಡುದಾರೆ
ಅಣ್ಣೇನೆ ಭೀಮಣ್ಣ ಐದಾನೆ | ನನ್ನ ಅತ್ತ್ಯಮ್ಮ
ಅಮ್ಮ ಹೋಗೆ ನಿನ್ನ ತವರೀಗೆ

ಅಷ್ಟಂಬ ಅಡಿವ್ಯಾಗ ಪುತ್ರನಾ ನೀನು ಪಡುದಾರೆ
ಅಣ್ಣೇನೆ ಭೀಮಣ್ಣ ಐದಾನೆ | ನನ್ನ ಅತ್ತ್ಯಮ್ಮ
ಪುತ್ರಾನ ಮೈಯ ತೊಳುದೇನು | ನನ್ನ ಅತ್ತ್ಯಮ್ಮ
ನಾನು ಬರುವೆನು ನಿನ್ನ ಬಳಿಗುಂಟಾ

ಆರನ್ನ ಅಡಿವ್ಯಾಗ ಬಾಲಾನ ನೀನು ಪಡುದಾರೆ
ಮೈ ತೊಳುವಾಕ ನೀರು ಮೊದಲಿಲ್ಲಾ | ನೇ ಸುಬದ್ರ
ಅಮ್ಮ ಹೋಗೆ ನಿನ್ನ ತವರೀಗೆ

ಅಷ್ಟಂಬ ಅಡಿವ್ಯಾಗ ಬಾಲಾನ ನಾನು ಪಡುದಾರೆ
ಅಣ್ಣಾನೆ ಧರುಮಣ್ಣ ಐದಾನೆ | ನನ್ನ ಅತ್ತ್ಯಮ್ಮ
ಅತ್ತಲ ಸಮುದ್ರ ಇತ್ತ ತಿರುವ್ಯಾರು | ನನ್ನ ಅತ್ತ್ಯಮ್ಮ
ಬಾಲುವಾನ ಮೈಯಿ ತೊಳುದಾರು | ನನ್ನಾ ಅತ್ತ್ಯಮ್ಮ
ನಾನು ಬರುವೆನು ನಿನ್ನಾ ಬಳಿಗುಂಟಾ

ವನುವಾಸ ಹೋದಲ್ಲಿ ಬಾಲಾನ ನೀನು ಪಡುದಾರೆ
ಬಾಲಾನ ಬಾಯಿಗೆ ಬೆಲ್ಲ ಮೊದಲಿಲ್ಲ | ನನ್ನ ಸುಬದ್ರ
ಅಮ್ಮ ಹೋಗೆ ನಿನ್ನ ತವರೀಗೆ

ಅಷ್ಟಂಬ ಅಡಿವ್ಯಾಗ ಪುತ್ರನಾ ನಾನು ಪಡುದಾರೆ
ಅತ್ತಿಹಣ್ಣೆ ಪುತ್ರಾನ ಬಾಯಿಗೆ ಬೆಲ್ಲ | ನನ್ನ ಅತ್ತ್ಯಮ್ಮ
ನಾನು ಬರುವೆನು ನಿನ್ನ ಬಳಿಗುಂಟಾ

ವನುವಾಸ ಹೋದಲ್ಲಿ ಬಾಲನ ನೀನು ಪಡುದಾರೆ
ಬಾಲಾಗ ತೊಟ್ಟಾಲು ಮೊದಾಲಿಲ್ಲಾ | ನೇ ಸುಬದ್ರ
ಅಮ್ಮ ಹೋಗೆ ನಿನ್ನಾ ತವರೀಗೆ

ಅತ್ತೀಯನ್ನ ಮರುಕೆ ಪುತ್ರನಾ ತೊಟ್ಟಿಲು ಕಟ್ಟಿ
ಪುತ್ರುವಾನ ತೂಗಿ ಸಲುವೇನು | ನನ್ನ ಅತ್ತ್ಯಮ್ಮ
ನಾನು ಬರುವೆನು ನಿನ್ನಾ ಬಳಿಗುಂಟಾ

ಆರನ್ನ ಅಡಿವ್ಯಾಗ ಪುತ್ರನಾ ನೀನು ಪಡುದಾರೆ
ಬಾಲುನ ಬಾಯಿಗೆ ಹಾಲು ಮೊದಲಿಲ್ಲಾ  | ನೇ ಸುಬದ್ರ
ಅಮ್ಮ ಹೋಗೆ ನಿನ್ನ ತವರೀಗೆ

ಕಂಚುಗಾರರ ಮನಿಯಾಗೆ ಎಂಟೆಮ್ಮೆ ಕರುದಾರೆ
ಅಂಚೆನ್ನ ತರುವೇನೆ ನೊರಿಹಾಲು | ನನ್ನಾ ಅತ್ತ್ಯಮ್ಮ
ಬಾಲುವಾನ ಸಾಕಿ ಸಲುವೇನು | ನನ್ನ ಅತ್ತ್ಯಮ್ಮ
ನಾನು ಬರುವೆನು ನಿನ್ನಾ ಬಳಿಗುಂಟಾ

ಜನಿಗಾರಾರ ಮನಿಯಾಗೆ ಆರೆಮ್ಮೆ ಕರುದಾರೆ
ಬೇಡೆನ್ನ ತರುವೇನು ನೊರಿಹಾಲು | ನನ್ನ ಅತ್ತ್ಯಮ್ಮ
ಬಾಲುವಾನ ಸಾಕಿ ಸಲಿವೇನು | ನನ್ನ ಅತ್ತ್ಯಮ್ಮ
ನಾನು ಬರುವೆನು ನಿನ್ನಾ ಬಳಿಗುಂಟಾ

ಮಾತು ಕೇಳುದ ಮಡದಿ ಯಾತಾಕೋ ಅರುಜುಣುರಾಯ
ಊಸುವಾಗಿ ಬೆಳುದಾ ಉಲಗೂಲಿ | ನೇ ಪದಿಯಾಕ
ನೂಕಂದಾರ ಅರುಜಣನಾ ಮಡದೀಯ

ನೂಕಂದ ಮಾತಿಗೆ ನೂಕ್ಯಾರಮ್ಮ ಅರುಜಣರು
ಮೂಗೂತಿ ಮುರುದು ಬಳೆನಗ್ಗಿ | ಹೊಟ್ಟ್ಯಾಗಿರುವ
ಭೂಪಾದಾನೆ ಅಭಿಮನ್ಯು ನಡಿಗ್ಯಾನೆ

ಕಲ್ಲುಗಳು ವಳಿಸ್ಯಾಳೆ ಮುಳ್ಳುಗಳನ್ನೇ ವಳಿಸ್ಯಾಳೆ
ಮ್ಯಾಲಾಕೆ ಎದ್ದು ಕುಳುತಾಳೆ | ನೇ ಸುಬದ್ರೆಪಡುದಾರೆ
ತೋರ್ಯಾಳೆ ಕೆಂಗಣ್ಣಿಲುದುಕಾವ

ಆತ್ತ್ಯಮ್ಮ ಆತ್ತ್ಯಮ್ಮ ದೂರೆತ್ತಾಲ ಹೋದಿರಿ
ಹೋದಲ್ಲಿ ನಮ್ಮುನ ನೆನದಿರಾ | ನೇ ನಮ್ಮಂಥ
ಸೊಸಿಯಾರು ಬಂದಲ್ಲಿ ಮರೆತೀರಿ

ನಿನ್ನ್ಯಾಕ ಮರತಿವಿ ಕನ್ಯೆ ಕೇಳೆ ನೇ ಸುಬದ್ರ
ಶಿನ್ನದಂಬೆ ನಮ್ಮ ಯದಿಯಾಗ | ಇಟ್ಟುಕಂಡು
ನಾವು ಹನ್ನೆರಡು ವರುಷ ವನುವಾಸ

ಮಾವಯ್ಯ ಮಾವಯ್ಯ ದೂರೆತ್ತಾಲ ಹೋದಿರಿ
ಹೋದಲ್ಲಿ ನಮ್ಮುನ ನೆನದೀರ | ನೇ ನಮ್ಮಂಥ
ಸೊಸಿಯಾರು ಬಂದಲ್ಲಿ ಮರೆತೀರಿ

ನಿನ್ನ್ಯಾಕೆ ಮರತಿವಿ ಕನ್ಯೆ ಕೇಳೆ ನೇ ಸುಬದ್ರ
ಶಿನ್ನದಂಬೆ ನಮ್ಮ ಯದಿಯಾಗೆ | ಇಟ್ಟುಗಂಡು
ನಾವು ಹನ್ನೆರಡೊರುಸ ವನುವಾಸ

ಅಕ್ಕಯ್ಯಾ ಅಕ್ಕಯ್ಯಾ ದೂರೆತ್ತಾಲ ಹೋದಿರಿ
ಹೋದಲ್ಲಿ ನಮ್ಮನ ನೆನದೀರ | ನೇ ನಮ್ಮಂಥ
ತಂಗೈರು ಬಂದಲ್ಲಿ ಮರೆತೀರಿ

ನಿನ್ನ್ಯಾಕೆ ಮರತೀವಿ ಕನ್ಯೆ ಕೇಳೆ ನೀ ಸುಬದ್ರ
ಶಿನ್ನಬಂಬೆ ನಮ್ಮಾ ಯಡಿಯಾಗೆ | ಇಟ್ಟುಕಂಡು
ನಾವು ಹನ್ನೆರಡೊರುಸ ವನುವಾಸ

ಅತ್ತ್ಯಮ್ಮ ಅತ್ತ್ಯಮ್ಮ ದೂರೆತ್ತಾಲ ಹೋದಿರಿ
ಹುಟ್ಟೋ ಪುತ್ರನ ಹೆಸರೇನಿಡಬೇಕು

ಹತ್ತನೇ ಕಣ್ಣೋನು ಹದಿನಾರುನೇ ಭುಜದೋನು
ಕ್ಷತ್ರೇನೇ ಕುಲುದೋನು ಅಭಿಮಾನ್ಯ | ನೀ ಬಾರಂದ
ಅಭಿಮಾನ್ಯುನೆಂದು ಕರಿಯೀಮ್ಮ

ಮಾವಯ್ಯ ಮಾವಯ್ಯ ದೂರೆತ್ತಾಲ ಹೋದಿರಿ
ಮುಡೋ ಪುತ್ರಾನ ಹೆಸರೇನಿಡಬೇಕು

ಆರೇನೆ ಕಣ್ಣೋನು ಹದಿನಾರು ನೇ ಭುಜದೋನು
ಸೂರಿದುನ ಕುಲುದೋನು ಅಭಿಮಾನ್ಯು | ನೀ ಬಾರಂದ
ಅಭಿಮಾನ್ಯುನೆಂದು ಕರಿಯೀರಮ್ಮ

ಅವರತ್ತಾಲ ಹೋದಾರೆ ಇವರೀತ್ತಾಲ ಬಂದಾರೆ
ಅವರೊಂದು ಹಾದೀಲಿ ನೆಡುದಾರೆ

ಮಳೆಯಿಲ್ಲ ಮಾರಿಲ್ಲ ಗುಡುಗಿಲ್ಲ ಮಿಂಚಿಲ್ಲ
ಯತ್ತುಲ ಸಮುದ್ರ ಇತ್ತಾ ತಿರುಗ್ಯಾವೆ | ನೇ ದರುಮಣ್ಣ
ಶಿಕ್ಕಳು ಸುಬಾದ್ರಾನ ಕೆಂಗಳು ನೀರು | ದುರುಮಣ್ಣ
ಹಚ್ಚುಡುವ ಹಾಸಿ ಶರಣಾಂದ | ನೇ ದರುಮಣ್ಣಾ
ಇತ್ತಲ ಸಮುದ್ರ ಅತ್ತಲ ತಿರುಗ್ಯಾವೆ

ಮುಂದೆ ಮುಂದೆ ಅಣ್ಣಯ್ಯ ಹಿಂದ್ಹಿಂದೆ ನೇ ತಂಗ್ಯಮ್ಮ
ಅವರೊಂದು ಹಾದೀಲಿ ನಡುದಾರೆ

ಅಳ್ಳದಾಗಲೊಂದು ಹುಲ್ಲೆಯಾ ಮರಿಯಾ ಕಂಡು ]
ಅಣ್ಣಾನೋಡು ಅದರ ಶೆಲುವುರಿಕೆ | ನೋಡಿಯಮ್ಮ
ಅದು ನಿಮ್ಮ ಪಾಂಡುವರ ಆಕಳ್ಹಿಂಡು

ನಮ್ಮಾನೆ ಪಾಂಡವರು ವನುವಾಸ ಹೋಗಾಲಿಕೆ
ನಿನ್ನಿಗಳು ಕುವರೇ ಅರಿಯಾನೆ

ನಮ್ಮಾನೆ  ಬೀಗುರುನು ನಾವೂಂದು ಕಂಡಾರೆ
ಸುಮ್ಮುವಾನೆ ಬಾರೆ ಕಿರುತಂಗಿ

ಹಳ್ಳದಾಗೆ ಒಂದು ದೊಡ್ಡಾನೆ ಮರುಳ ಕಂಡು
ಅಮ್ಮಾನೋಡು ಅದರೆ ಸೆಲವುರಿಕೆ !ನೀ ನೋಡೀಯಮ್ಮಾ
ಅದು ನಿಮ್ಮ ಪಾಂಡವರ ದೊಡ್ಹಟ್ಟಿ

ನಮ್ಮಾನೇ ಪಾಂಡವರು ವನವಾಸ  ಹೋಗಾಲೀಕೆ
ನಿನ್ನಿಗಳ ಕುವರೇ ಅರಿಯಾನೆ

ನಮ್ಮಾನೆ ಬೀಗುರುನಾ ನಾವೂಂದು ಕಂಡಾರೆ
ಸುಮ್ಮಾನೆ ಬಾರೇ ಕಿರುತಂಗಿ

ಹಳ್ಳದಾಗೆ ಒಂದು ಕಲ್ಲೀನ ಗುಡಿಕಂಡು
ಅಮ್ಮಾನೋಡು ಅದರ ಸೆಲವುರಿಕೆ | ನೀ ನೋಡಿಯಮ್ಮಾ
ಅದು ನಿಮ್ಮ ಪಾಂಡವರ ಅರಮನೆ

ನಮ್ಮಾನೇ ಪಾಂಡವರು ವನುವಾಸ ಹೋಗಾಲಿಕೆ
ನಿನ್ನಿಗಳು ಕುವರೇ ಅರಿಯಾನೆ

ನಮ್ಮಾನೆ ಬೀಗುರುನ ನಾವೊಂದು ಕಂಡಾರೆ
ಸುಮ್ಮಾನೆ ಬಾರೇ ಕಿರುತಂಗಿ

ಅಣ್ಣಯ್ಯ ಮುಂದೆ ತಂಗ್ಯಮ್ಮ ಹಿಂದ್ಹಿಂದೆ
ಬನ್ನಿಯನ್ನ ಮರುಕೆ ಪ್ರವಾಡೂಸೆ

ಕರಿಯಾನೆ ಕಂಬಾಳಿ ತಿದ್ದೀನೆ ಗದ್ದುಗೆ ಮಾಡಿ
ದರುಮಾರು ಸೊಸೆ ಪ್ರವಾಡೂಸೆ

ಮೊಬ್ಬಾನೆ ಕಂಬಾಳಿ  ತಿದ್ದೀನೆ ಗದ್ದುಗೆ ಮಾಡಿ
ಸತ್ತಿಯಾರು ಸೊಸಿ ಪ್ರವಾಡೂಸೆ

ಅಣ್ಣಾನ ತೊಡಿಮ್ಯಾಲೆ ತಂಗ್ಯಮ್ಮ ತೆಲೀಯಾನಿಟ್ಟು
ಮತಿಗೆಟ್ಟು ಅಮ್ಮಾ ಮನಿಗ್ಯಾಳೆ

ಹೊತ್ತುಗಳು ಹೋದವು ನಿದ್ದೆಗಳು ನೇ ಬರಾದು
ಕತಿ ಬಲ್ಲರೇನು ಅರಿಯಾನೆ | ಹೇಳುತಾನೆ

ಮತಿಗೆಟ್ಟು ಅಮ್ಮಾ ಮನಿಗ್ಯಾಳೆ | ಹೊಟ್ಟ್ಯಾಗಿರುವ
ಸಿಸುವೆ ಕೇಳೈತೆ ಶಿವನುಡಿಯ

ಅತ್ತಾಲ ದಣಿಯಲ್ಲ ಇತ್ತಾಲಾ ನೇ ದಣಿಯಲ್ಲ
ಶಿಕ್ಕಳು ಸೂಬದ್ರಾನ ದಣಿಯಲ್ಲ | ನೇ ಇವನಮ್ಮ
ಕೆಟ್ಟೇನ ಪಾಂಡವರ ಹೊಸದನಿ | ನೇ ಈ ಸಿಸುವು
ಹುಟ್ಟುವುತಲೆ ಗೋಣು ಮುರಿಯಾಬೇಕು

ಅಲ್ಲೇನೆ ದಣಿಯಲ್ಲ ಇಲ್ಲೇನೆ  ನೇ ದಣಿಯಲ್ಲ
ಸಣ್ಣ ಸೂಬದ್ರಾನ ದಣಿಯಲ್ಲ | ನೇ ಇವನಮ್ಮ
ಕೇಡೆನೇ ಪಾಂಡವರ ಹೂಸದನಿ | ನೇ ಈ ಸಿಸುವು
ಮೂಡುವುತಲೆ  ಗೋಣಾ ಮುರಿಯಬೇಕು

ಹುಟ್ಟಿದ್ದುಂಟಾದರೆ ಬೆಳೆದಿದ್ದುಂಟಾದರೆ
ಕೊಂಬಿಗಾಕ್ಯಾನೆ ಕೊಡಲಿಯ | ನನ್ನ  ಮಾವಯ್ಯ
ಬೇರಿಗೆ ತಿರುವ್ಯಾನೆ ಬಿಸಿನೀರು

ಎದ್ದರುನಾ ನೋಡಾದ  ಬಿದ್ದುರುನಾ ನೇ ನೋಡುದಾ
ಉಟ್ಟೀದ ದೋತುರುವ ಬಿಗಿಯಾದ | ನಾರಾಯಣಸ್ವಾಮಿ
ಓಡಿ ಹೋದಾನು ತನ್ನ ಪುರಗಳಿಗೆ

ಹೋದುರನ ನೋಡಾದ ಬಂದುರುನ  ನೋಡಾದ
ಕಟ್ಟೀದ ದೋತುರವ ಬಿಗಿಯಾದ | ನಾರಾಯಣಸ್ವಾಮಿ
ಎದ್ದು ಹೋದಾನು ತನ್ನಾ ಪುರಿಗಳಿಗೆ

ಹತ್ತನೇ ವರುಸಾದ ಕಟ್ಟೀದಾನೆ ಹುಲಿ ಕರಡೀಯ
ಅಪ್ಪ ಶಿವುನೇ ನಮಿಗೆ ಆವುರಾವೊ! ಶಿಕ್ಕ್ಯಾವೊಂದು
ಗೊಕ್ಕಾನೆ ಹುಲಿಕರಡಿ  ಗವುದಾವೊ

ಆರೇನ ವರುಸಾದ ಹೂಡಿದಾನೆ ಗಡಿಸರುಪ
ಅಪ್ಪ ಶಿವುನೆ ನಮಿಗೆ ಆವುರಾವೊ | ಶಿಕ್ಕೈವೂಂದು
ಬೇಗಾನೆ ಗಡಿಸರುಪ ಗವುದಾವೊ

ಪಾಪಕೊಳುಗಾದೆವು  ಕರುಮಕೊಳಗಾದೆವು
ದರುಮಾರ ಸೊಸೆ ಆವುದೂಂದು | ನೇ ಹುಲಿಕರಡಿ
ಬ್ಯಾಗಾನೇ ಹಿಂದಾಕೆ ತಿರುಗ್ಯಾವು

ಪಾಪಕೊಳುಗಾದೆವು ಕರುಮಕೊಳಗಾದೆವು
ಸತ್ತಿಯಾರ ಸೊಸೆ ಆವುದೊಂದು |  ನೇ ಗಡಿಸರುಪ
ಗೊಕ್ಕಾನೆ ಹಿಂದಾಕೆ ತಿರುಗ್ಯಾವು

ಅತ್ತಾಲ ಸೂರಿದಾ ಇತ್ತಾಲ ಮೂಡ್ಯಾನೆ
ನೆತ್ತಿಗನ್ನಾ ಬಿಸಿಲು ಬಡುದಾವೆ | ನೇ ಸುಬದ್ರ
ಎಚ್ಚರಿಕೆ ಇಲ್ಲುದಲೆ ಮನಿಗ್ಯಾಳ

ಅಲ್ಲೇನ ಸೂರಿದಾ ಇಲ್ಲಿಗೇನೆ ಮೂಡ್ಯಾನೆ
ಕೆನ್ನಿಗ್ಯನ್ನ ಬಿಸಿಲು ಬಡುದಾವೆ | ನೇ ಸುಬದ್ರ
ಸೊನ್ನೇನೆ ಇಲ್ಲದುಲೆ ಮನಿಗ್ಯಾಳ

ಅತ್ತಾಲ ಸೂರಿದಾ ಇತ್ತಾಲನೇ ಮೂಡಿದಾ
ಪಕ್ಕಿಗೆನ್ನಾ ಬಿಸಿಲು ಬಡುದಾವೆ | ನೇ ಸುಭದ್ರಾ
ಎಚ್ಚೂರಿಕೆ ಆಗಿ ಕುಳುತಾಳೆ

ಆಶೆಕೊಬ್ಬರಿಲ್ಲ ಈಶೆಕೊಬ್ಬರಿಲ್ಲ
ಯಂಗು ಯಂಗು ಮಾಡ್ಯ್ಲೊ ಶಿವಾ ಶಿವಾನೆ | ಅಂದು ಸುಭದ್ರ
ತೋರ್ಯಾಳೆ ಕೆಂಗಣ್ಣೀಲುದುಕಾವ

ಹಿಂದಕೊಬ್ಬಾರಿಲ್ಲ ಮುಂದಕೆ ವಬ್ಬಾರಿಲ್ಲ
ಯ್ಹಾಗು ಯ್ಹಾಗು ಮಾಡಾಲೀ ಶಿವ ಶಿವನೇ | ಅಂದು ಸುಭದ್ರ
ತೋರ್ಯಾಳೆ ಕೆಂಗಣ್ಣೀಲುದುಕಾವ

ಎತ್ತುಕಾಯೋ ಅಣ್ಣ ಮುತ್ತುನೇ ಕಾಯೋ ಅಣ್ಣ
ಲಚ್ಚಿಯಾಣಪುರಕೆ ದಾರಿಯಾವುದು

ಆವು ಕಾವೊ ಅಣ್ಣ ಗೋವುನೇ ಕಾವೋ ಅಣ್ಣಾ
ನಾರಂದನಪುರಕೆ ದಾರಿಯಾವುದೋ

ಅಲುಕು ಮುಲುಕಿನ ತೋಟ ಅದಕೇನೇ ಶಿನ್ನುದು ಬೀಗಾ
ಅದು ನನ್ನ ತವರು ಯಲೀದೋಟ | ನೇ ದಾಟದುರೆ
ಯೇಟು ಐತೆ ನನ್ನ ತವರೂರು

ಬಾಳೀಯ ಬಲಕಿಡೆ ಸೀಗೇಯ ಯಡಕಿಡೆ
ನಾಗಾನೆ ಸಂಪಂಗೆ ನಡಿಹೋಗು | ನೇ ನನ್ನಮ್ಮ
ಅದು ಕಾಣೆ ನಾರೊಂದನ ಅರುಮಾನೆ

ಬಣ್ಣಾ ಬಳುದ ಮನಿಗೆ ಸುಣ್ಣಾವ ನೇ ಬಳುದೈತೆ
ಮುಂದಲಾ ವಸುಲಿಗೆ ರವು ರತ್ನಾವಾ | ಬಿಗುದೈತೆ
ಅದು ಕಾಣ ನಾರಂದನ ಅರುಮಾನೆ

ಉಪ್ರಿಗ್ಗೆ ಹಾಕ್ಯಾಳೆ ಆರು ಕಾಲೇಣೀಯ
ಹತ್ತಿ ನೋಡ್ಯಾಳೆ ನೆಲಿಗಾಳು | ನೇ ಸುಪ್ಪಕ್ಕ
ಹತ್ತಿ ಬಿಡುಸೊಳ್ಹಂಗೆ ಬರುತಾಳೆ

ಆವ್ರಗ್ಗೆ ಹಾಕ್ಯಾಳೆ ಆರು ಕಾಲೇಣೀಯ
ಏರೆನ್ನ ನೋಡ್ಯಾಳೆ ನೆಲಿಗಾಳು | ನೇ ಸುಪ್ಪಕ್ಕ
ಕೂಲಿ ಮಾಡೊಳ್ಹಂಗೆ ಬರುತಾಳೆ

ತಂಗೀಯಮ್ಮ ನೀನು ಬರಿಗಾಲೀಲಿ ಬರೂತಾಳಂದು
ಅಂದಾಲ ಪಲ್ಲಕ್ಕಿ ತಾರಾಲ್ಹೋದೆ

ನೀ ತರುವ ಪಲ್ಲಕ್ಕಿ ದಾನಾನೆ ಮಾಡುತ ಬಂದೆ
ನಾ ಬಂದೆ ಅಣ್ಣಾನ ಬಳಿಗುಂಟಾ

ಕರಿಯಕ್ಕ ನೀನುಬಾರೆ ಮರಿಯಕ್ಕ ನೇ ನೀನುಬಾರೆ
ನಿಮ್ಮತ್ತೆ ಯಗಲ ಜವಳ ಇಳುವು ಬಾರೆ

ನಾನು ತರುವ ಜವಳಿ ದಾನಾನೆ ಮಾಡುತಾ ಬಂದೆ
ನಾನು ಬಂದೆ ಅಣ್ಣಾನ ಬಳಿಗುಂಟ

ಕಾಮಣ್ಣ ನೀನು ಬಾರೋ ಭೀಮಣ್ಣ ನೀನು ಬಾರೋ
ನಿಮ್ಮತ್ತೆ ಯೆಗಲ ಅಕ್ಕಿ ಇಳುವ ಬಾರೋ

ನಾನು ತರುವ ಅಕ್ಕಿ ದಾನಾನೆ ಮಾಡುತ ಬಂದೆ
ನಾಬಂದೆ ಅಣ್ಣಾನ ಬಳಿಗುಂಟಾ

ಮುತ್ತಿನ್ಹರಿವಣುದಾಕೆ ರತ್ನದ ಚಂಬೂನ್ಹಾಕಿ
ನಿಮ್ಮ ಪಾದವ ನೀವು ತೊಳುಕಳ್ಳಿ

ನಾನು ಕಾಣದ ರನ್ನದರಿವೆ ನಾನು ಕಾಣದ ಶಿವದರಿವೆ
ನಾನು ಕಾಣದ ತವರು ಮನಿಯೇನೆ | ನೇ ಸುಪ್ಪಕ್ಕ
ದಾದಿಯಾಗಿ ಮನಿಯ ಬಳುದಲ್ಲೇ | ನೇ ಸುಪ್ಪಕ್ಕ
ನಾನು ಇಲ್ಲೆ ಹುಟ್ಟಿ ಬೆಳದೆನು | ನೇ ಸುಪ್ಪಕ್ಕ
ದಾದಿ ನಿನ್ನ ಬುದ್ದಿ ಬಿಡಾದ್ಹೋದೆ