೧. ಕ್ಯಾತಪ್ಪತಮ್ಮಪ್ಪಸ್ವಾಮನೋರ
ಮೈತ್ರಿ – ನಮ್ಸಕಾರ
ಕ್ಯಾತಪ್ಪ – ನಮ್ಸಕಾರ
ನಿಮ್ಮ ಹೆಸ್ರ ಹೇಳ್ರಿ
ನನ್ನ ಹೆಸ್ರ ಕ್ಯಾತಪ್ಪ
ಯಾವ ಗೊಲ್ಲರು
ಅಡವಿ ಗೊಲ್ರು
ನಿಮ್ಮೂರು
ನಮ್ದು ಆಂಧ್ರದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನ ತಾಳಿಕೆರೆ ಊರು
ನಿಮ್ಮ ಬೆಡುಗು
ಸ್ವಾಮನೋರ
ನಿಮ್ದು ತಂದೆ ಹೆಸ್ರು
ತಮ್ಮಪ್ಪ
ನಿಮ್ಮ ವಯಸ್ಸೆಷ್ಟು
ನೂರರ ಸಮೀಪ ಆಗ್ಯಾವ
ನೀವು ಕುರುಡಾದಾಗ ನಿಮ್ಮ ವಯಸ್ಸೆಷ್ಟಿತ್ತು
ಐದು ವರ್ಷ
ಎಷ್ಟ ಮಕ್ಳ ಅದಾರ ನಿಮ್ಗ
ಮೂವರ ಹೆಣ್ಮಕ್ಳು, ನಾಲ್ವರ ಗಂಡ್ಮಕ್ಳು, ಅವಳಿ ಜವಳಿ ಹೋದ್ವು, ಇವಾಗ
ಏಳ ಜನ ಐದಾರ
ಅವ್ರ ಹೆಸ್ರ ಹೇಳಿ
ದೊಡ್ಡ ಗಂಡ ಹುಡಗ್ನ ಹೆಸ್ರ ತಮ್ಮಪ್ಪ, ಸಣ್ಣವ್ನ ಹೆಸ್ರ ಕ್ಯಾತಣ್ಣ, ಇನ್ನೊಬ್ಬನ ಹೆಸರ ತಾರೆಪ್ಪ ಇನ್ನಿಬ್ರ ಹೆಸ್ರ ಕೆಂಜಡೆಪ್ಪ, ಕೆಂಜಡೆಮ್ಮ, ಒಬ್ಬಾಯಮ್ಮ ಸತ್ಹೋದ್ಳು ಕರಿಯಮ್ಮ
ಎಲ್ಲಾ ಮಕ್ಳ ಮದಿವಿ ಆಗೈದಾ
ಹೂಂ ಎಲ್ಲಾರಿಗೂ ಮದ್ವಿ ಆಗೈತಿ, ಮೊಮ್ಮಕ್ಳ ಅವ
ಅವ್ರ ಹೆಸ್ರು ಹೇಳ್ರಿ
ಇವ್ನ ಹೆಸ್ರ ಕದರಾ, ಇನ್ನೊಬ್ನು ತಾರಗ್ಯಾ, ಇನ್ನೊಬ್ಳು ನರಸಮ್ಮ, ಇನ್ನೊಬ್ನು ಮಾಲಿಂಗ
ನಿಮ್ಮ ತಾಯಿದು ಮತ್ತು ಹೆಂಡ್ತಿದು ಯಾ ಊರು
ಇಬ್ರೂದೂ ಮಳ್ಳೆಳ್ಳೆ
ನೀವು ಮದ್ವೆ ಮಾಡಕೊಂಡಾಗ ತೆರ ಪದ್ಧತಿ ಇತ್ತಾ
ಊಂ, ಮತ್ತೇ
ನೀವು ಯಾವ್ಯಾವ ಊರಿಗಿ ಹಾಡ್ಲಿಕಿ ಹೋಗಿರಿ
ಇಲ್ಲೆ ಹತ್ತತ್ರ ಊರಿಗೆ; ಹಬ್ಗೊ ಹುಣ್ಣೆಗೊ ಅವ್ರ ಮನ್ಯಾಗ ಚೆನ್ನಾಗಿರದಿದ್ರೆ ಕರಕೊಂಡ್ಹೋತಾರ; ಹುಳಪಳ ಮುಟ್ಟಿದ್ರೆ, ಹಾವು ಪಾವು ಕಚ್ಚಿದ್ರೆ ಕರಕೊಂಡ್ಹೋಗಿ
ಹಾಡ ಹೇಳಸ್ತಾರ
ಹೇಳಿಸಿ ಏನ ಕೊಡತಾರ
ಹತ್ತೋ ಇಪ್ಪತ್ತೋ ಇದ್ದಂಗ ಕೊಡ್ತಾರ
ನಿಮ್ಮ ಜೊತೆಗೆ ಎಷ್ಟ ಜನ ಬೇಕು ಹಾಡ್ಲಿಕ್ಕೆ
ಒಬ್ನೆ ಹಾಡ್ತಿನಿ ಗಣೆ ಬಾರಸಕ್ಕ ಈ ಸಣ್ಣ ಈರಣ್ಣ, ಬರ್ತಾನ,
ನೀವು ಹಾಡ್ವಾಗ ಗಣೆ ಒಂದೇ ಬೇಕಾ
ಹೂಂ ಅಷ್ಟೆ
ನಿಮಗ ಅಡಿವಿ ಗೊಲ್ ಅಂತ ಯಾಕ ಅಂತಾರ
ಗೊಲ್ಲರ ಹಟ್ಟೆ ಸುತ್ತ ಕಳ್ಳೆ ಕಟ್ಟಿಗೊಂಡ ಹುದಬಾಗಿಲು ಇರುವುದು, ಯಾವತ್ತೂ ಅದೊಂದೇ ತಗ ಹೋಗಬೇಕು, ಒಂದೇತಗ ಬರಬೇಕು, ನಮ್ಮ ಹಟ್ಯಾಗ ಯಾರೂ ಬ್ಯಾಗಾರು, ವಡ್ಡರು ಬರಂಗಿಲ್ಲಾ, ಅದಕ ನಮ್ಗ ಅಡವಿ ಗೊಲ್ಲರು ಅಂತಾರ
ಬ್ಯಾಗರು, ವಡ್ಡರು ಯಾಕ ಬರೋದಿಲ್ಲ
ಅವರು ಸ್ವಲ್ಪ ಹೊಲ್ಸು ಪಲ್ಸು ತಿಂತಾರಲ್ಲ, ಅದಕ್ಕೆ, ಆ ಕಾಲ ಯಜಮಾನ ಕಾಲದಿಂದ
ಹಂಗೇ ನಡಕೊಂಡೈತಿ ಜನ, ಅವ್ರು ಬಂದ್ರೆ ಪುಣಿಜ್ಜನ ಮಾಡಸ್ತೀವಿ
ಹೆಂಗೆ
ಅದೋ, ಮನಿಮಾರ ಬಳಕೊಂಡು ಜಂಗಮ್ರನ ಕರಕೊಂಡ ಬಂದು, ಒಂಭತ್ತ ಕಾಯಿ, ಅದೆಲ್ಲ ಇಟ್ಟು ಅವರಿಗೆ ಪುಣವಜ್ಜನ ಕೊಡಬೇಕು ಅದಕ ಒಂದ ಐದಾರ ನೂರೋ ಸಾವ್ರೋ ಇಷ್ಟಕರ್ಚ ಬರತೈತಿ ಅಂತ ಹೇಳಿ ಎಲ್ಲಾರು ಇಷ್ಟಿಷ್ಟು ಹಾಕಿ ಮಾಡತಿವಿ
ನೀವು ಯಾವ ಯಾವ ಕಾವ್ಯ ಹಾಡತಿರಿ
ಎತ್ತಯ್ಯಂದ, ಚಿತ್ತಯ್ಯ ಕಾಟಯ್ಯಂದ ಹಾಡತಿನಿ, ಕ್ಯಾತೆಲಿಂಗನ ಮೇಲೆ
ಹಾಡತಿನಿ ಇಷ್ಟೆ ಮೂರು
ಈ ಕಾವ್ಯಗಳು ತೆಲಗಿನಲ್ಲಿ ಹಾಡ್ತಿರೇನು
ಇಲ್ಲ, ಬರಲ್ಲ
ಆಧ್ರದಲ್ಲಿ ಮತ್ತೇ ಯಾರ ಹಾಡ್ತಾರ
ಇಲ್ಲ, ಯಾರಿಲ್ಲ, ನಾನೊಬ್ಬನೇ ಹಾಡದು
ಈ ಮೂರ ಕಾವ್ಯಗಳು ಗಣೆ ಮೇಲೆ ಹಾಡ್ತಿರಲ್ಲ, ಇದರಲ್ಲಿ ಭಾಳ ಇಷ್ಟ ಆಗಿದ್ದು ಕಾವ್ಯ
ಯಾವದು
ಚಿತ್ತಯ್ಯ ಕಾಟಯ್ಯಂದು
ಯಾಕ
ಇದು ಕೇಳೋರಿಗೆ ಅಂದ ಕಾಣತೈತಿ
ಕಥೆಗಳು ಹೆಂಗ ಕಲಕೊಂಡ್ರಿ ನೀವು
ಯಜಮಾನ್ರ, ಹಿಂದಲೋರು ಸಣ್ಣ ಈರಣ್ಣನ ಅಪ್ಪ ಬಡಪ್ಪನಿಂದ ಕಲಿತಕೊಂಡಿನಿ
ಹಾಡ ಹಾಡಾಕಂತೂ ಯಾರೂ ಕಲಿತಿಲ್ಲ
ಮತ್ತೇ ಅವನ್ನ ಉಳಸೋದು ಹೆಂಗ
ಹೆಂಗೋ ಏನೋ ಕಲಿಯೋರಿಲ್ಲಲ್ಲ
ಈಗ ರಿಕಾರ್ಡಿಂಗ ಆಯ್ತಲ್ಲ, ಅವು ಉಳಿತಾವಲ್ಲ
ಹೂಂ ಅಯ್ಯೋ ಉಳಿತಾವಲ್ಲಾ
ನಿಮ್ಮ ಮುಂದಿನ ಯೋಜನೆ ಏನು
ಇವೇ ಹಾಡುಗೋಳು ಉಳಿಲಿ ಬೆಳೆಲಿ ಅಂಬೋದೆ
ಇನ್ನೇನಾದ್ರೂ ಹೇಳಬೇಕಂತ್ರಿ
ಏನಿಲ್ಲ ನಮ್ಸಕಾರ
೨. ಸಣ್ಣಈರಣ್ಣಬಡಪ್ಪಮಾರನೋರ
ಮೈತ್ರಿ – ನಿಮ್ಮ ಹೆಸ್ರ ಹೇಳ್ರಿ
ಸಣ್ಣ ಈರಣ್ಣ – ನನ್ನ ಹೆಸರು ಸಣ್ಣ ಈರಣ್ಣ
ನೀವು ಗಣೆ ಊದುತ್ತೀರಾ
ಹೂಂ
ನಿಮ್ಮ ತಂದೆ ಹೆಸ್ರು, ಬೆಡಗು ಮತ್ತು ಊರು ಯಾವ್ದು ಹೇಳಿ
ತಂದೆ ಬಡಪ್ಪ, ಬೆಡಗು ಮಾರನೋರ, ಯಾರ ತಾಳಿಕೇರಿ
ತಾಲೂಕು
ರಾಯದುರ್ಗ ತಾಲೂಕು
ಜಿಲ್ಲೆ
ಅನಂತಪುರ, ಆಂಧ್ರಪ್ರದೇಶದಲ್ಲಿ
ನಿಮ್ಮ ವಯಸ್ಸು
ಐವತ್ತರ ಮೇಲೆ
ಎಷ್ಟ ವರ್ಷನಿಂದ ಗಣೆ ಊದುತಾಯಿದ್ದೀರಿ ಕ್ಯಾತಪ್ಪನ ಜೊತೆಗೆ
೨೦ – ೩೦ ವರ್ಷಲಿಂದ
ಗಣೆಗೆ ಪುಳಗಾವಿಗೆ ಏನ ವ್ಯತ್ಯಾಸ
ಭಾಳ ವ್ಯತ್ಯಾಸ ಏನಿಲ್ಲ
ಎಷ್ಟ ಓದಿರಿ ನೀವು
ಓದಿಲ್ಲ
ಯಾವಾಗ ಹಾಡ್ತಿರಿ
ಯಾರಾನ ಹಂಗೇ ನೆನೆಸ್ಕೊಂಡ್ರೆ ದೊಡ್ಡ ಮನಷರು, ನಮ್ಮ ದೆವ್ರಗಳ ಸಾಗಿದ್ರೆ ಹಾಡ್ತಿವಿ
ಇದುವರೆಗೆ ಸರಕಾರ ನಿಮಗ ಗೊತ್ತು ಮಾಡಿಲ್ಲವೆ
ಇಲ್ಲ
ನೀವು ಈ ಗಣೆ ಊದೋದು ಯಾರ್ಯಾರಿಗೆ ಕಲಿಸಿದ್ರಿ
ಒಬ್ಬ ನಾಯಕ್ರ ಹುಡುಗನಿಗೆ ಮತ್ತೇ ದೊಡ್ಡಯ್ಯ ಅಂಬೋ ಹುಡುಗಬಿಗೆ ನಮ್ಮೂರಾಗ ಗಣೆ ಉದೋದು ಕಲ್ಸಿನಿ
೩. ಶ್ರೀಮತಿಭೂಮನೋರಗೌರಮ್ಮ
ಮೈತ್ರಿ – ನಮಸ್ಕಾರಮ್ಮ
ಗೌರಮ್ಮ – ನಮಸ್ಕಾರ್ರೀ
ನಿಮ್ಮ ಹೆಸ್ರು ಹೇಳಿ
ನನ್ಹೆಸ್ರು ಭೂಮನೋರ ಗೌರಮ್ಮ
ಯಾವೂರು
ಬಂಜಿಗೆರಿ
ಯಾವ ತಾಲೂಕು
ಚಳ್ಳಿಕೆರಿ
ಯಾವ ಜಿಲ್ಲೆ
ಚಿತ್ರದುರ್ಗ
ನಿಮ್ಮ ವಯಸ್ಸು
ಐವತ್ತು ಮ್ಯಾಲಾಗ್ಯಾವ
ನಿಮ್ಮ ಮಾವನ ಹೆಸರು ಏನಮ್ಮ
ಕರಕ್ಯಾತಪ್ಪ
ನಿಮ್ಮ ಮನೆಯವ್ರ ಹೆಸ್ರು ಅಂದರೆ ಗಂಡನ ಹೆಸ್ರು
ಭೂಮಪ್ಪ
ನಿಮ್ಮ ತೌರಮನಿ ಯಾವುದು
ಸಿದಕ್ನಳ್ಳಿ
ಅದು ಎಲ್ಲಿ ಇರೋದು
ಅದು ಚಳ್ಳಿಕೆರಿ ಹತ್ತಿರ
ಯಾವ ಜನ
ನಮ್ಗ ಅಡವಿಗೊಲ್ರು, ಕೃಷ್ಣಗೊಲ್ರಂತಾರ
ಏನು ಕೆಲ್ಸಾ ಮಾಡ್ತಿರಿ
ಕೂಲಿನಲಿ ಮಾಡೋದು, ಹೊಲಮನಿ ಕೆಲ್ಸಾ ಮಾಡ್ತೀವಿ
ನೀವು ಯಾವ ಯಾವ ಹಾಡುಗಳು ಹಾಡ್ತಿರಿ
ನಿಂಗಣ್ಣನ ಮ್ಯಾಲೆ ಹಾಡ್ತೀವಿ, ಪಾಂಡೋರ ಮ್ಯಾಲೆ ಹಾಡ್ತೀವಿ, ಈರಣ್ಣನ ಮ್ಯಾಲೆ ಹಾಡ್ತೀವಿ, ಕೃಷ್ಣನ ಮ್ಯಾಲೆ ಮತ್ತು ಮದಲಿಂಗ ಮದಲ್ಗಿತ್ತಿ ಕುಂಡ್ರಸವು, ಮುಟ್ಟಾದವ, ಧಾರೆ ಹೊಯ್ಯವು, ಹಾಲಸ್ತ ಮಾಡವು, ಒಳ್ಳಕ್ಕಿ ಹೊಯ್ಯವು, ಹೆಣಮಕ್ಕಳ್ನ ಗಂಡನ ಮನಿಗೆ
ಕಳಸವು, ತೊಟ್ಲದು ಹೇಳ್ತಿವಿ
ಹಾಂ ಇವೆಲ್ಲ ಹಾಡುಗಳು ನೀವು ಯಾವಗ ಹಾಡ್ತೀರಿ
ನಮ್ಮ ದೇವ್ರು ಬಯಲಾಕ ಹೊರಟಾಗ, ಪೂಜೆ ಮಾಡುವಾಗ, ಲಗ್ನ ಮಾಡ್ವಾಗ ಸಸಿ
ಕಳಿವಾಗ, ಕೆಲಸ ಮಾಡ್ವಾಗ ಹಾಡ್ತೀವಿ,
ಎಷ್ಟು ವಯಸ್ಸಿನಿಂದ ನೀವು ಈ ಹಾಡುಗಳನ್ನು ಹಾಡ್ತಾ ಇದ್ದೀರಿ
ನನ್ನ ೧೨ ವರ್ಷ ವಯಸ್ ಆವಾಗಿಲಿನಿಂದ
ನಿವೇಷ್ಟು ಓದಿದ್ದಿರಿ
ಎಷ್ಟೊ ಇಲ್ಲ
ಈ ಹಾಡು ಯಾರು ಕಲಿಸಿದ್ರು
ಅಲ್ಲೆ ನಮ್ಮ ದೊಡ್ಡಮ್ಮ ಜಿಗಮ್ಮಗೋಳು
ಏನು ಅವ್ರ ಹೆಸ್ರು
ಗೌರಮ್ಮ ಸ್ವಾಸ್ರತ್ತೆ, ನಮ್ಮಪ್ಪನ ತಾಯಿ ಈರಜ್ಜಿ
ಅವ್ರು ನಿಮಕ್ಕಿಂತ ಚೆನ್ನಾಗಿ ಹಾಡತ್ತಿದ್ರಾ
ಹೂಂ ಚೆನ್ನಾಗಿ ಹಾಡ್ತಿದ್ರು
ನಿಮಕ್ಕಿಂತ ಹೆಚ್ಚಿಗಿ ಕಥೆ ಬರ್ತೀದ್ವಾ ಅವ್ರಿಗೆ
ಹೂಂ
ಆಮೇಲೆ ಎಷ್ಟ ವರ್ಷಗಿ ಮದ್ವೆ ಆಯ್ತು ನಿಮಗೆ
ಹನ್ನೆರಡ ವರ್ಷಕ ಆಯ್ತು
ಯಾರ್ಯಾರು ಬರ್ತಾರೆ ನಿಮ್ಮ ಜೊತೆಗೆ ಹಾಡಲಿಕ್ಕೆ
ಎಲ್ಲಾರು ಬರ್ತಾರೆ
ಅವ್ರ ಹೆಸರ ಹೇಳ್ರಿ
ಉಳ್ಳಿ ಬಡಮ್ಮ, ಕುರಿಯಜ್ಜಿಯೋರ ಸಣ್ಣ ಈರಮ್ಮ, ಅಜ್ಜಿಮಜ್ಜಿಯೋರ ಗೌರಮ್ಮ
ಇವರೆಲ್ಲ ನಿಮ್ಮ ಊರದವ್ರೇನೂ
ಹಾಂ. ಎಲ್ರೂ ನಮ್ಮ ಊರೌವ್ರೆ
ಎಲ್ಲರು ಗೊಲ್ಲರೇನು
ಹಾಂ ಎಲ್ಲಾರು ಗೊಲ್ಲರೆ ಅಡವಿಗೊಲ್ಲರೆ, ಕೃಷ್ಣಗೊಲ್ಲರೆ
ನೀವು ಎಷ್ಟು ಜನರಿಗೆ ಹೊಸದಾಗಿ ಕಲಸ್ತಾ ಇದೀರಿ, ಈ ಹಾಡಲಿಕ್ಕೆ
ಹೂಂ ಹೊಸಬರಿಗೆ ಹೇಳಿಕೊಡ್ತಾ ಇದೀವಿ. ಅವ್ರು ಕಲಿಯವ್ರು ಹೇಳಂತಾರ ಇಲ್ಲದವ್ರು
ಕೇಳಂಗಿಲ್ಲ
ಎಷ್ಟು ಜನ ಕಿತಾ ಇದಾರೀಗ
ಒಂದಿಬ್ರು ಮೂವರು ಕಲಿತಾ ಅದಾರ
ಎಷ್ಟು ವಯಸ್ಸದ ಅವ್ರುದು
ಮೂವತ್ತು ವರ್ಷ ಮ್ಯಾಲೆ
ಆ ಮೇಲೆ ಇನ್ನ ಯಾರಾದ್ರು ಹಿರೇರು ಇದ್ರೆ, ಅಂದ್ರೆ ಗಂಡ ಮಕ್ಕಳ ಇರ್ಲಿ, ಹೆಣ್ಣುಮಕ್ಳ ಇರ್ಲಿ ಯಾರೇ ಇರ್ಲಿ, ಇನ್ನಾ ಹಾಡಲಿಕ್ಕೆ ಯಾರ್ಯಾರ ಇದಾರ
ಗಂಡ ಮಕ್ಳ ಗಣೆ ಮೇಲೆ ಹೇಳತಾರ. ಚಿತ್ರಯ್ಯ ಕಾಟಯ್ಯನ ಮೇಲೆ
ಏನ ಅವ್ರ ಹೆಸರು
ಈರಣ್ಣ
ನೀವು ಸುಮಾರ ೮-೧೦ ಕಥೆಗಳು ಹೇಳ್ತಿರಿ ೮-೧೦ ದಿವಸಗಟ್ಟಲೆ ಹೇಳ್ತಿರೇನು
ಹೂಂ
ನೀವು ಎಷ್ಟು ಆಸಕ್ತಿಯಿಂದ ಕಲಿತ್ರಿ, ಈಗ ಮುಂದೆ ಅಷ್ಟು ಆಸಕ್ತಿಯಿಂದ ಕಲಿಲಾಕತ್ತಾರೇನು ಹುಡುಗರು
ಇಲ್ಲ, ಕಲಿತಾಯಿಲ್ಲ
ಹಂಗಾರ ಕಥೆಗಳು ಹೆಂಗ ಉಳಸೋದು ? ಹೆಂಗ ಬೆಲಸೋದು ? ನಿಮಗೆ ಚಿಂತೆ
ಇರಬೇಕಲ್ಲ,
ನಾವ ಕರಿತಿವಿ, ಬರ್ರಿ ಕಲಿಸಿಕೊಡ್ತಿವಿ. ನಾವು ಸತ್ತಹೋದ ಮೇಲೆ ಇವು ಪದ ಮುಣಗತಾವೆ
ಬರ್ರಿ ಕಲತಗೊರಿ ಅಂದ್ರೆ ಅವ್ರಿಗೆ ಇಷ್ಟ ಇಲ್ಲ
ಹೂಂ ಈಗ ಅವರಂತು ಕಲಿಯಿದೆಯಲ್ಲ, ನಾವು ಹೋದ್ರು ಇದು ಉಳಿತದಲ್ಲಾ
ಯಾವಾಗ್ಲೂ ಹಾಡ್ತದಲ್ಲ ಅದು.
ಉಳಿತದ.
ಏನ್ ಇದು ಪುಸ್ತಕ ಆದ್ರ ಛಲೋ ಅನಸ್ತದ ನಿಮಗ
ಹೂಂ
ನಿಮ್ಮ ಕಥೆ ಎಲ್ಲಾರೊ ಓದಬೇಕು ಅನಸ್ತದ ? ಹೆಚ್ಚ ಜನ ಓದಿದ್ರೆ ನಿಮ್ಗ ಹಿಗ್ಗ
ಆಗ್ತದೇನು
ಹೂಂ
ಎಲ್ಲಾದರು ನಿಮಗ ರೇಡಿಯೋದಲ್ಲಿ ಹಾಡಲಿಕ್ಕೆ ಅಥವಾ ಸಾರ್ವಜನಿಕ ಸಭೆಗಳಲ್ಲಿ ಹಾಡಲಿಕ್ಕೆ
ಕರದ್ರ ನೀವು ಹೋಗ್ತಿರೇನು
ಹೂಂ ಹೋಗ್ತಿವಿ
Leave A Comment