ಸುವ್ವೇ ಬಾ ಸುವ್ವೇ ಸುವ್ವೇ ಬಾ
ಸುವ್ವೇ ಬಾ ಸುವ್ವೇ ಸುವ್ವೇ ಬಾ

ಗ್ಯಾವಿಯನ್ನ ಸುಣ್ಣ ಗುಲುಗಂಜಿ ಕೆಮ್ಮಣ್ನ
ಯತ್ತಾಮುಂದಾಗಿ ಬರಿಯಾಲಿ | ಮಾವಿನ ತರುಳು
ಹೆತ್ತಮ್ಮಮಾಡ್ಯಾಳೆ ಶ್ರುಬದಿಂದ || ಸುವ್ವೇ ಬಾ ||

ಗ್ವಾವಿಯನ್ನ ಸುಣ್ಣ ಗುಲಗಂಜಿ ಕೆಮ್ಮಣ್ಣ
ಯತ್ತಾಮುಂದಾಗಿ ಬರಿಯಾಲಿ | ಮಾವಿನ ತರುಳು
ತಾಯಮ್ಮ ಸೂಡ್ಯಾಳೆ ಶ್ರುಬದಿಂದ || ಸುವ್ವೇ ಬಾ ||

ಹಟ್ಟಿ ಒಳಕಲ್ಲಿಗೆ ಹೊಕ್ಕುಳ ದೂಪಾನೊಯ್ದು
ಬುಟ್ಟು ಬಾಳೆಹಣ್ಣು ಸುಲಿದಿಟ್ಟು | ಅಸಕೇರಿ
ಅಚ್ಚ ಮುತ್ತೈದೆರನ ಕರಸಣ್ಣ || ಸುವ್ವೇ ಬಾ ||

ಅಚ್ಚಮುತ್ತೈದೇರು ಹೊಳ ಜಿನ್ನದ ಬಾಲೇರು
ಅಕ್ಕ ತಂತೇರುನ ಕರಸಮ್ಮ || ಸುವ್ವೇ ಬಾ ||

ಓಣಿ ಒಳಕಲ್ಲಿಗೆ ನಾಗುಳ ದೂಪ ಹೊಯ್ದು
ಜೋಡು ಬಾಳೆಹಣ್ಣು ಸುಲಿದಿಟ್ಟು | ಅಸೆಕೇರಿ
ಆದ ಮುತ್ತೈದರನ ಕರಸಣ್ಣ || ಸುವ್ವೇ ಬಾ ||

ಆದ ಮುತ್ತೈದೇರು ಹೊಳ ಜಿನ್ನುದ ಬಾಲೆರು
ತಾಯಿ ಮಕ್ಕಳುನ ಕರೆಸಣ್ಣ || ಸುವ್ವೇ ಬಾ ||

ಅಟ್ಟಾಕೇಣಿನ್ಹಾಕಿ ಅಕ್ಕೇನು ತುಗುದಾಳೆ
ಅಕ್ಕಿ ಹೊಂಬಾಳೆ ಗೊನಿಬಾಳೆ | ತೊಮ್ಮಟದುಂಡೆ
ಅಕ್ಕಾ ಒರಳೀಗೆ ತಗುದಾರೆ || ಸುವ್ವೇ ಬಾ ||

ವಾವುರಗ್ಗೇಣಿನ್ಹಾಕಿ ತಾಯೇನ ತಗುದಾಳೆ
ಕಾಯಿ ಹೊಂಬಾಳೆ ಗೊನಿಬಾಳೆ | ತೊಮ್ಮಟದುಂಡೆ
ತಾಯಿ ಒರಳೀಗೆ ತಗುದಾರೆ || ಸುವ್ವೇ ಬಾ ||

ಕೊಟ್ಟ ಊರಿಲಿಂದ ಹೋದ ಮಗಳು ಬಂದು
ಎತ್ತೀನ ಮ್ಯಾಲೆ ಸೊಸಿ ಬಂದು | ತಗಿಸ್ಯಾಳೆ
ಬುಟ್ಟರಾಜನವೆಂಬ ಕಣಜಾವ || ಸುವ್ವೇ ಬಾ ||

ಹೋದ ಊರಿಲಿಂದ ಹೋದ ಮಗಳು ಬಂದು
ಹೋರಿಯಾ ಮ್ಯಾಲೆ ಸೊಸಿ ಬಂದು | ತಗಿಸ್ಯಾಳೆ
ಬಾಲರಾಜನವೆಂಬ ಕಣಜಾವ || ಸುವ್ವೇ ಬಾ ||

ಅತ್ತುಕಂಡಗ ಗೋದಿ ಎತ್ತಗ್ಹೇರಿಕೊಂಡು
ಪಟ್ಟಸಾಲ್ಯಾಗಣ್ಣ  ಸುರಿವ್ಯಾನೆ | ವಳಗಾಳ
ಹೆತ್ತಮ್ಮ ಗೋದಿ ಅಳಕಳ್ಳೆ || ಸುವ್ವೇ ಬಾ ||

ಹತ್ತುಕಂಡಗ ಗೋದಿ ಯಾರಿಗಾದವು ಮಗನೆ
ಶೆಟ್ಟೋರೆ ನಾವು ಕನಕಾರು | ಮದುವೀಗೆ
ಸುತ್ತಾಲು ನೆಂಟಾರು ಬರಬೇಕು || ಸುವ್ವೇ ಬಾ ||

ಆರು ಕಂಡಗ ಗೋದಿ ಹೋರಿಗ್ಹೇರಿಕೊಂಡು
ಸ್ವಾಮಸಾಲ್ಯಾಗಣ್ಣ ಸುರಿವ್ಯಾನೆ | ವಳಗಾಳ
ತಾಯಮ್ಮ ಗೋದಿ ಅಳ ಕಳ್ಳೆ || ಸುವ್ವೇ ಬಾ ||

ಆರು ಕಂಡಗ ಗೋದಿ ಯಾರಿಗಾದವು ಮಗನೆ
ರಾಯರೆ ನಾವು ದನಕಾರು | ಮದುವೀಗೆ
ದೂರಾಲ ಬಂಧುಗಳು ಬರಬೇಕು || ಸುವ್ವೇ ಬಾ ||

ತುಪ್ಪಬಾನ ಉಂಡು ಇಪ್ಪತ್ತಿಳ್ಳೆವು ಮೆದ್ದು
ಪಟ್ಟೇದ ಸೀರಿ ಎದಿಗಟ್ಟಿ | ಕಟ್ಟಿಕೊಂಡು
ಎತ್ತಿಬಿಟ್ಟಳು ಜಂತಾದ ವಣಕೀಯ || ಸುವ್ವೇ ಬಾ ||

ಹಾಲು ಬಾನವನುಂಡು ನಲವತ್ತಿಳ್ಳೆವು ಮೆದ್ದು
ಸಾಲ್ಯಾದ ಸೀರಿ ಎದಿಗಟ್ಟಿ | ಕಟ್ಟಿಕೊಂಡು
ತೂಗಿಬಿಟ್ಟಳು ಜಂತಾದ ವಣಕೇಯ || ಸುವ್ವೇ ಬಾ ||

ಆ ಕೈಲಿ ಕುಟ್ಟುತಾ ಈ ಕೈಲಿ ಸಾಸುತ್ತ
ಆಕಾಸಕ ಒಣಿಕೀಡಾಸುತಾ | ಪಾಡೂತ
ಗೋಪಾಲ ಕೃಷ್ಣನಾ ಮಡದೀರು || ಸುವ್ವೇ ಬಾ ||

ಅಂಗೈಲಿ ಕುಟ್ಟುತ ಮುಂಗೈಲಿ ಸಾಸುತ್ತ
ಅಂಬಾರಕ ಒಣಿಕೀಡಾಡುತ್ತಾ | ಪಾಡೂತ
ರಂಗ ಕೃಷ್ಣಯ್ಯನ ಮಡದೀರು || ಸುವ್ವೇ ಬಾ ||

ಅಕ್ಕುಗಳೇಳಾಮಂದಿ ಲೆತ್ತವಾಡುತಾವ
ಕುಪ್ಪಸವ ಕದ್ದ ಸಿರಿಹರಿ | ಗೋಪಿಕಂದ
ಹತ್ತಿದಾ ಸುರಿಹೊನ್ನ ಮರಗಳ || ಸುವ್ವೇ ಬಾ ||

ಸಿರಿಹರಿಯ ದೇವರು ಕೊಡುನಮ್ಮ ಕುಪ್ಪಸವ
ಮಾವ ಬೊಮ್ಮಣ್ಣ ಬೈದಾನೆ | ನನ್ನ ಕುಪ್ಪಸಕ
ಮಾನ್ಹಾಡ ಮುತ್ತು ಬಿಗುದಾವೆ || ಸುವ್ವೇ ಬಾ ||

ತಾಯಿಗಳೇಳಮಂದಿ ದಾಯಾವಾಡಿರುತಾವ
ಸೀರಿಯಾ ಕದ್ದ ಸಿರಿಹರಿ | ಗೋಪಿಕಂದ
ಏರಿದಾರು ಸುರಿಹೊನ್ನು ಮರಗಾಳು || ಸುವ್ವೇ ಬಾ ||

ಸಿರಿಹರಿಯ ದೇವರು ಕೊಡುನಮ್ಮ ಸೀರೀಯ
ಮಾವ ಬೊಮ್ಮಣ್ಣ ಬೈದಾನೆ | ನಮ್ಮ ಸೀರೀಗೆ
ಮನ್ಹಾಡ ಮುತ್ತು ಬಿಗುದಾವೆ || ಸುವ್ವೇ ಬಾ ||

ಅಕ್ಕುಗಳು ಕೊಣಲೂಡಿ ಮಟ್ಟ ಮದ್ಯಾಹ್ನದಾಗ
ಅಕ್ಕ ಕಾಮಯ್ಯ ಕೊಣಲೂಡಿ | ಕೊಣದಾಗ
ಹುತ್ತಾದ ನಾಗ ಮರದೆದ್ದು

ಹುತ್ತಾದನಾಗ ಮರದೆದ್ದು ತನವೀಗೆ
ಉತ್ತಮುರು ಹಾಲು ಎರದಾರ | ಹೊನ್ನಬಂಡಿ
ಮುಕ್ಕಣ್ಣಗ ಕರವ ಮುಗುದಾರೆ || ಸುವ್ವೇ ಬಾ ||

ತಾಯಿಗಳು ಕೊಣಲೂಡಿ ಮಾರ ಮದ್ಯಾಹ್ನದಾಗ
ತಾಯಿ ಕಾಮಯ್ಯ ಕೊಣಲೂಡಿ | ಕೊಣದಾಗ
ಕಾಳಿಂಗ ನಾಗ ಮರದೆದ್ದು | ತನವೀಗೆ
ಮಾರಾಯರಾಲು ಎರುದಾರೆ | ಹೊನ್ನಬಂಡಿ
ರೇವಣ್ಣಗ ಕರವ ಮುಗುದಾರೆ || ಸುವ್ವೇ ಬಾ ||