ಕೃಷ್ಣಗೊಲ್ಲರು ಮೂಲತಃ ಅಡವಿಗೊಲ್ಲರು, ಕಾಡುಗೊಲ್ಲರು. ಕಾಡುಗೊಲ್ಲ ಎಂಬೀ ಪದಕ್ಕೆ ಸಾಮಾಜಿಕ, ಧಾರ್ಮಿಕ ಸ್ಥಾನಮಾನದ ಕೊರತೆಯುಂಟಾದಾಗ ಕಾಡುಗೊಲ್ಲರೇ ಯಾದವ ಕುಲದವರು, ಕೃಷ್ಣನ ಕುಲದವರು, ಕೃಷ್ಣಗೊಲ್ಲರೆಂದು ಕರೆದುಕೊಂಡವರು. ಇದು ಸಂಸ್ಕೃತೀಕರಣದ ಪ್ರತಿಫಲ. ಕಾಡುಗೊಲ್ಲ ಎಂಬ ಪದ ಎರಡು ಭಿನ್ನ ಸಂಸ್ಕೃತಿಗಳ, ಭಾಷಿಗರ ಸಂಗಮದ ಸಂಕೇತ. ಇದು ಕಾಡು ಮತ್ತು ಗೊಲ್ಲ ಎಂಬೆರಡು ಶಬ್ದಗಳ ಜೋಡುನುಡಿ. ‘ಕಾಡು’ ದ್ರಾವಿಡ ಮೂಲದ ಕನ್ನಡಿಗರ ಪದವಾದರೆ ‘ಗೊಲ್ಲ’(ಗೋವಲ) ಸಂಸ್ಕೃತ ಮೂಲದ ಆರ್ಯರ ಪದವಾಗಿದೆ. ಸಂಸ್ಕೃತದ ‘ಗೋವಲ’ ಶಬ್ದದಿಂದ ಕನ್ನಡದ ‘ಗೊಲ್ಲ’ ಶಬ್ದ ರೂಪಗೊಂಡಿರುವುದು. ಕಾಡುಗೊಲ್ಲರು ಕನ್ನಡಿಗರು, ಅವರ ಮಾತೃಭಾಷೆ ಕನ್ನಡ.

ಕಾಡು ಬೇಟೆಗಾರರ ಮತ್ತು ಪಶುಪಾಲಕರ ಮೂಲ ನೆಲೆ. ಪಶುಪಾಲನೆಯ ಮೊದಲು ಎಲ್ಲೆಲ್ಲೊ ಬೇಟೆಗಾರಿಕೆಯೇ ಮಾನವನ ಬದುಕಿನ ಆಧಾರವಾಗಿತ್ತು. ಅಲ್ಲಿ ಕಾಡು ಅವನಿಗೆ ಆಶ್ರಯದಾಣವಾಗಿತ್ತು. ಬೇಟೆ ಬೇಕಾದಾಗಲೆಲ್ಲ ಸರಳವಾಗಿ ಲಭ್ಯವಾಗುವುದು ದುರ್ಲಭವಾಗಿತ್ತು. ಬೇಟೆಗಾಗಿ ಅಲೆಮಾರಿ ಜೀವನ ಅನಿವಾರ್ಯವಾಗಿತ್ತು. ಕಾಡಾಡಿಯಾದ ಆದಿಮಾನವನಿಗೆ ಕಾಡುತ್ಪನ್ನಗಳಾದ ಗೆಡ್ಡೆಗೆಣಸು, ಹಣ್ಣಹಂಪಲು ಭಕ್ಷ್ಯನದ ಸಾಧನಗಳಾಗಿದ್ದವು. ಕಾಡಿನಲ್ಲಿ ನೆಲೆಸಿದ ಪ್ರಾಣಿ-ಪಕ್ಷಿಗಳನ್ನು ಬೇಟೆಯಾಡಿ ಹಸಿಬಿಸಿ ತಿನ್ನಬೇಕಾಗುತ್ತಿತ್ತು. ಗಿಡಮರಗಳ ಪೊಟರೆಯಲ್ಲಿ, ಕಲ್ಲು ಬಂಡೆಗಳ ಮಧ್ಯದಲ್ಲಿ, ಗುಹೆಗಳಲ್ಲಿ ಪ್ರಾಣಿಜೀವನ ಕಳೆಯಬೇಕಾಗಿತ್ತು. ಕ್ರೂರ ಪ್ರಾಣಿಗಳ ಭಯದೊಂದಿಗೆ ಹಸಿವಿನ ಭಯ ಆತನಿಗೆ ಸದಾ ಕಾಡುತ್ತಿತ್ತು. ಈ ಭಯ ಆತಂಕಗಳಿಂದ ಮುಕ್ತಿ ಹೊಂದಲು ಹಾತೊರೆದ. ಕೊನೆಗೂ ಯಶಕಂಡ. ಬೇಟೆಗಾರಿಕೆಯಿಂದ ಪಶುಪಾಲಕನಾದ. ಮಾನವ ಸಾಮಾಜಿಕ ಪ್ರಾಣಿ ಎನಿಸಿಕೊಂಡ. ಹೀಗೆನಿಸಿಕೊಳ್ಳಲು ಸಹಸ್ರಾರು ವರ್ಷ ಕಳೆದ.

ಮೇಕೆ, ಮೇಷಗಳಂತಹ ಸಾಧು ಪ್ರಾಣಿಗಳ ಪಾಲನೆಯಿಂದ ಉಗಮಗೊಂಡ ಪಶುಪಾಲನೆ ಕಾಲಾಂತರದಲ್ಲಿ ದನಕರುಗಳ ಎಮ್ಮೆಕರುಗಳ ಇತ್ಯಾದಿ ಪಶುಗಳ ಪಾಲನೆಗೆ ಮಾನವ ವಿಸ್ತಾರಗೊಳಿಸಿದ. ಇದು ಸಾರ್ವತ್ರಿಕ ಸತ್ಯ. ಬೇಟೆಗಾರಿಕೆಯಲ್ಲಿಯ ಮಾನವರಲ್ಲಿ ಭೇದಭಾವವಿರಲಿಲ್ಲ. ಜಾತಿ ಮತಗಳ ಉಗಮವಾಗಿರಲಿಲ್ಲ. ಪ್ರಕೃತಿಮಯ ಜೀವನ ಅವರದಾಗಿತ್ತು. ಆದರೆ ಪಶುಪಾಲನೆಯ ಹಂತದಲ್ಲಿ ಕಸುಬಾಧಾರಿತ ಜಾತಿಗಳು ಉಗಮಗೊಂಡವು. ಮೇಕೆ, ಮೇಷ ಪಾಲಕರಿಗೆ ಮ್ಯಾಸ(ಮೇಷ)ನಾಯಕರೆಂದು, ದನಗಳ ಪಾಲಕರಿಗೆ ದ(ಧ)ನಗಾರರೆಂದು, ಗೊಲ್ಲರೆಂದು ಹೀಗೆ ಭಿನ್ನ ಪ್ರಾದೇಶಿಕ ನೆಲೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಟ್ಟರು. ಇವರೆಲ್ಲರ ಮೂಲ ಬೇಟೆಗಾರಿಕೆಯೇ. ಅಲ್ಲಿಂದಲೆ ಕವಲೊಡೆಯುತ್ತ ಪಶುಪಾಲಕರಾಗಿ ಆಮೇಲೆ ಕೃಷಿಕರಾಗಿ ಗ್ರಾಮ ಸ್ಥಾಪಿಸಿ ನಾಗರೀಕರಾದರು. ಪಶುಪಾಲನೆಯ ಹಂತ ಬೇಟೆಗಾರಿಕೆಯ ಹಂತಕ್ಕಿಂತಲೂ ಹೆಚ್ಚಿನ ನೆಮ್ಮದಿ ನೀಡಿತು. ಮಾನವ ಭಾಷೆ ಕಲಿತು ಸುಸಂಸ್ಕೃತ ಎನಿಸಿಕೊಳ್ಳುತ್ತ ಮಾನವ ಪ್ರಗತಿಗೆ ಬೇಕಾದುದೆಲ್ಲ ನಿರ್ಮಿಸಿಕೊಳ್ಳತೊಡಗಿದ. ಅವನು ಸರಳ ಬದುಕಿನಿಂದ ಸಂಕೀರ್ಣ ಬದುಕಿನತ್ತ ಸಾಗುತ್ತ ನಿಸರ್ಗದ ಮೇಲೆ ತನ್ನ ಹಕ್ಕು ಸ್ಥಾಪಿಸಿದ.

ಈ ಹಿನ್ನೆಲೆಯಲ್ಲಿ ಕಾಡುಗೊಲ್ಲರು ಸಾಮಾಜೀಕರಣ, ಸಾಂಸ್ಕೃತಿಕರಣಗೊಂಡು ಪಶುಪಾಲನೆ ಹಾಗೂ ಕೃಷಿಯ ನಡುವಣದ ಹಂತದಲ್ಲಿರುವ ಬುಡಕಟ್ಟಾದರು. ಕಾಡಿನ ಮೂಲದ ಸಂಸ್ಕೃತಿಯನ್ನು ತನ್ನೊಡಲಲ್ಲಿ ಪೋಷಿಸಿಕೊಂಡು ನಿಸರ್ಗಮಯವಾಗಿ ಬದುಕುತ್ತಿರುವುದು ಸೋಜಿಗವೆ. ಇಂದಿಗೂ ನಿಸರ್ಗಮಯ ಹೆರಿಗೆ, ಗ್ರಾಮದಿಂದ ದೂರದ ಕಾಡುಗಳಲ್ಲಿ ವಾಸ, ಪಶುಗಳೊಂದಿಗೆ ಅಲೆಯುವಿಕೆ, ಗೆಡ್ಡೆಗೆಣಸುಗಳ ಹಸಿಬಿಸಿ ಸೇವನೆ ಇವೆಲ್ಲ ಕಾಡಿನ ಮೂಲಕ ಸಂಸ್ಕೃತಿಯ ಪ್ರತೀಕವಲ್ಲದೆ ಮತ್ತೇನು ಆಗಿರಲಾರವು. ಇವು ಇಂದಿಗೂ ಅವರಿಗೆ ಸಹಜ. ಆದರೆ ನಾಗರಿಕರೆನ್ನುವವರಿಗೆ ಇವು ಸಂಕೀರ್ಣ ಎನಿಸುವವು. ಅಪ್ಪಟ ಬುಡಕಟ್ಟಿನ ಜೀವನ ಸ್ವರೂಪ ಹೊಂದಿದ್ದ ಈ ಸಮುದಾಯ ಭಾರತದ ಬುಡಕಟ್ಟು ಪಟ್ಟಿಗೆ ಸೇರದೇ ಇರುವುದು ವಿಪರ್ಯಾಸ. ಶೈವ, ವೈಷ್ಣವ ಸಂಪ್ರದಾಯಗಳಿಂದ ತಪ್ಪಿಸಿಕೊಳ್ಳಲಾಗದ ಈ ಸಮುದಾಯ ಬುಡಕಟ್ಟಾಗಿ ಕಾಣದೆ ತಜ್ಞರಿಗೆ ಜಾತಿಯಾಗಿ ಕಂಡಂತಿದೆ. ಒಂದು ವೇಳೆ ತಜ್ಞರು ಈ ಕಾರಣಕ್ಕಾಗಿಯೇ ಕಾಡುಗೊಲ್ಲರನ್ನು ಬುಡಕಟ್ಟು ಪಟ್ಟಿಗೆ ಸೇರಿಸಲಾಗದಿದ್ದರೆ ಈ ನೀತಿ ಭಾರತದ ಇತರೆ ಬುಡಕಟ್ಟುಗಳಿಗೂ ಅನ್ವಯಿಸಬೇಕಾಗಿತ್ತು. ಭಾರತದ ಯಾವ ಬುಡಕಟ್ಟುಗಳಿಗೂ ಶೈವ ವೈಷ್ಣವ ಸಂಪ್ರದಾಯಗಳು ಮುಕ್ತವಾಗಿ ಬಿಟ್ಟಂತಿಲ್ಲ. ಅಷ್ಟೇ ಅಲ್ಲ ಇನ್ನು ಹಲವು ಬುಡಕಟ್ಟುಗಳಿಗೆ ಇಸ್ಲಾಂ, ಕ್ರೈಸ್ತ ಇತ್ಯಾದಿ ಮತಗಳ ಸಂಪ್ರದಾಯಗಳಿಂದ ಮುಕ್ತಿ ಕಾಣಲಾಗುತ್ತಿಲ್ಲ. ಹೀಗಾಗಿ ಬುಡಕಟ್ಟು ಧರ್ಮ ದಿನೇ ದಿನೇ ಗೌಣವಾಗುತ್ತಿರುವುದು ಸಹಜ.

ಎಲ್ಲ ಧರ್ಮಗಳಿಗೆ ಬುಡಕಟ್ಟು ಧರ್ಮವೇ ತಳಹದಿ. ಮಾನವನಲ್ಲಿಯ ಆಗಾಧವಾದ ಬುದ್ಧಿಶಕ್ತಿಯೇ ಈ ಧರ್ಮಗಳ ಉಗಮಕ್ಕೆ ಕಾರಣ. ಕಾಡುಗೊಲ್ಲರು ಬೇಟೆಗಾರಿಕೆ ಮತ್ತು ಕಾಡು ಮೂಲದಿಂದ ಕವಲೊಡೆದು ಪಶುಪಾಲನೆಗೆ ಕೂಡಿಕೊಂಡ ಒಂದು ಬುಡಕಟ್ಟು, ಪಶುಪಾಲನೆಯಲ್ಲಿ ಮೂಲತಃ ಮೇಷಾಪಾಲಕರಾಗಿ ಆಮೇಲೆ ದನಗಾಹಿಗಳಾಗಿರಲು ಸಾಧ್ಯ, ಇಂದಿಗೂ ಇವರಲ್ಲಿ ಮೇಷ, ಮೇಕೆಗಳಿಗೆ ವಿಶೇಷ ಸ್ಥಾನವುಂಟು. ಇವರ ಹಬ್ಬ, ಹರಿದಿನ, ಜಾತ್ರೆ ಇತ್ಯಾದಿ ಆಚರಣೆಗಳಲ್ಲಿ ಜನ್ನಿಗೆ ಕುರಿಯು ಮಹತ್ವದ ಪಾತ್ರವಹಿಸುತ್ತದೆ. ಪಶುಪಾಲನೆಯಲ್ಲಿ ಮೇಷ(ಕುರಿ) ಅಥವಾ ಮೇಕೆ ಪಾಲನೆಯೇ ಮೊದಲೆಂಬುದನ್ನು ರಾಶಿ ಚಕ್ರದ ಪ್ರಥಮ ‘ಮೇಷ’ ರಾಶಿಯು ಹಾಗೂ ಆಮೇಲೆ ದನಕರುಗಳ ಪಾಲನೆಯು ಎಂಬುದಕ್ಕೆ ರಾಶಿ ಚಕ್ರದ ದ್ವಿತೀಯ ‘ವೃಷಭ ರಾಶಿ’ಯು ಸಾಬೀತು ಪಡಿಸುವುದು. ಹೀಗಾಗಿ ಕಾಡುಗೊಲ್ಲರು ಬೇಡರಿಂದ ಕುರುಬರಾಗಿ ಗೊಲ್ಲರಾದಂತಾಯಿತು.

ಯಾವುದೇ ಒಂದು ಸಮುದಾಯ ಬಹುಕಾಲದವರೆಗೆ ಒಂದೇ ಕಸುಬಿನಲ್ಲಿ ಸ್ಥಗಿತಗೊಂಡಾಗ ಆ ಕಸುಬಿನ ಹೆಸರಿನಿಂದಲೆ ಆ ಸಮುದಾಯವನ್ನು ಗುರುತಿಸಿ ಕರೆಯುವುದು ಲೋಕರೂಢಿಯಾಗಿತ್ತು. ಈ ರೂಢಿ ಭಾರತದಲ್ಲಿ ನೂರಾರು ಕಸುಬಾಧಾರಿತ ಜಾತಿಗಳ ಸೃಷ್ಟಿಗೆ ಕಾರಣವಾಯಿತು. ಸಮಾಜ ಚಲನಶೀಲವಾಗಿರುವುದರಿಂದ ಕಸುಬಾಧಾರಿತ ಜಾತಿಗಳು ವೃದ್ಧಿಗೊಂಡವು. ಆದರೆ ಇಂದು ಕಸುಬಾಧಾರಿತ ಜಾತಿಗಳನ್ನು ಪರಿಚಯಿಸುವುದು ಕಷ್ಟ ಸಾಧ್ಯ. ಕಾರಣ ಬೇಡರು ಬೇಡರಾಗಿರದೆ ಅವರು ಪಶುಪಾಲಕರೂ, ಕೃಷಿಕರೂ ಆಗಿರುವರು. ಕುರುಬರು ಕುರುಬರಾಗಿರದೆ ದನಗಾಹಿಗಳೂ, ಕೃಷಿಕರೂ ಆಗಿರುವೆರು. ಗೊಲ್ಲರು ಗೊಲ್ಲರಾಗಿರದೆ, ಮೇಷಪಾಲಕರೂ, ಕೃಷಿಕರೂ ಆಗಿರುವರು. ಅಷ್ಟೇ ಅಲ್ಲ ಅವರಲ್ಲಿ ವಿದ್ಯಾವಂತರಾದವರು ಸಾರ್ವಜನಿಕ ಸೇವೆಗಳಲ್ಲಿದ್ದಾರೆ. ಇಂದು ಅವರನ್ನು ಕಳ್ಳುಬಳ್ಳಿ ಆಧಾರಿತ ಸಾಮಾಜಿಕ ಸಂಘಟನೆಯಿಂದ ಹಾಗೂ ಅವರು ಆಚರಿಸುವ ಆಚರಣೆಗಳಿಂದ ಪರಿಚಯಿಸಬಹುದಾಗಿದೆ.

ಬೇಡರು, ಕುರುಬರು, ಗೊಲ್ಲರು ಎಲ್ಲರೂ ಕಾಡಿನ ಮೂಲದವರೆ. ಒಂದೇ ಮರದ ಟೊಂಗೆಗಳಿದ್ದಂತೆ. ಎಲ್ಲರೂ ಸರ್ವಚೇತನಾವಾದಿಗಳೆ. ಭಂಡಾರ, ಬೇವು, ಪ್ರಾಣಿ ಪಕ್ಷಿ, ಗಿಡಮರ, ಸೂರ್ಯಚಂದ್ರರ ಆರಾಧಕರೆ, ಇವರೆಲ್ಲರಲ್ಲಿ ಇವುಗಳಾಧಾರಿತ ಬಳ್ಳಿಗಳು, ಕುಲಗಳು, ಬೆಡಗುಗಳು ಕಾಣುವುದು ಸಹಜ. “ಕಾಡುಗೊಲ್ಲರಿಗೆ ಬೇಡರು, ಕುರುಬರು ಮತ್ತು ಕುಂಚಟಿಗರೊಡನೆ ಬಳಕೆ ಹೆಚ್ಚು” ಎಂಬೀ ತೀ.ನಂ. ಶಂಕರನಾರಾಯಣರವರ ಮಾತು ಈ ವಾದಕ್ಕೆ ಪುಷ್ಠಿ ನೀಡುವುದು ಸಹಜ. ಪ್ರೊ. ಎಂ.ಬಿ.ನೇಗಿನಹಾಳರ ಉತ್ಕೃಷ್ಟ ಅಧ್ಯಯನದ ಪ್ರಕಾರ “ಕಾಡುಗೊಲ್ಲರ ಸಾಂಸ್ಕೃತಿಕ ವೀರ ಜುಂಜಪ್ಪ ಒಬ್ಬ ಉಪದೈವ”. ಮೈಲಾರಲಿಂಗ ಕುರುಬರ ಸಾಂಸ್ಕೃತಿಕ ವೀರ, ಆರಾಧ್ಯದೈವ, ಮೇಕೆ, ಮೇಷಗಳ ರಕ್ಷಕ. ಹೇಗೆ ಮೈಲಾರ ಮತ್ತು ಜುಂಜಪ್ಪ ದೈವಗಳು ಕಳ್ಳುಬಳ್ಳಿಯ ದೈವಗಳೋ ಹಾಗೆಯೇ ಕುರುಬರು ಮತ್ತು ಕಾಡುಗೊಲ್ಲರು ಕಳ್ಳುಬಳ್ಳಿಯ ಸಂಬಂಧಿ ಬುಡಕಟ್ಟಿನವರೆ ಆಗಿರುವರು. ಆದರೆ ಕಾಲಾಂತರದಲ್ಲಿ ಭಿನ್ನ ಪಶುಗಳ ಪಾಲನೆಯಿಂದಾಗಿ, ಭಿನ್ನ ಭೌಗೋಳಿಕ ನೆಲಗಳಲ್ಲಿಯ ವಾಸದಿಂದಾಗಿ ಮತ್ತು ವೃತ್ತಿಯ ಸಂಕೀರ್ಣತೆಯಿಂದಾಗಿ ಪರಸ್ಪರ ರಕ್ತ ಸಂಬಂಧದ ನಿಲುಗಡೆಯಿಂದಾಗಿ ಸ್ವತಂತ್ರ ಬುಡಕಟ್ಟುಗಳಾಗಿ ರೂಪಗೊಂಡು ಹಲವಾರು ಹೆಸರುಗಳಿಂದ ಕರೆಯಲ್ಪಟ್ಟವು.

“ಕಾಡುಗೊಲ್ಲರನ್ನು ‘ಅಡವಿಗೊಲ್ಲರು’, ‘ಕರಡಿಗೊಲ್ಲರು’, ‘ಕಲ್ಲಿಗೊಲ್ಲರು’, ‘ಹಟ್ಟಿಗೊಲ್ಲರು’, ‘ಪೆದ್ದಟ್ಟಿಗೊಲ್ಲರು’ ಎಂಬೀ ಹೆಸರುಗಳಿಂದಲೂ ಕರೆಯುವ ವಾಡಿಕೆಯಿದೆ. ಅಡವಿ ಎಂದರೆ ಕಾಡು ; ಅಡವಿಗೊಲ್ಲರೆಂದರೆ ಕಾಡುಗೊಲ್ಲರೆಂದೇ ಅರ್ಥವಾಗುತ್ತದೆ. ಕರಡಿಗೊಲ್ಲರು ಎಂಬುದು ಕಾಡುಗೊಲ್ಲರ ಒಂದು ಪ್ರಮುಖವಾದ ಪ್ರಭೇದ. ಆದರೆ ಕೆಲವು ಪ್ರದೇಶಗಳಲ್ಲಿ ಅಂದರೆ ಪಾವುಗಡ, ಕೂಡ್ಲಿಗಿ ತಾಲೂಕುಗಳಲ್ಲಿ ಕಾಡುಗೊಲ್ಲರನ್ನು ಕರಡಿಗೊಲ್ಲರೆಂದೇ ಕರೆಯುವ ವಾಡಿಕೆ ಇದೆ. ಕಾಡುಗೊಲ್ಲರು ಊರಿನಿಂದ ಹೊರಗೆ ಪ್ರತ್ಯೇಕವಾದ ಹಟ್ಟಿಗಳನ್ನು ಕಟ್ಟಿಕೊಂಡು ವಾಸಮಾಡುವುದರಿಂದ ಅವರನ್ನು ಹಟ್ಟಿಗೊಲ್ಲರೆಂದು ಕರೆಯುವ ವಾಡಿಕೆಯೂ ಇದೆ. ಹಟ್ಟಿಗಳ ಸುತ್ತ ಕಳ್ಳಿಯನ್ನು ಹಾಕುವುದರಿಂದ ಕಾಡುಗೊಲ್ಲರನ್ನು ‘ಕಳ್ಳಿಗೊಲ್ಲರು’ ಎಂದು ಕರೆಯುವ ವಾಡಿಕೆಯೂ ಇದೆ” ಎಂದು ಹೆಚ್‌.ವಿ.ನಂಜುಡಯ್ಯ ಮತ್ತು ಎಲ್‌.ಕೆ.ಅನಂತಕೃಷ್ಣ ಅಯ್ಯರ್ ಅವರು ಸೂಚಿಸಿದ್ದಾರೆ. ‘ಕಳ್ಳಿ’ ಪದವು ‘ಕಳ್ಳು’ ಪದದಿಂದ ರೂಪಾಂತರವಾಗಿರುವ ಸಾಧ್ಯತೆಗಳಿವೆ. ‘ಕಳ್ಳು’ ಎಂದರೆ ಹಾಲು ಎಂದರ್ಥ. ಕಾಡುಗೊಲ್ಲರು ಪಶುಗಳಿಂದ ಹಾಲು ಉತ್ಪಾದಿಸುವವರು. ಹೀಗಾಗಿ ಕಳ್ಳುಗೊಲ್ಲರೆಂದರೆ ಹಾಲುಮತಸ್ಥರೆಂದರ್ಥ. ಆ ಕಾರಣಕ್ಕಾಗಿಯೇ ಅವರು ತಾವು ಯಾದವ ಕುಲದವರು, ಕೃಷ್ಣನ ಕುಲದವರು ಮತ್ತು ಕೃಷ್ಣಗೊಲ್ಲರೆಂದು ಹೇಳಿಕೊಳ್ಳುವರು. ಕೃಷ್ಣಗೊಲ್ಲ ಎಂಬೀ ಹೆಸರು ಅವರಿಗೆ ಗೌರವ ಸೂಚಕ ಪದವಾಗಿರುವುದು. ಆ ಕಾರಣಕ್ಕಾಗಿಯೇ ಈ ಕಥನಕಾವ್ಯಕ್ಕೆ ‘ಕೃಷ್ಣಗೊಲ್ಲರ ಕಥನ ಕಾವ್ಯಗಳು’ ಎಂಬ ಶೀರ್ಷಿಕೆ ನೀಡಲಾಗಿದೆ.

ಮಧ್ಯ ಕರ್ನಾಟಕದಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ದಟ್ಟವಾಗಿ ಉಳಿಸಿಕೊಂಡು ಬಂದ ಜನಾಂಗಗಳಲ್ಲಿ ಕಾಡುಗೊಲ್ಲ (ಕೃಷ್ಣಗೊಲ್ಲ)ರು ಮುಖ್ಯರು. ಊರುಗೊಲ್ಲರು ಕಾಡುಗೊಲ್ಲರು ಎಂದು ಗೊಲ್ಲರಲ್ಲಿ ಎರಡು ಬಗೆ. ತುಮಕೂರು, ಚಿತ್ರದುರ್ಗ, ಬೆಂಗಳೂರು, ಕೋಲಾರ ಜಿಲ್ಲೆಗಳಲ್ಲಿ ಕಾಡುಗೊಲ್ಲರು ಹೆಚ್ಚಾಗಿ ಕಾಣಬರುತ್ತಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ತುಮಕೂರು ಜಿಲ್ಲೆಯ ಶಿರಾ ಮಧುಗಿರಿ, ಗುಬ್ಬಿ ತಾಲೂಕುಗಳಲ್ಲಿ ಕಾಡುಗೊಲ್ಲ ಬುಡಕಟ್ಟು ಅಧಿಕವಾಗಿ ಕಂಡು ಬರುತ್ತದೆ. ಬಳ್ಳಾರಿ ಜಿಲ್ಲೆಯ ದಕ್ಷಿಣ ಭಾಗದಿಂದ, ಮಂಡ್ಯ ಜಿಲ್ಲೆಯ ಉತ್ತರದ ನಾಗಮಂಗಲದ ಗಡಿಯವರೆಗೆ ಇವರು ವ್ಯಾಪಿಸಿದ್ದಾರೆ. ಚಿತ್ರದುರ್ಗ ತುಮಕೂರು ಜಿಲ್ಲೆಗಳಲ್ಲಿ ಇವರ ಸಾಂಸ್ಕೃತಿಕ ಕೇಂದ್ರಗಳಿವೆ.

ಕಾಡುಗೊಲ್ಲರು ನಾಗರಿಕರಿಂದ ದೂರವಾದ ಗ್ರಾಮಾಂತರ ಪ್ರದೇಶಗಳಲ್ಲಿ ಗುಡ್ಡಗಾಡುಗಳಲ್ಲಿ ವಾಸಮಾಡುವ ಜನ. ಮೂಲ ಸಂಸ್ಕೃತಿ ಇವರಲ್ಲಿ ಇಂದಿಗೂ ನಿಚ್ಚಳವಾಗಿ ಉಳಿದು ಬಂದಿದೆ. ಕಾಡುಗೊಲ್ಲರಲ್ಲಿ ಉಪವರ್ಗಗಳನ್ನು ಬೆಡಗುಗಳೆಂದು ಕರೆಯುತ್ತಾರೆ ಚಿತ್ತಮುತ್ತಿ ಕುಲದವರು, ಚಂದಮುತ್ತಿ ಕುಲದವರು, ರಾಮೇಗೌಡನ ಕುಲದವರು ಎಂಬ ಮುಖ್ಯವಾದ ವಿಭಾಗಗಳಿವೆ. ಇವುಗಳಲ್ಲಿ ಒಂದೊಂದು ಕುಲದಲ್ಲಿಯೂ ಕೆಲವಾರು ಬೆಡಗುಗಳಿವೆ. ಚಿತ್ತಮುತ್ತಿ ಕುಲದವರಲ್ಲಿ ಕರಡಿಗೊಲ್ಲರು, ಮಾರನವರ ಗೊಲ್ಲರೆಂಬ ಬೆಡಗುಗಳಿದ್ದರೆ, ಚಂದಮುತ್ತಿ ಕುಲದವರಲ್ಲಿ ಅಜ್ಜಿ ಗೊಲ್ಲರು, ಸನ್ನರ ಗೊಲ್ಲರು, ಸೋಮನವರ ಗೊಲ್ಲರು, ಬೊಮ್ಮನವರ ಗೊಲ್ಲರು ಕೋಣನವರ ಗೊಲ್ಲರು, ಪೋಲನವರ ಗೊಲ್ಲರು, ಎಗಡಿನವರ ಗೊಲ್ಲರು, ಅರಿಸಿನಕಲ್ಲಿ ಗೊಲ್ಲರು ಎಂಬ ಬೆಡಗುಗಳಿವೆ. ಮತ್ತು ರಾಮೇಗೌಡನ ಕುಲದವರಲ್ಲಿ ಅರೇನವರ ಗೊಲ್ಲರು, ಮೇರೆನವರ ಗೊಲ್ಲರು, ಕಂಬಿಯವರ ಗೊಲ್ಲರು, ಕಹಳೆಯವರ ಗೊಲ್ಲರು, ಒಡೆಯವರ ಗೊಲ್ಲರು, ಒನಕೆಯವರ ಗೊಲ್ಲರು, ಮಾಸಿನವರ ಗೊಲ್ಲರು, ಚೀರವರ ಗೊಲ್ಲರು, ಬೆಳ್ಳೋರ ಗೊಲ್ಲರು, ಬೆಳ್ಳೂರವರ ಗೊಲ್ಲರು ಎಂಬ ಬಳಿಗಳಿವೆ. ಈ ಬಳಿಗಳು ಕರಡಿ, ಕೊಡ, ಚಂದ್ರ, ಅಜ(ಆಡು, ಮೇಕೆ)ಕೋಣ, ಅರಿಸಿನ, ಆರೆಗಿಡ, ಕಹಳೆ, ಒನಕೆ ಇತ್ಯಾದಿಗಳು ಪ್ರಾಣಿ, ಗಿಡಮರ, ವಸ್ತುಗಳನ್ನು ಪ್ರತಿನಿಧಿಸುತ್ತವೆ. ಸ್ವಬಳಿಗಳಲ್ಲಿ ವಿವಾಹ ನಿಷೇಧವಿದ್ದು ಬೆಸಬಳಿಗಳಲ್ಲಿ ವಿವಾಹ ಮಾನ್ಯವಿದ್ದುದರಿಂದ ಸ್ವಬಳಿದವರಲ್ಲಿ ಅಣ್ಣತಮ್ಮಂದಿರೆಂಬ ಹಾಗೂ ಬೆಸಬಳಿದವರಲ್ಲಿ ನೆಂಟರೆಂಬ ಭಾವನೆ ಇರುವುದರಿಂದ ಇವರ ಸಮಾಜಿಕ ಸಂಘಟನೆ ಬಿಗಿಯಾಗಿದೆ.

ಕಾಡುಗೊಲ್ಲರನ್ನು ಕುರಿತ ಅಧ್ಯಯನಗಳು ಈವರೆಗೆ ಆಗಿರುವವು ಕಡಿಮೆಯೆ. ೧೮೮೮ರಲ್ಲಿ ಮುಂಬೈಯಿಂದ ಪ್ರಕಟವಾಗುತ್ತಿದ್ದ The Journal of Anthropological Society ಎಂಬ ಪತ್ರಿಕೆಯ ಮೊದಲ ಸಂಪುಟದಲ್ಲಿ ಕಾಡುಗೊಲ್ಲರನ್ನು ಕುರಿತಂತೆ ಒಂದು ಲೇಖನ ಪ್ರಕಟವಾಯಿತು. ೧೮೯೧ರಲ್ಲಿ ಮದ್ರಾಸ್ ಸರ್ಕಾರದ ಜನಗಣತಿಯಲ್ಲಿ ಕಾಡುಗೊಲ್ಲರ ಪ್ರಸ್ತಾಪವಿದ್ದು ಅವರ ಜೀವನದ ಸ್ಥತಿಗತಿಗಳು ಸಮರ್ಪಕವಿಲ್ಲವೆಂದು ಹೇಳಲಾಗಿದೆ. ಈ ಕಾರಣಕ್ಕಾಗಿ ೧೯೦೧ರಲ್ಲಿ ಮೈಸೂರು ಸರ್ಕಾರ ಗೊಲ್ಲರನ್ನು ಊರುಗೊಲ್ಲ ಮತ್ತು ಕಾಡುಗೊಲ್ಲ ಎಂದು ಪ್ರತ್ಯೇಕಿಸಿತು. ೧೯೦೮ರಲ್ಲಿ ಪ್ರಕಟವಾದ The Ethnographical Survey of Mysoreದಲ್ಲಿ ಕಾಡುಗೊಲ್ಲರನ್ನು ಕುರಿತು ಹೆಚ್.ವಿ.ನಂಜುಂಡಯ್ಯನವರು ಬರೆದ ೧೪ ಪುಟಗಳ ಲೇಖನ ಪ್ರಕಟವಾಯಿತು. ೧೯೦೯ರಲ್ಲಿ ಪ್ರಕಟವಾದ ಎಡ್ಗರ್ ಥರ್ಸ್ಸಟನ್ ಮತ್ತು ಕೆ.ರಂಗಾಚಾರಿಯವರ Castes and Tribes of South Indiaದ ಎರಡನೇ ಸಂಪುಟದಲ್ಲಿ ಕಾಡುಗೊಲ್ಲರ ಬಗ್ಗೆ ಪುಟ್ಟ ಲೇಖನ ಪ್ರಕಟವಾಯಿತು. ೧೯೩೦ರಲ್ಲಿ ಪ್ರಕಟವಾದ ಕರ್ನಾಟಕದ ಜಾತಿ ಮತ್ತು ಬುಡಕಟ್ಟುಗಳ ಸಂಪುಟದಲ್ಲಿ ಅದರ ಸಂಪಾದಕರಾದ ಎನ್.ಕೆ.ಅನಂತ ಕೃಷ್ಣ ಅಯ್ಯರ್ ಮತ್ತು ಹೆಚ್.ವಿ. ನಂಜುಡಯ್ಯ ಅವರು ಕಾಡುಗೊಲ್ಲರನ್ನು ಕುರಿತು ಒಂದು ಪ್ರಬಂಧ ರೂಪದ ಲೇಖನ ಪ್ರಕಟಿಸಿದ್ದಾರೆ. ೧೯೭೩ರಲ್ಲಿ ತೀ.ನಂ.ಶಂಕರನಾರಾಯಣ ಅವರು ಚಿತ್ರದುರ್ಗ ಬಯಲಿನ ಕಾಡುಗೊಲ್ಲರನ್ನು ಕುರಿತು ಒಂದು ಮಹಾಪ್ರಬಂಧ ರಚಿಸಿದ್ದು ಅದು ಮೈಸೂರು ವಿಶ್ವವಿದ್ಯಾನಿಲಯದಿಂದ ೧೯೮೨ರಲ್ಲಿ ಪ್ರಕಟಗೊಂಡಿತು. ಕಾಡುಗೊಲ್ಲರ ಜನಪದ ಗೀತೆಗಳ ಸಂಪಾದನೆಯನ್ನು ಎ.ಹಿರಿಯಣ್ಣ ಅವರು ಮಾಡಿರುವುದು ೧೯೭೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿತು. ಜೀ.ಶಂ.ಪರಮಶಿವಯ್ಯ ಅವರ ಸಂಶೋಧನೆಯ ಪ್ರತಿಫಲವಾಗಿ ದಕ್ಷಿಣ ಕರ್ನಾಟಕದ ಜನಪದ ಕಾವ್ಯಪ್ರಕಾರಗಳು ಎಂಬೀ ಪುಸ್ತಕ ೧೯೭೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡಿತು. ಇದರಲ್ಲಿ ‘ಕಾಡುಗೊಲ್ಲರ ಜುಂಜಪ್ಪನ ಸಂಪ್ರದಾಯ’ ಎಂಬ ಲೇಖನ ಉಪಯುಕ್ತ ಮಾಹಿತಿ ನೀಡಿತು. ಕಾಳೆಗೌಡ ನಾಗವಾರರವರು ‘ಕಾಡುಗೊಲ್ಲರ ಜಾನಪದ–ಒಂದು ಅಧ್ಯಯನ’ ಎಂಬೀ ವಿಷಯದ ಮೇಲೆ ಪಿಹೆಚ್‌.ಡಿ. ಅಧ್ಯಯನ ಕೈಗೊಂಡು ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಪ್ರಬಂಧ ೧೯೮೪ರಲ್ಲಿ ಸಲ್ಲಿಸಿರುವರು. ೧೯೮೮ರಲ್ಲಿ ಬಿ.ವಿ.ನಾಗರಾಜು ಅವರ ‘ಗೊಲ್ಲರ ಹಟ್ಟಿ’ ಎಂಬ ಪುಸ್ತಕ ಪ್ರಕಟಗೊಂಡಿತು. ಇದರಲ್ಲಿ ಕಾಡುಗೊಲ್ಲರ ಮೂಢನಂಬಿಕೆಗಳನ್ನು ಅನಾವರಣಗೊಳಿಸಲಾಗಿದೆ. ಕಾಡುಗೊಲ್ಲರ ಸಾಂಸ್ಕೃತಿಕ ನಾಯಕರಾದ ಎತ್ತಪ್ಪ ಜುಂಜಪ್ಪರ ಮೇಲೆ ಒಂದು ಪಿಹೆಚ್‌.ಡಿ. ಅಧ್ಯಯನವನ್ನು ಮೀರಾಸಾಬಿಹಳ್ಳಿ ಶಿವಣ್ಣನವರು ನಡೆಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಯೋಜನೆಯಡಿಯಲ್ಲಿ ಚೆಲುವರಾಜು ಅವರು ಸಂಪಾದಿಸಿದ ಜುಂಜಪ್ಪನ ಕಾವ್ಯ ಹಾಗೂ ನಾನು ಸಂಪಾದಿಸಿದ ಕೃಷ್ಣಗೊಲ್ಲರ ಕಾವ್ಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೭ರಲ್ಲಿ ಪ್ರಕಟಿಸಿದೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಪ್ರಕಟಿಸಿದ ‘ಕರ್ನಾಟಕ ಬುಡಕಟ್ಟುಗಳು’ ಎಂಬೀ ಮಾಲೆಯ ಸಂಪುಟ ಒಂದರಲ್ಲಿ ಕೃಷ್ಣಮೂರ್ತಿ ಹನೂರ ಅವರ ‘ಕಾಡುಗೊಲ್ಲರು’ ಎಂಬೀ ಲೇಖನ ೧೯೯೮ರಲ್ಲಿ ಪ್ರಕಟಗೊಂಡಿದೆ. ಅವರ ‘ಜನಪದ ಮತ್ತು ಬುಡಕಟ್ಟು’ ಗೀತೆಗಳು ಎಂಬೀ ಪುಸ್ತಕ ೧೯೯೮ರಲ್ಲಿ ಕಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಅದರಲ್ಲಿ ಅವರು ಸುದೀರ್ಘವಾಗಿ ಕಾಡುಗೊಲ್ಲರ ಗೀತೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ೧೯೯೯ರಲ್ಲಿ ಪ್ರಕಟಿಸಿದ ಎಂ.ಬಿ. ನೇಗಿನಹಾಳರ ಸಂಶೋಧನಾತ್ಮಕ ಪ್ರಬಂಧಗಳಲ್ಲಿ ಜುಂಜಪ್ಪನ ಲೇಖನಗಳು ಪ್ರಕಟಗೊಂಡಿವೆ. ಯುಗಾದಿ ವಿಶೇಷಾಂಕ ೧೯೯೯ರ ಸುಧಾದಲ್ಲಿ ಮೀರಾಸಾಬಿಹಳ್ಳಿ ಶಿವಣ್ಣ ಅವರ ಲೇಖನ ‘ಕಾಡುಗೊಲ್ಲರ ಜಾನಪದ’ ಪ್ರಕಟಗೊಂಡಿದೆ.

ಇದುವರೆಗೂ ಪ್ರಕಟಗೊಂಡ ಮೇಲ್ಕಂಡ ಲೇಖನಗಳು, ಪುಸ್ತಕಗಳು, ಅಧ್ಯಯನಗಳು ಕಾಡುಗೊಲ್ಲರ ಬದುಕಿನ ಮೇಲೆ ತಕ್ಕಮಟ್ಟಿನ ಬೆಳಕು ಚೆಲ್ಲುವಲ್ಲಿ ಸಫಲವಾಗಿವೆ. ಆದರೆ ಕಾಡುಗೊಲ್ಲರ ಸಿರಿಯಜ್ಜಿಯಂತಹವರಲ್ಲಿದ್ದ ಜಾನಪದ ಸಂಪತ್ತು ಸಂಪೂರ್ಣವಾಗಿ ಸೆರೆಹಿಡಿಯುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಸಾಮಾಜಿಕ ಆರ್ಥಿಕ ಹಾಗೂ ಸಂಶೋಧನಾತ್ಮಕ ಅಧ್ಯಯನಗಳು ಕಾಡುಗೊಲ್ಲರ ಮೇಲೆ ಇನ್ನೂ ಆಗಬೇಕಾಗಿವೆ.

ಬೆಟ್ಟಗಾಡುಗಳು, ಹುಲ್ಲುಗಾವಲುಗಳು ಹೆಚ್ಚಾಗಿರುವ ಬಯಲು ಸೀಮೆಯಲ್ಲಿ ಕಾಡುಗೊಲ್ಲರು ಸಾವಿರಾರು ವರ್ಷಗಳಿಂದ ಪಶುಪಾಲನೆಯನ್ನು ಅವಲಂಬಿಸಿ ಜೀವಿಸುತ್ತಾ ಬಂದಿದ್ದಾರೆ. ಇವರನ್ನು ಅಲೆಮಾರಿಗಳೆಂದು ಭಾವಿಸಲಾಗಿದೆ. ಇವರು ಅಲ್ಲಲ್ಲಿ ಹಟ್ಟಿಗಳನ್ನು ಕಟ್ಟಿ, ದೈವಗಳನ್ನು ಸ್ಥಾಪಿಸಿ ಒಂದೆಡೆ ನೆಲೆ ನಿಂತವರೇ ಹೊರತು ಅಲೆಮಾರಿಗಳಲ್ಲ. ಕಾಡುಗೊಲ್ಲರ ಪುರಾಣ ಹಾಗೂ ಜಾನಪದ ಕಾವ್ಯಗಳನ್ನು ಪರಿಶೀಲಿಸಿದರೆ ಇವರಲ್ಲಿ ಗಂಡಸರು ದನಗಳ ಹಿಂಡುಗಳೊಡನೆ ಮೇವು-ನೀರುಗಳನ್ನು ಅರಸುತ್ತ ಕಾವಲಿನಿಂದ ಕಾವಲಿಗೆ, ತಪ್ಪಲಿನಿಂದ ತಪ್ಪಲಿಗೆ, ಕಾಡಿನಿಂದ ಕಾಡಿಗೆ ಅನೇಕ ದಿನಗಳವರೆಗೆ ತಮ್ಮ ನೆಲೆಗಳನ್ನು ಬಿಟ್ಟುಹೋಗುತ್ತಿದ್ದಂತೆ ತೋರುತ್ತದೆ. ಅವರ ವೃತ್ತಿಯ ಹಿನ್ನಲೆಯಲ್ಲಿ ಇದು ಅನಿವಾರ್ಯ. ಇಷ್ಟರಿಂದಲೇ ಇವರನ್ನು ಪೂರ್ಣ ಅಲೆಮಾರಿಗಳೆಂದು ತೀರ್ಮಾನಿಸಲು ಸಾಧ್ಯವಾಗುವುದಿಲ್ಲ.

ಕಾಡುಗೊಲ್ಲರು ಕಾಡುಗಳಲ್ಲಿ ವಾಸಿಸುತ್ತಿದ್ದವರು. ಕಣಿವೆಗಳಲ್ಲಿ ಅಲೆಯುತ್ತಿದ್ದವರು. ಗೋವುಗಳ ನಡುವೆ ವಾಸಿಸುತ್ತಿದ್ದ ಇವರು ಗೋವುಗಳ ಬಗ್ಗೆ ಅತೀವವಾದ ಕಾಳಜಿ ವಹಿಸುತ್ತಿದ್ದವರು. ರೋಗ ರುಜಿನಗಳಿಂದ ತಮ್ಮ ಗೋವುಗಳೂ ತಾವು ಪಾರಾಗುವ ದೃಷ್ಟಿಯಿಂದ ಮೇವು ನೀರುಗಳ ದೃಷ್ಟಿಯಿಂದ ಇಂಥ ಅಡವಿಯ ಬದುಕು ಅವರಿಗೆ ಅಗತ್ಯವಾಗಿತ್ತು. ಇವರಲ್ಲಿ ದೈವ ಶ್ರದ್ಧೆ, ಧಾರ್ಮಿಕ ಶ್ರದ್ಧೆ ಹೆಚ್ಚು. ವಿಧಿನಿಷೇಧಗಳು ಹೇರಳ. ತಮ್ಮ ಹಟ್ಟಿಯ ಸುತ್ತಲೂ ಬಲವಾದ ‘ಕಳ್ಳಿ’ಯ ಬೇಲಿಯನ್ನು ಹಾಕಿ, ನಡುವೆ ದೇವರ ಗುಬ್ಬವನ್ನು ಕಟ್ಟಿಕೊಂಡು ವಾಸಿಸುವಾಗ ಹೊರಗಿನವರಿಗೆ ನಿರ್ಬಂಧಗಳು ಹೆಚ್ಚು ಅವರಲ್ಲಿಯೇ ಸತ್ತು ಕೆಟ್ಟವರ ಬಗ್ಗೆ ಸೂತಕಾದಿಗಳ ಬಗ್ಗೆ ಅವರು ಅನುಸರಿಸುವ ಕಟ್ಟುಪಾಡುಗಳು ಅತ್ಯಂತ ಬಿಗಿಯಾದವು. ಇವರಂತೆಯೇ ಕಾಡುಗಳಲ್ಲಿ ನೆಲೆಸಿ ಬೇಟೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದ ಬೇಡರಿಗೂ ಕಾಡುಗೊಲ್ಲರಿಗೂ ಆಗಾಗ ವಿರಸಗಳು ಏರ್ಪಡುತ್ತಿದ್ದವು. ಘರ್ಷಣೆಗಳು ಸಂಭವಿಸುತ್ತಿದ್ದವು. ಇಂಥ ಹಿನ್ನೆಲೆಯಲ್ಲಿ ಕಾಡುಗೊಲ್ಲರು ತಮ್ಮ ರಕ್ಷಣೆಗೆ, ಹೆಂಗಸರು ಮಕ್ಕಳ ರಕ್ಷಣೆಗೆ, ಮುಖ್ಯವಾಗಿ ಗೋವುಗಳ ರಕ್ಷಣೆಗೆ ತಾವು ಸಹ ಬೇಡರಂತೆಯೇ ಶಸ್ತ್ರಾಸ್ತ್ರಗಳನ್ನು ಬಳಸಿ ಹೋರಾಡಬಲ್ಲ ಕಟ್ಟಾಳುಗಳಾಗಬೇಕಾಗಿತ್ತು. ಕಾಡುಗೊಲ್ಲರ ಅನೇಕ ವೀರರು ಈ ರೀತಿ ಹೋರಾಡಿ ತಮ್ಮದೇ ಆದ ಚರಿತ್ರೆಯನ್ನು ಸ್ಥಾಪಿಸಿದ ವಿಷಯವನ್ನು ಕಾಡುಗೊಲ್ಲರ ಕಾವ್ಯಗಳು ಚಿತ್ರಿಸುತ್ತವೆ.

ಶೈವ, ವೈಷ್ಣವ ಮೂಲಗಳೆರಡು ಕಾಡುಗೊಲ್ಲರಲ್ಲಿ ಕಂಡುಬರುತ್ತವೆ. ಶೈವದ ಪ್ರಭಾವವೇ ಹೆಚ್ಚು. ಇವರ ಅಧಿದೈವಗಳಲ್ಲಿ ಕ್ಯಾತುರಲಿಂಗ, ಪಾತುರಲಿಂಗ, ಕಾಟಮಲಿಂಗ, ಚಿತ್ತುರಲಿಂಗ, ಈರಣ್ಣ, ನಿಂಗಣ್ಣ, ಬೊಮ್ಮೆಲಿಂಗ ಮುಂತಾದ ಪ್ರಸಿದ್ಧ ಶೈವ ಮೂಲಕ ದೈವಗಳನ್ನು ಕಾಣಬಹುದು. ತಿರುಪತಿ ತಿಮ್ಮಪ್ಪ ರಂಗಪ್ಪ, ನರಸಿಂಹ ಸ್ವಾಮಿ, ಕೃಷ್ಣ ಮೊದಲಾದ ವೈಷ್ಣವ ಮೂಲದ ದೈವಗಳಿಗೂ ಇವರು ನಡೆದುಕೊಳ್ಳುತ್ತಾರೆ.

ಮೇಲಿನ ಪ್ರಮುಖ ದೈವಗಳ ಜೊತೆಗೆ ಅನೇಕ ಸ್ತ್ರೀ ದೈವಗಳು, ಸಾಂಸ್ಕೃತಿಕ ವೀರರು, ಬುಡಕಟ್ಟಿನ ಹಿತಕ್ಕಾಗಿ ಹೋರಾಡಿ ಮಡಿದ ಧೀರರು, ಕೆಲವು ಆದರ್ಶಗಳಿಗೆ ‘ಸತಿ’ಯರಾದ ಸ್ತ್ರೀಯರೂ ಇವರಿಂದ ಪೂಜೆಗೊಳ್ಳುತ್ತಾರೆ. ಇಂಥ ದೇವರುಗಳ ಸಂಖ್ಯೆ ಅಪಾರ. ಪ್ರದೇಶದಿಂದ ಪ್ರದೇಶಕ್ಕೆ ಇವರಲ್ಲಿ ಭಿನ್ನ ಭಿನ್ನ ಸ್ವರೂಪದ ‘ದೇವರು’ಗಳು ಕಂಡುಬರುತ್ತವೆ. ಎತ್ತಪ್ಪ, ಜುಂಜಪ್ಪ ಮೊದಲಾದ ಕೆಲವು ಸಾಂಸ್ಕೃತಿಕ ವೀರರ ಮೇಲೆ ಇವರ ಭಕ್ತಿ, ಶ್ರದ್ಧೆ, ನಂಬಕೆ ಅಪಾರವಾಗಿ ಕಂಡುಬರುತ್ತದೆ.

ಕಾಡುಗೊಲ್ಲರಲ್ಲಿ ಈಗ ಅಲ್ಲಲ್ಲಿ ನಾಗರೀಕತೆ ವ್ಯಾಪಿಸುತ್ತಿದೆ. ಪಶುಪಾಲನೆ ವಿರಳವಾಗಿ ಕುರಿಸಾಕಣೆ, ವ್ಯವಸಾಯ, ಮೊದಲಾದ ವೃತ್ತಿಗಳನ್ನು ಅವಲಂಬಿಸುತ್ತಿದ್ದಾರೆ. ಗುಡಿಸಲುಗಳು ದೂರವಾಗಿ ಮನೆಗಳು ನಿರ್ಮಾಣಗೊಳ್ಳುತ್ತಿವೆ. ಗುಟ್ಟಗಳು ಕಣ್ಮರೆಯಾಗಿ ಗುಡಿಗಳನ್ನು ಕಟ್ಟಲಾಗುತ್ತಿದೆ. ಹಟ್ಟಿಗಳ ಸ್ಥಾನದಲ್ಲಿ ಊರುಗಳು ಹುಟ್ಟಿಕೊಳ್ಳುತ್ತಿವೆ. ವಿದ್ಯಾವಂತರೂ ಹೆಚ್ಚುತ್ತಿದ್ದಾರೆ. ಆದರೆ ಅವರ ಸಾಂಪ್ರದಾಯಿಕ ಜೀವನದಲ್ಲಿ ಹೆಚ್ಚು ಬದಲಾವಣೆ ಕಂಡುಬರುತ್ತಿಲ್ಲ

ತಮ್ಮದೇ ಆದ ಸಾಂಸ್ಕೃತಿಕ ಆವರಣದಲ್ಲಿ ಬದುಕುವ ಕಾಡುಗೊಲ್ಲರಲ್ಲಿ ಅವರ ನೈಜ ಸಂಸ್ಕೃತಿಯನ್ನು ಚಿತ್ರಿಸುವ ಅವರ ಜಾನಪದ ಸಹಜವಾಗಿ ಸಂಶೋಧಕರಿಗೆ, ಜಾನಪದ ವಿದ್ಯಾರ್ಥಿಗಳಿಗೆ ಆಸಕ್ತಿಯನ್ನು ಕೆರಳಿಸುತ್ತದೆ. ಅವರಲ್ಲಿ ಜನಪದ ಸಾಹಿತ್ಯ ಸಮೃದ್ಧವಾಗಿದೆ. ಸಾಂಸ್ಕೃತಿಕ, ಸಾಹಿತ್ಯಿಕ ದೃಷ್ಟಿಯಿಂದ ಅವರ ಹಾಡುಗಳೂ, ಹಾಡ್ಗತೆಗಳೂ ಮಹತ್ವಪೂರ್ಣವೆನಿಸುತ್ತವೆ. ಇತರ ಬುಡಕಟ್ಟುಗಳ ಜನಪದ ಸಾಹಿತ್ಯಗಳಲ್ಲಿ ಕಂಡಬರದ ನೈಸರ್ಗಿಕ ಆವರಣ ಇವರ ಕಾವ್ಯಗಳ ಒಂದು ವೈಶಿಷ್ಟ. ಈ ಕಾವ್ಯಗಳಲ್ಲಿ ಬೆಟ್ಟ ಗುಡ್ಡಗಳ, ಕಣಿವೆ ಕಾಡುಗಳ ನಡುವಿನ ಅವರ ಪ್ರಾಚೀನ ಜೀವನ ವಿಧಾನದ ಸಹಜ ಚಿತ್ರಣ ನಮ್ಮ ಆಸಕ್ತಿಯನ್ನು ಸೆಳೆದುಕೊಳ್ಳುತ್ತದೆ. ಪಶುಗಳೊಂದಿಗೆ ಹೊರಡುವ ಇವರ ಸಾಹಸಯಾತ್ರೆಯ ಚಿತ್ರಣಗಳಂತೂ ರೋಮಾಂಚನಕಾರಕವಾದವು. ಇವರ ದೈವಗಳನ್ನು ಕುರಿತ ಪುರಾಣ ಕಾವ್ಯಗಳು ಈ ಬುಡಕಟ್ಟಿನ ಧಾರ್ಮಿಕ ಹಿನ್ನೆಲೆಯನ್ನು ವಿವರಿಸುವುದರ ಜೊತೆಗೆ ಉತ್ತಮ ಬುಡಕಟ್ಟು ಮಹಾಕಾವ್ಯಗಳಾಗಿವೆ. ಇವರ ಕಾವ್ಯಗಳೆಲ್ಲ ತ್ರಿಪದಿಯಲ್ಲೆ ದೊರೆಯುವುದು ಗಮನಾರ್ಹ ವಿಷಯವಾಗಿದೆ. ಕಾಡುಗೊಲ್ಲರ ಪ್ರಮುಖ ಧಾರ್ಮಿಕ ಕಥೆ ಕಲಿವೀರ ಜುಂಜಪ್ಪನದು. ಜುಂಜಪ್ಪನ ಪುರಾಣ ಪದ್ಯದಲ್ಲಿದೆಯಾದರೂ ಪದ್ಯಕ್ಕಿಂತ ಗದ್ಯದಲ್ಲಿರುವದೇ ಹೆಚ್ಚು. ಚಂಪೂ ಕಾವ್ಯದಲ್ಲಿರುವ ಜುಂಜಪ್ಪನ ಕಾವ್ಯವನ್ನು ಈಗಾಗಲೇ ನಮ್ಮ ವಿಶ್ವವಿದ್ಯಾಲಯ ಪ್ರಕಟಿಸಿದೆ. ಗುಬ್ಬಿ ಹಾಗೂ ಸಿರಾ ತಾಲೂಕುಗಳಲ್ಲಿ ಜುಂಜಪ್ಪನಿಗೆ ಸಂಬಂಧಿಸಿದ ಸ್ಥಳಗಳೂ ಸ್ಮಾರಕಗಳೂ ಕಾಣಸಿಗುತ್ತವೆ. ಧಾರ್ಮಿಕ ಗೀತೆಗಳ ಜೊತೆಗೆ ಅನೇಕ ಲೌಕಿಕ ಕಾವ್ಯಗಳೂ ಇವರಲ್ಲಿ ದೊರೆಯುತ್ತವೆ. ಆದರ್ಶ ಗೊಲ್ಲನಾರಿಯರೂ, ಪುರುಷರೂ ವೀರಮರಣವನ್ನು ಅಪ್ಪಿ ಇವರ ಪೂಜೆಗೆ ಅರ್ಹರೆನಿಸಿಕೊಂಡವರೂ ಕಥಾನಾಯಕರಾಗಿ ಒಪ್ಪಿದ್ದಾರೆ. ಅನೇಕ ಸಂದರ್ಭಗಳಲ್ಲಿ ಲೌಕಿಕ ಕಾವ್ಯಗಳೂ ಧಾರ್ಮಿಕ ರೀತಿಯ ಅಂತ್ಯವನ್ನು ಸಾಧಿಸಿಕೊಳ್ಳುತ್ತವೆ. ಇವುಗಳ ಜೊತೆಗೆ ಶುದ್ಧ ಲೌಕಿಕ ಎನ್ನಬಹುದಾದ ಕಾವ್ಯಗಳೂ ಇವೆ. ಮಹಾಭಾರತದ ಕೆಲವು ಪ್ರಸಂಗಗಳನ್ನು ಚಿತ್ರಿಸುವ ಹಾಡುಗಳೂ ಇವರಲ್ಲಿ ಲಭ್ಯವಾಗುತ್ತವೆ.

ಕಾಡುಗೊಲ್ಲರ ಮುಖ್ಯ ವಾದ್ಯ ಗಣೆ. ಎರಡು ಮೊಳ ಉದ್ದದ ದೊಡ್ಡ ಆಕಾರದ ಕೊಳಲು ಇದು. ಇನ್ನೊಂದು ಉರಾಡುವಾಗ ಬಳಸುವ ಗೊಂಡೇವುಗಳಿಂದ ಲೋಹದ ನಾಗರ ಹೆಡೆಯಿಂದ, ನವಿಲುಗರಿಗಳಿಂದ ಅಲಂಕರಿಸಿದ ದೊಡ್ಡ ಗಣೆ. ಇದರ ತುದಿಯಲ್ಲೊಂದು ಗಂಟೆ ಇರುತ್ತದೆ. ಊದುಗಣೆಯನ್ನು ನುಡಿಸುತ್ತ ಕೆಲವರು ಕಾವ್ಯಗಳನ್ನು ಹಾಡುತ್ತಾರೆ. ಕೆಲವರು ಗಣೆಯನ್ನು ನುಡಿಸಿ ಆವೇಶಭರಿತರಾಗಿ ಕಣಿ ಹೇಳುತ್ತಾರೆ. ಗಣೆ ಇವರ ಪವಿತ್ರವಾದ್ಯ.

ಕುಟ್ಟುವ, ಬೀಸುವ, ಲಾಲಿ ಹಾಗೂ ಸೋಬಾನೆ ಪದಗಳನ್ನು ಹಾಡುವುದರಲ್ಲಿ ಕಾಡುಗೊಲ್ಲರ ಸ್ತ್ರೀಯರು ಹೆಸರಾದವರು. ಮದುವೆ ಹಾಗೂ ದೈವದ ಆಚರಣೆಗಳಲ್ಲಿ ಅವರಿಂದ ಹಾಡಿಸುವುದುಂಟು. ಕಾಡುಗೊಲ್ಲರ ಜನಪದ ನೃತ್ಯಗಳಲ್ಲಿ ಕೋಲಾಟ ಪ್ರಧಾನವಾದುದು. ಕೃಷ್ಣಕಥೆಗೆ ಸಂಬಂಧಿಸಿದ ಇವರ ಕೊರವಂಜಿ ಕೋಲು ತುಂಬ ಮನರಂಜನೀಯ.

ಬುಡಕಟ್ಟು ಕಾವ್ಯಗಳಾಗಿ ಕೃಷ್ಣಗೊಲ್ಲರ ಕಥನಕಾವ್ಯಗಳು

ಕಾವ್ಯಗಳು ಮೂಲತಃ ಬುಡಕಟ್ಟುಗಳ ಸಂಸ್ಕೃತಿಯ ಇತಿಹಾಸವನ್ನು ಪ್ರತಿನಿಧಿಸುವ ಮೌಖಿಕ ಚರಿತ್ರೆಗಳು. ಅವು ಸಾರ್ವತ್ರಿಕವಾದವುಗಳು. ವಿಶ್ವದ ಎಲ್ಲ ಕಾವ್ಯಗಳಿಗೂ ಬುಡಕಟ್ಟು ವಸ್ತುವೇ ಮೂಲ. ಆ ವಸ್ತುವನ್ನೇ ಬುಡಕಟ್ಟಿನಿಂದ ದೂರಾದ ಜನಪದರು ಜನಪದ ಕಾವ್ಯಗಳೆಂದು ಮತ್ತು ಅಲ್ಲಿಂದಲೂ ದೂರದ ಶಿಷ್ಟರು ಶಿಷ್ಟ ಕಾವ್ಯಗಳೆಂದು ಕರೆದರು. ಭಾರತದ ಶಿಷ್ಟ ಕಾವ್ಯಗಳೆಂದರೆ ರಾಮಾಯಣ ಮಹಾಭಾರತವೆಂದು ಎಲ್ಲರನ್ನೂ ಶಿಷ್ಟ ಕವಿಗಳು ನಂಬಿಸಿದ್ದರು. ರಾಮಾಯಣ ಮತ್ತು ಮಹಾಭಾರತದ ಕಥಾವಸ್ತು ಬುಡಕಟ್ಟಿನಿಂದ ಜನಪದರು ಹಾಗೂ ಜನಪದರಿಂದ ಶಿಷ್ಟರು ತಮಗೆ ಮತ್ತು ತಮ್ಮ ಪರಿಸರಕ್ಕೆ ಹಿತವೆನಿಸುವಂತೆ ರಚಿಸಿ ಸೈ ಎನಿಸಿಕೊಂಡರು ಮತ್ತು ಸೈ ಎನಿಸಿಕೊಳ್ಳುತ್ತಿದ್ದಾರೆ. ಆದರೆ ಶಿಷ್ಟರಿಂದ ಅನತಿದೂರದಲ್ಲಿದ್ದ ಬುಡಕಟ್ಟುಗಳ ಐತಿಹ್ಯ, ಪುರಾಣ, ನಂಬಿಕೆ, ರೂಢಿ ಸಂಪ್ರದಾಯ, ಆಚರಣೆ ಇತ್ಯಾದಿಗಳು ಒಂದು ಹಂತದ ಇತಿಹಾಸವೆಂದು ನಂಬುವ ಕಾಲ ಇಂದು ಬಂದಿದೆ. ಈ ಹಿನ್ನೆಲೆಯಲ್ಲಿಯೇ ಇಂದಿನ ಇತಿಹಾಸ ತಜ್ಞರು ನಿರ್ಲಕ್ಷಿತ ಇತಿಹಾಸದ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಕೃಷ್ಣಗೊಲ್ಲರು ಮೂಲತಃ ಅಡವಿ(ಕಾಡು)ಗೊಲ್ಲರು. ಇವರು ಬೇಟೆಯ ಸಮುದಾಯದಿಂದ ಕವಲೊಡೆದು ಪಶುಪಾಲನೆಗೆ ಕೂಡಿಕೊಂಡವರು ಹೀಗಾಗಿ ಇವರು ಬುಡಕಟ್ಟಿನವರೇ ಆಗಿರುವರು. ಇವರು ಹಾಡುವ ಹಾಡುಗಳು ಇವರ ಸಂಸ್ಕೃತಿಯ ಕಥನಗಳನ್ನು ಒಳಗೊಂಡಿರುವುದರಿಂದ ಇವರ ಈ ಸಾಹಿತ್ಯಕ್ಕೆ ಬುಡಕಟ್ಟು ಕಥನಕಾವ್ಯಗಳು ಎಂದು ಹೆಸರಿಸುವುದರಲ್ಲಿ ಅರ್ಥವಿದೆ. ಮಲೆ ಮಾದೇಶ್ವರ, ಜುಂಜಪ್ಪ ಮೈಲಾರಲಿಂಗ, ಗಾದ್ರಿಪಾಲನಾಯಕ, ಬೀರಪ್ಪ, ಮಾಳಿಂಗರಾಯ ಇತ್ಯಾದಿ ಕಾವ್ಯಗಳು ಕೂಡ ಬುಡಕಟ್ಟು ಸಂಸ್ಕೃತಿಯನ್ನೇ ಪ್ರತಿನಿಧಿಸುವ ಕಥನಗಳು. ಹೀಗಾಗಿ ಅವುಗಳು ಸಹ ಮೂಲತಃ ಬುಡಕಟ್ಟು ಕಾವ್ಯಗಳಾಗಿ ಆಮೇಲೆ ಜನಪದ ಕಾವ್ಯಗಳಾಗಿ ತಮ್ಮ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿವೆ. ‘ಯಾವುದೆ ಒಂದು ಕಾವ್ಯ ಅಥವಾ ಕಥೆ ಒಂದು ಬುಡಕಟ್ಟಿಗೆ ಸೀಮಿತವಾಗಿರದೆ ಹಲವಾರು ಬುಡಕಟ್ಟುಗಳಿಗೆ ಅಥವಾ ಸಮುದಾಯಗಳಿಗೆ ವಿಸ್ತ್ರತಗೊಂಡರೆ ಅದು ಬಹುಸಂಖ್ಯಾತರ ಕಥೆಯಾಗಿ ಜನಪದ ಕಥೆಯಾಗುವುದು ಇಲ್ಲವೆ ಕಾವ್ಯವಾಗುವುದು’. ಈ ಹಿನ್ನೆಲೆಯಲ್ಲಿಯೂ ಇಲ್ಲಿ ಸಂಕಲಿತಗೊಂಡಿರುವ ಕೃಷ್ಣಗೊಲ್ಲರಿಗೆ ಸೀಮಿತಗೊಂಡಿರುವ ಕಥನ ಕಾವ್ಯಗಳು ಬುಡಕಟ್ಟು ಕಥನ ಕಾವ್ಯಗಳಾಗುವವು.

* * *