ಹತ್ತೂ ವರ ಕೊಟ್ಟು ಗುತ್ತೀಗೆ ಕಳಿವ್ಯಾರೆ
ಗುತ್ತಿಂದಲೇಳು ತೊಲಿ ಬಂದು | ಬೂದಿಗೆ ಬಂದು
ಕಪ್ಪೀನ ಮಾಟುಕದಲ್ಲಿ ಮನಿ ನಿಂತು | ಮಾಳಿಗ್ಯಾಗ
ಕಟ್ಟೇರು ನೆಲ್ಲಕ್ಕಿ ಸ್ರಬುಕಾವ

ಆರು ವರ ಕೊಟ್ಟು ಗ್ವಾವೀಗೆ ಕಳಿವ್ಯಾರೆ
ಗ್ವಾವಿಂದಲೇಳು ತೊಲಿ ಬಂದು | ಬೂದಿಗೆ ಬಂದು
ವಾಲೀಯ ಮಾಟುಕದಲಿ ಮನಿ ನಿಂತು | ಮಾಳಿಗ್ಯಾಗ
ಹೂಡೇರು ನೆಲ್ಲಕ್ಕಿ ಸ್ರಬುಕಾವ

ರೆಂಬೆ ನಿನ ಮನಿಯ ಗಿಂಡೀ ಅರಿವಾಣಾಕ
ಕೊಂಡಿ ಸರಪೂಣಿ ಮಕುರಂಬೊ | ಹೊನ್ನಾಕಣಸ
ತಂದಿಡಿರಿ ಬಂದಾ ಜಾಣ ನೋಡು

ನಾರೀನ ನಿನ ಮನಿಯ ಗಾಲಿ ಅರಿವಾಣಾಕ
ಕೀಲಿ ಸರುಪೂಣೀ ಮಕುರಂರೊ | ಹೊನ್ನಾಕಣಸ
ತೋರಿಡಿರಿ ಬಂದಾ ಜಾಣ ನೋಡು

ಕಡಲೆಕಾಳ ಅಸಿಯ ಕಡುಜಾಣ ನೀ ಬರಿಯ
ಕಡಿಯಾಕೊಂದಕ್ಕಿ ಸಿಡಿಯಾ | ದಂತಸಿಯ
ಕಸುಚಾಣೀರಣ್ಣ ಬರುದಾನ

ಉದ್ದಿನಕಾಳ ಅಸಿಯ ಬುದ್ದಿವಂತ ನೀ ಬರಿಯ
ಮೊಗ್ಗೂಲಿಗೊಂದಕ್ಕಿ ಸಿಡಿಯಾ | ದಂತಸಿಯ
ಬುದ್ದಿವಂತೀರಣ್ಣ ಬರುದಾನ

ನೆಲ್ಲಕ್ಕಿ ಅಸಿಯ ಬಲ್ಲಿದೋನು ನೀ ಬರಿಯ
ಬೆಲ್ಲಾದ ಅಚ್ಚುಗಳು ಕೋರುದ್ಹಂಗೆ | ಅಸಿಯಾ ಮ್ಯಾಲೆ
ಮಲ್ಲಿಗ್ಹೂವು ಜಾಣ ಬರುದಾನೆ

ಕ್ಯಾಸಕ್ಕಿ ಅಸಿಯ ಲೇಸಣ್ಣಾ ನೀ ಬರಿಯ
ದಾಸಿವಾಳಾದ್ಹೂವು ಕೋರುದ್ಹಂಗ | ಅಸಿಯಾ ಮ್ಯಾಲೆ
ಬಾಸಿಂಗ ಜಾಣ ಬರುದಾನೆ

ಅಪ್ಪಾನೆ ಮದುಮಗ ಅಪ್ಪಯ್ಯ ಮದುಮಗ
ಅಪ್ಪ ಈರಣ್ಣ ಮದುಮಗ | ಅಂಬಾ ಸುದ್ದಿ
ಇಪ್ಪತ್ತು ರಾಜ್ಯಾಕ್ಕ ಅರುದಾವೆ

ಅಣ್ಣಾನೆ ಮದುಮಗ ಅಣ್ಣಯ್ಯ ಮದುಮಗ
ಅಣ್ಣ ಈರಣ್ಣ ಮದುಮಗ | ಅಂಬೋ ಸುದ್ದಿ
ಹನ್ನೇರಡು ರಾಜಾಕ್ಕ ಅರುದಾವೆ

17_85_KK-KUH

ನಿಂಬೆಯಾ ಬನುದಾಗೆ ಶಂದುರುನಾ ರವಿಯಾಗ
ಚಂಡೆ ಆಡತಲಿ ಬರನಲ್ಲೆ | ಈರಣ್ಣ
ತಂಗ್ಯಮ್ಮ ಹೋಗಿ ಕರುತಾರೆ

ಬಾಳೀಯಾ ವನುದಾಗೆ ಸೂರಿದುನ ರವಿವಾರ
ದಾಯಾ ಮಾಡುತಲೇ ಬರನಲ್ಲೆ | ಈರಣ್ಣ
ತಾಯಮ್ಮ ಹೋಗಿ ಕರುತಾರೆ

ಅದ್ದುನದಾಗಾಳ್ಹೊನ್ನ ಗಿದ್ದುನಕೆ ವಯ್ಕಂಡು
ಗೆಜ್ಜೆಕಾಲು ಮಗುನ ನೇಡಸುತ | ಗವುರಮ್ಮ
ದೊಡ್ಡ ಮುತ್ತಿಲಸಿಯ ರಚಿಸ್ಯಾಳೆ

ಪಾಗುನಾಗುಳಹೊನ್ನು ಪಾವುಡಕೆ ವಯ್ಕಂಡು
ಮಾಗಾಯಿ ಮಗುನ ನೇಡಸುತ | ನೀಲಮ್ಮ
ಮಾನ ಮುತ್ತಿಲಸಿಯ ರಚಿಸ್ಯಾಳೆ

ಅರಸಿನೆಣ್ಣಾಕೆ ಅರಸೀ ನಿನ ಕೈಬೆರಳು
ನರಸಿಂಗಾರಾಯಾರ ಯಲೀದೋಟ | ವಳಗಾಳು
ಯಸಲಿ ಹೊಂಬಾಳಿ ನಿನ್ನ ಕೈಬೆರಳು

ಗಂಧಾವನ್ಹಚ್ಚೆ ರಂಬೆ ನಿನ ಕೈಬೆರಳು
ಶನ್ನಣ್ಣ ರಾಯರ ಯಲಿದೋಟ | ವಳಗಾಳು
ಹಣ್ಣೆ ಹೊಂಬಾಳೆ ನಿನ್ನ ಕಯ್ಯಿಬೆರಳು

ಹೆಣ್ಣೆ ಅರಿಶಿಣ ಬಂದ ಸನ್ನೆ ಮಾಡಲುತಾವೆ
ಇನ್ನ ಮನಿಗ್ಯಾನ ಮದುಮಗ | ಎಣ್ಣೆರಸೂಣ
ರನ್ನೇಮಾಡಸಸಿಗೆ ಕರುದಾರೆ

ಅಸಿಯೆ ಅರಸಿಣ ಬಂದ ಸರಸ ವಾಡುಲುತಾವ
ಮರೆತೇ ಮನಿಗ್ಯಾನ ಮದುಮಗ | ಅಸಿ ಅರುಸೂಣ
ಸರಸವಾಡಸಿಗೆ ಕರುದಾರೆ

ಅಸಿಯನೇ ಹಚ್ಚೀರಿ ಕುಸಲಿಸಿರಿ ಭೂಮೀಯ
ಹೊಸ ಮುತ್ತಿನ ಶೆಳಿಯ ಕೊಡಿರಮ್ಮ | ನಮ್ಮನಿಯ
ಸಿಸುವೆ ಕುಂದುರುವ ಜಗುಲೀಯ

ಮಣಿಯ ಹಾಕಿರಿ ಮನ್ನಿಸಿರಿ ಭೂಮಿಯ
ಸಣ್ಣ ಮುತ್ತೀನ ಶಳಿಯಾ ಕೊಡಿರಮ್ಮ | ನಮ್ಮನಿಯಾ
ಶಿನ್ನವೆ ಕುಂದುರುವ ಜಗುಲೀಯ

ಎಣ್ಣೆ ಅರಸಿನ ಕೊಂಬು ಗಣ್ಣೆ ಬಗ್ಗುಸಿದಾಂಗೆ
ಸಣ್ಣ ಮಗುನಾವೆರಡು ಕುಡಿ ಹುಬ್ಬು | ನೆಡುವಾಕೆ
ಶೆಂದುವಾಗಿಡು ಜಾಣಿ ಶಿಲುಕಾವ

ಹಸಿಯ ಅರಿಸಿಣ  ಕೊಂಬು ಯಸಲು ಬಗ್ಗುಸಿದಾಂಗ
ಹಸು ಮಗನಾವೆರಡು ಕುಡಿ ಹುಬ್ಬು | ನೆಡುವಾಕೆ
ಅಸುಸಾಗಿಡು ಜಾಣಿ  ಶಿಲುಕಾವ

ಎದ್ದು ಬರುವ ಕಂದಾನ ಹೆಜ್ಜೇ ನೋಡೇನಂದ
ಬುದ್ದಿವಂತಿ ಅವರ ಹಡದಮ್ಮಾ | ಈರಮ್ಮ
ಮೊಗ್ಗೇ ಅರುಡ್ಯಾಳೆ ನೆಡುಮನಿಗೆ

ನಡದು ಬರುವ ಕಂದಾನ ನಡಿಗೆ ನೋಡೇನಂದ
ಕಡುಜಾಣಿ ಅವರ ಹಡುದಮ್ಮಾ | ಈರಮ್ಮ
ಮೊಗ್ಗೇ ಅರುಡ್ಯಾಳೇ ನೆಡುಮನಿಗೆ