ಸೋ ಎನ್ನರೆ ಸೋಬಾನ ಎನ್ನಿರೆ || ದನಿ ||

ಹಿಂದಾಲ ಕಂಬಾಕ ನಂದೀಶ್ವರ ನಿಂತ
ಮುಂದಾಲ ಕಂಬಕ ಶಿವನಿಂತ | ಇಬ್ಬರಿಗೆ
ನಂಬಗೆ ಮಾಡಿ ನಿಲಿಸ್ಯಾನೆ || ಸೋ ಎನ್ನೀರೆ ||

ಆಸೇನ ಕಂಬಾಕ ರೂಢೀಗೀಶ್ವರ ನಿಂತ
ಈಚೆನೆ ಕಂಬಾಕ ಶಿವನಿಂತ | ಇಬ್ಬರಿಗೆ
ಬಾಸೀಯ ಮಾಡಿ ನಿಲಿಸ್ಯಾನೆ || ಸೋ ಎನ್ನರೆ ||

ಆನಿಯೆನ್ನ ಮ್ಯಾಲೆ ಜಾಣ ಜಂಗಮ ಬಂದ
ವಾವೂರಿಗ್ಯಾಗ ಶಿವ ಬಂದ | ಇಬ್ಬರಿಗೆ
ವಾರಿಗೆ ಮಾಡಿ ನಿಲಿಸ್ಯಾನೆ || ಸೋ ಎನ್ನರೆ ||

ಒಂಟಿಯೆನ್ನ ಮೇಲೆ ಬಂಟ ಜಂಗಮ ಬಂದ
ಮಂಟಪದಾಗ ಶಿವ ಬಂದ | ಇಬ್ಬರಿಗೆ
ಬಾಸೀಯ ಮಾಡಿ ನಿಲಿಸ್ಯಾಳೆ || ಸೋ ಎನ್ನಿರೆ ||

ಹಂದರದ ಅಡಿಯಾಗೆ ಹೊಂದಿ ಬೀಸೋಗಾಳಿ
ಇನ್ನೋಂದು ಜಾವ ನಿಲುಗಾಳಿ | ನಮ್ಮನಿಯ
ಶೆನ್ನಣ್ಣಗ ಧಾರೆ ಎರೆವತಂಕ || ಸೋ ಎನ್ನಿರೆ ||

ಚಪ್ಪರದ ಅಡಿಯಾಗೆ ಹೊಕ್ಕು ಬೀಸೋಗಾಳಿ
ಮತ್ತೊಂದು ಜಾವ ನಿಲುಗಾಳಿ | ನಮ್ಮನಿಯ
ಬಸವಣ್ಣಗ ಧಾರೆ ಎರೆವತಂಕ || ಸೋ ಎನ್ನಿರೆ ||

ಸಪ್ಪರ ಸಪ್ಪರ ಸಾಕ್ಷಿ ಸಪ್ಪರಗಂಬ ಸಾಕ್ಷಿ
ಒಕ್ಕು ನಿಂತಿರುವ ಜನ ಸಾಕ್ಷಿ | ಇಬ್ಬರಿಗೆ
ನಂಬೀಗೆ ಮಾಡಿ ನಿಲಿಸ್ಯಾನೆ || ಸೋ ಎನ್ನರೆ ||

ಹಂದರ ಹಂದರ ಸಾಕ್ಷಿ ಹಂದುರಗಂಬ ಸಾಕ್ಷಿ
ಬಂದು ನಿಂತಿರುವ ಜನ ಸಾಕ್ಷಿ | ಇಬ್ಬರಿಗೆ
ನಂಬೀಗೆ ಮಾಡಿ ನಿಲಿಸ್ಯಾನೆ || ಸೋ ಎನ್ನರೆ ||

ಅಂಗಯ್ಯಗಾಲು ಮುಂಗೈಯ್ಯ ಕೊಯ್ಯವಾಗ
ಶಂದ್ರಗೆ ಬಾಸೆ ಕೊಡುವಾಗ | ತಾಯಿತಂದೆ
ಕುಂದ್ಯಾರೆ ಬಾಳೆ ಸುಳಿಯಂಗ || ಸೋ ಎನ್ನರೆ ||

ಆಕ್ಕೆಯ ವಾಲು ಈ ಕೈಯ ಕೊಯ್ಯುವಾಗ
ಸೂರಿದುಗೆ ಬಾಸೆ ಕೊಡುವಾಗ | ತಾಯಿತಂದೆ
ಬಾಡ್ಯಾರೆ ಬಾಳೆ ಸುಳಿಯಂಗೆ || ಸೋ ಎನ್ನಿರೆ ||

ಕಂಕಣ ಕಡಿಸೂತ್ರ ಎಂಟು ಹೊನ್ನಿನ ತಾಳಿ
ಭಂಟಾಲರುಜುಣರ ಮಗನೀಗೆ | ಈರಣ್ಣಗೆ
ಕಂಕಾಣ ಕಟ್ಟೊ ಶಿವ ಬಂದ || ಸೋ ಎನ್ನಿರೆ ||

ಕಾಲುಂಗರ ಕಡಿಸೂತ್ರ ಏಳು ಹೊನ್ನಿನ ತಾಳಿ
ಧೀರಾಲರುಜುಣರ ಮಗನೀಗೆ | ಈರಣ್ಣಗೆ
ತಾಳೀಯ ಕಟ್ಟೊ ಶಿವ ಬಂದ || ಸೋ ಎನ್ನರೆ ||

ಚಪ್ಪರಲ್ಲಾಡುತ್ತ ಸುತ್ತೆಲ್ಲ ನೋಡುತ
ಪುತ್ರ ನಿಂತು ಕಾಲು ತೊಲುವೂತ | ಮಂಡೆ ಮ್ಯಾಲೆ
ದುಂಡಕ್ಕಿ ಬೀರ‍್ಯಾರೆ ಹಿರಿಯಾರು || ಸೋ ಎನ್ನಿರೆ ||

ಹಂದೂರಲ್ಲಾಡುತಾ ಮಂದೆಲ್ಲ ನೋಡುತ
ಕಂದ ನಿಮ್ಮ ಕಾಲು ತುಳವೂತ | ಮಂಡೆ ಮ್ಯಾಲೆ
ಕ್ಯಾಸಕ್ಕಿ ಬೀರ‍್ಯಾರೆ ಹಿರಿಯಾರು || ಸೋ ಎನ್ನಿರೆ ||

ಹೆಣ್ಣಿನೋರಾ ತಂದೆ ಹೆಣ್ಣು ಒಪ್ಪಿಸಿಕೊಟ್ಟ
ಬಣ್ಣದ ವಲ್ಲಿ ಮುಸಗಿಟ್ಟು | ಹೇಳ್ಯಾನೆ
ಹೆಣ್ಣು ಬ್ಯಾಡ ಏಳು ಜಲುಮಕ || ಸೋ ಎನ್ನಿರೆ ||

ಕೂಸಿನೋರಾ ತಂದೆ ಕೂಸ ಒಪ್ಪಸಿಕೊಟ್ಟ
ರೇಸೀಮೆ ವಲ್ಲಿ ಮುಸಗಿಟ್ಟು | ಹೇಳ್ಯಾನೆ
ಕೂಸು ಬ್ಯಾಡೋ ಎಳು ಜಲುಮಕ || ಸೋ ಎನ್ನರೆ ||

ಹೆಣ್ಣು ನಮ್ಮದಾಯ್ತಾ ಹೊನ್ನು ನಿಮ್ಮದಾಯ್ತು
ಹೊನ್ನನ ಭರಣಿ ಬರಿದಾಯ್ತು | ಈರಣ್ಣ
ಹೊನ್ನು ಹೆಚ್ಚಲಿ ದಿನದಿನಕ || ಸೋ ಎನ್ನಿರೆ ||

ಕೂಸು ನಿಮ್ಮದಾಯ್ತು ಕಾಸು ನಮ್ಮದಾಯ್ತು
ಕಾಸಿನ ಭರಣಿ ಬರಿದಾಯ್ತು | ಈರಣ್ಣ
ಕಾಸು ಹೆಚ್ಚಲಿ ದಿನ ದಿನಕ || ಸೋ ಎನ್ನಿರೆ ||

ಒಂಟಿಯನ್ನ ಮ್ಯಾಲೆ ಭಂಟ ಬೀದಿಗೆ ಬಂದ
ಒಂಟೀಯ ಇಳಿದು ಶರಣಂದ | ಬೇಡಿಕೊಂಡ
ಕೆಂಚೀಗೆ ಮುತ್ತೈದತನಗಳು || ಸೋ ಎನ್ನಿರೆ ||

ಆನೀಯನ್ನ ಏರಿ ಜಾಣ ಬೀದಿಗೆ ಬಂದ
ಆನೀಯ ಇಳಿದು ಶರಣಂದ | ಬೇಡಿಕೊಂಡು
ನಾರೀಗೆ ಮುತ್ತೈದತನಗಳು || ಸೋ ಎನ್ನಿರೆ ||

ಮುತ್ತಿನ ಬಾಸಿಂಗ ಮತ್ತ್ಯಾರು ಕಳಿವ್ಯಾರೆ
ಇಪ್ಪತ್ತು ಹೂವು ಮಲಕೀನ | ಬಾಸಿಂಗ
ಅವರಪ್ಪೂನ ಗೆಣಿಕಾರ ಕಳುವ್ಯಾನೆ || ಸೋ ಎನ್ನಿರೆ ||

ಹೊನ್ನಿನ ಬಾಸಿಂಗ ಇನ್ನ್ಯಾರು ಕಳಿವ್ಯಾರೆ
ಹನ್ನೇರಡು ಹೂವ ಮಲಕೀನ | ಬಾಸಿಂಗ
ಅವರಣ್ಣನ ಗೆಣಿಕಾರ ಕಳುವ್ಯಾನೆ || ಸೋ ಎನ್ನಿರೆ ||

ಬಾಸಿಂಗ ಸೂಡುರಿ ದೇಸಪತಿರಾಜಾರು
ದೇಸನಾಳೋರ ಮಗನ | ಕಂದಮ್ಮಾಗೆ
ಬಾಸಿಂಗ ಕಟ್ಟ ಶಿವ ಬಂದ || ಸೋ ಎನ್ನಿರೆ ||

ಮುತ್ತೀನ ಬಾಸಿಂಗ ಅವರಪ್ಪ ಸುಡಲು ಬಂದ
ಅವರಪ್ಪ ಸೂಡಿ ಮುಖಾ ನೋಡಿ | ಮಗನೆ ನೀನು
ಇಪ್ಪತ್ತು ರಾಜ್ಯವ ಸ್ಥಿರುನಾಳೊ || ಸೋ ಎನ್ನಿರೆ ||

ಹೊನ್ನಿನ ಬಾಸಿಂಗ ಅವರಣ್ಣಯ್ಯ ಸುಡಲು ಬಂದ
ಅವರಣ್ಣ ಸೂಡಿ ಮುಖಾ ನೋಡಿ | ತಮ್ಮನೆ ನೀನು
ಹನ್ನೆರಡು ರಾಜ್ಯದ ಸ್ಥಿರುನಾಳೊ || ಸೋ ಎನ್ನಿರೆ ||

ಎತ್ತು ಹತ್ತಿಗಂಡು ಹಟ್ಟಿ ಮುಂದಕ ಬಂದು
ಅವರಪ್ಪನ ಪಾದಕೆ ಶರಣಂದೆ | ಹೇಳ್ಯಾನೆ
ಅತ್ತೇರ ಮನಿಗ್ಹೋಗಿ ಬರತೀನಿ || ಸೋ ಎನ್ನಿರೆ ||

ಹೋರೀ ಹತ್ತಿಗಂಡು ಊರ ಮುಂದುಕ ಬಂದು
ತಾಯಿ ಪಾದಕೆ ಶರಣಂದು | ಹೇಳ್ಯಾನೆ
ಮಾವಾನ ಮನಿಗ್ಹೋಗಿ ಬರತೀನಿ || ಸೋ ಎನ್ನಿರೆ ||