ಹೆಸರು ಎತ್ತದ ಮುನ್ನ ದೆಸಿವಂತರನ ನನಿದೇವು
ಹೆಸರಿಗೆ ಸಣ್ಣಾರಿ ಮದನಾರಿ | ಏಳಾಜಂಬಿ
ದೆಸಿವಂತೀರಣ್ಣಾನ ನೆನದೇವು

ಸೊಲ್ಲು ಎತ್ತದ ಮುನ್ನಾ ಬಲ್ಲಿದೋರನ ನೆನದೇವು
ಸೊಲ್ಲಿಗೆ ಸೊನ್ನಾರಿ ಮದುನಾರಿ | ಏಳುಜಂಬಿ
ಬಲ್ಲೀದ್ದೀರಣ್ಣನ ನೆನದೇವು

ನೆತ್ತೀಲಿ ಜಡಿಯ ಹೊತ್ತಿರುವರನ ನೆನದೇವು
ಬೆಚ್ಚಾನ್ನ ಅಗ್ಗುಣಿಯ ಮಠದೋರು | ಹೊನ್ನಾಬಂಡೆ
ಅಪ್ಪಾ ಜಂಗುಮುರ ನೆನಾದೇವು

ನೆತ್ತೀಲಿ ಜಡಿಯ ಹಣ್ಣುರುವವರ ನೆನದೇವು
ತಣ್ಣಾನ ಅಗ್ಗುಣಿಯ ಮಠದೋರು | ಹೊನ್ನಾಬಂಡೆ
ಅಣ್ಣ ಜಂಗುಮುರ ನೆನಾದೇವು

ಮುಂಚೆನೆ ನೇನೆದೇವು ಕಂಚೀಕಾಳೀಸ್ಪುರುನ
ಕಂಚೀನ ಗುಡ್ಡಾದ ಕಲಿವೀರ | ಎತ್ತಯ್ಯಾನ
ಮುಂಚೀನ ಸೊಲ್ಲಾಗೆ ನೆನಾದೇವ

ಮೊದಲೇನೆ ನೇನೆದೇವು ಮೊದಗೈದೀರಾನ
ಮೊದಗಾದ ಗುಡ್ಡಾದ ಕಲಿವೀರ | ಎತ್ತಯ್ಯಾನ
ಮೊದಲೇ ಸೊಲ್ಲಾಗೆ ನೆನಾದೇವ

ರಂಗಯ್ಯ ನಿಮ್ಮ ನಿನೆಯುದ್ದಿದರೆ ಭಂಗ
ಬಂಗಾರದ ಗಿರಿಯೆ ಬಲುಸಿರಿ | ಮೇಳೇಕುಂಟೆ
ರಂಗನನೆನುದರಿಗೆ ಭಯವಿಲ್ಲ

ಕುಟ್ಟಿದಕ್ಕಿ ಬರಲಿ ಯೆತ್ತತುಪ್ಪಾ ಬರಲಿ
ಅಪ್ಪುನ ಬಾಗಲಿಗೆ ಕರಿಯ ಜಾಡಿ | ಬಂದಾರೆ
ತುಪ್ಪಾ ಹೊತ್ತಾರನ ಕಳಿಸ್ಯಾರೆ

ತುಪ್ಪ ಒತ್ತಾಕ ನಮ್ಮಿಚ್ಚೆ ಮಾತಲ್ಲ
ಅಪ್ಪುನ ಕಡಿಯಾಲ ವಳಮಾತು | ತಕ್ಕಂಡು
ತುಪ್ಪ ವತ್ತಾಕೆ ನಡುದಾರೆ

ಮಾಡಿದಕ್ಕಿ ಬರಲಿ ಕಾದ ತುಪ್ಪ ಬರಲಿ
ಸ್ವಾಮಿನೇ ಬಾಗುಲಿಗೆ ಕರಿಯಾ ಜಾಡಿ | ಬಂದಾರೆ
ಹಾಲೇ ಹೊತ್ತರುನಾ ಕಳಿಸ್ಯಾರೆ

ಹಾಲೇನೆ ಹೊತ್ತಾಕ ನಮ್ಮಿಚ್ಛೆ ಮಾತಲ್ಲ
ಸ್ವಮೀನ ಕಡಿಯಾಲ ವಳಮಾತು | ತಕ್ಕಂಡು
ಹಾಲು ಹೊತ್ತಾಕೆ ನಡುದಾರೆ

ತುಪ್ಪ ವತ್ತಿದಕ್ಕೆ ಮತ್ತೆಲ್ಲಿ ತೊಳುದಾರೆ
ಸುತ್ತೇಳು ಜಂಬಿ ತರುವೀನ | ಕಳ್ಳ್ಯಾಗೆ
ತುಪ್ಪಚ್ಚಿದ ಕೈ ತೊಳುದಾರೆ

ಹಾಲು ವತ್ತಿವಚ್ಚಿದಾ ಕೈ ಮ್ಯಾಲೆಲ್ಲಿ ತೊಳುದಾರೆ
ರಾಯೋ ಜಂಬಿ ತರುವೀನ | ಕಳ್ಳ್ಯಾಗೆ
ಹಾಲೊತ್ತಿದ ಕೈ ತೊಳುದಾರೆ

ಕಂದಾನ ಕರಕೊಂಡು ಬಂದರು ದೇವರುಮನಿಗೆ
ಕೆಂಬೂದಲೆ ಅಡಿಕೆ ಕವಳೀಯ | ಏಳಜಂಬಿ
ಈರಣ್ಣಿದ್ದಲ್ಲಿಗೆ ನೆಡುದಾರೆ

ಬಾಲೂನ ಕರಕೊಂಡು ಹೋದರು ದೇವರುಮನಿಗೆ
ಹೂಜೀಲಿ ಅಡಿಕೆ ಕವಳೀಯ | ಏಳಜಂಬಿ
ಈರಣ್ಣಿದ್ದಲ್ಲಿಗೆ ನೆಡುದಾರೆ

ಹತ್ತು ತಂಬಿಗ್ಹಾಲು ಎತ್ತಿ ಅರಿವಣಕೊಯ್ದು
ಪಟ್ಟದ ಪೂಜಾರಿಗೆ ತೆಲಿಗೊತ್ತಿ | ಮಗನೆ ನಿನ್ನ
ಪಟ್ಟೇದುಚ್ಚುಡುವೆ ನಮುದಂದ

ಆರು ತಂಬಿಗ್ಹಾಲು ಗಾಲಿ ಅರಿವಣಕ್ಹೊಯ್ದು
ಪೂಜಾರಿ ಈರಣ್ಣನ ತೆಲಿಗೊತ್ತಿ | ಮಗುನೇ ನಿನ್ನ
ಸಾಲೇದಚ್ಚುಡುವೆ ನಮುದಂದ

ಗಿಂಡಿ ಅರಿವಾಣದಾಗ ಬಂದಾವ್ಹಾಲಾತುಪ್ಪ
ಶಂದುರದುನ ರವಿಗೆ ಗವುದಂಗೆ | ಈರಣ್ಣಿದ್ದಲ್ಲಿಗೆ
ತಂದಿಗಳು ಹಾಲಸ್ತು ಬರಲಂದು

ಗಾಲಿ ಅರಿವಾಣದಾಗ ಹೋದಾವಾಲುತುಪ್ಪ
ಸೂರೀದುನ ರವಿಗೆ ಗವುದಂಗೆ | ಈರಣ್ಣಾ ನಿನ್ನ
ನಿನ್ನಾ ಪೂಜಾರಿ ಹಾಲಸ್ತು ಬರಲಂದು