ಅಪ್ಪನ ನೆನದರೆ ತುಪ್ಪಗಾರುಣುವುಂಟೆ
ಪಟ್ಟೇದ ಸೀರುಂಟೆ ಉಡುವಾಕ | ದಿಳ್ಳೀಯ
ಪಟ್ಟದ ಕರಡೈಯನ ನೆನುದಾರೆ

ಅಣ್ಣನ ನೆನದರೆ ಎಣ್ಣೆಗಾರುಣುವುಂಟೆ
ಸಣ್ಣಾ ಸೀರುಂಟೆ ಉಡುವಾಕ | ದಿಳ್ಳೀಯ
ಬಣ್ಣುದ ಕರಡೆಯ್ಯನ ನೆನದಾರೆ

ಹತ್ತು ತಿಂಗಳು ನೂತು ಮತ್ತೆ ತಿಂಗಳು ನೇದು
ಹತ್ತಿ ಭರುಣ್ಯಾಗ ಮಡಿಗ್ಯಾರೆ | ಕರಿಯ ಜಾಡಿ
ಕೊಟ್ಟೂರ‍್ಹೊಳಿಗೆ ತೊಳುದಾರೆ | ಕರಿಯ ಜಾಡಿ
ಶೆಟ್ಟೇರಿದ್ದಲ್ಲಿಗೆ ನಡುದಾವೆ

ಆರು ತಿಂಗಳು ನೂತ ಮ್ಯಾಲೆ ತಿಂಗಳು ನೇದು
ಹಾಲುದು ಭರುಣ್ಯಾಗ ಮಡಿಗ್ಯಾರೆ | ಕರಿಯ ಜಾಡಿ
ಹೊನ್ನೊರ‍್ಹೊಳಿಯಾಗ ತೊಳಿಸ್ಯಾರೆ ಕರಿಯ ಜಾಡಿ
ಮಾನ್ಯರಿದ್ದಲಿಗೆ ನಡುದಾವೆ

ಅಕ್ಕ ನಮು ಗೌಡರುನಾ ಗಕ್ಕಾನೆ ಬರಿಯ್ಹೇಳೆ
ಹುಕ್ಕ್ಯಾಗೆ ಕುದುರಿ ನಡಿಯಾವು | ಸಿತ್ತಯ್ಯ
ಸುಪ್ಪತ್ತಿನೊಳಗೆ ಬರಿಹೇಳೆ

ತಾಯೆ ನಮ್ಮ ಗೌಡರುನ ಬ್ಯಾಗಾನೆದ್ದು ಬರುಹೇಳ
ಮುಳ್ಳಾಗೆ ಕುದುರಿ ನಡಿಯಾವು | ಕಾಟಯ್ಯಾ
ಪಲ್ಲಕ್ಕಿ ಒಳಗೆ ಬರಿಹೇಳೆ

ಹತ್ತು ಕರಿಯ ಜಾಡಿ ಎತ್ತಗ್ಹೇರಿಕೊಂಡು
ಹೊತ್ತಿಲಿ ಬುಳ್ಳಣ್ಣನ ಕರಕೊಂಡು | ಶಿತ್ತಮುತ್ತಿ
ಹಟ್ಟ್ಯಾಗ್ಹಾಸಿದುನೆ ಕರಿಯ ಜಾಡಿ

ಆರು ಕರಿಯ ಜಾಡಿ ಹೋರಿಗ್ಹೇರಿಕೊಂಡು
ವಾರಿಲಿ ಬುಳ್ಳಣ್ಣನ ಕರಕೊಂಡು | ಶಿತ್ತಾಮುತ್ತಿ
ಓಣ್ಯಾಗ್ಹಾಸಿದುನೆ ಕರಿಯ ಜಾಣ

ಎತ್ತು ಎತ್ತಿಗಂಡು ವತ್ತಿಗೆ ಕೈಲಿಡುಕೊಂಡು
ಹಟ್ಟೆಲ್ಲ ಬೆಚ್ಚಿ ಬೆದರುಸ್ತ | ಮಾರಾನೋರು
ಪುತ್ರಮ್ಮ ಗದ್ದಿಗೆ ನೆಡುದಾನೆ

ಹೋರಿಗೆ ಎತ್ತಿಕೊಂಡು ವಾಲೆ ಕೈಲಿಡುಕೊಂಡು
ಓಣಿಲ್ಲ ಬಿಚ್ಚಿ ಬೆದುರುಸ್ತ | ಸ್ವಾಮಾನೋರು
ಬಾಲಮ್ಮ ಗದ್ದಿಗೆ ನೆಡುದಾನೆ

ಕುರಿಮರಿ ತುಪ್ಪಳ ಕುತುಬಞೂತಿ ನೂತಾ ನೂಲು
ಕುರುಗೌಡ ನೇದಿರತುನಾವೆ | ಜಾಡಿ ಮ್ಯಾಲೆ
ಹೊಂದಿ ಕುಂತಾರೆ ಗೌಡಾರು

ಕೆಂಗೂರಿ ತುಪ್ಪಾಳ ಹೆಂಗಸು ನೂತಾ ನೂಲು
ಜಂಬಗೌಡನೇ ನೇದಿರುತಾನಾವೆ | ಜಾಡಿ ಮ್ಯಾಲೆ
ಹೊಂದೆ ಕುಂತಾರೆ ಗೌವುಡಾರು

ಹತ್ತು ಕರಿಯ ಜಾಡಿ ಹತ್ತು ಬಿಳಿಯ ಜಾಡಿ
ಮತ್ತೊಂದೇ ಜಾಡಿ ರತುನಾವೆ | ಜಾಡಿ ಮ್ಯಾಲೆ
ಒಪ್ಪೇ ಕುಂತಾರೆ ಗೌವುಡಾರು

ಆರು ಕರಿಯ ಜಾಡಿ ಆರು ಬಿಳಿಯ ಜಾಡಿ
ಮ್ಯಾಲೊಂದೇ ಜಾಡಿ ರತುನಾವೆ | ಜಾಡಿ ಮ್ಯಾಲೆ
ಮೋವುಕೆ ಕುಂತಾರೆ ಗೌವುಡಾರು

ನಡದಾರೆ ನಡುದಾರೆ ನಡುದಲ್ಲಿಗೆ  ಗೌವುಡಾರು
ಕುಂತಾರೆ ದಗ್ಗಂಬ ಹೊದಿಕೆಯ | ಹೊದ್ದುಕೊಂಡು
ನಡುದಾರೆ ಓಬೇನ್ಹಳ್ಳಿ ಗೌವುಡಾರು

ಕುಂತಾರೆ ಕುಂತಾರೆ ಕುಂದುರುಪೆ ಗೌವುಡಾರು
ಕುಂತಾರೆ ಧಗ್ಗಂಬ ಹೊದಿಕೆಯ | ಹೊದ್ದುಕೊಂಡು
ಕುಂತಾರೆ ತಾಳವ್ಹಟ್ಟಿ ಗೌವುಡಾರು

ತಾಯಿಯಮ್ಮ ಬಾರೆ ತಾಲೀಲಗ್ಗುಣಿ ತಾರೆ
ಮ್ಯಾಗಾಲು ಮಕವ ತೊಲದೇನು | ಕ್ಯಾತಣ್ಣ
ಹೋದಾನೆ ಜಾಡಿ ನೆಡುವಾಕ

ಮುತ್ತೇನೆ ಉದುರುಸ್ತ ಮತ್ತೆಲ್ಲಿ ಶೆದುರಸ್ತ
ಮುತ್ತೀನ ರುಮಾಲು ತಿರುವುತ್ತ | ಕ್ಯಾತಣ್ಣ
ಮುತ್ತೇ ಆಗ್ಯಾವೆ ಸ್ರಬಿಯಾಗೆ

ಹೊನ್ನೇನೆ ಉದರುಸ್ತ ಇನ್ನೆಲ್ಲಿ ಶೆದರಸ್ತ
ಹೊನ್ನೀನ ರುಮಾಲು ತಿರುವುತ್ತ | ಸಿತ್ತಯ್ಯ
ಹೊನ್ನೆ ಆಗ್ಯಾವೆ ಸ್ರಬಿಯಾಗೆ

ಅಪ್ಪಯ್ಯ ಕದ ತೆಗಿಯ ಅಪ್ಪನೆ ಕದ ತೆಗಿಯ
ಅಪ್ಪ ಈರಣ್ಣ ಕದ ತೆಗೆಯೊ | ನಿನ ಬಾಗುಲಿಗೆ
ರಾಸಡಿಕೆ ಏರು ಇಳುದಾವೊ

ಅಣ್ಣಯ್ಯ ಕದ ತೆಗಿಯೊ ಅಣ್ಣಯ್ಯ ಕದ ತೆಗಿಯೊ
ಅಣ್ಣ ಸಿತ್ತಯ್ಯ ಕದ ತೆಗಿಯ | ನಿನ ಬಾಗುಲಿಗೆ
ಹೊನ್ನಡಿಕೆ ಏರು ಇಳುದಾವೊ

ಸ್ವಾಮೀನೆ ಕದ ತೆಗಿಯೊ ಮಾಲಿಂಗ ಕದ ತೆಗಿಯೊ
ಸ್ವಾಮಿ ನಿಂಗಾಣ್ಣಾ ಕದ ತೆಗಿಯ | ನಿನ ಬಾಗುಲಿಗೆ
ಯಲಿಯ ಪೆಂಡಿಗಳು ಇಳುದಾವೊ

ಶಿಕ್ಕಾ ಓಬೇನ್ಹಳ್ಳಿಯ ಶಿತ್ತಾರುದ ದಿಬ್ಬದಲಿ
ಶೆಟ್ಟುಂಡ ಅರಸ ಯಲಿಮೆಲ್ಲ | ಹೊತ್ತೀಗೆ
ಕಟ್ಟ್ಯಾರೆ ಬುಳ್ಳಪ್ಪಾ ನರುಮನೆ | ಬಾಗುಲಿಗೆ
ಜತ್ತಿಗೆ ನೂರಾಳು ಕಳಿವ್ಯಾನೆ

ಆಳೇನೆ ಕಳುವಿದರೆ ನಾನು ಬರುವೋನಲ್ಲ
ರಾಯತಾಳವ್ಹಟ್ಟಿ ರತುನಾದ | ಕಟ್ಟೇಲಿಂದ
ಕಾಗುದ ಬಂದರೆ ಬರತಿನಿ

ಬಂದಂತ ಕಾಗುದುವ ನಿಂತು ಓದಿಕೊಂಡು
ಮುತ್ತಿನ ತುರಯ ನಿಲುವಂಗಿ | ಇಟ್ಟಾಗೊಂಡ
ರಾಯ ಸಂದಗನೆ ಅಳಿ ಹೊರಟ

ರಾಯ ಓಬೇನ್ಹಳ್ಳಿ ರುವ್ಹಾರುದು ದಿಬ್ಬುದಲಿ
ಆಳುಂಡ ಅರಸ ಯಲಿಮೆಲ್ಲ | ಹೊತ್ತಿಗೆ
ಆದಾವೆ ಬುಳ್ಳಪ್ಪನ ಅರಮನೆ | ಬಾಗುಲಿಗೆ
ಜೋಡಿಲಿ ನೂರಾಳು ಕಳಿವ್ಯಾನೆ

ಆಳು ಕಳುವಿದರೆ ನಾನು ಬರುವೋನಲ್ಲ
ರಾಯ ತಾಳುವ್ಹಟ್ಟಿ ರತುನದ | ಕಟ್ಟೇಲಿಂದ
ಕಾಗುದ ಬಂದಾರೆ ಬರತೀನಿ

ಬಂದತಹ ಕಾಗುದವ ನಿಂತು ಓದಿಕೊಂಡು
ಮುತ್ತೀನ ತುರಾಯ ನಿಲೊವಂಗಿ | ಇಟ್ಟುಗಂಡು
ರಾಯ ಸಾಂದಾಗಾನೆ ಅಳಿ ಹೊರಟ

ರಾಯಓಬೇನ್ಹಳ್ಳಿ ರುವಾರುದ ದಿಬ್ಬದಲಿ
ಆಳುಂಡ ಅರಸ ಯಲಿಮೆಲ್ಲಿ | ವತ್ತೀಗೆ
ಕಟ್ಟೇರು ಬುಳ್ಳೆಪ್ಪನ ಅರಮನೆ | ಬಾಗುಲಿಗೆ
ಜೊತ್ತೀಗೆ ನೂರಾಳು ಕಳುವ್ಯಾನೆ

ಆಳೇನು ಕಳುವಿದರೆ ನಾನ ಬರವೋನಲ್ಲ
ರಾಯತಲವ್ಹಟ್ಟಿ ರತನವ | ಕಟ್ಟೆಲಿಂದ
ಉತ್ತರ ಬಂದರೆ ಬರತಿನಿ

ಬಂದತಹ ಉತ್ತರವ ನಿಂತು ಓದಿಕೊಂಡು
ಹೂವ್ವಿನ ತುರಾಯ ನಿಲುವಂಗಿ  | ಇಟ್ಟಾಗಂಡು
ರಾಯಸಂದಗಾನೆ ಅಳಿವರುಟ

ರಾಶಡಕೆ ಬಂದಾವು ಈಸ್ವುರುನ ಬರೀಹೇಳೆ
ಸಾಕುಸಾಲವಂಬ ಗವುಡಾನ | ಕ್ಯಾತಣ್ಣಾನ
ರಾಸಡೀಕೆ ಬಂದಾನೆ ಬರಿಹೇಳೆ

ಹೊನ್ನಾಡಕೆ ಬಂದಾವೆ ಸೆನ್ನಿಗನ ಬರಹೇಳೆ
ಇನ್ನುಸಾಲವಂಬ ಗವುಡಾನ | ಕ್ಯಾತಣ್ಣಾನ
ಹೊನ್ನಾಡಿಕೆ ಬಂದಾವೆ ಬರುಹೇಳೆ

ಸಿಕ್ಕ ಓಬೇನ್ಹಳ್ಳಿ ವತ್ತೀಲಿ ಎರಡಂಗಡಿಯ
ಬಿಚ್ಚಿ ಮರ‍್ಯಾರೆ ಬಿಳಿಯಲೆ | ಅಂಗುಡ್ಯಾಗೆ
ಅಪ್ಪಾಶಿತ್ತಯ್ಯಗ ಬಳಸಾವು

ರಾಯ ತಾಳವ್ಹಟ್ಟಿ ವಾರೀಲೆರಡಂಗಾಡಿ
ತೂಗಿ ಮಾರ್ಯಾರೆ ಬಿಳಿಯಲೆ | ಅಂಗೂಡ್ಯಾಗೆ
ಸ್ವಾಮಿ ಈರಣ್ಣ ಬಳಸಾವು

ಹಟ್ಟೀಯನ್ನ ಗವುಡ ಪಟ್ಟಾದ ಪೂಜ್ಯಾಇ
ವಕ್ಕಾನೆ ಜಡಿಯ ನೆಡುವಾಕ | ತಾಳೂವ್ಹಟ್ಟಿ
ಈರಣ್ಣಾಗ ಈಳ್ಳೇವು ತಗುಸ್ಯಾನೆ

ಊರವನ್ನ ಗವುಡ ದೇವಾರ ಪೂಜಾರಿ
ಹೋದಾನೆ ಜಡಿಯ ನೆಡುವಾಕ | ಓಬೇನ್ಹಳ್ಳಿ
ಶಿತ್ತಯ್ಯಗೀಳ್ಳೇವು ತಗುಸ್ಯಾನೆ

ಜಾಡಿ ಹಿಂದಾಕ ಬಾರೋ ಜಾಡಿ ಮುಂದಾಕ ಬಾರೋ
ಜಾಡೀಗೊಪ್ಪಾರ ಮಗ ಬಾರೋ | ಕ್ಯಾತಣ್ಣ
ನೀನು ಬಾರೋ ಜಾಡಿ ನೆಡುವಾಕ

ಗದ್ದೀಗಿ ಹಿಂದಕ ಬಾರೋ ಗದ್ದೀಗಿ ಮುಂದಕ ಬಾರೋ
ಗದ್ದೀಗೊಪ್ಪಾರ ಮಗ ಬಾರೋ | ಸಿತ್ತುಯ್ಯ
ನೀನು ಬಾರೋ ಗದ್ದೀಗಿ ನೆಡುವಾಕೆ

ಜಾಡಿ ಪೂಜ್ಯದಾವು ಜಾಣನ ಬರಿಯ್ಹೇಳೆ
ನೀಲಿ ಉಂಗುರದ ಶಲುವಾನ | ಕ್ಯಾತಣ್ಣಾನ
ಜಾಡಿ ಪೂಜಾದವು ಬರಹೇಳೇ

ಜಾಡಿ ಪೂಜಾದಾವು ಗವುಡಾನ ಬರಹೇಳೆ
ಮುದ್ದೀನುಂಗುರುದ ಶಲುವಾನ | ಶಿತ್ತಯ್ಯಾನ
ಜಾಡಿ ಪೂಜಾದವು ಬರಹೇಳೆ

ಶಿಕ್ಕ ಓಬೇನಹಳ್ಳಿ ಶಿತ್ತಾರದ ದಿಬ್ಬುದಲಿ
ಉತ್ತೋತ್ತಿ ಮರುದ ನೆರಳಗ | ಕ್ಯಾತಣ್ಣ
ಮುಚ್ಚೀದ ಕಡುತ ತಗಿಸ್ಯಾನೆ

ಶಿಕ್ಕೋಬೇನಹಳ್ಳಿ ಶಿತ್ತಾರದ ದಿಬ್ಬುದಲಿ
ಮುಚ್ಚೀದ ಕಡುತ ತಗಿಸಿ | ಓದೀಕಂಡು
ಹಟ್ಟೀ ಗವುಡೀಕೆ ನಮುದಂದ

ರಾಯ ತಾಳವ್ಹಟ್ಟಿ ರುವಾರುದ ದಿಬ್ಬುದಲಿ
ಯಾಲಕ್ಕಿ ಮರುದ ನೆರುಳಾಗೆ | ಕ್ಯಾತಣ್ಣ
ಮಾಸಿದ ಕಡತ ತಗುಸ್ಯಾನೆ

ರಾಯ ತಾಳವ್ಹಟ್ಟಿ ರುವಾರುದ ದಿಬ್ಬುದಲಿ
ಮಾಸಿದ ಕಡತ ತಗುಸಿ | ಓದೀಕಂಡು
ನಾಡಾ ಗವುಡೀಕೇನೆ ನಮುದಂದ

ಕೆಂಪುದೋಗಲೀನೋರು ಜಂತುದ ಕಟ್ಟಗಿನೋರು
ಎಂತಾರೆ ಅಕ್ಕ ಬರುವೋರು | ಓಬೇನ್ಹಳ್ಳಿ
ಕಂಚೀಪ್ಪುರಿಗೆ ಗವುಡಾರು

ಕರಿಯ ದೊಗಲಿನೋರು ಅವುಳುದ ಕೋಲಿನೋರು
ಅವುರ‍್ಯಾರೆ ಅಕ್ಕ ಬರುವೋರು | ತಾಳವ್ಹಟ್ಟಿ
ಗಾಜಿನುಪ್ಪುರಿಗೆ ಗವುಡಾರು

ಶಿಕ್ಕ ಓಬೇನ್ಹಳ್ಳಿ ಹಟ್ಟಿ ಗವುಡಾಸಾನಿ
ತುಪ್ಪೈದಾವೇನೆ ಮನೀಯ್ಯಾಗೆ | ಗೌಡಾಸಾನಿ
ದಿಕ್ಕುಗೆದ್ದೇ ಗವುಡ ಬರುತಾನೆ

ರಾಯ ತಾಳಾವಟ್ಟಿ ಊರು ಗೌಡಾಸಾನಿ
ಹಲೈದಾವೇನೆ ಮನೀಯಾಗೆ | ಗವುಡಸಾನಿ
ನಾಡಗೆದ್ದೇ ಗವುಡ ಬರುತಾನೆ

ಅತ್ತಾನಾಡಿನ ಗವುಡ ಇತ್ತಾನಾಡಿಗೆ ಬರುವಾಗ
ಒತ್ತುಲುಗಟ್ಟ್ಯಾವೆ ಬಿಳಿಯಲೆ | ಓಬೇನ್ಹಳ್ಳಿ
ಶಿಕ್ಕಂದಿನ ಗವುಡ ಬರುವಾಗ

ಅವುನಾಡಿನ ಗವುಡ ಈ ನಾಡಿಗೆ ಬರುವಾಗ
ತೋರುಣಗಟ್ಟ್ಯಾವೆ ಬಿಳಿಯಲೆ | ತಾಳುವ್ಹಟ್ಟಿ
ತಾಲಾಕಿನ ಗವುಡ ಬರುವಾಗ

ಒಂಟೀನೆ ಹುಟ್ಟ್ಯಾವೆ ಒಂಟೊಂದು ತರದಿಂದ
ಮಿಂಚೆ ಹುಟ್ಟ್ಯಾವೆ ಮುಗಲಿಂದ | ಬುಳ್ಳಪ್ಪ
ಬಂಟಾ ಹುಟ್ಟಿದುನೆ ಕುಲುಶರಣ

ಆನೊಂದೆ ಹುಟ್ಟ್ಯಾವೆ ಆನೊಂದು ತರದಿಂದ
ಜೇನೆ ಹುಟ್ಟ್ಯಾವೆ ಪೆಳಿಯಾಗೆ | ಬುಳ್ಳಪ್ಪ
ಜಾಣ ಹುಟ್ಟಿದುನೆ ಕುಲಶರಣ

ಉಕ್ಕಾನೆ ಹಾಲಾಕೆ ಚೊಕ್ಕ ಬೆಳ್ಳಿನ್ಹಾಕಿ
ಹೆಚ್ಚಿನ ಮನೆಕಾಣೆ ಓಬೇನ್ಹಳ್ಳಿ | ಅಪ್ಪುಗಳು
ಹೆಚ್ಚಿನ ಗವುಡೀಕೆ ಪಡುದಾರೆ

ಕಾದಾನೆ ಹಾಲಾಕೆ ಸಾದ ಬೆಳ್ಳಿನ್ಹಾಕಿ
ಏದಿನ ಮನಿಕಾಣೆ ತಾಳವ್ಹಟ್ಟಿ | ಮಾವುಗಳು
ನಾಡಾ ಗವುಡೀಕೆ ಪಡುದಾರೆ

ಎಂಥೋರು ಸಾಸಾಣ ಕಂಚಿನ ಮ್ಯಾಲೊಯ್ಯಿಸಾರೆ
ಪಂಥುಕು ಸುರಿತಾಳುದ ಕರುಡಯ್ಯ | ಸಾಸ್ಯಾಣ
ಕಂಚಿನ ಹೊತ್ತಗೆಯಿಸ್ಯಾರೆ

ಎಲ್ಲೋರು ಸಾಸಾಣ ದಿಳ್ಳಿ ಮ್ಯಾಲೊಯ್ಯಿಸಾರೆ
ಬೆಳ್ಳಿ ಸುರಿತಾಳುದ ಕರುಡುಯ್ಯ | ಸಾಸ್ಯಾಣ
ಬೆಳ್ಳಿ ಹೊತ್ತಿಗೆ ವಯಿಸ್ಯಾರೆ

ಗೆದ್ದುರು ಕಾಣೇ ನನ್ನ ಗೆಜ್ಜೆ ಕಾಲ ಅಪ್ಪುಗಳು
ಮದ್ದಕರಡಿಯ ತಿರುವೂತ | ಮಾರಾನೋರು
ಗೆದ್ದಾರೆ ಮೇಲಾ ದುರುಗಾವ

ಸೋತುರು ಕಾಣೇ ನನ್ನ ಸೋಲಾಮುಡಿ ಮಾವುಗಾಳು
ಸೋಲಾ ಕುದರೆಯ ತಿರುವೂತ | ಸ್ವಾಮನೋರು
ಸೋತಾರೆ ಮೇಲಾ ದುರುಗುವ

ಮುತ್ತೀನ ಕೂರಿಗೆ ಮತ್ತೆಲ್ಲಿ ಹಸುನಾದಾವು
ಶಿಕ್ಕು ರಾಮೇನ್ಹಳ್ಳಿ ಬಯಿಲಾಗೆ | ರಾಮಣ್ಣಾನು
ಮುತ್ತೀನ ಕೂರೀಗೆಲ್ಲಸುನಾಗಿ

ಹೊನ್ನಿನ ಕೂರಿಗೆ ಇನ್ನೆಲ್ಲಿ ಹಸುನಾದಾವೆ
ಸಣ್ಣ ರಮೇನ್ಹಳ್ಳಿ ಬಯಿಲಾಗೆ | ರಾಮಣ್ಣಾನು
ಹೊನ್ನೀನ ಕೂರಿಗೆಲ್ಲಸುನಾಗಿ

ಬಿತ್ತಾ ಕೂರಿಗೆ ತಂದು ಹಟ್ಟ್ಯಾಗ ನಿಲ್ಲೂಸಿ
ಯತ್ತಾ ತುಪ್ಪದಲೆ ಮಕಾ ತೊಳಿದು | ರಾಮಣ್ಣಾನು
ಗುತ್ತೀಯ ವಲುಕೆ ನೆಡುದಾನೆ

ಹೊನ್ನೀನ ಕೂರಿಗೆ ತಂದು ಓಣ್ಯಾಗೆ ನಿಲ್ಲೂಸಿ
ಹಾಲೇ ತುಪ್ಪುದಲಿ ಮಕ ತೊಳಿದು | ರಾಮಣ್ಣಾನು
ಮಾನ್ಯೇದ ಹೋಲುಕೆ ನೆಡುದಾನೆ

ಬಿತ್ತಾ ಕೂರಿಗೆ ಮುಂದೆ ಬೀಜಾದೆಡಿಗೆ ಹಿಂದೆ
ಹಟ್ಟಿ ಅರಳಯ್ಯಾನ ಮಿಣಿ ಮುಂದೆ | ರಾಮಣ್ಣಾನು
ಮಾನ್ಯೇದ ವಲುಕೆ ನೆಡುದಾನೆ

ಶೆಟ್ಟರು ಮಗುಳ ಕರಿಸಿ ಮುತ್ತೂ ಮಡುಲಕಟ್ಟಿ
ಅಕ್ಕೂಡಿ ಶೆಡ್ಡೆ ಕಯ್ಯಾಲಿಡಿಸಿ | ರಾಮಣ್ಣಾನು
ಬಿತ್ತಾದು ಕಲಿಸ್ಯಾನೆ ಮಡದಿಗೆ

ಮಾನ್ಯರು ಮಗಳಾ ಕರಿಸಿ ಹೊನ್ನಾ ಮಡುಲಾಕಟ್ಟಿ
ಶಿನ್ನಾದ ಶೆಡ್ಡಿ ಕಯ್ಯಾಲಿಡಿಸಿ | ರಾಮಣ್ಣಾನು
ಬೆತ್ತಾದು ಕಲಿಸ್ಯಾನೆ ಮಡದಿಗೆ

ಅಣ್ಣಾ ಬಿತ್ತೀದ್ಹೊಲವ ತಮ್ಮ ನೋಡಾಲ್ಹೊದ
ಗಣ್ಣಿಲ್ಲಾವಣ್ಣ ಗರಿಬಾಳ | ಓಬೇನ್ಹಳ್ಳಿ
ಹೆಣ್ಣೆ ಬಯಿತೆಲಿಯ ತಗುದಂಗ

ಶೆಜ್ಜೇಯನ್ನಾ ವಲುಕೆ ಉದ್ದನ್ನಾ ಮಂಚೀಗೆ
ಗುಬ್ಬೇ ಕಾಲೀಗೆ ಕಿರುಗೆಜ್ಜೆ | ರಾಮಣ್ಣಾನ
ಮುದ್ದುಮಗ ಸೋವಿದುನೆ ಗಿಣಿವ್ಹಿಂಡು

ಜ್ವಾಳಾದನ್ನಾ ವಲುಕೆ ಕಿರುನಲ್ಲೆ ಮಂಚೀಗೆ
ಕವಳೆ ಕಾಲೀಗೆ ಕಿರಿಗೆಜ್ಜೆ | ಭೂಮಣ್ಣಾನ
ದೊರೆಮಗ ಸೋವಿದುನೆ ಗಿಣಿವ್ಹಿಂಡು

ಹತ್ತೇನೆ ವರುಸಾದ ತುಪ್ಪುಂಡ ಗವುಡಾ ಮುದ್ದೆ
ಇಪ್ಪೇ ಉಳಬಿದ್ದು ಗರಿ ಬೆಳೆದು | ಗವುಡಾ ಮುದ್ದೆ
ಅಪ್ಪಾ ರಾಮಣ್ಣ ಸಲಿಸ್ಯಾನೆ

ಅರೇನೆ ವರುಸಾದ ಹಾಲುಂಡ ಗವುಡಾ ಮುದ್ದೆ
ಗಾಣಾಉಳಬಿದ್ದು ಗರಿ ಬೆಳೆದು | ಗವುಡಾ ಮುದ್ದೆ
ಸ್ವಾಮಿ ರಾಮಣ್ಣ ಸಲಿಸ್ಯಾನು

ಒಂದೊಂದು ಶೆಂದಾದ ಲಿಂಗಾನ ಬಲಗೊಂಡೆ
ನಿಂಬೇ ಗಿರಿದಳಸಿ ಮಲವೋರು | ಮೂಡಿ ಬರುವಾ
ಶೆಂದುರುನ ಪಾದ ಬಲಗೊಂಡೆ

ಯಾವ್ಯಾವೋ ಶೆಂದಾದ ದೇವುರುನ ಬಲಗೊಂಡೆ
ನಾಮದ ಗೀರಿದಳಸಿ ಮಲವೋರು | ಮೂಡಿ ಬರುವ
ಸೂರಿದುನ ಪಾದ ಬಲಗೊಂಡೆ

ಯಾತುಯತುಕೊ ಮುನ್ನಾ ಆಕೀಯ ಬಲಗೊಂಡೆ
ಕಾತನ ಜೀರಿಗಿಯ ಬೆಳವೋಳೆ  | ಭೂಮಮ್ಮಾನ
ಅಕಿಯ ಮೊದಲೆ ಬಲಗೊಂಡೆ

ಎಲ್ಲಲ್ಲಿಗೆ ಮುನ್ನ ಬಲ್ಲಿದೋಳೆ ಬಲಗೊಂಡೆ
ಎಳ್ಳು ಜೀರಿಗೆಯ ಬೆಳವೋಳ | ಭೂಮಮ್ಮಾನ
ಬಲ್ಲಿದೋಳೆ ಮೊದಲೆ ಬಲಗೊಂಡೆ